Total Pageviews

Tuesday, June 21, 2011

ಲಿಂಗದೇವರು ಹಳೆಮನೆ : ರಂಗನಿರ್ಗಮನ

ಲಿಂಗದೇವರು ಹಳೆಮನೆ(Lingadevaru Halemane) : ರಂಗನಿರ್ಗಮನ

``ನಾನು ಶಿವಮೊಗ್ಗದಲ್ಲಿದ್ದೀನಿ. ಅದೇ ಮಾಮೂಲೂ ಲಾಡ್ಜ್‌ನಲ್ಲಿ ಇದೀ ತಾನೆ? ಇನ್ನೂ ಎಷ್ಟು ದಿನ ಇರ್‍ತಿಯಾ? ನಾಳೆ-ನಾಡಿದ್ದು ಸೇರಿದ್ರಾಯ್ತು.”
ಹಳೆಮನೆಯವರ ನನ್ನೊಂದಿಗಿನ ಕೊನೆಯ ಮಾತುಗಳಿವು. ಅದೇ ರಾತ್ರಿ, ೧೨ರ ಆಸುಪಾಸಿನಲ್ಲಿ ಹಳೆಮನೆ ವಿಧಿವಶ. ಗೆಳೆಯ ಹಾಲತಿ ಸೋಮಶೇಖರ್, `Halemane is no more’ ಎನ್ನುವ smsನ್ನು ನನಗೆ ರವಾನಿಸಿದ್ದು ಅದೇ ರಾತ್ರಿ ೩ ಗಂಟೆ ೩೯ ನಿಮಿಷಕ್ಕೆ. ಆದರೆ ಅದನ್ನು ಗಮನಿಸಿದ್ದು ನಾನು ಮುಂಜಾವು ೫.೩೦ ನಿಮಿಷಕ್ಕೆ. ಒಂದು ಕ್ಷಣ ತಬ್ಬಿಬ್ಬು. ಇನ್ನೊಂದು ಕ್ಷಣ ನನ್ನಿಂದ ಏನೋ ತಪ್ಪಾಯಿತೆನ್ನುವ ಅಸಹ್ಯ, ಮತ್ತೊಂದು ಕ್ಷಣ ಎಲ್ಲ ಖಾಲಿಯಾದ, ಕೊನೆಯಾದ ಏನೋ, ಇನ್ನೇನ್ನೇನೋ.... ಶಬ್ದಕ್ಕೆ ಮೀರಿದ್ದು. ಮೌನದೊಳಗೆ ಮಿಡುಕಾಡಿದ್ದು.
ಎದ್ದವನೇ, ಇನ್ನು ತಡವಾಗುವುದು ಬೇಡ ಎಂದು ಕಾರು ದೌಡಿಸಿಕೊಂಡು ಕನಕದಾಸ ನಗರದ ಅವರ ಮನೆಯೆಡೆಗೆ ಹೊರಟೆ. ಮನೆಯ ಮುಂದೆ ರಾತ್ರಿಯೆಲ್ಲ ಸುಟ್ಟು ತಣ್ಣಗಾಗಿದ್ದ ಬೆಂಕಿ, ಬೂದಿ, ಅರೆಸುಟ್ಟ ಕಟ್ಟಿಗೆಗಳು, ಗೆಳೆಯ ಹಾಲತಿ, ಉಮೇಶ್, ರಮೇಶ್, ಹಳೆಮನೆಯವರ ಇಬ್ಬರೂ ಪುತ್ರಿಯರಾದ ಭೂಮಿಕಾ, ನಿಹಾರಿಕಾ, ಪತ್ನಿ ನಂದಾ ಹಾಗೂ ಕೆಲವು ಜನರನ್ನು ಹೊರತುಪಡಿಸಿದರೆ ಹೆಚ್ಚಿಗೆ ಜನರಿರಲಿಲ್ಲ. ಅಪೋಲೊ ಆಸ್ಪತ್ರೆಯ ಶೈತ್ಯಡಬ್ಬಿಯಲ್ಲಿ ಹಳೆಮನೆ ನಿರಾಳವಾಗಿದ್ದರು. ಆ ಕ್ಷಣದಲ್ಲಿ ಅವರು, ಶರೀಫನ ಸಾಲುಗಳಲ್ಲಿ ಹೇಳಬೇಕೆಂದರೆ, `ಹಳೆಮನೆ’, `ಗಂಟೆ ಬಾರಿಸಿದಂತೆ ಖಾಲಿ ಮನೆ’. ಮುಖಕ್ಕೊಂದು ವಿಲಕ್ಷಣವಾದ, ಶಾಂತ, ಸಮಾಧಾನದ ಮುದ್ರೆಯಿತ್ತು. ಬಕ್ಕುತಲೆಯಿಂದ ಪಾದಗಳವರೆಗೆ ನಿಶ್ಚಲವಾಗಿದ್ದ, ಹಳೆಮನೆಯವರ, ಈ ಪ್ರಪಂಚದಲ್ಲಿ ಮತ್ತೆ ಇನ್ನೆಂದೂ ಮರುಕ್ರಿಯೆಗೊಳಪಡಲಾರದ ನಿಶ್ಚಲ ದೇಹವನ್ನು ನೋಡಿದೆ, ನೋಡುತ್ತಲೇ ಇದ್ದೆ, ಮತ್ತೆ ವಿಧಿಯಿಲ್ಲದೆ ಸರಿದುಬಿಟ್ಟೆ.
`ಮನೆಯ ಒಳಕೋಣೆಯಲ್ಲಿ ಸುಜಾತಾ ಅಕ್ಕಿ, ಚಿದಾನಂದ ಸಾಲಿಯವರ ನಾಟಕಗಳ ಕೈ ಬರಹಗಳು ಮುನ್ನುಡಿಗಾಗಿ ಕಾಯುತ್ತಿವೆ, ಪ್ರಶಸ್ತಿ, ಪುರಸ್ಕಾರಗಳೆಲ್ಲಾ ತಬ್ಬಲಿಯಾಗಿವೆ, ash tray ನಿನ್ನೆ ರಾತ್ರಿ ಬಿದ್ದ ಅರ್ಧ ಸುಟ್ಟ ಸಿಗರೇಟು ಇನ್ನೂ ಕಸದ ಗುಂಡಿಯನ್ನು ಸೇರಿಲ್ಲ. ಆದರೆ ದೇಹ ಮಣ್ಣಿಗೆ ಈಗ ಸಿದ್ಧವಾಗಿದೆ. ಇನ್ನೊಂದು ಕ್ಷಣ ಅಲ್ಲಿರಬಾರದು ಎನ್ನಿಸಿಬಿಟ್ಟಿತು. ಬಂದು ತಣ್ಣಗೆ ಕುಳಿತುಬಿಟ್ಟೆ. ಅದು ಶಬ್ದ ಸತ್ತ ಘಳಿಗೆ... ಹಳೆಮನೆ ತೀರಿದರು ಎನ್ನುವ ಸತ್ಯವನ್ನು ನಿಶ್ಚಲ ದೇಹವನ್ನು ನೋಡಿದ ನಂತರವೂ ಮನವರಿಕೆಗೊಳ್ಳದ ನಾನು ಇನ್ನೊಬ್ಬರಿಗೆ ಹೇಳುವುದಂತೂ ದೂರದ ಮಾತು.
ಭಾಷೆಯನ್ನು ಕುರಿತು ಮಾತನಾಡುವಾಗಲೆಲ್ಲಾ ಅಲ್ಲಮನ ಒಂದು ಸಾಲನ್ನು ಹಳೆಮನೆ ಪದೇ ಪದೇ ಹೇಳುತ್ತಿದ್ದ ನೆನಪು. ``ಪದವನರ್ಪಿಸಬಹುದಲ್ಲದೆ  ಪದಾರ್ಥವನ್ನರ್ಪಿಸಲಾಗದು.” ಈಗ ಈ ಮಾತನ್ನು ಬದಲಿಸಿ ನಾನು ಹೇಳಬೇಕು, `ಪದವನ್ನೂ ಅರ್ಪಿಸಲಾಗದು ಹಳೆಮನೆಯವರೆ.’ ಪದ, ಪದಾರ್ಥಗಳೆಲ್ಲವೂ ಮೌನದೀಚೆಗಿನ ವ್ಯಾವಹಾರಿಕ ತಳಮಳಗಳಷ್ಟೇ. ಅದನ್ನು ಮೀರಿದ ಮೇಲೆ ಮೌನದ್ದೇ ಸಾಮ್ರಾಜ್ಯ.
