Total Pageviews

Thursday, February 12, 2015

ಚಿಂತೆ-ಚಿಂತನೆ ಮತ್ತು ಚಿರಸ್ಮರಣೆ



ಜೀವ ಹೋಗುವ ಈ “ದೇಹ”
ನಾಶವಾಗುವ ಈ “ಸಂಪತ್ತು”
ಮಾಸಿ ಹೋಗುವ ಈ “ಸೌಂದರ್ಯ”
ಈ ಮೂರು ದಿನಗಳ ಬಾಳಿನ ಮಧ್ಯೆ
ನೋಡಿದಾಗ ಉಳಿಯೊದೊಂದೆ
“ನಮ್ಮ ನಡೆ ನುಡಿ”
ಇದು ದಿನಾಂಕ:07-02-2015 ರಂದು ಮಧ್ಯಾಹ್ನ ಮೂರು ಗಂಟೆ, ಆರು ನಿಮಿಷಕ್ಕೆ ಬಂದ ಮಹಾತಾಯಿಯೊಬ್ಬಳು ಕಳುಹಿಸಿದ ಸಂದೇಶ. ಒಳ್ಳೆಯದು ಎಲ್ಲಿಂದಲೇ ಬರಲಿ, ಅದನ್ನು ಪ್ರಸಾದದಂತೆ ಹಂಚಿಕೊಳ್ಳಬೇಕಾದದು ಒಬ್ಬ ಸುಶೀಕ್ಷಿತನ ಕರ್ತವ್ಯ. ಇದು ಅನುಕರಿಸಬೇಕಾದ ದಾರಿಯೇ. ಈ ವಾರದುದ್ದಕ್ಕೂ ನನಗೆ ಇಂಥವರ ಭೇಟಿಯಾಗಿದೆ.   
 ಕೆಲವರು ಬದುಕಿಗಾಗಿ ಬದುಕುತ್ತಾರೆ, ಮತ್ತೆ ಕೆಲವರು ಬೆಳಕಿನಂತೆ ಬದುಕುತ್ತಾರೆ, ಇನ್ನು ಕೆಲವರು ಬೆಳಕೇ ಆಗುತ್ತಾರೆ. ತೆಲುಗಿನ ಕವಿ ಡಾ. ರಾವೂರಿ ಭಾರದ್ವಾಜರ ಬದುಕಿನ ಈ ಘಟನೆಯನ್ನು ಓದಿ - “ಡಾ. ರಾವೂರಿ ಭಾರದ್ವಾಜರು ತಮಗೆ ದೇವರು ಕರುಣಿಸಿದ ಇನ್ನೊಂದು ಶ್ರೇಷ್ಠ ವರ ಎಂದರೆ ತಮ್ಮ ಮಡದಿ ಕಾಂತಮ್ಮ ಎಂದು ಪುನರಪಿ ಉಚ್ಚರಿಸಿದ್ದಾರೆ. ಶಿಕ್ಷಣ ಶೂನ್ಯಳಾಗಿದ್ದ ಕಾಂತಮ್ಮನವರು ರಾವೂರಿಯವರ ಐದು ಬೃಹತ್ ಗ್ರಂಥಗಳಿಗೆ ವಸ್ತುವಾಗಿರುವುದೊಂದು ಸಾಹಿತ್ಯ ಪ್ರಪಂಚದ ವಿಸ್ಮಯವೆನಿಸಿದೆ. ಕಾಂತಮ್ಮನವರು ವಿಧವಶರಾದ ದಿನದಿಂದ ಅವರ ವ್ಯಕ್ತಿತ್ವವನ್ನು ಸ್ಮರಿಸುತ್ತ ನಿತ್ಯ ದಿನಚರಿ ಬರೆದರು. ಒಂದಲ್ಲ! ಎರಡಲ್ಲ!.... ಐದು ವರ್ಷಗಳ ಕಾಲ ಅವ್ಯಾಹತವಾಗಿ ಕಾಂತಮ್ಮನವರನ್ನು ಕುರಿತು ಬರೆದ ಈ ಪುಟಗಳು ಐದು ಸಂಪುಟಗಳಷ್ಟು ಚಾಚಿಕೊಂಡಿವೆ. ಪ್ರತಿ ವರ್ಷದ ಶ್ರಾದ್ಧದ ದಿನ ಒಂದೊಂದು ಪುಸ್ತಕ ಪ್ರಕಟಗೊಂಡವು. ಇವನ್ನು ಇಡಿಯಾಗಿ ‘ವಿಲಾಪ ಪಂಚಕ’ ಎಂದೆ ಕರೆದರು. ಈ ಗ್ರಂಥವನ್ನು ಶ್ರೀಮತಿ ಸರಿತಾ ಜ್ಞಾನಾನಂದರು ಕನ್ನಡಕ್ಕೆ ಅನುವಾದ ಮಾಡಿ ಎರಡು ಸಂಪುಟಗಳಲ್ಲಿ ಹೊರ ತಂದಿದ್ದಾರೆ. ‘ವಿಲಾಪ ಪಂಚಕ’ವು ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿಯೂ ಭಾಷಾಂತರಗೊಂಡಿದೆ. ಈ ಬಗೆಯ ವಿನೂತನ ವಸ್ತು ಭಾರತೀಯ ಸಾಹಿತ್ಯದಲ್ಲಿ ಇದೊಂದೇ ಉದಾಹರಣೆ.”
