Total Pageviews

Friday, December 27, 2013

ತಪ್ಪಿತಸ್ಥನ ಅಫಿಡೆವಿಟ್ಟು


Ragam with the President of Ka.Sa.Pa Belgaum

ಹೀಗೆಯೇ . . .
ಮಾತಿಗೆ ಸಿಗದವರು, ಕೃತಿಯಾಗಿ ನಡೆದವರು
ಪುಣ್ಯವೇ ಹಣ್ಣಾದವರು
ಮತ್ತೆ ಬಂದಾರೆ ಯೇ?
ಕಾಯುತ್ತ ಕುಳಿತಿದ್ದೇವೆ ಶಬರಿಯಂತೆ!
ಪುಟದಾಚೆಗಿನ ಮಾತು
ತೆರೆ ಸರಿಯುವವರೆಗೆ
ಆಚೆ ಗೇನಿದೆಯೋ ದೇವರಿಗೇ ಗೊತ್ತು
        ಇವು ತಪ್ಪಿತಸ್ಥನೊಬ್ಬನ ಅಫಿಡೆವಿಟ್ಟುವಿನಲ್ಲಿ ಸಿಕ್ಕ ಸಾಲುಗಳು. ಈ ಅಫಿಡೆವಿಟ್ಟಿಗಾಗಿ ನೀವು ಕೋರ್ಟಿನ ಕಡತುಗಳಲ್ಲಿ ಕೈಯಾಡಿಸಬೇಕಿಲ್ಲ. ಪುಸ್ತಕದಂಗಡಿಯಲ್ಲಿ, ಇತ್ತೀಚಿನ ಕಾವ್ಯ ಸಂಕಲನಗಳಲ್ಲಿ ಈ ತಪ್ಪಿತಸ್ಥನ ಅಫಿಡೆವಿಟ್ಟು ನಿಮಗೆ ಸಿಕ್ಕುಬಿಡುತ್ತದೆ. ನಮ್ಮೆಲ್ಲರ ತಪ್ಪುಗಳ ಪ್ರಾಮಾಣಿಕ ವಾರಸುದಾರನಾಗಿ ಈತ ನೀಡಿದ ಅಫಿಡೆವಿಟ್ಟಿನ ಪುಟಗಳ ಸಂಖ್ಯೆ ಐವತ್ತನ್ನು ಮೀರುತ್ತದೆ. ಹೆಚ್ಚು-ಕಡಿಮೆ ಗೋಡ್ಸೆ(Godse)ಯ ಅಫಿಡೆವಿಟ್ಟಿನ ಪುಟಗಳ ಸಂಖ್ಯೆಯಷ್ಟಾಯಿತಲ್ಲ? ಈ ಪ್ರೀತಿಯ ಅಪರಾಧಿಯ ಹೆಸರು ಡಾ. ವೈ.ಎಂ.ಯಾಕೊಳ್ಳಿ(Yakolli). ಬಾದಾಮಿ(Badami) ತಾಲೂಕಿನ ನೀರಬೂದಿಹಾಳದಲ್ಲಿ ಹುಟ್ಟಿದ ಈತ ತನ್ನನ್ನು ತಾನು ದಾರಿ ತಪ್ಪಿದ ಮಗ ಎಂದು ಕರೆದುಕೊಳ್ಳುತ್ತಾನೆ.
ಬರೆದದ್ದು ನಾಲ್ಕಾರು ಸಾಲು
ಬೊಗಳೆಯದೇ ಮಿಗಿಲಾದ ಪಾಲು
ವಂದಿ ಮಾಗಧರ ಸಲಹಿ
ಕಂತೆ ಕಂತೆಯ ಬರೆಸಿ,
ಗುಂಪು ಗುಂಪನು ಕಟ್ಟಿ
ಗಾಂಪರ ಗುಂಪಿಗೆ ಯಜಮಾನನೆನಸಿ
ಹೊತ್ತಿಗೆಯ ಹೊರೆ ಹೊತ್ತು ನಡೆದವನನ್ನು
ಕವಿಯೆಂದು ಕರೆದಾರು ಹೇಗೆ ನನ್ನ. . .
ಎಂದು ನಮ್ಮನ್ನು ಪ್ರಶ್ನಿಸುತ್ತಾನೆ. ಹೀಗಾಗಿ ಕವಿತೆಯ ಮುಂದೆ ಮೋಣಕಾಲೂರಿ ಕುಳಿತ ಇವನನ್ನು ಕುರಿತು ನಾನು ಹೇಳಿದ್ದು ಇಷ್ಟೆ. ನನ್ನ ಈ ಹೇಳಿಕೆ ಆತನ ತಪ್ಪಿತಸ್ಥನ ಅಫಿಡೆವಿಟ್ಟಿನ ಬೆನ್ನುಡಿಯಾಗಿದ್ದರೆ ಅದೂ ಅಪರಾಧವೆಂದುಕೊಳ್ಳಬೇಕೆ?
