Total Pageviews

Thursday, February 5, 2015

ದೂರ ಸರಿಯುವಿಕೆಗೆ ಅರ್ಥವಿಲ್ಲ!!!

    
      ಮೂರುದಿನ ವಿಪರೀತ ತಾಕಲಾಟಗಳು, ಎತ್ತ ಹೋಗಬೇಕು? ಖಂಡಿತವಾಗಿಯೂ ಕೆಲವೊಮ್ಮೆ ಒಂದು ಸಾಮಾನ್ಯ ಪ್ರಶ್ನೆ ಎಷ್ಟೊಂದು ಗಂಭೀರ ಬದುಕಿಗೆ, ತಿರುವಿಗೆ ಹಾಗೂ ತೀರ್ಮಾನಕ್ಕೆ ಕಾರಣವಾಗುತ್ತದೆ. ಕಳೆದ ಎಂಟು ತಿಂಗಳಲ್ಲಿ ಇಂಥ ಅನೇಕ ಪ್ರಶ್ನೆಗಳನ್ನು ನಾನು ಸ್ಥಿತಪ್ರಜ್ಞನಾಗಿ, ಸಮಾಧಾನಿಯಾಗಿ ಜೊತೆಗೆ ಹಿರಿಯರ ಸಾಕ್ಷಿಯಾಗಿ ಬಗೆಹರಿಸಿಕೊಂಡಿರುವುದರಿಂದ ಬದುಕಿನಲ್ಲಿ ಎಷ್ಟೆಲ್ಲ ಸಂಭ್ರಮಕ್ಕೆ ಕಾರಣವಾಯಿತು.
        ಬಾರಿ ಹಾಗಲ್ಲ, ಎತ್ತ ಹೋಗಬೇಕು? ಒಂದೆಡೆ ತಂಗಿಯ ಹೊಸದಾದ ಎರಡು ಕಟ್ಟಡಗಳ ಉದ್ಘಾಟನಾ ಸಮಾರಂಭ. ಮತ್ತೊಂಡೆ ಮತ್ತೆರಡೇ ದಿನಗಳಲ್ಲಿ ನನ್ನ ಪೂರ್ವಜರ ನೆಲವಾದ ಅಥಣಿಯ ಪಕ್ಕದ ಗೂಗವಾಡದಲ್ಲಿ ಬಸವ ಪ್ರತಿಮೆಯ ಪ್ರತಿಸ್ಠಾಪನೆಯ ಸಮಾರಂಭ. ಮಧ್ಯ ಎರಡೇ ದಿನಗಳ ಅಂತರ. ಒಂದಕ್ಕೆ ಹೋದರೆ ಇನ್ನೊಂದಕ್ಕೆ ಹೋಗುವಂತಿಲ್ಲ. ಯಾಕೆಂದರೆ ಕಾಲೇಜಿನ ರಜಾ ಪದ್ದತಿಗೂ ಬೆಂಗಳೂರಿನ ಕೇಂದ್ರ ಕಛೇರಿಯ ರಜಾ ಪದ್ದತಿಗೂ ಬಹಳಷ್ಟು ವ್ಯತ್ಯಾಸವಿದೆ. ಈಗ ತಿಂಗಳಿಗೆ ಒಂದೇ ದಿನ ರಜೆ. ಬೆಂಗಳೂರಿನಲ್ಲಿ ರಜೆ ಎಂದರೆ ದೈವಾನುಗ್ರಹವೇ ಸರಿ. ನಮ್ಮ ರೋಗ, ಸಾವು, ಹುಟ್ಟು, ಕಷ್ಟ ಮತ್ತು ನಷ್ಟಗಳೂ ರಜೆಯನ್ನು ನೋಡಿಕೊಂಡೆ ಬರಬೇಕು. ಇಲ್ಲದೇ ಹೋದರೆ ಇವುಗಳನ್ನು ಗಮನಿಸಲು ಯಾರ ಬಳಿಯೂ ಸಮಯವಿರುವುದಿಲ್ಲ. ಅವು ಕೂಡ ಟ್ರಾಫಿಕ್ನಲ್ಲಿ ಸಿಕ್ಕಿ ಹಾಕಿಕೊಂಡ ಮಗುವಿನಂತೆ ಅಳಬೇಕಾಗುತ್ತದೆ.
