Total Pageviews

Tuesday, July 29, 2014

ಸಾಹಿತ್ಯ ಮಂಥನ


“ಅವನು ಸುಮ್ಮನೆ ಸರಿದು ಹೋದ
ಆಕಾಶದ ಚಂದ್ರ ತಾರೆಗಳು ಹಾಗೆಯೇ ಹೊಳೆಯುತ್ತಿದ್ದವು.
ಎದೆಯ ದೇವರ ಮನೆಯಲ್ಲಿನ ಪ್ರಣತಿ
ಎಣ್ಣೆ ಆರಿ ನಂದಿಹೋಗಿತ್ತು ಅರ್ಧ ಬರೆದ
ಹಾಳೆ ಮೇಜಿನ ಮೇಲೆ ಸುಮ್ಮನೆ ಮಂಕಾದ ಕ್ಷಣಗಳು.”
-      ಕಸ್ತೂರಿ ಬಾಯರಿ

     ಶ್ರಾವಣ ಎಂದರೆ ಬೇಂದ್ರೆ, ಜಿಟಿ ಜಿಟಿ ಮಳೆ, ಬೇಂದ್ರೆ ಎಂದರೆ ಉತ್ತರ ಕರ್ನಾಟಕ, ಉತ್ತರ ಕರ್ನಾಟಕವೆಂದರೆ ಬಾಯಿತುಂಬ ಮಾತು, ಹೊಟ್ಟೆ ತುಂಬ ಊಟ, ಸಾಕು ಸಾಕೆನ್ನುವಷ್ಟು ಹಬ್ಬಗಳ ಒಡ್ಡೋಲಗ. ಕಳೆದ ಎರಡು ತಿಂಗಳಲ್ಲಿ ಎರಡು ಅದ್ದೂರಿಯ, ದೀರ್ಘವ್ಯಾಪ್ತಿಯ ಬೇಟ್ಟಿಗಳನ್ನು ನಾನು ಉತ್ತರ ಕರ್ನಾಟಕಕ್ಕೆ ನೀಡಿದ್ದೇನೆ. ಅದು ಕುಟುಂಬ ಸಮೇತ ಚಾಲುಕ್ಯರ ನಾಡಾದ ಬಾಗಲಕೋಟೆ, ಬಾದಾಮಿ ಬಿಜಾಪುರಗಳ ಮಧ್ಯ ಹಳೆಯ ಬಳಗವನ್ನೆಲ್ಲ ಕಟ್ಟಿಕೊಂಡು ತಿರುಗಾಡುವುದೆಂದರೆ ತಾಯಿಯೊಂದಿಗೆ ಊರ ಜಾತ್ರೆ ಮಾಡಿಬಂದಂತೆ.
  
       ಭೀಮನ ಅಮವಾಸ್ಯೆ, ನಾಗರ ಪಂಚಮಿ ಮತ್ತು ರಂಜಾನ್‍ದ ಈ ಪವಿತ್ರ ಘಳಿಗೆಯಲ್ಲಿ ಹೆತ್ತವರನ್ನು, ಮಡದಿ ಮಕ್ಕಳನ್ನು, ಗೆಳೆಯ-ಗುರು-ಶಿಷ್ಯ ವೃಂದದೊಂದಿಗೆ ಅಪರೂಪದ ಮತ್ತು ಅದ್ಧೂರಿಯ ಅವಕಾಶ ಈ ಸಾರಿ ಬಂದಿದ್ದು ಬಾದಾಮಿಯ ಕಾವ್ಯಾಸಕ್ತರ ಕಾರಣದಿಂದ. ಅದರಲ್ಲೂ ವಿಶೇಷವಾಗಿ ಕಸ್ತೂರಿ ಬಾಯರಿ ಅವರಿಂದ. ಈ ಬಾಯರಿ ಎಂದರೆ ಬಾದಾಮಿಯ ಬೆಳಕಿನೊಂದಿಗಿನ ಭೆಟ್ಟಿಯೇ ಎಂದುಕೊಳ್ಳುತ್ತೇನೆ. ಮಹಿಳೆಯೊಬ್ಬಳ ಕಾರಣ, ಮನಸಾರೆ ಹೋಗಿ ಬಾದಾಮಿಯ ಬನಶಂಕರಿಯಿಂದ ಗುಡ್ಡಾಪುರದ ದಾನಮ್ಮನವರೆಗೂ ಶ್ರಾವಣ ಮಾಸದ ಮೊದಲ ದಿನಗಳಲ್ಲಿ ಪುಣ್ಯಕ್ಷೇತ್ರಗಳ ದರ್ಶನ ಪಡೆಯುವ ಭಾಗ್ಯ ಬರಬೇಕಾದರೆ ಅದಕ್ಕೂ ಪುಣ್ಯಬೇಕು.
    ವಿಶ್ವಚೇತನ ವೇದಿಕೆ, ಕನ್ನಡ ಸಂಸ್ಕತಿ ಇಲಾಖೆ, ಡಕ್‍ಟೈಲ್ ಆರ್ಯನ್ ವಕ್ರ್ಸ ಮತ್ತು ಪರಿಮಳಾ ಸ್ವೀಟ್ಸ್ ಬಾದಾಮಿ ಇವುಗಳ ಸಂಯುಕ್ತಾಶ್ರಯಗಳಲ್ಲಿ ಜುಲೈ 27 ರಂದು ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನ ಬಾದಾಮಿಯಲ್ಲಿ, ಕನ್ನಡದ ಹೆಸರಾಂತ ಕವಿಯತ್ರಿ ಹಾಗೂ ಕಥೆಗಾರ್ತಿಯಾದ ಕಸ್ತೂರಿ ಬಾಯರಿ ಅವರ ಇದುವರೆಗಿನ ಸಾಹಿತ್ಯ ಕುರಿತು ‘ಸಾಹಿತ್ಯ ಮಂಥನ’ ಎಂಬ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು. ತೋಂಟದ ಡಾ. ಸಿದ್ದಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜರುಗಿದ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಲ್ಲಿ ನಾನು, ಶ್ರೀ ನಾಗರಾಜ ವಸ್ತಾರೆ, ಚಿತ್ರನಟಿ ಅಪರ್ಣಾ, ಡಾ.ಶೀಲಾಕಾಂತ ಪತ್ತಾರ ಹಾಗೂ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಉಪಸ್ಥಿತಿ ಇದ್ದು ನಮ್ಮೊಂದಿಗೆ ಗೆಳೆಯ ಜಯಂತ ಕಾಯ್ಕಿಣಿಯ ನಿರೀಕ್ಷೆಯು ಇತ್ತು. ಆದರೆ ಮಗಳ ಓದಿನ ದಿನಗಳಲ್ಲಿ ನಿರ್ವಹಿಸಲೇಬೇಕಾದ ಮಹತ್ವದ ಜವಾಬ್ದಾರಿಯೊಂದರ ಕಾರಣ ಬಂದಿರಲಿಲ್ಲ ಅಷ್ಟೆ.       
    ಕನ್ನಡದ ಲೇಖಕನಾಗಿ ಅನುಭವಿಸಿದ ಅಪರೂಪದ ನನ್ನ ಪಾಲಿನ ಅದ್ದೂರಿಯ ಸಮಾರಂಭವಿದು. ನಿರಂತರ ಒಂದು ತಿಂಗಳು ಕಾರ್ಯಕ್ರಮದ ಸಂಘಟಿಕರು ನಿಗಾ ವಹಿಸಿದ ರೀತಿ, ಕಾಳಜಿ ನನ್ನನ್ನು ಮೂಕವಿಸ್ಮಿತನನ್ನಾಗಿಸಿದೆ. ಟು ಟೈರ್ ಎ.ಸಿಯಲ್ಲಿ ಪ್ರಾರಂಭವಾದ ಕುಟುಂಬ ಸಮೇತದ ನನ್ನ ಈ ಪ್ರವಾಸ ಕಾರಿನಿಂದ ಕಾರಿಗೆ , ಜಿಲ್ಲೆಯಿಂದ ಜಿಲ್ಲೆಗೆ, ಅಲ್ಲಿಂದ ಮಹಾರಾಷ್ಟ್ರದ ಮೂಲೆಗೆ ಇಡೀ ನಾಲ್ಕು ದಿನ ವ್ಯಾಪಿಸಿಕೊಂಡು ಹಳೆಯ ಎಷ್ಟೆಲ್ಲ ನೆನಪುಗಳಿಗೆ, ಹೊಸ ಭರವಸೆಯ ಬಾಂಧವ್ಯಗಳಿಗೆ ಕಾರಣವಾಯಿತು.

