Total Pageviews

Sunday, June 26, 2011

ಶ್ಯಾಂ ಬೆನಗಲ್ ರ “ಮಂಡಿ”(mandi) ಒಂದು ದೃಶ್ಯ ಕಾವ್ಯ

ಶ್ಯಾಂ ಬೆನಗಲ್ ರ “ಮಂಡಿ”(Mandi) ಒಂದು ದೃಶ್ಯ ಕಾವ್ಯ



 ೧೯೯೩ ರಲ್ಲಿ ಒಂದು ಮಹತ್ವದ ಸಿನಿಮಾ ಬಂತು. ಅದು ಶ್ಯಾಂ ಬೆನಗಲ್ ರ   “ಮಂಡಿ”(Mandi). “ಮಂಡಿ” ಎಲ್ಲ ಚಿತ್ರಗಳಂಥಹ ಒಂದು ಚಿತ್ರವಾಗಿದ್ದರೆ ನಾನಿಲ್ಲಿ ಚರ್ಚೆಗೆ ಎತ್ತಿಕೊಳ್ಳುವ ಅವಶ್ಯಕತೆ ಇರುತ್ತಿರಲಿಲ್ಲ. “ಮಂಡಿ” ಕುರಿತ ಮುಖ್ಯ ಮಾತೇ ಅದು. ಎಲ್ಲ ಚಿತ್ರಗಳು ಎಲ್ಲಿ ನಿಲ್ಲುತ್ತವೆಯೋ ಅಲ್ಲಿಂದ “ಮಂಡಿ” ಪ್ರಾರಂಭವಾಗುತ್ತದೆ. ಈ ಚಿತ್ರ ಬಂದಾಗ ನಾನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಎಂ.ಎ ಓದುತ್ತಿದ್ದೆ. ಅಂದಿನಿಂದ ಇಂದಿನವರೆಗೆ ಶ್ಯಾಂ ಬೆನಗಲ್ ರ  “ಮಂಡಿ” ಯನ್ನು ಅನೇಕ ಬಾರಿ ನೋಡಿದ್ದೇನೆ. ಪ್ರತಿ ಬಾರಿಯು ಹೊಸ ಹೊಸ ಅರ್ಥಗಳನ್ನು ಪಡೆದಿದ್ದೇನೆ. ಈ ಹಿನ್ನೆಲೆಯಲ್ಲಿ “ಮಂಡಿ” ನನಗೊಂದು ಸಿನಿಮಾ ಅನ್ನಿಸಲಿಲ್ಲ. ಕವಿತೆಯಾಗಿ, ದೃಶ್ಯಕಾವ್ಯವಾಗಿ ಕಾಡುತ್ತದೆ. ಒಂದು ವಿಚಾರವಾಗಿ ಹೆಪ್ಪುಗಟ್ಟುತ್ತದೆ.

“ಬ್ಲೆಜ್” ಚಿತ್ರರವರ “ಮಂಡಿ”ಯ ತಾರಾಗಣದಲ್ಲಿರುವ ನಟ ನಟಿಯರೂ ಅಷ್ಟೇ ಅದ್ಭುತ. ಮುಖ್ಯ  ಭೂಮಿಕೆಯಲ್ಲಿ ಶಬಾನಾ ಆಜ್ಮಿ, ಸ್ಮಿತಾ ಪಾಟೀಲ್, ನಾಸಿರುದ್ದಿನ್ ಶಾ, ಅಮರೀಷ್ ಪುರಿ, ಹರಬಂದೊ ಖುರಾನಾ, ಓಂಪುರಿ, ನೀನಾಗುಪ್ತಾ- ಒಟ್ಟಾರೆ ಭಾರತೀಯ ಚಿತ್ರರಂಗದ ಇಂದಿನ ಎಲ್ಲ ಘಟಾನುಘಟಿಗಳು.

ಹಾಗಿದ್ದರೆ ಸಹ ಭೂಮಿಕೆಯಲ್ಲಿ ಯಾರು, ಎನ್ನುವುದು ಪ್ರಶ್ನೆಯಲ್ಲವೇ? ಅದೇ “ಮಂಡಿ”ಯ ವಿಶೇಷ. “ಮಂಡಿ”(Mandi) ಎಂದರೆ ಬಾಝಾರ್, ಕನ್ನಡದಲ್ಲಿ ಸಂತೆ ಎಂದುಕೊಳ್ಳಬಹುದು. ಸಂತೆಯಲ್ಲಿ ಯಾರು ಮುಖ್ಯ? ಯಾವುದು ಮುಖ್ಯ, ಎಂದು ಪ್ರಶ್ನೆ ಕೇಳಬಹುದೇ? ಒಂದು ವೇಳೆ ನಾವು ಅಂಥ ಪ್ರಶ್ನೆಯನ್ನಿಟ್ಟಾಗಲು ಒಂದು ನಿಗದಿತ ಉತ್ತರ ಸಾಧ್ಯವೇ? ಹಾಗೆಯೇ “ಮಂಡಿ”.

