Ragam with Prof. Champa, Prof. Kattimani and Donur |
ನನ್ನೂರು
ಧಾರವಾಡ
ನನ್ನ
ಹೀಂಗ ಕಾಡಬ್ಯಾಡ
ಎದೆಯಾಗ
ನೂರು ತರದ
ಕುಡುಬುಡುಕಿಯಾಡಬ್ಯಾಡ.
. .
ಇವು
ಕೆಲವು ವರ್ಷಗಳ ಹಿಂದೆ ಧಾರವಾಡವನ್ನು ಕಳೆದುಕೊಳ್ಳುವ ಭಯದಲ್ಲಿ ನಾನು ಬರೆದ ಸಾಲುಗಳು.
ಅಲೆಮಾರಿಯಾದ ಮನುಷ್ಯ ಬದುಕಿನ ಹಲವು
ಮಜಲುಗಳಲ್ಲಿ ಪರಕೀಯತೆಯ ಮತ್ತು ಬೇರುಗಡಿತತನದ ಭಾವದಿಂದ ನರಳುತ್ತಾನೆ. ತನ್ನದಾಗಿರುವುದೆಲ್ಲವು ತನ್ನದಲ್ಲವೆನೋ
ಎನ್ನುವ ಸಣ್ಣ ಗುಮಾನಿಯಿಂದ ಪ್ರಾರಂಭವಾಗುವ ಈ ಯಾತನೆ ಎಂಥೆಂಥವರಿಗೂ ಭಯಾನಕ ರೋಗವಾಗಿ ಬಳಲಿಸಿದ್ದನ್ನು
ನಾವು ನೋಡಿದ್ದೇವೆ. ದಾವಂತದ ದುನಿಯಾದಲ್ಲಿ ಭಾವನಾತ್ಮಕ ಅನಾವರಣಕ್ಕೆ ಸಿಗಬೇಕಾದಷ್ಟು ಸಮಯ ಸಿಗದೇ
ಇದ್ದಾಗ ಹಬ್ಬಿಕೊಳ್ಳುವ ಭಾವ ಇದು. ಆಗೆಲ್ಲ ‘ಇರುವದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ’
ಎಂದು ಅನಿವಾರ್ಯವಾಗಿ ಹಾಡಿಕೊಂಡು ಬಿಡಬೇಕಾಗುತ್ತದೆ.
ಆದರೆ ಇದಕ್ಕೆ ಅಪವಾದವೆನ್ನುವಂತೆ ಕೆಲವು ವ್ಯವಸ್ಥೆಗಳನ್ನೂ
ನಾವು ಅನೇಕ ಸಾರಿ ಹುಟ್ಟಿಹಾಕಿಕೊಂಡಿದ್ದೇವೆ. 2012ರಲ್ಲಿ ಬೆಂಗಳೂರಿನ ಸಂಜಯ ನಗರದಲ್ಲಿ ನಾಲ್ಕಾರು
ಅನಿವಾಸಿ ಬೆಂಗಳೂರಿಗರೆಲ್ಲ ಸೇರಿಕೊಂಡು ಇಂಥದೇ ಒಂದು ವೇದಿಕೆಯನ್ನ ಹುಟ್ಟಿಸಿಕೊಂಡೆವು. ನನ್ನ ‘ಗಾಂಧಿ:ಅಂತಿಮ
ದಿನಗಳು’ ಮೊದಲು ಬಿಡುಗಡೆಗೊಂಡದ್ದು ಇಲ್ಲಿಯೇ. ಇದರಲ್ಲಿ ನಾನು, ಹರಿಹರಪ್ರಿಯ, ಕೃಷ್ಣಮೂರ್ತಿರಾವ್,
ಚೌಡಯ್ಯ, ದೇಸಾಯಿ, ಚಂಪಾ, ಎಲ್.ಹನುಮಂತಯ್ಯ, ರಾಜು ಮಳವಳ್ಳಿ, ಮಾಯಿಗೌಡ ಮತ್ತು ಭಗವಾನ್ ಎಲ್ಲರೂ ಇದ್ದೆವು.
ಈ ವೇದಿಕೆಯನ್ನು ನಾವು ಕಿಟ್ಟು ಮನೆ ಎಂದು ಕರೆದೆವು. ಯಾವುದೋ ಒಂದು ಹೆಸರು, ಕೂಡಲು ಒಂದು ಕಾರಣ ಹುಡುಕಿಕೊಂಡಂತೆ.
ಅಂಥದೇ ಒಂದು ಪ್ರಯತ್ನ ಧಾರವಾಡ ಕಟ್ಟೆ. ಇದು ವಲಸೆ
ಹೋದ ಧಾರವಾಡಿಗರಿಗಾಗಿ ಗೆಳೆಯ ಬಸವರಾಜ ಡೋಣುರ ಕಂಡ ಕನಸು. 1994 ರಿಂದ ಒಂದು ವಯೋಮಾನವರಾದ ನಾನು,
ಬಸವರಾಜ ಡೋಣುರ, ಶಿವಾನಂದ ಕೆಳಗಿನಮನಿ, ರಂಗರಾಜ ವನದುರ್ಗಾ, ಧನವಂತ ಹಾಜವಗೋಳ, ಮುಕುಂದ ಲಮಾಣಿ, ಡಾ.