  ನಾನು ನಿಜಕ್ಕೂ ಚಿಂತನೆಗೆ ತೊಡಗಿಕೊಂಡಿದ್ದೇನೆ. ವಿಚಿತ್ರವೆಂದರೆ ಇದೆ, ಈ ಬದುಕಿನ ಜಾತ್ರೆಯಲ್ಲಿ ಕೆಲವರು ಚಿಂತೆಯಾಗುತ್ತಾರೆ, ಕೆಲವೇ ಕೆಲವರು ಮಾತ್ರ ಚಿಂತನೆಯಾಗುತ್ತಾರೆ. ಚಿಂತೆಯಾಗಿ ಕಾಡುವವರನ್ನು ಚಿತೆಯ ಮೇಲಿಟ್ಟು ಮೈ ತೊಳೆದುಕೊಳ್ಳುತ್ತೇವೆ. ಚಿಂತನೆಯಾಗಿ ಆಲೋಚನೆಗೆ ಈಡು ಮಾಡುವವರನ್ನು ಸ್ಮರಿಸಿ, ದೀಪ ಹಚ್ಚಿಟ್ಟು ಅದರ ಪ್ರಭೆಯಲ್ಲಿ ನಮ್ಮ ಮೈ-ಮನಗಳಿಗೆ ದೈವತ್ವ ತುಂಬಿಕೊಳ್ಳುತ್ತೇವೆ. 
 ನನಗೆ ಚಿಂತನೆಯಾಗಿ ಕಾಡಿದ ಪಾತ್ರಗಳಲ್ಲಿ ನನ್ನ ಹಿಂದಿನ ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ.ಐ.ಎಂ.ಮೋಹನ್ ಕೂಡಾ ಒಬ್ಬರು. ನಿವೃತ್ತನಾದ ಮನುಷ್ಯ ಸಾಮಾನ್ಯವಾಗಿ ಮಾಸಲು ಬಟ್ಟೆ ತೊಟ್ಟು, ಗಡ್ಡ ಬಿಟ್ಟುಕೊಂಡು, ಗೋಣಗುವ ಧ್ವನಿಯಲ್ಲಿ ತನ್ನ ಹಿಂದಿನ ಪರಾಕ್ರಮವನ್ನು ಪುಕ್ಕಟೆ ಹಂಚುತ್ತಾ ತಿರುಗುವ ದಂಡು-ದಂಡು ದೇಹಗಳನ್ನು ದಿನ ಸಾಯಂಕಾಲ ಮತ್ತು ಬೆಳಗಿನ ಬೆಂಗಳೂರಿನ ಗಾರ್ಡನ್‍ಗಳಲ್ಲಿ ನೋಡುತ್ತೇನೆ. ಆದರೆ ಈ ಮೋಹನ್ ಹಾಗಲ್ಲ. ಪ್ರಾಂಶುಪಾಲ ಹುದ್ದೆಯಿಂದ ಕೆಳಗಿಳಿಯುತ್ತಲೇ ಹೊಸ ಮನೆ ಕಟ್ಟಿಸಿದರು, ಸೊಸೆ ಮನೆ ಸೇರಿಸಿಕೊಂಡರು, ಹೊಸ ಕಾರು ತೆಗೆದು ಕೊಂಡರು, ಬಾರ್ ಕೌನ್ಸಿಲ್‍ನ ಮೌಖಿಕ ಪರೀಕ್ಷೆಯನ್ನು ಎದುರಿಸಿ ವಕೀಲರಾಗಿ ಆಪೀಸ್ ಶುರುವಿಟ್ಟು ಕೊಂಡರು. 