Friday, July 25, 2014

ಪ್ರಾರ್ಥನೆ ಇಷ್ಟೆ. . . .

 ಕ್ಷಮಿಸು ತಾಯೆ,
ಸಾಮಾನ್ಯರು ನಾವು
ಸೋತು, ಕೈ ಮುಗಿದು ಸರಿಯಬೇಕಾದವರು.


ಪ್ರಾರ್ಥನೆ ಇಷ್ಟೆ,
ನಾನೆಟ್ಟ ಮರಗಳ ನಿಟ್ಟುಸಿರು ತಾಗಿ
ನಿನ್ನ ಕುಡಿಯ ಕನಸುಗಳ ಕಮರಿಸದಿರಲಿ
ದಿಕ್ಕೆಟ್ಟ ಕುದುರೆ ಹತ್ತಿದವರು, ಅದರ ಹುಚ್ಚು ಹಸಿವಿಗೆ
ಸಿಕ್ಕದ್ದು ಸುರಿದು ಸಾವಿಗೆ ದೂಡದಿರಲಿ
ಮೈ ಮೆಚ್ಚಿದವರೇ ಮಲ್ಲಿಕಾರ್ಜುನರಾಗಿ
ಈಕೆಯ ಸಂದುಸಂದಿಗೂ ಕದಳಿ-ಕರ್ಪೂರ ಘಮಿಸಿ
ಬಂಗಾರದ ಬಾಳು ಸಂಭ್ರಮಿಸಿ
ಸತ್ತು ಸ್ವರ್ಗದಲ್ಲಿರುವ ನಿನಗೆ
ಗಾಳಿಯಲಿ ಲಾಲಿಹಾಡುವ ಭಾಗ್ಯ ಸಿಗಲಿ
ಹಸಿಗಾಗಿ ಬದುಕಿದ ಇವಳಿಗೂ
ಹುಸಿಯಲ್ಲೇ ಬಯಲಾದ ನಿನಗೂ
ಸದ್ಗತಿಯ ದಾರಿ ಸಿಗಲಿ


ಒಮ್ಮೆಯಾದರೂ ಜಪಿಸಲಿ ಪಶ್ಚಾತಾಪದ ಪವಿತ್ರ ಮಂತ್ರ
ಈ ಮನೆಯೊಳಗೆ ಮತ್ತೆ ಹುಟ್ಟಿಸಲಿ ಅವಳನ್ನೇ ಮಗಳಾಗಿ.



(ಅನುಹ್ಯ ರೋಗದಿಂದ ನರಳಿ ಕೆಲವು ವರ್ಷಗಳ ಹಿಂದೆ ಮರೆಯಾದ ತಾಯಿಗೊಂದು ಶಬ್ಧಾಂಜಲಿ)

