Total Pageviews

Tuesday, November 10, 2020

ಬಹುರೂಪಿಯ ಬದುಕಿನ ಪಾಠಗಳು

 ಮನುಷ್ಯನ ಕುರಿತು ಹಿಗೊಂದು ಚಿಂತನೆ -

ಬಹಳ ಅದ್ಭುತವಾಗಿದ್ದಾನೆಮನುಷ್ಯಪ್ರತಿಯೊಬ್ಬನಲ್ಲೂ ಒಳಿತಿನ ಮಹಾಗಣಿ ಇದೆ. ಪ್ರಯತ್ನದ ಊರ್ಜೆ ಇದೆ. ಆಧ್ಯಾತ್ಮದ ಶುಭ್ರ ನೊರೆ ಇದೆ. ಇವುಗಳ ಅರಿವಿನಿಂದ ಪ್ರಪಂಚದ ಕಷ್ಟಾತೀಕಷ್ಟದ ಸಮಸ್ಯಗಳನ್ನೆದುರಿಸುವ ಕ್ಷಮತೆಯನ್ನು ಆತ ಸಾಧಿಸಿದ್ದಾನೆ. ಆದರೆ ಮನುಷ್ಯ ಗಮನಿಸಲೇಬೇಕಾದ ಸಂಗತಿಯೊಂದು ಇಲ್ಲಿದೆ ಎಂದು ನನಗನ್ನಿಸಿದೆ. ಆತನಿಗೆ ತನ್ನ ತಪ್ಪುಗಳ ಅರಿವಿರಬೇಕು ಮತ್ತು ಅವುಗಳ ಕುರಿತು ನಿರ್ಮೋಹಿಯಾಗಬೇಕು. ಬಹುತೇಕ ನಾನು ದಾರಿಯಲ್ಲಿದ್ದೇನೆ.” ಹೀಗೆ ಹೇಳಿದವನು ಹದಿನೆಂಟನೇ ಶತಮಾನದ ಯೂರೋಪಿನ ರಮ್ಯ ಕಾವ್ಯದ ಮಹತ್ವದ ಕವಿ ಜಾನ್ ಕೀಟ್ಸ್. ಚಿಂತನೆಯ ಹಿನ್ನೆಲೆಯಲ್ಲಿ ನಾನು ಲೇಖಕ ಮಿತ್ರ ರವೀಂದ್ರನಾಥ ಸಿರಿವರ ಅವರತೋಚಿದ್ದು-ಗೀಚಿದ್ದುಕೃತಿಯನ್ನು ಹಾಗೂ ಅವರ ಒಟ್ಟು ಪ್ರಯೋಗಶೀಲತೆಯನ್ನು ಓದುವ ಪ್ರಯತ್ನವನ್ನು ಮಾಡಿದ್ದೇನೆ.

ಸುಮಾರು ಅರ್ಧ ದಶಕದ ಹಿಂದಿನ ಮಾತು, ಅನಿರೀಕ್ಷಿತವಾಗಿ ಬೆಂಗಳೂರಿಗನಾದ ನನಗೆ ಅಪರೂಪದವರಂತೆ ಸಿಕ್ಕವರು ಗೆಳೆಯ ರವೀಂದ್ರನಾಥ ಸಿರಿವರ. ಆದರೆ ಅವರು ಅಪರಿಚಿತರಾಗಿ ಉಳಿಯಲಿಲ್ಲ. ಯಾರನ್ನೂ ಸೆಳೆಯುವ ಚುಂಬಕ ಶಕ್ತಿ ಅವರ ವ್ಯಕ್ತಿತ್ವದಲ್ಲಿದೆ. ಅದು ಮನುಷ್ಯಪರ ಕಾಳಜಿಗಳಿಂದಾಗಿ ಅವರಿಗೆ ದಕ್ಕಿದೆ. ಮನುಷ್ಯನನ್ನು ಮಹಾಗಣಿಯಾಗಿ ಕಾಣದವನು ಮನುಷ್ಯರನ್ನು ಸೆಳೆಯಲು ಸಾಧ್ಯವಿಲ್ಲ.