ಈಗ ನೆನಪೆಂಬ ಭೃಂಗದ ಬೆನ್ನೇರಿ ಹಿಂದೆ ಹೋಗಬೇಕು ನಾನು. ನಮ್ಮ ಸ್ನೇಹಕ್ಕೆ ೧೧ ವರ್ಷಗಳ ಆಯಸ್ಸು. `ಗುರುಗಳೇ’, ಎಂದು ನನ್ನ ಸಂಭೋದನೆಯಾದರೆ, `ಏನಯ್ಯಾ ಶಿಷ್ಯಾ’ ಎನ್ನುವ ಗೌಡಿಕೆಯ ಪ್ರಶ್ನೆ ಅವರದು. ಸ್ವಲ್ಪ ಸಿಟ್ಟಾಯಿತೋ, `ಅಯೋಗ್ಯ ನೀ ಈ ಜನ್ಮದಲ್ಲಿ ಸರಿ ಹೋಗೊಲ್ಲಾ’. ಇದು ಹಳೆಮನೆ. ಜಗಳ, ಪ್ರೀತಿ, ಆಕ್ರಮಣ, ಎಲ್ಲವೂ ನೇರಾನೇರ. ಹಳೆಮನೆಯ ಸ್ನೇಹ ಮತ್ತು ಬೌದ್ಧಿಕ ಸೌಂದರ್ಯದಲ್ಲಿ, ಅವರ ಉಡಾಪೆ ಗಮನಕ್ಕೆ ಬಾರದೆ ಹೋಯಿತು. ೨೦೦೧ರ ಆಸುಪಾಸಿನಲ್ಲಿ ಬದುಕಿಗೊಂದು ನೆಲೆಯನರಸುತ್ತಾ ನಾನು ಮೈಸೂರಿಗೆ ಬಂದೆ. ಭಾರತೀಯ ಭಾಷಾ ಸಂಸ್ಥೆ (CIIL)ಯ, ಡಾ.ಮಾರುತಿ ತಳವಾರ ನನಗೊಂದು ತಾತ್ಕಾಲಿಕ ನೆಲೆಯನೊದಗಿಸಿದರು. ಅದೇ ಸಂಸ್ಥೆಯ ಹಳೆಮನೆ ಎಂಬ ಅಡ್ಡ ಹೆಸರಿನ ಈ ಮನುಷ್ಯ ನನಗೆ ಆಕರ್ಷಕವಾಗಿ ಕಾಣಲು ಉತ್ತರ ಕರ್ನಾಟಕದ ಹಿನ್ನೆಲೆಯೇ ಕಾರಣ. ಇವರ್‍ಯಾರೋ ನಮ್ಮ ಕಡೆಯವರಿದ್ದಂತಿದ್ದಾರೆ, ಅದೃಷ್ಟವನ್ನು ಪರೀಕ್ಷಿಸಿಕೊಳ್ಳೋಣ ಎಂದು ನನ್ನ ಸ್ವವಿವರವನ್ನು ಅವರ ಮುಂದಿಟ್ಟೆ. ಸಿಗರೇಟು ಎಳೆಯುತ್ತಾ ಮುಕ್ತವಾಗಿ ನಗುತ್ತಾ, ತಮ್ಮ ಕಪ್ಪೆ ಮೂಗಿನ ಮೇಲೆ ಮತ್ತೆ ಮತ್ತೆ ಕೈಯಾಡಿಸಿಕೊಳ್ಳುತ್ತಾ ಗಟ್ಟಿಯಾಗಿ ಕುಳಿತುಕೊಂಡಿರುತ್ತಿದ್ದ ಈ ಲಿಂಗದೇವರ ಸುತ್ತ ನಾನು ಪ್ರದಕ್ಷಿಣೆ ಹಾಕಿದ್ದು ಒಂದು ವಾರವಷ್ಟೇ. ಆನಂತರ ಅವರು ನನ್ನನ್ನು ಸಾಕ್ಷರತಾ ಪುಸ್ತಕ ಆಯ್ಕೆ ಮಂಡಳಿಯ ಸದಸ್ಯನಾಗಿ ಬೆಂಗಳೂರಿಗೆ ಕಳುಹಿಸಿದರು. ಸುಮಾರು ಒಂದು ತಿಂಗಳ ಕೆಲಸ. `ಸದ್ಯ ಇದನ್ನು ಮಾಡಿಕೊಂಡಿರು, ಬರುವುದರೊಳಗಾಗಿ ಪ್ರೊಜೆಕ್ಟ್ ಗ್ರ್ಯಾಂಟ್ ಆಗಿರುತ್ತದೆ, ಕೆಲಸ ಮಾಡುವಿಯಂತೆ.’ ಸರಿ, ನಾನು ಬೆಂಗಳೂರಿಗೆ ಹೊರಟೆ. ಅದು ಹಳೆಮನೆ ತೋರಿಸಿದ ಹಾದಿಯ ಮೇಲೆ ನನ್ನ ಮೊದಲ ಪ್ರವಾಸವಾಗಿತ್ತು, ಪ್ರಯತ್ನವಾಗಿತ್ತು.
ಹೆಸರು ಮಾತ್ರ ಹಳೆಮನೆ(Lingadevaru Halemane), ಅವರ ಪಕ್ಕದಲ್ಲಿರುವವರೆಲ್ಲಾ ಯುವಕರೇ, ಹೊಸಬರೇ. ಚೆಂದದ ಹುಡುಗಿಯರಿಗಾಗಿ ಒಂದಿಷ್ಟು ವಿಶೇಷ ಆಕರ್ಷಣೆ, ಪ್ರೀತಿಯಿತ್ತು ಹಳೆಮನೆಯರಲ್ಲಿ. ಗುಣಗ್ರಾಹಿ ಆಗಿದ್ದರು. ಅವರ ಬೋಳು ತಲೆ ಎನ್ನುವುದು ಸಾವಿರಾರು ಯೋಜನೆಗಳ CPU. ಜೀವಂತಿಕೆಯ ಮನುಷ್ಯ. ಎಗ್ಗಿಲ್ಲದೇ ಬದುಕುವುದು, ಕುಡಿಯುವುದು, ಓದುವುದು, ತಿರುಗಾಡುವುದು ಅವರ ಜೀವನ ಶೈಲಿಯಾಗಿತ್ತು. ಯಾವುದಕ್ಕೂ ಪ್ರಾಮಾಣಿಕವಾಗಿ ಹಂಬಲಿಸುತ್ತಿದ್ದರು ಹಳೆಮನೆ. ಈ ಹಳೆಮನೆಯೆಂದರೆ ನನ್ನ ಪಾಲಿಗೆ ಹಂಬಲ ಮತ್ತು ಬೆಂಬಲ.
