Total Pageviews

Wednesday, March 11, 2015

ಮೊದಲ ಮಳೆ. ಮಣ್ಣ ವಾಸನೆ, ತಣ್ಣನೆಯ ಮನಸ್ಸು

  ರಂಗಕಿರಣ ವೇದಿಕೆಯ, “ಶಿವರಾತ್ರಿ ರಂಗೋತ್ಸವ-2015” ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ, ಬೆಂಗಳೂರು ಕಲಾಗ್ರಾಮದಲ್ಲಿ 27.02.2015 ರಂದು ಚಂಪಾ, ಶ್ರೀ ಶಶಿಕಾಂತ ಯಡಹಳ್ಳಿ, ಡಾ. ಎಂ. ಬೈರೇಗೌಡ, ಅನಂತಪದ್ಮನಾಭರೊಂದಿಗೆ ನಾನಿರಬೇಕಿತ್ತು. ಆದರೆ ಗುಡಿಹಳ್ಳಿ ನಾಗರಾಜು ದಿನ ಬರುತ್ತಾರೆ ಎಂದು ಕೇಳಿ ಮರುದಿನ ಎಸ್.ಜಿ ಸಿದ್ಧರಾಮಯ್ಯ, ಶ್ರೀಮತಿ ಕಮನೀಧರನ್(ಶ್ರೀರಸ್ತು ಶುಭಮಸ್ತು ಧಾರಾವಾಹಿ ಖ್ಯಾತಿಯ)ರೊಂದಿಗೆ ಸೇರಿ ಮರುದಿನದ ಅತಿಥಿಯಾಗಿ ಹೋದೆ. ದಿನ ಬೆಂಗಳೂರಿನ ಮೊದಲ ಮಳೆ. ಮಣ್ಣಿನ ವಾಸನೆ, ತಣ್ಣನೆಯ ಮನಸ್ಸು, ಮೌನದ ಹಸಿವು.
ದುಡಿಯದೆಯೂ ದಣಿವಾಗುವ ಬೆಂಗಳೂರಿನ ದೆಸೆಯಿಲ್ಲದ ಧಾವಂತದ ಬದುಕಿನಲ್ಲಿ, ಊರುಬಿಟ್ಟು ದೂರ ಕಲಾಗ್ರಾಮದಲ್ಲಿ ಕುಳಿತು ಎರಡೂ ನಾಟಕಗಳನ್ನು ನೋಡೇ ಬಿಡುವುದು ಎಂದು ನಾನು ಮತ್ತು ಪದ್ದಿ ನಿರ್ಧರಿಸಿಕೊಂಡೇ ಬಂದಿದ್ದೆವು. ಮೊದಲನೆಯದು ಬಿ.ಆರ್ ಲಕ್ಷ್ಮಣರಾವ್ನನಗ್ಯಾಕೋ ಡೌಟುಎರಡನೆಯದು ಬೈರೇಗೌಡರಕಿಲಾಡಿ ದಾಸಯ್ಯ”, ಎರಡೂ ಅಪರೂಪದ ನಗೆ ನಾಟಕಗಳೆ.
ಎರಡರ ಮಧ್ಯದಲ್ಲಿ ಮುಕ್ತಾಯ ಸಮಾರಂಭ ಎಂಬ ನಮ್ಮನ್ನೊಳಗೊಂಡ ಪ್ರಹಸನ. ನಾನು ಮಾತಾಡಿದ್ದು ಕೇವಲ 15 ನಿಮಿಷ. ಸಂಗೀತ ಮತ್ತು ನಟನೆ ಇರುವಲ್ಲಿ ಮಾತು ಅಪ್ರಸ್ತುತ. ಹೀಗಾಗಿ ನಾನು ಹೇಳಬೇಕೆಂದುದನ್ನು ಸರಳವಾಗಿ, ನೇರವಾಗಿ ಹೇಳಿದೆ. “ನಾಲ್ಕೈದು ಮಕ್ಕಳ ಸಂಸಾರಸ್ತೆ ಶ್ರೀಮತಿ ರೇಣುಕಾರೆಡ್ಡಿ, ನಾಟಕಕ್ಕೆ ಬದುಕನ್ನೇ ಸಮರ್ಪಿಸಿಕೊಂಡವರು. ಆದರೆ ಬದುಕನ್ನು ನಾಟಕ ಮಾಡಿಕೊಂಡವರಲ್ಲ.
