ಈಗ
ಅಜ್ಜಿ,ಊರಲ್ಲಿ
ಗೆಜ್ಜೆ ಸದ್ದೇ ಇಲ್ಲ
ಎಲ್ಲ ಹಾಳು,ಬೀಳು,ಧೂಳು
ಬೆಳದಿಂಗಳಿಗೆ ಬಾಯ್ತೆರೆದು ಮಲಗಿದರೆ
ಕೇಳುವ ಧ್ವನಿ ಗೋಳು
ಈಗ ಎಲ್ಲ ಹೀಗೆ
ಇಣುಕಿ ನೋಡಿದರೆ
ಅವರವ್ವನನ್ನು ನುಂಗಿ ನೀರು ಕುಡಿದ
ಬಾವಿಯ ಬಾಯಿಗೆ
ಈಗ್ ಬೋರ್ ನೀರಿನ ಜೀವದಾನ
ಗಡಗಡಿಗಳು ತುಕ್ಕಾಗಿ
ಕೊಡದ ಕಟ್ಟೆಗಳೆಲ್ಲ ಒಡೆದು ಹೋಗಿ
ಬಾವಿ ಈಗ
ಗಣೇಶನ ಆತ್ಮಹತ್ಯೆಯ ಸ್ಥಳವಷ್ಟೇ
ಕೊಳೆತು
ಕಪ್ಪಿಟ್ಟ ನೀರೊಳಗೆ
ಬಿಂದಿಗೆಗಾಗಿ ಬಾಗಿದ
ಗೆಳತಿಯರ ನೆರಳಿಲ್ಲ
ಕಲ್ಲು ಕಲ್ಲಿನ ಮೆಲೆ ಬಿದ್ದ
ಬಳೆಚೂರು ಕಳೆದುಕೊಂಡಿವೆ ಎಲ್ಲ
ಸತ್ತು ಸ್ವರ್ಗ ಸೇರದೆ ಊರು ಸೇರಿದ
ಅಜ್ಜಿಗೆ ಹೇಳಬೇಕಿದೆ ನಾನು
ಊರಿಗೆ ಬಂದವಳು ನೀರಿಗೆ ಬರುತ್ತಿಲ್ಲ ಅಜ್ಜಿ
ನೀರಿಗೇ ಬರದವಳು
ಎದೆಯ ಮೇಲೊಂದು ನಿರಿಗೆ
ಹಾಕುವುದು ಹ್ಯಾಗೆ ಅಜ್ಜಿ?
No comments:
Post a Comment