 ಆಗಲೂ-ಈಗಲೂ ಅಷ್ಟೇ ಅವರ ಕೈ ಹಿಡಿದು ಕುಲುಕಿದರು ಸಾಕು ಅಷ್ಟು ಸಕಾರತ್ಮಕ ಅಂಶಗಳು ನಮ್ಮ ಪಾಲಿಗೆ ದಕ್ಕಿ ಬಿಡುತ್ತದೆ. ಹೊಸ ವೃತ್ತಿ ಆರಂಭದ ಮೊದಲ ದಿನ ಮಕ್ಕಳನ್ನು ನೋಡುವ ತಂದೆಯಂತೆ ಬೆಂಗಳೂರಿನ ಹೈಕೋರ್ಟ್‍ನಿಂದ ನೇರವಾಗಿ ನಮ್ಮನ್ನು ನೋಡಲು ಎಂ.ಎಸ್.ಬಿಲ್ಡಿಂಗ್‍ಗೆ ಬಂದಾಗ ನಮ್ಮಗಿಬ್ಬರಿಗೂ ಎಲ್ಲಿಲ್ಲದ ಸಂಭ್ರಮ. ಯಾಕೆಂದರೆ ಅವರು ಪ್ರತಿ ಕ್ಷಣವೂ ಸಂಭ್ರಮ-ಶಕ್ತಿ ಮತ್ತು ಸಾಹಸದ ಮಿಸಾಲ್. 
ನಾಲ್ಕು ತಿಂಗಳಿಂದ ಬರಗೂರರ ಮನೆಗೆ ಹೋಗಲೇಬೇಕಿತ್ತು. ಇತ್ತಿಚಿಗೆ ‘ನಾಲಿಗೆ ನಂಬಿದ ನಾಯಕ’ ಎಂಬ ಗಾಂಧಿ ಕುರಿತಾದ ಅವರ ಲೇಖನದಲ್ಲಿ ನಾನು ಅಂತಿಮ ದಿನಗಳ ನನ್ನ ಗಾಂಧಿಯನ್ನು ಕಂಡುಕೊಂಡಿದ್ದೆ. ನಮ್ಮ ಭೇಟಿ ವಿಳಂಬಿಸುತ್ತಲೇ ಹೋಯಿತು. ಕಾರಣ, ಬರಗೂರರಿಗೆ ಡೆಂಗ್ಯೂ ಮತ್ತು ಶ್ರೀಮತಿ ಬರಗೂರರವರಿಗೆ ಚಿಕೂನ್ ಗುನ್ಯಾ. ಆದರೆ ಈ ಮಧ್ಯೆದಲ್ಲೂ ನಿರಂತರ ಫೋನ್ ಸಂಭಾಷಣೆಯಲ್ಲಿದ್ದ ಅವರು ನನ್ನ ‘ಪ್ರೀತಿ ನಲವತ್ತು ರೀತಿ’ ಲೋಕಾರ್ಪಣೆಗೆ ಬರಲು ಹಂಬಲಿಸಿದವರು. ‘ಅನಾರೋಗ್ಯವಿದೆ ಬೇಡ’ ಎಂದು ನನ್ನ ವಾದ. ‘ಇಲ್ಲ, ನಾನು ನಿಮ್ಮೆಲ್ಲರೊಂದಿಗೆ ಇರಬೇಕು’ ಎಂಬುದು ಅವರ ಹಠ. ಸರಿ, ‘ನಾನು ನಿಮ್ಮ ಮನೆಗೆ ಬಂದು ಹೋದ ಮೇಲೆ ವಿಚಾರ ಮಾಡೋಣ ಸರ್’ ಎಂದಿದ್ದ ನನಗೆ ಶ್ರೀಮತಿ ಬರಗೂರರು ಸಾಕಷ್ಟು ಕ್ರಷರಾಗಿದ್ದರೂ ಲವಲವಿಕೆಯಿಂದ ಹೋರಬಂದು ನನ್ನ ಶ್ರೀಮತಿಗೆ ಅರಿಶಿಣ-ಕುಂಕುಮವಿಟ್ಟಾಗ ಒಂದಿಷ್ಟು ಸಮಾಧಾನವಾಯಿತು. ನಾನು, ಗೆಳೆಯ ಶಂಕರ್ ಹೂಗಾರ, ಕುಮಾರ್ ಗೋವಿಂದ್ ಮತ್ತು ಬರಗೂರು ಸೇರಿಕೊಂಡು ರಾಜಕುಮಾರರ ಸರಳತೆಯ ಕುರಿತು ಎಷ್ಟೊಂದು ಮಾತಾಡಿಯಾಯಿತು. 
