Total Pageviews

Tuesday, December 31, 2013

ಇವೆಲ್ಲವೂ ಶಶಿಯ ಕಿರಣಗಳೇ. . .



 ವೇಗೋತ್ಕರ್ಷದ ಸಿದ್ಧಾಂತಕ್ಕೆ ಮಳೆ ಹೊಡೆದುಕೊಂಡ ಆಧುನಿಕ ಮನುಷ್ಯನಿಗೆ ಕೆಲವೊಮ್ಮೆ ನೆನಪುಗಳೂ ಭಾರವಾಗುತ್ತವೆ. ಇನ್ನು ಕೆಲವೊಮ್ಮೆ ಕಳದೇ ಹೋಗುತ್ತವೆ, ಮತ್ತೆ ಕೆಲವೊಮ್ಮೆ ಉಳಿದೂ ದಾಖಲಿಸಲಾಗದ ಪಳೆಯುಳಿಕೆಗಳಾಗುತ್ತವೆ. ನನ್ನ ಈ ದಾಖಲಾತಿ ಇಂಥದೇ ಒಂದು ಸಾಧ್ಯತೆಯಿಂದ ಹೊರಬರುವ ಯತ್ನ. 2012ರ ಅಕ್ಟೋಬರ್ ತಿಂಗಳಲ್ಲಿ ನನ್ನ 'ಗಾಂಧಿ : ಅಂತಿಮ ದಿನಗಳು' ಕೃತಿಗೆ ಪ್ರಶಸ್ತಿ ಬಂತು. ಆನಂತರದ್ದೆಲ್ಲವೂ ಬರೀ ಭರಾಟೆ. ಇದರ ಸದ್ದಿನಲ್ಲಿ ಮೌನದ ಕೆಲವು ಆಲಾಪಗಳು ನನಗೇ ಕೇಳಿಸದೆ ಹೋದವೆನೋ.
       ನವೆಂಬರ್ 4 ರಿಂದ 8, 2012 ರವರೆಗೆ ಹಾಸನಾಂಬಾ ಕಲಾಕ್ಷೇತ್ರದಲ್ಲಿ ಶಶಿಕಿರಣ ದೇಸಾಯಿಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಜರುಗಿತು. ಈ ನಾಲ್ಕು ದಿನಗಳ ಪ್ರದರ್ಶನ ಸಮಾರಂಭದ ಉದ್ಘಾಟನೆಗೆ ಹೋದವನು ನಾನು. ನನ್ನದೇ ಉದ್ಘಾಟನಾ ಭಾಷಣವೂ ಕೂಡ. ನನ್ನೊಂದಿಗಿದ್ದವರು ಅಂತರ್ ರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದ ರಾಮಸ್ವಾಮಿ, ಹಾಸನದ ಬರಹಗಾರ ಮಿತ್ರರಾದ ಚಂದ್ರಕಾಂತ ಪಡೆಸೂರು, ತಿರುಪತಿಹಳ್ಳಿ ಶಿವಶಂಕರಪ್ಪ, ಯೋಗಾ ಮಾಸ್ಟರ್ ಹಾಗೂ ಹಿರಿಯ ಕಲಾವಿದ ಶ್ರೀ ಬಿ.ಎಸ್.ದೇಸಾಯಿ. ಇಷ್ಟೊಂದು ಜನಸಂದಣೀಯ ಚೆತ್ರಕಲಾ ಪ್ರದರ್ಶನವನ್ನು ನಾನು ಈ ಹಿಂದೆಂದೂ ನೋಡಿಲ್ಲವೆಂದೇ ಹೇಳಬೇಕು. ಇದು ಶ್ರೀ ಬಿ.ಎಸ್.ದೇಸಾಯಿಯವರ ಸಾಮಾಜಿಕ ಸಂಬಂಧಗಳ ಶ್ರೀಮಂತಿಕೆಗೆ ಸಾಕ್ಷಿಯಾದ ಸಮಾರಂಭವೂ ಕೂಡ.