         ನನ್ನ ಮುಂದೆ ಈಗ ಒಂದು ಸಾರ್ವಜನಿಕ ಸಭೆ, ಮತ್ತೊಂದು ಕೌಟುಂಬಿಕ ಸಭೆ. ಎರಡೂ ಕಟ್ಟಡಗಳೆ.            ಒಂದು ದಾರ್ಶನಿಕನದು, ಇನ್ನೊಂದು ಸಂಸಾರದ್ದು. ಒಂದೆಡೆ ಅಥಣಿ ಎಂಬ ನನ್ನ ನೆಲದ ಮಹಾನ್ ಶಿವಯೋಗಿ, ಸಾಧಕನೊಬ್ಬನ ಪುಣ್ಯದ ಸೆಳೆತ. ಮತ್ತೊಂದೆಡೆ ಕರುಳ ಕರೆ. ವಿಚಾರ ಇಷ್ಟೊಂದು ಸ್ಪಷ್ಟವಾಗಿರುವಾಗ ತಾಕಲಾಟದ ಪ್ರಶ್ನೆ ಏನಿದೆ? ಸಾರ್ವಜನಿಕ ಸಭೆಗೆ ಹೋಗಬೇಕಾದುದು ಸಾಮಾಜಿಕತೆಯನ್ನು ಒಪ್ಪಿಕೊಂಡ ಸಾಹಿತಿಯೊಬ್ಬ ನಿರ್ವಹಿಸಬೇಕಾದ ಜವಾಬ್ದಾರಿಯಲ್ಲವೇ?.
          ಸತ್ಯ, ನಾನೂ ಅಷ್ಟೆ. ಸಾಮಾನ್ಯವಾಗಿ ಬದುಕಿನಲ್ಲಿ ಅದು ಎಷ್ಟೇ ಸಣ್ಣ, ಸಾಮಾನ್ಯ ನಿರ್ಧಾರವೇ ಆಗಿರಲಿ ಒಪ್ಪಿಕೊಂಡ ಮೇಲೆ ನಿಭಾಯಿಸಿದ ಉದಾಹರಣೆಗಳೇ ಹೆಚ್ಚು. ಕಾರ್ಯಕ್ರಮವನ್ನು ಒಪ್ಪಿ, ಕಾರ್ಡಿನಲ್ಲಿ ಹೆಸರು ಮುದ್ರಣಗೊಂಡ ನಂತರ ತಪ್ಪಿಸಿದ ಉದಾಹರಣೆಗಳಿಲ್ಲ. ಕೆಲವೊಮ್ಮೆ ಬದ್ಧತೆಗೆ ಸಾಕಷ್ಟು ಒದ್ದಾಡಿದ್ದೂ ನೆನಪಿದೆ. ಇದಂತು ಅತೀ ದೊಡ್ಡ ಸಭೆ. ಸುಮಾರು ಐವತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಬಸವಣ್ಣನವರ ಮೂರ್ತಿ ಪ್ರತಿಸ್ಠಾಪನೆಯಾಗುತ್ತಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರಗಳಿಂದ ಮೂರು ಸಾವಿರ ಜನ ಸೇರುವ ಸಭೆಯಲ್ಲಿ ನಾನೇ ಮುಖ್ಯ ಭಾಷಣಕಾರ. ಆದರೆ ಸಮಾರಂಭವನ್ನು ನಾನು ತಪ್ಪಿಸಿದ್ದು ಬೇಸರವನ್ನು ಉಂಟು ಮಾಡಿದೆ. ಒಂದಿಷ್ಟು ಕಾರಣಗಳನ್ನು ಹಂಚಿಕೊಂಡು ಸಮಾಧಾನವನ್ನು ಪಟ್ಟುಕೊಳ್ಳಬೇಕಿದೆ ಅಥವಾ ಅಣ್ಣ ಬಸವಣ್ಣನ ಮಾತುಗಳಲ್ಲಿಯೇನನ್ನ ತಪ್ಪುಗಳು ಅನಂತ ಕೋಟಿ, ನಿನ್ನ ಸೈರಣೆಗೆ ಲೆಕ್ಕವಿಲ್ಲವಯ್ಯಎಂದು ಹೇಳಿ ತೆಪ್ಪಗಿರಬೇಕಿದೆ.
          ಶುಕ್ರವಾರ ಬೆಳಗಾವಿಯ ಮನೆಯ ಸಮಾರಂಭವನ್ನು ಮುಗಿಸಿಕೊಂಡು ಬಂದು, ಸೋಮವಾರ ಕಛೇರಿಯಲ್ಲಿ ಕುಳಿತು ಕೆಲಸ ಮಾಡುತ್ತಿರಬೇಕಾದರೆ ಅಥಣಿಯ ಬಸ್ಸ್ಯ್ಟಾಂಡ್ ತುಂಬಾ ನನ್ನನ್ನು ಹುಡುಕಾಡುತ್ತಿದ್ದ ಕಾರ್ಯಕರ್ತರ ತಂಡ, ಫೋನಿನ ಮೇಲೆ ಫೋನ್ ಮಾಡುತ್ತಿದ್ದರೆ, ನಾನು ಸೈಲೆಂಟ್ ಮೂಡ್ನಲ್ಲಿ ಸಪ್ಪೆಯಾಗಿದ್ದ ನನ್ನ ಮೊಬೈಲ್ ಸುಂದರಿಯ ಮುಖ ನೋಡುತ್ತಿದ್ದೆ. ಅತ್ತ ನನ್ನ ಭಾಷಣವನ್ನು ಹೊತ್ತುಕೊಂಡು ಹೋಗಿದ್ದ ಗೆಳೆಯ ಕೆ.ಶರಣಪ್ಪನವರನ್ನು ಸಂಪರ್ಕಿಸಿ, ಅವರ ಬಾಡಿಯನ್ನು ಕಾರ್ಯಕರ್ತರ ಕೈಗೆ ಇಲ್ಲಿಂದಲೇ ಸಿಗುವಂತೆ ಮಾಡಿ, ಕೂಡಲಸಂಗಯ್ಯನ ಸಂಗ ಹರಿದುಕೊಂಡೆ. ಆದರೆ ಶರಣಪ್ಪ ಬೆಂಗಳೂರಿಗೆ ಬಂದಂದಿನಿಂದ ನನ್ನ ಹೆಗಲಿಗೆ ಬಿದ್ದ ಪ್ರೀತಿಯ ಬೇತಾಳ. ಅಖಿಲ ಕರ್ನಾಟಕ ಬೊರ್ವೆಲ್ ಕಾರ್ಮಿಕರ ಸಂಘದ ಅಧ್ಯಕ್ಷ. ಅಥಣಿಯಲ್ಲಿಯೂಮುಂದಿನ ಬಸವ ಜಯಂತಿಗೆ ರಾಗಂ ರವರನ್ನು ತಂದು ಭಾಷಣ ಮಾಡಿಸಿಯೇ ತೀರುತ್ತೇನೆಎಂಬ ಭರವಸೆಯ ಬೋರು ಇಳಿಸಿಯೇ ಬಂದಿದ್ದಾರೆ. ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದ ನನ್ನ ಮೊದಲ ಭಾಷಣದ ಬೆನ್ನು ಹತ್ತಿದವ, ಒಂದು ರೀತಿ ನನ್ನ ಸಾಹಿತ್ಯದ ಪರಿಚಾರಕರಾಗಿ ಅವರು ಸಲ್ಲಿಸುತ್ತಿರುವ ಸೇವೆಗೆ ಯಾವ ಋಣ ತೀರಿಸಲಾದೀತು?