ನಾನಾಗಲೇ ಹೇಳಿದ್ದೇನಲ್ಲ “ಮಂಡಿ” ಅಂದರೆ ಸಂತೆ. ಆದರೆ ಇದು ವಸ್ತುಗಳ ಸಂತೆ ಅಲ್ಲ. ಸೂಳೆಯರ ಸಂತೆ. ಈ ಸೂಳೆಯರೂ ನಡು ಬಾಝಾರಿನಲ್ಲಿ ವಸ್ತುಗಳಂತೆ ಮಾರಾಟಕ್ಕಿದ್ದಾರೆ. ವಸ್ತುಗಳಿಗೊಬ್ಬ ಒಡೆಯನಿರುವಂತೆ ಈ ಸೂಳೆಯರಿಗೂ ಓರ್ವ ಒಡತಿ ಇದ್ದಾಳೆ. ಇವರೂ ಪ್ರತಿ ರಾತ್ರಿ ವಸ್ತುಗಳಂತೆಯೇ ಮಾರಾಟವಾಗುತ್ತಾರೆ. ವಸ್ತುಗಳಿಗಿಂತಲೂ ನಿರ್ದಾಕ್ಷಿಣ್ಯವಾಗಿ ಬಳಸಲ್ಪಡುತ್ತಾರೆ.  ವಸ್ತುಗಳ ಸುತ್ತಲೂ ಸಾಮಾನ್ಯವಾಗಿ ನಡೆಯುವಂತೆ ತಾಳಿಕೆ-ಬಾಳಿಕೆ- ಸೌಂದರ್ಯದ ಪ್ರಶ್ನೆಗಳು ಸೂಳೆಯರ ಸುತ್ತಲೂ ನಡೆಯುತ್ತವೆ. ವಸ್ತುಗಳ ಗುಣಮಟ್ಟ ಹಾಗೂ ಸೌಂದರ್ಯದ ಆಧಾರದ ಮೇಲೆ ಅವುಗಳ ಬೆಲೆ ಹೆಚ್ಚು ಕಡಿಮೆಯಾಗುತ್ತದೆ. ಹಾಗೆಯೆ ಸೂಳೆಯೊಬ್ಬಳು ಕೊಡುವ ಸುಖ, ಆರೋಗ್ಯ ಮತ್ತು ಆಕೆಯ ಸೌಂದರ್ಯದಂತೆ ಅವಳ ಮಾರುಕಟ್ಟೆಯ ಮೌಲ್ಯ. ಅವಳೂ ವಸ್ತುಗಳಂತೆ ಸಂತೆಯಲ್ಲಿ. ಆದರೂ ಒಂದಿಷ್ಟು ವ್ಯತ್ಯಾಸವಿದೆ.