ತೇಜಸ್ವಿ ಕಟ್ಟಿಮನಿ, ಡಾ. ಕಮಲಾ ಹೆಮ್ಮಿಗೆ ಧಾರವಾಡದ ಸಾಂಸ್ಕೃತಿಕ ಪರಿಸರದಲ್ಲಿ ಅತ್ಯಂತ ಕ್ರಿಯಾಶೀಲರಾಗಿದ್ದವರು.
ಆದರೆ ಕಾಲಕ್ರಮೇಣ ಬದುಕಿನ ಓಘದಲ್ಲಿ ವೃತ್ತಿ ಹಾಗೂ ಬೇರೆ ಬೇರೆ ಕಾರಣಗಳಿಗಾಗಿ ಈ ಪ್ರೀತಿಯ ಧಾರವಾಡವನ್ನು
ಬಿಟ್ಟು ಎಲ್ಲೆಲ್ಲೋ ಸೇರಿಕೊಂಡೆವು. ಆದರೆ ಈ ಸಾಂಸ್ಕೃತಿಕ ನಗರಿಯನ್ನು ಇನ್ನಿಲ್ಲದಂತೆ ಖಾಲಿಮಾಡಿಕೊಂಡು
ಹೋದವರಲ್ಲ ನಾವು. ಬಾಳೆಯ ಮರ ಸಣ್ಣದೊಂದು ಬಚ್ಚೆಯನ್ನು ತನ್ನ ಪಕ್ಕದಲ್ಲಿ ಹುಟ್ಟಿಸಿಯೇ ಸಾಯುವಂತೆ
ನಾವೆಲ್ಲ ನೆನಪಿನ ಬೀಜವನ್ನು ಬಿತ್ತಿಹೋದವರು. ಜಗಳಾಡುತ್ತ, ಟೀಕಿಸುತ್ತ, ಮತ್ತೆ ಮತ್ತೆ ಸೇರಲು ಆಸೆ
ಪಟ್ಟವರು. ಈ ಒಂದು ಸಣ್ಣ ಕಾರಣಕ್ಕೆ ಹುಟ್ಟಿಕೊಂಡದ್ದು ಧಾರವಾಡ ಕಟ್ಟೆ.
Ragam on Dharwad Katte |
ನಮ್ಮ ಕಟ್ಟೆಗೆ ಮಹೋರ್ತ ಕೂಡಿ ಬಂದದ್ದು
22/09/2013 ರಂದು. ಆ ದಿನ ಮುಂಜಾನೆ ಗೆಳೆಯ ಬಸವರಾಜ ಡೋಣುರರ ಬೃಹತ್ ಅನುವಾದ ಸಂಪಾದನಾ ಕೃತಿ ‘ಕಥಾಮಂಜರಿ’
ಹಾಗೂ ಅವರದೇ ಇನ್ನೊಂದು ಕೃತಿ ‘ದಶಕದ ಕಥೆಗಳು’ ಬಿಡುಗಡೆಯ ಕಾರ್ಯಕ್ರಮ. ಕಥಾಮಂಜರಿಯನ್ನು ಕುರಿತು
ಮಾತನಾಡಿದವನು ನಾನು. ನನ್ನ ಮಾತಿನ ಮುಖ್ಯ ಭಾಷಾಂತರ ರಶಿಯನ್ ಮೂಲದ ಚೆಕಾಫ್‍ನ ‘ಪಣ’. ಇದೊಂದು ಅದ್ಭುತ
ಕಥೆಯೇ ಸತ್ಯ. ಅಷ್ಟೇ ಶಕ್ತಿಶಾಲಿ ಭಾಷಾಂತರ ಗೆಳೆಯ ಬಸವರಾಜ ಡೋಣುರರದ್ದು.
ಇದೇ ಸಾಯಂಕಾಲ ‘ಧಾರವಾಡ ಕಟ್ಟೆ’ಯ ಉದ್ಘಾಟನೆ. ಪ್ರೊ.
ಚಂಪಾ, ಡಾ. ತೇಜಸ್ವಿ ಕಟ್ಟೀಮನಿ, ಗಿರೀಶ ಹಾಗೂ ಡಾ.ಡಿ.ಎಂ.ಹಿರೇಮಠ ಸಮಾರಂಭದ ಉತ್ಸವ ಮೂರ್ತಿಗಳು.
ಇದೇ ಸಂದರ್ಭದಲ್ಲಿ ಶಿವಶಂಕರ ಹಿರೇಮಠರ ಒತ್ತಾಸೆಯ ಮೇರೆಗೆ ಸಂ.ಶಿ.ಭೋಸನೂರಮಠರ ಭವ್ಯ ಮಾನವನ ಕುರಿತು
ಅಭ್ಯಸಿಸಲು ಒಪ್ಪಿಕೊಂಡದ್ದು.
No comments:
Post a Comment