Total Pageviews

Thursday, May 7, 2015

ಹದ ತಿಳಿದ ಮೇಲೆ ಮದವಿರುವುದಿಲ್ಲ





ಸಣ್ಣ ಸವಡು ಮಾಡಿಕೊಂಡು, ಸುಮ್ಮನೆ ಕುಳಿತುಕೊಂಡು ಆಫೀಸಿನಲ್ಲಿಯೇ ನನ್ನ ಎದಿರು ಫೋಟೊದಲ್ಲಿ ಸುಮ್ಮನೆ ಕುಳಿತುಕೊಂಡ ಸಿದ್ಧಾರ್ಥನ ಭಾವಚಿತ್ರ ನೋಡುತ್ತಿದ್ದೆ. ಅಂದಹಾಗೆ ‘ಸವಡು’ ಎಷ್ಟೊಂದು ಸುಂದರ ಪದವಲ್ಲವೆ? ಈಗಲೂ ಅಥಣಿಯನ್ನು ಸವರಿಕೊಂಡು, ಕೃಷ್ಣಾ ನದಿಯ ಸೌದಿ, ಸತ್ತಿ, ಬನಹಟ್ಟಿಯ ಎರಿಯ ಮೇಲೆ ಹಾಯ್ದು, ಬಿಜ್ಜರಗಿ -ಬಾಬಾನಗರಗಳ ಮೂಲಕ ನನ್ನೂರಿಗೆ ಬಂದರೆ ಅಲ್ಲಿ-ಇಲ್ಲಿ ಈ ಪದ ಕಿವಿಗೆ ಬಿಳುತ್ತದೆ. ‘ಈಗ ಸೌಡ ಆಯ್ತಾ?’, ‘ಸೂಟಿ ಬಿಟ್ಟಮ್ಯಾಲ ಸೌಡಿ ಮಾಡಕೊಂಡು ಮೊಮ್ಮಕ್ಕಳನ್ನು ಕರೆದುಕೊಂಡು ಊರಿಗೆ ಬರತಕ್ಕದ್ದು’ ಹೀಗೆ ಈ ಸವಡು ಎನ್ನುವ ಶಬ್ಧ ಸುಳಿಗಾಳಿಯಂತೆ ನನ್ನ ಶಬ್ಧಲೋಕದಲ್ಲಿ ಆಗಾಗ ಕಾಡುತ್ತಿರುತ್ತದೆ. ಆವತ್ತು ಸವಡು ಮಾಡಿಕೊಂಡು ಸಿದ್ಧಾರ್ಥನ ಭಾವಚಿತ್ರವನ್ನು ನೋಡುತ್ತಿದ್ದೆ. ತಲೆಯಲ್ಲಿ ಪದ್ಯ ಒಂದು ಸುತ್ತುತ್ತಿತ್ತು –


ನಿನ್ನನ್ನು ನನ್ನ ದೇವರೆಂದು ಬಲ್ಲೆ
ಆದರೂ ದೂರ ನಿಲ್ಲುತ್ತೇನೆ
ನೀನು ನನ್ನವನೇ ಎಂದು ಬಲ್ಲೆ
ಹತ್ತಿರ ಬರುವುದಿಲ್ಲ
ನೀ ನನ್ನ ತಾಯಿಯೇ ಎಂದು ಬಲ್ಲೆ
ನಿನ್ನ ಪಾದಗಳಿಗೆ ನಮಿಸುತ್ತೇನೆ
ಆದರೆ ಇನ್ನೆಂದೂ ನಿನ್ನ ಕೈಗಳನ್ನು ಹಿಡಿಯುವುದಿಲ್ಲ
ನನ್ನ ಒಲವೆಂದು ಮತ್ತೆ ಕಣ್ಣೀರಾಗುವುದಿಲ್ಲ


ಇದು ಹೀಗೆ ಸುಳಿದಾಡುತ್ತಿದ್ದರೆ ಮನುಷ್ಯನ ಸೌಂದರ್ಯವೆನು? ಎನ್ನುವ ಪ್ರಶ್ನೆ ತುಂಬಿಕೊಂಡ ಮೋಡದಂತೆ ಈ ಗಾಳಿಯಲ್ಲಿ ಓಲಾಡುತ್ತಿತ್ತು. ಮನುಷ್ಯನ ಸೌಂದರ್ಯವೇ ಆತನ ಸಮತೋಲನೆಯ ಆಲೋಚನೆಗಳು, ಸಮದರ್ಶನ. ಬಹುತೇಕ ಸಿದ್ಧಾರ್ಥ ಅಲಿಯಾಸ್ ಬುದ್ಧ ಇದನ್ನೇ ಸಮ್ಯಕ್ ಮಾರ್ಗ ಎಂದನೆ? ಮನ್ಸೂರ್ ಅಲ್, ಬುಲ್ಲೆಷಾ ಸರ್ಕಾರ, ಓಶೋ, ಬುದ್ಧ ಮತ್ತು ಆರ್ಮಪಾಲಿ ಅಂಥ ಚಲುವಿನ ವ್ಯಕ್ತಿತ್ವ ಎಂದು ನನಗನ್ನಿಸಿವೆ. ಹದಾ ತಿಳಿದ ಮೇಲೆ ಮದವೇರಿಸಿಕೊಳ್ಳದೆ ಮನುಷ್ಯರಾಗಲು ಹೊರಟವರಿವರು. ಮದದ ಮತ್ತಿನಲ್ಲಿಯೇ ಮುಪ್ಪಿಗೆ ಜಾರುತ್ತಿರುವವರು ನಾವು. ಸಾವು ಹೊತ್ತುಕೊಂಡು ಸ್ವಯಂ ಹೊರೆಯಾದವರು ನಾವು. ಅವರು ಹಾಗಲ್ಲ. ಮದದ ಮುನ್ಸೂಚನೆ ಸಿಗುತ್ತಲೇ ಶೋಧದ ಮಹಾ ಸೌಂದರ್ಯಕ್ಕೆ ಸಮರ್ಪಿಸಿಕೊಂಡವರು.
 ಬೌದ್ಧಪೂರ್ಣಿಮೆಯ ದಿನ ನನ್ನ ಕುಟುಂಬಕ್ಕೊಂದು ಸಂಭ್ರಮದ ಕ್ಷಣ. ಹೆಂಗಸರ ಮಹಾ ಲೋಕದಲ್ಲಿದ್ದ ನನಗೆ ಹೆರ್ಮನ್ ಹೆಸ್‍ನ ಸಿದ್ಧಾರ್ಥ ಅದೇನು ಮೋಡಿ ಮಾಡಿತೋ ಅಂದು ತಾಗಿಕೊಂಡಿದ್ದು ಇಂದಿಗೂ ಉಳಿದುಕೊಂಡೇ ಬಿಟ್ಟಿತು. ಚೊಚ್ಚಲು ಕೂಸು ಸಿದ್ಧಾರ್ಥನಾಗಿ, ಎರಡನೆಯ ಮಗು ಬೌದ್ಧಪೂರ್ಣಿಮೆಯ ದಿನವೇ ಹುಟ್ಟಿ, ಈಗ ಬೆಂಗಳೂರೆಂಬ ಬಾಝಾರಿನಲ್ಲಿ ಬುದ್ಧನ ಕನವರಿಕೆ, ಕನಸು ಮತ್ತು ಕೈ ಆಸರೆಗಾಗಿ ಕಾಡುವಂತೆ ಮಾಡಿತು. ಈ ಪುಸ್ತಕ ಕಾಡಿದಂತೆ ನನ್ನನ್ನು ಯಾವ ಮದನಾರಿಯೂ ಕಾಡಲಿಲ್ಲವಲ್ಲ?


