Total Pageviews

Saturday, February 23, 2019

ಕವಿಶೈಲಕ್ಕೂ ಗೋವರ್ಧನ ಗಿರಿಗೂ.. ..


          ಮಾನವನ ಅಭಿವ್ಯಕ್ತಿಯ ಮಾರ್ಗಗಳು ಹಲವು. ಶಿಲೆಗಳಲ್ಲಿ ಕಲೆಯನರಳಿಸಿ, ಮಣ್ಣಲ್ಲಿ ಮಡಿಕೆ ಮಾಡಿ, ಉಸುಕಿನಲ್ಲಿ ಗುಬ್ಬಚ್ಚಿ ಗೂಡು ಕಟ್ಟುವ ಅವನು, ಮಾತು ಕಲಿತ ಮೇಲೆ ಹುಡುಕಿಕೊಂಡ ದಾರಿಗಳಲ್ಲಿ ಸಾಹಿತ್ಯವೂ ಒಂದು. ಕಾವ್ಯ, ನಾಟಕ, ಕಥೆ, ಕಾದಂಬರಿ ಹೀಗೆ ಪ್ರಕಾರ ಯಾವುದೇ ಇರಲಿ ಆದರೆ ಅಲ್ಲೆಲ್ಲ ಆತ ಹೇಳಬಯಸಿದ್ದು ತನ್ನಂತರಗದ ಆಲಾಪಗಳನ್ನೆ. ಆಂಡ್ರೆ ಮೌರಿಯಸ್ ಎನ್ನುವ ಫ್ರೆಂಚ್ ಲೇಖಕ ಒಂದೆಡೆ ಬರೆಯುತ್ತಾನೆ, Art is an effort to create, beside the real world, a more human world.” ಮಾತು ಸರಿಯಾಗಿಯೇ ಇದೆ. ತನ್ನ ಸುತ್ತಲಿನ ಅಸಹನೀಯ ವಾಸ್ತವ ಬದುಕಿಗೆ ಹೊರತಾದ ಮಾನವೀಯ ಜಗತ್ತನ್ನು ಕಟ್ಟಿಕೊಳ್ಳುವ ಹಂಬಲವೇ ಎಲ್ಲ ಅಭಿವ್ಯಕ್ತಿಗಳ ತಾಯಿಬೇರು. ಪ್ರಪಂಚದಲ್ಲಿ ಕಾಣೆಯಾದ ಕನಸಿನರಮನೆಯನ್ನು ಭಾಷೆ, ಭಾವಗಳ ಮೂಲಕ ನಿರ್ಮಿಸುತ್ತಾ ಮನುಷ್ಯ ತನ್ನನ್ನು ತಾನು ಸಂಭಾಳಿಸಿಕೊಳ್ಳುತ್ತಾನೆ, ಬದುಕನ್ನು ಸಹ್ಯವಾಗಿಸಿಕೊಳ್ಳುತ್ತಾನೆ. ಇರದೇ ಹೋದರೆ ನಿತ್ಯವೂ ಅದೆಷ್ಟು ಜನ ಭಾವ ದಾರಿದ್ರ್ಯದಿಂದ ಅಸುನೀಗುತ್ತಿದ್ದರೊ ಏನೊ. ಸಾಹಿತ್ಯದ ಹೆಗ್ಗಳಿಕೆಯೇ ಇದು, ಅದು ನಮ್ಮೊಳಗೆ ಭರವಸೆಯ ಹಿಡಿದೀಪ ಹಚ್ಚಿ, ಭವಿತವ್ಯಕ್ಕೊಂದು ಹೊಸ ದಾರಿ ಕಲ್ಪಿಸುತ್ತದೆ.
          ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ಮೂರು ದಿನದಕಥನ-ಕಾವ್ಯ-ನಾಟಕ ಕಮ್ಮಟದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ನನ್ನೊಳಗೆ ಆಲೋಚನೆಗಳ ಲಹರಿಯೊಂದು ಹಾಯ್ದುಹೋಗುತ್ತಿತ್ತು. ವಿಶೇಷವೆಂದರೆ ಅದು ವಯಸ್ಕರ ಕಮ್ಮಟವಲ್ಲದೆ 14 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗಾಗಿ ಏರ್ಪಡಿಸಿದ ವಿಶಿಷ್ಟ ಕಮ್ಮಟವಾಗಿತ್ತು. ಕನ್ನಡದ ವಿಶಿಷ್ಟ ಕವಿ ಮತ್ತು ನಾಟಕಕಾರ ಹಾಗೂ ಸನ್ಮಿತ್ರರೂ ಆದ ಶ್ರೀ ಬೇಲೂರು ರಘುನಂದನ್ ಅವರ ನೇತೃತ್ವದಲ್ಲಿ ಆದಿ ಚುಂಚನಗಿರಿ ಮಠದ ವಿಶೇಷ ಸಹಕಾರದಲ್ಲಿ ಕಾರ್ಯಕ್ರಮ ನಡೆದಿದ್ದು ಮೂರೂ ದಿನ ಶ್ರೀ ಮಠದ ಸಾಧಕರೂ ಶಿಬಿರಾರ್ಥಿಗಳೊಂದಿಗೆ ಇದ್ದದ್ದು ಸ್ವಾಗತನೀಯವಾಗಿತ್ತು. ಶ್ರೀ ನಿರ್ಮಲಾನಂದ ಸರಸ್ವತಿಯವರ ಮಾನವ ಪರ, ಯುವಪರ ಆಲೋಚನೆಯೊಂದಿಗೆ ಶುರುವಾದ ಕಮ್ಮಟ ಅವರು ಸೂಚಿಸಿದ ಆಶಯವನ್ನು ಅಂತಿಮವಾಗಿ ಮುಟ್ಟಿದ್ದು ಶಿಬಿರದ ಹೆಗ್ಗಳಿಕೆ ಎನ್ನಬೇಕು. ಒಂದು ಕ್ಷಣ ಕರ್ನಾಟಕದ ಮೂಲೆ-ಮೂಲೆಗಳಿಂದ, ಭಿನ್ನ-ಭಿನ್ನ ಸಂಸ್ಕøತಿ, ಆಚಾರ-ವಿಚಾರ, ಸಂಪ್ರದಾಯ ಹಾಗೂ ಕೌಟುಂಬಿಕ ಹಿನ್ನೆಲೆಗಳಿಂದ ಬಂದ ಮಕ್ಕಳ ಬಳಗವನ್ನು ಕಂಡು ಕಿನ್ನರಲೋಕವೊಂದನ್ನೆ ಒಳಹೋಕ್ಕನೇನೋ ಎಂಬ ದಿಗಿಲು ನನಗೆ. ಅದೆಂತಹ ಉತ್ಸಾಹ, ಕುತೂಹಲ, ತಹತಹಿಕೆ, ಹುಮ್ಮಸ್ಸು ಮಕ್ಕಳೊಳಗೆ. ಕಾಡು-ಕಾಡಾದ ಅವರ ಆಲೋಚನೆಗಳಿಗೊಂದು ರೂಪ ಕೊಡಲು ಅವರು ತಮ-ತಮಗೆ ಬೇಕಾದ ವಿಭಾಗಗಳನ್ನು ಆಯ್ದುಕೊಂಡು ಕಥೆ-ಕವಿತೆ ಹಾಗೂ ನಾಟಕಗಳ ಕೈ ಹಿಡಿದರು. ಅಚ್ಚರಿಯೆಂದರೆ ಎಲ್ಲವೂ ಅವರೊಳಗೆ ಮೊದಲೇ ಇದ್ದವುಗಳು.
