ಪರಿಮಳದ
ಬೆನ್ನು ಬೀಳಬೇಡಾ
ಲೋಕ
ನಿನ್ನ ಕಾಯುತ್ತಿದೆ ಬೆವರ ಕಟ್ಟಿಕೊಂಡು
- ಅಲ್ಲಾಗಿರಿರಾಜ
ಬಹಳ ಹಿಂದಿನ
ಮಾತು, ಬೆಂಗಳೂರಿನ ಗಾಂಧಿ ನಗರಕ್ಕೆ ಒಂಟಿಯಾಗಿ ಬೆರಗುಗಣ್ಣಿನಿಂದ ಎಲ್ಲವನ್ನೂ ನೋಡುತ್ತ ತಿರುಗಾಡಿದ
ನೆನಪು. ಮೋಸದ ಗೆಳೆಯನೊಬ್ಬ ಪೋಸ್ಟರ್‍ಗಳನ್ನೇ ತೋರಿಸಿ ಪರಮಾತ್ಮನನ್ನೇ ಕೊಟ್ಟಿದ್ದೇನೆನ್ನುವ ಭ್ರಮೆ
ಹುಟ್ಟಿಸಿ ಮರೆಯಾಗಿಬಿಡುತ್ತಿದ್ದ. ಈಗಲೂ ಹೀಗೆ ಮರೆಯಾಗಿದ್ದಾನೆ ತಲೆಮರೆಸಿಕೊಂಡು. ಮೃಷ್ಠಾನ್ನವೇ
ಇರಲಿ ಅದು ಮೋಸದ ನೆರಳಿನಿಂದ ಮುಕ್ತವಾಗಿದ್ದರೆ ಮಾತ್ರ ತೊಟ್ಟು ರಕ್ತವಾಗುತ್ತದೆ.
ಈ ಗಾಂಧಿ ನಗರ
ಆಗ ಗಂಧರ್ವ ಲೋಕ. ಹೋಟೆಲ್ ‘ಕನಿಷ್ಕ’ ಎಂದರೆ ಅದ್ಯಾವುದೋ ರಾಮಾಯಣ ಕಾಲದ ಕಿಷ್ಕಿಂದೆ ನೋಡಿದ ಸಂಭ್ರಮ.
ಹೆಜ್ಜೆ-ಹೆಜ್ಜೆಗೂ ಡಿಸ್ಟ್ರಿಬ್ಯುಟರ್ಸ್, ಕಂಬೈನ್ಸ್, ಎಂಟರ್‍ಪ್ರೈಸಸ್ ಏನೆಲ್ಲ. ಅಬ್ಬಾ! ಲೋಕವೆ.
ಈಗ ಮಧ್ಯಾಹ್ನ ಬೇಸರವಾದಾಗಲೆಲ್ಲ ಅತ್ತಲಿಂದ ಕಲಾವಿದ ಗೆಳೆಯ ಸುಭಾಷ, ಇತ್ತ ಮಹಾರಾಣಿ ಕಾಲೇಜಿನಿಂದ
ಒಂದಿಷ್ಟು ವೃತ್ತಿ ಬಾಂಧವರು ವಾರದಲ್ಲಿ ಕನಿಷ್ಠ ಮೂರು ಬಾರಿಯಾದರೂ ಈ ಕನಿಷ್ಕದಲ್ಲಿ ಕುಳಿತು ಹುಳಿತೇಗು
ಬರುವಷ್ಟು ಕಾಫಿ ಖಾಲಿ ಮಾಡುತ್ತೇವೆ. ಆದರೆ ಕನಿಷ್ಕ ಕಾಡುವುದೇ ಇಲ್ಲ. ಚಿತ್ರದುರ್ಗದ ಪರಮಾಪ್ತ ಗೆಳೆಯ
ಜಿ.ಎನ್. ಮಲ್ಲಿಕಾರ್ಜುನ ಯಾವುದೇ ಸಂದರ್ಭದಲ್ಲಿ ಬಳಸಿಕೊಳ್ಳಲು ಕೋಣೆಯೊಂದನ್ನು ಈ ಕನಿಷ್ಕದಲ್ಲಿ ಕಾಯ್ದಿರಿಸಿದ್ದಾರೆ.