 ಬರಗೂರರ ಈ ದಿನದ ಮಾತು, ‘ಜಗದೇಕವೀರನಂತೆ ಚಿತ್ರಪಟದ ಮೇಲೆ ಮಾತನಾಡುತ್ತಿದ್ದ ರಾಜಕುಮಾರ್, ಕಣ್ಣೀರಿಟ್ಟದ್ದು ಬಹಳಷ್ಟು ಜನ ನೋಡಲಿಲ್ಲ. ನಾನು ಅದಕ್ಕೆ ಸಾಕ್ಷಿಯಾಗಿದ್ದೆ ರಾಗಂ. ಅವರ ಸಮಕಾಲೀನ ನಟರು ತಾವು ಎಲ್ಲರೂ ರಾಜಕುಮಾರರೇ ಎಂದು ಸಂಭ್ರಮಿಸದರೇ ವಿನಹಃ ಅವರ ಸರಳತೆಯನ್ನು ಮೈಗೂಡಿಸಿಕೊಂಡು ರಾಜಕುಮಾರರಾಗುವ ಪ್ರಯತ್ನ ಮಾಡಲಿಲ್ಲ. ಆದರೆ ನಮ್ಮ ರಾಜಕುಮಾರ್, ತಾನು ಮುತ್ತುರಾಜ ಎನ್ನುವುದನ್ನು ಎಂದೂ ಮರೆಯಲಿಲ್ಲ’. ಮುಂದುವರೆದ ಬರಗೂರು ನನಗೆ ಕೇಳಿದ ಒಂದು ಪ್ರಶ್ನೆ. ‘ರಾಗಂ ನನ್ನ ಬದುಕಿನ ಅತ್ಯಂತ ಸಂಭ್ರಮದ ಘಳಿಗೆ ಗೊತ್ತ ನಿನಗೆ? ಸ್ವಯಂ ರಾಜಕುಮಾರ್ ಮತ್ತು ಹೆಚ್.ನರಸಿಂಹಯ್ಯ ಇಬ್ಬರೂ ನಿಂತು ನನ್ನ ಮಗನ ಮದುವೆಗೆ ಮಂತ್ರಾಕ್ಷತೆಯನ್ನು ಹಾಕಿದ್ದು, ಯಾವ ಪುರೋಹಿತನಿಗೂ ನಾನು ಕರೆದಿರಲಿಲ್ಲ’. 
 ಟೇಬಲ್ ಮೇಲೆ ನನ್ನ ಚಹಾ ತಣ್ಣಾಗುತ್ತಿತ್ತು. ಮನಸ್ಸು, ಸಾರ್ಥಕವಾಯಿತು ಬಿಡು, ನನ್ನ ತಾಯಿ ಅಂಥ ಪುಣ್ಯಾತ್ಮನ ಹೆಸರಿಡುವಷ್ಟಾದರೂ ವಿವೇಚನೆಯನ್ನು ಬಳಸಿದ್ದಾಳಲ್ಲ ಎಂದು ಅಭಿಮಾನ ಪಡುತ್ತಿತ್ತು.   
ಪೂರಕವಾಗಿ ಮಾತನಾಡಿದ ಕುಮಾರ್ ಗೋವಿಂದ್, ಯಾವುದೊ ಸಂದರ್ಭದಲ್ಲಿ ಸುಮ್ಮನೆ ‘ಅಪ್ಪಾಜಿ, ಇಷ್ಟನೇ ತಾರೀಖು, ನನ್ನ ತಮ್ಮನ ಮದುವೆ ನೀವು ಬರಬೇಕು’ ಎಂದು ಹೇಳಿ ಹೋದರಂತೆ. ಆದರೆ ರಾಜಕುಮಾರ್ ಎಂಬ ಈ ದಾರಿ ತಪ್ಪದ ಮಗ ಎಲ್ಲರಿಗೂ ಮುಂಚಿತವಾಗಿ ಮದುವೆ ಮನೆಗೆ ಹೋಗಿ ಎಲ್ಲರನ್ನೂ ಮುಜಗರಕ್ಕೆ ಈಡು ಮಾಡಿದರಂತೆ.