ಬದುಕಿನ ಎಂಥ ಸಂದರ್ಭದಲ್ಲಿಯೂ ಕಾರ್ಡ್ ಕೊಟ್ಟು ಯಾರನ್ನೂ ಭೇಟಿಯಾದ ಅನುಭವಗಳಿಲ್ಲ ನನಗೆ. ನಿಮಗೆಲ್ಲ ಗೊತ್ತಿರುವಂತೆ ಪುಸ್ತಕಗಳೆ ಪ್ರಪಂಚಕ್ಕೆ ನಾನು ಸಾಧಿಸಿಕೊಂಡ ಸಂಪರ್ಕ ಸೇತುವೆಗಳಾದುದರಿಂದ, ಸನ್ಮಿತ್ರ ಸಿರಿವರ ಕೂಡ ನನ್ನ ಹತ್ತಿರವಾದುದು ಪುಸ್ತಕ ಕಾರಣಕ್ಕಾಗಿಯೆ. ಆರಂಭದಲ್ಲಿ ಅವರು ಪ್ರಕಾಶಕರು, ನಾನೊಬ್ಬ ಲೇಖಕ. ಆದರೆ ಈಗ ಹಾಗಲ್ಲ, ನಾನು ಅವರ ಅಳಿಯ-ಗೆಳೆಯ, ಅವರು ನನ್ನ ಏಕವಚನದ ಮಾವ. ಒಟ್ಟಾರೆ ನಾವೀಗ ಕುಲವಿಲ್ಲದ ಕುಲಸ್ಥರ ಕಾವ್ಯ ಕರುಳ ಬಳ್ಳಿಗಳು. ಇದೆಲ್ಲದಕ್ಕೆ ಕಾರಣವಿಷ್ಟೆ, ಕನ್ನಡ-ಕರ್ನಾಟಕವೆಂಬ ಜಗದ ಸಂಕಟದೊಳಗೆ ಸಕ್ಕರೆಯ ಬೊಂಬೆಯಾಗಿ ಸೇರಿಹೋದ ರವೀಂದ್ರನಾಥ ಸಿರಿವರ ಬರೀ ಓರ್ವ ಪ್ರಕಾಶಕರಷ್ಟೇ ಅಲ್ಲ, ಅದರಾಚೆ, ಅದರೀಚೆ, ವೈವಿದ್ಯಮಯ ಜೀವನ ಅನುಭವಗಳ, ಸಂಘರ್ಷ-ಸಮಾವೇಶಗಳ, ಹೋರಾಟ-ಸಮಾವಿಷ್ಠಗಳ, ಸಿನಿಮಾ-ಸಂಸ್ಕøತಿ, ಸಮಾಜ-ಪ್ರಕೃತಿ ಹೀಗೆ- ಹಲವು ಮುಖಿ ಅಭಿವ್ಯಕ್ತಿ ಸಾಧ್ಯತೆಗಳನ್ನು ಸಾಧಿಸಿ ತೋರಿಸಿದ ಸಭ್ಯಸ್ಥ-ಸದಾಶಯಗಳ ಮನುಷ್ಯ.

ಅಡಿಸನ್ ಇಂಗ್ಲೀಷ ಗದ್ಯಸಾಹಿತ್ಯದ ದಿಗ್ಗಜರಲ್ಲಿ ಒಬ್ಬ. ಒಮ್ಮೆ ವಿಮರ್ಶಕರೊಬ್ಬರುಅದ್ಯಾವ ಮಹಾ ಸಾಧನೆಗಾಗಿ ಸಾರಸ್ವತ ಪ್ರಪಂಚ ನಿನ್ನನ್ನು ಸ್ಮರಿಸಿಕೊಳ್ಳಬೇಕು?’ ಎಂದು ಮೂದಲಿಸಿದರು. ತಾಳ್ಮೆಗೆಡದ ಅಡಿಸನ್ ಅಷ್ಟೇ ಪ್ರಸನ್ನ ಚಿತ್ತನಾಗಿ ಹೇಳಿದ, ‘ಖಂಡಿತ ಗೆಳೆಯರೆ, ನಿಮ್ಮ ಪ್ರಶ್ನೆ ಯೋಗ್ಯವಾದುದೆ. ನನಗೆ ಸಾಕ್ರೆಟಿಸ್ನಂತೆ ಸ್ವರ್ಗದಲ್ಲಿದ್ದ ಫಿಲಾಸಾಫಿಯನ್ನು ಜನಸಾಮಾನ್ಯರ ಬಳಿ ತರುವುದಾಗಿಲ್ಲ. ಆದರೆ ಗ್ರಂಥಾಲಯ, ಶಾಲೆ-ಕಾಲೇಜು ಹಾಗೂ ಶ್ರೀಮಂತ, ಸುಖಿ ಪಂಡಿತರ ಸೊತ್ತಾಗಿದ್ದ ಜ್ಞಾನವನ್ನು ಸಾಮಾನ್ಯರು ಸೇರುವ ಟೀ-ಟೇಬಲ್, ಕಾಫಿ ಹೌಸ್ ಹಾಗೂ ನಾಲ್ಕು ಜನ ಗೆಳೆಯರು ಸೇರುವಲೆಲ್ಲ ತರಲು ಸಾಧ್ಯವಾಗಿದೆ. ಮಹಿಳೆಯರು ಬೀಸಣಿಗೆ ಬಳಸುವ ರೀತಿಯಿಂದ ಹಿಡಿದು, ರಾಜಕೀಯ ಭಿನ್ನಾಭಿಪ್ರಾಯಗಳವರೆಗೆ ನನಗೆ ತೋಚಿದ್ದೆಲ್ಲವನ್ನೂ ಗೀಚಿದ್ದೇನೆ. ನಾನು ಕಾರಣ ನಿಮ್ಮ ಪ್ರೀತಿ-ಅಭಿಮಾನಗಳಿಗೆ ಭಾಜನನಾಗಬೇಕು.’