          ಪ್ರೀತಿ ಯಾವಾಗಲೂ ಅಷ್ಟೆ. ಅದು ತೀರಿಸಲಾಗದ ಋಣ. ಸ್ಮರಿಸಿಕೊಂಡಷ್ಟೂ ಪುಣ್ಯವಾಗುತ್ತದೆ ಬದುಕಿನ ಪ್ರತಿ ಕ್ಷಣ.
          ನನಗೆ ನೆನಪಿರುವಂತೆ, ಕಳೆದ ಎಂಟೂವರೆ ವರ್ಷಗಳಲ್ಲಿ ಕೌಟುಂಬಿಕವಾಗಿ ಹೊತ್ತುಕೊಂಡಿದ್ದ ಅಪರಾಧಗಳ ಗಂಟು ಇಳಿಸುವ ಸಂದರ್ಭ ಇದಾಗಿತ್ತು. ಊರು ಉದ್ಧರಿಸಲು ಹೋಗಿ ಮುಲ್ಲಾ ಸೊರಗಿದನಂತೆ. ಬಾಗಲಕೋಟೆಯ ನನ್ನ ದಿನಗಳಲ್ಲಿ ಒಮ್ಮೆ ನಮಾಜ್ ಮಾಡಲು ಹೋದದ್ದೇ ತಪ್ಪಾಯಿತು, ಮಸೀದಿಯೇ ನನ್ನ ಕೊರಳಿಗೆ ಬಿದ್ದು ಬಿಟ್ಟಿತ್ತು. ಆಗ ನನ್ನ ಸ್ಥಿತಿ ಭಗಂವತನಿಗೂ ಬೇಡವಾಗಿತ್ತು
         “Blood is thicker than water, Blood is religion” ಎಂದಿದ್ದಾನೆ ಆಸ್ಕರ್ ವೈಲ್ಡ್. ಇದು ಮನದಟ್ಟಾಗುವದರಲ್ಲಿ ಎಂಟು ವರ್ಷಗಳ ಅವಧಿ ಉರುಳಿ ಹೋಯಿತು. ತಂದೆ-ತಾಯಿ, ಬಂಧು-ಬಳಗ ಎಲ್ಲದರಿಂದ ದೂರವಾಗುತ್ತ, ದೂರದ ಯಾವುದೋ ಒಂದು ಮಾನವೀಯ ಮೌಲ್ಯದ ಗೆಲುವಿನ ದಿನಗಳಿಗಾಗಿ ಹಂಬಲಿಸುತ್ತಾ ತಿರುಗುತ್ತ ಹೋಗಿದ್ದೆ. ನನ್ನ ದೂರ ಸರಿಯುವಿಕೆಗೆ ಅರ್ಥವಿಲ್ಲ!!! ಎನ್ನುವುದು ನನ್ನ ಹಿರಿಯರ ವಾದವಾಗಿತ್ತು. ಆದರೂ ಹುಂಭತನಕ್ಕೆ ಹದ್ದುಗಳು ಇರುವುದಿಲ್ಲ. ಈಗಲೂ ನಾನು ನನ್ನ ಹಿರಿಯರೊಂದಿಗೆ ಒಪ್ಪುವುದಿಲ್ಲ. ‘ಇರುವಷ್ಟು ಕಾಲ, ಇರುವಷ್ಟೇ ಕಾಲದೈವ ಸಾನಿಧ್ಯದಷ್ಟೇ ಪವಿತ್ರವಾಗಿತ್ತು, ಮಾತೃ ಸ್ಮರಣೆಯಷ್ಟೆ ಮಮತಾಮಯಿಯಾಗಿತ್ತು. ಬಹುತೇಕ ಇಂದಿನ ಬೆಳವಣಿಗೆಯ ಬುನಾದಿ ಅಂದೇ ಬಿದ್ದಿತ್ತು.