       ಭಾವ ಮತ್ತು ಭಾವನೆಗಳ ಅದ್ಭುತ ಲೋಕದಿಂದ ಹೊರಹೊಮ್ಮುವ ಬಣ್ಣಗಳು ನಮ್ಮ ಕಣ್ಣುಗಳಿಗೆ ಕಾಣಿಸಿಕೊಳ್ಳುವುದು ನೆಪ ಮಾತ್ರಗಳಾಗಿ. ಅವುಗಳ ಹುಟ್ಟಿನೊಂದಿಗೆ ಅವುಗಳ ಉದ್ದೇಶ ಮತ್ತು ಗುರಿ ನಿರ್ಧಾರಿತವಾಗಿದ್ದೂ ಅವು ವ್ಯಕ್ತಿಯೊರ್ವನ ಕಲೆಯ ಗುರಿಯನ್ನು ತಲುಪುತ್ತಿರುವಂತೆ ವರ್ತಿಸುತ್ತವೆ. ಬಣ್ಣಕ್ಕೆ ಕಲಾವಿದ ನೆಪವಾದನೋ, ಕಲಾವಿದನಿಗೆ ಬಣ್ಣ ಸಾಧನವಾಯಿತೋ ಇದು ಬಿಡಿಸಲಾಗದ ಅತ್ಯಂತ ಸಂಕೀರ್ಣ ಪ್ರಶ್ನೆ. ಇದಕ್ಕೆ ಒಂದು ಉತ್ತರ ಸಾಧ್ಯವಿಲ್ಲ. ಆದರೆ ಒಂದನ್ನೇ ಹೇಳುವ ಹಲವು ಉತ್ತರಗಳು ಸಾಧ್ಯ. ಅಂತೆಯೇ ಈ ಸಮಾರಂಭವನ್ನು ಉದ್ಘಾಟಿಸುತ್ತ ನಾನು ಹೇಳಿದೆ ಇವೆಲ್ಲವೂ ಶಶಿಯ ಕಿರಣಗಳೇ. . .
       ಇಲ್ಲಿ ಶಶಿ ಓರ್ವ ವ್ಯಕ್ತಿಯು ಹೌದು ಸಮಷ್ಠಿಯನ್ನು ರಂಗೇರಿಸುವ ಶಕ್ತಿಯೂ ಹೌದು. ಈ ಪ್ರದರ್ಶನದಲ್ಲಿ ವ್ಯಕ್ತಿಯೊಬ್ಬನ ಕುಂಚ ಸೃಷ್ಠಿಯ ಸುತ್ತಲೂ ಗಿರಕಿ ಹೊಡೆಯುವ ಕಲಾರಾಧಕನಿಗೆ ವ್ಯಕ್ತಿಯು ಸಿಗುತ್ತಾನೆ, ಸಮಷ್ಠಿಯೂ ಸಿಗುತ್ತದೆ. ಶಶಿಕಿರಣ ದೇಸಾಯಿ ಇನ್ನೂ ಶುಕ್ಲಪಥಿಕ. ಸಾಗಬೇಕಾದ ದಾರಿ ಅನಂತವಾಗಿದೆ. ಪ್ರಸಿದ್ಧಿ, ಪ್ರಚಾರದ ರೋಗಗಳಿಂದ ಮುಕ್ತನಾಗಿ ಆರೋಗ್ಯವಂತನಾಗಿ ಬೆಳೆಯಬೇಕಿದೆ. ಆತನಿಗೆ ಶುಭವಾಗಲಿ.