ಜನರು ಕೊಂಡುಕೊಂಡ ವಸ್ತುಗಳನ್ನು ಮನೆಗಳಿಗೆ ಒಯ್ಯುತ್ತಾರೆ. ಆದರೆ ವಸ್ತುಗಳಂತೆ ಸಂತೆಯಲ್ಲಿರುವ ಸೂಳೆಯರು ಹಾಗಲ್ಲ. ಆಕೆ ಸಂತೆಯೊಳಗೆ ಅರೆಘಳಿಗೆ ಮಾರಾಟವಾಗಿ ಮತ್ತೆ ಸಂತೆಯೊಳಗೇ ಉಳಿಯುತ್ತಾಳೆ. ತಾನು ಮರಾಟಕ್ಕಿರುವ ದಿನ, ತನ್ನೊಳಗೆ ಖಾಲಿಯಾಗಲು ಬಂದ ಪುರುಷ ಎರಡೂ ಖಾಲಿಯಾಗುತ್ತವೆ, ಮುಗಿಯುತ್ತವೆ. ಆದರೆ ಸಂತೆ ಮತ್ತೆ ಸಿದ್ಧವಾಗುತ್ತದೆ. ಸೂಳೆ ಮತ್ತೆ ಮೈ ಹಾಸುತ್ತಾಳೆ. ಸೂಳೆ ಮತ್ತು ಸಂತೆ ಮತ್ತೆ ನಿರಂತರವಾಗುತ್ತಾರೆ. ಸೂಳೆ ಹೋದಡೆ ಎಲ್ಲ ಸಂತೆ, ಸಂತೆ ಇರುವಲೆಲ್ಲ ಸೂಳೆಯರು. ಸೂಳೆ ಸಂತೆಯೊಳಗಿನ ವಸ್ತುಗಳಂತೆ; ಅದರೆ ಆಕೆ ವಸ್ತುವಲ್ಲ. ಮನುಷ್ಯ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಸೂಳೆಯರನ್ನು ಸಂಗ್ರಹಿಸಿಟ್ಟುಕೊಳ್ಳಲಾರ.ಆಕೆ ವಸ್ತುವಿನಂತೆ ಬಳಸಲ್ಪಡುತ್ತಾಳೆ, ಆದರೆ ಹೇಸಿಗೆಯಂತೆ ಬೀದಿಗೆ ಬೀಳುತ್ತಾಳೆ. ಶ್ಯಾಂ ಬೆನಗಲ್(Shyam benagal) ರ  “ಮಂಡಿ” ಈ ಮೇಲಿನ ಎಲ್ಲ ವಿಚಾರಗಳನ್ನು, ಕಾಳಜಿಗಳನ್ನು, ಹಂಚಿಕೊಳ್ಳಲು ಮಾಡಲಾಗಿರುವ ಒಂದು ಸಿನಿಮಾ, ಇದೊಂದು ‘ದೃಶ್ಯಕಾವ್ಯ’.

ಶ್ಯಾಂ ಬೆನಗಲ್(Shyam benagal) ರ  “ಮಂಡಿ” ಹೊಸದೇನನ್ನೂ ತೋರಿಸುತ್ತಿಲ್ಲ. ಇದುವರೆಗಿನ “ಸಲಾಂ ಬಾಂಬೆ”, “ಗೆಹರಾಯಿ”, ಹಾಗೂ “ಸಡಕ್” ಗಳ ಧಾಟಿಯಲ್ಲಿಯೇ ಇದೆ “ಮಂಡಿ”. ಆದರೆ ಈ ಮೇಲಿನ ಮೂರು ಚಿತ್ರಗಳಲ್ಲಿಯ  Melodramatic presentation of prostitute life ನಿಂದ ಭಿನ್ನವಾಗಿ ಸೂಳೆಯರ ಜೀವನವನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ. “ಮಂಡಿ”ಯೊಳಗೆ ಮಹಿಳಾ ಸಮಾಜದ ಎರಡು ಮುಖಗಳನ್ನು ಮುಖಾಮುಖಿಯಾಗಿ ನಿಲ್ಲಿಸಿ ಮಾತನಾಡಿರುವುದೇ ಬೆನಗಲ್ ರ ವಿಶೇಷತೆ. “ಮಂಡಿ”ಯೊಳಗಿನ ಸೂಳೆಯರು ಪುರುಷರಿಂದ ದೋಚಲ್ಪಟ್ಟವರು; ಅಷ್ಟೇ ಅಲ್ಲ ಸ್ವಯಂ ಮಹಿಳೆಯರಿಂದ ಸುಲಿಯಲ್ಪಟ್ಟವರು.

