Total Pageviews

Thursday, May 21, 2015

ನಾನು ಸದಾ ನಿನ್ನ ಕಾಲಿಗೆ

ಕತ್ತಲಾಗಿತ್ತು, ಸಂಜೆ ಮಳೆಯಾಗಿತ್ತು. ಮನೆಗೆ ಬಂದು ಬಿಸಿ ಬಿಸಿಯಾದ ಚಹಾ ಹೀರುತ್ತಾ ಕುಳಿತುಕೊಂಡಿದ್ದೆ. ಮೊಬೈಲ್ ಕಂಪನ ಶುರು. ಆಚೆಯಿಂದ ಒಂದು ಧ್ವನಿನಾನು ಹಿಮಾಯತ್ ಖಾನ್, ಗಾಂಧಿ ನಗರದಿಂದ ಮಾತಾಡುತ್ತಾ ಇದ್ದೇನೆ. ದಿನಾಂಕ:13/05/2015 ರಂದು ಪುಟ್ಟಣ್ಣ ಸ್ಟುಡಿಯೋಕ್ಕೆ ನೀವು ಬರಬೇಕು. ದಂಪತಿ ಸಹಿತ. ನಮ್ಮ ಸಿನಿಮಾದಲ್ಲಿ ಅನಾಥ ಮಗು ಒಂದನ್ನು ದತ್ತು ತೆಗೆದುಕೊಳ್ಳುವ ಶ್ರೀಮಂತ ತಂದೆ-ತಾಯಿಗಳ ಒಂದು ಸಣ್ಣ ಸಿಕ್ವೆನ್ಸಿನಲ್ಲಿ ಪಾತ್ರ ಮಾಡಬೇಕು. ನಮ್ಮ ಅಸಿಸ್ಟಂಟ್ ಡೈರೆಕ್ಟರ್ ನಿಮಗೆ ಸಿಕ್ವೆನ್ಸ್ ಹೇಳುತ್ತಾರೆ. ನಮ್ಮ ಮ್ಯಾನೇಜರ್ ಚಂದ್ರು ನಿಮಗೆ ವೆಹಿಕಲ್ ಕಳುಹಿಸುತ್ತಾರೆ. ಪ್ಲೀಜ್, ಹೋಪ್ ಯು ವಿಲ್ ಬಿ ವಿಥ್ ಅಸ್ಎಂದು ಉರ್ದು ಆಕ್ಸೆಂಟ್ ಕನ್ನಡ ಮಾತಾಡಿ, ನನ್ನ ಪ್ರತಿಕ್ರಿಯೆಗೂ ಕಾಯದೆ ಫೋನ್ ಇಟ್ಟಾಗ ನನಗೇನಾಗಿರಬಹುದು ನೀವೆ ಯೋಚಿಸಿ.
