Total Pageviews

Thursday, January 29, 2015

ಎಲ್ಲೋ ಜೋಗಪ್ಪ ನಿಮ್ಮ ಅರಮನೆ

     ಬೆಂಗಳೂರಿನ ನನ್ನ ಮನೆಯಿಂದ 30 ಕಿಲೋ ಮೀಟರ್‍ಗಳಿಗೂ ಮೀರಿ ಬಂದಾಗ ಆಲೋಚನೆಗಳು ಮಗ್ಗಲು ಹೊರಳಿಸುವ ನೆಲಮಂಗಲ ಸಿಗುತ್ತದೆ. ಅದನ್ನು ನಾನು ಯಾವಾಗಲೂ ‘ನೆಲ ಮುಗಿಲ ಊರು’ ಎಂದೇ ಪರಿಗಣಿಸುವುದು. ಯಾಕೆಂದರೆ ಅಲ್ಲಿಯವರೆಗೂ ಪ್ಲೈಓವರ್‍ದ ಮೇಲೆ ಓಡುವ ನನ್ನ ಕಾರಿಗೆ ಮತ್ತು ಜೀವಕ್ಕೆ ನೆಲ ಎಲ್ಲಿರುತ್ತದೆ ಹೇಳಿ? ಮುಗಿಲೂ ಅಷ್ಟೇ, ಕಾರ್ಬನ್‍ದ ಅನೈತಿಕ ಗರ್ಭತುಂಬಿಸಿಕೊಂಡು ಕೊರಗುವ ಹೆಂಗಸು. ಅವೆರಡೂ ಒಂದಾಗಿ, ನೆಲ ಮುಗಿಲಾಗಿ ಮತ್ತೆ ಮಿಗಿಲಾಗಿ, ಬಯಲಾಗಿ, ಹಬ್ಬಿಕೊಳ್ಳುವುದು ಈ ನೆಲಮಂಗಲದಾಚೆ. 5 ತಿಂಗಳಲ್ಲಿ ಕನಿಷ್ಟ 10 ಬಾರಿ ಮತ್ತೆ ಮತ್ತೆ ಇತ್ತ ಕಾರು ಹತ್ತಿಕೊಂಡು ಬಂದಿದ್ದೇನೆ, ನನ್ನ ಶಾಂತಲೆಯ ನಾಡಿಗೆ ಹಂಬಲಿಸಿ.

    ಎಡೆಯೂರಿನಿಂದ ನೆನಪುಗಳ ಒಗ್ಗರಣೆ ಬಿಚ್ಚಿಕೊಂಡು ಹೆಂಡತಿಯೊಂದಿಗೆ ಹೊರಟರೆ ಊರು ಮಟ್ಟಿದರೂ ಮಾತು ತನ್ನ ಗುರಿ ಮುಟ್ಟುವುದಿಲ್ಲ. ಮಾತು ಹೀಗಿರುವುದೇ ಚಂದ. ಇದರೊಂದಿಗೆ ಈ ಸಾರಿ ಕಾಡಿದ ಇನ್ನೊಂದು ಸಂವೇದನೆ, ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’?. ನಾನು ಬೇಲೂರಿನ ನನ್ನ ಮನೆ ಖಾಲಿ ಮಾಡಲು ಹೊರಟ ಈ ಸಾರಿಯಂತೂ ಅರಮನೆ, ಜೋಗಪ್ಪ, ಜಂಗಮ, ಎಲ್ಲಿ ಎಂಬ ಪದಗಳು ನನ್ನ ತಲೆಯಲ್ಲಿ ಕೈಆಡಿಸುತ್ತಿದ್ದರೆ, ನನ್ನ ಪ್ರೀತಿಯ ಜೋಗವ್ವಳ ಸಾವಿರದ ಕೈ ನೆನಪಾಗಿ ಜೀವ ಮರುಜನ್ಮ ಪಡೆಯುತ್ತಿತ್ತು.