ನಾನು ಹೋದ ಹದಿನೈದು ದಿನಗಳ ನಂತರ ಹಳೆಮನೆ ಬೆಂಗಳೂರಿಗೆ ಬಂದರು. ಮದನ್‌ಗೋಪಾಲರೊಂದಿಗೆ ನನ್ನೆದುರು ಕುಳಿತು ಸದಸ್ಯರನೆಲ್ಲಾ ಉದ್ದೇಶಿಸಿ ಒಂದು ಭಾಷಣ ಬಿಗಿದು ಹೊರಟ ಬೈರಾಗಿ. ಕುಟುಂಬದಿಂದ ಭಾವನಾತ್ಮಕವಾಗಿ ಬೇರುಗಡಿತನಾಗಿದ್ದ ನಾನು ಅವರಲ್ಲಿಯೇ ಎಲ್ಲವನ್ನು ಕಂಡುಕೊಂಡಿದ್ದೆ. ನಾನೂ ಹೊರಟೆ ಅವರ ಬೆನ್ನು ಹತ್ತಿ. ಮಧ್ಯಾಹ್ನದ ಎರಡು ಗಂಟೆ, ಅಗ್ರಹಾರ ಕೃಷ್ಣಮೂರ್ತಿ ಸಿಕ್ಕರು. ಒಂದು ಚಿಕ್ಕ ಪಾನಗೋಷ್ಠಿಯಾಯಿತು. ಅಲ್ಲಿಂದ ಮತ್ತೆ ರವೀಂದ್ರ ಕಲಾಕ್ಷೇತ್ರದೆಡೆಗೆ. ಮರದ ಕೆಳಗೆ ನಿಂತುಕೊಂಡು ಇಬ್ಬರೂ ಅಶೋಕ್ ಬಾರಿದೋಟರ ನಾಟಕಗಳನ್ನು ನೋಡಿ ಮತ್ತೆ ನಿರ್ಗಮಿಸಿದೇವು. ಸಿಗರೇಟು ಪ್ಯಾಕೇಟ್ ಖಾಲಿಯಾಯಿತು. ಮುಂಜಾನೆಯಿಂದ ಹಳೆಮನೆಯವರಿಗೆ ನನ್ನೊಂದಿಗೇನೋ ವಿಶೇಷ ಮಾತನಾಡಬೇಕಿತ್ತು. ಗಕ್ಕನೇ ನಿಂತು ``ಜೇಬಿನಲ್ಲೆಷ್ಟು ದುಡ್ಡಿದೆಯೋ?’’ ಎಂದರು. ನೂರೋ, ಇನ್ನೂರೋ ತೆಗೆದು ತೋರಿಸಿದೆ. ಒಂದು ಜೋರಾದ ನಗೆ ನಕ್ಕು, ``ಇದರಿಂದ ಏನು ಆಗುವುದಿಲ್ಲ ಬಿಡೋ’’, ಎನ್ನುತ್ತಾ ತಕ್ಷಣ ಸಿಡಿಮಿಡಿಗೊಂಡರು. ``ನನ್ನ ಮಗಳು ಭೂಮಿ ಇದಾಳಲ್ಲ, ಅವಳ ಸಲುವಾಗಿ ಸಾಕಾಗಿ ಹೋಗಿದೆ. ಜೇಬಿನಿಂದ ದುಡ್ಡು ತೊಗೊಂಡ ಮೇಲೆ ಅದನ್ನ ನನಗೆ ಹೇಳೊದಲ್ವೇ? ಈಗ ನನ್ನ ಗತಿ ನೋಡು?’’ ಹಳೆಮನೆಯವರಿಗೆ ದುಡ್ಡು ಬೇಕಾಗುತಿತ್ತು. ಅವರದು ಬಡವರ ಬದುಕಲ್ಲ, ಇರುವಾಗ ಹೊಟ್ಟೆ ತುಂಬಾ ಉಂಡು, ಹಂಚಿ, ತೂರಾಡಿ ಜಾತ್ರೆ ಮಾಡುವ ಜಾಯಮಾನ. ``ಹಳೆಯ ಪುಸ್ತಕದ royalty ಒಂದು ಬರೋದಿದೆ ನವಕರ್ನಾಟಕದಿಂದ, ಅದೃಷ್ಟ ಪರೀಕ್ಷಿಸಿಕೊಳ್ಳೋಣ ನಡೆ ಕಣೋ’’ ಎಂದು ನವಕರ್ನಾಟಕದೆಡೆಗೆ ನನ್ನನ್ನು ಕರೆದುಕೊಂಡು ಹೋದರು. ಅವರೋ, ಇವರಿಗಾಗಿಯೇ ಕಾಯುತ್ತಿದ್ದರು ಎನ್ನುವಂತೆ, ಹತ್ತು ಸಾವಿರ ರೂಗಳನ್ನು ಹಳೆಮನೆಯವರ ಕೈಗಿಟ್ಟುs thanks ಹೇಳಿ, ಬೀಳ್ಕೊಟ್ಟರು. ಸಿಕ್ಕಿದೆಲ್ಲವೂ ಮೃಷ್ಟಾನ್ನ ಎಂದು ಜೋಳಿಗೆಗೆ ಸುರಿದುಕೊಳ್ಳುವ ಜಂಗಮನಂತೆ ಬ್ಯಾಗಿನಲ್ಲಿ ದುಡ್ಡಿಟ್ಟುಕೊಂಡು ಅವರು ನನ್ನನ್ನು ಕರೆದುಕೊಂಡು ಹೋದದ್ದು ಬೆಂಗಳೂರಿನ ಪ್ರಸಿದ್ಧ `ಕಂದಕೂರ್’ ಊಟದ ಮನೆಗೆ. ಆ `ಕಂದಕೂರ್ ಬಾಳೆ ಎಲೆ ಊಟದ ಬಗ್ಗೆ ಅವರಿಗೆ ಎಲ್ಲಿಲ್ಲದ ಅಭಿಮಾನ. ಗಡದ್ದಾಗಿ ಊಟ ಮಾಡಿ, ಗುಡಾಣ ಹೊಟ್ಟೆಯ ಮೇಲೆ ಕೈಯಾಡಿಸಿಕೊಳ್ಳುತ್ತಾ, ಸಿಗರೇಟು ಎಳೆದು ``ಊರಿಗೇನಾದ್ರು ಹೋಗ್ತೀಯಾ?’’ ಎಂದು ಪ್ರಶ್ನಿಸಿದರು. ನಾನು ಮೌನವಾದೆ. ಅವರು ಬೆಂಗಳೂರಿನ ಬಸ್‌ಸ್ಟ್ಯಾಂಡಿಗೆ ನನ್ನೊಂದಿಗೆ ಬಂದು, ಬಸ್ಸು ಹತ್ತಿಸಿ, ಸಾವಿರ ರೂಪಾಯಿಗಳನ್ನು ನನ್ನ ಕೈಗಿಟ್ಟು, `ಹೋಗಿ ಬಾ’ ಎಂದು ಹೇಳುತ್ತಾ ಹೊರಟುಹೋದರು.
ಬಹುತೇಕ ಈ ಸಾವಿನಲ್ಲಿಯೂ ಅವರು ಹೀಗೆಯೇ ಹೊರಟುಹೋದರು. ಕಾಲು ಕೆದರಿ ಜಗಳ ಕಾಯುತ್ತಿದ್ದ ಹಳೆಮನೆ, ನನಗೆ ನಿರ್ಮೋಹಕ್ಕೂ ಆದರ್ಶ. ಮನುಷ್ಯನಾಗಿದ್ದ ಹಳೆಮನೆಯವರ ಹಳೆಯ ಬದುಕಿನಲ್ಲಿ ಅದೆಷ್ಟೋ ದೀರ್ಘ ಸಂಬಂಧಗಳು, ಮಧ್ಯದಲ್ಲಿಯೇ ಕೈ ತಪ್ಪಿವೆ. ಗೋಳಾಡಿಸಿ, ಹೈರಾಣು ಹಾಕಿ, ಅಟ್ಟಾಡಿಸಿ ಅವರನ್ನು ಗಟ್ಟಿಗೊಳಿಸಿದ್ದವೇನೋ. ಹೀಗಾಗಿ ಹೋರಾಟಕ್ಕಾಗಿ ಹೋರಾಡುತ್ತಿದ್ದ ಹಳೆಮನೆ ನಿರ್ಮೋಹ ಸಾಧಿಸಿಕೊಂಡಿದ್ದರು.
