Total Pageviews

Thursday, November 26, 2020

ಮಲ್ಲಿಗೆಯ ಮೈಯಲ್ಲಿ ವಿದ್ರೋಹದ ಬೆಂಕಿ


 ಸೆರೆಮನೆಯೆ ಸ್ವರಾಜ್ಯದ ಮೆಟ್ಟಿಲು

                               -  ರಾ.ವೆ. ಕರಗುದರಿ

ಇನ್ನೂ ನೆತ್ತರದ ಬಿಸಿ ಆರುವ ಮುಂಚಿನ ಒಂದು ನಸುಕಿನ ಜಾವ, ನಾನು ಸಮುದ್ರ ತೀರದ ಭಟ್ಕಳಕ್ಕೆ ಬಂದಿಳಿದೆ.

ನಾನು ಇಲ್ಲಿಗೆ ಬಂದಾಗ ಭಟ್ಕಳದ ಖ್ಯಾತ ವೈದ್ಯ ಡಾ. ಯು. ಚಿತ್ತರಂಜನ್ದಾಸ್ ಅವರ ಹತ್ತೆಯಾಗಿ ಕೆಲವು ವರ್ಷಗಳು ಗತಿಸಿದ್ದವು ಅಷ್ಟೆ. ಊರಲ್ಲಿ ಪ್ರಕ್ಷುಬ್ಧ ವಾತಾವರಣ, ಎಲ್ಲಿ ನೋಡಿದಲ್ಲಿ ಪೊಲೀಸರು. ಇಲ್ಲಿಯ ಜನರಿಗಿಂತ ಪೊಲೀಸ ಹಾಗೂ ಮಿಲಿಟರಿಯ ಸಂಖ್ಯೆ ಹೆಚ್ಚಾಗಿತ್ತು. ಎಲ್ಲೆಲ್ಲೂ ಸಂಶಯದ ಗಾಳಿ. ಆಗ ಅಲ್ಲಿಯ ಎಲ್ಲ ಟೆಲಿಫೋನ್ ಸೆಂಟರ್ಗಳಲ್ಲಿ ಮುಸ್ಲಿಂ ರಾಷ್ಟ್ರಗಳ ಸಂಪರ್ಕ ನಂಬರ್ಗಳೆ. ಹಾಗೆ ಊರು ಕರ್ನಾಟಕದ ಒಂದು ಪುಟ್ಟ ಪಾಕಿಸ್ತಾನವೇ ಸರಿ. ವರ್ತಮಾನದ ಕರಾಳ ವಾಸ್ತವ ನನ್ನಂಥ ಲೇಖಕನಿಂದ ದೂರವಿರಲಿಲ್ಲ. ಯಾಕೆಂದರೆ ಹತ್ಯೆಯಾದ ಡಾ. ಯು. ಚಿತ್ತರಂಜನ್ ಮಗ ನಾನು ವೃತ್ತಿ ಅರಸಿ ಹೋದ ಸಂಸ್ಥೆಯ ಸದಸ್ಯರಲ್ಲಿ ಒಬ್ಬರಾಗಿದ್ದರು.


         ಆದರೆ, ಕಡಲ ಕತೆ ಕೇಳಲು ಬಂದಿದ್ದ ನನಗೆ, ಇಲ್ಲಿಯ ಕೋಮು ಗಲಭೆ, ರಾಜಕೀಯ ಯಾವುದೂ ತಡೆಯಾಗಿರಲಿಲ್ಲ. ನನಗೆ ಅದರಲ್ಲಿ ಆಸಕ್ತಿಯೂ ಇರಲಿಲ್ಲ.

         ನಾನು ಬಹುಕಾಲ ಇರಲಿಲ್ಲ ಇಲ್ಲಿ, ಭಟ್ಕಳದಲ್ಲಿ. ಅಬ್ಬಬ್ಬಾ ಎಂದರೆ ಒಂದು ವರ್ಷಕ್ಕೂ ಮಿಕ್ಕಿದ ಒಂದಷ್ಟು ತಿಂಗಳುಗಳನ್ನು ಅಲ್ಲಿ ಕಳೆದಿರಬಹುದು. ಆದರೆ, ಅದೇಕೊ ಗೊತ್ತಿಲ್ಲ, ನನ್ನ ಅನಂತ ಕಾಲದ ಒಂದು ಪ್ರಧಾನ ಸೆಳೆತವಾಗಿ, ಎದೆಯ ಕೂಗಾಗಿ, ಕಾಡುವ ಕಡಲಾಗಿ ಉಳಿದೇ ಹೋಯಿತು ಭಟ್ಕಳ.

     ಈ ಕಾರಣವಿರಬಹುದೇನೊ ಕುಂದಾಪೂರದ ಶಿಷ್ಯ ಶರಣ್ ಮತ್ತು ಯಲ್ಲಾಪೂರದ ಶಿಷ್ಯ ಮಾರುತಿ ಗೌಡ ಇವರಿಬ್ಬರಿಗೆ ಎಂ.ಫಿಲ್ ಮಾರ್ಗದರ್ಶಿಯಾದೆ, ಶಿರಾಲಿಯ ಗಣೇಶ ಯಾಜಿಗೆ ಪಿ.ಎಚ್ಡಿಯ ಮಾರ್ಗದರ್ಶಕನಾದೆ. ಮುರ್ಡೇಶ್ವರದ ಆರ್.ಎನ್. ಶೆಟ್ಟಿ ಸಂಸ್ಥೆಯಲ್ಲಿ ಗ್ರಂಥಪಾಲಕನಾದ ಗೆಳೆಯ ತಳವಾರನ ಹದುಳ ವಿಚಾರಿಸುತ್ತಿದ್ದೆ, ಬರಡು ನಾಡಿನ ನನ್ನ ಜೋಳಿಗೆಯ (ಚಡಚಣದ ಮನೆ) ತುಂಬ ಶಿರಾಲಿಯ ತವಕ್ಕಲ್ ಕೇನ್ ಇಂಡಸ್ಟ್ರಿಯ ಬೆತ್ತದ ಆಸನಗಳನ್ನು ತುಂಬಿಸಿಬಿಟ್ಟೆ. ಶಿರಸಿಯ ತಾರಾ ಹೆಗಡೆಯವರ ಕವಿತೆಗೆ ಮುನ್ನುಡಿಕಾರನಾದೆ, ಇದೇ ನಗರದ ಹಿರಿಯ ವೈದ್ಯಸಾಹಿತಿ ಪವಾರ ಅವರ ಕೃತಿ ಬಿಡುಗಡೆ ಮಾಡಿದೆ, ಧರಣೇಂದ್ರ ಕುರುಕುರೆಯವರ ಭಾಷಾಂತರಗಳನ್ನು ಸಂಭ್ರಮಿಸಿದೆ.