ಅವರೆಲ್ಲರೂ ಎಸ್.ನಾರಾಯಣ್‍ರ ಮಗಳ ಮದುವೆಯ ಸಾಯಂಕಾಲದ ಸಮಾರಂಭಕ್ಕೆ ಹೋಗಬೇಕಿತ್ತು, ನನಗೆ ರಂಗಶಂಕರದಲ್ಲಿ ಮತ್ತಷ್ಟು ಕೆಲಸವಿತ್ತು.

  ಇದೇ ದಿನ, ದಿನಾಂಕ:09-02-2015 ರ ಮುಂಜಾವು ಕನ್ನಡದ ಹಿರಿಯ ನಟ ಶ್ರೀನಿವಾಸ್‍ಮೂರ್ತಿ ಫೋನಾಯಿಸಿ, ‘ನಾನು ನಟ ಶ್ರೀನಿವಾಸ್‍ಮೂರ್ತಿ, ನಿಮ್ಮೊಂದಿಗೆ ಮಾತನಾಡಬಹುದೇ?’ ಎಂದು ಪ್ರಶ್ನಿಸಿದಾಗ ನಾಚಿಕೆ, ಮುಜುಗರ ಎಲ್ಲವೂ. ಅವರ ಈ ಆಕಸ್ಮಿಕ ಫೋನಿಗೆ ಕಾರಣ ರವಿವಾರದ ನನ್ನ ಅಂಕಣ. ‘ಹಿಂದಿನ ರಾತ್ರಿಯ ಗೆಳೆಯ ಗೊತ್ತಿಲ್ಲ’ ಎಂಬ ರಿತೀಕಾ ವಾಜಿರಾಣಿಯ ದುರಂತದ ಜೀವನಾಧಾರಿತ ನನ್ನ ಲೇಖನ ಅವರ ನಿದ್ರೆಗೆಡಿಸಿತ್ತು. ಭಾರವಾದ ಹೃದಯವನ್ನು ಹಂಚಿಕೊಂಡು ಹಗುರವಾಗುವ ಹವಣಿಕೆಯಲ್ಲಿ ಅವರಿದ್ದರೆ, ಅವರ ಪರಾಜಿತ ಚಿತ್ರದಿಂದ ಕವಿರತ್ನ ಕಾಳಿದಾಸ ಚಿತ್ರದಲ್ಲಿಯ ರಾಜಭೋಜನ ಪಾತ್ರದವರೆಗೂ ಅವರ ಭಾಷಾ ಶುದ್ಧಿ, ಅಭಿನಯ ಪ್ರೌಢಿಮೆ, ಪ್ರತಿ ಪಾತ್ರದ ಹಿಂದಿನ ಮನೋ ತಯಾರಿಗಳನ್ನು ಬಾಲ್ಯದಿಂದಲೂ ಕಣ್ಣು ತುಂಬಿಸಿಕೊಂಡಿದ್ದ ನನಗೆ, ರಾಜಕುಮಾರರನ್ನಂತು ನೋಡಲಿಲ್ಲ, ಕನಿಷ್ಟ ಅವರ ಚಿತ್ರಗಳಲ್ಲಿ ಅವರ ಸಮ-ಸಮನಾಗಿ, ಅವರ ಗೆಳಯನಾಗಿ, ಸಹೋದರನಾಗಿ ಮತ್ತು ಒಡೆಯನಾಗಿ ಪಾತ್ರ ನಿರ್ವಹಿಸಿದ ಈ ಮೇರು ವ್ಯಕ್ತಿಯನ್ನು ಸಂಪರ್ಕಿಸಲೇಬೇಕೆಂದುಕೊಂಡಿದ್ದೆ. ಆದರೆ ಬೆಂಗಳೂರಿನ ಓಟದ ಆಟದಲ್ಲಿ ಎಲ್ಲೋ ನನ್ನ ಈ ಆಸೆ ಮಂಕಾಗಿತ್ತು.