    ಹೌದು. ಸೃಷ್ಟಿಯ ನಿತ್ಯ ಸಾಯುವ ಕೋಟಿ ಕೋಟಿ ಜೀವಗಳಲ್ಲಿ ನಮ್ಮ ಸಾವಿನ ತಂಬೂರಿ ಮೀಟುವ ತಣ್ಣನೆಯ ನೆಲ ಯಾವುದು?. ಮಣ್ಣೊಳಗೆ ಮಣ್ಣಾಗಿ, ಸಣ್ಣಾಗಿ ಗೆದ್ದಲುಗಳಿಗೆ ಭೋಜನವಾಗುವ ನಮ್ಮ ದೇಹದ ಮುಂದಿನ ನೆಲೆ ಯಾವುದು? ನಾವು ಪ್ರೀತಿಸುವ ಈ ಪ್ರಪಂಚದಲ್ಲಿ ಮತ್ತೆ ಹುಟ್ಟುವ, ಮೈಮನಗಳನ್ನು ತಟ್ಟುವ ಪುಣ್ಯದ ಸೆಲೆ ಯಾವುದು? ಮತ್ತೆ ಬಳಿ ಸಾರಿ ಕರೆದು ಉಂಡು-ಉಣ್ಣಿಸಿ, ಸಾಕು ಸಾಕವ್ವ ತಾಯಿ ಎನ್ನುವಂತೆ ಮುತ್ತಿಡುವ ಮೋಹದ ಬಲೆ ಯಾವುದು? ಹೇಳು, ಹೇಳು, ಹೇಳು ಜೋಗಪ್ಪ ಎಲ್ಲಿ ನಿನ್ನ ಅರಮನೆ? ಎಂದು ಕಾಡುವ ಈ ಹಾಡಿನ ಜೋಗವ್ವಳಿಗೆ ನನ್ನ ಉತ್ತರ ‘ಜೋಳಿಗೆ’.
     ಜೋಗವ್ವಳೊಂದಿಗೆ ಒಂದು ಸಣ್ಣ ಜರ್ನಿ. ಮೊನ್ನೆ ಬಿಜಾಪುರಕ್ಕೆ ಹೋದಾಗ ಕಾರ್ಯಕ್ರಮ ಮುಗಿಸಿಕೊಂಡು ಕಾಳಿದಾಸ ಸಂಸ್ಥೆಯಿಂದ ಬಸ್‍ಸ್ಟ್ಯಾಂಡ್‍ಗೆ ಬರುವಾಗ, ಮುಪ್ಪಿನ ಜೋಗುತಿ ಒಬ್ಬಳು ಸಿವಿಲ್ ಆಸ್ಪತ್ರೆಯಿಂದ ನಗರದೆಡೆಗೆ ರಣರಣ ಬಿಸಿಲಿನಲ್ಲಿ ಹೊರಟಿದ್ದಳು. ಮೈ ತುಂಬ ಕವಡೆಗಳ ಆಭರಣ, ಸೊಂಟದಲ್ಲಿ ಯಲ್ಲಮ್ಮನ ಭಂಡಾರದ ಬಟುವಾ, ದೊಡ್ಡ ಕುಂಕುಮ, ಜಿಡ್ಡು ಗಟ್ಟಿದ ಕೂದಲು, ಜೊಲ್ಲು ವಸರುವ ಎಲೆಮೆದ್ದ ಬಾಯಿ, ಏನಿದ್ದಳು ನನ್ನ ತಾಯಿ!!! ಆಹಾ! ಮಾಯಿ, ಮಹಾಮಾಯಿ.
      ಕಾರು ಹತ್ತಿದವಳೇ ನಾನು ಸೂಟಿನವನೋ, ಬೂಟಿನವನೋ ಯಾವುದೂ ಲೆಕ್ಕಿಸದೆ ಒಂದಿಷ್ಟು ಭಂಡಾರ ನನಗೂ ನನ್ನ ಹೆಂಡತಿಯ ಹಣೆಗೂ ಒತ್ತಿದಳು. ಒಂದಿಷ್ಟು ನನ್ನ ಕೋಟಿನ ಮೇಲೆ ಬಿದ್ದು ಕೋಟು ಹೊಲಸಾಯಿತು ಎಂದು ಹೇಗೆ ಹೇಳಲಿ?
ಅದು ಹರಕೆಯ ಕೈ, ಹೀಗಾಗಿ ಹತ್ತು ರೂಪಾಯಿ ಅವಳ ಕೈಗಿಟ್ಟು, ಬಂದೆ ಅವಳು ಹೇಳಿದಲ್ಲಿ ಬಿಟ್ಟು. ಭಾವಶುದ್ಧಿಯ ಕೈಗೆ ಯಾರ ಭಯವೂ ಇರಲಾರದು. ಅಂತೆಯೇ ಅದು ಅಭಯಹಸ್ತ.
