Total Pageviews

Saturday, September 29, 2018

‘ಪ್ರೀತಿ’ವ್ಯಸನದ ವ್ಯಾಸರಾಯರು



ವ್ಯಸನದಂತೆ ಕಾಡಿದೆ ವ್ಯಾಸರಾವರ ಸಾವು ನನ್ನನ್ನು. ಸುಮ್ಮನಿದ್ದಷ್ಟೂ ನೆನಪಾಗುತ್ತವೆ ಅವರ ಸೌಜನ್ಯದ ಮಾತು, ಮೆಲು ನಡಿಗೆ, ಸರಳ ಬಣ್ಣಗಳ ಉಡುಗೆ, ಸ್ಪಷ್ಟ ನಿಲುವು ಹಾಗೂ ತೆಳು ಹಾಸ್ಯದ ವರಸೆಗಳು. ಅವರ ಕಾವ್ಯವೂ ಹಾಗೆಯೆ, ಅವರಂತೆಯೆ. ಮೆದು-ಮೃದು, ಗಾಳಿಗೆ ಹೂ ತಲೆಯಾಡಿಸಿದಂತೆ. ಪ್ರೀತಿಯಾಗಿದ್ದರು ಅವರು ನನಗೆ. ಹೀಗಾಗಿ ನೆನಪುಗಳ ಪುಟಗಳನ್ನು ಮತ್ತೆ ನಿಮ್ಮೊಂದಿಗೆ ಓದಲಾರಂಭಿಸಿದ್ದೇನೆ. ನನ್ನ ಶಬ್ದಸೂತಕ ಕೃತಿಯಿಂದ ಸಾಹಿತ್ಯದ ಗೆಳೆಯರಾದ ಎಂ.ಎನ್. ವ್ಯಾಸರಾವ್ ಪ್ರೀತಿ ಹಂಚಿಕೊಳ್ಳುತ್ತಿದ್ದೇನೆ.
2009 ರಲ್ಲಿ ನನ್ನ ಶಬ್ಧಸೂತಕದಿಂದ, ವಿಮರ್ಶಾ ಲೇಖನಗಳ ಮೊದಲ ಸಂಕಲನ ಪ್ರಕಟವಾಯಿತು. ಆಗಿನ್ನೂ ಬಾಗಲಕೋಟೆಯ ಬಸವೇಶ್ವರ ವಿದ್ಯಾ ವರ್ಧಕ ಸಂಘದ ಸ್ನಾತಕೋತ್ತರ ಇಂಗ್ಲೀಷ ವಿಭಾಗದಲ್ಲಿ ಉಪನ್ಯಾಸಕನಾಗಿದ್ದ ನಾನು ಬೆಂಗಳೂರಿನೊಂದಿಗೆ ಕೇವಲ ಓಲೆಯ ನಂಟನ್ನು ಮಾತ್ರ ಇಟ್ಟುಕೊಂಡಿದ್ದೆ. ಬರೆದ ಒಂದೇ ಒಂದು ಓಲೆಗೆ ಪ್ರತಿಕ್ರಿಯೆ ಎನ್ನುವಂತೆ ಗುರುಗಳಾದ ಚಂಪಾ ತಮ್ಮಕನ್ನಡ ಕನ್ನಡ ಬರ್ರಿ ನಮ್ಮ ಸಂಗಡಕೃತಿಯನ್ನು ಹಾಗೂ ನನ್ನಶಬ್ಧಸೂತಕದಿಂದಕೃತಿಯನ್ನು ಪರಿಷನ್ಮಂದಿರದ ಒಂದೇ ವೇದಿಕೆಯ ಮೇಲೆ ಬಿಡುಗಡೆಗೊಳಿಸುವ ಪ್ರೀತಿ ತೋರಿಸಿದರು. ಚಂಪಾ ಕೃತಿ ಕುರಿತು ಬಂಜಗೆರೆ ಹಾಗೂ ನನ್ನ ಕೃತಿ ಕುರಿತು ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅಂದು ಮಾತನಾಡಿದ್ದು, ಪಿ.ಜಿ.ಆರ್ ಸಿಂಧ್ಯ ಕೃತಿಗಳನ್ನು ಲೋಕಾರ್ಪಣೆ ಮಾಡಿದ್ದು ಇಂದು ನೆನಪೆಂಬ ಕಡತದ ಸಾಲು, ಅಷ್ಟೆ. ಸಭೆಗೆ ಬಂದಿದ್ದ ವ್ಯಾಸರಾವ್ ದೂರದಲ್ಲಿಯೇ ಕುಳಿತಿದ್ದ ನೆನಪು ನನಗೆ.
