“ಅಮೃತವನ್ನು
ಉಣ್ಣುವ ಶಿಶುವಿಗೆ ವಿಷವನು ಉಣಿಸುವರೇ ಅಯ್ಯ?
ನೆರಳ ತಂಪಿನಲಿ
ಬೆಳೆದ ಸಸಿಗೆ ಉರಿಯ ಬೇಲಿಯ ಕಟ್ಟುವರೆ ಅಯ್ಯ”
ಅಣ್ಣನ ಈ ಸಾಲುಗಳನ್ನು ಮೆಲುಕು ಹಾಕುತ್ತ, ಬೆಂಗಳೂರಿಗೆ ಬಂದ
ಹೊಸದರಲ್ಲಿ ನಮಗೆ ಸಹಾಯಕನಾಗಿ ಸಹಕರಿಸಿದ ಕಿರಿಯ ಬಸವರಾಜನ ದುರ್ಗತಿಯನ್ನು ನೆನಪಿಸಿಕೊಳ್ಳುತ್ತ, ಇಲ್ಲೊಂದು
ಝರಾಕ್ಸ್ ಇಟ್ಟುಕೊಂಡು ತಾಯಿಯನ್ನು ಸಲಹುತ್ತ ಬದುಕಿದ್ದ ಬಸವರಾಜನಿಗೆ ಬಡತನವಿತ್ತು. ಆದರೆ ಅಕ್ರಮದ
ಆಕರ್ಷಣೆ ಇರಲಿಲ್ಲ. ಇಂಥ ಹುಡುಗ ಬಿ.ಎಂ.ಟಿ.ಸಿ ಎಂಬ ರಕ್ಕಸ ವಾಹನದ ಬಾಯಿಯಿಂದ ತಪ್ಪಿಸಿಕೊಳ್ಳಲು ದ್ವಿಚಕ್ರ
ವಾಹನದೊಂದಿಗೆ ಚರಂಡಿಗೆ ಜಿಗಿದ. ಬಸವರಾಜ ಜೀವ ಉಳಿಸಿಕೊಂಡ ಆದರೆ ಕಾಲು ಕಳೆದುಕೊಂಡ. ದಿನಕ್ಕೆ
400 ಗಳಿಸುವ ಯುವಕನಿಗೆ 4 ಲಕ್ಷ ರೂಪಾಯಿಗಳ ಆಸ್ಪತ್ರೆ ಬಿಲ್ಲು. ಕಣ್ಣೀರಾಗುತ್ತದೆ ಈ ಕ್ಷಣ. ಯಾವ
ಯಾವ ಆಕರ್ಷಣೆಗೋ ಪ್ರಪಂಚ ಗೆಲ್ಲುವ ಹುಮ್ಮಸ್ಸಿನಲ್ಲಿ ನಿತ್ಯ ಬೆಂಗಳೂರೆಂಬ ಮಾಯೆಯ ಮೋಹಿಸಿ ಬರುವವರಲ್ಲಿ
ಅದೆಷ್ಟು ಜನ ಮರಳಿ ಹೋಗುತ್ತಾರೊ.
ಅಂದಹಾಗೆ, ಗೆಳೆಯ
ವಾದಿರಾಜರ ತಂದೆ ವೈಕುಂಠದ ದಾರಿಯಲ್ಲೋ? ಲೋಕದ ಜಂಜಾಟದಲ್ಲೋ ಎಂದು ದುಗುಡ ಪಡುತ್ತ ಕಳೆದ ಆರು ದಿನಗಳಿಂದ
ಕರ್ನಾಟಕದ ರಾಜಧಾನಿಯಿಂದ ಮಹಾರಾಷ್ಟ್ರದ ಜತ್ತವರೆಗೆ ಕಾರು ಓಡಿಸುತ್ತಲೇ ಇದ್ದೆ.
ಕಳೆದವಾರ ಪೆಶಾವರದಲ್ಲಿ
ಮಕ್ಕಳ ಮಕ್ಕಳ ಮಾರಣಹೋಮದ ಮರುದಿನ ನಮ್ಮ ಎಂ.ಎಸ್.ಬಿಲ್ಡಿಂಗ್ ಸುತ್ತ ಪೋಲಿಸ್ ಸರ್ಪಗಾವಲು. ಕಾರಣ,
ಬಾಂಬ್ ಇಟ್ಟಿದ್ದಾರೆಂಬ ಹುಸಿ ಸುದ್ದಿ. ನಾವಾರೂ ಬ್ಲಾಸ್ಟ್ ಆಗಲೇ ಇಲ್ಲ.