    ಜೋಗವ್ವ ಹೋದಳು. ಮತ್ತೆ ಅದೇ ಹಾಡು ಎಲ್ಲಿ, ಎಲ್ಲಿ, ಎಲ್ಲಿ ಜೋಗಪ್ಪ ನಿನ್ನ ಅರಮನೆ. ನಲವತ್ತು ವರ್ಷ, ಹಲವಾರು ರೂಪ ಮತ್ತು ಅರ್ಥಗಳಲ್ಲಿ ನನ್ನನ್ನು ಈ ಪ್ರಶ್ನೆ ಕಾಡಿದೆ. ಇದೇ ತಿಂಗಳ ಇಪ್ಪತ್ತ್ನಾಲ್ಕರ ಸಾಯಂಕಾಲ ಇದನ್ನೇ ಚಿಂತಿಸುತ್ತ ಕಾರಿಳಿದು ಬೇಲೂರಿನ ನನ್ನ ಬಾಡಿಗೆ ಮನೆ ಮುಂದೆ ನಿಂತಾಗಲೂ ಅದೇ ಪ್ರಶ್ನೆ. ಈಗ ಪ್ರಾರಂಭವಾಗಬೇಕು ಇಲ್ಲಿ ಮುರಿದು, ಅಲ್ಲಿ ಕಟ್ಟಿಕೊಳ್ಳುವ ಕೆಲಸ. ನನ್ನ ಎಳೆಯ ಗೆಳೆಯರು ಎತ್ತಿಹಾಕಲು ಬಂದೇ ಬಿಟ್ಟರು. ನನ್ನ ಕಣ್ಣು ಒದ್ದೆಯಾದವು.
      ಒಂದು ಕ್ಷಣ ಮನೆ ಮುರಿಯುವ ಮುನ್ನ, ಎಲ್ಲ ಮರೆಯುವ ಮುನ್ನ ಎಂದು ಓಡಾಡಿ, ಹಳೆಯ ಆ ನೂರು ವರ್ಷಗಳ ಮನೆಯಲ್ಲಿಯ ನನ್ನ ಗ್ರಂಥಾಲಯ, ಬೆಡ್‍ರೂಂ, ಪಡಸಾಲೆ, ಕಿಚನ್‍ಗಳ ಫೋಟೋ ಕ್ಲಿಕ್ಕಿಸುವಾಗ ಎಲ್ಲರೂ ನಗುತ್ತಿದ್ದರು. “ನೆಟ್‍ನಲ್ಲಿ ಬಿಡಬೇಡಿ ಸರ್, ನೀವು ನಿಂತ ಮನೆ ನೋಡಿ ನಕ್ಕಾರು”. ಎಂದು ಎಳೆಯರ ವಾದ. ‘ನಗಲಿ ಬಿಡಿ, ಹೀಗೆ ನಾವೆಲ್ಲ ನಗು ನಗುತಾ ನೂರು ಕಾಲ ಇರಲಿ ಎಂಬುದೇ ತಾನೆ ಒಂದು ಮನೆಯ ಹರಕೆ’. ಮನೆ ಮನೆಯಲ್ಲ ಅದು ತಾಯಿ.
      ಹೀಗೆ ನಗುತ್ತಾ, ನಿರಂತರ ಎರಡು ದಿನ, ಆರು ಜನ ಮನೆ ಖಾಲಿ ಮಾಡುತ್ತಲೇ ಇದ್ದೆವು. ಈ ಸಂದರ್ಭದಲ್ಲಿ ನಾಟಕದ ತನ್ನ ದೃಶ್ಯ ಮುಗಿಸಿ ಬಂದು, ಆಭರಣಗಳನ್ನು ಬಿಚ್ಚಿಡುತ್ತಿದ್ದ ನನ್ನ ದೊಡ್ಡವ್ವನ ನೆನಪಾಯಿತು. ಹೀಗೆ ಬಿಚ್ಚಿಡುವುದು ಎಲ್ಲಿಯವರೆಗೆ? ಮತ್ತೆ ಮುಂದಿನ ದೃಶ್ಯ ಬರುವವರೆಗೆ. ಮನೆ ಎಂಬ ತಾಯಿ ಮತ್ತೆ ಮೈಯೆರಿಸಿಕೊಳ್ಳಬೇಕು, ಮತ್ತೆ ಬರುವವರ, ಇರುವವರ, ಇದ್ದೂ ಹೇಳದೇ ಹೋಗುವವರ. ಅಂತೆಯೇ ಶೇಕ್ಸ್‍ಪಿಯರ್ ಹೇಳಿದ್ದು, ಈ ಬದುಕೇ ಒಂದು ಮಹಾರಂಗಭೂಮಿ.
 