      ಇದೆಲ್ಲ, ಎಲ್ಲ ಎಲ್ಲವೂ ಭಟ್ಕಳವೆಂಬ ಭಾಗ್ಯವನ್ನುಳಿಸಿಕೊಳ್ಳಲು, ಬದುಕನ್ನು ನೆನಪಿಸಿಕೊಳ್ಳಲು ನಾನು ಮಾಡಿದ ಪ್ರಯತ್ನ. ಕಾರಣ ಭಟ್ಕಳ ಈಗಲೂ ನನ್ನಲ್ಲಿ ಬತ್ತದ ಒರತೆ.

    ಎರಡು ದಶಕಗಳ ಹಿಂದೆ, ಬಿದ್ದ ಹಾಳು ಮನೆಯಂತಿದ್ದ ಭಟ್ಕಳದ ಓಣಿ ಓಣಿಗಳಲ್ಲಿ ಒಂಟಿಯಾಗಿ ಅಲೆದಾಡುತ್ತಿದ್ದರೆ, ಅಕ್ಕ ಪಕ್ಕ ಸಾವಿರ ಸಾವಿರ ಧ್ವನಿಗಳು ಪಿಸುಗುಟ್ಟಿದ ಅನುಭವವಾಗುತ್ತಿತ್ತು. ಹಿಂದೂ ವಾಸ್ತುವಿನ ಮುಸ್ಲಿಂ ವಾಸ್ತವ್ಯದ ಪುರಾತನ ಮನೆಗಳಲ್ಲಿ ದೃಷ್ಠಿ ಹರಿದಷ್ಟೂ ಆಳವಾಗಿ ನೋಡುತ್ತಿದ್ದೆ ಆಗ. ಹೀಗೆ ತಿರುಗುವಾಗಲೆಲ್ಲ, ಪ್ರಕ್ಷುಬ್ಧವಾದ ನೆಲದಲ್ಲಿ ಜನರೆಲ್ಲ ಬಲವಂತದ ಬಾಳು ಸಾಗಿಸುತ್ತಿರುವ ಗುಮಾನಿ ನನಗೆ. ಊರು ಅಥವಾ ಒಟ್ಟು ಪ್ರದೇಶ ನನ್ನೊಂದಿಗೆ ಹಂಚಿಕೊಳ್ಳಬೇಕಾದ ವೇದನೆಯೊಂದಿದೆ ಎಂಬ ಜವಾಬ್ದಾರಿಯಿಂದಲೇ ಇಲ್ಲಿ ಸುತ್ತಾಡಿದೆ. ಸತ್ತವರ ಸಾವಿಲ್ಲದ ಮಾತುಗಳಿಗೆ ಕಿವಿಯಾಗಲು ಯತ್ನಿಸಿದೆ. ಲೇಖಕನಾಗುವುದೆಂದರೆ ಇದೆ, ಅಲ್ಲವೆ?

      ಕಾಲೇಜಿನಲ್ಲಿ ಪಾಠ ಮುಗಿಸಿದರಾಯ್ತು ಭಟ್ಕಳ, ಕುಂದಾಪೂರ, ಮುರ್ಡೇಶ್ವರ, ಶಿರಾಲಿ, ಹೊನ್ನಾವರ ಕೊನೆಗೆ ಅಂಕೋಲೆಯ ಸಮೀಪದ ಅಗಸೂರಿನವರೆಗೂ ಕಡಲ ಅಬ್ಬರಕ್ಕೆ ಕಿವಿಯೊಡ್ಡಿ ಗೆಳೆಯ ವಿರೇಂದ್ರ ಶಾನಭಾಗನ ಬೈಕ್ ಹತ್ತಿ ತಿರುಗಾಡಿದ್ದೇ ತಿರುಗಾಡಿದ್ದು.

                  ಸಾಮಾನ್ಯವಾಗಿ ತಿರುಗಾಟ, ನಮ್ಮೊಳಗಿನ ಹೇಳಲಾಗದ, ಸಹಿಸಿಕೊಳ್ಳಲೂ ಆಗದ ಆಳ ಸಂಕಟದ ಬಾಹ್ಯ ಅಭಿವ್ಯಕ್ತಿಯಾಗಿರುತ್ತದೆ ಎಂದು ನಂಬಿದವ ನಾನು. ಸ್ವಲ್ಪ ಸೂರ್ಯ ತಂಗಿದರೆ ಸಾಕು, ಭಟ್ಕಳದ ಬಂದರಿಗೆ ಹೋಗಿ, ಲೈಟ್ಹೌಸ್ ಗುಡ್ಡದ ಹೊಟ್ಟೆಯೊಳಗೊ, ಇಲ್ಲ ಸಮುದ್ರ ದಂಡೆಯಲ್ಲಿದ್ದು ಸಾಯಂಕಾಲವಾಗುತ್ತಲೆ ಸಂಪೂರ್ಣ ಜಲಾವೃತಗೊಳ್ಳುತ್ತಿದ್ದ ದೂರದ ಬಂಡೆಯ ಮೇಲೊ, ಹೊತ್ತು ಮುಳುಗುತ್ತಲೆ ಮೀನು ಹಿಡಿಯಲು ಹೊರಡುತ್ತಿದ್ದ ಅಥವಾ ಮೀನು ಹಿಡಿದುಕೊಂಡು ದಡಕ್ಕೆ ಮರಳಿ ಬರುತ್ತಿದ್ದ ದೋಣಿಗಳ ಲೆಕ್ಕ ಇಡುತ್ತ, ಅವುಗಳ ಚುಕ್ಕಾಣಿ ನೋಡುತ್ತ, ಎಲ್ಲವನ್ನೂ ನುಂಗಿ ಹಾಕುವ ಅಬ್ಬರದಿಂದ ಬಂದು ಬಂಡೆಗೊ, ದಡಕ್ಕೊ ಅಪ್ಪಳಿಸಿ ಮೈಮುರಿದುಕೊಂಡು ಹೋಗುತ್ತಿದ್ದ ಅಲೆಗಳ ದಿಟ್ಟಿಸುತ್ತ, ಹಾರುವ ಅಲೆಗಳನ್ನೇ ಬಲೆ ಮಾಡಿಕೊಂಡು ಅದರೊಳಗೆ ತೂರಿ ಬರುವ ಮೀನುಗಳನ್ನು ನುಂಗುವ ಕಡಲ ಹಕ್ಕಿಗಳ ಹಾರಾಟ ಗಮನಿಸುತ್ತ, ಕೊನೆಗೆ, “ಇಂದಿಗಿಷ್ಟು ಸಾಕು ನಾಳೆ ಮತ್ತೆ ಮಾತಾಡುವಾಎಂದು ಮೆಲ್ಲಗೆ ಕಡಲಿಗಿಳಿದು, ಕತ್ತಲೆಗೆ ಇಂಬುಗೊಡುತ್ತಿದ್ದ ಸೂರ್ಯನನ್ನು ಗಮನಿಸುತ್ತ, ಒಂದು ದೀರ್ಘ ವರ್ಷ ಉರುಳಿಸಿದ್ದು ಒಂದು ಕನಸಂತೆ ಅಷ್ಟೆ. ಆನಂತರ 13 ವರ್ಷಗಳ ನಂತರ ಮತ್ತೆ ಹುಟ್ಟುತ್ತದೆ ಸಮುದ್ರ ನನ್ನೊಳಗೊಂದು ಕವಿತೆಯಾಗಿ