   ಮೂರು ದಿನಗಳ ಕಮ್ಮಟದ ಕವಿತಾ ರಚನಾ ವಿಭಾಗದ ಸಂಪನ್ಮೂಲ ವ್ಯಕ್ತಿಗಳಲ್ಲೊಬ್ಬನಾಗಿದ್ದ ನಾನು ಕೇವಲ ಅವರನ್ನು ಗಮನಿಸಿ, ಅವರು ಬರೆದ ಕವಿತೆಗಳನ್ನು ಪರಾಮರ್ಶಿಸಿ, ಸಣ್ಣ-ಪುಟ್ಟ ಲೋಪದೋಷಗಳನ್ನು, ಭಾಷಿಕ ತಪ್ಪುಗಳನ್ನು ಸರಿಪಡಿಸುವ ಹೊಣೆ ಹೊತ್ತಿದ್ದೆ. ಕವಿತೆಯೆನ್ನುವುದು ಹೇರಿಕೆಯಲ್ಲವಾದ್ದರಿಂದ ಅವರೊಳಗಿನ ಕವಿತೆಯನ್ನು ಕಾಪಾಡುವುದು ನನ್ನ ಅತೀ ಮುಖ್ಯ ಕಾಳಜಿಯಾಗಿತ್ತು. ಸಂದರ್ಭದಲ್ಲಿ ಅವರ ಕವಿತೆ ಹೊರಬರದೇ ಹೋದರೂ ಚಿಂತೆಯಿಲ್ಲ, ಮುಂಬರುವ ಕವಿತೆ ಮಾತ್ರ ಕೃತ್ರಿಮವಾಗಿರಬಾರದು ಎನ್ನುವುದು ಮುಖ್ಯವಲ್ಲವೇ
     ಕಮ್ಮಟದಲ್ಲಿ ನಾಟಕ ರಚನಾ ವಿಭಾಗದ ನಂತರ ಕವಿತಾ ರಚನಾ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿದ್ದರು. ಇದು ಕವಿತೆ ಮಕ್ಕಳ ಮನಸ್ಸಿಗೆ ಎಷ್ಟೊಂದು ಸಹಜ ಮತ್ತು ಸಮೀಪದ ಸಾಹಿತ್ಯ ಮಾಧ್ಯಮ ಎನ್ನುವುದನ್ನು ಸೂಚಿಸುತ್ತಿತ್ತು. ಹಾಗೆ ನೋಡಿದರೆ ಕುವೆಂಪು ಅವರಂಥ ಮಹಾಕವಿಯೊಬ್ಬನ ಸನ್ನಿಧಾಮದಲ್ಲಿ ನಾವೂ ಕವಿಗಳಾಗಬೇಕೆಂಬ ಅವರ ಮಹಾನ್ ಆಲೋಚನೆಯೇ ಒಂದು ಸುಂದರ ಕವಿತೆ. ಕುವೆಂಪು ಪ್ರಪಂಚದ ಸಕಲ ಜೀವರಾಶಿಯನ್ನು ಮಹೋನ್ನತವಾಗಿ ಕಂಡವರು, ಮಕ್ಕಳನ್ನು ಕೂಡಾ.
    ಸಹ್ಯಾದ್ರಿಯ ಎತ್ತರದ ಕುಪ್ಪಳ್ಳಿಯಂತಹ ರಮಣೀಯ ಸ್ಥಳದಲ್ಲಿ ಪ್ರೇರಣೆಗೆಲ್ಲಿ ಬರ? ಸರಿ, ಕಾರ್ಯಾಗಾರ ಆರಂಭವಾಯಿತು. ಮೊದಲು ಕವಿತೆ ಹುಟ್ಟುವ ಬಗೆ, ಅದರ ಆಶಯ ಮತ್ತು ಪ್ರಸ್ತುತತೆಗಳ ಕುರಿತು ಮಾತನಾಡಿ, ನಂತರತಾಯಿ, ‘ನಿಸರ್ಗ, ‘ಜೀವನಹೀಗೆ ಆಯ್ದ ಕೆಲ ವಿಷಯವಸ್ತುವನ್ನಿಟ್ಟುಕೊಂಡು ಕವಿತೆ ಬರೆಯಲು ಪ್ರೇರೆಪಿಸಿದೆವು. ಮಕ್ಕಳ ಮನೋವಿಶ್ಲೇಷಣಾ ಸಿದ್ಧಾಂತ ನಂಬಿರುವಂತೆ ವಿಷಯಗಳು ಮನೋಕ್ರಿಯಾಜನ್ಯವಲಯಕ್ಕೆ (ಜಡ್.ಪಿ.