ಮೇಲಿನ ಅಡಿಸನ್ ವಾದಕ್ಕೊಂದು ಕನ್ನಡದ ಸಾಕ್ಷಿಯಂತಿದೆ ಗೆಳೆಯ ರವೀಂದ್ರನಾಥ ಸಿರಿವರರ ಬದುಕು ಮತ್ತು ಪ್ರಸ್ತುತ ಕೃತಿ. ಅಡಿಸನ್ ಮಾಡಿದ ಎಲ್ಲ ಪುಣ್ಯದ ಕಾರ್ಯವನ್ನು ಸಿರಿವರ ಕನ್ನಡ ಸಾಹಿತ್ಯ ಲೋಕದಲ್ಲಿ ಮಾಡಿದ್ದಾರೆ. ಕಾರಣ ಸ್ವಘೋಷಿತ ಮಾಹಾನ್ ಲೇಖಕರಿಗೆ ಸಿರಿವರ ಅಪ್ರಿಯರಾಗಿರಲೂ ಸಾಧ್ಯವಿದೆ. ಆದರೆ, ಇವರದು ಪ್ರಯೋಗಶೀಲ ಬದುಕು. ಪ್ರಯೋಗದ ದಾರಿಯಲ್ಲಿ ಅವರಿಗೆ ಗೆಲುವಿನ ಹಠವಿಲ್ಲ, ಸೋಲಿನ ಭಯವಿಲ್ಲ. ವಿಚಿತ್ರ ನಿರಾಳತೆ ಇವರದು. ಅನುಭವ ಯಾವುದಾದರೇನು? ಅದು ಆಸ್ತಿಯೆ. ಅದುವೇ ನಿಜವಾದ ಸಂಪಾದನೆ ಎಂದುಕೊಂಡ ಕಾರಣ ಸಿರಿವರ ನಮ್ಮ ಪಾಲಿಗೆ ಬೆಟ್ಟದ ನೆಲ್ಲಿಕಾಯಿಯೂ ಆಗಲಿಲ್ಲ, ಕಡಲನ್ನೇ ಕುಡಿದ ಅಗಸ್ತರೂ ಆಗಲಿಲ್ಲ. ಬದಲಾಗಿ ಬದುಕಿನ ಪ್ರಯೋಗಾತ್ಮಕತೆಗೆ ಒಂದು ಸರಳ-ಸಾಮಾನ್ಯ ಉದಾಹರಣೆಯಾದರು. ಇದೇ ಕಾರಣ, ಅವರು ನಮ್ಮವರಾದರುLet us, instead of writing finely, try to write naturally ಎಂಬ ಮಾತಿದೆ. ಹೀಗೆಯೇ ರವಿಂದ್ರನಾಥ ಸಿರಿವರ ಸುಂದರವಾಗಿ ಬರೆದರೊ, ಶ್ರೀಮಂತವಾಗಿ ಬದುಕಿದರೊ ಪ್ರಶ್ನೆ ಅದಲ್ಲ, ಆದರೆ, ಸಹಜವಾಗಿ ಬರೆದರು, ಸರಳವಾಗಿ ಬದುಕಿದರು, ತಮಗೆ ಸಿಕ್ಕ ಕನ್ನಡವೆಂಬ ದೈವ ಭಾಗ್ಯವನ್ನು ನನ್ನಂಥವರಿಗೂ ಹಂಚಿ ಸಂಭ್ರಮಿಸಿದರು. ಇದಕ್ಕೆ ಆಕ್ಷೇಪಣೆಗಳಿಲ್ಲ.