Tuesday, July 15, 2014

ಗೂಡುಗಳನ್ನು ಗುಡಿಗಳಾಗಿಸಿದವಳು

   ಪ್ರಾರ್ಥನೆಯೊಂದು ನನ್ನ ಪಾಲಿಗೆ ಬೆಳಕಾಗಿ ಬಂದು, ಉಸಿರಾಗಿ ಉಳಿದುಕೊಂಡಿದೆ. ಅಪರೂಪಕ್ಕೊಮ್ಮೆ ಹೀಗಾಗುತ್ತದೆ. ಇದನ್ನು ಕಲಿಸಿದ ತಾಯಿಯ(?) ದೇಹ, ಧ್ವನಿ ಅದನ್ನು ಹೇಳುವಾಗ ಪ್ರಕಟಗೊಳ್ಳುತ್ತಿದ್ದ ‘ಆ ಕ್ಷಣದ’ ವಾಣಿ-ವಿಣಾಪಾಣಿ ಎಲ್ಲವೂ ಕಣ್ತುಂಬಿ, ಶುದ್ಧ ಶಾಂತಿ ಮೈಯೆಲ್ಲ ಆವರಿಸಿಕೊಳ್ಳತ್ತದೆ. ಹೀಗಾಗಿ ಅವಳಿಂದ ನನ್ನ ಅಂತ್ಯಕ್ಕೂ ನನ್ನೊಂದಿಗುಳಿಯುವ ಒಂದು ಶ್ರೀಮಂತ ವಸ್ತು ಈ ಪ್ರಾರ್ಥನೆ. ಅದರ ಮೂರು ಸಾಲು ಹೀಗಿವೆ-
              ಭ್ರಷ್ಟನೆನಿಸ ಬೇಡ ಕೃಷ್ಣ,
ಇಷ್ಟು ಮಾತ್ರ ಬೇಡಿಕೊಂಬೆ.
     ಶಿಷ್ಟರೊಳಗೆ ಇಟ್ಟು ಸಲಹೊ. . . .
     ಈ ಸಾಲುಗಳಲ್ಲಿಯ ಬೇಡಿಕೊಳ್ಳುವಿಕೆಗೆ ಮೌಲ್ಯ ಬಂದುದು ಏನನ್ನು ಕೇಳುತ್ತಿದ್ದೇವೆ ಎನ್ನುವುದರ ಮೇಲೆ. ಬಾಳಿನಲ್ಲಿ ಏನೇ ತಪ್ಪಿಸಿದರು ಇಂಥ ಬೇಡುವಿಕೆಯನ್ನು ನಿರಂತರವಾಗಿಸಿಕೊಂಡ ಇಬ್ಬರು ಪೂಜ್ಯರು: ಶ್ರೀ ರಾಮಕೃಷ್ಣ ಮತ್ತು ಗಾಂಧಿ. ಗೊತ್ತಿದೆ, ಪ್ರಾರ್ಥನೆಯಿಂದ ಕರ್ಮ ತಪ್ಪಿಸಲಾಗದು, ಆದರೆ ಅದರ ವ್ಯಾಪ್ತಿಯನ್ನು ವಿಸ್ತರಿಸಬಹುದು, ಅಧೋಮುಖಿಯಾಗಬಹುದಾಗಿದ್ದ ಬಾಳನ್ನು ಊಧ್ವðಮುಖಿಯಾಗಿಸಿಕೊಳ್ಳಬಹುದು.
       ನನ್ನ ಬಾಲ್ಯದ ಹಂಬಲ ಶ್ರೀ ರಾಮಕೃಷ್ಣ, ನನ್ನ ಯೌವ್ವನದ ಕುತೂಹಲ ಮಿ.ಗಾಂಧಿ. ಈ ಮಧ್ಯ ಖಯಾಮನ ಮೆಹಖಾನೆಯಲ್ಲಿಯೂ ಹೆಂಡ-ಹೆಂಗಸರೊಂದಿಗೆ ಮಾತು, ಪ್ರೀತಿ, ಜಗಳ, ಸಹನಶೀಲರಿಗೆ ಒಂದಿಷ್ಟು ಜೀವನ. ಹೇಳಬೇಕಾದುದು - ಸಾಹಿತ್ಯ ನನ್ನನ್ನು ಈ ರೀತಿ ಸಮಾಜಮುಖಿಯಾಗಿಸಿದ ಪರಿ. ನನ್ನ ಗಾಂಧಿ ಕುರಿತಾದ ಎರಡೂ ಕೃತಿಗಳು ಹೂವಿನೊಂದಿಗೆ ನಾರೂ ಸ್ವರ್ಗಕ್ಕೆ ಎನ್ನುವ ನಾಣ್ನುಡಿಯ ಅರ್ಥ ವಿಸ್ತಾರವಷ್ಟೆ. ಈ ಕೃತಿಗಳ ಸುತ್ತ ಏನೆಲ್ಲ ನಡೆದುಹೋಯಿತು. ಇದಕ್ಕೆಲ್ಲ ಕಾರಣ ನಾನೇ ಎನ್ನುವುದು ದುರಹಂಕಾರದ ಮಾತು.
      ಮಾಜಿ ಮುಖ್ಯ ಮಂತ್ರಿಯೊಬ್ಬರ ಮುಖ್ಯ ಸಚೇತಕರೊಬ್ಬರು ಈ ಗಾಂಧಿಯಿಂದಲೇ ನನ್ನ ಅಭಿಮಾನಿಯಾಗಿ, ಆ ಕಾರಣಕ್ಕಾಗಿ ನನ್ನ ಪ್ರಕಾಶಕ ಮಿತ್ರರನ್ನೂ ಸೇರಿಸಿಕೊಂಡು, ತಮ್ಮ ಕಛೇರಿಗೆ ಕರೆಯಿಸಿಕೊಂಡು ಬಾಳೆ ಎಲೆಯ ಊಟ ಹಾಕಿಸಿ, ಹೃದಯ ಶ್ರೀಮಂತಿಕೆಯನ್ನು ಮೆರೆದರು. ನಿವೃತ್ತಿಯ ಹಂತದಲ್ಲಿದ್ದ ಅವರಿಗೆ ನನಗೆ ಏನಾದರೂ ಸಹಾಯ ಮಾಡಬೇಕೆನ್ನುವ ಹಂಬಲ. ಪಕ್ಕದಲ್ಲಿದ್ದ ನನ್ನ ಪ್ರೀತಿಯ ಪದ್ದಿಯನ್ನು ತೋರಿಸಿ ಇವಳಿಗೇನಾದರು ಸಹಾಯ ಮಾಡಬಹುದೇ ಎಂದೆ? ಪ್ರಶ್ನೆಗೆ ಉತ್ತರ ಊರಿಗೆ ಬಂದ ಒಂದೇ ವಾರದಲ್ಲಿ.
      ಎಲ್ಲವು ಅವರು ಅಂದುಕೊಂಡಂತೆ ನಡೆದಿದ್ದರೆ, ಜೂನ್ ತಿಂಗಳ 24 ರಂದು ಈ ಪದ್ದಿ Karnataka State Human Rights Comission, Bangalore £À°è Junior Assistant Engineer ಆಗಿರಬೇಕಿತ್ತು. ಕೈಗೆ ಬಂದ ತುತ್ತು ಬಾಯಿಗಿಲ್ಲ. ಬೇಸರವಾಯಿತು, “ಸರಕಾರಿ ವೃತ್ತಿ ಎನ್ನುವುದೇ ನನ್ನ ಭಾಗ್ಯದಲ್ಲಿಲ್ಲ, ಹಣೆಬರಹವೇ ಇಷ್ಟು, ಬಿಟ್ಟು ಬಿಡಿ, ನಿಮ್ಮ ಸಾಹಿತ್ಯದ ಪರಿಚಾರಕಿಯಾಗಿರುತ್ತೇನೆ” ಎಂದು ಕಣ್ಣೀರಾದಳು ಪದ್ದಿ.
       ಸೋತವರು ಸೋಲಬಾರದು, ಒಮ್ಮೆ ಸತ್ತವರು ಮತ್ತೆ ಸಾಯಬಾರದು. ಇದು ನನ್ನ ಹಠ. ಯಾಕೆಂದರೆ, ಸೋಲಿನ ನಂತರ ಗೆಲುವು, ಸಾವಿನ ನಂತರ ಹುಟ್ಟು ಎನ್ನುವ ಪದಗಳಿವೆ. ಅವು ಇಂಥವರಿಗೇ ಅನ್ವಯಿಸಬೇಕಾದವು. ಇದು ನಮ್ಮ-ನಿಮ್ಮೆಲ್ಲರ ಹೊಣೆಗಾರಿಕೆಯೂ ಕೂಡ. ದಿನಾಂಕ 8 ಜುಲೈ ರಂದು, ಮತ್ತೆ ಅದೇ Karnataka State Human Rights Comission, BangaloreDeputy Director ರಿಂದ ತುರ್ತು ಕರೆ. ಎನ್ ವಿಜಯನ್ ಎಂಬುವವರು ವೃತ್ತಿಗೆ ರಾಜಿನಾಮೆ ಕೊಟ್ಟ ಹಿನ್ನೆಲೆಯಲ್ಲಿ ಮತ್ತೆ ತೆರವಾದ ಅವಕಾಶ. ದಿನಾಂಕ 09/07 ಸಂದರ್ಶನ, 10/07 ಆಯ್ಕೆ, ಆದೇಶ ಮತ್ತು ವೃತ್ತಿಯ ಮೊದಲ ದಿನದಾರಂಭ. ಪದ್ದಿಗಿರುವ ಖುಷಿ ಇದೆಲ್ಲವು ಘಟಿಸಿದ್ದು ಗುರುವಾರದಂದು. ಈ ಗುರುವಾರವೇ ನಮ್ಮ ಬದುಕಿನ ಪವಾಡ.