ಡಿ) ಹತ್ತಿರವಾಗಿರುವುದರಿಂದ ಬಹುಪಾಲು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಲು ಮಾಧ್ಯಮವನ್ನು ಆಯ್ದುಕೊಂಡಿರಬಹುದು. ಹೇಳುವುದೇನು, ನಮ್ಮ ನಿರೀಕ್ಷೆಗೂ ಮೀರಿದ ಸಾಲುಗಳು ಅಲ್ಲಿ ಹುಟ್ಟಿಕೊಂಡಿದ್ದವು. ಕಾರಣವಿಷ್ಟೇ. ಮಕ್ಕಳಿಗೆ ಬೌದ್ಧಿಕತೆ ಪ್ರದರ್ಶಿಸುವ ಇಚ್ಛೆಯಿರಲಿಲ್ಲ, ಯಾವುದೇ ಇಸಂಗಳಿಂದ ಪೂರ್ವಪೀಡಿತರಾಗಿರಲಿಲ್ಲ, ಮನಸಿನಲ್ಲಿ ಇದ್ದದ್ದನ್ನು ಇದ್ದ ಹಾಗೆ ಹೇಳಿ ಅವರು ಮುಗ್ಧತೆಗೆ ಇರುವ ಸೌಂದರ್ಯವನ್ನು ತೋರಿದ್ದರು. ಅಲ್ಲಲ್ಲಿ ಭಾಷಿಕ ತಪ್ಪುಗಳು, ಅಭಿವ್ಯಕ್ತಿಸುವ ಕ್ರಮ ಸ್ವಲ್ಪ ಹಿಂದು-ಮುಂದಾಗಿತ್ತಷ್ಟೆ. ನಂತರ ನಾವು ನಮ್ಮ ವಿಚಾರಗಳನ್ನು ಅವರ ಮೇಲೆ ಹೇರದೆ, ಕೇವಲ ಅವರು ಸಾಗಬೇಕಾದ ಕ್ರಮವನ್ನು ಮಾತ್ರ ತೋರಿದೆವು. ಕಾರ್ಯಾಗಾರವನ್ನು ಅದರ ಮೂಲ ಆಶಯದಂತೆಯೇಮಗು ಕೇಂದ್ರಿತ(child centered)ವಾಗಿಸಿ ನಾವು ಕೇವಲ ಫೆಲಿಸಿಟೆಟರ್ ಆಗುವ ನಿಟ್ಟಿನಲ್ಲಿ ನಮ್ಮ ಹೆಜ್ಜೆಗಳನ್ನು ಇರಿಸಿದೆವು. ಖಲೀಲ್ ಗಿಬ್ರಾನ್ ಹೇಳುತ್ತಾನೆ, “ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ, ಅವರು ಭವಿಷ್ಯದ ವಾರಸುದಾರರು, ನಿಮ್ಮ ಕನಸುಗಳಿಗೆ ನೆಲೆಯಾಗದೆ ತಮ್ಮದೇ ಹೊಸ ಕನಸ ಹೊತ್ತುಬಂದವರು. ಇಲ್ಲಿ ನಮಗೆ ಎಚ್ಚರಿಕೆಯೊಂದನ್ನು ಆತ ರವಾನಿಸುತ್ತಿದ್ದಾನೆ. ಅವರನ್ನು ಭವಿಷ್ಯದರ್ಶಿಗಳಾಗಿಸಿ, ಭೂತಕಾಲದಿಂದ ಬಿಡಿಸಿ, ವರ್ತಮಾನದಲ್ಲಿ ಬದುಕಲು ಬಿಡಿ ಎಂದು. ನಾವು ಅಷ್ಟನ್ನೇ ಮಾಡಿದೆವು. ಕಾರ್ಯಾಗಾರ ಮುಗಿಯುಷ್ಟರಲ್ಲಿ ನಾವು ಮಕ್ಕಳಿಗೆ ಕಲಿಸಿದ್ದಕ್ಕಿಂತ ಅವರಿಂದ ಕಲಿತದ್ದೇ ಹೆಚ್ಚು. ಅವರ ತಾಧ್ಯಾತ್ಮಿಕತೆ, ಕವಿತೆಯನ್ನು ಒಲಿಸಿಕೊಳ್ಳಲು ಅವರು ತೊಡಗಿಕೊಂಡಿದ್ದ ರೀತಿ, ನಮ್ಮ ಪ್ರತಿಕ್ರಿಯೆಗೆ ಕೊಂಚವೂ ಬೇಸರಿಸಿಕೊಳ್ಳದೆ, ಸಕಾರಾತ್ಮಕವಾಗಿ ತೆಗೆದುಕೊಳ್ಳುವ ಪರಿ ಇವೆಲ್ಲವೂ ಅವರೊಳಗಿನ ನಿಷ್ಕಲ್ಮಶ ಮನಸ್ಸಿನ ಕನ್ನಡಿ ಹಿಡಿದಂತಿದ್ದವು. 