Friday, December 27, 2013

ನನ್ನೂರು ಧಾರವಾಡ ನನ್ನ ಹೀಂಗ ಕಾಡಬ್ಯಾಡ

Ragam with Prof. Champa, Prof. Kattimani and Donur
ನನ್ನೂರು ಧಾರವಾಡ
ನನ್ನ ಹೀಂಗ ಕಾಡಬ್ಯಾಡ
ಎದೆಯಾಗ ನೂರು ತರದ
ಕುಡುಬುಡುಕಿಯಾಡಬ್ಯಾಡ. . .
ಇವು ಕೆಲವು ವರ್ಷಗಳ ಹಿಂದೆ ಧಾರವಾಡವನ್ನು ಕಳೆದುಕೊಳ್ಳುವ ಭಯದಲ್ಲಿ ನಾನು ಬರೆದ ಸಾಲುಗಳು.
ಅಲೆಮಾರಿಯಾದ ಮನುಷ್ಯ ಬದುಕಿನ ಹಲವು ಮಜಲುಗಳಲ್ಲಿ ಪರಕೀಯತೆಯ ಮತ್ತು ಬೇರುಗಡಿತತನದ ಭಾವದಿಂದ ನರಳುತ್ತಾನೆ. ತನ್ನದಾಗಿರುವುದೆಲ್ಲವು ತನ್ನದಲ್ಲವೆನೋ ಎನ್ನುವ ಸಣ್ಣ ಗುಮಾನಿಯಿಂದ ಪ್ರಾರಂಭವಾಗುವ ಈ ಯಾತನೆ ಎಂಥೆಂಥವರಿಗೂ ಭಯಾನಕ ರೋಗವಾಗಿ ಬಳಲಿಸಿದ್ದನ್ನು ನಾವು ನೋಡಿದ್ದೇವೆ. ದಾವಂತದ ದುನಿಯಾದಲ್ಲಿ ಭಾವನಾತ್ಮಕ ಅನಾವರಣಕ್ಕೆ ಸಿಗಬೇಕಾದಷ್ಟು ಸಮಯ ಸಿಗದೇ ಇದ್ದಾಗ ಹಬ್ಬಿಕೊಳ್ಳುವ ಭಾವ ಇದು. ಆಗೆಲ್ಲ ‘ಇರುವದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ’ ಎಂದು ಅನಿವಾರ್ಯವಾಗಿ ಹಾಡಿಕೊಂಡು ಬಿಡಬೇಕಾಗುತ್ತದೆ.
        ಆದರೆ ಇದಕ್ಕೆ ಅಪವಾದವೆನ್ನುವಂತೆ ಕೆಲವು ವ್ಯವಸ್ಥೆಗಳನ್ನೂ ನಾವು ಅನೇಕ ಸಾರಿ ಹುಟ್ಟಿಹಾಕಿಕೊಂಡಿದ್ದೇವೆ. 2012ರಲ್ಲಿ ಬೆಂಗಳೂರಿನ ಸಂಜಯ ನಗರದಲ್ಲಿ ನಾಲ್ಕಾರು ಅನಿವಾಸಿ ಬೆಂಗಳೂರಿಗರೆಲ್ಲ ಸೇರಿಕೊಂಡು ಇಂಥದೇ ಒಂದು ವೇದಿಕೆಯನ್ನ ಹುಟ್ಟಿಸಿಕೊಂಡೆವು. ನನ್ನ ‘ಗಾಂಧಿ:ಅಂತಿಮ ದಿನಗಳು’ ಮೊದಲು ಬಿಡುಗಡೆಗೊಂಡದ್ದು ಇಲ್ಲಿಯೇ. ಇದರಲ್ಲಿ ನಾನು, ಹರಿಹರಪ್ರಿಯ, ಕೃಷ್ಣಮೂರ್ತಿರಾವ್, ಚೌಡಯ್ಯ, ದೇಸಾಯಿ, ಚಂಪಾ, ಎಲ್.ಹನುಮಂತಯ್ಯ, ರಾಜು ಮಳವಳ್ಳಿ, ಮಾಯಿಗೌಡ ಮತ್ತು ಭಗವಾನ್ ಎಲ್ಲರೂ ಇದ್ದೆವು. ಈ ವೇದಿಕೆಯನ್ನು ನಾವು ಕಿಟ್ಟು ಮನೆ ಎಂದು ಕರೆದೆವು. ಯಾವುದೋ ಒಂದು ಹೆಸರು, ಕೂಡಲು ಒಂದು ಕಾರಣ ಹುಡುಕಿಕೊಂಡಂತೆ.