ಜಮಖಂಡಿಯಲ್ಲಿ ಕಳೆದ ಮೂರು ದಿನಗಳಿಂದ
ಜನಪದ ಕಲಾ ಮತ್ತು ಶರಣ ಸಂಸ್ಕøತಿ ಉತ್ಸವ. 2 ನೇ ದಿನದ(26.12.2014) ಮುಂಜಾನೆ ಗೋಷ್ಠಿಯ ಮುಖ್ಯ ಅತಿಥಿ
ನಾನು. ಅದರ ಹಿಂದಿನ ದಿನವೇ ನನ್ನ ‘ಅರ್ಧ ಸತ್ಯದ ಹೆಣ್ಣ’ನ್ನು ಮೋಹಿಸಿ ಕುಳಿತಿದ್ದ ಹಿರಿಯರ ಬಳಗ ಒಂದನ್ನು
ಉದ್ದೇಶಿಸಿ ನನ್ನ ಮಾತು ಶುರುಮಾಡಿಕೊಂಡಿದ್ದು, ಅಣ್ಣನ ಒಂದು ಅಪರೂಪದ ವಚನದಿಂದ-
“ಭಕ್ತಿ-ರತಿ
ಎಂಬ ಮದುವೆಗೆ
ಕಣಗಿಲೆಯ ಉಂಗುರವನ್ನಿಕ್ಕಿ
ಮೊಲ್ಲೆ-ಮಲ್ಲಿಗೆಯ
ತೋರಣ ಕಟ್ಟಿ
ಸೇವಂತಿಗೆಯ
ಚಪ್ಪರವನ್ನಿಕ್ಕಿ
ಪುಷ್ಪ ಜಾತಿಗಳೆಲ್ಲ
ನಿಬ್ಬಣವ ಬನ್ನಿರೆ
ನಮಗೆಯೂ ನಮ್ಮ
ಕೂಡಲಸಂಗಮ ದೇವನಿಗೂ ಮದುವೆ”
ಅಬ್ಬ! ಎಂಥ ಹೆಣ್ಣಾಗಿದ್ದ ನಮ್ಮ ಬಸವಣ್ಣ! ಅಂತಯೇ ಅಲ್ಲವೆ
ಬೇಡಿದ ಶರಣರಿಗೆ ನೀಡದಿರ್ದೆಡೆ ತಲೆದಂಡ ಎಂದು ತನಗೆ ತಾನೇ ಅಂಕೆ ಹಾಕಿಕೊಂಡು ಅಸಂಖ್ಯ ಶರಣರನ್ನು ತಾಯಿಯಂತೆ
ಸಲಹುವುದು ಆತನಿಗೆ ಸಾಧ್ಯವಾದುದು.
ಶರಣ ಮಂಟೂರರ
ಬಸವಾಶ್ರಮದ ಮಹಾ ವೇದಿಕೆಯ ಮುಂದಿನ ದಾರಿಯ ಕುರಿತು ನಾನು ಮಾತನಾಡಿದೆ. ಮೂರು ಜನ ಮಹಾನ್ ಸಾಧಕರ ಸಾಧನೆಗೆ
ಸಾಕ್ಷಿಯಾದ ದಾರಿ ಅದು. ಈ ದಾರಿಯ ಆರಂಭದಲ್ಲಿ ಐದು ಎಕರೆಯಷ್ಟು ವಿಸ್ತಾರ ಭೂಮಿಯಲ್ಲಿ ಅಂತರ್ ರಾಷ್ಟ್ರೀಯ
ಕುಸ್ತಿ ಖ್ಯಾತಿಯ ನನ್ನ ಸಹೋದರ ರತನ ಮಠಪತಿಯ ಕುಸ್ತಿ ತರಬೇತಿ ಕೇಂದ್ರವಿದ್ದರೆ, ಈ ದಾರಿಯ ಕೊನೆಗೆ
ಸತ್ಯ ಕಾಮರ ಸಮಾಧಿ. ಮಧ್ಯದಲ್ಲಿ ಮಂಟೂರರ ಮಹಾಮನೆ. ಇವೆಲ್ಲ ಮನುಷ್ಯ ಹೃದಯ ಸೌಂದರ್ಯಕ್ಕೆ ಸಾಕ್ಷಿಯಾದ
ಸ್ಥಾವರಗಳು.
