Total Pageviews

Thursday, February 19, 2015

ಪ್ರತಿ ಸಾಲೂ ಪ್ರೀತಿಯ ಕಾವ್ಯ

 
      ಪ್ರೀತಿ ನಮ್ಮ ಬದುಕಾಗುತ್ತದೆಯೊ ಇಲ್ಲವೊ, ನಮ್ಮ ಬಯಕೆಯಂತೂ ಆಗಿರುತ್ತದೆ. ಇದು ಸತ್ಯ. ಪ್ರೀತಿಯ ಸುತ್ತ ಎರಡು ದಿನಗಳ ಅಪರೂಪದ ಜಾತ್ರೆಯಾಯಿತು. ಕ್ಷಣಗಳು ನಿಮ್ಮೊಂದಿಗೆ ಹಂಚಿಕೊಂಡು ಪ್ರೀತಿಯನ್ನು ಗೌರವಿಸೋಣ ಎನ್ನುವುದೇ ಇಲ್ಲಿಯ ಉದ್ದೇಶ.
       13, ಫೆಬ್ರುವರಿ 2015 ರಾತ್ರಿ, ರಾಜಾಜಿನಗರದ ನನ್ನ ಮನೆ ತುಂಬ ಗೆಳೆಯರು. ತರಿಕೆರೆಯಿಂದ ಪ್ರೊ. ಹರೀಶ್, ಹಿರೇಕೆರೂರಿನಿಂದ ಶಿಷ್ಯ ಪ್ರವೀಣ್ ಮಸ್ಕಿ, ಬೇಲೂರಿನಿಂದ ಮಗ ಸಿದ್ಧಾರ್ಥ ಮತ್ತು ಶಿಷ್ಯ ದರ್ಶನ್. ಅತ್ತ ಸಿ.ಎಸ್ ಪಾಳ್ಯಾ ಸರ್ಕಲ್ ಅಣ್ಣನ ಮನೆಯಲ್ಲೂ ಅಷ್ಟೆ. ಶಿವಮೊಗ್ಗದಿಂದ ಎಲ್ಲರೂ ಬಂದಿದ್ದಾರೆ. ಸಮಾರಂಭದ ದಿನ ಸಭಾಭವನದಲ್ಲಿ ಸೋಲಾಪೂರದಿಂದ ಪ್ರಶಾಂತ ಖಟ್ಟೆ, ಮಸ್ಕಿಯಿಂದ ಮಂಜುನಾಥ ಕುಟುಂಬ, ನಮ್ಮ ಹೈಯರ್ ಎಜುಕೇಷನ್ ಕೌನ್ಸಿಲ್ನಿಂದ ದೇವರಾಜು, ರೂಪೇಶ ಮತ್ತಿತರರು. ಎದುರಿನಲ್ಲಿ ಕುಳಿತವ ಕನ್ನಡದ ಕಟ್ಟಾಳು ಪಾಲನೇತ್ರ.