ಆದರೆ ಕಾಲಿಡುವಷ್ಟೂ ವೇಳೆ ಇಲ್ಲ.
ಕಾರಣವಿಷ್ಟೆ
ಈ ಗಾಂಧಿ ನಗರ ಅಂದಿನ ನನ್ನ ಲೋಕವಲ್ಲ. ಗಾಂಧಿ ನಗರಕ್ಕೀಗ ಒಬ್ಬ ನಾಯಕನಿಲ್ಲ. ಇಡೀ ಚಿತ್ರರಂಗ ಚಾಡಿಕೋರರ
ಚಾವಡಿಯಾಗಿ, ಜಾತಿ ಮತ್ತು ತೋಳ್ಬಲದ ಮೇಲೆ ಮೂರು ಗುಂಪಾಗಿ ಒಡೆದು ಮೂಲೆಗುಂಪಾಗುತ್ತಿದೆ. ಮನುಷ್ಯನಾಗಿರುವ
ಒಬ್ಬ ಸಾಂಸ್ಕøತಿಕ ನಾಯಕನಿಲ್ಲ. ಹಿರಿಯರೆಲ್ಲ ನಾಚಿ ಹಿಂದೆ ಸರಿದಿದ್ದಾರೆ. ನಾಯಕಿಯರೆಲ್ಲ ರಾಜಕಾರಣಿಗಳ,
ಎಸ್ಟೆಟ್ ನಾಯಕರ ಹಿತ್ತಲ ಮನೆ ಹೊಕ್ಕು ಸದ್ದಿಲ್ಲದಂತಾಗಿದ್ದಾರೆ. ಬಿಕೋ ಎನ್ನುವ ಇಂಥ ಗಾಂಧಿ ನಗರದ
‘ತನುಚಿತ್ರ’ ಆಫೀಸಿಗೆ ಹೋಗಬೇಕಾದ ಸಂದರ್ಭ. ಅಂದೇ ಡಾ|| ರಾಜಕುಮಾರ ಪ್ರಶಸ್ತಿಗೆ ಭಾಜನರಾದ ನಟ ಶ್ರೀನಾಥರ
ಭೇಟ್ಟಿಯೂ ಕೂಡಾ.
ನಾನು, ನನ್ನ
ಹೆಂಡತಿ, ಸಾ.ರಾ. ಗೋವಿಂದ ಅವರ ಮಗ ಅನೂಪನ ಹೊಸ ಚಿತ್ರ ‘ಡವ್’ದ ಟ್ರೇಲರ್ ನೋಡಬೇಕೆಂದು ಅವರ ಬಯಕೆ.
ಆದರೆ ನನ್ನ ಮನೆ ಮತ್ತು ಮಡದಿ ಇಲ್ಲದೆ ನನಗ್ಯಾವ ಸಂಭ್ರಮಗಳೂ ಅಸಾಧ್ಯ ಎಂದು ನಮ್ರವಾಗಿ ತಿಳಿಸಿದಾಗ
ಸಾ.ರಾ. ಗೋವಿಂದ ಇದುವರೆಗೆ ಯಾರಿಗೂ ತೋರಿಸದ ‘ಡವ್’ ಚಿತ್ರದ ಟ್ರೇಲರ್ ಮತ್ತು ಚಿತ್ರ ಗೀತೆಗಳ ಒಂದು
ಸೆಟ್ ಸಿ.ಡಿಯನ್ನು ಮನೆಗೆ ಕಳುಹಿಸುವ ಸೌಜನ್ಯ ತೋರಿಸಿದರು. ಇನ್ನೂ ಬಿಡುಗಡೆಯಾಗದ ‘ಡವ್’ದ ಟ್ರೇಲರ್‍ನ್ನು
ನಾನು ನೋಡಿ ಮರುದಿನ ಅವರ ವಿಶ್ವಾಸ ಮೂಲದ ‘ಸಂತೋಷ’ ಹೋಟೆಲ್‍ದ ಮಾಲೀಕರಿಗೆ ತಲುಪಿಸಿದೆ.