“ಮಾಡಿ ಆಡಲೇತಕ್ಕೆ?
ಸಲಹಿ ಕೊಲ್ಲಲೇತಕ್ಕೆ?” ಇದು ಶರಣರ ಪ್ರಶ್ನೆ. ಮಂಟೂರರು ನನ್ನನ್ನು ಆ ದೊಡ್ಡ ಸಭೆಗೆ ಮುಖಾ-ಮುಖಿಯಾಗಿಸುವಾಗ
ಹೇಳಿದ ಒಂದು ಮಾತು, “ರಾಗಂರ ಸಾಹಿತ್ಯ ನಿಮಗೆಲ್ಲರಿಗೂ ಗೊತ್ತು ಆದರೆ ಅವರ ಭಾಷಣ ಮತ್ತು ಅವರ ಶಬ್ಧಗಳೊಳಗೆ
ಇರುವ ಮೌನ ಮತ್ತು ಅವರ ಆಂಗಿಕ ಶೈಲಿಗಳನ್ನು ನೀವೆಲ್ಲ ಗಮನಿಸಬೇಕು ಎನ್ನುವುದೇ ನನ್ನ ಈ ಬರಮಾಡುಕೊಳ್ಳುವಿಕೆಯ
ಮುಖ್ಯ ಉದ್ದೇಶವಾಗಿತ್ತು. ಹೀಗಾಗಿ ಇಡೀ ಕೃಷ್ಣಾ ತೀರದ ಬಂಧುಗಳ ಪರವಾಗಿ ನಾನವರನ್ನು ಸನ್ಮಾನಿಸುತ್ತಿದ್ದೇನೆ.
ಅವರ ಶ್ರೀಮತಿಯನ್ನು ಈ ಆಶ್ರಮದ ಮಗಳೆಂದು ಒಪ್ಪಿಕೊಂಡು ಈ ತವರಿಗೆ ಬರಲು ಮತ್ತೆ ಮತ್ತೆ ಕೋರಿಕೊಳ್ಳುತ್ತೇನೆ.”
ಎಂಥ ಪ್ರೀತಿಯ ಸ್ವಾಗತ.
ಮರುದಿನ ಸತ್ಯಕಾಮರ ಕಲ್ಲೊಳ್ಳಿಯ ‘ಸುಮ್ಮಾನ’ಕ್ಕೆ
ಗೆಳೆಯ ಅರ್ಜುನ್ ಕೋರಟ್ಕರ್ ಮತ್ತು ಹಿರಿಯ ಸಾಹಿತಿ ನಾ. ಮೊಗಸಾಲೆಯವರಿಂದ ಆಹ್ವಾನ. ಲೇಖಕಿ ವೀಣಾ ಬನ್ನಂಜೆ
ನಮಗಾಗಿ ಕಾಯುತ್ತಿದ್ದರು. ಆದರೆ ಹಿಂದಿನ ದಿನದ ಗುಡ್ಡ ಸುತ್ತಾಟದಿಂದ ದಣಿದಿದ್ದ ನನಗೆ ಏನೂ ಬೇಡವಾಗಿತ್ತು.
ಜೊತೆಗೆ ಸಂಯುಕ್ತ ಕರ್ನಾಟಕದ ವ್ಯಾಪ್ತಿಯಿಂದ ಪ್ರಾಪ್ತವಾಗಿದ್ದ ಮಹಾರಾಷ್ಟ್ರದ ಅಭಿಮಾನಿ ಬಳಗವನ್ನು
ನಾನು ಉದ್ದೇಶಿಸಬೇಕಾಗಿತ್ತು.