ಎಂ.ಎನ್. ವ್ಯಾಸರಾವ್ ಹಾಗೂ ನನ್ನ ಸ್ನೇಹಕ್ಕೆ ಕಾರಣವಾದ, ಅವರು ಬಹುವಾಗಿ ಮೆಚ್ಚಿಕೊಂಡ ನನ್ನಶಬ್ಧಸೂತಕದಿಂದಪ್ರಕಟವಾಗಿ ಇಂದಿಗೆ ಹತ್ತು ವರ್ಷಗಳು ಗತಿಸಿವೆ. ಆದರೆ ಸೂತಕದ ಕತ್ತಲೆ ಕಳೆದಿಲ್ಲ. ನಿಜ, ಅದು ಕಳೆಯುವುದೂ ಇಲ್ಲ. ಸೂತಕದ ವಾಸನೆ ಅಳಿದ ಮರುದಿನವೇ ಪ್ರಪಂಚದಲ್ಲಿ ಹುಟ್ಟಿನ ಹುಟ್ಟಡಗಿ ಬಿಡುತ್ತದೆ. ವಿಶ್ವ ಋತುಚಕ್ರ ತನ್ನ ಅಸ್ತಿತ್ವವನ್ನೇ ಕಳೆದುಕೊಂಡುಬಿಡುತ್ತದೆ. ಹೀಗಾಗಿಸೂತಕಮತ್ತುಸಂಸಾರಗಳೆರಡೂ ಜಗದ ಗತಿಶೀಲತೆಯ ಅನಿವಾರ್ಯಗಳಾಗಿವೆ.
ಬೇಕೆನಿಸಿದಾಗ ಒಂದು ಫೋನ್ ಮಾಡಿ, ನನ್ನಸೂತಕದ ಮನೆಗೆ ನೀವು ಹೀಗೆ ಅವಸರಿಸಬಾರದಿತ್ತು ರಾಯರೆಎಂದಾಗಲೆಲ್ಲ ವ್ಯಾಸರಾಯರು ಮಗುಳ್ನಕ್ಕುಅಲ್ಲ ರಾಗಂ, ನಿಮ್ಮ ಕೃತಿ(ಶಬ್ದಸೂತಕದಿಂದ) ಸಂಭ್ರಮದ ಹಾಡುಎಂದು ಮುಗುಳ್ನಗುತ್ತಿದ್ದರು ಅವರು.