ಮನೆ ಉದ್ಘಾಟನೆಗೆ ಹಾಜರಿರುವುದರ ಮೂಲಕ ಈಗ ಹಿಂದಿನ ಅಂತರವನ್ನು ಕಡಿಮೆಗೊಳಿಸುವ ಒಂದು ಅಪರೂಪದ ಅವಕಾಶ ಕಳೆದ ಎಂಟು ತಿಂಗಳಿಂದ ಸಿಕ್ಕು, ಆಪಾಧನೆಗಳ ಭಾರ ಕಡಿಮೆಯಾಗುತ್ತಿದೆ. ಇಲ್ಲಿಯೂ ನನ್ನ ಬೆಳೆಸಿದ ಜೀವಗಳಲ್ಲಿ ಒಂದಾದ ನಾಗನೂರು ಸಿದ್ಧರಾಮ ಸ್ವಾಮಿಗಳೊಂದಿಗೆ, ಹಿರಿಯ ನ್ಯಾಯಾಧೀಶ ನನ್ನ ಪ್ರೀತಿಯ ಕವಿ ಜಿನದತ್ತ ದೇಸಾಯಿ ಅವರೊಂದಿಗೆ, ಬೆಳಗಾವಿ ಅಪಾರ ಸಾಹಿತ್ಯಾಸಕ್ತರೊಂದಿಗೆ, ನನ್ನ ಹಿಂದಣ ನೆನಪಿಸುವ ಹಿರಿಯರೊಂದಿಗೆ, ನನ್ನ ಅವಸಾನಕ್ಕೆ ಹೆಗಲಾಗುವ ಪುಟಾಣಿಗಳೊಂದಿಗೆ, ಸಾಲ-ಸೂಲ ಮಾಡಿಕೊಂಡ ಬೆಳಗಾವಿ ಎಂಬ ಮಹಾನಗರದ ಎಂಟು ಗುಂಟೆಯ ಭೂಮಿಯೊಂದಿಗೆ ಒಂದು ದಿನದ ಸಂಭ್ರಮದ ಬಾಳು.
         ಬೆಳಗಾವಿ ಎಂದರೆ ನನ್ನ ಪಾಲಿಗೆ ಇಗಲೂ ಆಗಿನ ಎಂಟುನೂರು ರೂಪಾಯಿಗಳ ಸಂಬಳ, ಸ್ಮಶಾನದ ಮಧ್ಯ ಶಿವಬಸವ ನಗರದಿಂದ ಲಿಂಗರಾಜ ಕಾಲೇಜಿಗೆ ನನ್ನನ್ನು ಕರೆದೊಯ್ಯುತ್ತಿದ್ದ ಒಂದು ಕಾಲು ದಾರಿ ಹಾಗೂ ನನ್ನ ತಂದೆಯ ಮೂವತ್ತು ವರ್ಷಗಳ ಹಳೆಯ ಸಂಗಾತಿ ಹೆಕ್ರ್ಯುಲಸ್ ಸೈಕಲ್. ಇಷ್ಟಾದರೆ ನಾನೊಬ್ಬ ಇಂಗ್ಲಿಷ್ ಉಪನ್ಯಾಸಕ. ನನ್ನ ಮುಂದೆ ಸಾಲು ಸಾಲು ಯುವ ಸುಂದರ ಕಿವಿಗಳು. ನೆನಪುಗಳ ಮಾತು ಯಾವಾಗಲೂ ಮಧುರ.
ಹಂಬಲಿಸಿ ಕುಡಿಯುವ ನೆನಪೆಂಬ ಚಹಾದ ಕಪ್ಪಿನಲ್ಲಿ ಕೆಲವೊಮ್ಮೆ ನಮ್ಮಂತೆಯೇ ಹಂಬಲಿಸಿ ಬಂದು ನೊಣ ಸಾಯುತ್ತದೆ. ನಾನು ಅದರ ಕಳೆಬರಹವನ್ನು ಅದೇ ಗೌರವದಿಂದ ಅತ್ತ ಎತ್ತಿಟ್ಟು, ಸಿಕ್ಕ ಚಹಾವನ್ನೇ ಸಂಭ್ರಮದಿಂದ ಸವಿಯುತ್ತೇನೆ. ಕಿಲೋಗಳ ಲೆಕ್ಕದಲ್ಲಿ ಕೋಳಿಯ ಯಾವ ಭಾಗವನ್ನೂ ಬಿಡದೆ ತಿಂದು ಬಾಯಿ ಚಪ್ಪರಿಸುವ ಶುದ್ಧಾಂಗರಿಗೆ ನನ್ನ ನೋಣದ ಹಾಡು ವಾಕರಿಕೆ ತರಿಸಬಹುದೇ? ಅಯ್ಯೋ! ಅವರಿಗೊಂದು ಅಪ್ಸೋಸ್.