ಅವರು ಸಾಗಿ ಬಂದ ದಾರಿಯೂ ಸರಳರೇಖೆಯದ್ದಲ್ಲ. ಯಾವ ರಾಜಕೀಯ ಅಥವಾ ದೊಡ್ಡ ಶೈಕ್ಷಣಿಕ ಹಿನ್ನೆಲೆಯಿಲ್ಲದ, ಸಾಮಾನ್ಯ ರೈತಾಪಿ ಕುಟುಂಬದಿಂದ ಬಂದ ಹಳೆಮನೆ, ತನ್ನ ಸ್ವಸಾಮರ್ಥ್ಯದಿಂದ ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಅಸ್ತಿತ್ವವನ್ನು ಬೆಳೆಸಿಕೊಂಡಿದ್ದರು. ಭಾಷಾ ವಿಜ್ಞಾನವನ್ನು ಅಭ್ಯಸಿಸಿ, ಭಾರತೀಯ ಭಾಷಾ ಅಧ್ಯಯನ ಸಂಸ್ಥೆ (CIIL)ಯಲ್ಲಿ ಸೇರಿಕೊಂಡು, ಅಲ್ಲಿದ್ದುಕೊಂಡೇ ಪತ್ರಿಕೋದ್ಯಮ, ರಂಗಭೂಮಿ, ಜನಪರ ಚಳುವಳಿಗಳು, ಸಿನಿಮಾ ಮತ್ತು ಸಾಹಿತ್ಯಕ್ಕೆ ತೊಡಗಿಸಿಕೊಂಡರು. ಕನ್ನಡ ಎಂ.ಎ. ಮಾಡಿ ಆರು ಚಿನ್ನದ ಪದಗಳನ್ನು ಪಡೆದರು. ನಾನು ಗಮನಿಸಿದಂತೆ ಭಾಷಾ ಸಂಸ್ಥೆ, ಸಂಶೋಧನೆಗಾಗಿ ಮೀಸಲಾಗಿರುವ ಒಂದು ಸರ್ಕಾರಿ ಅಂಗ. ಹಳೆಮನೆಯವರನ್ನು ಹೊರತುಪಡಿಸಿ ಉಳಿದ್ಯಾವ ಸಂಶೋಧಕರೂ ಸಾಮಾಜಿಕ ಚಿಂತನೆಗಳಿಗೆ ತೊಡಗಿಸಿಕೊಂಡ ಉದಾಹರಣೆಗಳಿಲ್ಲ. ಆದರೆ ಹಳೆಮನೆಯವರ ದಾರಿ ಭಿನ್ನವಾಗಿತ್ತು. ಒಂದು ಕಾಲಕ್ಕೆ ಮೈಸೂರಿನ ದಾಸ್‌ಪ್ರಕಾಶ್ ಹೋಟೆಲ್‌ನ ಕಾರ್ಮಿಕರ ಹಕ್ಕುಗಳಿಗಾಗಿ ಬೀದಿಗಿಳಿದರು, ಜನಪರ ರಂಗಭೂಮಿಗಳಾದ IPಖಿಂ, ಸಮುದಾಯ, ಬೀದಿ ನಾಟಕಗಳ ಮೂಲಕ ಸಮಾಜದೊಂದಿಗೆ ಅನ್ಯೋನ್ಯ ಸಂಬಂಧ ಬೆಳೆಸಿಕೊಂಡರು. ಸಮಕಾಲೀನ ಸಾಮಾಜಿಕ, ರಾಜಕೀಯ, ವಿದ್ಯಮಾನಗಳನ್ನೆತ್ತಿಕೊಂಡು ರಾಜಶೇಖರ ಕೋಟಿಯವರ `ಆಂದೋಲನ’ಕ್ಕೆ ನಿರಂತರ ಐದು ವರ್ಷ ಅಂಕಣಗಳನ್ನು ಬರೆದರು. ರಾಜ್ಯ ಸಾಕ್ಷರತಾ ಮಿಷನ್ನಿನ ಕರ್ಣಧಾರತ್ವ ವಹಿಸಿಕೊಂಡು ರಾಜ್ಯವನ್ನು ಹತ್ತಾರು ಸಾರಿ ಸುತ್ತಿ ಬಂದರು. ಹಳೆಮನೆ ರಾಜ್ಯವಾಪಿಯಾಗಿದ್ದರು.
ಮೊದಲ ದಾಂಪತ್ಯದ ತೊಡಕುಗಳು, ಆಕ್ಸಿಡೆಂಟ್‌ಗಳು, ವಿರೋಧಗಳು ಅದೆಷ್ಟೋ ಬಾರಿ ಹಳೆಮನೆಯವರನ್ನು ಮುಟ್ಟಿಸಬೇಕಾದ ಗುರಿಗೆ ಮುಟ್ಟಿಸಲಿಲ್ಲ. ಈ ಮಧ್ಯ ಒಮ್ಮೆ `CIIL’ದ, ಮತ್ತೊಮ್ಮೆ `ರಂಗಾಯಣ’ದ ನಿರ್ದೇಶಕರೆಂದು ಅಧಿಕೃತವಾಗಿ ಘೋಷಣೆಯಾಗಿಯೂ ಅಧಿಕಾರ ಕೈಗೆ ಸಿಗಲಿಲ್ಲ. ಹಲವು ಕಾರಣಗಳಿಂದ ಯಾವ ಬಡ್ತಿಯನ್ನು ಪಡೆಯದೇ ನಿಶ್ಚಲವಾದ ಹಳೆಮನೆ ಈ ಶಾಪವನ್ನೇ ವರವನ್ನಾಗಿಸಿಕೊಂಡರು. ಮೈಸೂರಿನ, ನಾಡಿನ, ಎಲ್ಲ ಸಂಘ-ಸಂಸ್ಥೆಗಳೊಂದಿಗೆ ತಾವಿದ್ದ ಸ್ಥಳದಿಂದಲೇ ಸಂಪರ್ಕವೇರ್ಪಡಿಸಿಕೊಂಡರು. ನಿರಂತರವಾಗಿ ಬರೆದರು. ಮುಂಜಾನೆ ೧೦ ಗಂಟೆಗೆ ಭಾಷಾ ಸಂಸ್ಥಾನಕ್ಕೆ ಬಂದು ಬರೆಯಲು ಕುಳಿತುಕೊಳ್ಳುತ್ತಿದ್ದ ಹಳೆಮನೆ ಸಾಯಂಕಾಲದ ಐದು ಗಂಟೆವರೆಗೂ ಕುಳಿತ ಸ್ಥಳದಿಂದ ಕದಲುತ್ತಿರಲಿಲ್ಲ. ಮಧ್ಯ ಎರಡು ಗಂಟೆಗೆ ಊಟ, ಟೀ ಮತ್ತು ನಿರಂತರವಾಗಿ ಸಿಗರೇಟ್. ಬಹುತೇಕ ಯಾರೂ ಮತ್ಸರಪಡಬಹುದಾದಷ್ಟು ಪ್ರತಿಭೆ, ಜೀವನಸೌಂದರ್ಯ, ಕಾರ್ಯಕ್ಷಮತೆ, ದೇವರು ಈ ಲಿಂಗದೇವರಿಗೆ ಧಾರೆ ಎರೆದಿದ್ದ.