        ಅಂಥದೇ ಒಂದು ಪ್ರಯತ್ನ ಧಾರವಾಡ ಕಟ್ಟೆ. ಇದು ವಲಸೆ ಹೋದ ಧಾರವಾಡಿಗರಿಗಾಗಿ ಗೆಳೆಯ ಬಸವರಾಜ ಡೋಣುರ ಕಂಡ ಕನಸು. 1994 ರಿಂದ ಒಂದು ವಯೋಮಾನವರಾದ ನಾನು, ಬಸವರಾಜ ಡೋಣುರ, ಶಿವಾನಂದ ಕೆಳಗಿನಮನಿ, ರಂಗರಾಜ ವನದುರ್ಗಾ, ಧನವಂತ ಹಾಜವಗೋಳ, ಮುಕುಂದ ಲಮಾಣಿ, ಡಾ. ತೇಜಸ್ವಿ ಕಟ್ಟಿಮನಿ, ಡಾ. ಕಮಲಾ ಹೆಮ್ಮಿಗೆ ಧಾರವಾಡದ ಸಾಂಸ್ಕೃತಿಕ ಪರಿಸರದಲ್ಲಿ ಅತ್ಯಂತ ಕ್ರಿಯಾಶೀಲರಾಗಿದ್ದವರು. ಆದರೆ ಕಾಲಕ್ರಮೇಣ ಬದುಕಿನ ಓಘದಲ್ಲಿ ವೃತ್ತಿ ಹಾಗೂ ಬೇರೆ ಬೇರೆ ಕಾರಣಗಳಿಗಾಗಿ ಈ ಪ್ರೀತಿಯ ಧಾರವಾಡವನ್ನು ಬಿಟ್ಟು ಎಲ್ಲೆಲ್ಲೋ ಸೇರಿಕೊಂಡೆವು. ಆದರೆ ಈ ಸಾಂಸ್ಕೃತಿಕ ನಗರಿಯನ್ನು ಇನ್ನಿಲ್ಲದಂತೆ ಖಾಲಿಮಾಡಿಕೊಂಡು ಹೋದವರಲ್ಲ ನಾವು. ಬಾಳೆಯ ಮರ ಸಣ್ಣದೊಂದು ಬಚ್ಚೆಯನ್ನು ತನ್ನ ಪಕ್ಕದಲ್ಲಿ ಹುಟ್ಟಿಸಿಯೇ ಸಾಯುವಂತೆ ನಾವೆಲ್ಲ ನೆನಪಿನ ಬೀಜವನ್ನು ಬಿತ್ತಿಹೋದವರು. ಜಗಳಾಡುತ್ತ, ಟೀಕಿಸುತ್ತ, ಮತ್ತೆ ಮತ್ತೆ ಸೇರಲು ಆಸೆ ಪಟ್ಟವರು. ಈ ಒಂದು ಸಣ್ಣ ಕಾರಣಕ್ಕೆ ಹುಟ್ಟಿಕೊಂಡದ್ದು ಧಾರವಾಡ ಕಟ್ಟೆ.
Ragam on Dharwad Katte
        ನಮ್ಮ ಕಟ್ಟೆಗೆ ಮಹೋರ್ತ ಕೂಡಿ ಬಂದದ್ದು 22/09/2013 ರಂದು. ಆ ದಿನ ಮುಂಜಾನೆ ಗೆಳೆಯ ಬಸವರಾಜ ಡೋಣುರರ ಬೃಹತ್ ಅನುವಾದ ಸಂಪಾದನಾ ಕೃತಿ ‘ಕಥಾಮಂಜರಿ’ ಹಾಗೂ ಅವರದೇ ಇನ್ನೊಂದು ಕೃತಿ ‘ದಶಕದ ಕಥೆಗಳು’ ಬಿಡುಗಡೆಯ ಕಾರ್ಯಕ್ರಮ. ಕಥಾಮಂಜರಿಯನ್ನು ಕುರಿತು ಮಾತನಾಡಿದವನು ನಾನು. ನನ್ನ ಮಾತಿನ ಮುಖ್ಯ ಭಾಷಾಂತರ ರಶಿಯನ್ ಮೂಲದ ಚೆಕಾಫ್‍ನ ‘ಪಣ’. ಇದೊಂದು ಅದ್ಭುತ ಕಥೆಯೇ ಸತ್ಯ. ಅಷ್ಟೇ ಶಕ್ತಿಶಾಲಿ ಭಾಷಾಂತರ ಗೆಳೆಯ ಬಸವರಾಜ ಡೋಣುರರದ್ದು.

