Total Pageviews

Thursday, September 6, 2018

ಶಾಬ್ದಿಕ ಮೌನ, ನಿರಂತರ ಧ್ಯಾನ



          ಕೆಲವೊಮ್ಮೆ ಹೀಗಾಗುತ್ತದೆ, ಏನೆಲ್ಲವನ್ನು ಕುರಿತು ಬರೆಯುವ, ಚಿಂತಿಸುವ, ಧ್ಯಾನಿಸುವ ನಾವು ಪಕ್ಕದಲ್ಲಿದ್ದವರನ್ನೇ ಮರೆಯುತ್ತೇವೆ. ಮರೆತದ್ದಕ್ಕಾಗಿ ಮತ್ತೆ ಮರೆಯುತ್ತೇವೆ. ಕಾಲ ಯಾರಪ್ಪನ ಮನೆ ಆಸ್ತಿ? ಕ್ರಮಿಸಿಬಿಡುತ್ತದೆ. ನಾವು ಎಚ್ಚರವಾಗುವುದರೊಳಗಾಗಿ ದಾಖಲಿಸಬೇಕಾದ ವಿಚಾರ ವಿರಮಿಸಿಬಿಡುತ್ತದೆ. ಆಗ ನಮ್ಮ ಅಭಿವ್ಯಕ್ತಿಗಳೆಲ್ಲ ಆಷಾಡದ ಗಾಳಿಯಂತಾಗಿ ಬಿಡುತ್ತವೆ. ಆದರೆ ಲೇಖನದ ಮೂಲಕ ನಾನು ಮಾಡಬಹುದಾದ ಒಂದು ತಪ್ಪಿನಿಂದ ಉಳಿದುಕೊಳ್ಳುತ್ತಿದ್ದೇನೆ ಎನ್ನುವುದೇ ಖುಷಿ. ನನ್ನೀ ಬರಹದ ವ್ಯಕ್ತಿ ಇನ್ನೂ ಜೀವನೋತ್ಸಾಹದಿಂದ ಪುಟಿಯುತ್ತಿದ್ದಾರೆ ಎನ್ನುವುದು ಒಂದು ಎಕ್ಸ್ಟ್ರಾ ಬೋನಸ್. ಎಂಟು ದಶಕಗಳ ದೀರ್ಘ ಬಾಳಿನಲ್ಲಿ ಅವರು ನಿಷ್ಠುರ ಮತ್ತು ನಿಗರ್ವಿ. ಅವರು `ಸಜ್ಜನಕ್ಕೆ ಅನ್ವರ್ಥಕ. ಅವರ ಮಾತು ಕಡಿಮೆ, ಹಾಗೆ ಕನ್ನಡದಲ್ಲಿ ಅವರ ಬರಹವೂ ಕಡಿಮೆ. ಬರೆದ ಚೂರು-ಪಾರು, ಭಾಷೆ ಮತ್ತು ವ್ಯಾಕರಣಕ್ಕೆ ವ್ಯಯವಾಗಿದೆ. ಆದರೆ ಭಾಷಾ ಪ್ರಭುತ್ವ ಮತ್ತು ಪ್ರಬುದ್ಧತೆಗಳು ವಿರಳವಾಗುತ್ತಿರುವ ದಿನಗಳಲ್ಲಿ ಅವರ ಲೇಖನಗಳನ್ನು ಗಮನಿಸಬೇಕಾದುದು ಅವಶ್ಯಕ. ಸಜ್ಜನರೆಂದರೆ ಭಾಷೆ, ಶಿಸ್ತು ಮತ್ತು ಪ್ರಾಮಾಣಿಕತೆ.