   ಮೊದಲು ಅಭಿನಂದನೆ ಹೇಳಿ ಸ್ವಾಗತಿಸಿದವರು ಮೂಲ ಸರನ್‍ಪುರ, ಉತ್ತರ ಪ್ರದೇಶ ನಿವಾಸಿ ಮಧು ಶರ್ಮಾ(IFS, Secretory, Karnataka State Human Rights Comission, Bangalore) ಹಿಂದಿ ಸಾಹಿತ್ಯ ಹಿನ್ನಲೆಯ ಅಪರೂಪದ, ಮಾತೃಕಾರುಣ್ಯದ ಮಹಿಳೆ. ನಂತರದವರು ಹಿರಿಯರಾದ ನಾಗರಾಜ್(PA, Secretory, Karnataka State Human Rights Comission, Bangalore) ಆನಂತರದವರು, ನಿರ್ದೇಶಕಿ ಶ್ರೀಮತಿ ಮೀರಾ ಸಕ್ಸೇನಾ (IAS, Director and Chairman of Karnataka State Human Rights Comission, Bangalore) ಅಷ್ಟೇ ತೂಕದ ಮಹಿಳೆ. ತದನಂತರ ಆಶೀರ್ವದಿಸಿದವರು ಸಂಬರಗಿ, ಶೀಲಾ ಗಣಪತಿ ಭಟ್ಟ, ಆನಂದ ರಾವ್, ಭಾರ್ಕೆಕರ್, ಮಾಲತಿ ಹಾಗೂ ಇತರರು. ಸಂದೇಶಿಸಿದವರು ಡಾ.ಐ.ಎಂ.ಮೋಹನ, ಶ್ರೀ. ಬಿ.ಎಸ್.ದೇಸಾಯಿ, ಧರಣೇಂದ್ರ ಕುರುಕುರೆ, ತಾರಾ, ಜಯಣ್ಣ, ಸತೀಶ, ಹೆತ್ತವರು, ಬಂಧು-ಬಳಗ ಹಾಗೂ ಚಂಪಾ. ಹೀಗೆ ಐವತ್ತರ ಆಸುಪಾಸಿನ ಹಿರಿಯರೆಲ್ಲ ಸೇರಿ ಮಿತಭಾಷಿಯಾದ ನನ್ನ ಪದ್ದಿಯನ್ನು ಅಭಿನಂದಿಸುವಾಗ ನಾಚಿಕೆಯಿಂದ ಕೆನ್ನೆ ಕೆಂಪಾಗಿ, ಕಣ್ಣ ಬಟ್ಟಲು ಕಣ್ಣೀರು ಕಡಲಾಗಿ, ಯಾರನ್ನೋ ಸ್ಮರಿಸಿಕೊಂಡಳು. ಆದೇಶ ಪತ್ರವನ್ನು ನನಗೆ ತೋರಿಸಿ, ಕಛೇರಿಯ, ಅಲ್ಲಲ್ಲ ನೆನಪಿನ ಗೂಡು ಸೇರಿದಳು.
     ಅಂದಿನಿಂದ ಅದ್ಯಾವ ಜನ್ಮದ ಋಣವೊ, ನಟಿ ಪದ್ಮಾ ಉಡುಪರ ರಾಜಾಜಿನಗರದ ಮನೆ ನಮ್ಮ ಮನೆಯಾಯಿತು. ಈಗ ಪ್ರಶ್ನೆ ಮಕ್ಕಳದ್ದು. ವರ್ಷಕ್ಕೊಂದು ಊರು, ಶಾಲೆ ಎಂದು ಒದ್ದಾಡಿದ್ದ ಇವುಗಳೀಗ ಈ ಸಾರಿ ಮಾತ್ರ ಎಲ್ಲಿಯೂ ಬೇಡ ಎಂದು ಎಷ್ಟೆಲ್ಲ ತಯಾರಿ ಮಾಡಿಕೊಂಡಿದ್ದ ಘಳಿಗೆಯಲ್ಲಿಯೇ ಹೀಗಾಯಿತಲ್ಲ ಎಂದು ಚಿಂತಿಸುವಾಗ, ಇಡಿಯಾಗಿ ಅವರನ್ನು ದತ್ತು ತೆಗೆದುಕೊಳ್ಳಲು ಮುಂದಾದವರು ಇಬ್ಬರು ತಾಯಂದಿರು. ಅವರಲ್ಲಿ ಒಬ್ಬಳಂತೂ ದೊಡ್ಡ P.W.D ಇಂಜಿನೀಯರರ ಹೆಂಡತಿ. ಸರಿ, ಹಡೆದವ್ವನನ್ನು ನೋಡಿದ್ದ, ಪಡೆದವ್ವಳ ಎಂಟು ವರ್ಷದ ಅಪಾರ ಮಮತೆ ಅನುಭವಿಸಿದ್ದ, ಈ ಮಕ್ಕಳಿಗೀಗ ಇಬ್ಬರು ಜಗದವ್ವಗಳ ಆಸರೆ.
           ಹದಿನಾಲ್ಕು ವರ್ಷಗಳ ಹಿಂದೆ, ಬರೀ ವಿಶಾಲವಾದ ನನ್ನೆದೆಯ ಪ್ರೀತಿಯನ್ನು ನಂಬಿ, ನನ್ನ ಬದುಕೆಂಬ ಖಾಲಿ ಕಡಲಿನಲ್ಲಿ ತನ್ನ ಬಾಳಿನ ಪುಟ್ಟ ದೋಣಿಯನ್ನು ನಂಬಿಕೆಯಿಂದ ತೇಲಿ ಬಿಟ್ಟ ಪದ್ದಿ ಎಂಬ ಈ ಜೀವ, ಅನುಭವಿಸಿದ್ದು ಅಷ್ಟಿಷ್ಟಲ್ಲ. ಈಕೆ ಎಂದೂ ಪ್ರತ್ಯುತ್ತರವಾಡಲಿಲ್ಲ, ಬಿರುನುಡಿಯಲಿಲ್ಲ, ಕನಸಿನಲ್ಲಿಯೂ ಹೊಲಸಿಗೆ ಬಾಯಿ ಹಾಕಲಿಲ್ಲ, ಇವಳ ಮೌನಕ್ಕೆ ಸೋತ ನಾನು ಕಂಡ ದೇವರಿಗೆ ಕೈ ಮುಗಿದಾಗಲೆಲ್ಲ ಇವಳಿಗಾಗಿಯೂ ಒಂದು ಅವಕಾಶಕ್ಕಾಗಿ ಕೋರಿಕೊಳ್ಳದೇ ಇರಲಿಲ್ಲ. ಇವಳ ಕುರಿತು ಬರೆದಷ್ಟು ಕವಿತೆಗಳನ್ನು ದೇವರ ಕುರಿತೂ ಬರೆಯಲಿಲ್ಲ. ಕರೆದಲ್ಲಿ ಬಂದು ನಾನು ಕೈ ಹಿಡಿದವರನ್ನೆಲ್ಲ ಒಡಹುಟ್ಟಿದವರಂತೆ ತಬ್ಬಿ, ತನ್ನಿಂದ ಸಾಧ್ಯವಾದುದನ್ನು ನೀಡಿ, ನಿರ್ಮೋಹಿಯಾದವಳು. ಹೋದಲೆಲ್ಲ ಕಸ ಗುಡಿಸಿ, ಹೂ-ಗಿಡ ನೆಟ್ಟು, ಪ್ರಾರ್ಥನೆ-ಪೂಜೆಗಳನ್ನು ಮಾಡಿ ಗೂಡುಗಳನ್ನು ಗುಡಿಗಳಾಗಿಸಿದವಳು. ಖಂಡಿತ, ಇವಳ ಬಾಳೆನ್ನುವುದು ಹಲವರು ಸುರಿದ ಭಿಕ್ಷೆ, ಅಷ್ಟೆ ಸತ್ಯ ಆ ಭಿಕ್ಷೆಯಿಂದ ಅವಳು ಅವರಿಗೆ ನೀಡಿದ ನೆಮ್ಮದಿಯ, ಮರ್ಯಾದೆಯ, ಮೈ-ಮಾನದ ಅನ್ನ.

