Total Pageviews

Wednesday, March 4, 2015

ಹಣ್ಣು ಹೆತ್ತ ಮರ ಬಾಗುತ್ತದೆ

       ಹಿಂದಿನ ದಿನವಷ್ಟೇ ಶ್ರೀ ರಾಮಕೃಷ್ಣ ಪರಮಹಂಸರ ಜನ್ಮದಿನ. ಒಂದು ಕ್ಷಣ ನೆನಪುಗಳ ಸುರಳಿ ಬಿಚ್ಚಿಕೊಂಡು ಏನೇನೊ ಅಂದುಕೊಳ್ಳುತ್ತಿದ್ದೆ. “ಪ್ರತಿ ಪುಸ್ತಕದಲ್ಲೂ ಲೇಖಕನ ಆತ್ಮ ಮತ್ತು ಓದುಗನ ಮನಸ್ಸು ಹುದುಗಿರುತ್ತವೆಎಂದು ಹೇಳುತ್ತಿದ್ದರು ಪಂಡಿತ ನೆಹರು. ಹೀಗಾಗಿ ಪುಸ್ತಕಗಳೊಂದಿಗೆ ಜರುಗಿದ ಯಾವುದೇ ವಿಚಾರವೂ ಗಂಭೀರ ಅವರಿಗೆ. ಕಳೆದುಕೊಂಡ ಪುಸ್ತಕ ಖಂಡಿತ ಹೊಸ ಮುದ್ರಣದಲ್ಲಿ ಮಾರುಕಟ್ಟೆಯಲ್ಲಿ ದೊರೆಯಬಹುದು. ಆದರೆ ಹಳೆಯ ಪುಸ್ತಕದೊಂದಿಗೆ ಬೆಳೆಸಿಕೊಂಡ ಭಾವನಾತ್ಮಕ ನಂಟುಗಳು ಮಾರುಕಟ್ಟೆಯಲ್ಲಿ ಖರೀಧಿಸಲಾದೀತೆ? ಪುಸ್ತಕವೆಂದರೆ ಬರೀ ಪೇಪರ್-ಶಾಯಿ-ಮಾಹಿತಿಯಲ್ಲ; ಅದು ವಾಸನೆ, ನೆಮ್ಮದಿ ಮತ್ತು ನಂಟೂ ಕೂಡ ಅಲ್ವೆ?
      ಹೀಗೆಲ್ಲ ಯೋಚಿಸುತ್ತಿರುವಾಗ, ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಇಂಟರ್ನ್ಯಾಶನಲ್ ಸೆಂಟರ್ ಶ್ರೀ ರವಿಶಂಕರ ಗುರುಗಳ ಆಶ್ರಮದಿಂದ ಫೋನ್. ಆಕಡೆಯಿಂದ ಮಾತಾಡುತ್ತಿರುವವರು ಡಾ. ಜೀತು ಪಾಠಕ, “ನಾಳೆ ನಮ್ಮ ಆಶ್ರಮದಿಂದ ಪ್ರೊ. ರಾಜಶೇಖರ ಜಿ.ಆರ್ ತಮ್ಮನ್ನು ಕಾಣಲು ಬರುತ್ತಾರೆ, ನಾಡಿದ್ದು ನಾಡಿನ ಹಿರಿಯ ವಿದ್ವಾಂಸರಾದ ಪ್ರೊ. ಚಿದಾನಂದಗೌಡ(ಕುವೆಂಪು ಅವರ ಅಳಿಯ) ಹಾಗೂ ಜಗತ್ತಿನ ಶ್ರೇಷ್ಠ ಚಿತ್ರ ನಿರ್ಮಾಪಕರಲ್ಲಿ ಒಬ್ಬರಾದ ಶ್ರೀ ರಾಮೋಜಿರಾವ್ ಹಾಗೂ ಇತರರೊಂದಿಗೆ ನೀವು ನಮ್ಮೊಂದಿಗಿರುತ್ತೀರಿಎಂದು ಹೇಲುತ್ತಿರುವಾಗ ಒಂದು ಕ್ಷಣ ನನ್ನ ಕಿವಿಗಳನ್ನು ನಾನೇ ನಂಬದ ಸ್ಥಿತಿ.