ಕಲ್ಕತ್ತೆಯ ನಗರವೊಂದರ ಹೃದಯ ಭಾಗದಲ್ಲಿ ಜೀವನದಿಂದ ವಂಚಿತರಾದ ನಾಲ್ಕಾರು ಹುಡುಗಿಯರನ್ನು ಇಟ್ಟುಕೊಂಡು ಕಸುಬಿನಲ್ಲಿ ನಿರತಳಾದ ಮಹಿಳೆಯೊಬ್ಬಳ ಕತೆಯೇ  “ಮಂಡಿ”. “ನಾವಿದ್ದರೇನೇ ಸಮಾಜ, ನಾವಿರುವುದರಿಂದಲೇ ಸಮಾಜದ ಆರೊಗ್ಯ” ಎಂಬುದು ಆಕೆಯ ವಾದ. ಅವಳ ಮನೆ ಪರಿತ್ಯಕ್ತ ಮಹಿಳೆಯರ ಆಶ್ರಯ ತಾಣ. ಆದರೆ ಆಕೆ ಎದುರಿಸಬೇಕಾಗಿರುವುದು ಮಹಿಳಾ ಸಂಘಟನೆಗಳ ವಿರೋಧವನ್ನು. ಸಮಾಜ ಸುಧಾರಣೆ ಎನ್ನುವ ಸಿದ್ಧಾಂತ ನಂಬಿರುವ, ಹೊಟ್ಟೆ ತುಂಬಿದ ಈ ಹೋರಾಟಗಾರ್ತಿಯರಿಗೆ, ಅಥವಾ ಇಂಥ ಹೋರಾಟಗಾರರಿಂದ ಧಿಡೀರ್ ಪ್ರಚಾರ ಗಿಟ್ಟ್ಟಿಕೊಳ್ಳಬೇಕೆಂಬ ಲೆಕ್ಕಾಚಾರ ಹಾಕಿರುವ ಪ್ರಚಾರಪ್ರಿಯ ಮಹಿಳಾಮಣಿಗಳಿಗೆ ವಾಸ್ತವದ ಅರಿವಿಲ್ಲ. ಹೊಟ್ಟೆ ಹೊರೆಯುವ ಮಾರ್ಗ ಎಲ್ಲರಿಗೂ ಒಂದೇ ಆಗಿಲ್ಲ. ಎಲ್ಲರ ಭಾಗ್ಯದಲ್ಲಿಯೂ ಗೌರವದ ಅನ್ನ ಇಲ್ಲ. ಕೆಲವರು ಈ ಸಮಾಜದಲ್ಲಿ ಮಾತುಗಳನ್ನು ಮಾರಿದಂತೆ ಇನ್ನು ಕೆಲವರು ಮೈಯನ್ನು ಮಾರಿಕೊಂದು ಬದುಕಬೇಕಾಗುತ್ತದೆ ಎಂದು ಶ್ಯಾಂ ಬೆನಗಲ್ ರ  “ಮಂಡಿ” ಯ ಮೂಲಕ ಸಮಾಜಕ್ಕೆ ಹೇಳಬೇಕಾಗಿದೆ.

ಸಮಾಜದ ಎಲ್ಲ ಪುರುಷರ ಒಂದಿಲ್ಲಾ ಒಂದು ರಹಸ್ಯವನ್ನು ಬಚ್ಚಿಟ್ಟುಕೊಂಡಿರುವ ಈ ಸೂಳೆಯರು ರಾತ್ರಿಯಾಗುತ್ತಲೇ ಎಲ್ಲರಿಗೂ ಬೇಕು. ಆದರೆ ಹಗಲೊಳಗೆ ಎಲ್ಲರೂ ಅಕೆಯಿಂದ ಮುಕ್ತವಾದ ಸಮಾಜವನ್ನು ಕುರಿತೇ  ಭಾಷಣ ಮಾಡುತ್ತಾರೆ. ಸೂಳೆಯರ ಮೊಹಲ್ಲಾಗಳನ್ನು ಕೆಡವಿ ಅಲ್ಲಿ ಸಭ್ಯರು ಇರುವಂತೆ ಗೃಹ ನಿರ್ಮಾಣ ಮಾಡುತಿರುವ ಓರ್ವ ಕಾಂಟ್ರ್ಯಾಕ್ಟರ್, ಸೂಳೆಯರು  ಊರೊಳಗೆ ಇರಬಾರದು ಎನ್ನುವ ಮಹಿಳಾ ಕಾರ್ಯಕರ್ತೆಯರು, ಹಗಲಿನಲ್ಲಿ ಸಂಘಟನೆಯನ್ನೇ ಪ್ರೋತ್ಸಾಹಿಸುವ ಜನರು ಹಾಗೂ ಕಾನೂನು ಹೀಗೆ ಎಲ್ಲವೂ ಸೂಳೆತನವನ್ನು ಸಾಕುವ ರುಕ್ಮಿಣಿಬಾಯಿಯ ವಿರುದ್ಧ ಇದೆ.