ಹಾಗೆ ಕುಳಿತೆ, ಹಾಗೇ ಕುಳಿತೆ ಮತ್ತೊದು ಬಾರಿ ಚಹಾ ಕುಡಿದು ಇದೇನು ರಪರಪನೆ ಮಳೆ ಸುರಿದಂತೆ ಮಾತಾಡಿ ಬಿಟ್ಟನಲ್ಲ ಮನುಷ್ಯ ಎಂದು ಯೋಚಿಸುತ್ತಾ ಕೇಳಿಕೊಂಡೆ, ಯಾವ ಸಿನಿಮಾ? ನಮ್ಮ ಕುರಿತು ಇವನಿಗೆ ಮಾಹಿತಿ ಸಿಕ್ಕದ್ದಾರದೂ ಹೇಗೆ? ಖಂಡಿತವಾಗಿತೂ ಜ್ಞಾನದ, ಅನ್ನದ ದಾರಿಯಾಗಿ ಸಿನಿಮಾವನ್ನು ನಾನು ಯಾವಾಗಲೂ ಗೌರವಿಸಿದ್ದೇನೆ, ಬರೆದಿದ್ದೇನೆ, ಓದಿದ್ದೇನೆ ಆದರೆ ಇದೆಲ್ಲ ಹೀಮಾಯತ್ಖಾನ್ಗೆ ಗೊತ್ತೆ? ನಾನು ನನ್ನ ಶ್ರೀಮತಿ ಸಮೇತ ಪಾತ್ರ ಮಾಡಬೇಕು ಎನ್ನುತ್ತಿದ್ದಾನಲ್ಲ ಮನುಷ್ಯ. ಅವಳು ಅಂಗವಿಕಲೆ. ಸರಿಯಾಗಿ ನಡೆಯಲಾರಳು ಎಂದು ತನಿಗೆ ಗೊತ್ತೆ? ಇದೇನು ಮಕ್ಕಳಾಟವೆ? ಎಂದು ಅವನಿಗೆ ಮರಳಿ ಫೋನಾಯಿಸಿದೆ. ಮೆಲು, ಗಂಭೀರ, ಗಡುಸು ಧ್ವನಿಯಲ್ಲಿ ಮಾತನಾಡಿದ ಆತ ಒಂದೇ ಮಾತು ಹೇಳಿದ. ‘ಸರ್, ವಿ ಆರ್ ಸಿನಿಮಾ ಪೀಪಲ್. ಆಪ್ ಚಿಂತಾ ಮತ್ ಕೀಜಿಯೆ. ಆಪಕೆ ಬಾರೆ ಮೆ ಮೇರೆ ಪಾಸ್ ಬಹುತ್ ಜಾನಕಾರಿ ಹೈ, ಮುಝೆ ಆಪ್ಲೋಗ ಚಾಹಿಯೆ ಬಸ್’. ಮತ್ತೆ ಫೋನ್ ಕಟ್. ನಿರ್ಮಾಪಕ-ನಿರ್ದೇಶಕನಲ್ಲವೆ ಕಟ್, ಕಟ್ ಕಟ್ ಹೇಳಿ ರೂಢಿ ಇರಬಹುದೆಂದು ಸುಮ್ಮನಾದೆ.
ಈಗ ಗೊಂದಲವೊ ಗೊಂದಲ, ಮೂರನೆಯ ಬಾರಿ ಮತ್ತೆ ಚಹಾ. ಪದ್ದಿಯಂತೂನನ್ನಿಂದ ಇದು ಸಾಧ್ಯವಿಲ್ಲ. ಸುಮ್ಮನೆ ನಗುವವರ ಮುಂದೆ ನನ್ನನ್ನು  ನಗೆಗೇಡಿ ಮಾಡಬೇಡಿ. ನೀವು ಹೋಗಿ ಬನ್ನಿಎಂದು ಕಡ್ಡಿ ಮುರಿದಂತೆ ಚಹದ ಕಪ್ಪನ್ನು ನನ್ನ ಮುಂದೆ ಕುಕ್ಕರಿಸಿದಳು. ಮಿಗಿಲಾಗಿ ಇಬ್ಬರ ಆಫೀಸಿನಲ್ಲೂ ರಜೆಯ ಪ್ರಶ್ನೆ. ಕಳೆದ ಒಂಬತ್ತು ತಿಂಗಳಿಂದ ನಾವು ತಿರುಗಾಡಿದ ರೀತಿಗೆ ನಾವೇ ಸುಸ್ತಾಗಿದ್ದೇವೆ. ಇನ್ನು ನಮ್ಮ ಕಥೆ ಓದಿ ನೀವೆಷ್ಟು ದಣಿದಿರಬಹುದೆಂದೂ ನಾನು ಬಲ್ಲೆ. ಹೀಗೆ ವಿಚಾರಿಸುತ್ತಿರುವಾಗ ಮತ್ತೆ ಒಂದು ಫೋನ್. ಬಾರಿ ಸಹಾಯಕ ನಿರ್ದೇಶಕ ಶಿವಂನಿಂದ. ‘ಅಣ್ಣಾ, ಹಿಮಾಯತ್ ನಿಮ್ಮ ಜೊತೆ ಮಾತಾಡಿದರು ಅಂತಾ ಹೇಳಿದ್ರು. ದಯವಿಟ್ಟು ತಪ್ಪಿಸಬೇಡಿ. ಅತ್ತಿಗೆಯವರಿಗೆ ಹೇಗಾದರೂ ಮಾಡಿ ನೀವೆ ಒಪ್ಪಿಸಿ. ಒಟ್ಟಾರೆ ಪ್ರಾಜೆಕ್ಟ್ಲ್ಲಿ ನೀವಿರಲೇಬೇಕುಎಂದು ಇವನೂ ಕಟ್. ಅಂಜುತ್ತಲೆ ಮತ್ತೊಂದು ಕಪ್ಪು ಚಹಾಕ್ಕೆ ನನ್ನವಳಿಗೆ ಕೇಳಿದೆ. ಈಗ ಅವಳಿಗೆ ಸಿಟ್ಟು ಇರಲಿಲ್ಲ. ಚಹಾ ಕೊಟ್ಟು ಪ್ರೀತಿಯಿಂದ ಹೇಳಿದಳುಶಿವಂ ನಮ್ಮ ಹುಡುಗ. ನಿಮ್ಮ ದೊಡ್ಡ ಅಭಿಮಾನಿ. ಶೂಟಿಂಗ್ಗೆ ಹೋಗಿ ಬನ್ನಿಎಂದಳು
ನಾನೂ ಆಕೆಗೆ ಅದೇ ಹೇಳಿದೆ, ‘ಹೌದು, ಆತ ನನ್ನ ತಮ್ಮನೇ ಸರಿ, ನೀನು ಬಂದರೆ ಅವನಿಗೆ ಅತ್ತಿಗೆಯ ಆಶೀರ್ವಾದವು ಸಿಗುತ್ತದಲ್ಲ?’ ಆದಾಗ್ಯೂ ಪದ್ದು ಒಪ್ಪುತ್ತಿಲ್ಲ ಕಾರಣ ಆಕೆಯ ಅಂಗವೈಕಲ್ಯದ ಅಳುಕು. ಯಾರಾದರೂ ಏನಾದರೊಂದು ಅಂದರೆ ಎಂಬ ಚಿಂತೆ. ನಾನು ಹಠಮಾರಿ, ಅವಳನ್ನು ಹೊರಡಿಸಿಯೇ ಬಿಟ್ಟೆ. ನಾವೀಗ ಹಿಮಾಯತ್ಖಾನ್ ನಿರ್ಮಾಣ ಮತ್ತು ನಿರ್ದೇಶನದಜಸ್ಟ್ ಆಕಸ್ಮಿಕಸಿನಿಮಾದ ಅತಿಥಿ ಪಾತ್ರಗಳು ಎಂದು ಅವರ ಪ್ರೀತಿಯನ್ನು ಮನ್ನಿಸಿದೆ.