ಬರಹ ಎನ್ನುವುದು ಬರೀ ಲೇಖನಿ ಹಾಗೂ ಪೇಪರ್ಗಳಿಗೆ ಮಾತ್ರ ಸೀಮಿತವಾದ ಪ್ರಕ್ರಿಯೆಯಲ್ಲ ಎನ್ನುವುದು ಚೆನ್ನಾಗಿ ಅರಿವಿದ್ದ ಕಾರಣ, ಸಿರಿವರರಿಗೇ ಮಾತ್ರ ನಮ್ಮ ಮಹಾನ್ ಬರಹಗಾರರಿಗೆ ದಕ್ಕದ ಹಲವು ರೀತಿಯ ಅಭಿವ್ಯಕ್ತಿಯ ಸಾಧ್ಯತೆಗಳು ಇವರಿಗೆ ದಕ್ಕಿವೆ. ಇವರು ಸಿನಿಮಾ, ಪತ್ರಿಕೋದ್ಯಮ, ರಂಗನಿರ್ದೇಶನ, ಜನಾಂದೋಲನ, ಶೈಕ್ಷಣಿಕ ಜಾಥಾ, ಸಾಹಿತ್ಯ ಹಾಗೂ ಸಾಂಸ್ಕøತಿಕ ಶಿಬಿರ, ಸಭೆ-ಸಮಾವೇಶಗಳ ಮೂಲಕ ಮಾಡಿದ್ದು ಕೂಡಾ ಬರಹವನ್ನೆ, ಮಾಧ್ಯಮಗಳು ಮಾತ್ರ ಭಿನ್ನ. ವಿಚಾರಗಳ ಪ್ರಸಾರ ಹಾಗೂ ದಾಖಲಾತಿಗೆ ಯಾವುದು, ಯಾವಾಗ ಯುಕ್ತವಾಗಿ ಕಂಡಿತೊ ಅದನ್ನೆಲ್ಲ ಅವರು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಅಷ್ಟೇ ಮಹತ್ವದ ದಾಖಲೆಗಳನ್ನೂ ಅವರು ಅವುಗಳಲ್ಲಿ ಮಾಡಿದ್ದಾರೆ.

ಮೇಲಿನ ಮಾತುಗಳನ್ನು ಸಿರಿವರರಂಥವರನ್ನು ಕುರಿತು ಮಾತ್ರ ಹೇಳಲು ಸಾಧ್ಯ. ನಿಂತ ನೀರಾಗದೆ ಪ್ರವಾಹದೊಂದಿಗೆ ಈಜಿ ಫಲಿತಾಂಶದೊಂದಿಗೆ ಹೊರ ಬರುವ ಛಾತಿ ಎಲ್ಲರಿಗೂ ಇರುವುದಿಲ್ಲ. ಅದು ಕೆಲವರಿಗೆ ಮಾತ್ರ ದಕ್ಕುವ ನವನೀತ. ಹೀಗೆ ದಕ್ಕಿಸಿಕೊಂಡವರು ಸಿರಿವರ. ವೈಚಾರಿಕತೆಯ ಎಡ-ಬಲಗಳೆರಡನ್ನೂ ಗೌರವಿಸುತ್ತ, ಬುದ್ಧನ ಮಧ್ಯದ ದಾರಿಯಲ್ಲಿ ಸಾರಸ್ವತ ಸಾತ್ವಿಕತೆಯನ್ನು ತಮ್ಮದಾಗಿಸಿಕೊಂಡ ಸಿರಿವರದ್ದು ಬಹುರೂಪಿಯಂಥ ವ್ಯಕ್ತಿತ್ವ. ನನಗೆ ಶರಣ ಬಹುರೂಪಿ ಚೌಡಯ್ಯನನ್ನು ನೋಡುವ ಭಾಗ್ಯ ಸಿಗಲಿಲ್ಲ. ಸಿರಿವರರನ್ನು ನೋಡಿದ ಮೇಲೆ ಅವನನ್ನು ನೋಡಲಿಲ್ಲವಲ್ಲ ಎಂಬ ಖೇದ ಉಳಿದುಕೊಂಡಿಲ್ಲ.

ಬದುಕಿನ ಬೀದಿ ಬೆಳಕನ್ನು ಬಾಚಿಕೊಂಡು, ಅದರ ಉರಿ-ಸಂಕಟ-ನೋವು-ತಳಮಳ-ಅಪಮಾನಗಳನ್ನುಂಡು ಅವರು ಬರೆದ ಕೃತಿಯಲ್ಲಿ ಬರೀ ರೋಚಕ-ರೋಮಾಂಚನೆಗಳಿಲ್ಲ, ಬದಲಾಗಿ ಬಾಳಿನ ಸಮರ್ಥ ಪಾಠಗಳೂ ಇವೆ. ಇವು ಬರೀ ಪದ ಹೊಸೆದ ಘಟನೆಗಳಲ್ಲ, ಅನುಭವದ ಪುಟಗಳು.