ಅಯ್ಯೋ! ಇದು ಸಮುದ್ರವಂತೆ,

ಇದಕ್ಕೆ ಬಿಡುವಿಲ್ಲವಂತೆ

ಮಳೆಗಾಲ, ಛಳಿಗಾಲ, ಬೇಸಿಗೆ ಕಾಲ

ಹಗಲು, ಇರುಳು, ಪ್ರತಿನಿಮಿಷ ಮುಕ್ತ

ಇದಕ್ಕಿಲ್ಲ ವರುಷ ವರುಷ ಲೆಕ್ಕ

ಇಲ್ಲಿರುವುದೇ ವಿಕಟಾಟ್ಟಹಾಸ

ಭೂತಕೋಲು ಚೀತ್ಕಾರ, ಫೂತ್ಕಾರ

ಸಿಂಹಗರ್ಜನೆ, ಆನೆಗಳ ಗೀಳು,

ಬೊಬ್ಬೆ ಹೂಂಕಾರ

ಇದರ ರಕ್ಕಸ ತೋಳುಗಳಲ್ಲಿ

ಮರಳ ರಣಚಂಡೆ,

ಪುಡಿಯಾಗುವುದು ಇಲ್ಲಿ ಬಂಡೆ

ಕಾರ್ಕೋಟಕ ವಿಷದುಸಿರು

ತಣ್ಣಗಾದರೆ ನಮ್ಮ ಬಾಳು ಹಸಿರು

ನೀಲಜಲ ಕುದಿದು, ಭೂವಿಯನೇ ಬಗೆದು

ಮೇಲೆಳುತ್ತದೆ ನೀರ ಗೋಪುರ

ಇಲ್ಲಿ ಮನೆ ಕಟ್ಟಬಹುದು ಅಸುರ

ಇದು ರುದ್ರನಾದ, ಮಾಡಿದ್ದೇ ವಾದ

ಇಲ್ಲಿ ಸಾವೇ ಹುಟ್ಟು,

ಹುಟ್ಟೋ ಬಿಡಿಸಲಾಗದ ಗುಟ್ಟು

ಅಬ್ಬಾ!! ಇದು ಸಮುದ್ರವಂತೆ

ಇದು ಕುಣಿಸಿದರೆ ಮಾತ್ರ

ನಡೆಯುವುದು ನಮ್ಮ ಬದುಕ ಸಂತೆ.

                                                 (ಕೃತಿ: ಇರುವಷ್ಟು ಕಾಲ... ಇರುವಷ್ಟೇ ಕಾಲ!)

ಒಂದುವೇಳೆ ಅಂದು ಸಮುದ್ರ ತಪ್ಪಿದರೆ? ಕಡವಿನ ಕಟ್ಟೆ.

    ಭಟ್ಕಳದ ನನ್ನ ಕಾಲೇಜಿನಿಂದ ಕೇವಲ ಒಂದೆರಡು ಕಿಲೋಮೀಟರ್ಗಳ ದೂರದಲ್ಲಿದ್ದ ಒಂದು ಜಲಪಾತ. ಅದು ಶಾಂತ, ಸುಂದರ, ಸೌಮ್ಯ ಹಾಡು. ಸಮುದ್ರಕ್ಕೆ ತದ್ವಿರುದ್ಧ. ಅಲ್ಲಿ ಮೀನು ಹಿಡಿಯುವ ಹಕ್ಕಿಗಳೂ ಅಷ್ಟೆ, ಅವು ಕಡಲ ಹಕ್ಕಿಗಳಂತೆ ಆಕ್ರಮಣಕಾರಿ ಅಲ್ಲ. ಸಿಕ್ಕರೆ ತಿನ್ನೋಣ, ಇಲ್ಲದಿದ್ದರೆ ಸಿಗಬೇಕಾದುದ್ದಕ್ಕಾಗಿ ಧ್ಯಾನ ಮಾಡೋಣ ಎನ್ನುವ ನಿರ್ಭಾವುಕ ನಿಲುವಿನವು.

      ಸಮುದ್ರ ಮತ್ತು ನದಿ, ಇವೆರಡೂ ಜಲಪ್ರಪಂಚಗಳೆ. ಆದರೆ ಇವುಗಳೊಳಗಿನ ಪರಪಂಚಗಳೇ ಬೇರೆ. ಪ್ರಭಾವಿಸುವ ರೀತಿಯೇ ಬೇರೆ. ಲೋಕದ ವ್ಯಾಜ್ಯ ಪ್ರೀತಿಗಳನ್ನು ಬಗೆಹರಿಸುವ ಪಂಚಾಯಿತಿಯೂ ಬೇರೆ ಇರಬಹುದೇನೊ.

     ಭಟ್ಕಳಕ್ಕೆ ವೃತ್ತಿ ಕೇಳಿ, ಸಂದರ್ಶನಕ್ಕೆ ನಿಂತಾಗ, ಆಯ್ಕೆ ಸಮೀತಿಯಲ್ಲಿದ್ದ ಮೆಂಬರ್ ಒಬ್ಬರು ಕೇಳಿದ್ದರು, “ಕರ್ನಾಟಕದ ಬಯಲು ಸೀಮೆಯ ತುದಿಯಿಂದ ಕಡಲಿನ ತೀರಕ್ಕೆ ಬರುವ ಉದ್ದೇಶ?”

ನನ್ನ ಉತ್ತರ ಸ್ಪಷ್ಟ ಹಾಗೂ ನೇರವಾಗಿತ್ತು. “ಸಮುದ್ರದೊಂದಿಗೆ ಮಾತಾಡಲು

ಉತ್ತರ ಕೇಳಿ ಅವರು ನಕ್ಕರು, ಆಯ್ಕೆಯಾಗಿ ನಾನು ಧ್ಯಾನಸ್ಥನಾದೆ.

ಕಾರವಾರಕ್ಕೆ ಬಹಳ ಹಿಂದೆ ಕವಿ ರವೀಂದ್ರನಾಥ ಟ್ಯಾಗೋರರು ಬಂದಿದ್ದರು ಗೊತ್ತೊ?” ಅವರ ಪ್ರಶ್ನೆ. “ಬಂದವರೆಲ್ಲ ಟ್ಯಾಗೋರರಾಗುವುದಿಲ್ಲ, ಆಗುವ ಅವಶ್ಯಕತೆಯೂ ಇಲ್ಲ, ನಾನು ರಾಗಂ, ಅಷ್ಟಾಗಲು ಇಲ್ಲಿ ಉಳಿಯಬೇಕಿದೆ ನಾನು. ಅವಕಾಶ ಮಾಡಿಕೊಡಿ,” ಎಂದು ಸಂದರ್ಶನಾ ಕೊಠಡಿಯಿಂದ ಹೊರಬಂದು, ಅಂದು ಮೊದಲಿಗೆ ಹೊದದ್ದು ಬಂದರಿಗೆ.