       ಸರಿ, ಅಂದುಕೊಂಡತೆಯೆ ಆರ್ಟ್ ಆಪ್ ಲಿವಿಂಗ್ ಇಂಟರ್ನ್ಯಾಶನಲ್ ಸೆಂಟರ್ ಸ್ಟೇಟ್ ಕೋಆರ್ಡಿನೇಟರ್ ಆದ ಶ್ರೀ ರಾಜಶೇಖರ ಜಿ.ಆರ್ ಹಾಗೂ ರಮ್ಯಾ ಹೈಯರ್ ಎಜುಕೇಶನ್ ನನ್ನ ಚೆಂಬರಿಗೆ ಬಂದು ಅಧಿಕೃತವಾಗಿ ಆಮಂತ್ರಣ ನೀಡಿ, ಸೆಕ್ಯೂರಿಟಿ ಕಾರಣಗಳಿಂದಾಗಿ ಅನಿವಾರ್ಯವಾಗಿರುವ ನನ್ನೆಲ್ಲ ಮಾಹಿತಿಗಳನ್ನೂ ಸಂಗ್ರಹಿಸಿಕೊಂಡು ಹೋದರು.
     ಯಾವ ಮಾನದಂಡಗಳಿಂದ ನನ್ನ ಆಯ್ಕೆಯಾಗಿದೆ? ಅಂದಿನ, ಮುಂದಿನ ಕಾರ್ಯದಲ್ಲಿ ನನ್ನ ಪಾತ್ರವೇನು? ಹೀಗೆ ಏನೆಲ್ಲ ವಿಚಾರಿಸುತ್ತ ದಿನ ಕಳೆದರೆ, ಸಾಯಂಕಾಲ ಮತ್ತೆ ಡಾ. ದುಬೆ(ಪಂಜಾಬಿನ ಶ್ರೇಷ್ಠ ರಂಗಕರ್ಮಿ) ಅವರಿಂದ ಫೋನ್, “ಮಠಾಧಿಪತಿ ಜಿ ನಮಷ್ಕಾರ್, ಕಲ್ ಆಪ್ಕಾ ಸನ್ಮಾನ್ ಕಿಯಾ ಜಾಯೆಗಾ. ಔರ್ ಆಪ್ ದೋಪಹರ್ ಕೆ ಪ್ಯಾನಲ್ ಪೆ ಎಜುಕೇಶನಲ್ ವ್ಯಾಲ್ಯೂಜ್ ಕೆ ಬಾರೆಮೆ ಆಡಿಯನ್ಸ್ ಕೊ ಅರ್ಡೆಸ್ ಕರೆಂಗೆಎಂದಾಗ ಕೊನೆಗೆ ನನಗೆ ಎನೊಂದೂ ಅರ್ಥವಾಗದೆ ಸುಮ್ಮನೆಹುಂಗುಟ್ಟುತ್ತಿದ್ದೆ ಅಷ್ಟೆ.
     2003 ರಲ್ಲಿ ಮೈಸೂರಿನ ಸಿ...ಎಲ್ನಿಂದ ನಾನು ಬಾಗಲಕೋಟೆಯ ಬಿ.ವಿ.ವಿಗೆ ಹೋದೆ. ವರ್ಷಗಳಲ್ಲಿ 2007 ರಿಂದ 2009 ಮಧ್ಯ ಶ್ರೀ ರವಿಶಂಕರರು ಬಾಗಲಕೋಟೆಗೆ ಬಂದಿದ್ದರು. ನಾನು ಅವರ ಆಗಮನ ಪೂರ್ವ ತಯಾರಿಗಳನ್ನೇ ನೋಡಿ ಸುಸ್ತಾಗಿ ಹೋಗಿದ್ದೆ. ಸಾಯಂಕಾಲದ ಸಮಾರಂಭಕ್ಕೆ ಅಲ್ಲಿ ಸೇರಿದ್ದ ಸಾವಿರ ಸಾವಿರ ಜನರಲ್ಲಿ ನಾನೂ ಒಬ್ಬನಾಗಿ ಹೋಗಿ ಅಂದಿನ ಕಾರ್ಯಕ್ರಮ ಗಮನಿಸಿದ್ದೆ. ಆದರೆ ಇಂದು ನಾನು ಅವರೊಂದಿಗೆ ಮುಖಾ-ಮುಖಿ!!!
     ರಾಮೋಜಿರಾವ್ ಅವರ ವಿಷಯದಲ್ಲೂ ಅಷ್ಟೆ. 2011ರಲ್ಲಿ ಮೌಲಾನಾ ಆಝಾದ್ ವಿಶ್ವವಿದ್ಯಾಲಯಕ್ಕೆ ತರಬೇತಿಗಾಗಿ ಹೋದ ದಿನಗಳಲ್ಲಿ, ಟಿಕೇಟು ಪಡೆದು ರಾಮೋಜಿರಾವ್ ಫಿಲ್ಮ ಸಿಟಿಗೆ ಹೋಗಿ, ಫಿಲ್ಮ ಮೇಕಿಂಗ್ ಪ್ರೊಸೆಸ್ಸನ ಒಂದು ಸ್ಟುಡಿಯೋದಲ್ಲಿ ವ್ಯಕ್ತಿಯ ಫೋಟೊ ನೋಡಿ, ಅಲ್ಲಿಯೇ ಮಾಹಿತಿ ಓದಿ, ಪುಳಕಿತಗೊಂಡಿದ್ದೆ. ಆದರೆ ಇಂದು ನಾವಿಬ್ಬರೂ ಒಂದೇ ಸಮಾರಂಭದಲ್ಲಿ.