ಭಾಷಾ ಸಂಸ್ಥಾನದಲ್ಲಿ ಅವರ ಕೋಣೆಗೆ Directorರರಿಗಿಂತಲೂ ಹೆಚ್ಚಿನ ಸಂದರ್ಶಕರಿರುತ್ತಿದ್ದರು. ಪಾಪ ಪೋಸ್ಟ್‌ಮನ್‌ನಂತೂ ಇವರ ಪೋಸ್ಟಿನ ಹೊರೆ ಹೊತ್ತೇ ಸುಸ್ತಾಗಿರಬಹುದು. ಐದು ಗಂಟೆಗೆ ನೇರವಾಗಿ ಅಲ್ಲಿಂದ ರಂಗಾಯಣಕ್ಕೆ. `ಭಾಷಾ ಸಂಸ್ಥಾನ’ ಅವರ ಬುದ್ಧಿ ಮತ್ತು ಬದುಕಿನ ಆಕರವಾಗಿದ್ದರೆ `ರಂಗಾಯಣ’ ಹಳೆಮನೆಯವರ ಹೃದಯದ ಹಂಬಲ. ರಾತ್ರಿಯಾದರೇ ಜಾತ್ಯಾತೀತವಾಗಿ, ವಯಸ್ಸಿನ ಗಣನೆಯಿಲ್ಲದೆ, ಲಿಂಗಭೇದವಿಲ್ಲದೇ, ಶುರುವಾಗುತಿತ್ತು ಲಿಂಗದೇವರ ಗೋಷ್ಠಿ. ಒಂದಂತೂ ಹೇಳಬಲ್ಲೆ, ಅವರ ಪಾನಗೋಷ್ಠಿಗಳು ನಮ್ಮ ವಿಶ್ವವಿದ್ಯಾಲಯದ ಪಾಠ ಪ್ರವಚನಗಳಿಗಿಂತ ಆದೆಷ್ಟೋ ಮೇಲಾಗಿರುತ್ತಿದ್ದವು. ಹೀಗೊಂದು ರಾತ್ರಿ ಮಾತು ಮತ್ತು ಮದಿರೆಯ ಜಾತ್ರೆಯಲ್ಲಿದ್ದ ನಾವು ಸಮಯ ನೋಡಿಕೊಂಡಾಗ ೨ ಗಂಟೆ. ಅಂದು ಹಳೆಮನೆಯವರ ಹೆಂಡತಿ ನಂದಾ ಮನೆಯಲ್ಲಿರಲಿಲ್ಲ. ಏನಿದ್ದರೂ ಹಳೆಮನೆಯವರೇ ನನಗೆ ಊಟ ಬಡಿಸಬೇಕು. ಅನ್ನದ ಪಾತ್ರೆ ಎತ್ತಿಕೊಂಡು ನನಗೂ, ತಮಗೂ ಅನ್ನ ಬಡಿಸಿದ ಹಳೆಮನೆಯವರಿಗೆ ಆ ರಾತ್ರಿ ಸಾಂಬಾರಿರುವ ಪಾತ್ರೆಯೇ ಸಿಗಲಿಲ್ಲ. ಸರಿ, ಏನೋ ಒಂದನ್ನು ಹಾಕಿಕೊಂಡು ಊಟ ಮುಗಿಸಿದೆವು. ಮುಂಜಾನೆ ಎದ್ದು ನೋಡಿದರೆ ಸಾಂಬಾರ್ ಪಾತ್ರೆ ಅವರ ಊಟದ ತಟ್ಟೆಯ ಕೆಳಗಡೆಯೇ ಇದೆ. ಆ ದಿನ ಅವರಂದದ್ದು ನೆನಪು. ``ಶಿಷ್ಯ, ವಯಸ್ಸಾಯ್ತು ಕಣೋ’’. ಆದರೆ ನೀವು ಹೇಳಿ, ಅರವತ್ತೆರಡಕ್ಕೆ ಈ ಲೋಕ ನಿರ್ಗಮಿಸಿದ ಹಳೆಮನೆಯವರಿಗೆ ನಿಜವಾಗಿಯೂ ವಯಸ್ಸಾಗಿತ್ತೇ?
ಮೈಸೂರು ಅರಸು ಮನೆತನವನ್ನು ಕುರಿತು ಸಂಸನ ನಂತರ ಬಹಳಷ್ಟು ನಾಟಕಗಳನ್ನು ಬರೆದವರು ಹಳೆಮನೆಯವರೇ ಇರಬಹುದು. ಅಂದಹಾಗೆ ಮೈಸೂರು ಪ್ಯಾಲೆಸ್‌ನ ಹೊನಲು-ಬೆಳಕಿನ ವಿನ್ಯಾಸಕಾರರೂ ಹಳೆಮನೆಯೇ ಆಗಿದ್ದರು. ಅದಕ್ಕಾಗಿ ಪತ್ರಿಕೆಯಲ್ಲಿ ಎಷ್ಟೊಂದು ಕಟು ವಿಮರ್ಶೆಯನ್ನು ಎದುರಿಸಿದರು. `ಚಿಕ್ಕದೇವ ಭೂಪ’, `ಅಂತೆಂಬರ ಗಂಡ’, `ಮದರ್ ಕರೇಜ್’, `ಡಾ.ಬೇತೂನ್’, `ಧರ್ಮಪುರಿಯ ದೇವದಾಸಿ’, ಹೀಗೆ ಹಳೆಮನೆ ನಾಟಕಗಳನ್ನು ಬರೆದರು, ಆದರೆ ಸೃಜನಶೀಲ ಬರವಣಿಗೆ ಅವರಿಗೆ ಒಗ್ಗಿತ್ತೆಂದು ಅವರ ನಾಟಕಗಳನ್ನು ಗಂಭೀರವಾಗಿ ಅಭ್ಯಸಿಸಿದ ನನಗೆ ಅನಿಸಲಿಲ್ಲ. ಶಿವಮೊಗ್ಗ ವಿಶ್ವವಿದ್ಯಾಲಯದ ಬಿ.ಎ. ವಿದ್ಯಾರ್ಥಿಗಳಿಗೆ ಅವರ `ಅಂತೆಂಬರ ಗಂಡ’ ನಾಟಕ ಕುರಿತು ಬರೆದುದ್ದರ ನೆನಪಿದೆ. ಅವರ ನಾಟಕಗಳನ್ನು ಇಟ್ಟುಕೊಂಡು ಹಂಪಿ ವಿಶ್ವವಿದ್ಯಾಲಯದಿಂದ ಪದವಿಯೊಂದನ್ನು ಪೂರೈಸಿಕೊಳ್ಳಬೇಕು ಎಂದೂ ನನ್ನ ವಿಚಾರವಾಗಿತ್ತು. ಆದರೆ ಅದೇಕೊ, ಅದ್ಯಾವುದು ಸಾಧ್ಯವಾಗಲೇ ಇಲ್ಲ. ಎರಡು ವರ್ಷದ ನನ್ನ ಮೈಸೂರು ವಾಸಕ್ಕೆ ಒಂದು ಹೊಸ ಅರ್ಥ ಒದಗಿಸಿದರು ಹಳೆಮನೆ. ನಾನು ಸಹಾಯಕ ಸಂಶೋಧಕನಾಗಿ ಕಿಕ್ಕೇರಿ ನಾರಾಯಣರ ಜೊತೆಗೆ ಕೆಲಸ ಮಾಡುತ್ತಿದ್ದರೂ ಮಾತುಗಾರಿಕೆಯಲ್ಲಿ, ಸ್ನೇಹದಲ್ಲಿ, ಕಾಯಕದಲ್ಲಿ ನನಗೆ ಹಳೆಮನೆಯವರೇ ಆದರ್ಶವಾಗಿದ್ದರು. ಹಳೆಮನೆಗೆ ಹತ್ತಿರವಾಗಲು ಇರಬೇಕಾದ ಅರ್ಹತೆ ಒಂದೇ, ದುಡಿಯುತ್ತೇನೆ ಎಂಬ ಛಲ, ಈ ಕಾರಣಕ್ಕಾಗಿಯೇ ಇರಬಹುದು, ನನ್ನನ್ನು ಮನೆಯ ಮಗನಂತೆ ನೋಡಿಕೊಂಡರು. ನಂದಾ ಮತ್ತು ಲಿಂಗದೇವರು ನನ್ನ ಜೀವನದ ಅನೇಕ ಸಾಂಸಾರಿಕ ತಿರುವುಗಳಲ್ಲಿ ಜೊತೆಯಾಗಿ ನಿಂತರು. ೨೦೦೩ರಲ್ಲಿ ನಾನು ಬಾಗಲಕೋಟೆಯ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕನಾಗಿ ಹೋಗುವುದು ಎಂದು ನಿರ್ಧಾರವಾಯಿತು. ಇವರ ಪಕ್ಕದಲ್ಲಿಯೇ ಇದ್ದುಕೊಂಡು ಏನನ್ನಾದರೂ ಮಾಡಬೇಕೆನ್ನುವ ನನ್ನ ವಿಚಾರವನ್ನು ಹಳೆಮನೆ ವಿರೋಧಿಸಿದರು. ಅವರ ವಾದವಿಷ್ಟೆ, ``CIILನಲ್ಲಿ ನಿನಗೊಂದು ನಿಶ್ಚಿತ ನೆಲೆಯನ್ನು ಒದಗಿಸುವುದಾಗುವುದಿಲ್ಲ. ಮೇಲಾಗಿ ಸಾಕಷ್ಟು ಶಕ್ಯತೆ ಇರುವ ನಿನಗೆ ಈ ಸ್ಥಳ ಸರಿಯಾದುದಲ್ಲ. ಪ್ರತಿನಿತ್ಯವೂ ಯುವಕರನ್ನು ಉದ್ದೇಶಿಸುವ ಉಪನ್ಯಾಸಕ ವೃತ್ತಿ ನಿನ್ನ ಬೆಳವಣಿಗೆಯನ್ನು ವಿಸ್ತರಿಸಬಹುದು, ಅಲ್ಲಿದ್ದುಕೊಂಡು ನೀನು ಅIIಐನೊಂದಿಗೆ ಅನೇಕ ಯೋಜನೆಗಳನ್ನು ಮಾಡಬಹುದು. ಅದಕ್ಕಾಗಿ ಇಲ್ಲಿ ನಾನಿದ್ದೇನೆ. ನೀನು ಸುಮ್ಮನೆ ಬಾಗಲಕೋಟೆಗೆ ಹೋಗತಕ್ಕದ್ದು’ ಎಂದು ದೇವರು ಆಜ್ಞಾಪಿಸಿದರು. ದೇವರ ಆಜ್ಞೆ ಮೀರುವುದುಂಟೆ?