        ಇದೇ ಸಾಯಂಕಾಲ ‘ಧಾರವಾಡ ಕಟ್ಟೆ’ಯ ಉದ್ಘಾಟನೆ. ಪ್ರೊ. ಚಂಪಾ, ಡಾ. ತೇಜಸ್ವಿ ಕಟ್ಟೀಮನಿ, ಗಿರೀಶ ಹಾಗೂ ಡಾ.ಡಿ.ಎಂ.ಹಿರೇಮಠ ಸಮಾರಂಭದ ಉತ್ಸವ ಮೂರ್ತಿಗಳು. ಇದೇ ಸಂದರ್ಭದಲ್ಲಿ ಶಿವಶಂಕರ ಹಿರೇಮಠರ ಒತ್ತಾಸೆಯ ಮೇರೆಗೆ ಸಂ.ಶಿ.ಭೋಸನೂರಮಠರ ಭವ್ಯ ಮಾನವನ ಕುರಿತು ಅಭ್ಯಸಿಸಲು ಒಪ್ಪಿಕೊಂಡದ್ದು.

ತಪ್ಪಿತಸ್ಥನ ಅಫಿಡೆವಿಟ್ಟು


Ragam with the President of Ka.Sa.Pa Belgaum

ಹೀಗೆಯೇ . . .
ಮಾತಿಗೆ ಸಿಗದವರು, ಕೃತಿಯಾಗಿ ನಡೆದವರು
ಪುಣ್ಯವೇ ಹಣ್ಣಾದವರು
ಮತ್ತೆ ಬಂದಾರೆ ಯೇ?
ಕಾಯುತ್ತ ಕುಳಿತಿದ್ದೇವೆ ಶಬರಿಯಂತೆ!
ಪುಟದಾಚೆಗಿನ ಮಾತು
ತೆರೆ ಸರಿಯುವವರೆಗೆ
ಆಚೆ ಗೇನಿದೆಯೋ ದೇವರಿಗೇ ಗೊತ್ತು
        ಇವು ತಪ್ಪಿತಸ್ಥನೊಬ್ಬನ ಅಫಿಡೆವಿಟ್ಟುವಿನಲ್ಲಿ ಸಿಕ್ಕ ಸಾಲುಗಳು. ಈ ಅಫಿಡೆವಿಟ್ಟಿಗಾಗಿ ನೀವು ಕೋರ್ಟಿನ ಕಡತುಗಳಲ್ಲಿ ಕೈಯಾಡಿಸಬೇಕಿಲ್ಲ. ಪುಸ್ತಕದಂಗಡಿಯಲ್ಲಿ, ಇತ್ತೀಚಿನ ಕಾವ್ಯ ಸಂಕಲನಗಳಲ್ಲಿ ಈ ತಪ್ಪಿತಸ್ಥನ ಅಫಿಡೆವಿಟ್ಟು ನಿಮಗೆ ಸಿಕ್ಕುಬಿಡುತ್ತದೆ. ನಮ್ಮೆಲ್ಲರ ತಪ್ಪುಗಳ ಪ್ರಾಮಾಣಿಕ ವಾರಸುದಾರನಾಗಿ ಈತ ನೀಡಿದ ಅಫಿಡೆವಿಟ್ಟಿನ ಪುಟಗಳ ಸಂಖ್ಯೆ ಐವತ್ತನ್ನು ಮೀರುತ್ತದೆ. ಹೆಚ್ಚು-ಕಡಿಮೆ ಗೋಡ್ಸೆ(Godse)ಯ ಅಫಿಡೆವಿಟ್ಟಿನ ಪುಟಗಳ ಸಂಖ್ಯೆಯಷ್ಟಾಯಿತಲ್ಲ? ಈ ಪ್ರೀತಿಯ ಅಪರಾಧಿಯ ಹೆಸರು ಡಾ. ವೈ.ಎಂ.ಯಾಕೊಳ್ಳಿ(Yakolli). ಬಾದಾಮಿ(Badami) ತಾಲೂಕಿನ ನೀರಬೂದಿಹಾಳದಲ್ಲಿ ಹುಟ್ಟಿದ ಈತ ತನ್ನನ್ನು ತಾನು ದಾರಿ ತಪ್ಪಿದ ಮಗ ಎಂದು ಕರೆದುಕೊಳ್ಳುತ್ತಾನೆ.
ಬರೆದದ್ದು ನಾಲ್ಕಾರು ಸಾಲು
ಬೊಗಳೆಯದೇ ಮಿಗಿಲಾದ ಪಾಲು
ವಂದಿ ಮಾಗಧರ ಸಲಹಿ
ಕಂತೆ ಕಂತೆಯ ಬರೆಸಿ,
ಗುಂಪು ಗುಂಪನು ಕಟ್ಟಿ
ಗಾಂಪರ ಗುಂಪಿಗೆ ಯಜಮಾನನೆನಸಿ
ಹೊತ್ತಿಗೆಯ ಹೊರೆ ಹೊತ್ತು ನಡೆದವನನ್ನು
ಕವಿಯೆಂದು ಕರೆದಾರು ಹೇಗೆ ನನ್ನ. . .
ಎಂದು ನಮ್ಮನ್ನು ಪ್ರಶ್ನಿಸುತ್ತಾನೆ. ಹೀಗಾಗಿ ಕವಿತೆಯ ಮುಂದೆ ಮೋಣಕಾಲೂರಿ ಕುಳಿತ ಇವನನ್ನು ಕುರಿತು ನಾನು ಹೇಳಿದ್ದು ಇಷ್ಟೆ. ನನ್ನ ಈ ಹೇಳಿಕೆ ಆತನ ತಪ್ಪಿತಸ್ಥನ ಅಫಿಡೆವಿಟ್ಟಿನ ಬೆನ್ನುಡಿಯಾಗಿದ್ದರೆ ಅದೂ ಅಪರಾಧವೆಂದುಕೊಳ್ಳಬೇಕೆ?