ವ್ಯಕ್ತಿಗತ ಸಂಬಂಧಗಳ ನೆಲೆಗೆ ಬಂದಾಗ ಸಜ್ಜನರೆಂದರೆ ನನ್ನ ಬಾಲ್ಯ, ನನ್ನ ಓದು, ಯೌವ್ವನದ ಭಂಡತನ, ಸಂಶೋಧನೆ, ಹುಚ್ಚು ಹವ್ಯಾಸ, ಅಲೆಮಾರಿತನ ಹೀಗೆ ಏನೆಲ್ಲ. ನನ್ನ ಬದುಕಿನಲ್ಲಿ ಅವರೊಂದಿಗೆ ಹಂಚಿಕೊಳ್ಳದೇ ಇರುವುದು ಏನಿದೆ ಎಂದು ಪ್ರಶ್ನಿಸಿಕೊಂಡರೆ ಉತ್ತರವೇ ನಿರುತ್ತರ. ಸಜ್ಜನರು ಒಂದು ಕಂಬ. ನಾನು ಹಾಗೂ ನನ್ನಂಥ ಅನೇಕ ಬರಹಗಾರರು ಅವರನ್ನೇ ಸುತ್ತುವ ಅವರದೇ ಬಿಂಬ. ನಮ್ಮೂರೆಂಬ ಊರು ಚಡಚಣದಲ್ಲಿ ಪೇರಿಸಿಟ್ಟ, ಅಡಕಲಿನಲ್ಲಿ ಮರೆತ ಚಿನ್ನದ ತುಣುಕಿನಂತಿದ್ದರು ಜಿ.ಬಿ.ಸಜ್ಜನ. `ಅವರಿದ್ದರುಎನ್ನುವುದಕ್ಕಾಗಿ ಬರಡಿನಲ್ಲಿ ಒಂದಿಷ್ಟು ಹಸಿರು ಹುಟ್ಟಿಕೊಂಡಿತು. ಕಸ-ಕಳೆ ದೂರವಾಗಿ ಹೊಸಬೆಳಕು ಬಂತು. `ಅವರಿದ್ದರುಎನ್ನುವುದಕ್ಕಾಗಿ ಸಾಹಿತಿಗಳು, ಕಲಾವಿದರು, ಶಿಕ್ಷಣ ತಜ್ಞರ ಆಗಮನವಾಗಿ ಜಡವಾಗಿದ್ದ ಪರಿಸರ ಜೀವಕಳೆ ತುಂಬಿಕೊಂಡಿತು, ಮಾತಾಯಿತು. ಹಿರಿಯ ಜೀವವೊಂದು ಇದ್ದ ಮುರುಕಲು ಮನೆಯನ್ನೇ ಸ್ವಚ್ಛಗೊಳಿಸಿ ಬರುವವರಿಗಾಗಿ ಕತ್ತಲೆಯಲ್ಲಿ ಹಣತೆ ಹಚ್ಚಿಟ್ಟಂತಾಯಿತು.
ಸಾಕು ಸಾಕೆನ್ನುವಷ್ಟು ಪುಸ್ತಕಗಳು, ಎಲ್ಲ ಕಾಲಕ್ಕೂ ಸಲ್ಲುವ ಪತ್ರಗಳು, ನೀವು ಮೈಯೆಲ್ಲಾ ಎಚ್ಚರವಾಗಿ ಬರೆದರೂ ಭಾಷಿಕ ತಪ್ಪುಗಳನ್ನು ಕಂಡುಹಿಡಿಯುವ ಕಣ್ಣುಗಳು, ನನ್ನಂಥವನಿಗೆ ಅವರೊಂದಿಗಿನ ಒಡನಾಟ ಬಹಳ ಸರಳ. ಕಾರಣ ಇಷ್ಟೆ, ಸಜ್ಜನರು ಬಹಳ ಸರಳ ಎಂದು ಅನ್ಯರಿಗೆ ಗೊತ್ತಿಲ್ಲದೇ ಇರುವುದು. ಸಾಮಾನ್ಯವಾಗಿ ಗುಲ್ಬರ್ಗಾದಿಂದ ಧಾರವಾಡ ವಿವಿಗಳವರೆಗೂ ಆಡಳಿತ ವಿಚಾರಗಳಿಗೆ ಸಂಬಂಧಿಸಿದಂತೆ ಸದಾ ಜಗಳಕಾಯುತ್ತಲೇ ಬಂದ ಸಜ್ಜನರ ಇನ್ನೊಂದು ಮುಖ ನಮ್ಮ ಜನರಿಗೆ ಗೊತ್ತಾಗದೇ ಹೋಯಿತು. ಛೇ! ಅವರೆಂದರೆ ನಿಯಮ, ಜಿಪುಣತನ, ಕೆಲಸ ಎಂದು ತಲೆ ಜಾಡಿಸಿದ ಜನಗಳಿಗೆ, ಶಿಕ್ಷಕ ಬಂಧುಗಳಿಗೆ ಸಜ್ಜನರೆಂದರೆ ಏನು ಎಂದು ತಿಳಿಸಬೇಕಾದರೆ ಇಂದು ಆಲದ ಮರದಂತೆ ಬೆಳೆದು ನಿಂತ ಬಿ.ಎಲ್.ಡಿಯ ಕ್ಯಾಂಪಸ್ಸಿನೆಡೆಗೆ ಕೈ ಮಾಡಬೇಕಾಗುತ್ತದೆ. ಅದು ಅವರ ಮನೆತನದ ಔದಾರ್ಯಕ್ಕೆ ಸಾಕ್ಷಿ. ಸಂಸ್ಥೆಗೆ ಉದಾರ ದೇಣಿಗೆ ನೀಡಿದ ಬಂಗಾರೆವ್ವ ಸಜ್ಜನ ಇವರ ಅಜ್ಜಿ ಎನ್ನುವುದು ಅದೆಷ್ಟು ಜನರಿಗೆ ಗೊತ್ತಿದೆ?