ತಟ್ಟನೆ ವಿದ್ಯಾರ್ಥಿಯೊಬ್ಬ ನೆನಪಾದ. ನಾನು ಎಂದಾದರೂ ಸಿನಿಮಾ ಸೇರಿದರೆ ನನ್ನೊಂದಿಗೆ ಸ್ಟುಡಿಯೋಕ್ಕೆ ಬರುವ ಸಣ್ಣ ಆಶೆಯನ್ನಿಟ್ಟುಕೊಂಡವ. ಹೀಗಾಗಿ ಶೂಟಿಂಗ್ ಹಿಂದಿನ ದಿನವೇ ಬೆಂಗಳೂರಿಗೆ ಬರಲು ತಿಳಿಸಿದ್ದೆ. ಹೀಗೆ ಆಕಸ್ಮಿಕವಾಗಿ ಕರೆದಾಗ ಆತನಲ್ಲಿ ಎಷ್ಟೊಂದು ಸಂಭ್ರಮ. ಒಬ್ಬ ಗುರುವಾಗಿ ನಾನು ಯಾವಾಗಲೂ ಅಂದುಕೊಳ್ಳುವುದಿಷ್ಟೆ. ‘ ಶುಡ್ ಸೇಟ್ ಆಲ್ವೇಜ್ ನ್ಯೂ ಚಲೆಂಜಸ್ ಆ್ಯಂಡ್ ಗೋಲ್ಸ್ ಬಿಫೋರ್ ಮಾಯ್ ಸ್ಟುಡೆಂಟ್ಸ್ಬೇರೆನಾಗದಿದ್ದರೂ ಚಿಂತೆಯಿಲ್ಲ, ದೇವರು ನೀಡಿದ ಅಂಗಾಂಗ, ಧ್ವನಿ ಹಾಗೂ ಜ್ಞಾನದ ಸಮರ್ಥ ಬಳಕೆ ಮಾಡಿಕೊಳ್ಳದ ಅವುಗಳನ್ನು ಯೋಗ ಕ್ರಿಯೆಗಳಿಗೆ ಬಳಸದ ಅಸಹ್ಯ ಉದಾಹರಣೆಯಾಗಿರಬಾರದು ನಾನು.
ರಾಜಾಜಿನಗರದಿಂದ ನೈಸ್ ರಸ್ತೆಯೆಡೆಗೆ ಹೊರಟು, ಸೀಗಿಹಳ್ಳಿ ಕ್ರಾಸ್ಗೆ  ಹೊರಳಿ, ಅಲ್ಲಿ ಸಿಗುವ ಬೆಂಗಳೂರು ಬಸ್ ಡಿಪೋದ ಹಿಂದೆ ಹೋದರೆ ಕಲ್ಲು-ತಗ್ಗು-ದಿನ್ನೆಗಳ ಮಡಿಲಲ್ಲಿರುವುದೇ ಪುಟ್ಟಣ್ಣ ಸ್ಟುಡಿಯೋ. ನನ್ನ ಪ್ರೀತಿಯ ಹಳೆಯ ಕಾರ್ ಜನ್ ಹತ್ತಿಕೊಂಡು, ಹಾಡುಕೇಳುತ್ತ ಹೋಗುತ್ತಿರಬೇಕಾದರೆ ಪ್ರೊಡಕ್ಷನ್ ಮ್ಯಾನೇಜರ್ ಚಂದ್ರು ಫೋನ್ ಮೇಲೆ ಫೋನ್ ಮಾಡಿ ಸ್ಥಳದ ಮಾರ್ಗದರ್ಶನ ಮಾಡುತ್ತಲೇ ಇದ್ದರು. ಅವರೆಲ್ಲರ ನಿರೀಕ್ಷೆಯಂತೆ ನಾವು ಮುಂಜಾನೆ 7 ಕ್ಕೆ ಅಲ್ಲಿರಬೇಕಿತ್ತು. ಆದರೆ ನನ್ನದು ಸೂರ್ಯವಂಶ. ಸಿನಿಮಾ ಬಿಟ್ಟೇನು. ಮುಂಜಾನೆಯ ಸಿಹಿನಿದ್ರೆ ಬಿಡಲಾರೆ. ಮಧ್ಯ ರಾತ್ರಿ ಬಿಡಲಾರೆ. ಬೆಳಗು ಹಿಡಿಯಲಾರೆ. ಆದರೂ ಅಂದು ಸರಿಯಾಗಿ 9.00ಕ್ಕೆ ಸ್ಟುಡಿಯೋದಲ್ಲಿದ್ದದ್ದು ಇತಿಹಾಸವೇ ಸರಿ.
ಹೋದೊಡನೆ ನೆಲಕ್ಕೊಂದು ನನ್ನ ನಮನ. ನಿತ್ಯ ಸಾವಿರಾರು ಕಾರ್ಮಿಕರಿಗೆ ಅನ್ನ ಹಾಕುವ ಸಿನಿಮಾ ಮರುