ಒಂದು ಪ್ರೀತಿಯ ಕರೆಯನ್ನು ಎಷ್ಟು ದಿನ
ನಿರಾಕರಿಸಬಹುದು? ಅಥವಾ ಅದೆಷ್ಟು ದಿನ ಮುಂದುಡಬಹುದು? ಹಾಗೆ ಮಾಡಲಾಗದ ಒಂದು ಕೋರಿಕೆ ಗೆಳೆಯ ಡಾ.
ವಿರೇಶ ಬಡಿಗೇರನಿಂದ. ದಿನಾಂಕ 05/02/2014 ರಂದು ಜೆ.ಎಸ್.ಎಸ್ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ
ಸಂಸ್ಥೆ ಹಾಗೂ ಡಾ. ವಿರೇಂದ್ರ ಹೆಗ್ಗಡೆ ಸಂಶೋಧನ ಕೇಂದ್ರ, ಧಾರವಾಡದಲ್ಲಿ ನಡೆದ ಅಖಿಲ ಕರ್ನಾಟಕ ಹತ್ತನೆಯ
ಹಸ್ತಪ್ರತಿ ಸಮ್ಮೇಳನಕ್ಕೆ ಈ ಗೆಳೆಯನಿಂದ ಪ್ರೀತಿಯ ಆಹ್ವಾನ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕಾರ್ಯಕ್ರಮಗಳನ್ನು
ಜನ ಮುಖಿಯಾಗಿಸಿದ ಒಬ್ಬ ಅಪರೂಪದ ಸಂಘಟಿಕ ಈ ನನ್ನ
ಗೆಳೆಯ. ನನ್ನ ಸೃಜನಶೀಲ ಬದುಕಿನ ಅಪರೂಪದ ಸಂಗಾತಿ. ಸಾಮಾನ್ಯವಾಗಿ ವಿಶ್ವವಿದ್ಯಾಲಯದ ಉಪನ್ಯಾಸಕರುಗಳಿಗೆ
ಇರುವ ಸಂಕುಚಿತತೆ ಮತ್ತು ಸೋಗಲಾಡಿತನಗಳನ್ನು ಮೀರಿದ ಮನುಷ್ಯ. ಸೌಜನ್ಯ, ಪ್ರೀತಿ ಮತ್ತು ಸ್ನೇಹಕ್ಕೆ
ಇನ್ನೊಂದು ಹೆಸರು ಗೆಳೆಯ ವಿರೇಶ ಬಡಿಗೇರ. ಇಂಥ ಗೆಳೆಯನ ಕರೆಗೆ ಓಗೊಟ್ಟು ಈ ಸಾರಿ ಅವರು ಆಯೋಜಿಸಿದ್ದ
ಹಸ್ತಪ್ರತಿ ಸಮ್ಮೇಳನದ ಒಂದು ಗೋಷ್ಠಿಯ ಸಂಪನ್ಮೂಲ ವ್ಯಕ್ತಿಯಾಗಿ ನಾನು ಧಾರವಾಡಕ್ಕೆ ಹೋದೆ. ಇದು ಚಂದ್ರಶೇಖರ
ಕಂಬಾರರ ಸಮ್ಮುಖದಲ್ಲಿ ನಡೆದ ಎರಡು ದಿನಗಳ ಅಪರೂಪದ ಸಮ್ಮೇಳನವಾಗಿರುವಂತೆಯೇ, ಅವರೊಂದಿಗೆ ಕೆಲವು ಕ್ಷಣಗಳನ್ನು
ಹಂಚಿಕೊಳ್ಳುವ ನನ್ನ ಪಾಲಿನ ಎರಡನೆಯ ಸಂದರ್ಭವೂ ಆಗಿತ್ತು.
ಇನ್ನೊಂದು ಕಾರಣಕ್ಕಾಗಿಯೂ ಇದು ನನಗೆ ಅಪರೂಪದ ಕ್ಷಣವೆ. ಪಠ್ಯ ಮತ್ತು ಲಿಂಗ ಸಂಬಂಧಿ ನೆಲೆಗಳನ್ನಿಟ್ಟುಕೊಂಡು ಮಾತನಾಡಿದ ನನ್ನೊಂದಿಗೆ, ವೇದಿಕೆಯಲ್ಲಿದ್ದವರು ನನ್ನ ಒಂದು ಕಾಲದ ಮೈಸೂರಿನ ಆಶ್ರಯದಾತ ಪ್ರೊ. ಕಿಕ್ಕೇರಿ ನಾರಾಯಣ, ಅವರದೇ ಅಧ್ಯಕ್ಷತೆ. ನನ್ನೊಂದಿಗೆ ಸಹ ಸಂಪನ್ಮೂಲ ವ್ಯಕ್ತಿಗಳಾಗಿದ್ದವರು ಡಾ. ಮಲ್ಲಿಕಾರ್ಜುನ ಮೇಟಿ, ಡಾ. ಕೇಶವಶರ್ಮಾ ಮತ್ತು ಡಾ. ನಟರಾಜ ಬೂದಾಳು. ನಟ ಶ್ರೀಧರ, ನನ್ನ ತಂದೆ ಜಿ.ಜಿ.ಮಠಪತಿ ಹಾಗೂ ಧಾರವಾಡದ ನನ್ನ ಅಪಾರ ಸಾಹಿತ್ಯ ಮಿತ್ರರು ಈ ಕಾರ್ಯಕ್ರಮದಲ್ಲಿದ್ದುದು ನನ್ನ ಬದುಕಿನ ಅಪರೂಪದ ಕ್ಷಣಗಳಲ್ಲಿ ಒಂದು.
No comments:
Post a Comment