   ಸಮ್ಮೇಳನ ಮುಗಿದಿದೆ. ಸಂಚಿಕೆಯ ಸಂಪಾದಕರಲ್ಲಿ ಒಬ್ಬನಾಗಿದ್ದ ನಾನು ಶ್ರವಣಬೆಳಗೋಳದತ್ತ  ಹೆಜ್ಜೆ ಇರಿಸಲೇ ಇಲ್ಲ. ಯಾಕೆಂದರೆ, ಅದು ನನ್ನ ಶಾಂತಲೆಯ ನಾಡು. ಅವಳಂತೆಯೇ ಸದಾ ಒಂದು ಶಾಂತ ಕ್ಷಣಕ್ಕಾಗಿ ನಾನು ಮತ್ತೆ ಮತ್ತೆ ಅಲ್ಲಿ ಹಂಬಲಿಸಿ ಹೋಗಿದ್ದೇನೆ, ಚಂದ್ರಗಿರಿಯ ಬೆಟ್ಟದ ಮೇಲೆ ನಂಬದವರ ತೊಡೆಯ ಮೇಲೂ ನೆಮ್ಮದಿಯಾಗಿ ನಿದ್ರಿಸಿದ್ದೇನೆ. ನನ್ನ ನಂಬಿಕೆ ನನ್ನ ಬಾಳಿನ ಪಥವನ್ನು ಭ್ರಷ್ಠಗೊಳಿಸಲಿಲ್ಲ, ನನ್ನ ಕಂದಮ್ಮಗಳಿಗೆ ನಮ್ಮ ಅನುಪಸ್ಥಿತಿಯಲ್ಲಿಯೂ ಭರವಸೆಯ ಕೈಯಾಸರೆ ತಪ್ಪಿಸಲಿಲ್ಲ. ಬೆತ್ತಲಾಗಿ ನಿಂತ ಗೊಮ್ಮೆಟೇಶ್ವರ ಕುಹಕದ ನಗೆಯಾಡಲಿಲ್ಲ. ಈಗ ಮತ್ತೆ ಹೋಗುತ್ತೇನೆ ಅಲ್ಲಿಗೆ, ನನ್ನಷ್ಟೇ ಶುದ್ಧನಾಗಿ ನಿಂತ ಅವನಲ್ಲಿಗೆ.    
        ವಾರಾಂತ್ಯಕ್ಕೆ ಪ್ರೊ. ಮೋಹನ್ ದಾಸ್ ಪೈ ಅವರ ಆಲೋಚನೆಗಳಿಗೆ ನಾನು ಕಿವಿಯಾಗಿದ್ದೇನೆ. ನಮ್ಮ ಶಿಕ್ಷಣ ಸಚಿವರ ಸರಳತೆಗೆ ಶರಣಾಗಿದ್ದೇನೆ, ನಮ್ಮ ಆಯುಕ್ತರ ಹಠ ಮತ್ತು ಸರಳತೆ ನನಗೂ ಪ್ರಾಪ್ತವಾಗಲಿ, ಮೂಲಕ ಇಲಾಖೆಯ ಸಂಕಷ್ಟಗಳನ್ನು ಆಲಿಸುವ ಸದ್ಬುದ್ಧಿ ಬರಲಿ ಎಂದು ದೇವರಿಗೆ ಮೊರೆ ಹೊಕ್ಕಿದ್ದೇನೆ.

No comments:

Post a Comment