ನುಡಿದಂತೆ ನಡೆದರು ಲಿಂಗದೇವರು. ನಾನು ಹೋದಡಗೆಲ್ಲ ಬಂದರು. ``ಈತ ನನ್ನ ಶಿಷ್ಯ, ಬಹಳ ಜೋರಾಗಿದ್ದಾನೆ,’’ ಎಂದು ಅಭಿಮಾನದಿಂದ ಹೇಳಿಕೊಂಡರು. ಆದರೆ ಅದೇನೋ ಗೊತ್ತಿಲ್ಲ, ಒಮ್ಮೆ ಬಳ್ಳಾರಿಯಲ್ಲಿ ನಾವಿಬ್ಬರು ಜಗಳವಾಡಿದ್ದು ನೆನಪಿದೆ. ಅದೊಂದು ಸಾರ್ಥಕ ಜಗಳ ಬಿಡಿ. ಎಡಪಂಥೀಯ ಆಲೋಚನೆಗಳೇನೇ ಇದ್ದರೂ ಅದು ಸಂಪೂರ್ಣ ನನ್ನ ಹಕ್ಕು ಎನ್ನುವ ಮೊಂಡುತನ ಹಳೆಮನೆಯವರಿಗೆ ಕೆಲವೊಮ್ಮೆ ಬಂದುಬಿಡುತಿತ್ತು. ಒಂದೇ ಸಮಾರಂಭಕ್ಕೆ ನಾವಿಬ್ಬರೂ ಸಂಪನ್ಮೂಲ ವ್ಯಕ್ತಿಗಳಾಗಿ ಹೋಗಿದ್ದೆವು. ಕಾರ್ಯಕ್ರಮ ಮುಗಿಯಿತು, ಸಾಯಂಕಾಲದ ನಮ್ಮ ಪಾನಗೋಷ್ಠಿ ಶುರುವಾಯಿತು. ಜಗಳಕ್ಕೆ ಕಾರಣನಾದವನು ಅಲ್ಬರ್ಟ್ ಕಾಮು. ಕಾಮುವಿನ ‘Out sider’ ಕಾದಂಬರಿಯನ್ನು ನಾನು MA ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದೇನೆ ಎಂದು ನಾನು ಹೇಳಿದ್ದೇ ತಡ, ``ನೀನೇನೊ ಕಾಮುವನ್ನು ಪಾಠ ಮಾಡ್ತಿಯಾ? ಮೊದಲು ಅದು ನಿನಗೇ ಚೆನ್ನಾಗಿ ಅರ್ಥವಾಗಿದೆಯಾ ನೋಡಿಕೊ,’’ ಎಂದು ನನ್ನನ್ನು ತಣ್ಣಗಾಗಿಸಲು ನೋಡಿದರು ಹಳೆಮನೆ. ಇದಕ್ಕೂ ಹಿಂದೆ ಎಚ್.ಆರ್.ಭಸ್ಮೆ ಎನ್ನುವ ನಾಟಕಕಾರನ್ನೊಬ್ಬನನ್ನು ಕುರಿತೂ ಅವರು ನನ್ನನ್ನು ಹೀಗೆಯೇ ಬಾಯ್ಮುಚ್ಚಿಸಿದ್ದು ಬಾಕಿ ಉಳಿದುಕೊಂಡಿತ್ತು. ಯಾವುದನ್ನೂ ಬಾಕಿ ಉಳಿಸಿಕೊಳ್ಳಬಾರದು ಎನ್ನುವುದನ್ನು ನಾನು ಚಂಪಾ ಮತ್ತು ಹಳೆಮನೆ ಅವರಿಂದಲೇ ಕಲಿತವನಾದುದರಿಂದ, ರೋಷದಿಂದ ಎದ್ದು ನಿಂತು, ``ಕಾಮುವನ್ನು ಕುರಿತು ನಿಮಗೇನು ಗೊತ್ತಿದೆ?’’ ಎಂದು, ನನಗೆ ಗೊತ್ತಿರುವುದೆಲ್ಲವನ್ನು ಮಾತಾಡಿಬಿಟ್ಟೆ. ಹಳೆಮನೆ ನೋಡುತ್ತಲೇ ಇದ್ದರು. ಮೈದಡವಿ, ಕೈಹಿಡಿದು, “ಲೋ, ಲೋ ಅಯೋಗ್ಯ, ತುಂಬಾ ಚೆನ್ನಾಗಿ ಮಾತಾಡ್ತಿ ಕಣೋ. ಚನ್ನಾಗಿ ತಿಳಕೊಂಡಿದಿಯಾ, ನಿನ್ನ ಓದನ್ನು ನಾನು ಗೌರವಿಸುತ್ತೇನೆ, ಕೂತ್ಕೊ” ಎಂದು ಕೂಡ್ರಿಸಿದರು. ಅದೇ ಕೊನೆ, ಹಳೆಮನೆ ಆನಂತರದಿಂದ ನನ್ನನ್ನು ಕಂಡ ರೀತಿಯೇ ಭಿನ್ನ. ಕುಟುಕುವ, ಛೇಡಿಸುವ, ತಕ್ಷಣ ಏನಾದರೂ ಮಾತನಾಡುವ ಅವರ ಈ ಪ್ರವೃತ್ತಿಗೆ ಹೆದರಿ ಅನೇಕ ಸೂಕ್ಷ್ಮ ಜೀವಿಗಳು ಅವರ ಪ್ರೀತಿಯಿಂದ ವಂಚಿತರಾದರು.
ಹಳೆಮನೆಯ ಓದಿನ ಹರವು ವಿಸೃತ್ತವಾಗಿತ್ತು, ಸೂಕ್ಷ್ಮವಾಗಿತ್ತು, ವೈವಿಧ್ಯಮಯವಾಗಿತ್ತು. ಕೆಲವೊಮ್ಮೆ ನನ್ನಿಂದಲೂ ಕೆಲವು ವಿಚಾರಗಳನ್ನು ಕೇಳಿ, ಆ ಕುರಿತು ಬರೆದಿದ್ದು ಉಂಟು. ಉದಾಹರಣೆಗೆ ಹೆಸರಾಂತ ಅಂಕಣಕಾರ, ಚಿತ್ರನಿರ್ದೇಶಕ, ಎಡಪಂಥಿಯ ಲೇಖಕ ಕೆ.ಅಬ್ಬಾಸರ ಮರಣಪತ್ರವನ್ನು ಅವರು ಭಾಷಾಂತರಿಸಿ ‘ಆಂದೋಲನ’ಕ್ಕೊಂದು ಅಂಕಣ ಬರೆದಿದ್ದು ನೆನಪಿದೆ.
ನಾನಿರುವಾಗ ಬಾಗಲಕೋಟೆಗೆ ಎರಡು ಬಾರಿ ಬಂದರು ಹಳೆಮನೆ. ಬಸವೇಶ್ವರ ಸೈನ್ಸ್ ಕಾಲೇಜಿನ ‘ರಾಷ್ಟ್ರೀಯ ವಿಚಾರ ಸಂಕಿರಣ’ದಲ್ಲಿ ಭಾಗವಹಿಸಿ, ನೇರವಾಗಿ ಮನೆಗೆ ಬಂದು ನನ್ನ ಮಗನೊಂದಿಗದೆಷ್ಟೋ ಹೊತ್ತು ಕಳೆದದ್ದು ನೆನಪಿದೆ. ಈ ಭಾಗ್ಯವನ್ನು ಕಳೆದುಕೊಳ್ಳಬಾರದೆಂದುಕೊಂಡ ನಾನು ತಕ್ಷಣ department ನ ನನ್ನ ವಿದ್ಯಾರ್ಥಿಗಳನ್ನು ಮನೆಯಲ್ಲಿ ಸೇರಿಸಿಬಿಟ್ಟೆ. ಒಂದು, ಎರಡು, ಮೂರು ಬೀರುಗಳನ್ನು ಹೀರುತ್ತಾ, ಆ ಮಧ್ಯಾಹ್ನದಲ್ಲಿ ನನ್ನ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು  feminisium ಕುರಿತು ಮಾತನಾಡಿದ್ದನ್ನು ಹೇಗೆ ಮರೆಯಲಾದೀತು? ಇದು ಜರುಗಿ ಮೂರು ವರ್ಷವೂ ಗತಿಸಿಲ್ಲ. ಅವರ ಆ ಅವಸ್ಥೆಯಲ್ಲಿಯೂ ಬಾಗಲಕೋಟೆಯಿಂದ ಬೀಳಗಿಗೆ two wheeler ಮೇಲೆ ಕರೆದುಕೊಂಡು ಹೋಗಿ ಒಂದುಕಡೆ ನಿಲ್ಲಿಸಿದೆ. “ಇದೇನೋ? ಇಲ್ಲಿ ಕರೆದುಕೊಂಡು ಬಂದಿದಿಯಾ? ಇಲ್ಲೇನಿದ ನೋಡಲಿಕ್ಕೆ?” ಎಂದು ಅವರು ನುಡಿಯುವುದರೊಳಗಾಗಿ ಅವರಿಗೆ ಕೆಳಗೆ ನೋಡಲು ಸೂಚಿಸಿದೆ. ಗಾಬರಿಯಾದರು ಹಳೆಮನೆ! ನಮ್ಮ ಇತಿಹಾಸದ ಅವಜ್ಞೆಗೊಂದಿಷ್ಟು ಶಾಪ ಹಾಕಿದರು. ಯಾಕೆಂದರೆ ಅವರು ನಿಂತದ್ದು ಯಾವ ಕನಿಷ್ಠ ರೂಪರೇಷೆಯೂ ಇಲ್ಲದ ‘ಸಿಂಧೂರ ಲಕ್ಷ್ಮಣ’ನ ಸಮಾದಿಯ ಪಕ್ಕ. ಕಲ್ಲು ಹಾಸೊಂದರ ಮೇಲೆ ‘ಸಿಂಧೂರ ಲಕ್ಷ್ಮಣನ ಸಮಾದಿ, ‘ಜನನ ಮತ್ತು ಮರಣ’ ವಿವರ ಬಿಟ್ಟರೆ ಅಲ್ಲಿ ಮತ್ತೇನೂ ಇರಲಿಲ್ಲ. ಹೀಗೆ ಹಳೆಮನೆಯವರನ್ನು ನಾನು ಸುತ್ತಿಸಿದ್ದು, ಕಾಡಿದ್ದು, ಮತ್ತು ಪೀಡಿಸಿದ್ದು. ಮನುಷ್ಯ ಪ್ರೀತಿಯಾಗಿಯೋ, ಮಮತೆಯಾಗಿಯೋ ಹೀಗೊಂದು ಸುಖವಾದ ಪೀಡನೆಯನ್ನು ನೀಡದೆ ಹೋದರೆ ಮೂಳೆ-ಮಾಂಸಗಳ ಒಂದು ಆಕಾರವಾಗುತ್ತಾನೆ, ಸತ್ತ ಮೇಲೆ ಭೂಗೋಲ ಸೇರುತ್ತಾನಷ್ಟೆ.
ಉಪನ್ಯಾಸಕನಾಗಿ ನಾನು ಬೇಲೂರಿಗೆ ಬಂದೆ. ಹಳೆಮನೆ ಅಲ್ಲಿಗೂ ಬಂದರು. ನನ್ನ ‘ಜಗತ್ಪ್ರಸಿದ್ಧ ಭಾಷಣಗಳು’ ಕೃತಿಯನ್ನು ಬಿಡುಗಡೆ ಮಾಡಿ, ಟ್ರ್ಯಾಟಸ್ಕಿಯ ಭಾಷಣ ಕುರಿತು ಅದ್ಭುತವಾಗಿ ಮಾತನಾಡಿದರು. ನನ್ನ ಬಗ್ಗೆ ಅಭಿಮಾನ ಪಟ್ಟು ಬೇಲೂರಿನ ಜನತೆಯನ್ನು ಸಂಭೋಧಿಸಿದರು. ಕಾರ್ಯಕ್ರಮ ಮುಗಿಸಿ ಮೈಸೂರಿಗೆ ಹೋದ ಹಳೆಮನೆ, ಊರು ತಲುಪಿದರೋ! ಎಂದು ಘೋನಾಯಿಸಿದಾಗ ನೊಂದು ಹೇಳಿದ್ದರು. “ಹೊಳೆ ನರಸೀಪುರ ದಾಟ್ತಾ ಇದೀನಿ, ಶರತ್ ತೀರಿಹೋಗಿದ್ದಾನೆ. ಸಣ್ಣ ಹುಡುಗ, ಇನ್ನೂ ಬದುಕಬೇಕಾದವನು ಈ ಕುಡಿಯೋದನ್ನ ಬಿಡಲಿಲ್ಲ ಹಾಳಾದವನು” ಎಂದು. ಈಗ ಈ ಮಾತುಗಳು ಅವರಿಗೂ ಅನ್ವಯಿಸುತ್ತವೆಯೇ? ಅವರು ಅವಿಶ್ರಾಂತರಾದರೆ?
“ರಂಗೋಲಿ ಇಟ್ಟ ಮನೆಗೂ ಸಾವು ತಪ್ಪುವುದಿಲ್ಲ.
ಬಳ್ಳಿ ತಬ್ಬಿದ ಮನೆಯೊಳಗೂ ತಬ್ಬಲಿತನ ತಪ್ಪುವುದಿಲ್ಲ.”
ಇಂತಹ ಒಂದು ತಬ್ಬಲಿತನವನು ಈಗ ಹಳೆಮನೆ ನಮಗೆ ಹೀಗೆ ಬಿಟ್ಟು ಹೋಗಬಹುದೇ?
ಮರೆಯುವ ಮುನ್ನ ಮತ್ತೊಂದು ಮಾತು. ನನ್ನ ‘ಪರ್ದೇಸಿಯ ಫೀಲ್ಮಿ ಪಯಣ’ ಕುರಿತು ‘ಒಂದು ದ್ವೀಪದ ವ್ಯಥೆ’ಯೆನ್ನುವ ಎಂತಹ ಸುಂದರ ಮುನ್ನುಡಿಯನ್ನು ಬರೆದಿದ್ದರು.