       13 ಸಾಯಂಕಾಲಪ್ರೀತಿ ನಲವತ್ತು ರೀತಿ ಮೊದಲ ಪ್ರತಿಯನ್ನು ಕಾಲೇಜು ಶಿಕ್ಷಣ ಇಲಾಖೆಯ ನಮ್ಮ ಪ್ರೀತಿಯ ಆಯುಕ್ತರಾದ ಶ್ರೀ ಬಿ.ಜಿ. ನಂದಕುಮಾರ ಅವರಿಗೆ ದಂಪತಿಗಳಿಬ್ಬರೂ ಜೊತೆಯಾಗಿ ನೀಡಿ ಆಮಂತ್ರಣ ಪತ್ರಿಕೆಯನ್ನೂ ಕೈಗಿಟ್ಟಾಗ ಅವರಿಗೊಂದಿಷ್ಟು ಅಭಿಮಾನ ಮತ್ತು ಪ್ರೀತಿ. ನಮ್ಮಿಬ್ಬರನ್ನು ಕೂಡಿಸಿದ ಪುಣ್ಯಾತ್ಮ ಅವರು. ಈಗ ಮತ್ತೆ ಇಬ್ಬರನ್ನೂ ಕೂಡ್ರಿಸಿ ಚಹಾ ಕುಡಿಸಿ ಕೇಳಿದ್ದು ಮತ್ತೆ ಅದೇ ಪ್ರಶ್ನೆ. ಮೊಬೈಲ್ ಮಾರಿಯಿಂದ, ಅದರ ಅನೈತಿಕ ಆಕರ್ಷಣೆಯಿಂದ ನಮ್ಮ ಮಕ್ಕಳನ್ನು ಅದರಲ್ಲೂ ಹೆಣ್ಣುಮಕ್ಕಳನ್ನು ರಕ್ಷಿಸುವುದು ಹೇಗೆ? ಪ್ರತಿಯಾಗಿ ಅವರಿಗೆ ಪದ್ದಿಯ ಒಂದು ಪ್ರಶ್ನೆ, ‘ಪಾಪದ ಮನಸ್ಸೊಂದು ಏನೆಲ್ಲ ಮಾಡಿಯೂ ನಾನೇನೂ ಮಾಡಿಯೇ ಇಲ್ಲ ಎಂದು ವಾದ ಮಂಡಿಸುತ್ತ ಸಂದೇಶ ರವಾನಿಸುತ್ತಿದ್ದರೆ ಏನು ಮಾಡುವುದು?’ ಅವರ ಉತ್ತರ – ‘ದೇವರಿಗೆ ಕೈ ಮುಗಿದು, ಅವರ ಸುಳ್ಳುಗಳು ಅವರೇ ಸಹಿಸಿಕೊಳ್ಳುವ ಶಕ್ತಿಯನ್ನು ನೀಡು, ಅವರ ಬದುಕನ್ನೂ ಉದ್ದರಿಸು ಎಂದು ಪ್ರಾರ್ಥಿಸಿ ಸುಮ್ಮನಿರುವುದು.’
ಮನ್ಹಿ ದೇವತಾ, ಮನ್ಹಿ ಪೂಜಾ, ಮನ್ಸೆ ಬಡಾ ಕೋಯಿಅಲ್ವೆ?
ಪ್ರೇಮಿಗಳ ದಿನದಂದು ಕಾರ್ಯಕ್ರಮಕ್ಕೆ ಎಲ್ಲರಿಗೂ ಮೊದಲು ಮಗಳೊಂದಿಗೆ ಬಂದು ಗಾಯಕಿ ಐಶ್ವರ್ಯಳ ಹಾಡು ಕೇಳುತ್ತ ತನ್ಮಯರಾದವರು ಪ್ರಣಯರಾಜ ಶ್ರೀನಾಥ. ನಂತರ ಭಗವಾನ್, ಬರಗೂರು, ಡಾ. ಹೊಸಮನಿ ಮತ್ತು ಸಾ.ರಾ ಗೋವಿಂದು.
       ಅಂದು ತಡವಾಗಿ ಬಂದುದು ನಮ್ಮ ಜಗಳಗಂಟ ತಾಯಿ ಚಂಪಾ. ಹುಲುಗುರ ಸಂತಿಯೊಳಗ ಸಿಕ್ಕಿಬಿದ್ದ ನಮ್ಮ ಶರೀಫನ ಮುದುಕಿಯಂತೆ ಟ್ರಾಫಿಕ್ನೊಳಗೆ ಸಿಕ್ಕಿಬಿದ್ದಿತ್ತು ನಮ್ಮ ತಾಯಿ. ಮಗ ಸಿದ್ಧಾರ್ಥನ ಭಾವಗೀತೆ, ಶಂಕರ್ ಹೂಗಾರರ ಪ್ರಾಸ್ತಾವಿಕ ಪ್ರೀತಿಗೆ ಹೊಸ ಹುರುಪು ತುಂಬಲಾರಂಭಿಸಿದವು. ಪ್ರೀತಿಗೆ ಸ್ವಾಗತ ನನ್ನದು. ದಿನದ ಬಂಪರ್ ಭಾಷಣಕಾರರು ಸಾ.ರಾ ಗೋವಿಂದು, ಬರಗೂರು, ಶ್ರೀನಾಥ್ ಮತ್ತು ನಮ್ಮ ಪದ್ದು! ಚಂಪಾ ಮತ್ತು ಭಗವಾನ್ ಅದೇಕೊ ಸಿಡಿಯುವ ಮೂಡಿನಲ್ಲಿರಲಿಲ್ಲ.