      ಹರಿದ ಹಾದಿಯ 14 ವರ್ಷಗಳ ಹೀಗೆ ನೆನೆದು ಬೆಂಗಳೂರೆಂಬ ಬೆಂಗಳೂರಿನಲ್ಲಿ, ಅವಳ ಬಿಟ್ಟು ಬರುವಾಗ ಕಣ್ತುಂಬ ನಿದ್ರೆ ಇತ್ತು, ಮನದ ಮೂಲೆಯಲ್ಲಿ ಸುತ್ತುತ್ತಿತ್ತು-

ಫಿರ್ ಚಲಾ ಕಬೀರಾ ಲುಕಾಟೆ ಹಾಥ್



Tuesday, July 8, 2014

ಹದ್ದು ಮೀರಿದವರಿಗೆ ಹೆದ್ದಾರಿ ಮಾಡಿಕೊಡಿ

      ಝಾನ್ಸಿಯ ಗೆಳೆಯ ವಾಸುದೇವ ನಾಡಿಗರ ಕಾವ್ಯ ಸಂಕಲನ 'ವಿರಕ್ತರ ಬಟ್ಟೆಗಳು' ಕೈ ಸೇರಿ ನಿದ್ರೆಯನ್ನೇ ಕಸಿದವು. ಅದರೊಳಗಿನ ಮೂರು ಸಾಲು-
  ಬೇಡ ಎನ್ನಿಸಿದಾಗಲೆಲ್ಲ
ಬಿಚ್ಚಿಡುವುದಕ್ಕೆ
ಬದುಕು ಶೂಗಳಲ್ಲ
ಮೂರು ಸಾಲಿನ ಪದ್ಯದಲ್ಲಿ ನನ್ನನ್ನು ಮತ್ತೆ ಮತ್ತೆ ಕಾಡಿದ ಮೂರು ಪದ, ಬಯಕೆ, ಬದುಕು ಮತ್ತು ಶೂ (ಚಪ್ಪಲಿ).
          ಕೆಲವರಿಗೆ ಬದ್ಧತೆಗಳನ್ನು ಬದಲಾಯಿಸುವುದು, ಬಳಗವನ್ನು ಕಳಚಿಕೊಳ್ಳುವುದು, ಚಪ್ಪಲಿಯನ್ನು ತೊಟ್ಟು ಬಿಟ್ಟಷ್ಟೇ ಸರಳ. ಅವರ ಪಾಲಿಗೆ ಬದುಕು ಚಪ್ಪಲಿ, ಆದರೆ ಬದಲಾಯಿಸುವುದೊಂದೇ ಪರಿಹಾರವಲ್ಲ ಎಂದು ತಿಳಿದುಕೊಂಡವರಿಗೆ ಚಪ್ಪಲಿಯೇ ಬದುಕು. ಚಪ್ಪಲಿ ತನ್ನ ಪಾದದ ಪವಿತ್ರ ಬಟ್ಟೆ, ಬದುಕೇ ಬಿಟ್ಟೆನು ಆದರೆ ನನ್ನ ಕಾಯ್ದ ಈ ಚಪ್ಪಲಿಗಳ ಬಿಡಲಾರೆ ಎಂದು ಮಾದಾರ ಚನ್ನಯ್ಯನಂತೆ ಒಬ್ಬ ಶರಣನಾಗಿ ಪರಿವರ್ತನೆಯಾಗಬಹುದು. ವಸ್ತುಗಳನ್ನು ಅತ್ಯಂತ ನಿರ್ಮಮವಾಗಿ ಕಿತ್ತೆಸೆಯುವ ಜೀವ ಯಾವುದೇ ಆಗಿರಲಿ, ಅದು ನಿರ್ದಯಿಯಾಗಿರುತ್ತದೆ. ಪಾತಕಿಯಾಗಿರುತ್ತದೆ ಎನ್ನುತ್ತಾನೆ ಗಿಬ್ರಾನ್.
     ದೆಹಲಿಯ ನಿಜಾಮುದ್ದೀನ ಬಹಳ ದೊಡ್ಡ ಸಂತ, ಮಾತೃಮಯಿ. ಅವನ ಬಳಿ ಬಯಕೆ ಇಟ್ಟುಕೊಂಡು ಹೋದವರಾರೂ ಬರಿಗೈಯಿಂದ ಬರಲಿಲ್ಲ. ಮಗಳ ಮದುವೆಗೆಂದು ಹಣ ಹೊಂದಿಸುವ ಧಾವಂತದಲ್ಲಿದ್ದ ಬಡವನೊಬ್ಬ ಸಂತ ನಿಜಾಮುದ್ದೀನರ ಬಳಿ ಬಂದು ಅಳಲು, ಅನಿವಾರ್ಯತೆಗಳನ್ನು ತೊಡಿಕೊಂಡ. ಸಮಾಧಾನಿಸಿದ ಸಂತ, 'ಇಲ್ಲಿಯೇ ಕುಳಿತಿರು, ಯಾರಾದರೂ ಭಕ್ತರು ಬಂದು ಏನಾದರೂ ನೀಡಿದರೆ ಅದೆಲ್ಲವನ್ನೂ ಕೊಟ್ಟು ಬಿಡುತ್ತೇನೆ. ನಿನ್ನ ಕಷ್ಟ ಪರಿಹರಿಸಿಕೊಳ್ಳಬಹುದು' ಎಂದ. ಸಂತ ಮತ್ತು ಭಕ್ತ ಹೀಗೆಯೇ ಮೂರು ದಿನ ಕಾಯುತ್ತ ಕಳೆದರು. ಯಾರೂ ಬರಲಿಲ್ಲ. ಏನನ್ನೂ ನೀಡಲಿಲ್ಲ. ಆದರೆ ಸಂತ ನಿಜಾಮುದ್ದೀನ ನಂಬಿ ಬಂದವನನ್ನು ಬರಿಗೈಯಿಂದ ಕಳುಹಿಸುವಂತಿರಲಿಲ್ಲ. ಅಂತಿಮವಾಗಿ ತನ್ನ ಬಳಿ ಇರುವ ಹಳೆಯ ಚಪ್ಪಲಿಗಳನ್ನು ಬಂದವನ ಕೈಗೆ ಇಡುತ್ತ ಇವುಗಳನ್ನು ಮಾರಿಕೊಂಡು, ಚೂರು-ಪಾರು ಹಣದಿಂದ ಕಷ್ಟ ಪರಿಹರಿಸಿಕೊ ಎಂದ.
          ನೊಂದು, ಹಳೆಯ ಚಪ್ಪಲಿಗಳನ್ನು ಬಗಲಲ್ಲಿಯ ಚೀಲಿನಲ್ಲಿಟ್ಟುಕೊಂಡು ಸುಡುಬಿಸಿಲಲ್ಲಿ ಬಡವ ಹೊರಟಿದ್ದ. ಅತ್ತ ಕಾಬೂಲಿನಿಂದ ಅಮೀರ ಖುಸ್ರೋ ತನ್ನ ಅಪಾರ ಸಂಪತ್ತನ್ನು ಎಂಟು ಒಂಟೆಗಳ ಮೇಲೆ ಹೇರಿಕೊಂಡು ಭಾರತಕ್ಕೆ ಬರುತ್ತಿದ್ದ. ಆತ ತನ್ನ ಸದ್ಗುರುವಿನ  ತಲಾಶ್(ಹುಡುಕಾಟ)ದಲ್ಲಿದ್ದ. ಈ ದಾರಿಹೋಕ ಖುಸ್ರೋನ ಪಕ್ಕದಿಂದ ಹಾಯ್ದು ಹೋಗುತ್ತಲೇ, ಏನೋ ತನ್ನ ಇದುವರೆಗಿನ ವಸ್ತುವಿನ ವಾಸನೆ ಬಡಿಯಿತು ಖುಸ್ರೋಗೆ. ದಾರಿಹೋಕನನ್ನು ತಡೆದು ನಿಲ್ಲಿಸಿದ. ನಿನ್ನ ಬಳಿ ಏನಿದೆ? ಎಂದು ಕೇಳಿದ. ದಾರಿಹೋಕ ಅಂಜಿ ತನ್ನ ಬಳಿ ಇರುವ ಸಂತ ನಿಜಾಮುದ್ದೀನರ ಹಳೆಯ ಚಪ್ಪಲಿಗಳನ್ನು ತೋರಿಸಿದ. ಅತ್ಯಂತ ಆನಂದತುಂದೀಲನಾದ ಅಮೀರ ಖುಸ್ರೋ, ತನ್ನ ಎಂಟು ಒಂಟೆಗಳ ಮೇಲಿನ ವೈಡೂರ್ಯವನ್ನೆಲ್ಲ ಬಡವನಿಗೆ ನೀಡಿ, ಆತನಿಂದ ಸಂತ ನಿಜಾಮುದ್ದೀನರ ಚಪ್ಪಲಿ ಖರೀದಿಸಿದ. ಕೆಲವರ ಚಪ್ಪಲಿ, ಆ ಚಪ್ಪಲಿಯ ಏಟು ಪಡೆಯುವುದೂ ಭಾಗ್ಯವೆ. ಯಾಕೆಂದರೆ ಅದು ಸದ್ಗುರುವಿನ ಸಂದೇಶ, ಹಾದರಕ್ಕೆ ಅಲ್ಲಿ ಆಹ್ವಾನವಿರುವುದಿಲ್ಲ.