ಮಾರ್ಗ ಮಧ್ಯದ ಸರ್ಕಲ್ನಲ್ಲಿ ನನ್ನ ಕುತೂಹಲಕ್ಕೊಂದು ದೃಶ್ಯ. ಮೀನು ಮಾರಲು ಕುಳಿತ ಸಾಲು ಸಾಲು ಹೆಂಗಸರು, ಅದಕ್ಕೂ ಒಂದಿಷ್ಟು ಮುಂದೆ ಬಂದರೆ ಹೂ ಮಾರಲು ಕುಳಿತ ಹೂಗಾರರು. ನಾನು ಬದುಕು ನಿತ್ಯ ಹೂ-ಹೆಣ್ಣಿಗಾಗಿ, ಹಣ್ಣು-ಮಣ್ಣಿಗಾಗಿ ಹಸಿಯುತ್ತಲೇ ಹಪಹಪಿಸುತ್ತಲೇ ಮುಗಿದುಬಿಡಬೇಕೆಂದು ಪ್ರಾರ್ಥಿಸುವ ಪಾಮರ. ಇವುಗಳು ಎಲ್ಲೇ ಕಂಡರೂ ಒಂದಿಷ್ಟು ನಿಂತು, ಗೌರವಿಸಿ ಮುಂದೆ ಹೋಗುವುದು ರೂಢಿ. ಅಂದೂ ಅಷ್ಟೆ, ಓಡಿ ಹೋಗಿಎಷ್ಟು ಮಲ್ಲಿಗೆ ಮೊಳಕ್ಕೆ?”

ಮೊಗೆರಾ?”

ಅಂದ್ರೆ?”

ಭಟ್ಕಳ ಮೊಗೇರ ಬೇಕಿತ್ತಾ?,” ನನ್ನ ಕಿವಿಗಿದು ಹೊಸ ಶಬ್ಧ. ಹೂ-ದಂಡೆ ಹೆಣೆದ ರೀತಿ ಅದ್ಭುತ! ಮತ್ತು ಭಿನ್ನ.

ಮೊಗೇರ?’ ಇದು ಮತ್ಸ್ಯಗಂಧಿಯ ಹಾಡೆ?

ಭಟ್ಕಳಿಗರ ಭಾಷೆಯಲ್ಲಿಮೊಗೇರಎಂದರೆ ಮಲ್ಲಿಗೆ. ಇದು ಇಲ್ಲಿ ಮಾತ್ರ ಬೆಳೆಯುವ ಮಲ್ಲಿಗೆ. ಸಮುದ್ರದ ಉಪ್ಪನ್ನುಂಡು, ಕಡವಿನ ಕಟ್ಟೆಯ ತಂಗಾಳಿಯ ಅನುಭವಿಸಿ, ಬೆಳೆಯುವ ಹೂವಿಗೆ ದೇಶದ ಇನ್ನ್ಯಾವ ನೆಲವೂ ಒಗ್ಗದು. ಇದು ಹುಟ್ಟುತ್ತಲೆ ತನ್ನ patent (ಹಕ್ಕುಸ್ವಾಮ್ಯ)ನ್ನು ಪಡೆದುಕೊಂಡಿದೆ.

ಸಮುದ್ರದ ತಳಮಳ, ಸತ್ತ ಜಿನ-ಭಟ್ಟಾಚಾರ್ಯರ ಗೌಪ್ಯ, ಸಮುದ್ರದಂತೆ ಏರಿಬಂದ ಅನ್ಯರ ಆಕ್ರಮಣದ ಪರಿ, ಮಗ್ಗುಲಿದ್ದವನ ಪರಾಧೀನತೆಯ ಅನಾಹತ ಹಾಡು, ದಕ್ಕಿಸಿಕೊಂಡ ಇದು ಕರುನಾಡಿನ ವಿವಶ ಮಲ್ಲಿಗೆ, ನನ್ನ ಪ್ರೀತಿಯ ಭಟ್ಕಳದ ಮಲ್ಲಿಗೆ. Sorry ಭಟ್ಕಳದ ಮೊಗೇರಾ.

ಎಲ್ಲೆಂದರಲ್ಲಿ ಸಿಗುವುದಿಲ್ಲ, ಇಲ್ಲಿಗೆ ಬರದೆ ಮಲ್ಲಿಗೆಯ ಸುಖ ನಮ್ಮದಾಗುವುದಿಲ್ಲ. ಇದು ಬಂದು ಬಾಚಿಕೊಂಡವರಿಗೆ ಮಾತ್ರ ದಕ್ಕುವ ಭಾಗ್ಯ. ಬರುವವ ಭಕ್ತನಾಗಿರಬೇಕು, ಅನುರಕ್ತನಾಗಿರಬೇಕು ಅಷ್ಟೆ.

ಭಟ್ಕಳದ ನನ್ನ ಉಪನ್ಯಾಸ ವೃತ್ತಿಯ ದಿನಗಳಲ್ಲಿ, ನನ್ನ ವಿದ್ಯಾರ್ಥಿನಿಯೊಬ್ಬಳು ನನ್ನ ಸ್ನೇಹಿತೆಯಾದಳು. ಅವಳದು ಶಿರಾಲಿಯ ಪಕ್ಕದ ಊರು ಮುರ್ಡೇಶ್ವರ. ಅರಳು ಹುರಿದಂತೆ ಒಂದೇ ಸಮನೆ ಮಾತನಾಡುತ್ತದ್ದ ಹುಡುಗಿ ಪ್ರೀತಿಯನ್ನು ಮೊಗೆ ಮೊಗೆದು ಕುಡಿಯುವ ಮತ್ತು ಕುಡಿಸುವ ಜೀವ. ದಿನದ ಪ್ರತಿ ಕ್ಷಣವೂ ಉತ್ಸವ, ವಿಜೃಂಭಣೆ. ಆಕೆಯ ಊರಿಗೆ, ಮನೆಗೆ ಹೋದರೆ ಮಣ್ಣು ಮಡಕೆಯ ಮೇಲೆ, ದಿಂಬ-ಹಾಸಿಗೆಯ ಮೇಲೆ ಆಕೆ ಬಿಡಿಸಿದ ಚಿತ್ರಗಳು, ಎಳೆದ ಬಣ್ಣದ ರೇಖೆಗಳು, ಯೌವ್ವನದ ಎದೆಗೆ ಕಾಮನ ಬಿಲ್ಲು ಮೂಡಿಸುತ್ತಿದ್ದವು. ಆಕೆ ಜಾತಿಯಿಂದ ಮುಸ್ಲಿಂ. ಬೆವರಿಳಿಸುವ, ಉಸಿರುಗಟ್ಟಿಸುವ ಬುರ್ಖಾದೊಳಗೆ ಎಷ್ಟೊಂದು ಕನಸುಗಳು ಅವಳಲ್ಲಿ. ಆಕೆ ಶ್ರೀಮಂತನ ಮಗಳಾಗಿರಲಿಲ್ಲ, ಆದರೆ ಶ್ರೀಮಂತಳಾಗಿದ್ದಳು ಚೈತನ್ಯ ತುಂಬಿದ ಬದುಕಿನಿಂದ.

ಒಂದು ದಿನ ಹೀಗಾಯಿತು. ಹೊಸ ವರ್ಷದ ದಿನವನ್ನು ಆಕೆ ಆಕೆಯ ಅಣ್ಣಂದಿರು, ಬಂಧುಗಳು ಸೇರಿಕೊಂಡು ಆಚರಿಸಿದರು. ಅವರ ಮನೆ ಮಸೀದಿಯೊಂದರ ಪಕ್ಕದಲ್ಲಿತ್ತು. ಹುಚ್ಚು ಹುಡುಗಿ ಇಸ್ಲಾಂದ ಕಟ್ಟಳೆ ಮೀರಿ ಹೊಸ ವರ್ಷವನ್ನು ಆಚರಿಸಿದ್ದು, ಊರಲ್ಲಿ ಗೊತ್ತಾಗುತ್ತಲೇ ಮತಾಂಧರು ಆಕೆಯ ಮನೆ ಹೊಕ್ಕು, ಕೈಗೆ ಸಿಕ್ಕದ್ದನ್ನೆಲ್ಲ ಬೀಸಾಡಿ, ಮನೆಯ ಬಂಧುಗಳನ್ನೆಲ್ಲ ಥಳಿಸಿ, ಊರು ಬಿಡಿಸಿದರು. ನಿರಾಶ್ರಿತರಾಗಿದ್ದ ಅವರು ಶಿರಸಿಯಲ್ಲಿ ಮನೆ ಮಾಡಿದರು. ನಾನು ಆಕೆಗೆ ಸಾಂತ್ವಾನ ಹೇಳಲು ಹೋದೆ. ಮನೆಯ ಬಾಗಿಲೊಳಗೆ ನನ್ನ ಬರುವಿಕೆಗಾಗಿ ಕಾಯುತ್ತ ನಿಂತಿದ್ದಳು, ಅದೇ ನಗೆ ಹಾಗೂ ಧೈರ್ಯದೊಂದಿಗೆ. ಎಲ್ಲಿಯೂ ಆಕೆ ಮನುಷ್ಯ ಪ್ರೀತಿಯ ಬಡತನವನ್ನು, ಭಗ್ನತೆಯನ್ನು ಅನುಭವಿಸುತ್ತಿದ್ದಾಳೆ ಎಂದು ನನಗನ್ನಿಸಲಿಲ್ಲ. ಆಕೆಯ ಕನಸುಗಳು ಕುಸಿದಿರಲಿಲ್ಲ. ಅಲ್ಲಿಯೂ ಮತ್ತೆ ಇದೇ ಸಮುದ್ರ ಮಲ್ಲಿಗೆಯ ಘಮಘಮ, ಗೆಲ್ಲುವ ಮಾತು. ಎದೆಯ ಶ್ರೀಮಂತಿಕೆ.

ಈಗ, ಭಟ್ಕಳದ ಮಲ್ಲಿಗೆ ಎಂದರೆ ಆತ್ಮಸ್ಥೈರ್ಯದ ಹೆಣ್ಣು.

ಇಂಥ ಘಟನೆಗಳ ಹಿನ್ನೆಲೆಯಲ್ಲಿ ಹೇಳಬೇಕಾದ ಒಂದು ಮಾತು, ನಾನು ಮಲ್ಲಿಗೆಯ ಕೊಂಡವನಲ್ಲ, ಅದನ್ನು ಕೊಂಡುಕೊಳ್ಳುವ ಯಾವುದೇ ಶ್ರೀಮಂತ ಇದುವರೆಗೂ ಭೂಮಿಯ ಮೇಲೆ ಹುಟ್ಟಿದ್ದಾನೆ ಎನ್ನುವ ನಂಬಿಕೆ ನನಗಿಲ್ಲ. ನಾನು ಮಲ್ಲಿಗೆಯ ಬದುಕಿದವನು. ನಾಡಿನ ಪ್ರತಿ ಮಲ್ಲಿಗೆಯಲ್ಲಿಯೂ ಪ್ರದೇಶದ ಇತಿಹಾಸವನ್ನು ಶ್ರದ್ಧೆ ಹಾಗೂ ವಿನೀತತೆಯಿಂದ ಓದಿದ್ದೇನೆ ನಾನು.

ನಾನು ಸುತ್ತಾಡಿದ ನಾಡಿನ ಎಲ್ಲ ಮೂಲೆ ಮೂಲೆಗಳಿಂದ ಮಾಲೆ ಮಾಲೆಯಾಗಿ ಮಲ್ಲಿಗೆಯ ತಂದು ನನ್ನಪ್ರೀತಿಗೆ ಮುಡಿಸಿದ್ದೇನೆ. ನನ್ನ ಬಾಳ ಸಂಗಾತಿ ಪದ್ದಿಯ ಜಡೆಗಿಟ್ಟು ಸಂಭ್ರಮಿಸಿದ್ದೇನೆ. ಇದು ನಾವು ಯಾವಾಗಲೂ ಅನುಭವಿಸಿದ ನಮ್ಮ ಪ್ರೀತಿಯ ಮಹಾ ಶ್ರೀಮಂತಿಕೆ. ನನ್ನ ನೆಲದ ಜಾಜಿ, ಸೂಜಿ, ಕರಿಮಲ್ಲಿಗೆ ಮತ್ತು ಸದಾಮಲ್ಲಿಗೆಯಿಂದ ಹಿಡಿದು ಮೈಸೂರ ಮಲ್ಲಿಗೆ, ಬೆಂಗಳೂರಿನ ದುಂಡು ಮಲ್ಲಿಗೆ, ಮಂಗಳೂರಿನ ಕಡಲ ಮಲ್ಲಿಗೆ, ಸಿರಸಿ-ಸಿದ್ಧಾಪುರದ ಕಾಡ ಮಲ್ಲಿಗೆ ಒಂದೊಂದಕ್ಕೂ ಒಂದೊಂದು ಗಂಧ-ಗಾಳಿಯ ಹಿತ. ಜೊತೆಗೆ ಮಲ್ಲಿಗೆಗಳ ಮಾರುವ ಪ್ರತಿ ಜೀವದ ಮೊಗದಲ್ಲಿಯೂ ಪ್ರದೇಶದ ಕಷ್ಟ ಕಾರ್ಪಣ್ಯಗಳ ಕಥನ.

ಇಲ್ಲಿರುವಾಗಲೆಲ್ಲ ಒಂದಿಷ್ಟು, ದುಡ್ಡು ಕೊಟ್ಟು ಮಲ್ಲಿಗೆಯ ದಂಡಿ ಪಡೆಯುವಾಗ, ಅದನ್ನು ಮಾರುವ ಮಾಲಿಯ ಕಣ್ಣ ಬಾವಿಗಿಳಿದು ಬದುಕ ಸೇದುವ ಪ್ರಯತ್ನ ಮಾಡುತ್ತಿದ್ದೆ ನಾನು. ಯಾಂತ್ರಿಕವಾಗಿ ಹೂವನ್ನು ಕೊಂಡುಕೊಂಡು ಬರುವ ಬದಲು, ಅವರ ಬಳಿ ಒಂದಿಷ್ಟು ಕಾಲ ಕುಳಿತು, ಗತ ಬದುಕು, ವರ್ತಮಾನದ ಫಲಿತಗಳ ಕುರಿತು ಮಾತಿಗಿಳಿಯುತ್ತಿದ್ದೆ.

ಭಟ್ಕಳದ ಸರ್ಕಲ್ನಲ್ಲಿ, ದಿನಗಳಲ್ಲಿ ಹೂಮಾರುವ ವೆಂಕಜ್ಜಿ ಎಂಬ ಮುಪ್ಪಿನ ಮಹಿಳೆ ಇದ್ದಳು. ಆಗಲೇ ಅವಳದು ಮುಗಿದು ಹೋದ ಆಯುಷ್ಯ. ಆನಂತರ ನಾನು ಅದೆಷ್ಟೋ ಬಾರಿ ಭಟ್ಕಳಕ್ಕೆ ಹೋದರು ನನಗವಳು ಕಂಡೇ ಇಲ್ಲ. ಚೂರು-ಪಾರು ಶಾಲೆ ಕಲಿತ ಸಾತ್ವಿಕ ಸೊಕ್ಕು ಅವಳಿಗಿತ್ತು. ಅವಳನ್ನು ನೋಡಿದಾಗೊಮ್ಮೆನಾಡವರೇ ನಿಜ ನಾಡಿಗರುಎಂಬ ಅಂಕೋಲೆ ಸೀಮೆಯ ಮಾತೊಂದು ನನ್ನ ಸ್ಮರಣೆಯಲ್ಲಿ ಸುತ್ತಿ ಹೋಗುತ್ತಿತ್ತು. ಅರ್ಥದಲ್ಲಿ ನನ್ನ ಕಾದಂಬರಿಯ ನಿಜವಾದ ಮೂಲ ಜಾಡು ಅವಳೆ.

ಮುಂದೆ ನಾನೊಮ್ಮೆ ಬರೆಯಬೇಕೆಂದುಕೊಂಡಿದ್ದ ಕತೆಯೊ, ಕಾದಂಬರಿಯೊ ಅವಳ ಸಖ್ಯದ ಕಾರಣ ಮೈದಾಳುತ್ತದೆ ಎಂಬ ತಿಳುವಳಿಕೆ ಮಾತ್ರ ಆಗ ಇರಲಿಲ್ಲ. ಆದರೆ ಒಕ್ಕಲತಿಯ ಹಣೆಯ ನೀರಿಗೆಗಳಲ್ಲಿ, ಮಂದ ಕಣ್ಣುಗಳಲ್ಲಿ, ದುಡಿದು ಸಣ್ಣಾದ ಎದೆ-ರಟ್ಟೆಗಳಲ್ಲಿ ಕಥನವೊಂದಿದೆ ಎಂಬ ನಂಬಿಕೆ ಇತ್ತು. ಅವಿಂದು ಸಾಕಾರಗೊಳ್ಳುವ ಸಂದರ್ಭ.

 ವಾರಾಂತ್ಯದಲ್ಲಿ ಹೆಚ್ಚಿನ ಸಮಯವನ್ನು ಇಲ್ಲಿ ನಾನು ಮೀನುಗಾರಿಕೆಯನ್ನೇ ತಲೆತಲಾಂತರಗಳಿಂದ ಕುಟುಂಬದ ಕಸುಬು ಮಾಡಿಕೊಂಡಿದ್ದ ಮೊಗವೀರ, ಕಾರ್ವಿ ಹಾಗೂ ಕೆಲವು ಮುಸ್ಲಿಂ ಸಮುದಾಯಗಳ ಮಕ್ಕಳೊಂದಿಗೆ ಕಳೆಯುತ್ತಿದ್ದೆ. ಅವರ ಬದುಕೊಂದು ಖಾಲಿಯಾಗದ ನಿಗೂಢಗಳ ಅಕ್ಷಯ ಪಾತ್ರೆ. ಅವರು ಹೇಳುತ್ತಿದ್ದ ಸಂಗತಿ-ಸಂಕಷ್ಟಗಳು, ಕಥೆ-ವಾಸ್ತವಗಳನ್ನು ಬರೆದು ತೀರಿಸಲಾಗದು. ಅನಂತವಾಗಿ, ಕಾಲದ ಹಂಗಿಲ್ಲದೆ ಏರಿಳಿಯುವ ಕಡಲು ಅವರ ಕಣ್ಣುಗಳಲ್ಲಿ ಬಗೆದು ನೋಡಲಾಗದ ಕುತೂಹಲಗಳನ್ನು ತುಂಬಿವೆ. ಅವರ ಎದೆ-ಕಿವಿಗಳಲ್ಲಿ ಕೇಳಿ ಮುಗಿಸಲಾಗದ ಅಲೆಯ ಲಾಲಿಗಳನ್ನು ತುಂಬಿ ಕಳಿಸಿವೆ. ಇಲ್ಲಿಯ ಪ್ರತಿ ಬದುಕೂ, ಖಾಲಿಯಾಗದ ಸರಕು ಹೊತ್ತು ಬಂದರಿಗೆ ಬಂದ ಕಡಲ ಹಡುಗು.

ಇವರಂತೆಯೇ,  ನನ್ನ ಹೊಸ ಕಾದಂಬರಿಯ ಇವರ ನಾಯಕ ದಂಡಿಯೂ ಕೂಡಾ.

ಸುಮ್ಮನೆ ಹರಟೆಯಲ್ಲಿದ್ದಾಗ, ‘ಅಗೋ, ಅಲ್ಲಿ ನೋಡಿ ಸಾರ್ಎಂದು, ನನಗೆ ಕಾಣದ, ಅವರ ಕಡಲ ಶೋಧದ ಅನುಭವಕ್ಕೆ ಹತ್ತಿರವಾದ, ಒಂದು ನಡುಗಡ್ಡೆ ತೋರಿಸಿ, ಅದರ ಬಗ್ಗೆ ಅವರು ಮಾತಿಗೆ ಕುಳಿತರೆ ಮುಗಿಯಿತು, ಆಚೆ ಸೂರ್ಯ ಮುಳುಗಿ, ಬಲೆ ದೋಣಿಗೆ ಸೇರಿ, ದೋಣಿ ದಡ ಸೇರಿ, ಉಪ್ಪು ನೆಣಚುತ್ತ, ಬೆಸ್ತರೆಲ್ಲ ಒಂದಿಷ್ಟು ಸೆರೆ ಕುಡಿಯುತ್ತ, ಸಮುದ್ರ ಗಾಳಿ- ಜೋಗುಳಕ್ಕೆ ಮೈ ಒಡ್ಡುವ ಸಮಯ. ಮಾತು, ಮಾತು ಕಡಲ ಮಾತು.