       ಐದು ತಿಂಗಳ ಹಿಂದಿನ ಮಾತು. ಪದ್ದುವಿಗೆ ನಾನು ಹೇಳಿದ್ದೆ, ‘ಸಾತ್ವಿಕತೆಗೆ ಖದಿಮತನಕ್ಕಿರುವ ಅಬ್ಬರ ಖಂಡಿತ ಇಲ್ಲ. ಆದರೆ ಅದಕ್ಕಿರುವ ಆತ್ಮಶಕ್ತಿ ಮತ್ತು ಭರವಸೆಯ ಬಾಳು ಖದಿಮತನಕ್ಕಿಲ್ಲ. ನೋಡು ಪದ್ದು, ನಿತ್ಯ ಖಾಲಿ ಬಾಟಲ್, ಕಾಂಡೊಮ್ ಮತ್ತು ಕಾಳಸಂತೆಯಲ್ಲಿ ಮಿಂದೇಳುವ ಮೆಜೆಸ್ಟಿಕ್ನಲ್ಲಿಯೇ ಸರ್ಪಭೂಷಣ ಶಿವಯೋಗಿಗಳ ಮಠವೂ ಇದೆ. ವಿಧವಿಧದ ಆಕರ್ಷಣಗಳ ಮಾರುಕಟ್ಟೆಯಲ್ಲಿ ನಿಂತ ಮನಸ್ಸು ಸಂತನಾಗುವುದು ಅಥವಾ ಸೂಳೆಯಾಗುವುದು ಅವರವರು ರಕ್ತಗತವಾಗಿ ಹೊತ್ತುತಂದ ಸಂಸಾರ ಮತ್ತು ತಮ್ಮನ್ನು ನಿಗ್ರಹಿಸುವ ರೀತಿಯನ್ನು ಆಧರಿಸಿದೆ. ನೀನು ಒಬ್ಬ ತಾಯಿಯಾಗಿ, ಜವಾಬ್ದಾರಿಯ ಹೆಣ್ಣಾಗಿ ಬೆಂಗಳೂರನ್ನು ಉದ್ದೇಶಿಸುತ್ತಿಯಾಎಂದು ಆಕೆಗೆ ಹೇಳಿದ್ದೆ. ಮಾತು ಇಂದು ಸತ್ಯವಾಗುವ ಕ್ಷಣ.