ಪ್ರಸ್ತುತ ಲೇಖನಗಳ ಗೊನೆತೊಚಿದ್ದು-ಗೀಚಿದ್ದುರವೀಂದ್ರನಾಥ ಸಿರಿವರರ ಬಹುಮುಖಿ ಆಯಾಮದ ಬದುಕಿನ ಅನುಭವಗಳ ಸಂಗ್ರಹ. ಇದು ಬರೀ ಕಂಡು ಕೇಳಿದ ಅನುಭವಗಳನ್ನು ಆಧರಿಸಿದ್ದಲ್ಲ. ನೇರವಾಗಿ ಎದೆಗೆ ಬಿದ್ದದ್ದು, ಮನಕ್ಕೆ ನಾಟಿದ್ದು. ಕಣ್ಣೀರಾದದ್ದು.

ಸಂಕಲನ ಸಣ್ಣದು. ಆದರೆ, ಒಂದೊಂದು ಘಟನೆಗೂ ಒಂದೊಂದು ಕೃತಿ ಅಥವಾ ಸಿನಿಮಾ ಆಗುವ ಸಾಮಥ್ರ್ಯ ಇರುವುದನ್ನು ಅಲ್ಲಗಳೆಯುವಂತಿಲ್ಲ. ಇಡೀ ಸಂಕಲನವನ್ನು ಜೀವನ ಪ್ರೀತಿಯಿಂದ ಓದಬೇಕು ನೀವು. ಇದು ಓದಬೇಕಾದ ಕೃತಿ. ನನ್ನ ನಿಮ್ಮ ವಿನಾಕಾರಣವಾಗಿ ಸುತ್ತಿದ, ಬದುಕಿನ ಭರವಸೆಯನ್ನೆ ಕಳೆದುಕೊಳ್ಳುವಂತೆ ನಮ್ಮನ್ನು ಕಾಡಿದ, ಏನೆಲ್ಲ ಸಂಗತಿಗಳಿವೆ ಕೃತಿಯಲ್ಲಿ. ಪ್ರತಿ ಸಂಗತಿಯಲ್ಲಿಯೂ ನಾನು ನನ್ನ ವಿವಶತೆಯ ಹಾಡು ಕೇಳಿದ್ದೇನೆ. ಪ್ರತಿರೋಧದ ಅಸ್ತ್ರಗಳಿಲ್ಲದೆ ಮೌನಕ್ಕೆ ಜಾರಿದ್ದೇನೆ, ಕಾಲಕ್ಕೆ ಕಾಯ್ದಿದ್ದೇನೆ. ಹೀಗೆ ಕಾಯ್ದವರು ಸಿರಿವರ.

ಇಲ್ಲಿಯ ಕೆಲವು ಸಂಗತಿಗಳನ್ನು ನೋಡಿ - ನಡುರಾತ್ರಿ ಹುಟ್ಟಿದ ಹುತ್ತ ಒಂದು ಮಸೀದೆಯ ಮುಂದೆ ಗುಡಿಯಾಗಿ ನಿಂತು ಕಾಡಿದ ಘಟನೆಯಾಗಿರಬಹುದು, ಅಜ್ಜಿಯ ಸಮಾಧಿಯ ಮೇಲೆ ಹುಟ್ಟಿ ಭವಿಷ್ಯದ ತಲೆಮಾರುಗಳಿಗೆ ಮಾಗಿದ ಮಾವಿನ ಹಣ್ಣಾಗಿ ದಕ್ಕುವ ಕಥೆಯಾಗಿರಬಹುದು, ಮುಗ್ಧನಾದ ತಮ್ಮ ಪೊಲೀಸರ ಕೈವಶವಾಗಿ ಪಟ್ಟ ಪಡಿಪಾಟಲಾಗಿರಬಹುದು, ಅಮಾಯಕನಾದ ಮಗನ ಗೆಳೆಯನೊಬ್ಬ ರೌಡಿಗಳ ಕೈಗೆ ಸಿಕ್ಕು ಅನುಭವಿಸುವ ಯಾತನೆಯಾಗಿರಬಹುದು - ಇವುಗಳೆಲ್ಲ ಕಾಲಾಂತರದಲ್ಲಿ ಈಗ ಓದಿ ಬದಿಗಿಡಬಹುದಾದ ಕಥೆಗಳೆನೋ ಸತ್ಯ. ಆದರೆ, ಮರೆತುಬಿಡಬಹುದಾದ ಸಂಗತಿಗಳಲ್ಲ. ಇವು ಬದುಕಲು ಬೇಕಾದ ಬದುಕಿನ ತಿಳುವಳಿಕೆಯ ಹಣತೆಗಳು. ಮರೆಯಲಾಗದ ಪಾಠಗಳು.

ಭಾರತೀಯ ಸಾಹಿತ್ಯದಲ್ಲಿ ಪ್ರಗತಿಶೀಲ ಬರಹಗಾರರನ್ನು ಮರೆಯುವಂತಿಲ್ಲ. ಮುಲ್ಕರಾಜ್ ಆನಂದರಿಂದ ಮೊದಲುಗೊಂಡು ಕೆ..ಅಬ್ಬಾಸ್, ಬಲರಾಜ ಸಹಾನಿ, .ಕೆ.ಹಾನಗಲ್, ಖುಷ್ವಂತಸಿಂಗ್ ಎಲ್ಲರೂ ಘಟಾನುಘಟಿಗಳೆ. ಅವರು ಜನಸಾಮಾನ್ಯರಿಂದ ಸಿದ್ಧಗೊಂಡ ಲೇಖಕರು. ಹೀಗಾಗಿ, ಶ್ರೀ ಸಾಮಾನ್ಯನ ಆಶಯಗಳನ್ನು ಕುರಿತೇ ಅವರು ಬರೆದರು. ಗೆಳೆಯ ರವೀಂದ್ರನಾಥ ಸಿರಿವರ ಇದೇ ಗರಡಿಯಲ್ಲಿ ಪಳಗಿದವರು. ಹೀಗಾಗಿ ಶ್ರೀ ಸಾಮಾನ್ಯನೇ ಕೃತಿಯ ಕೇಂದ್ರ ಹಾಗೂ ಗುರಿ.

ಇಲ್ಲೊಂದು ನೆನಪು. ಖ್ಯಾತ ಪತ್ರಕರ್ತ ಕೆ..ಅಬ್ಬಾಸ್ ಒಮ್ಮೆ ತಮ್ಮ ನಲವತ್ತೇಳು ವರ್ಷಗಳ ಅಂಕಣಗಳ ಸಂಕಲನಕ್ಕೆ ಏನೆಂದು ಶೀರ್ಷಿಕೆ ಇಡಬೇಕು? ಎಂದು ಒದ್ದಾಡಿದರು. ಕೊನೆಗೆ I write As I feel ಎಂದು ಹೆಸರಿಟ್ಟರು. ಮಹಾಕವಿ ಶೇಕ್ಸಪೀಯರ್ ನಾಟಕವೊಂದನ್ನು ಬರೆದು ಮುಗಿಸಿದ. ಶೀರ್ಷಿಕೆ ಹೊಳೆಯಲಿಲ್ಲ. ಕಾರಣ ತನ್ನ ಪ್ರೇಕ್ಷಕ ಪ್ರಭುಗಳ ಮುಂದಿಟ್ಟು ‘As You Like it’

 ಎಂದ. ಪ್ರಸ್ತುತ ಲೇಖನಗಳ ಸಂಗ್ರಹವೂ ಅಷ್ಟೆ, ರವೀಂದ್ರನಾಥ ಸಿರಿವರರು ಇದಕ್ಕೆತೋಚಿದ್ದು-ಗೀಚಿದ್ದುಎಂದು ಹೆಸರಿಸಿದ್ದಾರೆ. ಹಾಗೆ ನೋಡಿದರೆ ಒಂದು ನೆಲೆಯಲ್ಲಿ ಬರಹ ಎಂದರೆ ಇದೆ, ಅಲ್ವೆ?