ಸದಾ ವಾದ-ವಿವಾದಗಳನ್ನು ಹುಟ್ಟುಹಾಕಿಕೊಳ್ಳುತ್ತಲೇ ಜೀವಂತವಾಗಿದ್ದ ಹಳೆಮನೆ, ನಕ್ಸಲರ ಪರ ಎನ್ನುವ ವಿವಾದಕ್ಕೂ ಒಳಗಾದರು. ಎಡಪಂಥಿಯರಾಗಿರಲಿಲ್ಲ ಹಳೆಮನೆ. ಅದು ಅವರ ಓದಷ್ಟೇ. ಸುತ್ತೂರು ಮಠದೊಂದಿಗೂ, ನಕ್ಸಲ್‌ರ ಕೋವಿಯೊಂದಿಗೂ; ಸಿದ್ಧರಾಮಯ್ಯನೊಂದಿಗೂ, ಯಡಿಯೂರಪ್ಪನ ಒಡ್ಡೋಲಗದೊಂದಿಗೂ ತನ್ನದೇ ಒಂದು ದಾರಿ ಮಾಡಿಕೊಂಡಿದ್ದ ಹಂಬಲದ ಹಳೆಮನೆಯವರಿಗೆ ಇದೆಲ್ಲವು ಅನಿವಾರ್ಯವಾಗಿತ್ತು. ವ್ಯವಸ್ಥೆಯೊಂದಿಗಿದ್ದುಕೊಂಡೇ ಅದನ್ನು ಬದಲಾಯಿಸಬಹುದು ಎನ್ನುವುದು ಅವರ ಬಲವಾದ ನಂಬಿಕೆಯಾಗಿತ್ತು. ಯಾವುದಕ್ಕೂ ವಿಮುಖರಾಗಬಾರದು ಎಂದು ನಂಬಿದ್ದ ಹಳೆಮನೆ ಕೆಲವು ಸಭೆ-ಸಮಾರಂಭಗಳಲ್ಲಿ ನಿರುತ್ತರರಾಗಿದ್ದನ್ನು ನಾನು ನೋಡಿದ್ದೆನೆ. ಮೈಸೂರಿನ ಕಾಲೇಜು ಸಮಾರಂಭವೊಂದರಲ್ಲಿ ಪ್ರಶ್ನೋತ್ತರ ಘಳಿಗೆಯಲ್ಲಿ, ವಿದ್ಯಾರ್ಥಿಯೊಬ್ಬ ಎದ್ದು ನಿಂತು ಪ್ರಶ್ನಿಸಿದ. “ನೀವು ಪರಿಸರದ ಬಗ್ಗೆ ಮಾತನಾಡುತ್ತೀರಿ. ಜೊತೆಗೆ ಒಂದರ ಮೇಲೊಂದು ಸಿಗರೇಟು ಸೇದುತ್ತೀರಿ, ನಿಮ್ಮ ಮಾತು ಮತ್ತು ಕೃತಿಯ ಮಧ್ಯ ಸಾಮ್ಯತೆ ಇಲ್ಲ ಎಂದು ನಿಮಗೆ ಅನ್ನಿಸುವುದಿಲ್ಲವೇ?” ಸಿಟ್ಟೆನೋ ಬಂದಿತ್ತು, ಆದರೆ ಸುಮ್ಮನಾಗಲೇ ಬೇಕಿತ್ತು ಹಳೆಮನೆ-
“ಎನ್ನ ವಾಮಕ್ಷೇಮ ನಿಮ್ಮದಯ್ಯ
ಎನ್ನ ಹಾನಿ-ವೃದ್ಧಿ ನಿಮ್ಮದಯ್ಯ
ಎನ್ನ ಮಾನಾಪಮಾನ ನಿಮ್ಮದಯ್ಯ
ಬಳ್ಳಿಗೆ ಕಾಯಿ ದಿಮ್ಮಿತ್ತೆ
ಕೂಡಲ ಸಂಗಮದೇವ’
ಎಂದು ಒಳಗೊಳಗೇ ಬಾಗಿರಬಹುದು ಅಥವಾ ಮಾಗಿರಬಹುದು ಲಿಂಗದೇವರು.
ಸತ್ತ ವ್ಯಕ್ತಿಯ ಸತ್ಯದ ಮೂಲಗಳನ್ನು ತಡಕಾಡುವುದು ಅಸಾಧ್ಯವೂ ಮತ್ತು ಅಸತ್ಯವೂ ಕೂಡ. ದಿನಾಂಕ ೧೨/೦೬/೧೧ರ ಸಾಯಂಕಾಲದ ಆರು ಗಂಟೆಗೆ ರಂಗಾಯಣದ “ಭೂಮಿಗೀತ”ದಲ್ಲಿ ರಂಗಚಿಂತಕರು. ಮೈಸೂರಿನ ಒಡನಾಡಿಗಳು ಹಮ್ಮಿಕೊಂಡ “ಹಳೆಮನೆಯವರಿಗೆ ಶೃದ್ಧಾಂಜಲಿ” ಕಾರ್ಯಕ್ರಮ ಮುಗಿಸಿಕೊಂಡು ಬಂದು ಕುಳಿತು ಈ ಲೇಖನದ ಮುಕ್ತಾಯದ ಸಾಲುಗಳನ್ನು ಬರೆಯುತ್ತಿದ್ದೇನೆ. ಆ ಕೆಟ್ಟ ಕಾರ್ಯಕ್ರಮದಲ್ಲಿ ‘ಜನ್ನಿ’ಯೊಬ್ಬನವೇ ಮಾತುಗಳು. ಒಂದು ರೀತಿಯಲ್ಲಿ ‘ಜ್ಯೂಲಿಯಸ್ ಸೀಜರ್’. ನಾಟಕದಲ್ಲಿ ಮಾರ್ಕ್ ಎಂಟನಿಯ ಮಾತುಗಳಂತೆ. ಅದೇ ವೇಳೆಗೆ ಸರಿಯಾಗಿ ‘ಪ್ರಜಾವಾಣಿ’ಯ ಸಹೋದರಿ ಸುಶೀಲಾ ಡೋಣೂರ ಒಂದು ಎಸ್. ಎಂ. ಎಸ್ ಕಳುಹಿಸಿದ್ದಾಳೆ. ““Being frank is always better than being falsely sweet. Because by being frank in life, we may get a lot of true enemies but surely not untrue friends”
ಈಗ ನೀವೆ ಹೇಳಬೇಕು, ಹಳೆಮನೆ ಯಾರನ್ನು ಗಳಿಸಿದ್ದರು? ಸ್ನೇಹಕ್ಕೆ ಅವರೆಷ್ಟು ಪ್ರಾಮಾಣಿಕರಾಗಿದ್ದರು? ಅಥವಾ ಅಂದುಕೊಳ್ಳಬೇಕು ಅವರಂತೆಯೇ ಅವರ ಬಳಗವಿತ್ತು. ಯಾವುದೇನೇ ಇರಲಿ ಈ ‘ಶೃದ್ಧಾಂಜಲಿ’ಯಲ್ಲಿ ಮಾತನಾಡಿದ “ಆಂದೋಲನ” ಪತ್ರಿಕೆಯ ರಾಜಶೇಖರ ಕೋಟೆಯವರ ಮಾತುಗಳಂತೂ ಸತ್ಯ. “ಹಸಿವು” ಎಂದರೇನೆಂದು ಹಳ್ಳಿಯಿಂದ ಬಂದು ಅರಿತವರಾಗಿದ್ದ ಹಳೆಮನೆಯವರು “ಹಸಿದವರನ್ನು ಹತ್ತಿರಕ್ಕೆ ಕರೆದುಕೊಂಡು ಅನ್ನ ಹಾಕಿ ಸಲುಹಿದರು. ಇದು ನನ್ನ ಅನುಭವವೂ ಕೂಡ. ಒಡಲ ಉರಿಯಾರಿದವನಿಗೆ ಎಲ್ಲವೂ ಸರಳ, ಸಹಜ ಮತ್ತು ಸಾಹಿತ್ತಿಕ, ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಶ್ರೀ ಸಿದ್ಧರಾಮ ಸ್ವಾಮಿಗಳು ಲಿಂಗದೇವರು ಹಳೆಮನೆ(Lingadevaru Halemane) ವಚನ ಸಾಹಿತ್ಯವನ್ನು ಕುರಿತು ಎಷ್ಟೊಂದು ಅದ್ಭುತವಾಗಿ ಮಾತನಾಡುತ್ತಿದ್ದರು ಎಂಬುದನ್ನು ನೆನೆದು ನೆನಪುಗಳನ್ನು ಹಂಚಿಕೊಂಡಿದ್ದಾರೆ. ಈಗ ಅದೇ ವಚನಕಾರರ ಮಾತುಗಳಲ್ಲಿಯೇ ಹಳೆಮನೆಯವರನ್ನು ನಾನು ಕಟ್ಟಿಕೊಡಬೇಕು-
“ಒಡಲುಗೊಂಡವ ಹಸಿವ
 ಒಡಲುಗೊಂಡವ ಹುಸಿವ
 ನೀ ಎನ್ನಂತೆ ಒಮ್ಮೆ ಒಡಲುಗೊಂಡು ನೋಡಾ.”

ಡಾ. ರಾಜಶೇಖರ ಮಠಪತಿ (ರಾಗಂ)



No comments:

Post a Comment