     ಇಂದು ಸಾ.ರಾ ಗೋವಿಂದರ ಮಾತುಗಳನ್ನು ನೀವು ಕೇಳಿಲ್ಲ ಎಂದರೆ ಏನನ್ನೋ ಕಳೆದುಕೊಂಡಿದ್ದೀರಿ ಎಂದೇ ಅರ್ಥ. “ಇವರು ನಮ್ಮ ಪ್ರಣಯರಾಜ ಅಷ್ಟೇ ಅಲ್ಲ ವಿನಯರಾಜ. ಅದರಂತೆ ರಾಗಂ ಬರೀ ಲೇಖಕರಲ್ಲ ಶಬ್ಧಗಳ ಗಾರುಡಿಗ. ಅವರಂತೆ ಶಬ್ಧಗಳನ್ನು ಭಾಷೆಯನ್ನು ಬಳಸಿದ ಲೇಖಕರನ್ನು ನಾನು ಹಿಂದೆ ನೋಡಿಲ್ಲ. ಅವರ ಗಾಂಧಿ ಮತ್ತು ಇತರ ಬರಹಗಳು ಮತ್ತೆ ನನ್ನಲ್ಲಿ ಓದಿನ ಹಸಿವು ಹೆಚ್ಚಿಸಿದೆಕೃತಿ ಕುರಿತು ಮಾತಾಡಿದ ಬರಗೂರುಮೋಹಕ ಭಾಷೆಯ ಚಿಂತಕ ರಾಗಂ. ನಮ್ಮಲ್ಲಿ ಚಿಂತಕರಿದ್ದಾರೆ, ಇಲ್ಲಾ ಮೋಹಕ ಭಾಷೆಯ ಬರಹಗಾರರಿದ್ದಾರೆ, ಆದರೆ ಅತ್ಯಂತ ಪ್ರಭಾವಿ, ಮೋಹಕ ಭಾಷೆಯ ಮೂಲಕ ನಮ್ಮನ್ನು ಸೆಳೆದು, ಪಾತ್ರಗಳ ಒಳಪಾತಳಿಗೊಯ್ದು, ಚಿಂತನೆಗೆ ಹಚ್ಚಿ, ಹೊಸ ಮಾರ್ಪಾಡಿನೊಂದಿಗೆ ನಮ್ಮನ್ನು ದಡಕ್ಕೆ ತಂದು ನಿಲ್ಲಿಸುವ ರಾಗಂ, ಖಂಡಿತವಾಗಿಯು ಕನ್ನಡ ಅಪರೂಪದ ಪ್ರೀತಿಯ ಲೇಖಕ.”
       ನನಗೆ ಮುಜುಗರವಾಗುತ್ತಿತ್ತು. ಮುಂದುವರೆದು ಡಾ. ಶ್ರೀನಾಥ ಹೇಳಿದ್ದೆ ಭಿನ್ನ, “ಈಗ ನನಗೆ 71. ಸಾಲುಸಾಲು ಚಿತ್ರಗಳ ಸಾಧನೆ ಕಂಡೆ. ತಂದೆ ಕಲಿಸಿದ ವಿನಯದ ಪಾಠ ನನ್ನನ್ನು ಪ್ರಣಯರಾಜನನ್ನಾಗಿ ರೂಪಿಸಿತು. ರಾಜಣ್ಣನ ಶದ್ಧೆ ಮತ್ತು ಶಿಸ್ತು ನನಗೆ ಕ್ಷೇತ್ರದಲ್ಲಿ ಆತ್ಮವಿಶ್ವಾಸ ಹುಟ್ಟಿಸಿತು. ತಂದೆ-ತಾಯಿಯ ಪ್ರೀತಿಯಿಂದ ಚಿಕ್ಕಂದಿನಿಂದಲೆ ವಂಚಿತನಾದ ನಾನು, ನಿಮ್ಮ ಕೈಗಳ ಪ್ರೀತಿಯುಂಡು ಬೆಳೆದೆ. ನನ್ನಂತೆಯೆ ವಿನಯ ಮತ್ತು ಪ್ರೀತಿಯ ಭಾಷೆ ಬಳಸುವ ರಾಗಂ ನಮ್ಮೆಲ್ಲರ ಹೃದಯಕ್ಕೆ ಹತ್ತಿರ. ಅವರಿಗೆ ಉಜ್ವಲ ಭವಿಷ್ಯವಿದೆಎಂದು ಗದ್ಗದಿತರಾದರು.