ಖುಷಿಯಾಗುತ್ತದೆ
ಕೆಲವೊಮ್ಮೆ, ಈ ಗೋವಿಂದರಿಗೆ ಸಾಹಿತ್ಯ, ಶರಣ ಸಂಸ್ಕøತಿ ಮತ್ತು ವಿನಯವಂತರ ಬಗ್ಗೆ ದೊಡ್ಡ ಪ್ರೀತಿ ಇದೆ.
ಈಗ ಅವರು ನನ್ನ ಗಾಂಧಿ ಮತ್ತು ಸಾಕಿಯರ ಅಭಿಮಾನಿ. ನಾನು ಅಕ್ಕ ಮಹಾದೇವಿಯ ಬಗ್ಗೆ ಮಾತನಾಡುತ್ತಿದ್ದರೆ.
ಅವರ ಕಣ್ಣ ತುಂಬ ಕದಳಿಯ ಮಹಾ ಬೆರಗು.
ಹೊಸ ವರ್ಷದ ಬಾಗಿಲಲ್ಲಿಯೇ
ಹಿರಿಯ ನಟ ರಾಜೇಶ ತಮಿಳಿನ ಚಿತ್ರ ಸಾಹಿತಿ ಕನ್‍ದಾಸನ್ ಕುರಿತು ಏನೆಲ್ಲ ಕಳುಹಿಸಿದ್ದಾರೆ. ಗೆಳೆಯ
ಧರ್ಮದಾಸ್ ಹೈದ್ರಾಬಾದಿನಿಂದ ತನ್ನ ಅತ್ತೆ ಗಂಗೂಬಾಯಿ ಹಾನಗಲ್‍ರ ಸಂಗ್ರಹದಿಂದ ಎತ್ತಿ ಕುಮಾರ್ ಗಂಧರ್ವರು
ಬಾಲಕರಾಗಿದ್ದಾಗ ಹಾಡಿದ್ದರ ವಿಡಿಯೋ ಕ್ಲಿಪಿಂಗ್ ಕಳುಹಿಸಿದ್ದಾರೆ. ಕಾಂತಾವರದ ‘ಅಲ್ಲಮಪ್ರಭು ಪೀಠ’ದ
ಹಿರಿಯರಾದ ನಾ.ಮೊಗಸಾಲೆ ಓಶೋನನ್ನು ಹಂಚಿಕೊಳ್ಳಲು ಕರೆಯುತ್ತಿದ್ದಾರೆ.
ಹೊಸ ವರ್ಷದ ಹೆಬ್ಬಾಗಿಲಲ್ಲೇ
ಮಾರ್ಚ ತಿಂಗಳವರೆಗಿನ ಜೋಳಿಗೆಯನ್ನು ತುಂಬಿಸಿಟ್ಟ ಗುರುರಾಯ ಈ ಜಂಗಮನ ಹಂಗು ಹರಿದುಕೊಂಡಿದ್ದಾನೆ.
“ಅಗರ್ ಭಗವಾನ್ ದೇತಾ ಹೈ ತೊ ಛಪ್ಪರ್ ಫಾಡಕೆ ದೇತಾ ಹೈ” ಎಂಬ ಆತನ ಹೊಗಳಿಕೆಗೆ ಆತ ಪಾತ್ರನಾಗಿದ್ದಾನೆ.
ಆದರೆ “Nothing will
work unless you do” ಎಂಬ ವಿನಯದಲ್ಲಿ
ಬಾಳಿ ನಾನು ಗುರಿಮುಟ್ಟಬೇಕಿದೆ.
ಅಂದಹಾಗೆ, ಪ್ರೇಮಿಗಳ
ದಿನ ಬಂತಲ್ಲ? ಪ್ರೀತಿಸಿ ಮದುವೆಯಾದ ನಾವು ಏನಾದರೂ ಜವಾಬ್ದಾರಿಯನ್ನು ನಿಭಾಯಿಸಬೇಡವೆ? ಕಾಯುತ್ತಿರಿ,
ನಮ್ಮ ಏಳ್ಗೆಗಾಗಿ ನಿಮ್ಮ ದೇವರಲ್ಲಿ ನಮಗಾಗಿ ಒಂದು ಪ್ರಾರ್ಥನೆ ಸಲ್ಲಿಸುತ್ತಿರಿ.
No comments:
Post a Comment