ಸಾಯಂಕಾಲ 4.30 ಗಂಟೆಗೆ ಮೌರ್ಯ ಹೋಟೆಲಿನಿಂದ ಫೋನ್. ‘ರಾಗಂ ಇನ್ನು ಅರ್ಧ ಗಂಟೆಯಲ್ಲಿ ನಾನು ಗಾಂಧಿನಗರದ ಹೋಟೆಲ್ ಕನಿಷ್ಕಾಕ್ಕೆ ಬರುತ್ತೇನೆ, ನೀವೂ ಬರಬಹುದೆ?’ ಆಚೆ ಮಾತನಾಡುತ್ತಿರುವವರು ಕವಿ ಸಿದ್ಧಲಿಂಗಯ್ಯ. ಈ ಹಿಂದೆ ಎರಡು ಬಾರಿ ಅವರು ನಿರೀಕ್ಷಿಸಿದಂತೆ ಒದಗಿಸಿಕೊಳ್ಳಲಾಗದೇ ಕೊಸರಿಕೊಂಡ ನಾನು ಈಗ ಇಲ್ಲ ಎನ್ನಲಾಗಲಿಲ್ಲ. ಮಿಗಿಲಾಗಿ ಸಿದ್ಧಲಿಂಗಯ್ಯ ಎಂದರೆ ನನ್ನ ಪಾಲಿಗೆ ಮತ್ತೇನೂ ಅಲ್ಲ ಪುಸ್ತಕ, ಪುಸ್ತಕ ಮತ್ತೂ ಪುಸ್ತಕ. ಇವರ ಮನೆಯಿಂದ ನಾನು ಕದ್ದು ತಂದ ಪ್ರೀತಿಯ ಒಂದೇ ವಸ್ತು, ಬಾಲ ಬುದ್ಧ, ಭಿಕ್ಷಾಪಾತ್ರೆಗಳನ್ನ ಮುಂದಿಟ್ಟುಕೊಂಡು, ಮೊಳಕಾಲು ಮೇಲೆ ನಿದ್ರಿಸುವ ಆ ಸುಖ. ನನ್ನ ಪಾಲಿಗೆ ಸಿದ್ಧಲಿಂಗಯ್ಯ ಎಂದರೆ ಒಂದು ಹಣ್ಣು ಹಣ್ಣಾದ ತಾಯಿ.
ಕನಿಷ್ಕಾದಲ್ಲಿಯ ಅರ್ಧ ಗಂಟೆಯ ನಮ್ಮ ಮಾತು-ಕತೆಗಳ ನಂತರ ಅವರು ನಮ್ಮ ಕೈ ಹಿಡಿದುಕೊಂಡು ಕರೆದೊಯ್ದದ್ದು ಬೌದ್ಧವಿಹಾರಕ್ಕೆ. ಬೆಳಗಿನಿಂದ ಬೌದ್ಧಪೂರ್ಣಿಮೆಯ ದಿನ ನೀವು ನನ್ನನ್ನು ಬುದ್ಧನ ಬಳಿಯೇ ಕರೆದೊಯ್ಯಲಿಲ್ಲ ಎಂದು ಬೆಸರಿಸಿಕೊಂಡಿದ್ದ ನನ್ನ ಪದ್ದುವಿಗೆ ತಂದೆಯಂತೆ ಬಂದು, ಆಶ್ರಮದ ಅಡಿ ಅಡಿಯನ್ನೂ ವಿವರಿಸುತ್ತ ಕರೆದೊಯ್ದವರು ಸಿದ್ಧಲಿಂಗಯ್ಯ. ಪೊಲೀಸ್ ಅಧಿಕಾರಿಗಳಿಂದ, ಚಲನಚಿತ್ರರಂಗದ ಚಿನ್ನೇಗೌಡರವರೆಗೂ ನನ್ನನ್ನು ಪರಿಚಯಿಸುತ್ತ, ‘ರಾಗಂ, ಬಹಳ ದೊಡ್ಡ ಬರಹಗಾರರು, ಬಹಳ ದೊಡ್ಡ ಚಿಂತಕರು. ಈಗ ಬೆಂಗಳೂರಲ್ಲೇ ಇದ್ದಾರೆ’ ಎಂದು ಮೋಹದ ಡಂಗುರ ಸಾರುತ್ತ, ಮುಂದೆ ಮುಂದೆ ಅವರು, ಹಿಂದೆ ಹಿಂದೆ ನಾವು. ಹೊರಟ ರೀತಿ ನೋಡಿದರೆ. ಲುಂಬಿನಿ, ಸಾರಾನಾಥಗಳಲ್ಲಿ ಒಬ್ಬ ಬುದ್ಧ ಹೀಗೆಯೇ ಇದ್ದ ಎಂದೆನಿಸುತ್ತಿತ್ತು.