“ತುಂಡು ತುಂಡುಗಳ ಮಧ್ಯದ ಬೆಸುಗೆಯಿಂದ ಹುಟ್ಟುವ ಈ ಕೌದಿ ಮಾತ್ರ ಬರೀ ತುಂಡಲ್ಲ. ಅದು ಅಖಂಡ. ಅದು ಅಪೂರ್ಣವಲ್ಲ. ಪೂರ್ಣ-ಸಂಪೂರ್ಣ. ಅದಕ್ಕೆ ಹೇಳಿದೆ ಕೌದಿ ಕವಿತೆಯಂತೆ ಅಥವಾ ಕವಿತೆ ಕೌದಿಯಂತೆ ಹೇಗಾದರೂ ಅಂದುಕೊಳ್ಳಿ. ಕವಿತೆ ಹುಟ್ಟಿಕೊಳ್ಳುವುದು ಕೌದಿಯಂತೆಯೆ. ಮುಂದೊಮ್ಮೆ ಸಿದ್ಧವಾಗಬಹುದಾದ ಕೌದಿಗಾಗಿ ಸಂಗ್ರಹವಾಗುವ ಬಣ್ಣ ಬಣ್ಣದ ಬಟ್ಟೆಯ ತುಂಡುಗಳು ಸಂಗ್ರಹವಾಗುವಂತೆಯೇ ಕಾವ್ಯದ ಸಾಮಗ್ರಿಯೂ ಹಲವು ಕಾಡುವ ನೆನಪು, ಸಂವೇದನೆ, ಘಾಯ, ರಮಿಸುವಿಕೆ, ಅಚ್ಛರಿ, ಆಲೋಚನೆ ಹೀಗೆ ಏನೆಲ್ಲ ಸ್ವರೂಪದಲ್ಲಿ ನಮ್ಮಲ್ಲಿ ಸಂಗ್ರಹವಾಗತೊಡಗುತ್ತವೆ. ಹೀಗೆ ಕೌದಿಯಂತೆ ಒಂದೊಮ್ಮೆ ಕವಿತೆಯಾಗಿ ಒಡಮೂಡುತ್ತದೆ. ಗೆಳೆಯ ಯಾಕೊಳ್ಳಿಯವರ ‘ತಪ್ಪಿತಸ್ಥನ ಅಫಿಡೆವಿಟ್ಟು’ವಿಗೂ ಇದು ಅನ್ವಯವಾಗುವ ಆಲೋಚನೆ.  ಮೂವತ್ನಾಲ್ಕು  ಕವಿತೆಗಳ  ಈ  ಸಂಕಲನ  ನೆನಪುಗಳೊಂದಿಗಿನ ಮುಖಾಮುಖಿ, ಧಾವಂತದಲ್ಲಿ ‘ಸಿಟಿ  ಬಸ್ಸಿಗೆ  ಓಡಿ ಹಿಡಿದಂತಲ್ಲ ಜೀವನ’, ಬಿಸಿಲು ಮಳೆಗಳಲ್ಲಿ, ಹೊಲದ ಬದುವಿನಲ್ಲಿ  ತಾಯಂದಿರ ಕೈ ಕುಡುಗೋಲುಗಳಲ್ಲಿ, ರೈತನ ನೇಗಿಲು-ಗುದ್ದಲಿಗಳಲ್ಲಿ, ಕಾರ್ಮುಕರ ಯಂತ್ರಗಳಲ್ಲಿ, ಮಗ್ನನಾದ ಭಗವಂತನನ್ನು ಗಮನಿಸುತ್ತಲೇ ಮುಂದಣ ಅನಂತತೆಗೆ ತೆರೆದುಕೊಳ್ಳುತ್ತಾ ಅನಿಕೇತನದತ್ತ ಹೊರಟಿರುವುದೇ ಈ ಹಿಂದಿನ ಸಾರ್ಥಕತೆ.”
Ragam, Lecturing on Tappitasthan Aphidevittu
        ನವೆಂಬರ್ 18 ರಂದು ಸವದತ್ತಿ(Saundatti)ಯಲ್ಲಿ ಈ ತಪ್ಪಿತಸ್ಥನ ಅಫಿಡೆವಿಟ್ಟನ್ನು ನಾನು ಸಾರ್ವಜನಿಕರೆದುರು ಅನಾವರಣಗೊಳಿಸಿದ್ದೇನೆ. ಸವದತ್ತಿಗೂ ನನಗೂ ನನ್ನ ಗಾಂಧಿ(Gandhi)ಯೊಂದಿಗೆ (‘ಗಾಂಧಿ:ಅಂತಿಮ ದಿನಗಳು’, ರಂಗ ಆರಾಧನಾ ತಂಡ, ಗೆಳೆಯ ಝಕೀರ್(Zakir)) ಶುರುವಾದ ಸಂಬಂಧ ಹೀಗೆ ಮತ್ತೆ ಮತ್ತೆ ನವೀಕರಣಗೊಳ್ಳುತ್ತಿದೆ. 2012 ಡಿಸೆಂಬರ್‍ದಲ್ಲಿ ಪ್ರಾರಂಭವಾದ ಇಲ್ಲಿಯ ನಮ್ಮ ಪ್ರವಾಸ 2013 ರಲ್ಲಿ ಮತ್ತೆ ಇಲ್ಲಿಯೇ ಬಂದು ನಿಲ್ಲುವುದರ ಮೂಲಕ ಭೂಮಿ ಗೋಲಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗುತ್ತದೆ.