ಉಪಕಾರ ಮತ್ತು ಉಪಕೃತಿಯ ಬಹಳ ದೊಡ್ಡ ಸಂಸ್ಕøತಿಯಿಂದ ಬಂದವರು ಸಜ್ಜನ. ಅವರ ಸ್ನೇಹ ಮಾತ್ರದಿಂದಲೇ ಅನೇಕರಿಗೆ ಅನೇಕ ರೀತಿಯ ಲಾಭಗಳಾಗಿವೆ. ಸ್ವಂತಕ್ಕೆ ಅವರು ವಿಶ್ವವಿದ್ಯಾಲಯಗಳ ವ್ಯವಸ್ಥೆಗೊಳಪಡಲಿಲ್ಲ. ಆದರೆ ನಾಡಿನ ಅನೇಕರ ನಿಟ್ಟಿನ ಅಸ್ತಿತ್ವಕ್ಕೆ ಅವರು ಕಾರಣರಾದರು ಮತು ಬೆನ್ನೆಲುಬಾಗಿ ನಿಂತರು. ರಾಜ್ಯದಲ್ಲಿ ಇಂಗ್ಲೀಷ್ ಪಿಹೆಚ್.ಡಿಗಳ ಒಂದು ಸಣ್ಣ ಸರ್ವೆಯನ್ನೇನಾದರೂ ಮಾಡಿದರೆ ಬಹಳಷ್ಟು ದೊಡ್ಡ ಶಿಷ್ಯ ಬಳಗ ಅವರಿಗೆ ಉಪಕೃತರಾಗಿರುವುದನ್ನು ನಾವು ಕಾಣಬಹುದು.
ವಿಶ್ವವಿದ್ಯಾಲಯಗಳ ಪಠ್ಯಪುಸ್ತಕ ರಚನಾ ಸಮಿತಿ, ನಿಘಂಟು ರಚನಾ ಸಮಿತಿ, ಅನುವಾದ ಅಕಾಡೆಮಿ, ಬೆಂಗಳೂರಿನ ಬಸವ ಸಮಿತಿ, ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಪ್ರಕಾಶನ ಸಂಸ್ಥೆಗಳು, ಬಿಜಾಪುರದ ಮಹಿಳಾ ವಿಶ್ವವಿದ್ಯಾಲಯ ಸಜ್ಜನರನ್ನು, ಅವರ ಪಾಂಡಿತ್ಯವನ್ನು ಗುರುತಿಸಿ ಅನೇಕ ಸಾರ್ಥಕ ಚಟುವಟಿಕೆಗಳಲ್ಲಿ ಅವರನ್ನು ಬಳಸಿಕೊಂಡಿವೆ. ಏಳು ದಶಕಗಳ ನಿರಂತರ ಹೋರಾಟದ ನಂತರ ಒಂದಷ್ಟು ಪ್ರಶಸ್ತಿ, ಪುರಸ್ಕಾರಗಳು ಸಜ್ಜನರಿಗೆ ಲಭಿಸಿವೆ. ಇದರಲ್ಲಿ ಪ್ರಮುಖವಾಗಿ ಅನುವಾದ ಅಕಾಡೆಮಿಯು ಮಾಡಿದ ಪುರಸ್ಕಾರವನ್ನು ಸ್ಮರಿಸಿಕೊಳ್ಳಬಹುದು. ಹಾಗೆ ಇತ್ತೀಚೆಗೆ ಗುಲ್ಬರ್ಗಾ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟನ್ನು ನೀಡಿ ಗೌರವಿಸಿದೆ.