ನನ್ನ ಪ್ರಕಾರ, ವ್ಯಕ್ತಿ ಕುತೂಹಲವೆ ಸಮಷ್ಠಿ ಕುತೂಹಲದ ಮೂಲ. ಕಳೆದ ಆರು ವರ್ಷಗಳಿಂದ ಲೇಖಕ ಸಿರಿವರರನ್ನು ಇಂಥ ಹಲವು ಕುತೂಹಲಗಳ ಬೆನ್ನೆರಿ ನಾನು ಗಮನಿಸುತ್ತ ಬಂದಿದ್ದೇನೆ. ಅವರನ್ನು ಸಮಕಾಲೀನ ಅದೆಷ್ಟೋ ಅನನ್ಯ ಪ್ರತಿಭೆಗಳ ಮೂಲಕ ಓದಿದ್ದೇನೆ. ಉದಾಹರಣೆಗಾಗಿ - ಹಂಸಲೇಖ, ವಿ. ಸೋಮಶೇಖರ, ನಾಗತಿಹಳ್ಳಿ ಚಂದ್ರಶೇಖರ, ಎಸ್.ಜಿ. ಸಿದ್ದರಾಮಯ್ಯ, ರಾಜೇಂದ್ರಸಿಂಗ್ ಬಾಬು, ವಸುಂಧರಾ ಭೂಪತಿ, ಡಿ.ಎಸ್. ಚೌಗಲೆ, ಕೆ. ಮರುಳಸಿದ್ದಪ್ಪ, ಜಯಮಾಲಾ, ಭಾರತಿ ವಿಷ್ಣುವರ್ಧನ್ - ಹೀಗೆ ಸಾಹಿತ್ಯ-ಸಿನಿಮಾ-ನಾಟಕ ಮತ್ತು ಜನಪರ ಹೋರಾಟಗಳಿಂದ ಬಂದ ಅನೇಕ ಮಹತ್ವದ ಪ್ರತಿಭೆಗಳ ಮೂಲಕ ನಾನು ಸಿರಿವರರನ್ನು ಓದಿದ್ದೇನೆ. ಎಲ್ಲರೂ ಅವರಲ್ಲಿ ಕಂಡ ಮಹತ್ವದ ಗುಣ ಜೀವನ ಶ್ರದ್ಧೆ. ಹಿರಿಮೆ-ಗರಿಮೆಗಳ ವಾಂಛೆ ಇಲ್ಲದೆ ಸರಳವಾಗಿ ಬೆರೆತು ಹೋಗುವ ಸಿರಿವರ, ಬದುಕನ್ನು ಅದರ ಸಮಗ್ರತೆಯೊಂದಿಗೆ ಅತ್ಯಂತ ಗೌರವದಿಂದ ಕಂಡವರು. ಹೀಗಾಗಿ ಗೌರವಾನ್ವಿತರೆಲ್ಲ ಅವರಿಗೆ ದಕ್ಕಿದ್ದಾರೆ. ಪ್ರಸ್ತುತ ಸಂಕಲನದಲ್ಲಿಯೂ ಬದುಕನ್ನು ಗೌರವಿಸಬೇಕಾದ ಮತ್ತು ಸರಿಯಾದುದನ್ನು ಗುರುತಿಸಬೇಕಾದ, ಎಷ್ಟೊಂದು ಜವಾಬ್ದಾರಿಗಳು ಬರಹಗಾರನ ಮೇಲಿವೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.

ಇದು ಕೃತಿಯ ಮೂಲಕ ಸಿರಿವರ ನೀಡುವ ಮಹತ್ವದ ಸಂದೇಶವೂ ಕೂಡ. 

ಅಕ್ಷರಗಳಿಂದ ಅನ್ನ ಗಳಿಸುವುದು ಅಂದುಕೊಂಡಷ್ಟು ಸರಳವಲ್ಲ. ಇದರ ಸಂಕಟ ಬಲ್ಲವನು ನಾನು. ಹೀಗಾಗಿ ನನ್ನಂತೆಯೆ ಸಂಕಟ ಪಟ್ಟ ಸನ್ಮಿತ್ರನನ್ನು ನಾನು ಸಂಭ್ರಮಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ.

 

3 comments:

  1. ಮನುಷ್ಯರನ್ನು ಮಹಾಗಣಿಯಾಗಿ ಕಾಣದವನು ಮನುಷ್ಯರನ್ನು ಸೆಳೆಯಲು ಸಾದ್ಯವಿಲ್ಲ ನಿಜಕ್ಕೂ ಬಹು ತೂಕದ ಮಾತು ಸರ್. ನಿಜ ವ್ಯಕ್ತಿ ಮತ್ತು ಪ್ರೀತಿ ಮನುಷ್ಯನ ಹೊರ ಮತ್ತು ಒಳ ಗಳಾಗಿರಬೇಕು. ವ್ಯಕ್ತಿಯ ಹೊರದೇಹಸೌಂದರ್ಯ ಅಂತರಂಗದ ಪ್ರೇಮದ ಹೃದಯ ಸೌಂದರ್ಯ ಇವೆರಡನ್ನು ಘನವಾಗಿ ಕಾಣುವ ದೊಡ್ಡತನ ನಮ್ಮನ್ನು ಬಹಳಷ್ಟು ಎತ್ತರಕ್ಕೆ ಒಯ್ಯುತ್ತದೆ. ನಿಮ್ಮ ಅಳಿಯ ಗೆಳೆಯನ ತೋಚಿದ್ದು ಗೀಚಿದ್ದು ಲೆಖನ ಮಾಲೆ ನಿಮ್ಮ ಸಾಲುಗಳ ಜೊತೆ ಸೇರಿ ತೂಕವನ್ನ ಹೆಚ್ಚಿಸಿಕೊಂಡಿವೆ. ಇದಕ್ಕೂ ಕಾರಣ ಮನುಷ್ಯನನ್ನು ಮಹಾಗಣಿಯಂತೆ ಕಾಣುವ ನಿಮ್ಮ ಹೃದಯ. ಜ್ಞಾನ ಗಳಿಸುವದು ಒಂದು ದಾರಿಯಾದರೆ ಹಂಚುವುದು ಹೆದ್ದಾರಿಯಾಗಬೇಕು ಜೊತೆ ಬರುವ ಪಯಣಿಗರೆಲ್ಲರಿಗೂ ಅದು ಉನ್ನತವಾದ ಗುರಿ ಸಾಧಿಸುವ ಮಾರ್ಗ ವಾಗಿರಬೇಕು . ಸಾಮಾನ್ಯರ ಬದುಕನ್ನು ಸಾಮಾನ್ಯರೆಲ್ಲ ಅರಿಯುವಂತಾಗುವ ಬರಹ ಎಲ್ಲ ಸಾಮಾನ್ಯರಿಗೂ ದಕ್ಕಿದರೆ ಅದಕ್ಕಿಂತ ದೊಡ್ಡ ಸಾರ್ಥಕತೆ ಮತ್ತೊಂದಿಲ್ಲ. ಸಾಕ್ರಟಿಸ್ ನ ದೇವಲೋಕದ ರಾಜ್ಯದ ಕಲ್ಪನೆಗಿಂತ ಆ್ಯಡಿಸನ್ ನಿಂದ ಹಿಡಿದು ಮುಲ್ಕರಾಜರಂಥಹ ಸಾಮಾನ್ಯರ ಬದುಕನ್ನು ಪ್ರೀತಿಸಿ ಸುಖಿಸಿ ಆನಂದಿಸಿ ಬರೆಯುವವರ ಬದುಕಿನ ಬರಹಗಳು ಬಹಳ ದೊಡ್ಡ ಮೌಲ್ಯವನು ನಮ್ಮೆದೆಯೊಳಗೆ ಬಿತ್ತುತ್ತವೆ ಖಂಡಿತ . ಬರಹ ಘನವಾಗಿರುವದಕ್ಕಿಂತ ಓದುಗನ ಹೃದಯದಲ್ಲೊಂದು ಸಣ್ಣ ಪರಿವರ್ತನೆಯ ಚಿಂತನೆಯನ್ನು ಸ್ಪುರಿಸುವ ಸ್ವಲ್ಪ ಸಾಲುಗಳಷ್ಟಿದ್ದರೂ ಸಾಕು ಬರಹ ಕಾಲಾತೀತವಾಗಿ ಗೆಲ್ಲುತ್ತಲೇ ಇರುತ್ತದೆ. ಮುನ್ನುಡಿಯ ಸಾಲುಗಳು ಪುಸ್ತಕದ ಸೌಂದರ್ಯಕ್ಕೆ ಇನ್ನಷ್ಟು ತೂಕವನ್ನು ಒದಗಿಸಿದೆ ಶುಭವಾಗಲಿ ಸರ್ ಅಳಿಯ ಮೆರೆಯಲಿ ಮಾವನ ಪ್ರೀತಿಯಿಂದ ಹೃದಯಪೂರ್ವಕ ಶುಭಾಶಯಗಳು ಇಬ್ಬರಿಗೂ.

    ಇಂತಿ
    ಶ್ರೇಯಾಂಶ ಜ ಕೋಲ್ಹಾರ

    ReplyDelete
  2. ಬರಹ ಬದುಕಿನ ಬಗೆಗೆ ಕುತೂಹಲ ತಂತಾನೆ ಹುಟ್ಟುತ್ತದೆ...

    ReplyDelete
  3. ಸರ್, ನಿಜವಾಗಿಯೂ ಇದೊಂದು ಅದ್ಭುತವಾದ ಬರವಣಿಗೆಯಾಗಿದೆ ಸರ್.

    ReplyDelete