Thursday, December 26, 2013

‘ಇರುವಷ್ಟು ಕಾಲ’ದಲ್ಲಿ ಕವಿಗಳೊಂದಿಗೆ

Eruvashtu Kaal Cover Page
       ಕರ್ನಾಟಕ ಸ್ವಾಭಿಮಾನಿ ವೇದಿಕೆ ಮತ್ತು ಅತ್ತಿಮಬ್ಬೆ ಪ್ರತಿಷ್ಟಾನ ಟ್ರಸ್ಟ್ ಬೆಂಗಳೂರು, ಇವುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 02 ಡಿಸೆಂಬರ 2013 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಜರುಗಿದ ಸಮಾರಂಭದಲ್ಲಿ ನನ್ನ ಮಹತ್ವದ ಕೃತಿ ‘ಇರುವಷ್ಟು ಕಾಲ, ಇರುವಷ್ಟೇ ಕಾಲ. . .’ ಕವನ ಸಂಕಲನವನ್ನು ಡಾ. ಸಾ.ಸಿ.ಮರುಳಯ್ಯು(Dr.S.C.Marulayya)ನವರು ಬಿಡುಗಡೆ ಮಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಅಪರೂಪದ ಸೂಫಿ ಗೆಳೆಯ ಶ್ರೀ ರಂಜಾನ್ ದರ್ಗಾ(Ramjan Darga) ಆತ್ಮದ ನಿವೇದನೆಗೆ ನಮಗಿರುವ ಏಕೈಕ ಮಾಧ್ಯಮ ಕಾವ್ಯ ಎಂದದ್ದು ಎಷ್ಟೊಂದು ಸೂಕ್ತವಾಗಿತ್ತು. ಗುರು ಹಾಗೂ ಈ ಕಾರ್ಯಕ್ರಮದ ರೂವಾರಿ ಚಂಪಾ(Champa) ಮತ್ತೆ ಕಾಲೇಜಿನ ಯುವಕರಂತೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ನಿಂತು ನಾಲ್ಕು ಗಂಟೆಗಳವರೆಗೆ ಈ ಕಾರ್ಯಕ್ರಮವನ್ನು ನಿಭಾಯಿಸಿದ ರೀತಿಯನ್ನು ನೀವು ಗಮನಿಸಬೇಕಿತ್ತು. ನಮ್ಮೊಂದಿಗಿದ್ದ ರಾಜಕಾರಣಿ, ಕವಿ ಶ್ರೀ ಕೆ.ಎಚ್.ಶ್ರೀನಿವಾಸ(K.H.Shinivas), ಶ್ರೀಮತಿ ಉಷಾ.ಪಿ.ರೈ(Usha.P.Rai), ಮನೋಹರಿ ಪಾರ್ಥಸಾರಥಿ, ಶ್ರೀ ಪುಟ್ಟೇಗೌಡ, ನ್ಯಾಯಮೂರ್ತಿ ಮಹಿಪಾಲ ದೇಸಾಯಿ(Mahipal Desai)(ಖಲೀಲ್ ಜಿಬ್ರಾನ್:ಪ್ರವಾದಿ), ಡಾ. ಕೊ. ಶ್ರೀವಸಂತಕುಮಾರ(Dr.K.Shrivasantakumar)(ಜೈನ ರಾಮಾಯಣ ಭಾಗ-2) ಮತ್ತು ಚಂಪಾ(ಚಂಪಾಲಹರಿ) ವೇದಿಕೆ ಮೇಲಿರುವುದರೊಂದಿಗೆ, ನನ್ನಂಥ ಎಳೆಯ ಗೆಳೆಯನೊಂದಿಗೆ ತಮ್ಮ ಕೃತಿಗಳನ್ನೂ ಬಿಡುಗಡೆಗೊಳಿಸಿ ಪಟ್ಟ ಸಂಭ್ರಮ ಅಷ್ಟಿಷ್ಟಲ್ಲ. ಡಾ. ಬಾನಂದೂರು ಕೆಂಪಯ್ಯ(Dr.Bananduru Kempayya) ತಮ್ಮ ಕಂಚಿನ ಕಂಠದಿಂದ ಜನಪದ ಗೀತೆಯೊಂದನ್ನು ಹಾಡಿ ರಂಜಿಸಿದ್ದನ್ನು ಮರೆಯುವುದು ಸಾದ್ಯವಿಲ್ಲ. ಇದೇ ಸಂದರ್ಭದಲ್ಲಿ ಜರುಗಿದ ರಾಜ್ಯೋತ್ಸವ ಕವಿಗೋಷ್ಠಿಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಬಂದ 60 ಜನ ಕವಿಗಳು ಇದರಲ್ಲಿ ಪಾಲ್ಗೊಂಡಿದ್ದು 32 ಜನ ಕವಯತ್ರಿಯರೂ ಇದರಲ್ಲಿ ಪಾಲ್ಗೊಂಡಿದ್ದು ಲಿಂಗ ಸಮಾನತೆ ಈ ಕಾರ್ಯಕ್ರಮ ಸಾಕ್ಷಿಯಾಗಿತ್ತು ಎನ್ನಬಹುದೇ.(?)
Book Releasing ceremany of Ragam