ಒಗ್ಗದ ನೆಲವನ್ನು ಹದಗೊಳಿಸಿ, ಮರ ನೆಟ್ಟು, ಖುಷಿ ಪಟ್ಟ ಸಜ್ಜನ, ಸಿಕ್ಕ ಸಣ್ಣ ಊರನ್ನು ಕಾಯಕದ ಮೂಲಕ ವಿಸ್ತರಿಸಿಕೊಂಡ ಸಜ್ಜನ, ಬಡ ಮಕ್ಕಳ ಆರ್ಥಿಕ ಸಮಸ್ಯೆಗಳನ್ನು ಅರಿತುಕೊಂಡು ವಿಶ್ವವಿದ್ಯಾಲಯಗಳ ಕೊರಳಿಗೆ ಗಂಟೆ ಕಟ್ಟುವ ಸಾಹಸ ಮಾಡಿದ ಸಜ್ಜನ, ಸಾಮಾನ್ಯನ ಹೋರಾಟದಲ್ಲಿ ನೈತಿಕ ಬೆಂಬಲವಾಗಿ ನಿಂತು ಅಸಾಮಾನ್ಯರಾಗುವ ಸಜ್ಜನ, ಸಿಕ್ಕದ್ದು ಭಾಗ್ಯ, ಸಿಗದಿರುವುದು ಸೌಭಾಗ್ಯ ಎಂದು ಸಂತೃಪ್ತರಾದ ಸಜ್ಜನ, ನಾವು ಕಾಣದೆ ಇರುವ ಇದೇ ವ್ಯಕ್ತಿಯ ಒಳಪದರುಗಳು. ಮನುಷ್ಯ ಈರುಳ್ಳಿಯಂತೆ, ಬಿಚ್ಚಿದಷ್ಟೂ ಸಾರ್ಥಕ ಪದರುಗಳೇ.
ಅವರು ನನ್ನೊಂದಿಗೆ ನನ್ನ ತಂದೆಯೂ ಬಾರದಷ್ಟು ದೂರ ಬಂದಿದ್ದಾರೆ. ನನ್ನ ಪತ್ರಗಳನ್ನು ನೋಡಿ ಕುಣಿದಾಡಿದ್ದಾರೆ, ಪ್ರೀತಿಗೆ ಬೆಂಗಾವಲಾಗಿ ನಿಂತು ರಕ್ಷಿಸಿದ್ದಾರೆ, ಮನೆಯ ಹರಿವಾಣದಲ್ಲಿ ಹಾಕಿದ ಸಸಿಗಳಂತೆ ನನ್ನ ಸಂವೇದನೆಗಳನ್ನು, ಸಂಬಂಧಗಳನ್ನು, ಹುಚ್ಚಾಟಗಳನ್ನು ಕಾಪಿಟ್ಟಿದ್ದಾರೆ. ಸಜ್ಜನರು ನನಗೆ ಇಂಗ್ಲೀಷನ್ನು ಕಲಿಸಲಾರರು, ನಾನು ಕಲಿಯಲಾರೆ ಎನ್ನುವುದೇ ನಮ್ಮ ಸಂಬಂಧಗಳ ಚೆಲುವು. ಅವರು ಎಚ್ಚರಿಸಿದಷ್ಟೂ ನಾನು ನಿದ್ರಾಪರವಶ. ಅವರು ಹಂಬಲಿಸಿದಷ್ಟೂ ನನ್ನದು ಶಾಬ್ದಿಕ ಮೌನ. ಇದೊಂದು ರೀತಿಯ `ಎತ್ತಣ ಮಾಮರ, ಎತ್ತಣ ಕೋಗಿಲೆಆದರೂ ಲೆಕ್ಕಾಚಾರದಲ್ಲಿ ಕೋಗಿಲೆ ಇದೆ, ಮಾಮರವಿದೆ. ನನ್ನ ಮಾತುಗಳಿಂದ ಸಜ್ಜನರು ದೇವರಾಗುವುದಿಲ್ಲ. ದೇವರಾದವರು, ದೇವರಾಗುವವರು ಚರ್ಚೆಗಳಿಂದ ಅತೀತ. ಸತ್ತವರ ಲೋಕಕ್ಕೆ ತೀರ ಸಮೀಪ. ಅವರಿಗೆ ಎರಡೇ ಕೈಗಳಿರುವುದಿಲ್ಲ, ಒಂದೇ ಆತ್ಮ, ಒಂದೇ ನಾಲಿಗೆಯೂ ಇರುವುದಿಲ್ಲ.
ಸಜ್ಜನರು ಒಂದೇ ನಾಲಿಗೆಯ, ಒಂದೇ ಮನಸ್ಸಿನ ಒಂದು ಜೀವ. ಈಗ ಇವರ ಬಿಂಬ ಹಲವಾಗಿವೆ, ಗೆಲುವಾಗಿವೆ. ಇದು ಮನುಷ್ಯ ಲೋಕದ ಸೌಂದರ್ಯ.
ನನ್ನ ರೂಪಿಸಿದ ನನ್ನ ಗುರುಗಳ ಸ್ಮರಣೆಯಲ್ಲಿ.

No comments:

Post a Comment