        ಹಚ್ಚು-ಕಡಿಮೆ ಕತೆ ಮತ್ತು ನಾಟಕ ವಿಭಾಗಗಳಲ್ಲಿಯೂ ಇದೇ ಸನ್ನಿವೇಶವಿತ್ತು. ಮೂರೇ ದಿನಗಳಲ್ಲಿ ತಮಗೆ ತೋಚಿದ ವಿಷಯವಸ್ತುವಿಟ್ಟುಕೊಂಡು ಕಥೆಗಳನ್ನು ಬರೆದು, ನಾಟಕವನ್ನು ಸ್ವತಃ ತಾವೇ ನಿರ್ದೇಶಿಸಿ, ಅಭಿನಯಿಸಿ ಶಿಬಿರದ ಸಮಾರೋಪ ಸಮಾರಂಭದ ಹೊತ್ತಿಗೆ ಮಕ್ಕಳು ಚಮತ್ಕಾರವನ್ನೇ ಮಾಡಿಬಿಟ್ಟಿದ್ದರು. ಆಯ್ದ ಕೆಲ ಮಕ್ಕಳು ಅಲ್ಲಿನ ಸಭಿಕರ ಮುಂದೆ ತಮ್ಮ ಕಥೆ-ಕವಿತೆಗಳನ್ನು ಓದಿದರು, ನಾಟಕ ಪ್ರದರ್ಶನವನ್ನು ಮಾಡಿದರು. ತಮ್ಮ ಪುಟ್ಟ ಕಣ್ಣುಗಳೊಳಗೆ ಅವರು ಪ್ರಪಂಚದ ಆಗಾಧತೆಯನ್ನೇ ಹೊತ್ತು ಬಂದಂತಿದ್ದರು. ‘ಜಗದ ಪ್ರತಿ ಕಣವೂ ತನ್ನೊಳಗೊಂದು ಬ್ರಹಾಂಡವನ್ನು ಹೊತ್ತಿರುತ್ತದೆಎಂಬ ಮಾತು ಸತ್ಯವೆನಿಸಿತು. ಅವರು ಪ್ರಪಂಚದ ಪ್ರತಿನಿಧಿಗಳಾಗಿ, ನಮ್ಮ ಎದೆಯೊಳಗೆ ಕಟ್ಟಿಕೊಂಡ ಸೀಮಿತತೆಯ ಗೋಡೆಗಳನ್ನು ಕೆಡವಲು ಬಂದಿದ್ದರು. “ವಿಶ್ವಮಾನವನಾಗು, ಅನಿಕೇತನನಾಗುಎಂಬ ಘೋಷವಾಕ್ಯಗಳನ್ನು ನುಡಿದ ಮಹಾಕವಿಯ ಮಾತುಗಳೆಡೆಗೆ ಅವರ ಹೆಜ್ಜೆಗಳಿತ್ತು
        ನಾನು ಒಂದೆಡೆ ಬರೆದ ನೆನಪು, “ಕವಿತೆ ಇಲ್ಲದೆ ಹೋದಲ್ಲಿ ಪಶುಗಳಾಗಿರುತ್ತಿದ್ದೆವು ನಾವು. ಅಸಭ್ಯವಾಗಿರುತ್ತಿತ್ತು ಸಮಾಜ. ಭೂಮಿ ಎನ್ನುವುದು ಮೃಗಗಳ ದೊಡ್ಡಿಯಾಗಿರುತ್ತಿತ್ತು. ಕವಿತೆ ನಮ್ಮ ಕೈ ಹಿಡಿದು ಬದುಕನ್ನು ಒಪ್ಪಗೊಳಿಸಿದೆ. ರಮಿಸಿದೆ ತಾಯಿಯಂತೆ. ಹೀಗಾಗಿ ಕವಿತೆ ಕಟ್ಟದ ಮನಸ್ಸು ಒಂದು ಸುಂದರ ಬದುಕನ್ನು ಕಟ್ಟಿಕೊಳ್ಳಲಾರದು ಎನ್ನುವುದು ಸತ್ಯ. ಕವಿತೆಯೊಂದು