     ಸರಿಸುಮಾರು ಎರಡು ಟ್ರಕ್‍ಗಳಷ್ಟು ವಸ್ತುಗಳ ಸರಕನ್ನು ಕಟ್ಟಿ ಕಟ್ಟಿ ಇಟ್ಟೆವು. ಆದರೆ ಸಾಯದ, ಸಾಗಿಸಲಾಗದ ಈ ಮನೆಯ ನೆನಪೆಂಬ ಸರಕನ್ನು ಈ ಪದವೆಂಬ ರೈಲು ಹತ್ತಿಸುವುದು ಬಿಟ್ಟು ಇನ್ನಾವುದರಿಂದ ಸಾಗಿಸಲು ಸಾಧ್ಯ? ನನಗೆ ಈ ಮನೆ ಹೊಕ್ಕು ಮೂರು ವರ್ಷ ವಾಸಿಸಿ ಹೊರಬರುವವರೆಗೂ ಒಂದೇ ಸಂಕಲ್ಪ, ಮಣ್ಣಿನಿಂದ ಮರ, ಕಣ್ಣಿನಿಂದ ಕನಸು ಹುಟ್ಟುವಷ್ಟೇ ಸಹಜವಾಗಿ ಈ ಮನೆಯಿಂದ ನನ್ನದೊಂದು ಮನೆ ಎನ್ನುವುದು ಹುಟ್ಟುವವರೆಗೂ ನಾನಿಲ್ಲಿಂದ ಕಾಲು ತೆಗೆಯಬಾರದು. ನಮಗೂ, ನನ್ನ ಮಕ್ಕಳಿಗೂ ನಿತ್ಯ ಸುಪ್ರಭಾತ ಶ್ಲೋಕಗಳ ನಾದ ಕೇಳಿಸಿ, ಪ್ರಸಾದದ ಕೈ ತುತ್ತು ಹಾಕಿ, ವಿಶಾಲ ಅಂಗಳ, ಪಾರಿಜಾತದ ಸುರಿಮಳೆ, ಸೀಬೆಗಳ ಸಿಹಿ ನೀಡಿ, ಆಡಲು ಬಯಲು, ಹಲವು ಹಬ್ಬದ ಮಗಳು ತುಳಸಿ, ಶುದ್ಧವೋ-ಅಶುದ್ಧವೋ ಒಟ್ಟಾರೆ ಭರವಸೆಯ ನೀರು ನೀಡಿ ಸಲುಹಿದ ಈ ಮನೆಯೆಂಬ ಮರಕ್ಕೆ ಕೈ ಮುಗಿಯುವಾಗ, ಕವಿ ಎಂಕ್ಕುಂಡಿಯವರ ಸಾಲು – ‘ಮೈ ತುಂಬ ಹೂ ಬಿಟ್ಟ ಮರವು ಪುಣ್ಯದ ಜೀವ’ ಎನ್ನುವುದು ನೆನಪಾಗುತ್ತಿತ್ತು. ತಿಳಿದದ್ದು ತಿಳಿಯದ್ದು, ಇಲ್ಲಿಯೇ ಗೀಚುತ್ತಾ, ಕುಡಿಯುತ್ತಾ, ಜೋಲಿ ತಪ್ಪಿ ನಡೆಯುತ್ತಾ, ಬಡಿಯುತ್ತಾ, ಮುದ್ದಾಡುತ್ತಾ ಇಲ್ಲಯೇ ಬಾಳು ಕಳೆದಿದೆ. ಈಗ ಜೋಗವ್ವಳ ಪ್ರಶ್ನೆಯಿಂದ ಜೋಗಪ್ಪನಿಗೆ ಮುಕ್ತಿ ಸಿಕ್ಕಿದೆ.
    ಆದರೆ ನನ್ನ ಸಂಸಾರದ ಬೇರು ಹಿಡಿದ ಈ ಬೇಲೂರು ಈಗ ನನ್ನನ್ನು ಬಿಟ್ಟುಕೊಡಲಾರೆ ಎನ್ನಬೇಕೆ? ಮಗ ಬೇಲೂರು ಬಿಟ್ಟು ಬೆಂಗಳೂರಿಗೆ ಬರಲು ಸುತಾರಾಂ ಒಪ್ಪುತ್ತಿಲ್ಲ.
    ಬರಹ ಭವಿಷ್ಯದರ್ಶಿಯಾಗಿರಬೇಕಂತೆ. ಅದೇನು ಕಾಕತಾಳಿಯವೊ ನೋಡಿ ದಿನವೆಲ್ಲ ಸಾವು ಕುರಿತೇ, ಮುಟ್ಟಬೇಕಾದ ಅಂತಿಮ ಮನೆಯ ಕುರಿತೇ ಬರೆಯುತ್ತಿರಬೇಕಾದರೆ ನಾಡಿನ ಹಿರಿಯ ಸಾಹಿತಿ, ನನ್ನ ಒಂದು ಹಂತದ ಸಾಹಿತ್ಯದ ಗುರು-ಬಂಧು ಡಾ. ಎಸ್.ಎಂ ವೃಷಭೇಂದ್ರಸ್ವಾಮಿ ನಿಧನರಾದ ಸುದ್ದಿ ಬಂದಿದೆ. ಅವರು ನನಗೆ ಬರೆದ ಕೊನೆಯ ಪತ್ರ ಅಲ್ಲಿ ಬೇಲೂರಿನ ಕಾಲೇಜಿನಲ್ಲಿ ಬಿದ್ದಿದೆ. ಅವರನ್ನು ಇಡಿಯಾಗಿ ನೆನಪಿಸಿಕೊಂಡಾಗ ನಾಡಿನ ಹಿರಿಯ ಆಡಳಿತ ಅಧಿಕಾರಿ ನವರತ್ನ ರಾಮರಾಯರು ಮುಪ್ಪು ಮುಪ್ಪುರಿಗೊಂಡು ಸಾವಿಗಾಗಿ ಹಂಬಲಿಸುವಾಗ ಬರೆದ ಈ ಪದ್ಯ ನೆನಪಾಗುತ್ತದೆ. ಇದು ನಿಮಗೂ ಇರಲಿ. ಯಾಕೆಂದರೆ ಆ ಮನೆಗೆ ಒಂದು ದಿನ ನಾವು ನಿವೆಲ್ಲರೂ ಹೋಗಬೇಕಿದೆ.  
           