ಭಟ್ಕಳದ ಬಂದರಿನಿಂದ ಒಂದಿಷ್ಟು ಕಿಲೋಮೀಟರ್ ನೀವು ಅರಬ್ಬಿ ಸಮುದ್ರದಲ್ಲಿ ಹೋಗಬೇಕು. ಅಲ್ಲೊಂದು ನಡುಗಡ್ಡೆ. ಅಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಸ್ವದೇಶಿ ಹೋರಾಟಗಾರರು, ನಾಡಬಾಂಬ್, ಗನ್ ಹಾಗೂ ತಮ್ಮ ಉಳಿದ ಶಸ್ತ್ರಾಸ್ತ್ರ ಹಾಗೂ ಕರಪತ್ರಗಳನ್ನು ಬಚ್ಚಿಡುತ್ತಿದ್ದರು. ನಡುಗಡ್ಡೆಯ ತುಂಬ ಭಯಾನಕ ವಿಷಸರ್ಪಗಳಿವೆ ಎಂದು ಕಾರ್ವಿ ಮಕ್ಕಳು ಆಗ ನನಗೆ ಹೇಳುತ್ತಿದ್ದುದನ್ನು ಇಂದಿಗೂ ಮರೆಯಲಾಗಿಲ್ಲ.

ಹಾಗೆ ನೋಡಿದರೆ, ಅರಬ್ಬಿ ಸಮುದ್ರ ಹಾಗೂ ಗಂಗಾವಳಿ ನದಿಯಿಂದ ಇಡೀ ಉತ್ತರ ಕನ್ನಡ ಜಿಲ್ಲೆಯ ತುಂಬಾ ನಿರ್ಮಾಣವಾದ ಕೂರ್ವೆ, ಸೂರ್ವೆ, ಬೊಳ್ಳಿಯಿಂದ ದಕ್ಷಿಣ ಕನ್ನಡದ ದೇವಭಾಗದವರೆಗೂ ಇರುವ, ನೂರಾರು ನಡುಗಡ್ಡೆಗಳು ಒಂದು ಕಾಲಕ್ಕೆ ನಾಡು-ನುಡಿಗಾಗಿ ಹೋರಾಡಿದವರ ಅಡಗುದಾಣಗಳೇ ಆಗಿದ್ದವು. ಬ್ರಿಟಿಷರ ದೌರ್ಜನ್ಯ, ಜಪ್ತಿ, ಹಿಂಸೆ-ಗಳಿಂದ ಪೀಡಿತರಾದವರು, ಭೂಗತರಾಗಿದ್ದ ನಾಡಿಗರು ಆಶ್ರಯ ಪಡೆದದ್ದು, ಅಡಗಿಕೊಂಡಿದ್ದು ಕಾಡಿನಿಂದ ಸಮೃದ್ಧವಾದ ಹಾಗೂ ಸುತ್ತಲೂ ಜಲಾವೃತವಾದ ನಡುಗಡ್ಡೆಗಳಲ್ಲಿಯೆ.

ಇವು ನಮ್ಮ ಸ್ವಾತಂತ್ರ್ಯದ ಕಿಚ್ಚು ಕಾಪಿಟ್ಟ ದ್ವೀಪಗಳು, ಭಾರತವನ್ನು ದಾಸ್ಯದ ಕತ್ತಲೆಯಿಂದ ಬಿಡಿಸಿದ ದೀಪಗಳು.

ಅಲ್ಲಿರುವವರೆಗೂ ನನ್ನ ನಿತ್ಯ ದರ್ಶಿಗಳಲ್ಲಿ ಭಟ್ಕಳದ ಕಂದುಕಗಿರಿಯೂ ಒಂದು. ಅಲ್ಲಿ, ಬೆಟ್ಟದ ತುದಿಯ ಮೇಲೆ ನಿಂತು ನೋಡಿದರೆ, ಒಂದು ಕಡೆಯಲ್ಲಿ ಪಶ್ಚಿಮ ಘಟ್ಟಗಳ ಸಾಲು, ಇನ್ನೊಂದು ಕಡೆ ಅರಬ್ಬಿ ಸಮುದ್ರಗಳಿಂದ ಆವೃತ್ತವಾದ, ಕರ್ನಾಟಕದ ಸಹಜ ನಿಸರ್ಗ ನಿರ್ಮಿತ, ಬಂದರು ನಗರ ಭಟ್ಕಳದ ದರ್ಶನ ನಮಗೆ ಆಗುತ್ತದೆ. ಇದು 16ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಪ್ರಮುಖ ಬಂದರಾಗಿತ್ತು. ಒಂದಿಷ್ಟು ವಸಹಾತು ಹಾಗೂ ವಸಹಾತೋತ್ತರ ಕಾಲದಲ್ಲಿ ಕೆಲವು ಕಳ್ಳ ವ್ಯವಹಾರಗಳ ಮುಖ್ಯ ದಾರಿಯೂ ಇದಾಗಿತ್ತು ಎಂಬುದನ್ನು ಮರೆಯುವಂತಿಲ್ಲ.

ಭಟ್ಕಳದ ವೃತ್ತಿ ದಿನಗಳಲ್ಲಿ ನನ್ನ ಮುಂದೊಂದು ದೊಡ್ಡ ಶಿಷ್ಯ ವರ್ಗ. ಇವರಲ್ಲಿ ನಾಡವರು, ಮೊಗವೀರರು, ಅಗೇರರು, ಕಾರ್ವಿ, ಕುಣಬಿ, ಸಿದ್ಧಿ, ಶಾನಭಾಗ, ನಾಯಕ, ಕಿಣಿ, ಪ್ರಭು, ಕಾಮತ, ಭಟ್ಟ, ಶಾನುಭೋಗ, ಹೆಗಡೆ, ದೇಶಾವರಿ, ಶೆಟ್ಟಿ, ಪೈ, ನವಾಯತಿ, ದಖ್ಖನಿ ಮತ್ತು ಮುಸ್ಲಿಂ ಹೀಗೆ ಎಲ್ಲ ಸಮುದಾಯಗಳ, ಎಲ್ಲ ವಯೋಮಾನದ ಮಕ್ಕಳು ಸಂಪರ್ಕದಲ್ಲಿದ್ದರು. ಇದು ದೊಡ್ಡ ಸಂಗತಿಯಲ್ಲ. ಆದರೆ, ನಾಡಿನ ಉಳಿದ ಪ್ರದೇಶಗಳಿಗೆ ಹೋಲಿಸಿದರೆ, ಅವರಲ್ಲಿ ಎದ್ದು ಕಾಣುತ್ತಿದ್ದ ಧೈರ್ಯದ ಗುಣವಿದೆಯಲ್ಲ, ಅದು ವಿಶೇಷತೆ. ಇವರೆಲ್ಲ ನನ್ನ  ಹೊಸ ಕಾದಂಬರಿಯ ನಾಯಕದಂಡಿಯಂತೆ.