ಅವಶ್ಯಕ ಕ್ರಿಯೆ. ಅದು ಬಾಳಿನ ಊರ್ಜೆ. ಹೌದು, ಅದಿಲ್ಲದ ಜಗವಿಲ್ಲ, ಯುಗವೂ ಇಲ್ಲ.” ಇದು ಕವಿತೆಗಷ್ಟೇ ಅಲ್ಲದೇ ಸಾಹಿತ್ಯದ ಎಲ್ಲ ಪ್ರಕಾರಗಳಿಗೂ ಅನ್ವಯಿಸುತ್ತದೆ. ಬರುವ ಜನಾಂಗದ ಹರಿಕಾರರಾದ ಮಕ್ಕಳಿಗೆ ನಾವೇನನ್ನು ನೀಡಲು ಸಾಧ್ಯ? ಎಂದು ಪ್ರಶ್ನಿಸಿಕೊಂಡರೆ ಅನ್ನಿಸುವುದಿಷ್ಟೇ. ಅವರ ಕನಸುಗಳನ್ನು ಕಾಯೋಣ, ಅವರ ನಂಬಿಕೆಗಳನ್ನು ಉಳಿಸೋಣ, ಮನುಷ್ಯತ್ವಕ್ಕೆ ಚ್ಯುತಿ ಬರದಂತೆ ಬದುಕೋಣ, ಸಾಧ್ಯವಾದರೆ ಅವರ ಬೆರಳು ಹಿಡಿದು ಸಾಗೋಣ. ಅತೀತತೆಯನ್ನು ಬದಿಗಿಟ್ಟು ಅನಂತತೆಯೆಡೆಗೆ ಸಾಗೋಣ. ಇದು ಕವಿಯ ಆಶಯವೂ ಕೂಡ.
ಸಸಿಯ ಸೊಬಗೇ ಸೊಬಗು
ನೆರಳ ಹಸಿರೇ ಹಸಿರು
ಮರುಳು ಮತ್ತೆ ಕರುಳು
ಹುಟ್ಟಬೇಕು ಇಲ್ಲಿಯೇ ಗೋವರ್ಧನ ಬೆರಳು
ಮತ್ತೆ ಕರೆದೊಯ್ಯಬೇಕು
ಮಣ್ಣಿಗೆ, ಇದುವೇ ನಮಗೂ ನಿಮಗೂ

1 comment:

  1. ಎದುರಿದ್ದರೂ ಮುಟ್ಟಲಾರದೇ ಸ್ಪರ್ಶಿಸಲಾರದೇ ಹೋದೆ, ನಿಮ್ಮ ಕಾವ್ಯ ಪ್ರೇಮಕ್ಕೆ ನಾ ಚಿರಋಣಿ, ಅವಕಾಶ ಇದ್ದರೇ ತಿಳಿಸಿ ನಾನು ಬರುವೇ ನನ್ನ ತವರುಮನೆ ಕುಪ್ಪಳಿಗೆ, ನನ್ನ ಕನಸನ್ನು ನನಸು ಮಾಡಿಕೊಳ್ಳುವೆ, ರಾಗಂ ಮೇಷ್ಟ್ರೇ ಸಾಧ್ಯವಾದಲ್ಲಿ ನಿಮಗೆ ಕವಿತೆ, ಕಥೆ, ಕಾದಂಬರಿ, ನಾಟಕ, ಕಾವ್ಯವಾಚನ, ಇತ್ಯಾದಿಗಳ ಬಗ್ಗೆ ತಿಳಿಸಿ.... ನಾ ಹೋಗಬೇಕು.... ನನ್ನ ಮನೆ ಕುಪ್ಪಳಿಗೆ.....🙏🙏🙏 ಪೂರ್ಣ ಚಂದ್ರ ತೇಜಸ್ವಿ ರವರ ಕಾವ್ಯದ ಅಲೆಮಾರಿ ನಾನು.... ನಿಮಗೆ ನನ್ನ ಕಡೆಯಿಂದ ಹೃತ್ಪೂರ್ವಕ ಧನ್ಯವಾದಗಳು ಸರ್...

    ReplyDelete