     ಚಪ್ಪಲಿ ಕೊಂಡ ಖುಸ್ರೋ ನೇರ ನಿಜಾಮುದ್ದೀನರ ಬಳಿ ಹೋದ. ಅವರ ಆ ಚಪ್ಪಲಿಗಳನ್ನು ಅವರಿಗರ್ಪಿಸಿ ತನ್ನನ್ನು ಆಶೀರ್ವದಿಸಲು ಕೇಳಿದ. ಮುಗುಳ್ನಕ್ಕ ನಿಜಾಮುದ್ದೀನ, ಈ ಚಪ್ಪಲಿಗಾಗಿ ನೀನು ಏನು ಕೊಟ್ಟೆ? ಎಂದು ಕೇಳಿದ. ಖುಸ್ರೋ ಎಂಟು ಒಂಟೆ ಕೊಪ್ಪರಿಗೆ ನೀಡಿದ್ದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡ. ಆದರೆ ನಿಜಾಮುದ್ದೀನ ಬಹಳ ಸೋಯಿ ವ್ಯಾಪಾರವಾಯಿತು. ಅವುಗಳ ಬೆಲೆ ನೀನು ನೀಡಿದುದಕ್ಕಿಂತ ದುಪ್ಪಟ್ಟು, ಹೆಚ್ಚು ಎಂದು ನಕ್ಕ.
     ಕೆಲವರ ಸ್ನೇಹ ದುಬಾರಿ, ಅಲ್ಲಿ ಖುಸ್ರೋನಂತೆ ಕಳೆದುಕೊಳ್ಳುವುದೇ ಜಾಸ್ತಿ. ಆದರೆ ಅದಕ್ಕೆ ಆತ್ಮವಿಶ್ವಾಸ, ಪುಣ್ಯ, ಎದೆಗಾರಿಕೆಯ ಶಕ್ತಿ ಇರತ್ತದೆ. ಅದು ಶರೀಫನೊಂದಿಗೆ ಶೆರೆ ಕುಡಿದಂತೆ. ಸೂಳೆ ಸಂಕವ್ವನೊಂದಿಗೆ ಸೇರಿ ಹಾದರ ಮಾಡಿದಂತೆ. ಆ ಭಾಗ್ಯವನ್ನು ಪಾತಕ ಲೋಕದ ಯಾವ ಶಕ್ತಿಯೂ ಕಸಿಯುವುದಲ್ಲ, ಕುಸಿಯುವದಿಲ್ಲ. ಏನೇ ಮಾಡಿದರು ತನಗೆ ಯಾವ ಪುಣ್ಯದ ನೆರಳಿದೆ? ಯಾವ ನೆಲದ ಸಂಸ್ಕøತಿಯ ಆತ್ಮವಿಶ್ವಾಸವಿದೆ? ಎನ್ನುವುದು ಕಾಯುತ್ತಿರುತ್ತದೆ. ಇಂಥ ಸುಂದರ, ಅವಶ್ಯಕ ಬೇಲಿಗಳನ್ನು ಹಾರಿದವರು ಹಾದಿ ತಪ್ಪುತ್ತಾರೆ. ತಪ್ಪಿದ ಹಾದಿ ತಪ್ಪುತ್ತಲೇ ಹೋಗುತ್ತದೆ. ಆತ್ಮವಂಚನೆಯ ಖುಷಿಯಲ್ಲಿದ್ದವರು ಕುಸಿಯುತ್ತಲೇ ಹೋಗುತ್ತಾರೆ. ಹೊಸ್ತಿಲು ದಾಟಿ, ಹೊಸ್ತಿಲು ಸಿಗದ, ಲಾಜುಗಳ, ಘರವಾಲಿಗಳ, ಮೊಬೈಲು, ಪೈರಸಿ, ಪುಂಡರ, ವ್ಯಾಪಾರಿಗಳ, ತಲೆಹಿಡುಕರ ಸಂಸಾರಗಳ ಹದ ಮುರಿಯುವ ಮಿಂಡರ ಪಾಲಿನ ದಂಡ-ದೇಹವಾಗುತ್ತ ಹೋಗುತ್ತಾರೆ. ಈ ಪಾತಕಿಗಳು ನಮ್ಮನ್ನು ಒಮ್ಮೆ ದಾರಿ ತಪ್ಪಿಸುತ್ತಾರೆ, ಆದರೆ ನಾವು ನಿತ್ಯ ಸಾಯುತ್ತೇವೆ. ಅಂದಹಾಗೆ ನಮ್ಮ ಬದುಕಿನಲ್ಲಿದ್ದ ದಾರಿ ತಪ್ಪಿದ ಗೆಳೆಯನೊಬ್ಬನ ಬಗೆಗೆ ನಿಮಗೆ ಹೇಳಬೇಕು-
        ಇಂದಿಗೆ ಹದಿನಾಲ್ಕು ವರ್ಷಗಳ ಹಿಂದೆ, ಧಾರಾಡದ ಗಾಂಧಿ ಚೌಕನಲ್ಲಿ 'ನಿವೇದಿತಾ ಮೆಡಿಕಲ್ಸ್' ತೆರೆದುಕೊಂಡು, ಆಗಷ್ಟೇ ಸಂಶೋಧನೆಯಲ್ಲಿ ತೊದಗಿಕೊಂಡಿದ್ದ ಅನೇಕ ಗೆಳೆಯರನ್ನು ಕರೆದುಕೊಂಡು, ನನ್ನ ಮನೆತನದಲ್ಲಿಯೇ ಈ ಹಿಂದೆಂದೂ ಇರದ ವ್ಯಾಪಾರ ಲೋಕದಲ್ಲಿ ಒಂದು ಪ್ರಾಯೋಗಿಕ ಹೆಜ್ಜೆ ಇರಿಸಿದೆ. ಇಟ್ಟ ಹೆಜ್ಜೆಯ ಹಿಂದೆ ಪ್ರಾಮಾಣಿಕ ಹಸಿವಿತ್ತು, ಪ್ರಾಮಾಣಿಕ ಗೆಳೆಯ-ಗೆಳತಿಯರ ಬಳಗವಿತ್ತು, ಅನೇಕ ವೈದ್ಯರುಗಳ ಪ್ರಾಮಾಣಿಕ ಪ್ರೋತ್ಸಾಹವಿತ್ತು. ಕಡಿಮೆ ಸಂಪಾದನೆಯಾದರೂ ಚಿಂತೆಯಿಲ್ಲ, ಆದರೆ ಕಾಳಸಂತೆಯಲ್ಲಿ ಚಲಾವಣೆಯಲ್ಲಿರುವ ಅನೈತಿಕ ಔಷಧಿಗಳನ್ನೆಲ್ಲ ಬದಿಗಿರಿಸಿ ವ್ಯಾಪಾರ ಮಾಡಬೇಕೆಂಬ ಪ್ರಾಮಾಣಿಕ ಮನಸ್ಸು, ಈರ್ವರ ಉದ್ದೇಶವಾಗಿತ್ತು. ಹೀಗಾಗಿ ಹೆಜ್ಜೆಯ ಹಾದಿಯಲ್ಲಿಯೂ ಹಸಿರು ಹುಟ್ಟಿತು. ಹುಟ್ಟಿದ ಹಸಿರು ಹತ್ತಾರು ಕುಟುಂಬಗಳ ಪಾಲಿಗೆ ಅನ್ನದ ದಾರಿಯಾಯಿತು. ಹಾಗಾದರೆ ಇಲ್ಲಿ ಸೇರಿದವರೆಲ್ಲರೂ ಪ್ರಾಮಾಣಿಕರಾದವರೆ?