        ಹೆಸರಿಸಲೇಬೇಕಾದ ಕೆಲವು ಹಿರಿಯರು ನಮ್ಮೊಂದಿಗೆ ಈ ಕಾರ್ಯಕ್ರಮದಲ್ಲಿ ಕೇಳುಗರಾಗಿ ಪಾಲ್ಗೊಂಡಿದ್ದಾರೆ. ಉದಾಹರಣೆಗೆ ಶ್ರೀ ಜರಗನಹಳ್ಳಿ ಶಿವಶಂಕರ(Jaraganahalli Shivashankar), ಡಾ. ಜಿ.ಎಚ್.ಹನ್ನೆರಡುಮಠ, ಶ್ರೀ ವಡ್ಡಗೆರೆ ನಾಗರಾಜಯ್ಯ, ಶ್ರೀದೇವಿ ಕಳಸದ, ಸುಜಾತಾ ವಿಶ್ವನಾಥ(Sujata Vishwanath), ಡಾ. ವರದಾ ಶ್ರೀನಿವಾಸ, ಶ್ರೀಮತಿ ಸಕೀನಾ ಬೇಗಂ ಇನ್ನೂ ಅನೇಕರು.
Ragam with Ramjan Darga
    ‘ಇರುವಷ್ಟು ಕಾಲ! ಇರುವಷ್ಟೇ ಕಾಲ. . .’ ನನ್ನ ಅತ್ಯಂತ ಪ್ರೀತಿಯ ಆರನೆಯ ಕಾವ್ಯ ಸಂಕಲನ. ಕಣ್ವ ಪ್ರಕಾಶನದ ಗೆಳೆಯ ಎಂ.ಆರ್.ಗಿರಿರಾಜು(M.R.Giriraju) ಈ ಸಂಕಲನವನ್ನು ಕಾವ್ಯಕ್ಕೆ ದುಬಾರಿಯಾದ ಈ ಕಾಲಘಟ್ಟದಲ್ಲಿ ಅತ್ಯಂತ ಮುತುವರ್ಜಿಯಿಂದ ಪ್ರಕಟಿಸಿದ್ದಾರೆ. ಸನ್ಮಿತ್ರ ಶ್ರೀ ಬಿ.ಎಸ್.ದೇಸಾಯಿ(B.S.Desai) ಸಂಕಲನದ ತುಂಬ ತಮ್ಮ ರೇಖಾ ಚಿತ್ರಗಳನ್ನು ಎಳೆದು ಜೀವ ತುಂಬಿದ್ದಾರೆ. ಸಂಕಲನ ಪ್ರಕಟವಾಗುವ ಸಂದರ್ಭದ ಆಸು-ಪಾಸಿನಲ್ಲಿಯೇ ಸಿಹಿಗಾಳಿಯ ಸಂಪಾದಕ ಮಿತ್ರ ರಾಜು ಮಳವಳ್ಳಿ(Raju Malavalli) ಮುಂಚಿತವಾಗಿಯೇ ಒಂದು ಲೇಖನವನ್ನು ಪ್ರಕಟಿಸಿ ಪುಸ್ತಕದ ಪ್ರಮೋಷನ್‍ಗೆ ಸಹಕರಿಸಿದ್ದಾರೆ. ಹೀಗಾಗಿ ನನ್ನ ಪುಸ್ತಕವನ್ನು ಕುರಿತು ನಾನು ಈ ದಿನ ಬಹಳಷ್ಟು ಏನಾದರು ಹೇಳಬೇಕಾದುದಿದೆ ಅಂದುಕೊಳ್ಳಲೇ ಇಲ್ಲ. ನನ್ನ ನಂಬಿಕೆ ಇಷ್ಟೆ-
      ‘ಕವಿತೆಯೊಂದಿಗಿನ ನನ್ನ ಈ ಅನುಸಂಧಾನ ನನ್ನ ಪ್ರೀತಿಯೊಂದಿಗಿನ ಸಮಾಗಮವಷ್ಟೆ. ನನ್ನ ಕವಿತೆಯೊಳಗಿನ ಮನುಷ್ಯರು ಬದಲಾಗಿದ್ದಾರೆ. ಬದುಕಿನ ವ್ಯವಹಾರದಲ್ಲಿ ಹಂತ ಹಂತಕ್ಕೆ ಸೈದ್ಧಾಂತಿಕ ಜಾರತನಕ್ಕೆ ಒಳಗಾಗಿದ್ದಾರೆ. ತಮ್ಮ ಪಾಪದ ಹೇಸಿಗೆಯನ್ನೂ ನನ್ನ ಹಾಗೂ ನನ್ನ ಕವಿತೆಗೆ ಹೊರಸಿ ಶುದ್ಧರಾಗಿದ್ದಾರೆ. ಇಂದು ಆ ಶುದ್ಧಿಯ ವ್ಯಾಪ್ತಿಗೆ ಒಳಪಡದವರು ನಾನು ಮತ್ತು ನನ್ನ ಕವಿತೆ ಮಾತ್ರ. ಹಾಗೆ ನೋಡಿದರೆ ನಾನು ಶುದ್ಧ ಪಾಪಿ, ಕವಿತೆ ಶುದ್ಧ ಲಜ್ಜಾಹೀನ. ಬಿರುಗಾಳಿಯಂತೆ ಸುತ್ತಿಬರುವ ನಾವು ಯಾರಿಗೆ ಪ್ರೀಯರೋ ಆ ದೇವರಿಗೇ ಗೊತ್ತು. ನಾವಿಬ್ಬರೂ ಮಾತ್ರ ಪ್ರೀತಿಯ, ಸಮಾಗಮದ ತೂರ್ಯಾವಸ್ಥೆಯಲ್ಲಿದ್ದೇವೆ.’ ಎಂದುಕೊಂಡಿದ್ದೇನೆ.
Ragam with Bananduru Kempayya


        ನನ್ನೊಳಗಿನ ಧ್ಯಾನ, ಮೌನ ಮತ್ತು ಮುಕ್ತಿಗಳ ಮೊದಲ ಕೂಡಲಸಂಗಮ ಜರುಗಿದ್ದು ಈ ಸಂಕಲನದಲ್ಲಿ. ಪದಗಳ ಮೋಹದಿಂದ ಹೊರ ಬಂದು ಅರ್ಥದ ಹಾಗೂ ಅದರ ಆಚೆಯ ಅನಂತ ಲೋಕದಲ್ಲಿ ಕ್ರಮಿಸಿದ ಒಂದಿಷ್ಟು ಅನುಭವ ನನಗೆ ಈ ಬರಹದ ಮೂಲಕ ಒದಗಿದೆ. ಪುಸ್ತಕ ನಿಮ್ಮ ಮೆಚ್ಚಿನ ಅಂಗಡಿಗಳಲ್ಲಿ ಲಭ್ಯವಿದೆ.