       ನನ್ನ ಸಂಕಲ್ಪ ಸರಸ್ವತಿಯ ಸ್ಮರಣೆಯಲ್ಲಿತ್ತು ಅಂದುಕೊಂಡಿದ್ದೇನೆ. ನಾನು ಬಯಸಿದ್ದು ನನ್ನೊಂದಿಗೆ ಮಾತನಾಡುತ್ತಿತ್ತು. ಈಗ ಶ್ರೀನಿವಾಸ್‍ಮೂರ್ತಿ ನನ್ನ ಕಾವ್ಯಕ್ಕೆ ಉರುಳಿನ ಓದುಗ ಎನ್ನುವುದು ಎಂಥ ರೋಮಾಂಚನದ ಸಂಗತಿಯಲ್ಲವೇ?!! ಅರ್ಧ ಗಂಟೆ ಮಾತನಾಡಿದ ಶ್ರೀನಿವಾಸ್‍ಮೂರ್ತಿ, ಕುಲಗೆಡುತ್ತಿರುವ ನಮ್ಮ ಚಿತ್ರರಂಗ, ಹಾಳಾಗಿ ಹೋಗಿರುವ ಭಾಷಾ ಪ್ರಜ್ಞೆ, ದರ್ಶನವೇ ಇಲ್ಲದ ನಿರ್ದೇಶಕರುಗಳು ಹೀಗೆ ಏನೆಲ್ಲ ನೋವನ್ನು ತೋಡಿಕೊಂಡರು.   

 ನಾನು ಗುರುತಿನ ಚೀಟಿಕೊಟ್ಟು ಯಾವ ಮೇರು ವ್ಯಕ್ತಿಯನ್ನೂ ಇದುವರೆಗೆ ಕಂಡ ಉದಾಹರಣೆಗಳಿಲ್ಲ. ನನ್ನ ಪಕ್ವವಾದ ಕಾಲಕ್ಕೆ ಕಾಯುತ್ತೇನೆ. ಕಾಲುಕಸದಂತೆ ಬಾಗುತ್ತೇನೆ, ಮಾಗುತ್ತೇನೆ ಮತ್ತೆ ತುಳಿಯುವವರ ಪಾದದ ಧೂಳಾಗಿ, ಬೀಜಗಳ ಮಡಿಲಲ್ಲಿಟ್ಟುಕೊಂಡು ಮಣ್ಣಾಗುತ್ತೇನೆ. ಮಣ್ಣಾಗುವ ಖುಷಿಯೇ ಖುಷಿ. ಯಾಕೆಂದರೆ ಒಮ್ಮೆ ಬೀಳುವ ಮಳೆಗೆ ಮತ್ತೆ ಮೊಗವೆತ್ತಬಹುದು ಮೊಳಕೆಯಾಗಿ, ಸಸಿಯಾಗಿ, ಮತ್ತೆ ಮರವಾಗಿ.
  ಅಂದಹಾಗೆ, ಈ ತಿಂಗಳ ಅಂತ್ಯದವರೆಗೂ ಎಡೆಬಿಡದ ಕಾರ್ಯಕ್ರಮಗಳು. ಪ್ರೇಮಿಗಳ ದಿನಾಚರಣೆಗೊಂದು ಕೊಡುಗೆ ನೀಡುವ ನಾವು ದಂಪತಿಗಳು ಸಂತ ಸದೃಶ್ಯ ಒಬ್ಬರ ಅಭಿನಂದಿಸಲು, ಅವರ ಪುಣ್ಯದ ಸ್ಮರಣೆಯ ಸಮಾರಂಭ ಒಂದರಲ್ಲಿ ಉಪಸ್ಥಿತರಿದ್ದು ಆಶೀರ್ವಾದ ಪಡೆಯಲು ಮತ್ತೆ ಉತ್ತರದೆಡೆಗೆ ಮೊಗಮಾಡಿದ್ದೇವೆ. ಅವರೊಂದಿಗಿನ ಬರೀ ಇರುವಿಕೆಯೇ ನನ್ನ ಬದುಕಿಗೆ ಎಂಥ ಸಹನೆಯ ಆಯಾಮವನ್ನು ಒದಗಿಸಿದೆ.
ಮರೆಯುವ ಮುನ್ನ, ಸಿನಿಮಾ ಮತ್ತು ಸಾಹಿತ್ಯದ ಹಿರಿಯರೆಲ್ಲರನ್ನೂ ಸೇರಿಸಿಕೊಂಡು ಪ್ರೇಮಿಗಳ ದಿನಾಚರಣೆಗೆ ಸಿದ್ಧವಾಗಿದ್ದೇನೆ. ನಮ್ಮೊಂದಿಗೆ ಸುಮಾರು ಇಪ್ಪತ್ತೆರಡು ಕನ್ನಡಪರ ಸಂಘಟನೆಗಳಿವೆ, ನೀವಿದ್ದೀರಿ ಮತ್ತು ನಿಮ್ಮ ಹಾರೈಕೆ, ಆರ್ಶೀವಾದಗಳಿವೆ ಎಂದು ನಂಬುತ್ತೇನೆ. ಬರುತ್ತೀರಲ್ಲ?   
                  

No comments:

Post a Comment