          ಇಲ್ಲ, ಹಾಗಿರಲಿಲ್ಲ. ನಮ್ಮೊಲ್ಲೊಬ್ಬ ಕೆಲಸಗಾರನಿದ್ದ, ಆತನ ಹೆಸರು ವಿಕ್ರಮ. "ಏನಯ್ಯ ಚಕ್ರಮ್" ಎಂದೂ ಕೆಲವೊಮ್ಮೆ ಆತನಿಗೆ ಚುಡಾಯಿಸುತ್ತಿದ್ದೆವು. ಆತ ಸ್ವಾಮಿ ಅಯ್ಯಪ್ಪನ ಪರಮ ಭಕ್ತನೂ ಕೂಡ. ಮುದ್ದಾದ ಮುಖ, ಆದರೆ ಆತನ ಕಣ್ಣುಗಳು ಮಾತ್ರ ಸರಿ ಇರಲಿಲ್ಲ. ನನ್ನ ಪಾಲಿಗೆ ಮನುಷ್ಯನ ವ್ಯಕ್ತಿತ್ವದಲ್ಲಿ ಅತ್ಯಂತ ಪ್ರಾಮಾಣಿಕವಾದ ಅಂಗವೇ ಈ ಕಣ್ಣುಗಳು. ನಮ್ಮ ನಾಲಿಗೆ ನುಡಿಯದ ನಮ್ಮೊಳಗಿನ ಅನೂಹ್ಯ ಲೋಕವನ್ನು ಈ ನಮ್ಮ ಕಣ್ಣುಗಳು ತೆರೆದಿಟ್ಟುಬಿಡುತ್ತವೆ. ಅಂತೆಯೇ ಅಕ್ಕಮಹಾದೇವಿ ಅನುಭವ ಮಂಟಪಕ್ಕೆ ಬಂದಾಗ, ಅಲ್ಲಮ ಪರೀಕ್ಷಿಸಿದ ಅತಿ ಮುಖ್ಯ ಅಂಗ ಆಕೆಯ ಕಣ್ಣು. ಅಲ್ಲಿ ವಾಂಛೆಗಳು ಸತ್ತು ನಿಶ್ಚಲವನ್ನು ಕಂಡಾಗಲೇ ಆಕೆಗೆ ಶರಣಸಂಗಕ್ಕೆ ಅನುಮತಿಸಿದ್ದು.
          ಈ ನಮ್ಮ ಚಕ್ರಮ್ ಸಾರಿ, ವಿಕ್ರಮ ಮೆಲ್ಲಗೆ ಅಂಗಡಿಯಲ್ಲಿ ಕದಿಯಲು ಶುರುವಿಟ್ಟುಕೊಂಡ. ಸುಗಂಧ ಎಣ್ಣೆಯ ಪಾಕೀಟು, ಶಾಂಪೂ ಸಾಚೆಟ್, ಪೌಡರ್ ಬಾಕ್ಸ್ ಹೀಗೆ ಅವಕಾಶ ಸಿಕ್ಕಾಗಲೆಲ್ಲ ಒಂದು ಭಂಡಧೈರ್ಯ ಮಾಡಿ ಗೆದ್ದ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದ್ದ. ಆತನ ಆ ಭಂಡ ಸಾಹಸ ನಮಗೀರ್ವರ ಸಹೋದರರಿಗೂ ತಿಳಿದಿತ್ತು. ಆದರೆ ಮಾಡುವುದೇನು? ಇಂದೋ, ನಾಳೆಯೋ ಮನಸ್ಸು ಮಾಗಬಹುದು, ಆತನೊಬ್ಬ ಉತ್ತಮ ಮನುಷ್ಯನಾಗಬಹುದು ಎಂಬ ನಿರೀಕ್ಷೆಯಲ್ಲಿಯೇ ಕಾಲ ಉರುಳಿತು. ಆದರೆ ವಿಕ್ರಮ, ಚಕ್ರಮನಾಗುತ್ತಲೇ ಹೋದ. ನಮ್ಮ ನಿರೀಕ್ಷೆಗೆ ವಿರುದ್ಧವಾಗಿ ಕದಿಯುವಿಕೆಯಲ್ಲಿ ಮಾಹೀರನಾಗುತ್ತ ಹೊರಟ. ಏನು ಮಾಡುವುದು? ಒಳ್ಳೆಯ ಕೆಲಸಗಾರ ಚಟ ಮಾತ್ರ ಕೆಟ್ಟದ್ದು. ಚಿಂತೆಯಾಯಿತು. ನಮಗೆ ಈಗ ಚಿಕ್ಕಂದಿನಲ್ಲಿ ಮನೆಯಲ್ಲಿ ನಡೆದ ಒಂದು ಘಟನೆ ನೆನಪಾಯಿತು. ಯಾರೂ ಇಲ್ಲದ ವೇಳೆಯಲ್ಲಿ ಮನೆಯೊಳಗಿನ ಮಿಠಾಯಿಯನ್ನು ಕದಿಯುತ್ತಿದ್ದ ನನ್ನ ಅಣ್ಣನೊಬ್ಬನಿಗೆ, ಒಂದು ದಿನ ನಮ್ಮ ತಂದೆ ಎಲ್ಲ ಮಿಠಾಯಿ ಡಬ್ಬಗಳನ್ನು ಆತನ ಮುಂದಿರಿಸಿ, ತಿನ್ನಲು ಹೇಳಿದರು. ಜೊತೆಗೆ ಬೆತ್ತ ಮುರಿಯುವವರೆಗೆ ಶಾಸ್ತಿ ಮಾಡಿದರು. ಇದೇ ಸರಿಯಾದ ಮಾರ್ಗವೆ?
          ನಾವಿಬ್ಬರೂ ಸಹೋದರರು ಸೇರಿ ಒಂದಂತೂ ಮಾಡಿದೆವು. ಯಥಾ ಪ್ರಕಾರ ರಾತ್ರಿ ಅಂಗಡಿ ಮುಚ್ಚುವ ಸಮಯ. ವಿಕ್ರಮ ಕದಿಯುವಿಕೆಯಲ್ಲಿ ತಲ್ಲೀನನಾಗಿದ್ದ. ಆಗ ಹೋಗಿ ನನ್ನ ತಮ್ಮ ಆತನನ್ನು ವಸ್ತು ಸಮೇತ ಹಿಡಿದುಕೊಂಡ. ಆದರೆ ಬಡಿಯಲಿಲ್ಲ, ಬೈಯಲಿಲ್ಲ, ಬದಲಿಗೆ ಯಾವ ವಸ್ತುವನ್ನು ಆತ ಕದಿಯುತ್ತಿದ್ದನೋ ಅದನ್ನು ಕೈ ತುಂಬ ನೀಡಿ, ಗಂಟೆಗಳವರೆಗೂ ಆತನ ಒಳ್ಳೆಯ ಸೇವೆಯನ್ನು ಕುರಿತು ಹೇಳಿ ಬಿಳ್ಕೊಟ್ಟ. ವಿಕ್ರಂ ಅಳಲಾರಂಭಿಸಿದ, ತಿದ್ದಿಕೊಳ್ಳುತ್ತೇನೆ ಎಂದು ಗೋಗರೆದ, ಆದರೆ ನಮಗೆ ಎಲ್ಲವೂ ಬೇಡವಾಗಿತ್ತು. ಅಪರಾಧಿಯ ಮುಖ ಹೊತ್ತು ಆತ ನಮ್ಮೊಂದಿಗಿರುವುದು ಒಂದು ರೀತಿಯ ಚಿತ್ರಹಿಂಸೆಯಾಗಿತ್ತು. ಈಗ ಆತನನ್ನು ಬಿಳ್ಕೊಡುವುದೊಂದೇ ಸರಿಯಾದ ದಾರಿಯಾಗಿತ್ತು.