ಬೌದ್ಧವಿಹಾರದ ಧರ್ಮ ಗುರುಗಳಾದ ಆನಂದ ಬಂತೇಜಿಯವರಿಗೆ, ‘ನಮ್ಮ ರಾಗಂ, ಈ ಬೆಂಗಳೂರಿನಲ್ಲಿ ಬುದ್ಧನನ್ನು ಕುರಿತು ಬರೆಯಲಿದ್ದಾರೆ. ಅವರಿಗೆ ನಿಮ್ಮಿಂದ ಎಲ್ಲ ಸೌಕರ್ಯಗಳೂ ಸಿಗಬೇಕು’ ಎಂದು ಮತ್ತೆ ಬೆಂಗಳೂರಾಚೆಯ ಆಲೂರಿನ ಚಲುವರಾಜು ಅವರನ್ನು ಕರೆದು, ‘ವಿಪಷನದ ಸೂಕ್ತ ಮಾರ್ಗದರ್ಶನ ರಾಗಂಗೆ ಸಿಗಬೇಕು. ಅವರಿಗೆ ನಿವೇ ಗುರುವಾಗಬೇಕು’ ಎಂದು, ಕೊಳ್ಳೆಗಾಲದ ಬೌದ್ಧವಿಹಾರಕ್ಕೆ ಫೋನಾಯಿಸಿ, ‘ಇನ್ನು ಕೆಲವೇ ದಿನಗಳಲ್ಲಿ ರಾಗಂ ನಿಮ್ಮೊಂದಿಗೆ ಬುದ್ಧನ ಕುರಿತಾದ ಸಂವಾದಕ್ಕಿಳಿಯುತ್ತಾರೆಂದೂ’ ಸಿದ್ಧಲಿಂಗಯ್ಯನವರು ಹೇಳುವಾಗ, ನನಗೆ ಸಿದ್ಧಯ್ಯ ಪುರಾಣಿಕರ ಸಾಲ್ಲೊಂದು ನೆನಪಾಗುತ್ತಿತ್ತು, ‘ಜಡ ತನುವಿಗಿರಬಹುದು, ಬಡತನಕೆ ಕುಲವುಂಟೇ?’
 ಇದು ವಿಸ್ತರಿಸಿಕೊಳ್ಳಬೇಕಾದ ಸಾಲು. ನವೋದಯ, ನವ್ಯ, ದಲಿತ, ಬಂಡಾಯ ಸುಡುಗಾಡು ಎಲ್ಲ ಶಬ್ಧಗಳು ನೆಪ ಪಾತ್ರ. ಅವು ಮನುಷ್ಯ ಸೌಂದರ್ಯಕ್ಕೆ ಮಾರಕವಾಗಬಾರದವುಗಳು. ಹೀಗೆ ರಾತ್ರಿ ಹತ್ತು ಗಂಟೆವರೆಗೆ ಸಿದ್ಧಲಿಂಗಯ್ಯನವರ ಸ್ನೇಹದ ರಕ್ಷೆಯಲ್ಲಿ ಒಬ್ಬ ಭಿಕ್ಕುವಾಗಿದ್ದ ನಾನು ಅನುಭವಿಸಿದ ಆನಂದ ಬದುಕಿನ ಇನ್ನ್ಯಾವ ಸುಖಕ್ಕೆ ಸಮ? ಇದು ಈಗಲೂ ಪ್ರಶ್ನೆಯೆ.
 ಸಿದ್ಧಲಿಂಗಯ್ಯನವರು ಹೊರಡುವಾಗ ನನ್ನ ಕೊನೆಯ ಪ್ರಶ್ನೆ, ‘ಈ ರಾತ್ರಿ ಎಲ್ಲಿಗೆ ಹೊರಟಿದ್ದೀರಿ?’ ಅವರ ಉತ್ತರ, ‘ಹಿರಿಯರಾದ ಸುಮತೀಂದ್ರ ನಾಡಿಗರ ಹುಟ್ಟುಹಬ್ಬಕ್ಕೆ’. ಗೊತ್ತಿರಲಿ ಗೆಳೆಯರೆ, ಆಲೋಚನೆಯಲ್ಲಿ ನಾಡಿಗರ ದಾರಿ ಆರ್.ಎಸ್.ಎಸ್‍ನದು, ಸಿದ್ಧಲಿಂಗಯ್ಯನವರದು ‘ಊರು-ಕೇರಿಯದು’. ಆದರೆ ಇಬ್ಬರ ಗಂತವ್ಯವೂ ಪ್ರೀತಿಯೇ. ಈ ಪ್ರೀತಿಯಲ್ಲಿ ನಾವಿದ್ದೇವೆ, ನೀವಿದ್ದೀರಿ ಮತ್ತು ಬುದ್ಧನಿದ್ದಾನೆ.
     ನಿಮಗೆಲ್ಲ ಬೌದ್ಧಪೂರ್ಣಿಮೆಯ ಶುಭಾಷಯಗಳು. 

No comments:

Post a Comment