“ಮಂಡಿ” ಇದುವರೆಗೂ ಭಾರತೀಯ ಚಿತ್ರರಂಗದಲ್ಲಿ ಸೂಳೆಗಾರಿಕೆಯನ್ನು ವಿಷಯವಸ್ತುವಾಗಿಸಿಕೊಂಡ ಬಂದ ಸಿನಿಮಾಗಳಲ್ಲಿ ಒಂದಾಗಿದ್ದರೂ ಅವೆಲ್ಲವುಗಳಿಗಿಂತಲೂ ಇದು Presentation ನಲ್ಲಿ ತೀರ ಭಿನ್ನ. ಒಂದು ಕಡೆಗೆ ಅವರ ಭೀಷಣ ಹೋರಾಟದ ಚಿತ್ರಣ ನೀಡುತ್ತಲೇ ಇನ್ನೊಂದೆಡೆ ಸೂಳೆಯರ ಕೋಠಿಗಳಲ್ಲಿಯೂ ಮಕ್ಕಳು ಹುಟ್ಟುತ್ತಾರೆ. ಜೋಗುಳ ಇಲ್ಲಿಯೂ ಕೇಳಿ ಬರುತ್ತದೆ. ಸಾವು-ಸಂಭ್ರಮ ಇಲ್ಲಿಯೂ ಇರುತ್ತದೆ ಎಂಬ ಸಂದೇಶವನ್ನು ನಿರ್ದೇಶಕ ರವಾನಿಸುತ್ತಾ, ಒಂದು ರೀತಿಯಲ್ಲಿ ಎಲ್ಲವನ್ನೂ Humaniseಗೊಳಿಸುವ, ಪ್ರೀತಿಯದಾಗಿಸುವ ಪ್ರಯತ್ನ. “ಮಂಡಿ” ಚಿತ್ರ ವಿಶೇಷವಾಗುವುದೇ ಇಲ್ಲಿ. ಸೂಳೆಯರೆಂದರೆ ಅಸಹಜವಾದವರು ಎನ್ನುವ ರೀತಿಯಲ್ಲಿ ಬಿಂಬಿಸಿ, ಸಿನಿಮಾವನ್ನು ಮಾರ್ಕೆಟಿನಲ್ಲಿ ಗೆಲ್ಲಿಸುವ ತಂತ್ರ ಇಲ್ಲಿ ಬಳಸದೆ, ಮಾನವೀಯ ನೆಲೆಯಲ್ಲಿ ಇದೆಲ್ಲವೂ ನಿತ್ಯ-ಇದೆಲ್ಲವೂ ಸತ್ಯ ಎನ್ನುವ ಹಾಗೆ ಚಿತ್ರಿಸಲಾಗಿದೆ. ಈ ಎಲ್ಲ ಹೆಣ್ಣುಮಕ್ಕಳನ್ನು, ಅವರಿಂದ ಹುಟ್ಟುವ ಹೆಣ್ಣುಮಕ್ಕಳನ್ನು ಸಲಹುವ ಘರ್ ವಾಲಿ ರುಕ್ಮಿಣಿಬಾಯಿಯನ್ನು ನೋಡದಾಗ ನನಗೆ ನೆನಪಾದದ್ದು ಪ್ರಪಂಚದ ಅತ್ಯಂತ ಶ್ರೇಷ್ಠ Noble Peace Prize ಪಡೆಯುವಾಗ ಮದರ್ ಥೆರೆಸಾ ಹೇಳಿದ ಮಾತುಗಳು:”So every hour of the day and night there is always somebody-we have quite a number of unwedded mothers. We tell them: come, we will take care of you, we will take care of the child from you, and we will get a home for a child”. ಇದೇ ಬದುಕಿನ ಭರವಸೆಯನ್ನು ಇದೇ ಮಾತುಗಳಲ್ಲಿ “ಮಂಡಿ” ಯಲ್ಲಿ ಘರ್ ವಾಲಿ  ರುಕ್ಮಿಣಿಬಾಯಿಯೂ ಕೊಡುತ್ತಾಳೆ. ಆದರೆ ಅವಳು ಕಸುಬಿನಲ್ಲಿ ಸೂಳೆಯಾಗಿರುವುದೇ ಅವಳ ಸಂದೇಶಕ್ಕಿರುವ ದೊಡ್ಡ ತಡೆ. ಎಲ್ಲ ಅರ್ಥಗಳಲ್ಲಿಯೂ ಬರೀ ಆಕೆ ಘರ್ ವಾಲಿಯಷ್ಟೇ ಅಲ್ಲ ಆಕೆ ದಿಲ್ ವಾಲಿಯೂ ಕೂಡಾ. ಆದರೆ ಅದು ಯಾರಿಗೂ ಬೇಕಾಗಿಲ್ಲವಲ್ಲ.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ‘ಮಹಿಳಾವಾದ’ ಮಹಿಳಾ ವಿಮೋಚನಾ ಸಂಘಟನೆಗಳಂಥ ಅನೇಕ ಪದಪುಂಜಗಳು ಅಬ್ಬರಿಸಿದರೂ ಕೂಡಾ ಮಹಿಳಾ ಸಮಸ್ಯೆಗಳೇ ಹೆಚ್ಚಾದವೇ ವಿನಃ ಹೇಳಿಕೊಳ್ಳುವಂಥ ಕಾರ್ಯಗಳೇನೂ ನಡೆಯಲಿಲ್ಲ. ಪಾಶ್ಚಾತ್ಯ ಅನುಕರಣೆಯಲ್ಲಿ ಈ ವಾದಗಳು ಉಳ್ಳವರ  ಪ್ರತ್ಯೇಕವಾದಕ್ಕೆ ಉತ್ತೇಜನಕಾರಿಯಾದವೇ ವಿನಃ ಬಡವರ ಬದುಕು ಕಾಯುವ ಅಸ್ತ್ರಗಳೇನೂ ಆಗಲಿಲ್ಲ ಎಂಬುದನ್ನು “ಮಂಡಿ” ಯಲ್ಲಿ ಶ್ಯಾಂ ಬೆನಗಲ್ ಮನೋಜ್ಞವಾಗಿ ಚರ್ಚಿಸಿದ್ದಾರೆ.