ಶ್ರೀಮತಿ ರೇಣುಕಾರೆಡ್ಡಿ, ನನ್ನ ತಾಯಿಗಿಂತ ಸ್ವಲ್ಪ ಚಿಕ್ಕವರು. ಆದರ್ಶ ಹೆಂಡತಿ, ತಾಯಿ, ಒಂದು ಮನೆತನದ ಸೊಸೆಯಾಗಿರುವುದರೊಂದಿಗೆ ಕಾಲೇಜು ಮಕ್ಕಳನ್ನು ಕಟ್ಟಿಕೊಂಡು ರಂಗನಿರ್ದೇಶನ, ಕಿರುಚಿತ್ರ ನಿರ್ಮಾಣಗಳಿಗೆ ಕೈ ಹಾಕಿರುವುದು ಸಾಮಾನ್ಯ ಸಾಧನೆಯಲ್ಲ. ಆದರೆ ಯಾಕೊ ಕಲಾಗ್ರಾಮದಲ್ಲಿಯ ಪ್ರೇಕ್ಷಕ ಸಂಸ್ಕತಿ ನನಗಿಷ್ಟವಾಗಲಿಲ್ಲ. ಪಾತ್ರದ ತನ್ಮಯತೆ ಕೆಡಿಸುವಂತೆ ಅದರೊಂದಿಗೆ ನೇರವಾಗಿ ಪ್ರತಿಕ್ರಿಯಿಸುವುದು ನನಗಿಷ್ಟವಾಗಲಿಲ್ಲ.
 ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಂಬಲಿಸುವಂತೆ ನಮ್ಮ ಯುವಕ-ಯುವತಿಯರು ರಂಗಪ್ರಕ್ರಿಯೆಗೆ ಹಂಬಲಿಸಬೇಕು. ಯಾಕೆಂದರೆ, ಮಾತಿನಿಂದ ಅಭಿನಯ ಮುಟ್ಟುವ ತಾರಕ ಹಾಗೂ ಸ್ಟೇಜ್ ಪ್ರಾಪರ್ಟಿವರೆಗೂ ರಂಗಭೂಮಿ ಜೀವನ ಕಾಳಜಿ, ಸಮಯ ಪ್ರಜ್ಞೆ, ಭಾಷಾ ಶಿಸ್ತುಗಳನ್ನು ಕಲಿಸುತ್ತದೆ. ಬದುಕಿನಲ್ಲಿ ನಾಟಕಮಾಡುವ ನಾವು, ನಾಟಕದಲ್ಲಿ ಒಮ್ಮೆಯಾದರೂ ಒಂದು ಪಾತ್ರದಲ್ಲಿ ಬದುಕು ತುಂಬಬೇಕು.” ಎಂದು ಹೀಗೆ ಏನೆಲ್ಲ.
ದಿನ ಏಕಕಾಲಕ್ಕೆ ಒಂದೇ ಕಲಾಗ್ರಾಮದಲ್ಲಿ ಮೂರು ಕಡೆ ನಾಟಕಗಳು! ಬಸವಲಿಂಗಯ್ಯನವರ ನಿರ್ದೇಶನದಮಲೆಗಳಲ್ಲಿ ಮದುಮಗಳು”, 200 ರೂಪಾಯಿ ಟಿಕೇಟ್, ಆಲ್ ಸೋಲ್ಡ್ ಔಟ್, ಆಲ್ಲೈನ್ ಮೂಲಕ ಬುಕಿಂಗ್! ಅಂದು ಹೊರಬಂದು ರಂಗಕರ್ಮಿಗಳೊಂದಿಗೆ ಟೀ ಕುಡಿಯುತ್ತ ವೇಹಿಕಲ್ ಪಾರ್ಕಿಂಗ್ ಕಡೆಗೆ ನೋಡಿದರೆ ಎಂಥ ಖುಷಿ ಅಂತೀರಾ, ಇಡೀ ಬೆಂಗಳೂರೇ ಇದೆ!

