ನನ್ನ ಸಾಕಿಯಲೊಬ್ಬಳು ಕಲ್ಪನಾ. ಇವಳ ಕುರಿತು “ಅಳಿಯದ ತಾರೆಯ ಅಳುವಿನ ಹಾಡು” ಎಂದು ಬರೆಯುವಾಗ ಅವಳು ಕೊನೆಯುಸಿರೆಳೆದ ಗೋಟೂರು ಬಂಗಲೆಯನ್ನು ಕುರಿತು ಬರೆದಿದ್ದೆ. “ಬೆಳಗಾವಿ ನನ್ನ ಜಿಲ್ಲೆ. ಇದೇ ಜಿಲ್ಲೆಯ ಒಂದು ಪುಟ್ಟ ಹಳ್ಳಿಯಲ್ಲಿ(ತೆಲಸಂಗ) ನಾನು ಹುಟ್ಟಿದೆ. ಈಗಲೂ ಬೆಳಗಾವಿ ಬಳಸಿಕೊಂಡು ಧಾರವಾಡದಿಂದ ಈ ನನ್ನ ಹುಟ್ಟೂರಿಗೆ ಹೋಗಬೇಕಾದರೆ ಗೋಟೂರು ಪ್ರವಾಸಿ ಮಂದಿರದ ಮುಂದಿನಿಂದಲೇ ಹಾಯ್ದು ಹೋಗಬೇಕು. ಬೆಳಗಾವಿಯಲ್ಲಿ ನನ್ನ ಅಜ್ಜ, ಅಜ್ಜಿ ತಿರಿದಾಗಲೂ ಅವರ ಶವಗಳು ಈ ಬಂಗ್ಲೆಯನ್ನ ಬಳಸಿಕೊಂಡೇ ಊರಿಗೆ ಹೋದವು.
ಇದೊಂದು ರೀತಿ ಅನಿವಾರ್ಯದ ದಾರಿ. ಹುಟ್ಟು ಸಾವಿನ ಮಧ್ಯದ ಬದುಕು ಎಂಬ ಬಡಿದಾಟ ಅನಿವಾರ್ಯದಂತೆ. ಅದರತ್ತ, ಆಚೆ ಹೋಗುವಾಗ ಕಲ್ಪನಾ ನಮ್ಮ ಬೆನ್ನಟ್ಟಿಯೇ ಬಿಡುತ್ತಾಳೆ. ಯಾಕೆಂದರೆ ಕೈಯಲ್ಲಿರುವ ವಜ್ರದುಂಗುರವನ್ನ ಪುಡಿ ಮಾಡಿ ಕುಡಿದು ಆಕೆಯ ಬದುಕಿಗೆ ವಿದಾಯ ಹೇಳಿದ್ದು ಇದೇ ಗೋಟೂರು ಪ್ರವಾಸಿ ಮಂದಿರದಲ್ಲಿ. ಈ ದೇಶದ ಸಾವಿರ ಸಾವಿರ ಹುಟ್ಟಿ, ನಶಿಸುವ ಬಂಗಲೆಗಳಂತೆ ಈ ಗೋಟೂರು ಬಂಗಲೆಯ ಕತೆಯಾಗಲಿಲ್ಲ ಎನ್ನುವುದು ಅದರ ಹೆಗ್ಗಳಿಕೆ ಅಲ್ಲ ದುರಂತ. ಕಲ್ಪನಾ ಎಂಬ ವಿಚಿತ್ರ ನಟಿಯ ಸಾವು ಹೊತ್ತ ಗೋಟೂರು ಬಂಗಲೆ ಒಂದು ಸಚಿತ್ರ. ಅದೇನೇ ಇರಲಿ ಈ ನೆನಪು ಬೆನ್ನಟ್ಟುವ ಪರಿ ನನಗೆ ಚಂಪಾ ಅವರ ಒಂದು ಪದ್ಯವನ್ನ ಮೆಲುಕು ಹಾಕುವಂತೆ ಮಾಡುತ್ತದೆ –
ಸತ್ತವರು ಎಲ್ಲಿ ಹೋಗುತ್ತಾರೆ?
ಇದ್ದವರ ನೆನಪಿನ ಗುದ್ದಿನಲ್ಲಿ. . . .