ಚಿತ್ರದಲ್ಲಿ ಸಮಾಜದ ಕೊಳೆಯನ್ನು ಎತ್ತಿ ಹಾಕುವ, ವಿಧುರರಿಗೆ ತೋಳುಗಳ ನೀಡಿ ಆಸರೆಯಾಗುವ, ಹೆಣ್ಣು ಹೆತ್ತರೆ ಕುಣಿದಾಡುವ, ಈ ದೇಶದ ಕಲೆ- ಸಂಸ್ಕ್ರತಿ ಕಾಪಾಡುವ, ದುಃಖಿತರ ಕಣ್ಣಿರು ಒರೆಸುವ, ಸೂಳೆಯಾಗಿಯೂ ಸಂತರನ್ನು ಅಪಾರವಾಗಿ ಗೌರವಿಸುವ ಕೋಠಿವಾಲಿ ರುಕ್ಮಿಣಿಬಾಯಿ, ಈ ಸಮಾಜದ ಅವಿಭಾಜ್ಯ ಅಂಗ ಎನ್ನುವಂತೆ ತೋರಿಸಲ್ಪಟ್ಟಿದ್ದಾಳೆ. ಅವಳ ಕುರಿತು, ಅವಳ ನಡತೆ,ಉದ್ಯೋಗ ಕುರಿತು  ಎಲ್ಲರಿಗೂ ಆಕ್ಷೇಪಣೆಗಳಿವೆ, ಅದರೆ ಅವಳು ಯಾರ ಕುರಿತೂ ಆಪೇಕ್ಷಿಸುವುದಿಲ್ಲ. ಯಾವ ರೀತಿ ಸೂಳೆಗೆ ಹಗಲುಗಳಿಲ್ಲವೋ ಹಾಗೆಯೇ ಆಕೆಗೆ ಕೆಲ ಹಕ್ಕುಗಳೂ ಇಲ್ಲ ಎಂದು ಆಕೆ ಚೆನ್ನಾಗಿ ಬಲ್ಲಳು. ಸಮಾಜದ ಸಾಮಾನ್ಯ ಕ್ರಿಮಿಯೂ ಸೂಳೆಯ ಬಗೆಗೆ ಮಾತನಾಡಿ ಅಸಮಾನ್ಯನಾಗಬಹುದು. ಆದರೆ “ಮಂಡಿ”ಯೊಳಗೆ ತೋರಿಸಿದಂತೆ ಸೂಳೆ ಮಾತ್ರ ಯಾರನ್ನು ಕುರಿತೂ ಮಾತಾಡುವಂತಿಲ್ಲ, ಆಪಾದಿಸುವಂತಿಲ್ಲ. ಅವಳು ನಿರಂತರವಾಗಿ ಸಿನಿಮಾದ ಅಂತ್ಯದವರೆಗೂ ಸ್ಥಳದಿಂದ ಸ್ಥಳಕ್ಕೆ ಎತ್ತಂಗಡಿಯಾಗುತ್ತಲೇ ಇರುತ್ತಾಳೆ. ಸೂಳೆ ಹೋದಲೆಲ್ಲವೂ ಜನರ ಸಂತೆ. ಆಕೆ ನಿತ್ಯ ಆಶಾದಾಯಿ. ಊರ ಹೊರಗಿನ ಬಂಜರು ಭೂಮಿಯೂ ಆಕೆ ಕಾಲಿಟ್ಟಲ್ಲಿ ಮರುಜೀವ ಪಡೆಯುತ್ತದೆ. ಅವಳನ್ನು ಅರಸಿಕೊಂಡು ಬರೀ ಗಂಡಸರಷ್ಟೇ ಅಲ್ಲ ಯುವತಿಯರೂ ಕೂಡಾ ಬರುತ್ತಾರೆ.

“ಮಂಡಿ”ಯ ಕೊನೆಯಲ್ಲಿ ಒಂದು ಚಿಂತನಾರ್ಹ ದೃಶ್ಯ. ನಗರದ ಶ್ರೀಮಂತನೊಬ್ಬ ಹಡೆದು ಬಿಟ್ಟ ಹೆಣ್ಣು ಮಗುವನ್ನು ರುಕ್ಮಿಣಿಬಾಯಿ ಮಗಳಂತೆ ಬೆಳೆಸಿಕೊಂಡು ಬರುತ್ತಾಳೆ. ಆದರೆ ಆ ಹುಡುಗಿ ತನ್ನ ತಮ್ಮನನ್ನೇ ತನಗೆ ಗೊತ್ತಿಲ್ಲದೇ ಪ್ರೀತಿಸಿ ಚಿತ್ರದ ಕೊನೆಗೆ ಅವನೊಂದಿಗೆ ಓಡಿಹೋಗುತ್ತಾಳೆ. ಆ ಶ್ರೀಮಂತನಿಗೆ ನೈತಿಕವಾಗಿ ಹುಟ್ಟಿದ ತನ್ನ ಮಗ ಸಿಕ್ಕರೆ ಸಾಕಷ್ಟೇ.ಆದರೆ ಸೂಳೆಯೊಬ್ಬಳೇ ಆ ಹೆಣ್ಣು ಮಗಳಿಗಾಗಿ ಅರಚುತ್ತಿದ್ದಾಳೆ,ಹುಡುಕುತ್ತಿದ್ದಾಳೆ. ಕೊನೆಗೂ ಮಗಳು ಸಿಗಲಾರಳು. ಆಗಲೇ ಈ ಸೂಳೆ ಕೂಡಾ ಯಾರಿಗೂ ಬೇಡವಾಗಿದ್ದಾಳೆ. ಆಕೆಯ ಜೊತೆಗಿದ್ದ ಹುಡುಗಿಯರೆಲ್ಲಾ ಈ ಸೂಳೆಯ ಲಕ್ಷ್ಮಣ ರೇಖೆಯನ್ನು ದಾಟುತ್ತಾ ಗುಪ್ತಾ ಎಂಬ ರಾವಣನ ಕುತಂತ್ರಕ್ಕೆ ಬಲಿಯಾಗಿದ್ದಾರೆ. ಸೂಳೆ ಈಗ ಬುದ್ಧಿವಂತರ, ಮಹಿಳಾವಾದಿಗಳ ದೌರ್ಜನ್ಯಕ್ಕೆ ಬಲಿಯಾಗಿದ್ದಾಳೆ.

ಎಲ್ಲವೂ ಕೈ ಬಿಟ್ಟಿತೇ? ಮುಂದೇನು? ಎಂದು ಸೂಳೆ ಕೈ ಚೆಲ್ಲಿ ಕೂಡ್ರುವಷ್ಟರಲ್ಲಿ ಮತ್ತೆ ಬಾಬಾ ಖಡಕ್ ಷಾ ರ ಅಶರೀರವಾಣಿಯಾಗುತ್ತದೆ. ಸೂಳೆಗೆ ನೀರು, ನೆಲ ಎರಡೂ ಸಿಗುತ್ತದೆ. ಜೊತೆಯಲ್ಲಿ “ನಾರಿನಿಕೇತನ” ದಿಂದ ಓಡಿಬಂದ ಹುಡುಗಿಯೊಬ್ಬಳು ಸೂಳೆಯ ಸಂಗಾತಿಯಗುತ್ತಾಳೆ. ಒಂದು ಕಾಲಕ್ಕೆ ಸೂಳೆಯ ಕಪಿಮುಷ್ಠಿಯಿಂದ ಓಡಿಬಂದ ಹುಡುಗಿಯೊಬ್ಬಳು ಮತ್ತೆ ಬಂದು ಸೂಳೆಯ ಆಸರೆ ಪಡೆಯುವಲ್ಲಿಗೆ ಸಿನಿಮಾ ಮುಗಿಯುತ್ತದೆ. ಆದರೆ ಮಹಿಳೆಯ ಕುರಿತಾದ, ಸಮಾಜದ ಕುರಿತಾದ, ಭದ್ರತೆ ಕುರಿತಾದ ಪ್ರಶ್ನೆ ಪ್ರಾರಂಭವಾಗುತ್ತದೆ. “ನಾರಿ ನಿಕೇತನ್”ಗಳು ನಮ್ಮ ಮಹಿಳೆಯರೇ ಹುಟ್ಟು ಹಾಕಿದ, ಸಮಸ್ಯೆ ಪರಿಹಾರ ಕೇಂದ್ರಗಳು ಎನ್ನುವುದಾದರೆ ಹುಡುಗಿಯೊಬ್ಬಳು ಅಲ್ಲಿಂದ ಒಡಿ ಬಂದು ಸೂಳೆಯ ಆಸರೆ ಏಕೆ ಪಡೆಯಬೇಕು? ಇದು ಪ್ರಶ್ನೆಯಲ್ಲವೇ?