      ರಂಗಭೂಮಿ ಒಂದು ಮಹಾ ಐನಾತಿ ಹೆಂಗಸು. ಯಾವಾಗ? ಎಲ್ಲಿ? ಯಾರಿಂದ? ಇವಳ ಹಂಗಾಮು ಶೂರುವಾಗುತ್ತದೆಯೊ ಹೇಳಲು ಸಾಧ್ಯವೇ ಇಲ್ಲ.

ದಿನ ಕಣ್ಣೀರಾಗಿ ಮಾತಾಡಿದವರು ಕಮನೀಧರನ್. ಶ್ರೇಷ್ಠ ಹಿರಿ-ಕಿರಿ-ತೆರೆಯ ಕಲಾವಿದೆ. ಬಿಇಎಲ್ ಕಾರ್ಮಿಕಳಾಗಿದ್ದಕೊಂಡು ನಾಟಕಗಳನ್ನು ಮಾಡುತ್ತ ಬಾಳಿನ ಮುಸ್ಸಂಜೆಗೆ ಬಂದು ನಿಂತವರು. ಗಂಡ ತೀರಿದ್ದಾನೆ, ಇದ್ದ ಒಬ್ಬ ಮಗನೂ ತೀರಿಹೋಗಿದ್ದಾನೆ. ಕೇವಲ ನೆನಪುಗಳು ಮಾತ್ರ ಅವರಿಗುಳಿದ ಸಂಗಾತಿಗಳು. ಅವರ ಕೋರಿಕೆ ಒಂದೇ ಮಾಧ್ಯಮದ ಎಲ್ಲ ಆಯಾಮಗಳೂ ವಿಫಲವಾದಾಗ ಮತ್ತ ಮತ್ತೆ ಸಮಾಜವನ್ನು ಕಟ್ಟಿಕೊಟ್ಟದ್ದು ರಂಗಭೂಮಿ. ಅದು ಸಮೃದ್ಧವಾಗಿರಬೇಕು.
ಬೆಂಗಳೂರಿನ ಹೊರ ವಲಯದಲ್ಲಿ, ವಿಶ್ವವಿದ್ಯಾಲಯಕ್ಕೆ ಹತ್ತಿಕೊಂಡು ಏಕಕಾಲಕ್ಕೆ ಹತ್ತಾರು ರಂಗ ಪ್ರಯೋಗಗಳು ನಡೆಯುವಂತೆ ರಂಗಕ್ಕಾಗಿಯೇ ಸೀಮಿತವಾಗಿ ಕಲಾಗ್ರಾಮ ಸ್ಥಾಪಿಸಿದ ಸರ್ಕಾರದ ಹೆಜ್ಜೆ ಸ್ವಾಗತನೀಯ. ಆದರೆ ಈಗ ಅಲ್ಲೊಂದು ಭಯ ಶುರುವಾಗಿದೆ. ಹಿಂದಿನ ರಾಷ್ಟ್ರಕವಿ ಜಿ.ಎಸ್.ಎಸ್ ಸಮಾಧಿಯನ್ನು ಇಲ್ಲಿಯೇ ಮಾಡಲಾಗಿದೆ. ಆದರೆ, ಇದು ಹೀಗೆಯೇ ಮುಂದೊರೆದು ಇದು ರಾಷ್ಟ್ರಕವಿಗಳ ರುದ್ರಭೂಮಿಯಾದರೆ ಕಷ್ಟ.
ಅಂತಿಮವಾಗಿ ಒಂದು ಮಾತು. ಸಿನಿಮಾ ಒಂದು ಸ್ಥಿರ ಬದುಕು. ರಂಗಭೂಮಿ ಜಂಗಮ. ಒಂದೇ ನಾಟಕವನ್ನು ನೂರು ಸರಿ ಆಡಿದರೂ, ನೋಡಿದರೂ ಅದರ ಅರ್ಥ ಪ್ರತಿಸಾರಿಯೂ ಬದಲಾಗುತ್ತಿರುತ್ತದೆ. ಅದು ನಿರಂತರ. ಅಂದಹಾಗೆ, ಬದುಕಿನಷ್ಟೇ ರಂಗಭೂಮಿ ಯಾವಾಗಲೂ ನಿರಂತರ.

No comments:

Post a Comment