ಹೌದು, ಎಳೆಯ ಕಲಾವಿದ, ಗೆಳೆಯ ಎಸ್.ವ್ಹಿ. ಹೂಗಾರರಿಂದ ವಿನ್ಯಾಸಗೊಂಡ ಅಪರೂಪದ ಮುಖಪುಟದ ನನ್ನ ಶಬ್ಧಸೂತಕದಿಂದ ಕೃತಿಯ ಒಂದು ಪ್ರತಿಯನ್ನು ತಮ್ಮ ಮಧುರವಾದ ಸಿನಿಮಾ ಗೀತೆಗಳ ಮೂಲಕ ನನ್ನ ಬಾಲ್ಯ, ಯೌವ್ವನ ಕಾಡಿದ ವ್ಯಾಸರಾವ್ ಅವರಿಗೂ ಕಳುಹಿಸಿದ್ದೆ. ಖಂಡಿತವಾಗಿಯೂ ಅವರಿಂದ ಯಾವುದೇ ಪ್ರತ್ಯುತ್ತರ ಅಥವಾ ಪ್ರತಿಕ್ರಿಯೆಗಳ ನಿರೀಕ್ಷೆಯನ್ನು ನಾನು ಮಾಡಿರಲಿಲ್ಲ. ಹಾಗೆ ನೋಡಿದರೆ ಬರಹಕ್ಕೆ ಕಾಲಿಟ್ಟ ಆರಂಭದಿಂದಲೂ ಅಂಥ ಒಂದು ನಿರೀಕ್ಷೆಯನ್ನು ಉದ್ದೇಶ ಪೂರ್ವಕವಾಗಿಯೇ ಅದುಮಿಕೊಂಡವ ನಾನು. ಬರಹ ನನ್ನ ಹಕ್ಕು ಹಾಗೂ ಜನ್ಮಕ್ಕೆ ನಾನು ಹೇರಿಕೊಂಡ ಧರ್ಮ ಅಷ್ಟೆ. ಆದರೆ ಅಪರೂಪಕ್ಕೆ ಹೀಗಾಗಿ ಬಿಡುತ್ತದೆ. ‘ಶಬ್ಧಸೂತಕದಿಂದಓದಿ ಹಿರಿಯ ಕಾದಂಬರಿಕಾರರಾದ ಚಂದ್ರಕಾಂತ ಕುಸನೂರ ಹಾಗೂ ಕವಿ ಎಂ.ಎನ್. ವ್ಯಾಸರಾವ್ ಎರಡು ಅಪರೂಪದ ಪತ್ರಗಳನ್ನು ಬರೆದರು. ನಂತರವೂ ಬರಹದಲ್ಲಿಯ ನನ್ನ ತನ್ಮಯತೆಯನ್ನು ಗೌರವಿಸಿ ಬೆನ್ನ ಹಿಂದೆ ಬೆಳಕಿನ ಗೆಳೆಯರಾಗಿ ನಿಂತರು. ಈಗ ವಯಸ್ಸಾಗಿದೆ, ಕುಸನೂರರ ಕುಂಚದ ಬಣ್ಣ ಆರಿದೆ, ಕವಿ ಎಂ.ಎನ್. ವ್ಯಾಸರಾವ್ ರವರ ಜೀವನ ಯಾತ್ರೆ ಮುಗಿದಿದೆ. ಆದರೆ ಅಂದು ಅವರು ಬರೆದ ಪತ್ರ ಇಂದಿಗೂ ನನ್ನನ್ನು ಕಾಡುತ್ತಿದೆ.
ಚಡಪಡಿಕೆ ಮತ್ತು ನಿರೀಕ್ಷೆಯಲ್ಲಿ....
ಪ್ರಿಯ ಶ್ರೀ ರಾಜಶೇಖರ ಮಠಪತಿಯವರೆ,
ನನ್ನ ದೀರ್ಘ ಮೌನ, ಸಬೂಬು, ಕೆಲಸದ ಒತ್ತಡಗಳು, ಅಲೆಮಾರಿಯಂತೆ ಓಡಾಟ ಹೀಗೆ ಹಲವು ರೀತಿಯ ಅಡ್ಡಿ ಆತಂಕಗಳಿಗೆ ಗುರಿಪಡಿಸಿ, ಚಡಪಡಿಕೆಯಲ್ಲಿ ಇಟ್ಟದ್ದಕ್ಕೆ ಹಾಗೂ ಅವೂಗಳೆಲ್ಲವೂ ಬಹಳ ತಾಳ್ಮೆಯಿಂದ ತಾಳಿಕೊಂಡು ಬಂದು ನನ್ನ ಕೆಲವು ಪ್ರೀತಿಯ ಮಾತುಗಳಿಗಾಗಿ ಇನ್ನೂ ನಿರೀಕ್ಷೆಯಲ್ಲಿರುವ ನಿಮ್ಮ ಸಲಹೆಗೆ ಉತ್ತರ ಕೊಡುವುದು ಕಷ್ಟವಾಗಿದೆ ನನಗೆ. ಆದರೂ ಕ್ಷಮೆ ಕೇಳದೆ ಇದ್ದರೆ ಅದೊಂದು ಅಪರಾಧ. ದಯವಿಟ್ಟು ಕ್ಷಮಿಸಿ.
ನಮ್ಮ ಸಣ್ಣತನ, ನಮ್ಮ ಆಸೆ ಆಕಾಂಕ್ಷೆ ಇವುಗಳೆಲ್ಲವನ್ನು ಹೊತ್ತುಕೊಂಡೇ ಜೀವಿಸಬೇಕಾಗಿದೆ. ಧರ್ಮ, ಜಾತಿ, ಭಾಷೆಗಳ ಗುದ್ದಾಟಗಳ ಜೊತೆ ಜೊತೆಗೆ ಬೆಳೆಯುವುದು ಹೇಗೆ ಅನಿವಾರ್ಯವೋ ಅದೇ ರೀತಿಯಲ್ಲಿ ಭಿನ್ನ ಸ್ವಭಾವಗಳ ಜೊತೆ ಗುದ್ದಾಡಿಕೊಂಡು ಬದುಕುವುದೂ ಮುಖ್ಯ ಎನಿಸುತ್ತದೆ.
ನೀವು ಕಳುಹಿಸಿದಶಬ್ದ ಸೂತಕದಿಂದಕೃತಿ ಕೈ ಸೇರಿ ಬಹಳ ದಿನಗಳೇ ಆಗಿದ್ದರೂ ಕೈಗೆತ್ತಿಕೊಂಡು ಓದುವುದಕ್ಕೆ ಆಗಿರಲಿಲ್ಲ. ಕೆಲವು ದಿನಗಳ ಹಿಂದೆ ಓದುವ ವಿಚಾರದಿಂದ ಪಟ್ಟಾಗಿ ಕುಳಿತುಕೊಂಡೆ ಅದರ ಫಲ ಮಾತುಗಳು.
ಸಂಕಲನದ ನಿಮ್ಮ ಲೇಖನಗಳು, ವಿಮರ್ಶೆಗಳು, ಕನ್ನಡ ಸಾಹಿತ್ಯಲೋಕ ಸಾಗುತ್ತಿರುವ ದಿಕ್ಕಿನಲ್ಲಿ ಗಟ್ಟಿಯಾದ ಹೆಜ್ಜೆ ಗುರುತು ಮೂಡಿಸುವ ಪ್ರಯತ್ನವಾಗಿವೆ. ನೀವು ಓದಿದ ಪುಸ್ತಕ, ಮಾತಾಡಿಸಿದ ವ್ಯಕ್ತಿಗಳ, ಒಡನಾಟದ ನೆನಪುಗಳು, ‘ಹೆರ್ಮನ್ ಹೆಸ್, ‘ಮಧುರಚೆನ್ನ, ‘ಸಿಂಪಿ ಲಿಂಗಣ್ಣಮುಂತಾದವುಗಳಲ್ಲಿ ನೀವು ಅರ್ಥೈಸಿಕೊಂಡಿರುವ ಸಂಗತಿಗಳನ್ನು ಪ್ರಾಮಾಣಿಕವಾಗಿ ಇಟ್ಟಿದ್ದೀರಿ. ಕವಿತೆ ಓದಿದಾಗ ಉಂಟಾಗುವ ಆಪ್ತತೆ ಬರಹಗಳಲ್ಲಿದೆ. ಸುತ್ತಮುತ್ತ ಜರುಗಿದ, ಜರುಗುತ್ತಲಿರುವ ಸಂಗತಿಗಳನ್ನು ನೋಡುತ್ತಾ, ಅವುಗಳನ್ನು ಅಷ್ಟೇ ಕೂಲಂಕಷವಾಗಿ ಪರಿಶೀಲಿಸುವ ಕ್ರಮದಲ್ಲೇ ಅದರ ಒಳ ನೋಟಗಳನ್ನು ದಾಖಲಿಸುವುದು ನಿಮ್ಮ ಬರಹದ ಮುಖ್ಯ ಗುಣ ಎಂದು ಭಾವಿಸಿದ್ದೇನೆ. ಕುರ್ತುಕೋಟಿಯವರ ಕುರಿತುಉರಿನಾಲಿಗೆ ಹಿಡಿ ಮಲ್ಲಿಗೆ, ಪಿ. ಲಂಕೇಶರಮೋಕ್ಷ ಹುಡುಕುತ್ತ ಪ್ರೀತಿಯ ಬಂಧನದಲ್ಲಿ, ಕವಿ ಎಕ್ಕುಂಡಿಯವರನ್ನು ಕುರಿತಾದಎಕ್ಕುಂಡಿ ಎಂಬ ಏಕತಾರಿ, ಬೆಡಗಿನ ನುಡಿಗಾರ ಸಿಂಪಿ ಲಿಂಗಣ್ಣ ಇವುಗಳು ಒಂಸು ಗುಂಪಿಗೆ ಸೇರಿದರೆ, ಕವನಗಳನ್ನು ಕುರಿತು ಬರೆದ ಲೇಖನಗಳು ವಿಮರ್ಶಕತನದಿಂದ ಕೂಡಿವೆ. ಒಬ್ಬ ನಿಜವಾದ ಅಂಕಣಕಾರನಿಗೆ ಇರಬೇಕಾದುದು ದಿಟ್ಟ ವರದಿಗಾರನ ನಿರ್ಭೀತ ವರದಿಗಾರಿಕೆ, ತನ್ನ ವಿಶ್ಲೇಷಣೆಗಿಂತ ವಿಷಯಕ್ಕೆ ಸಂಬಂಧಪಟ್ಟ ವಸ್ತುವಿನ ಯಥಾವಂತಿಕೆಯನ್ನು ತನ್ನ ಗ್ರಹಿಕೆಯಲ್ಲಿ ಹಿಡಿದಿಡುವುದರ ಜೊತೆಗೆ ಭಾಷೆಯಲ್ಲಿ ಕಟ್ಟಿಕೊಡುವ ಕೆಲಸವೂ ನಡೆಯಬೇಕು. ಇದೊಂದು ಸಾಹಸದ ಕೆಲಸವೇ. ನೀವು ಅದನ್ನು ಬಹಳ ಎಚ್ಚರದಿಂದ ನಿರ್ವಹಿಸಿದ್ದೀರಿ ಎನಿಸುತ್ತದೆ. ‘ಭಾವಗಮ್ಯವಾಗಿರುವ ಆದರೆ ಅಭಿವ್ಯಕ್ತಿಸಲಾಗದ ಒಂದು ಸತ್ಯಕ್ಕಾಗಿ ವರ್ಷಗಟ್ಟಲೆ ಕತ್ತಲೆತಲ್ಲಿ ಪರಿದಾಡುವುದು, ತೀವ್ರ ಬಯಕೆ, ಭರವಸೆ ಹಾಗೂ ಹತಾಶೆ, ಪರ್ಯಾಯವಾಗಿ ಉದ್ರೇಕಿಸುವುದು ಮತ್ತು ಅಂತಿಮವಾಗಿ ಪೊರೆಯೊಡೆದು, ಸ್ಫುಟನೆ ಮತ್ತು ಅರಿವುಗೊಳಿಸುವುದುಇದನ್ನು ಸ್ವತಃ ತಾನೇ ಅನುಭವಿಸುವವನಿಗೆ ಮಾತ್ರ ತಿಳಿದುರುತ್ತದೆಎಂದು ಹೇಳುವ ಆಲ್ಬರ್ಟ್ ಐನ್ಸ್ಟೀನ್ ಮಾತುಗಳು ವಿಜ್ಞಾನಿಗಳಿಗೆ ಅಷ್ಟೇ ಅನ್ವಯಿಸುವುದಿಲ್ಲ ಸೃಜನಶೀಲ ಲೇಖಕನಿಗೂ ಅನ್ವಯಿಸುತ್ತವೆ. ನಿಸರ್ಗದ ಆಶಯಕ್ಕೆ ಚಿಕಿತ್ಸಕ ದೃಷ್ಟಿ ಹರಿಸುವ ಸಂಶೋಧಕನಂತೆಯೇ ಲೇಖಕ ದೃಷ್ಟಿ ಹರಿಸಬೇಕು. ನಿಮಗೆ ಅದು ಸಾಧ್ಯ ಎಂಬುದು ಲೇಖನಗಳಲ್ಲಿ ಕೆಲವಾದರೂ ಸ್ಪಷ್ಟಪಡಿಸುತ್ತವೆ.
                                                                           ಇಂತಿ ನಿಮ್ಮ
                                                                   ಎಂ. ಎನ್. ವ್ಯಾಸರಾವ್

ಇದು ದಶಕಗಳ ಹಿಂದಿನ ವ್ಯಾಸರಾವರ ಒಕ್ಕಣಿಕೆ. ಶಬ್ದಕ್ಕಿರುವ ಶಕ್ತಿಯೇ ಇದು. ಈಗ ಅಂತಿಮವಾಗಿ ಅವರು ನನ್ನನ್ನು ಕಾಡುವುದು ಒಕ್ಕಣಿಕೆಗಾಗಿಯೆ. ಕರ್ನಾಟಕದ ಗಡಿಯ ಊರೊಂದರಲ್ಲಿ ಕುಳಿತು ವ್ಯಾಸರಾವ್ ಅವರೊಂದಿಗೆ ಸಂಪರ್ಕ ಸಾಧಿಸಿಕೊಂಡೂ ದಶಕಗಳವರೆಗೂ ಭೇಟಿ ಇಲ್ಲದೇ ಇದ್ದೆ. ಆನಂತರ ಇಲ್ಲಿಗೆ ಬಂದೂ ಬೆಂಗಳೂರಿನಲ್ಲಿ ಅವರಿಂದ ಕೂಗಳತೆಯಲ್ಲಿದ್ದೂ ಒಮ್ಮೆಯೂ ಅವರನ್ನು ಕಂಡಿರಲಿಲ್ಲ. ಈಗಲೂ ಸಾಹಿತ್ಯ ಲೋಕದಲ್ಲಿ ಇಂಥ ನನ್ನ ಅನೇಕ ಸಂಪರ್ಕಗಳಿವೆ. ಸಾಹಿತ್ಯಿಕ ಆಲೋಚನೆ, ಬರಹಗಳಿಂದ ಹತ್ತಿರವಾದವರನ್ನೆಲ್ಲ ಕಾಣಲೇಬೇಕೆಂಬ ಮೋಹವನ್ನು ನಾನು ಮೊದಲನಿಂದಲೂ ಬೆಳೆಸಿಕೊಂಡಿಲ್ಲ. ಸದ್ಭಾವ ಹಾಗೂ ಸಾಹಿತ್ಯ ಸಂಸ್ಕøತಿಗೆ ಭೇಟ್ಟಿ ಅನಿವಾರ್ಯವೇನಲ್ಲ. ಇದು ನನ್ನ ನಂಬಿಕೆ. ಹೀಗಾಗಿ ಫೋನ್ ಮೂಲಕವೇ ಅರ್ಥಪೂರ್ಣ ಸಂಪರ್ಕ ಹೊಂದಿದ್ದ ನಮ್ಮಿಬ್ಬರ ಸ್ನೇಹಕ್ಕೆ ಒಂದು ದಶಕ ಉರುಳಿದ್ದೇ ಗೊತ್ತಾಗಲಿಲ್ಲ.
ಹತ್ತು ವರ್ಷಗಳ ನಂತರ ಒಮ್ಮೆ ಇದ್ದಕ್ಕಿದ್ದಂತೆ ರಾಯರಿಗೆ ಫೋನಾಯಿಸಿ ವಿಜಯನಗರದ ನನ್ನ ಕಾಲೇಜಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆಗೆ ಬರಬೇಕೆಂದು ಕೋರಿಕೊಂಡಾಗ ಅನಾರೋಗ್ಯದ ಮಧ್ಯವೂ ಸಾವಿರ ಜನ್ಮದ ಪ್ರೀತಿಯಿಂದ ಬಂದು ನಮ್ಮಿಬ್ಬರ ಪ್ರೀತಿ ಕುರಿತಾಗಿಯೇ ಮಾತನಾಡಿದ ಅವರು ನಾವಿಬ್ಬರೂ ದಶಕಗಳವೆರೆಗೆ ಒಂದೇ ಕ್ಷೇತ್ರದಲ್ಲಿದ್ದೂ, ಪರಸ್ಪರ ಫೋನಾಯಿಸಿ, ಬರೆದು, ಬರೆದುಕೊಂಡು ಪರಸ್ಪರ ಮುಖ ಕಾಣದವರು ಎಂಬ ಯಾವ ಭಾವವೂ ಇಟ್ಟುಕೊಳ್ಳದೇ, ನಿತ್ಯ ಮನೆ-ಮನಗಳ ಪಕ್ಕದಲ್ಲಿಯೇ ಬದುಕಿದ ಗೆಳಯರಂತೆ ಸ್ನೇಹ ಹಂಚಿಕೊಂಡರು. ನನ್ನನ್ನು ತದೇಕಚಿತ್ತದಿಂದ ಮತ್ತೆ-ಮತ್ತೆ ನೋಡಿ, “ನೀವಿನ್ನೂ ಇಷ್ಟು ಚಿಕ್ಕವರೇ ರಾಗಂ. ನನಗೋ ವಯಸ್ಸಾಯ್ತು ನೋಡಿಎಂದು ಮುಸಿ ನಕ್ಕರು. ಪತ್ನಿ ಸಮೇತರಾಗಿ ಬಂದಿದ್ದ ಅವರು ಅಂದು ಮಾತನಾಡಿದ್ದು ಸಖ್ಯವನ್ನು ಕುರಿತೇ. ಸಾಮರಸ್ಯ ಹಾಗೂ ಸ್ನೇಹಪರತೆಗಳೇ ಅವರ ಸಾಹಿತ್ಯದ ಗುರಿಗಳಾಗಿದ್ದವು.
ಮುಂದೆ ಕೆಲವೇ ತಿಂಗಳು. ಹಾಸನ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅಭಿಮಾನಿ ಗೆಳೆಯ ಜಾವಗಲ್ ಪ್ರಸನ್ನ ನನ್ನನ್ನು ವ್ಯಾಸರಾಯರನ್ನು ಕವಿಗೋಷ್ಠಿಗೆ ಕರೆಯಿಸಿದ್ದರು. ನನ್ನದು ಆಶಯ ಭಾಷಣ, ರಾಯರದು ಅಧ್ಯಕ್ಷತೆ. ವಯಸ್ಸಿನ ಕಾರಣ ಮರೆವಿಗೆ ಜಾರುತ್ತಿದ್ದ ವ್ಯಾಸರಾಯರು ಅಂದು ಫೋನು ಕಳೆದುಕೊಂಡು ಒದ್ದಾಡುತ್ತಿದ್ದರು. “ರಾಗಂ ಆಧುನಿಕ ಜಂಜಡಗಳು ಎಲ್ಲಿ ಹೋದರೂ ನಮ್ಮನ್ನು ಸಮಾಧಾನವಾಗಿರಲು ಬಿಡುವುದಿಲ್ಲ ನೋಡಿಎಂದು ತಮ್ಮ ಕೋಟಿನ ಜೇಬಿನೊಳಗೇ ಮೊಬೈಲ್ ಇರುವುದನ್ನು ನೋಡಿಅಯ್ಯೋ ಹಾಳು ಮರೆವುಎಂದು ಮುಗುಳ್ನಕ್ಕರು.