          ಕಣ್ಣೀರಿಟ್ಟು ಹೊರಗೆ ಹೊರಟಿದ್ದ ವಿಕ್ರಂ ನಿಮ್ಮ ಚಪ್ಪಲಿಗಳನ್ನು ಕೊಡಿ ಬದುಕಿನುದ್ದಕ್ಕೂ ಪೂಜಿಸುತ್ತೆನೆ, ಮನುಷ್ಯನಾಗುತ್ತೇನೆ ಎಂದ. ಆದರೆ ಕೊಡಲು ನಾವು ನಿಜಾಮುದ್ದೀನನಂಥ ಗುರುವೂ ಆಗಿರಲಿಲ್ಲ, ಪೂಜಿಸಲು ಆತ ಅಮೀರ್ ಖುಸ್ರೋವಿನಂಥ ಶಿಷ್ಯನೂ ಆಗಿರಲಿಲ್ಲ. ಕ್ಷಣದ ಭಾವನಾತ್ಮಕ ಮಾತು. ಆತನದೊಂದು ಹದ್ದು ಮೀರಿದ ಹಾದಿ, ಕೈ ಹಿಡಿದು ಅಪರಾಧಗಳ ಹೆದ್ದಾರಿಗೆ ಬಿಡುವುದೊಂದೇ ನಮ್ಮ ಗುರಿಯಾಗಿತ್ತು. ಈಗ ಆತ ಆಪರಾಧಿಗಳ ಸಾಲಿನಲ್ಲಿ. ಹೆದ್ದಾರಿಗೆ ಬಿಟ್ಟ ನಾವು. . . . . ? What is the use of fast running, when you are on immoral way. ಅಲ್ವೆ?