ಬಲುದೂರ ನಡೆದಿಹೆನು; ಬೆಂಡಾಗಿ ಬಳಲಿಹೆನು;
ಹಸಿವು ದಾಹಕು ಕೂಡ ಉಸಿರಿಲ್ಲವೆನಗೆ;
ಕೈ ಕಾಲುಗಳು ಸವೆದು ಕಡ್ಡಿ ಯಾಗುಳಿದಿಹವು;
ತುಸು ಹೊತ್ತು ತಾಳಪ್ಪ, ಬರುವೆ ನನ್ನೊಡೆಯ.

ಮಳೆಯು ಸುರಿಯುತಲಿಹುದು; ಜಗಕೆ ಬೆಳೆ ಬೇಕು;
ಚಳಿಗಾಲಗಳ ತಡೆವ ಶಕ್ತಿ ಎನಗೆಲ್ಲಿ?
ಶಾಲು ಕಂಬಳಿ ಹೊದೆಯಬಲ್ಲರಿಗೆ ಅವನು ಕೊಡು;
ನಿನ್ನಡಿಯ ಭಕ್ತಿಯನೆ ಹೊದಿಸು ನನಗೆ.

ಬಡ ಮುದುಕ ನಾ ನಿನ್ನ ಆಲಯಕೆ ಬರಲಾರೆ;
ಇರುವಲ್ಲೆ ಕರುಣಾಳು ಊಳಿಗವ ಸ್ವೀಕರಿಸು.
ನಿನ್ನ ದೇಗುಲ ಪೂಜೆ ಘೋಷವನು ಕೇಳಿಸೆನಗೆ;

                                      ಎದ್ದು ಒಡನೆಯೆ ಎಲ್ಲ ಚಿಂತೆಯನು ಬುದಿಗಿಟ್ಟು
ಆತ್ಮ ಭಾವದಿ ಬಂದು ಕಾಲ ಪಿಡಿವೆ.




No comments:

Post a Comment