ಪ್ರೀತಿ-ದ್ವೇಷ, ಕಾಯಕ-ಜಗಳ ಎಲ್ಲದಕ್ಕೂ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದ ಅವರ ರೀತಿ, ಸಮುದ್ರದ ಅಲೆಗಳಂತೆ ಏರಿ ಬರುತ್ತಿದ್ದ ಅವರ ವೈಖರಿ, ಎಲ್ಲವನ್ನೂ ಎದುರಿಸುವ ಛಾತಿ ನಾನು ಅವರಲ್ಲಿ ವಿಶೇಷವಾಗಿ ಆಸ್ಥೆವಹಿಸಲು ಕಾರಣವಾಯಿತು. ಅವರು ಭುಗಿಲೆದ್ದಾಗಲೊಮ್ಮೆ ನನ್ನ ಕಾಲೇಜಿನ ಅದೆಷ್ಟೋ ಆಸ್ತಿ ಜಖಮ್ಗೆ ಒಳಪಡುತ್ತಿತ್ತು. ಅವರ ಪ್ರೀತಿಯಂತೆಯೇ ಅವರ ಸಿಟ್ಟೂ ಕೂಡ. ರಭಸ ಅವರ ರಕ್ತದ ಭಾಷೆ. ಕಾರಣವೆ ಇಡೀ ಕರ್ನಾಟಕ ಇನ್ನೂ ನಿದ್ದೆಯಲ್ಲಿದ್ದಾಗ ಸ್ವತಂತ್ರ್ಯ ಸಂಗ್ರಾಮದ ಮುಂಚೂಣಿಯಲ್ಲಿ ನಾವು ನಾಡವರೆಂದು ಇವರು ಎದ್ದು ಬಂದರು.

ಹಾಗೆ ನೋಡಿದರೆ, ಪ್ರತಿ ಬದುಕಿನಲ್ಲಿಯೂ ಛಲವೆಂಬ ಮಹಾಕಾವ್ಯದ ಒರತೆ ಇದೆ. ಪ್ರಪಂಚದ ಅತ್ಯಂತ ಕುತೂಹಲಕಾರಿ ಕೇಂದ್ರವೇ ಮನುಷ್ಯ. ಕುಲ-ನೆಲ ಯಾವುದೇ ಆಗಿರಲಿ. ಕಥನವಿಲ್ಲದ ಮನುಷ್ಯನೇ ಇಲ್ಲ. ಆದರೆ, ಆತನನ್ನು, ಆತನ ಮೂಲಕ ಸಮಾಜವನ್ನು ಓದುವ ಒಂದು ಹದವಾದ ಕಾಲ ಬರಬೇಕು ಅಷ್ಟೆ.

ನನ್ನ ಕಾದಂಬರಿಯ ನಾಯಕ ಹೀಗೆ, ನಮ್ಮ ಕಡಲ ನಾಡಿನ ಸಂಕಷ್ಟಗಳನ್ನು, ಭೂತ-ವರ್ತಮಾನಗಳನ್ನು, ಪ್ರಯೋಗ- ಪ್ರತಿಫಲಗಳನ್ನು ಗರ್ಭೀಕರಿಸಿಕೊಂಡ ಒಬ್ಬ ಮನುಷ್ಯ. ಕುತೂಹಲದ ಮನುಷ್ಯ. ಅವನಿಗೊಂದು ಹೆಸರು, ‘ದಂಡಿ’.

 ಬಹುತೇಕ ಮೇಲಿನ ಎಲ್ಲ ಕಾರಣಗಳಿಗಾಗಿಯೇ ಇರಬಹುದು, ಇಲ್ಲಿಂದ ನಿರ್ಗಮಿಸಿದ ಎರಡು ದಶಕಗಳ ನಂತರವೂ ಕೃತಿಯ ಮೂಲಕ ಅವರ ಗತ ಇತಿಹಾಸಕ್ಕೆ ಕೈ ಹಾಕಲು ನಾಂದಿಯಾಯಿತು.

ಇಲ್ಲಿ ಎದ್ದು ನಿಂತಿರುವ ನಾಯಕ ದಂಡಿ, ಸಮುದಾಯ ಸಮುದ್ರದ ಮಧ್ಯ ಎದ್ದು ನಿಂತ ಹೆಬ್ಬಂಡೆ. ಈತ ಇವರೆಲ್ಲರ ಗತ ಇತಿಹಾಸದ ಮೂರ್ತರೂಪ. ಬಚ್ಚಿಡಲಾಗದ ಸತ್ಯ.

5 comments:

  1. ಕಡಲ ತೀರದ ಸಾರ್ಥಕ ಯಾನದ ಅನುಭವಗಳನ್ನು ನಮ್ಮೆದೆಯೊಳಗೆ ಕಡಲ ಅಲೆಗಳಂತೆ ಇಳಿಸಿದ ತಮಗೆ ಅನಂತ ಕೃತಜ್ಞತೆಗಳು ಗುರುಗಳೆ

    ReplyDelete
    Replies

    1. That's is Really so great to saw your Great blog . If anyone want to this service Harvendusraie

      Delete
  2. ಕಡಲ ತೀರದ ಸಾರ್ಥಕ ಯಾನದ ಅನುಭವಗಳನ್ನು ನಮ್ಮೆದೆಯೊಳಗೆ ಕಡಲ ಅಲೆಗಳಂತೆ ಇಳಿಸಿದ ತಮಗೆ ಅನಂತ ಕೃತಜ್ಞತೆಗಳು ಗುರುಗಳೆ

    ReplyDelete
  3. ಕಡಲತೀರದ ಬದುಕನ್ನು ನಾನು ಬಾಲ್ಯದ ದಿನಗಳ ವಿಸ್ಮಯದ ಕಣ್ಣುಗಳಲ್ಲಿ ಕಂಡವನು.ದೊಡ್ಡವನಾದ ಮೇಲಿನ ವಿಸ್ತಾರದ ದೃಷ್ಟಿಗೆ ಕಡಲು ದಕ್ಕಲೇ ಇಲ್ಲ.ಪ್ರವಾಸಗಳ ಮೋಜಿನ ಮೊಳಗಳಲ್ಲಿ ಕಡಲನಳೆಯಲು ಸಾಧ್ಯವೇ ಇಲ್ಲ.ಅದನ್ನು ತಬ್ಬಲು ಅನಂತ ಗಾತ್ರದ ತೆಕ್ಕೆಯೇ ಬೇಕು...ಬಹುಶಃ ಆ ನುಭವ ನಿಮ್ಮಿಂದ ನಮಗೆ ದಕ್ಕಿದರೆ ನಮ್ಮ ಕಡಲತುಡಿತ ಕಡಿಮೆಯಾಗಬಹುದೇನೊ..ಕಾಯುತ್ತೇವೆ..

    ReplyDelete
    Replies
    1. ನಿನ್ನ ಗ್ರಹಿಕೆ ಸುಂದರವಾಗಿದೆ ಕಂದಾ.

      Delete