“ತುಂಡು ತುಂಡುಗಳ ಮಧ್ಯದ ಬೆಸುಗೆಯಿಂದ ಹುಟ್ಟುವ ಈ ಕೌದಿ ಮಾತ್ರ ಬರೀ ತುಂಡಲ್ಲ. ಅದು ಅಖಂಡ. ಅದು ಅಪೂರ್ಣವಲ್ಲ. ಪೂರ್ಣ-ಸಂಪೂರ್ಣ. ಅದಕ್ಕೆ ಹೇಳಿದೆ ಕೌದಿ ಕವಿತೆಯಂತೆ ಅಥವಾ ಕವಿತೆ ಕೌದಿಯಂತೆ ಹೇಗಾದರೂ ಅಂದುಕೊಳ್ಳಿ. ಕವಿತೆ ಹುಟ್ಟಿಕೊಳ್ಳುವುದು ಕೌದಿಯಂತೆಯೆ. ಮುಂದೊಮ್ಮೆ ಸಿದ್ಧವಾಗಬಹುದಾದ ಕೌದಿಗಾಗಿ ಸಂಗ್ರಹವಾಗುವ ಬಣ್ಣ ಬಣ್ಣದ ಬಟ್ಟೆಯ ತುಂಡುಗಳು ಸಂಗ್ರಹವಾಗುವಂತೆಯೇ ಕಾವ್ಯದ ಸಾಮಗ್ರಿಯೂ ಹಲವು ಕಾಡುವ ನೆನಪು, ಸಂವೇದನೆ, ಘಾಯ, ರಮಿಸುವಿಕೆ, ಅಚ್ಛರಿ, ಆಲೋಚನೆ ಹೀಗೆ ಏನೆಲ್ಲ ಸ್ವರೂಪದಲ್ಲಿ ನಮ್ಮಲ್ಲಿ ಸಂಗ್ರಹವಾಗತೊಡಗುತ್ತವೆ. ಹೀಗೆ ಕೌದಿಯಂತೆ ಒಂದೊಮ್ಮೆ ಕವಿತೆಯಾಗಿ ಒಡಮೂಡುತ್ತದೆ. ಗೆಳೆಯ ಯಾಕೊಳ್ಳಿಯವರ ‘ತಪ್ಪಿತಸ್ಥನ ಅಫಿಡೆವಿಟ್ಟು’ವಿಗೂ ಇದು ಅನ್ವಯವಾಗುವ ಆಲೋಚನೆ.  ಮೂವತ್ನಾಲ್ಕು  ಕವಿತೆಗಳ  ಈ  ಸಂಕಲನ  ನೆನಪುಗಳೊಂದಿಗಿನ ಮುಖಾಮುಖಿ, ಧಾವಂತದಲ್ಲಿ ‘ಸಿಟಿ  ಬಸ್ಸಿಗೆ  ಓಡಿ ಹಿಡಿದಂತಲ್ಲ ಜೀವನ’, ಬಿಸಿಲು ಮಳೆಗಳಲ್ಲಿ, ಹೊಲದ ಬದುವಿನಲ್ಲಿ  ತಾಯಂದಿರ ಕೈ ಕುಡುಗೋಲುಗಳಲ್ಲಿ, ರೈತನ ನೇಗಿಲು-ಗುದ್ದಲಿಗಳಲ್ಲಿ, ಕಾರ್ಮುಕರ ಯಂತ್ರಗಳಲ್ಲಿ, ಮಗ್ನನಾದ ಭಗವಂತನನ್ನು ಗಮನಿಸುತ್ತಲೇ ಮುಂದಣ ಅನಂತತೆಗೆ ತೆರೆದುಕೊಳ್ಳುತ್ತಾ ಅನಿಕೇತನದತ್ತ ಹೊರಟಿರುವುದೇ ಈ ಹಿಂದಿನ ಸಾರ್ಥಕತೆ.”
Ragam, Lecturing on Tappitasthan Aphidevittu
        ನವೆಂಬರ್ 18 ರಂದು ಸವದತ್ತಿ(Saundatti)ಯಲ್ಲಿ ಈ ತಪ್ಪಿತಸ್ಥನ ಅಫಿಡೆವಿಟ್ಟನ್ನು ನಾನು ಸಾರ್ವಜನಿಕರೆದುರು ಅನಾವರಣಗೊಳಿಸಿದ್ದೇನೆ. ಸವದತ್ತಿಗೂ ನನಗೂ ನನ್ನ ಗಾಂಧಿ(Gandhi)ಯೊಂದಿಗೆ (‘ಗಾಂಧಿ:ಅಂತಿಮ ದಿನಗಳು’, ರಂಗ ಆರಾಧನಾ ತಂಡ, ಗೆಳೆಯ ಝಕೀರ್(Zakir)) ಶುರುವಾದ ಸಂಬಂಧ ಹೀಗೆ ಮತ್ತೆ ಮತ್ತೆ ನವೀಕರಣಗೊಳ್ಳುತ್ತಿದೆ. 2012 ಡಿಸೆಂಬರ್‍ದಲ್ಲಿ ಪ್ರಾರಂಭವಾದ ಇಲ್ಲಿಯ ನಮ್ಮ ಪ್ರವಾಸ 2013 ರಲ್ಲಿ ಮತ್ತೆ ಇಲ್ಲಿಯೇ ಬಂದು ನಿಲ್ಲುವುದರ ಮೂಲಕ ಭೂಮಿ ಗೋಲಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗುತ್ತದೆ.

No comments:

Post a Comment