Total Pageviews

Tuesday, March 29, 2011

ಸಾಯದೇ ಸಿಗುವುದೊಮೊಮ್ಮೆ.....

ಮೋಕ್ಷ

ಕಾಲದ ಬರಸಿಡಿಲು ಬಡಿದು
ಸುಟ್ಟ ಮರದೆದುರು ಕುಳಿತಿದ್ದೇನೆ
ಎಲ್ಲೋ ಒಂದಿಷ್ಟು ಉಸಿರು ಉಳಿದಿರಬಹುದು
ಹಸಿರ ಹಸಿ ಒಳಗಿರಬಹುದು
ಚಿಟ್ಟೆಯೊಂದರ ಮೊಟ್ಟೆ ತಪ್ಪಿ ಉಳಿದಿರಬಹುದು
ಅರೆಪಕ್ಕದ ಹಕ್ಕಿ ಗೂಡಿಗಾಗಿ ಹುಡುಕುತಿರಬಹುದು




  1.                                                  ಈ ಸನಾತನದ ಮರದ ಎದೆಯೊಳಗೆ
ಬಿದ್ದ ಗೊರಲಿಯ ಮಣ್ಣೇ ಈಗ
ಇದರ ವಂಶದ ಕನಸಾಗಿರಬಹುದು
ಆಶಯ,ಅನ್ವೇಷಣೆ ಎಲ್ಲ ಆಗಲೂಬಹುದು
ಹದ್ದು ಹಾರಾಡುತ ಬಂದು ಉಚ್ಚೆ ಹೋಯ್ದರೂ
ಮತ್ತೆ ಹಸುರಾಗಬಹುದೇ ಮರ?
ಹೀಗೆ ಕರುಣಿಸಬಹುದೇ
ಕರುಣಾಳು ಭಗವಂತ ಒಂದು ವರ?


ಮರ ಸುಟ್ಟಿದೆ ಭಯವಿಲ್ಲ,ಆದರೆ
ಅಯ್ಯೋ
ನಿಂತ ನೆಲದ ಹಸಿಗೆ ಅಭಯವಿಲ್ಲ


ನಾನು ಹೀಗೆಯೇ ಕುಳಿತಿರುತ್ತೇನೆ
ಕನಿಷ್ಟ ಕನಿಷ್ಟ
ಈ ದೇಶದ ಕೋಟಿ ಕೋಟಿ
ಹೆಣ ಹೊತ್ತೊಯ್ದು ಮೋಕ್ಷ  ಕಾಣಿಸಿದ ಗಂಗೆ
ಒಂದು ದಿನ ದಾರಿ ತಪ್ಪಿ ಬಂದು
ಈ ಮರವನ್ನು ಹೊತ್ತೋಯ್ದು
ಯಾವುದೋ ಯಜ್ಞಕುಂಡಕ್ಕೆ
ಆಹುತಿಯಾಗಿಸಿ ಮೋಕ್ಷ ನೀಡುವವರೆಗೆ

No comments:

Post a Comment