ಮೇ 11, 1979 ರಂದು ಕಲ್ಪನಾ ಇಲ್ಲಿ ಆತ್ಮಹತ್ತ್ಯೆ ಮಾಡಿಕೊಳ್ಳುತ್ತಾಳೆ. 12 ರ ಮುಂಜಾನೆ ಪತ್ರಿಕೆಗಳಲ್ಲಿ ‘ಮಿನುಗುತಾರೆ ಮರೆಯಾದಳು’ ಎಂದು ಸುದ್ದಿಯಾಗುತ್ತಾಳೆ. ಸಾವಿನ ಲೆಕ್ಕಾಚಾರದಲ್ಲಿ ಪ್ರಪಂಚದ ಕೋಟಿ ಕೋಟಿ ಹೆಣಗಳಲ್ಲಿ ನಮ್ಮ ಮಿನುಗುತಾರೆಯೂ ಅಂದಿನ ಆ ದಿನದ ಲೆಕ್ಕಕ್ಕೆ ಒಬ್ಬಳು. ಆದರೆ, ಮನುಷ್ಯ ಬರೀ ಹೆಣವಲ್ಲವಲ್ಲ. ಆತನ ಅಸ್ಥಿತ್ವಕ್ಕೆ ಒಂದು ದೊಡ್ಡ ಅರ್ಥ ಇದೆ ಎನ್ನುವುದಾದರೆ ಅದು ಸಾಧ್ಯವಾಗುವುದು ಮಾತ್ರ ನೆನಪುಗಳಿಂದ. ಕಲ್ಪನಾ ಅಂಥ ಒಂದು ನೆನಪು ನನಗೆ. ಅವಳೊಂದು ನನ್ನ ಬಾಲ್ಯದ ಕವಿತೆ. ಎಲ್ಲ ಮರೆತೂ ಮರೆಯಲಾಗದ ನನ್ನ ಬಾಲ್ಯದ ಕಥೆ. 1979 ರಲ್ಲಿ ನಾನು ಮೂರನೆಯ ಇಯತ್ತೆಯಲ್ಲಿ ಓದುವ ಹುಡುಗನಾಗಿರಬಹುದು. ನಾಲ್ಕೈದು ಗಂಟೆಗಳ ದೊಡ್ಡ ನಾಟಕಗಳನ್ನು ನೋಡುವ ಭರಪೂರ್ ವಯಸ್ಸು ನನ್ನದು. ಮನೆಯಲ್ಲಿಯೇ ನಾಟಕ ಕಂಪನಿ ಇದ್ದುದರಿಂದ ರಂಗಭೂಮಿ ನಮ್ಮ ರಕ್ತದಲ್ಲಿ ಒಂದಾಗಿ ಹೋಗಿತ್ತು. ಹಿಗಾಗಿಯೇ ಇರಬಹುದು ಅಲ್ಲಿಯ ಯಾವುದೇ ಪಾತ್ರದ ಆಗಮನ, ನಿರ್ಗಮನ ಒಂದು ಯಾಂತ್ರಿಕ ಕ್ರಿಯೆಯಾಗಲು ಸಾಧ್ಯವಿರಲಿಲ್ಲ ನಮಗೆ.”
ದಿನಾಂಕ 21 ರ ಸಾಯಂಕಾಲ ಬೆಂಗಳೂರು ಪಂಡರಪೂರ ಟ್ರೇನ್ ಹತ್ತಿ ಹೊರಟ ನನಗೆ ಬೆಳಗಾವಿಯಲ್ಲಿ ನನ್ನ ಮಗ, ತಂಗಿ, ಸೋದರ ಮಾವರನ್ನು ಕರೆದುಕೊಂಡು ಇದೇ ಬಂಗಲೆಗೆ ಬಂದು ವಿಶ್ರಮಿಸಿ ಚಿಕ್ಕೋಡಿಯಲ್ಲಿ ನಡೆಯುವ ‘ಬಸವ ಪ್ರಶಸ್ತಿ ಪ್ರಧಾನ” ಕಾರ್ಯಕ್ರಮದ ಉದ್ಘಾಟನೆಗೆ ಹೋಗಬೇಕಿತ್ತು.
ಆಯೋಜಕರು ಮೊದಲು ತಿಳಿಸಿದಂತೆ ಕೋಚರಿ ಎಂಬ ಸ್ಥಳಕ್ಕೆ ಹೋಗಿ ನಾನು ಈ ಕಾರ್ಯಕ್ರಮ ಉದ್ಘಾಟಿಸಬೇಕಿತ್ತು. ಆದರೆ ಕೊನೆಯ ಹಂತದಲ್ಲಿ ಬದಲಾವಣೆಯಾಗಿ ಚಿಕ್ಕೋಡಿಯಲ್ಲಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ನನಗೆ ಮೂರು ಆಕರ್ಷಣೆಗಳು. ಒಂದು ಹುಕ್ಕೇರಿಯ ಚಂದ್ರಶೇಖರ ಶ್ರೀಗಳು ಹಾಗೂ ಗಾರೆ ಕೆಲಸ ಮಾಡುತ್ತಿದ್ದ ಸಾಮಾನ್ಯನೊಬ್ಬ ಇಂದು ದೊಡ್ಡ ಆಧ್ಯಾತ್ಮ ಸಾಧಕರಾಗಿ ರೋಪಗೊಂಡು ಬಂಡಿಗಣಿಯಲ್ಲಿ ಒಂದು ಸಾಮ್ರಾಜ್ಯವನ್ನೇ ಸ್ಥಾಪಿಸಿರುವ ಶ್ರೀ ಧಾನಯ್ಯನವರು ಬರುತ್ತಿರುವುದು, ಜೊತೆಗೆ ನನ್ನ ಮನೆ ದೈವ ಖಿಳೇಗಾಂ ಬಸವೇಶ್ವರ ದೇವಸ್ಥಾನದ ಡೈರೆಕ್ಟರ್ ಮುರುಗೇಶ ಬಾನೆಯರಿಗೆ ಸನ್ಮಾನ ನಡೆಯುತ್ತಿರುವುದು.
ಈ ವರ್ಷಾರಂಭದ ಒಂದು ಮಾತು, “ಎಲ್ಲೆಲ್ಲಾ ಸುತ್ತಿದ ನಿನಗೆ ನಮ್ಮ ಮಾತೃ ಜಿಲ್ಲೆ ಹಾಗೂ ತಾಲ್ಲೂಕಿನಲ್ಲಿ ಮಾನ-ಸನ್ಮಾನವಾಗಬೇಕು, ನಾವೆಲ್ಲ ಅದನ್ನೂ ನೋಡಬೇಕು” ಎಂದರು ನನ್ನ ತಂದೆ. ಅವರ ಆಸೆ ಸ್ವಾಭಾವಿಕವಾದುದು. ಯಾಕೆಂದರೆ ನಮ್ಮ ಹಿರಿಯರ ಬದುಕೆಂದರೆ ಬಿಜಾಪುರ-ಬೆಳಗಾವಿಯ ಪರಿಸರ. ಇದೇ ಎರಡು ಜಿಲ್ಲೆಗಳಲ್ಲಿ ನಮ್ಮ ಪೂರ್ವಿಕರ ಮೂಟೆ ಮೂಟೆ ಮೂಳೆಗಳು ದುಡಿದು ಸಣ್ಣಾಗಿ ಮಣ್ಣು ಸೇರಿವೆ. ಜಗದುದ್ದಕ್ಕೂ ನಾವೇನೇ ಸಾಧಿಸಿದರೂ ಅದು ನನ್ನವರ ಕಣ್ಣು ಕಿವಿ ತುಂಬದ ಹೊರತು ಈ ದೇಹಕ್ಕೆ ಪುಣ್ಯದ ಗಾಳಿ ತಟ್ಟುವುದಿಲ್ಲ. ನನ್ನ ತಂದೆಗೆ ಹೇಳಿದೆ, “ಆಯ್ತು ಬಿಡಿ, ಈಗ ನೀವಂದುಕೊಂಡಿದ್ದೀರಿ ಎಂದಾಗ ಇಷ್ಟರಲ್ಲಿಯೇ ಆ ಮಾನ-ಸನ್ಮಾನಗಳು ದಕ್ಕುತ್ತವೆ.” ಕೊನೆಗೂ ಅವರಂದುಕೊಂಡಂತೆಯೇ ಆಯಿತು.
ಚಿಕ್ಕೊಡಿಯಲ್ಲಿ ಸಮಾರಂಭವನ್ನು ಉದ್ಘಾಟಿಸಿ, ಬಸವ ಪ್ರಶಸ್ತಿಯನ್ನೂ ಸ್ವೀಕರಿಸಿದೆ. ಆದರೆ, ಇದೇ ವೇದಿಕೆ ಮೇಲಿನ ನನ್ನ ಭಾಷಣದಿಂದಾಗಿ ಆನಂತರ ಮೂರು ಸನ್ಮಾನಗಳು ನನ್ನದಾಗುತ್ತವೆಂದುಕೊಂಡವನಲ್ಲ. ದಿನಾಂಕ 22 ರಂದು ಪ್ರಶಸ್ತಿ ಸ್ವೀಕರಿಸುತ್ತ ನಾನು ಹೇಳಿದೆ, “ಇದು ಪುರುಷ ಪ್ರಧಾನ ದೇಶವೆನ್ನುವುದು ತಪ್ಪು ವಾಕ್ಯ. ಹಾಗೆ ನೋಡಿದರೆ ಇಲ್ಲಿ ಪುರುಷರೇ ಇಲ್ಲ. ಯಾಕೆಂದರೆ, ಪ್ರತಿಯೊಬ್ಬ ಭಾರತಿಯನೂ ಅಂತಿಮವಾಗಿ ತಾಯಿಯಾಗಿ ರೂಪಾಂತರಗೊಳ್ಳುತ್ತಾನೆ. ಇಲ್ಲಿಯ ಎಲ್ಲ ತಂದೆಗಳೂ, ಗುರುಗಳೂ, ದೇವರು-ದೈವಗಳೂ ಕೊನೆಗೆ ತಾಯ್ತನದ ಕಾರುಣ್ಯವನ್ನು ರೂಢಿಸಿಕೊಳ್ಳುತ್ತಾರೆ. ಹೀಗಾಗಿಯೇ ‘ಗುರುತಾಯಿ’ ಎಂಬ ಪದ ಈ ನಾಡಿನಲ್ಲಿದೆ. ಇಲ್ಲಿಯ ಎಲ್ಲ ಹೆಣ್ಣುಗಳೂ ಅಂತಿಮವಾಗಿ ತಮ್ಮ ಗಂಡ ಮತ್ತು ತಂದೆಯಲ್ಲಿ ಹಂಬಲಿಸುವುದು ಕೇವಲ ಓರ್ವ ತಾಯಿಗಾಗಿ.” ಎಂದೆ.
ಮುಂದುವರೆಸಿ, ನನ್ನ ವಾದವನ್ನು ಸಮರ್ಥಿಸಿ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯರು ನಮ್ಮ ಶರಣರ ‘ಶರಣ ಸತಿ, ಲಿಂಗ ಪತಿ” ಹೇಳಿಕೆಯನ್ನು ವಿಸ್ತರಿಸಿದರು.
ಈ ನನ್ನ ಭಾಷಣ ನನ್ನೊಳಗಿನ ಧ್ವನಿಯಾಗಿತ್ತು. ಗಂಡು ಹೆಣ್ಣಾಗುವ, ಹಣ್ಣಾಗುವ, ಅರಿವಿನ ಕಣ್ಣಾಗುವ ಪ್ರಕ್ರಿಯೆ ಇಲ್ಲಿ ನಿಸರ್ಗದಲ್ಲಿ ನಿತ್ಯವೂ ನಮ್ಮ ಸುತ್ತ ನಡೆದಿದೆ. ನನ್ನ ತಂದೆ ಸದಾ ನನಗೆ ನೆನಪಾಗುವುದು ಓರ್ವ ತಾಯಿಯಾಗಿಯೇ. ಅಂತೆಯೇ ನನ್ನ ಗುರು ಬಳಗವೂ. ನನ್ನ ಭಾಷಣ ತನ್ನ ಗುರಿಮುಟ್ಟಿತು, ನನಗೆ ದೈವದ ಬಾಗಿಲು ತೆರೆಯಿತು.