ಮೂರು ಗಂಟೆಗಳವರೆಗೆ ನಡೆದ ಅಂದಿನ ಕಾವ್ಯ-ಕುಂಚ-ನೃತ್ಯದ ವೇದಿಕೆಯಲ್ಲಿ ಕುಳಿತ ನಾವಿಬ್ಬರೂ ಕಾದದ್ದು ಒಬ್ಬ ಕವಿಗಾಗಿ. ಸುಮಾರು ಇಪ್ಪತ್ತು ಕವಿಗಳು ಕವಿತೆಗಳನ್ನೋದಿದರು. ಆದರೆ ಕವಿ ಬರಲೇ ಇಲ್ಲ. ಕವಿಗೋಷ್ಠಿ, ಸಮ್ಮೇಳನಗಳ ಇಂಥ ನಿರರ್ಥಕತೆಯನ್ನು ಕುರಿತು ಆರಂಭದಲ್ಲಿ ಮಾತನಾಡಿದ್ದ ನನ್ನ ಭಾಷಣ ಕೇಳಿದ ನಂತರ ವ್ಯಾಸರಾಯರು, “ರಾಗಂ, ಇದಕ್ಕಿಂತಲೂ ಚೆನ್ನಾಗಿ, ನೇರವಾಗಿ, ನಾನಿನ್ನೇನು ಹೇಳಲು ಸಾಧ್ಯ? ನಿಮ್ಮ ಮಾತುಗಳು ನನ್ನನ್ನು ಸಮಾಧಾನಿಸಿವೆ. ನಿಮ್ಮ ತಕರಾರೇ ನನ್ನದು ಕೂಡಾ, ವೃಥಾ ಕಾಲಹರಣ ಬೇಡಎಂದು ವೇದಿಕೆಯ ಮೇಲೆ ಕಿವಿಯಲ್ಲಿ ಉಸುರಿದ್ದ ಅವರು ನುಡಿದಂತೆಯೇ ತಮ್ಮ ಅಧ್ಯಕ್ಷೀಯ ಭಾಷಣವನ್ನು ನನ್ನ ವಾದದ ಚುಂಗನ್ನೇ ಹಿಡಿದು ಸರಳ ಹಾಗೂ ಸಂಕ್ಷಿಪ್ತಗೊಳಿಸಿಕೊಂಡಿದ್ದರು. ಬಹುತೇಕ ಅಂದಿನ ಅವರ ಭಾಷಣ ಹಾಸನದ ನಮ್ಮಿಬ್ಬರ ಸಾಹಿತ್ಯಾಭಿಮಾನಿಯಾದ ಶ್ರೀಮತಿ ಸಂಗೀತಾ ಶ್ರೀಕಾಂತ ಅವರ ಬಳಿ ಇರಬಹುದು.
ರಾಯರ ಸಾವಿನ ಒಂದೆರಡು ವಾರಗಳ ಮೊದಲು ನನ್ನ ಇತ್ತೀಚಿನ ಜಾನ್ಕೀಟ್ಸ್ನನ್ನು ಕುರಿತಾದನೀರ ಮೇಲೆ ನೆನಪ ಬರೆದುಕೃತಿಯನ್ನು ಓದಿ ಹೃದಯ ದುಂಬಿ ಮೂರು ಬಾರಿ ಫೋನಾಯಿಸಿದ್ದರು. ಮಾತಾಡಿದಾಗೊಮ್ಮೆಬರೆದರೆ ಹೀಗೆ ಬರೆಯಬೇಕು ರಾಗಂ. ನಿಮ್ಮ ಕೀಟ್ಸ್ ನನ್ನನ್ನು ಬಹಳ ಕಾಡಿದಎಂದಿದ್ದರು. ಇನ್ನು ಒಂದೆರಡು ದಿನಗಳಲ್ಲಿ ನಾನು ಅವರ ಮನೆಗೆ ಹೋಗುವುದಿತ್ತು. ಆದರೆ ಜುಲೈ 15 ಮುಂಜಾನೆ ನನ್ನ ಮೊಬೈಲ್ ಎತ್ತಿಕೊಂಡಾಗ ಒಂದು ಸಂದೇಶ Hello this is Manu Vyasa Rao, son of M.N. Vyasa Rao, unfortunately my father passed away. . . . .
ಓದತ್ತಲೇ ನಾನು ತಣ್ಣಗಾದೆ, ಕಣ್ಣೀರು ಹಬಿಯಲಿಲ್ಲ ಕುದಿಕುದಿಯಾದ ಮನಸ್ಸಿನಲ್ಲಿ ಸಾವಿನ ದಿನದಿಂದ ಇಂದಿನವರೆಗೂ ಪ್ರಶ್ನೆಯೊಂದೆ ‘unfortunately’ ಎಂಬ ಶಬ್ದ ‘fortunately’ ಯಾವಾಗ ಸಾಯುತ್ತದೆ? ಸಾಯಬಹುದೆ?!

No comments:

Post a Comment