ಬೆಂಗಳೂರು ಬಿಡುತ್ತಲೆ, ಶರಣ ಈಶ್ವರ
ಮಂಟೂರ ಮತ್ತೆ ಮತ್ತೆ ನನಗೆ ಹೇಳಿದ ಒಂದೇ ಮಾತು, ನಮ್ಮೊಂದಿಗೆ ಸಭಾಪತಿ ಶ್ರೀ ವೀರಣ್ಣ ಮತ್ತಿಕಟ್ಟಿ,
ಹಿರಿಯ ರಾಜಕಾರಣಿ ದೊಡ್ಡಣ್ಣವರ ಮತ್ತು ಹುಕ್ಕೇರಿ ಮಠದ ಶ್ರೀಗಳು ಇರುತ್ತಾರೆ. ಇಡೀ ದಿನ ನೀವು ನಮ್ಮೊಂದಿಗಿರಬೇಕು.
ಖಂಡಿತವಾಗಿಯೂ ಅವರ ಮಾತಿಗೆ ಅರ್ಥವಿತ್ತು. ಸುಮಾರು ಹತ್ತು ಸಾವಿರ ಜನ ಸೇರಿದ ಈ ಸಮಾರಂಭದಲ್ಲಿ ಅವರು
ನನ್ನ ಸಾಹಿತ್ಯಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಅವಕಾಶವು ನನಗೆ ಸಂತಸ ನೀಡಿತು.
ದಿನಾಂಕ 25 ಮತ್ತು
26 ಡಿಸೆಂಬರ್, ಈ ಎರಡು ದಿನಗಳು ನನ್ನ ಪಾಲಿಗೆ ಅತ್ಯಂತ ಮಹತ್ವದವುಗಳು. ಒಂದೆಡೆ ಉಜರೆಯಲ್ಲಿ ನಡೆಯುತ್ತಿರುವ
ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಡಾ. ಎ. ಸತ್ಯನಾರಾಯಣ ಹಾಗೂ ಡಾ. ಅವಿನಾಶ ನನ್ನ ಗಾಂಧಿ, ಕಾವ್ಯ,
ಸಾಕಿ ಕುರಿತೇ ಮಾತಾಡಿ ನಮ್ಮ ಉತ್ತರ ಭೂಪರ ಗರ ಬಿಡಿಸಿದ್ದಾರೆ. ಇನ್ನೊಂದೆಡೆ ಅದೇ ದಿನ ಬೆಂಗಳೂರಿನ
ಜೆ.ಪಿ.ನಗರದಲ್ಲಿ ಶ್ರೀ ನಾಗತಿಹಳ್ಳಿ ನನ್ನ ‘ಕಾವ್ಯಕ್ಕೆ ಉರುಳು’ ಮತ್ತು ‘ಹೆಣ್ಣು ಹೇಳುವ ಅರ್ಧ ಸತ್ಯ’
ಬಿಡುಗಡೆ ಮಾಡಿ ನನ್ನ ವ್ಯಾಪ್ತಿಯನ್ನು ವಿಸ್ತರಿಸಿದ್ದಾರೆ. ಇವೆರಡರಲ್ಲೂ ಅನುಪಸ್ಥಿತನಿದ್ದ ನಾನು
ಅಣ್ಣನ ಒಂದು ಸಾಲನ್ನು ವರ್ಷಾಂತ್ಯಕ್ಕೆ ತಲೆಯಲ್ಲಿ ಸೇರಿಸಿಕೊಂಡು ನನ್ನೊಳಗೇ ಇಳಿಯುತ್ತಿದ್ದೇನೆ.
ಹೊರ ಬರಬೇಕಾದ ನನ್ನ ಬುದ್ಧನ ಬೆಳಕಿಗಾಗಿ ಸಿದ್ಧನಾಗುತ್ತಿದ್ದೇನೆ.
ಗೆಳೆಯ ವಿಠ್ಠಲ
ದಳವಾಯಿ ಹಾಗೂ ಸಮಗ್ರ ಕುಟುಂಬ, ಶ್ರೀ ಸುತಾರ, ಹಾದಿಮನಿ, ಜಮಖಂಡಿ, ಬನಹಟ್ಟಿ ಮತ್ತು ಇಡೀ ಉತ್ತರ ಮತ್ತು
ಗಡಿ ಕರ್ನಾಟಕದ ಅಭಿಮಾನಿ ಬಳಗಕ್ಕೆ ನನ್ನದೊಂದೇ ಸಾಲು-
“ನಿಮ್ಮ ಪಾದವ ಹಿಡಿದಿಪ್ಪ ಮಹಾ ಪದವಿಯ ಕರುಣಿಸಿದಿರಿ”