ಶ್ಯಾಂ ಬೆನಗಲ್(Shyam benagal) ಭಾರತೀಯ ಚಿತ್ರರಂಗದಲ್ಲಿ ಬಹಳ ದೊಡ್ಡ ಹೆಸರು. ಪ್ರಯೋಗಶೀಲತೆಯಲ್ಲಿ ಅವರು ನಮ್ಮ ಕೆ. ಎ. ಅಬ್ಬಾಸ್, ಜಿ .ವಿ. ಅಯ್ಯರ್ ರ ಪಂಕ್ತಿಯಲ್ಲಿದ್ದವರು. ಸಿನಿಮಾ ಒಂದು ಶಕ್ತಿಶಾಲಿ ಮಾಧ್ಯಮ. ಅದಕ್ಕೊಂದು ಗುರುತರ ಜವಾಬ್ದಾರಿ ಇದೆ ಎಂಬುದನ್ನು ಪದೇ ಪದೇ ತೋರಿಸಿದವರು. ಇದಕ್ಕೊಂದು ಅದ್ಭುತ ನಿದರ್ಶನ “ಮಂಡಿ”. “ಮಂಡಿ” ಮರೆತುಬಿಡಬಹುದಾದ ಚಿತ್ರವಲ್ಲ. ಈ ಸಮಾಜದಲ್ಲಿ ಸೂಳೆಯರಿರುವವರೆಗೂ ಅಥವಾ ಅವಳ ನಿರ್ಗಮನದ ನಂತರವೂ ಅದರ ಔಚಿತ್ಯತೆಯನ್ನು ಕಳೆದುಕೊಳ್ಳುವುದಿಲ್ಲ.
ಚಿತ್ರದ ವಿಶೇಷತೆಗಳಲ್ಲೊಂದು ಕ್ಯಾಮರಾ ಭಾಷೆ. ಕ್ಯಾಮರಾ ಎಂದರೆ ಕೇವಲ ಒಂದು ಯಂತ್ರ ಮಾತ್ರ ಎಂದು ತಿಳಿದ ನಮ್ಮ ಯುವ ನಿರ್ದೇಶಕ ಮಹಾಶಯರು ಇಲ್ಲಿ ಕಲಿಯಬೇಕಾದುದು ಸಾಕಷ್ಟಿದೆ. ನಟರನ್ನು, ನಟಿಯರನ್ನು ಆರಾಧಿಸಿ ಚಿತ್ರ ಮಾಡುವ ದೃಷ್ಟಿಹೀನರಿಗೂ ತಿಳಿದುಕೊಳ್ಳಲು ಇಲ್ಲಿ ಸಾಕಷ್ಟಿದೆ. ಹರಿದು ಹೋಗುವ ಹಣಕ್ಕೆ ಪ್ರತಿಭೆಯಿದ್ದರೆ ಮಾತ್ರ ಅರ್ಥ ತುಂಬಲು ಸಾಧ್ಯವಿದೆ ಎನ್ನುವುದಕ್ಕೂ “ಮಂಡಿ” ಸಾಕ್ಷಿಯಾಗುತ್ತದೆ.

                                                          ಡಾ.ಆರ್.ಜಿ. ಮಠಪತಿ(ರಾಗಂ)

1 comment:

  1. ಸಮಾಜದ-ಮಾನವತ್ವವಿಲ್ಲದ ಮಾನವರ ಕ್ರೌರ್ಯದ ಪ್ರತೀಕದ೦ತಿದೆ ಈ ಪದ್ಧತಿ.ಉತ್ತಮ ವಿಮರ್ಶೆ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್.

    ReplyDelete