        ಕೃತಿಯ ಸಂಗ್ರಹಕಾರಳು, ಪ್ರೀತಿ ಹೊತ್ತು, ಅತ್ತು ಮತ್ತೆ ನಕ್ಕ ಪದ್ದಿ ಮಾತಾಡುತ್ತ, “ಬಹಳ ಬರೆದಿದ್ದಾರೆ ರಾಗಂ, ಅವರ ಪ್ರೀತಿಯ ರಾಯಭಾರಿಯಾಗಿ ನಾನು ಬಹಳ ಓದಿಸಬೇಕಿದೆ ನಿಮಗೆ. ಇವರು ಮಹಾ ನಿಸ್ಸಂಗಿ, ಮಹಾ ಜಗಳಗಂಟ, ಬೀಡಾಡಿ, ಅಲೆಮಾರಿ. ಇವರು ಜಗಮೊಂಡ ಗಂಡನೊ, ಜಗವ್ಯಾಪಿ ಗೆಳೆಯನೊ ಅದು ನೀವು ನಿರ್ಧರಿಸಬೇಕಾದುದು. ಒಂದಂತು ಸತ್ಯ, ಮನುಷ್ಯನ ಹಿಡಿಯಲು ಹೋಗಿ, ಪ್ರೀತಿಯ ನೆಚ್ಚಲು ಹೋಗಿ, ಅಕ್ಕಮಹಾದೇಯ ಸಾಲುಗಳಲ್ಲಿಯೇ ಹೇಳಬೇಕೆಂದರೆ
ಎರೆಯಂತೆ ಕರಗಿದ್ದೇನೆ,
ಮಳಲಂತೆ ಜರಿದಿದ್ದೇನೆ
ಆಪತ್ತಿಗೆ ಯಾರನ್ನೂ ಕರೆಯಲಾಗದೆ
ಮತ್ತೆ ಪ್ರೀತಿಯನ್ನೆ ಅಪ್ಪಿದ್ದೇನೆ.”
       ಅಷ್ಟೆ ಸಾಕಾಗಿತ್ತು ನಮ್ಮ ಚಂಪಾಗೆ, “ನಾನೀಗ ನಿರಾಳನಾಗಿದ್ದೇನೆ, ನಮ್ಮ ಪದ್ಮಶ್ರೀ ಹೇಳಿದಂತೆ ನಮ್ಮ ರಾಗಂ ಜಗಳಗಂಟಜಗಮೊಂಡನಾಗಿರುವುದರಲ್ಲೇ ಜೀವವಿದೆ, ಜೀವನವಿದೆ. ಅವೆಲ್ಲ ಇರುವಲ್ಲಿ ಪ್ರೀತಿ ಇದೆ. ಇವೆಲ್ಲ ಪ್ರೀತಿ ಎಂಬ ಮರಕ್ಕೆ ಗೊಬ್ಬರವಿದ್ದಂತೆ. ಕನ್ನಡದ ಅತ್ಯಂತ ಧ್ವನಿಪೂರ್ಣ ಬರಹಗಾರ ರಾಗಂ. ಅವನ ಪ್ರತಿ ಸಾಲೂ ಪ್ರೀತಿಯ ಕಾವ್ಯ. ಜೀವದ್ರವ್ಯ ಇದ್ದ ಲೇಖಕ ಮಾತ್ರ ಹೀಗೆ ಬರೆಯಲು ಸಾಧ್ಯಎಂದು ಹೇಳಿಪ್ರೀತಿ ನಲವತ್ತು ರೀತಿಯನ್ನು ಸಂಭ್ರಮಿಸಿ ಬಿಟ್ಟರು.

       ವಿಶೇಷಿತ ವಾರ್ತಾ ಭಾರತಿ, ಸಂಜೆ, ಉದಯವಾಣಿ, ವಿಜಯ ಕರ್ನಾಟಕ, ಸಂಜೆವಾಣಿ, ಉದಯ ನ್ಯೂಜ್ ಬಳಗದ ಪ್ರೀತಿಗೆ ನಾನು ಋಣಿ. ಮಗ ಸಿದ್ಧಾರ್ಥ ಇಂದು ನಿಜಕ್ಕೂ ಬರಗೂರರ ಪ್ರೀತಿಯ ಧಣಿ.

No comments:

Post a Comment