       ಇದರೊಂದಿಗೆ ಮತ್ತೆ ಪಂಜಾಬ್ ಟೆಕ್ನಿಕಲ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜಗದೀಶ್ ಅರೋರಾ, ಬೆಂಗಳೂರಿನ ಎಪಿಎಸ್ ಟ್ರಸ್ಟನ ಡಾ. .ಎಸ್. ವಿಷ್ಣುಭಾರತ್, ಶ್ರೀ ಸರ್ವೋತ್ತಮರಾವ್, ಡಾ. ರಜನೀಶ್ ಅರೋರಾ, ಪ್ರೊ. ದಿವ್ಯಾ ಕಾಂಚಿಭೂತಾಲ್, ಆರ್ಟ್ ಆಫ್ ಲಿವಿಂಗ್ ಆಡಳಿತಾಧಿಕಾರಿ ಪ್ರೊ. ವೆಂಕಟೇಶ ಎಸ್.ಆರ್(. ಮಹದೇವಯ್ಯ, ಕನ್ನಡದ ಮೊದಲ ಅಂಕಲಪಿಯ ಪಿತಾಮಹ ಅವರ ಮಗ) ಹೀಗೆ ಎಷ್ಟೆಲ್ಲ ಸಾಧಕರುಗಳು. ಇಂಥವರ ಮುಂದೆ ನನ್ನದ್ಯಾವ ಸಾಧನೆ. ಇಲ್ಲಿ ನನ್ನ ಸನ್ಮಾನ ಬೇಕೆ? ಅದು ಕ್ಷಣದಲ್ಲೂ ನನಗೆ ಪ್ರಶ್ನೆಯೇ.
 ಒಟ್ಟಾರೆ ದಿನಾಂಕ:21.02.2015 ರಂದು ಶನಿವಾರ ಮುಂಜಾನೆ 10 ಗಂಟೆಗೆ ಹೋಗಿ ಆಶ್ರಮಕ್ಕೆ ಕಾಲಿಟ್ಟರೆ, ಅಲ್ಲಿಯೂ ಇದ್ದರು ನಮ್ಮವರು. ಬಾಗಲಕೋಟೆಯ ಶ್ರೀ ಉಜ್ವಲ್ ಸಕ್ರಿ ಹಾಗೂ ಅವರ ಶ್ರೀಮತಿ ನನ್ನ ಇಡೀ ದಿನದ ಕ್ಯಾಮರಾಮನ್ಗಳಾಗಿ, ಕಾರುಣ್ಯದ ಕೈಗಳಾಗಿ ತೋರಿಸಿದ ಅಭಿಮಾನ ಮರೆಯಲಾಗದ್ದು. ತುಂಬಿದ್ದು ತುಳುಕುವದಿಲ್ಲ, ಸಮೃದ್ಧವಾಗಿರುವುದು ಬೀಗುವುದಿಲ್ಲ. ಅದು ಟೊಂಗೆ ಟೊಂಗೆಗೆ ಹಣ್ಣು ಹೆತ್ತ ಮರದಂತೆ ಬಾಗಿರುತ್ತದೆ. ಉಜ್ವಲ್ ಸಕ್ರಿಯವರ ಬಗೆಗೆ ಒಂದೇ ಮಾತು. ಬಾಗಲಕೋಟೆಯ ದಿವಂಗತ ವೆಂಕಪ್ಪ ವಾಸಪ್ಪ ಸಕ್ರಿ ಕುಟುಂಬದ ಮೊಮ್ಮಗ. ನೂರು ವರ್ಷ ಹಳೆಯ ಶಿಕ್ಷಣ ಸಂಸ್ಥೆ, ಅಲ್ಲಿಯ ಶಕ್ತಿ ಟಾಕೀಸ್, ನೂರಾರು ಎಕರೆಗಳಷ್ಟು ಜಮೀನು ಇದ್ದೂ, ಬದುಕನ್ನು ಇಲ್ಲಿಯ ಸೇವೆಗಾಗಿ ಮುಡುಪಾಗಿಟ್ಟವರು.
       ಆಶ್ರಮ ಒಬ್ಬ ವ್ಯಕ್ತಿಯ ಸಾಧನೆಗೆ ಒಂದು ಸವಾಲು. ಸೆಂಟ್ ಜೋಸೆಫ್ ಕಾಲೇಜಿನ ರವಿಶಂಕರ ಎಂಬ ವಿದ್ಯಾರ್ಥಿ ಬೆಳೆಯುತ್ತ ಬೆಳೆಯುತ್ತ ಇಂದು ಒಂದು ದಿನಕ್ಕೆ 7000 ಜನಗಳಿಗೆ ಊಟ ಹಾಕುವ, 2000 ಜನ ವಿದ್ಯಾಥಿಗಳಿಗೆ ಉಚಿತ ಶಿಕ್ಷಣ ನೀಡುವ, 1100 ಕೋಣೆಗಳ ಕಟ್ಟಡ ಕಟ್ಟಿ 700 ಜನ ಶಿಕ್ಷಕರನ್ನು ಸಲಹುವ, ಒಂದು ಲಕ್ಷ ಜನ ಕುಳಿತುಕೊಳ್ಳುವ ಒಂದು ಸಭಾಂಗಣ, ಎಪ್ಪತ್ತು ಸಾವಿರ ಜನ ಕುಳಿತುಕೊಳ್ಳು ಒಂದು ಯಜ್ಞಶಾಲೆ, ಮೂವತ್ತು ಸಾವಿರ ಜನ ಏಕಕಾಲಕ್ಕೆ ಊಟಮಾಡಬಲ್ಲ ಪಾಕ ಶಾಲೆ ಹೀಗೆ ಒಟ್ಟು 70 ಎಕರೆಗಳಷ್ಟು ಪ್ರದೇಶ, ಬರೀ ಕಟ್ಟಡಗಳಿಂದ ಆವರಿಸಲ್ಪಟ್ಟಿದೆ. ಅದೆಲ್ಲವನ್ನು ಒಂದು ಕಾಲದ ಸಾಮಾನ್ಯ ವಿದ್ಯಾರ್ಥಿ ರವಿಶಂಕರ ಗಮನಿಸುತ್ತಾರೆ. ಈಗ 275 ಹಳ್ಳಿಗಳನ್ನು ಸುತ್ತಿ ಬೆಂಗಳೂರಿನ ಸಮೀಪದ ತಿಪ್ಪಗುಂಡವನಹಳ್ಳಿಗೆ ಬರುವ ಕುಮದಾವತಿ ನದಿಯನ್ನು ಸ್ವಚ್ಛಗೊಳಿಸುವುದು, ಪಾಕಿಸ್ತಾನದಲ್ಲೂ ಇರುವ ತಮ್ಮ ಆಶ್ರಮದ ಮೂಲಕ ಏಷಿಯಾದಲ್ಲಿ ಶಾಂತಿ ಸ್ಥಾಪಿಸುವುದು ಅವರ ಗುರಿಯಾಗಿದೆ.         
       ಅಂದಿನ ನನ್ನ ಭಾಷಣದಲ್ಲಿ ನಾನು ಹೇಳಿದ್ದಿಷ್ಟೆ, ‘ಮೌಲ್ಯಗಳಲ್ಲಿ ಮಾನವೀಯ ಮೌಲ್ಯ ಮತ್ತು ಅಮಾನವೀಯ ಮೌಲ್ಯಗಳೆಂದೇನೂ ಇಲ್ಲ. ವ್ಯಾಪಾರಿ ಶಿಕ್ಷಣದಿಂದ ಪಶ್ಚಿಮ ರಾಷ್ಟ್ರಗಳಲ್ಲಿ ಸೃಷ್ಟಿಯಾದ ಭಾವ ಶುಷ್ಕತೆ ಈಗ ಭಾರತದಲ್ಲಿದೆ. ಅಮೇರಿಕಾದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದು ತಂದೆ-ತಾಯಿಗಳಿಗೆ ಆತಂಕದ ಸಂಗತಿಯಾಗಿದೆ. ಅಲ್ಲಿ ಎರಡು ಕಿರಾಣಿ ಅಂಗಡಿಗಳಿದ್ದರೆ ನಾಲ್ಕು ಬಂದೂಕಿನ ಅಂಗಡಿಗಳಿರುತ್ತವೆ. ಸ್ಥಿತಿ ನಮಗೆ ಬರಬಾರದು. ‘ಭಾರತ್ ಕೊ ಸೊನೆಕಾ ಚಿಡಿಯಾ ನಹಿ ಸೊನೆಕೆ ಶೇರ್ ಬನಾನಾ ಹೈ’ 19ನೇ ಶತಮಾನ ಇಂಗ್ಲೀಷರದು, 20ನೇ ಶತಮಾನ ಅಮೇರಿಕನ್ನರದು ಆದರೆ 21ನೇ ಶತಮಾನ ಮಾತ್ರ ನಮ್ಮದು, ಭಾರತಿಯರದು.

No comments:

Post a Comment