ನನ್ನೊಂದಿಗೆ ವೇದಿಕೆಯ ಮೇಲಿದ್ದ ಖಿಳೇಗಾಂ ದೇವಸ್ಥಾನದ ಶ್ರೀಯುತ ಬಾನಿ ಆನಂತರ ನನ್ನನ್ನು ಬಿಡಲೇ ಇಲ್ಲ. ‘ಇಂದು ನಮ್ಮೊಂದಿಗೆ ಬಂದು ನಮ್ಮ ಟ್ರಸ್ಟ್ ಉದ್ದೇಶಿಸಿ ಮಾತನಾಡಿ, ದೈವ ಸನ್ನಿಧಿಯಲ್ಲಿ ಸನ್ಮಾನ ಸ್ವಿ9ಪೀಕರಿಸಿ ಹೋಗಬೇಕೆಂದು’ ದುಂಬಾಲು. ಮನಸ್ಸು ಮಲ್ಲಿಗೆಯಾಯಿತು. ಕೆಲವು ವರ್ಷಗಳ ಹಿಂದೆ ಇದೇ ದೇವಸ್ಥಾನಕ್ಕೆ ಸಾವಿನಂಚಿನಲ್ಲಿದ್ದ ನನ್ನಜ್ಜಿಯನ್ನು ಹೊತ್ತು ತಂದು ದರ್ಶನ ಮಾಡಿಸಿದ್ದೆ. “ನಾನಿನ್ನು ನಿನ್ನ ದೇಗುಲಕೆ ಬಾಗಿ ಬರಲಾರೆ ಬೀಗುವ ಸಂಭ್ರಮ ನಮಗೂ ಕೊಡುದೇವ” ಎಂದು ಹಠ ತೊಟ್ಟಿದ್ದೆ. ಈಗ ಅದು ಮಗನ ಸಾಕ್ಷಿಯಾಗಿ ನೆರವೇರುವ ಘಳಿಗೆ.
ಖಿಳೇಗಾಂದಲ್ಲಿ ಎಲ್ಲ ಮಾನ-ಸನ್ಮಾನಗಳು ಸಾಂಗವಾಗಿ ಜರುಗಿತು. ಆದರೆ ನನಗೆ ಖುಷಿ ಕೊಟ್ಟ ಇದರ ಪಕ್ಕದ ಹಳೆ ಐನಾಪುರ, ಇಲ್ಲಿಯ ಪೇಡಾ ಜಗತ್ಪ್ರಸಿದ್ಧ. ಅವುಗಳ ಎರಡು ಬಾಕ್ಸ್ ನೀಡಿ ಐತಿಹ್ಯ ವಿವರಿಸಿದಾಗ ಕಣ್ಮುಂದೆ ಕಾಮದೇನುಗಳ ದಂಡು. ಇಷ್ಟರಲ್ಲಿ ನಾನು ಅಥಣಿಗೆ ಹೋಗಿ ಎರಡು ಪುಣ್ಯ ಕ್ಷೇತ್ರಗಳ ದರ್ಶನ ಪಡೆಯುವ ತಯ್ಯಾರಿಯನ್ನು ಗೆಳೆಯ ಬಾನಿ ಸದ್ದಿಲ್ಲದೇ ಮುಗಿಸಿದ್ದರು.
ಮೊದಲನೆಯದು ಮುರುಗ ಸಂಪ್ರದಾಯದ ಮೂಲ ಪುರುಷ ಅಥಣಿ ಶಿವಯೋಗಿಗಳ ಗಚ್ಚಿನ ಮಠದಲ್ಲಿ ಕರ್ತೃಗದ್ದುಗೆಯ ದರ್ಶನ. ನಾನಿಲ್ಲಿಗೆ ಹೋಗಬೇಕೆನ್ನುವುದು ಅತ್ಯಂತ ಹಳೆಯ ಹಂಬಲ. ಪ್ರಗತಿಶೀಲರೂ, ಮುಂದೊರೆದವರು ಎನ್ನುವ ಒಣ ಧಿಮಾಕಿನಲ್ಲಿ ಮಠ-ಮಜಾ-ಮಂದಿರಗಳನ್ನು ಹಳಿಯುವ ಹೊಲಸು ಬೆಳವಣಿಗೆ ನಮ್ಮ ಅಹಂಗೆ ಕನ್ನಡಿಯಾಗಬಹುದೇ ವಿನಃ ಮಾಗಿವಿಕೆಗಲ್ಲ. ಗಚ್ಚಿನ ಮಠದಲ್ಲೂ ಪೂಜೆ, ಆಶಿರ್ವಾದಗಳ ಸುರಿಮಳೆ. ಅಂದಹಾಗೆ ನಮ್ಮ ಶಿವಯೋಗಿಗಳ ಬದುಕು ನೀವು ಇಷ್ಟರಲ್ಲಿಯೇ ಬೆಳ್ಳೆ ಪರದೆಯ ಮೇಲೆ ನೋಡಲಿದ್ದೀರಿ.
ಎರಡನೆಯದು ಮೋಟಗಿ ಮಠದಲ್ಲಿ ಚನ್ನಬಸವ ಸ್ವಾಮಿಜಿಯವರ ಭೇಟಿ. ಶಬ್ಧ ಸಂಸ್ಕøತಿಯ ಮಹತ್ವದ ಸ್ವಾಮಿಗಳಾದ ಚನ್ನಬಸವನವರು ಅಥಣಿಶ ಎನ್ನುವ ಕಾವ್ಯನಾಮದಿಂದ ಅದ್ಭುತವಾಗಿ ಸಾಹಿತ್ಯವನ್ನು ರಚಿಸಿದವರು. ಸನಾತನತೆಯಲ್ಲಿ ಬೇರನ್ನು ಬಿಟ್ಟುಕೊಂಡು ತಮ್ಮ ಚಿಂತನೆಯ ಮೂಲಕ ಆಧುನಿಕತೆಯ ಫಲಗಳನ್ನು ನೀಡಿದವರು. ಸಂಭ್ರಮದ ಮನುಷ್ಯ. ಇಂದು ನನಗೆ ತವರು ಸನ್ಮಾನ ನೀಡಿದರಲ್ಲಿ ಅವರೇ ಮೊದಲಿಗರು.
ಎಲ್ಲ ಹೇಳಿದ ನಾನು ನಿಮಗೆ ನನ್ನೊಂದಿಗೆ ಸಾಯಿಬಾಬಾರ ವೇಷದಲ್ಲಿರುವ ಚಿನ್ಮಯ ಶಿವಂರವರ ಬಗ್ಗೆ ಏನೂ ಹೇಳಲೇ ಇಲ್ಲ. ಇವರೀಗ ಅಥಣಿಯ ಗವಿಮಠ ವಾಸಿ. ಆದಿಲ್ಶಾಹಿಗಳ ಕಾಲದಲ್ಲಿ ಕಟ್ಟಲ್ಪಟ್ಟ ಈ ಗುಹೆ ಮುರುಗ ಶಿವಯೋಗಿಗಳ ಸಾಧನಾ ಸ್ಥಳವಾಗಿತ್ತು. ಆನಂತರ ಇನ್ನೊಬ್ಬ ಶರ್ಮಾ ಎಂಬ ಸಂತ ಇಲ್ಲಿಯೇ ಸಾಧನೆ ಮಾಡಿ ಹಿಮಾಲಯದತ್ತ ಹೋದವರು ಮರಳಿ ಬರಲೇ ಇಲ್ಲ. ಚಿನ್ಮಯರ ಈ ಮಠಕ್ಕೆ ಆಸ್ತಿ ಇಲ್ಲ. ಒಂದೆ ಊಟ, ಭಾರತವನ್ನು ಅದೆಷ್ಟೋ ಬಾರಿ ಬರಿಗಾಲಿನಿಂದ ಸುತ್ತಿದ್ದಾರೆ. ನೀವು ನೀಡಿದರೆ ಊಟ, ಇಲ್ಲದಿದ್ದರೆ ಉಪವಾಸ, ಕಾಸಿದ್ದಷ್ಟೆ ಪ್ರವಾಸ.
ಇಷ್ಟರಲ್ಲಿಯೇ ಗುಡ್ಡಾಪುರದ ಶ್ರೀ ಸಂತೋಷ ಪೂಜಾರಿಯವರ ಕರೆ. ‘ಇಂದು ರಾತ್ರಿ ದಾನಮ್ಮದೇವಿಯ ಛತ್ರದಲ್ಲಿ ವಾಸಿಸಿ ನಸುಕಿನ ನಾಲ್ಕು ಗಂಟೆಯ ಪೂಜೆ ಮುಗಿಸಿಕೊಂಡು ನೀವು ಮುಂದೆ ಹೋಗುತ್ತೀರಿ’ ಎಂದಾಗ ನನಗೆ ರೋಮಾಂಚನ. ಜೊತೆಗೆ ಸ್ವಲ್ಪ ಬೇಸರ. ಕಾರಣ ಈ ಗೌರವ ಸ್ವೀಕರಿಸಲು ಈ ಪ್ರವಾಸದಲ್ಲಿ ನನ್ನೊಂದಿಗೆ ನನ್ನೊಡತಿ ಪದ್ದಿ ಇರಲಿಲ್ಲವಲ್ಲ? ಅವಳು ಈ ಮಹಾತಾಯಿಯ ಮಹಾನ್ ಭಕ್ತೆ. ಈಕೆಗೆ ಹರಕೆ ಹೊತ್ತು ಆಕೆ ಸೋತ ಉದಾಹರಣೆಗಳೆ ಇಲ್ಲ. ಹೆಣ್ಣು ಹೆಣ್ಣಾದವಳು ಸೋಲಲೂ ಬಾರದಲ್ಲ?
ಇಲ್ಲಿಂದ ನೇರ ಜೋಳಿಗೆಗೆ. ಜಂ ಎಂದು ಒಂದು ನೆಮ್ಮದಿಯ ನಿದ್ರೆ ತೆಗೆದು, ಬಳಗ ಸೇರಿಸಿಕೊಂಡು ಹೊಟ್ಟೆ ತುಂಬ ಉಂಡು, ಮಾತಾಡಿ, ಮತ್ತೆ ಬಂದದ್ದು ಬಿಜಾಪುರದ ನನ್ನ ಗುರುಗಳ ಮನೆಗೇ. ಇದು ನನ್ನ ಗುರುತಾಯಿ. ಹೆಸರು ಡಾ. ಆರ್.ಕೆ ಕುಲಕರ್ಣಿ. ನರದೌರ್ಬಲ್ಯದಿಂದ ದಶಕಗಳಿಂದ ನರಳುತ್ತಿರುವ ಹೆಂಡತಿಯನ್ನು ಜೊತೆಗಿರಿಸಿಕೊಂಡೇ ಮೇರು ಸಾಧನೆ ಮಾಡಿದವರು. ನಿವೃತ್ತಿಯಾದ ನಂತರ ಜೆ.ಬಿ, ಪ್ರೀಸ್ಟ್ಲೆ ಎಂಥ ಕಠಿಣ ಕವಿಯನ್ನಿಟ್ಟುಕೊಂಡು ಅವನ ಕಾವ್ಯದೊಳಗಿನ ಕಾಲ ಮೀಮಾಂಸೆ ಮಾಡಿದವರು. ಇಂದು ನನಗಾಗಿ ಹಿತ್ತಲದೊಳಗಿನ ತಮ್ಮ ಮಾವಿನ ಹಣ್ಣುಗಳನ್ನು ಇಟ್ಟುಕೊಂಡು ಕಾಯುತ್ತಿದ್ದರು. ಜ್ಞಾನ ಕೊಟ್ಟ ಗುರು, ಅನ್ನ ಕೊಡುವುದೆಂದರೆ ಇದುವೆ. ಉಣಿಸಲು ಹಂಬಲಿಸುವುದೆಂದರೆ ಇದುವೆ. ಹರಸಲು ಕಾತರಿಸುವುದೆಂದರೆ ಇದುವೆ. ಈ ಕಾರುಣ್ಯದಲ್ಲಿ ನಾನು ಕವಿಯಾಗಿದ್ದೇನೆ. ಈ ಭಾಗ್ಯ ನಿಮ್ಮದೂ ಯಾಕಾಗಬಾರದು?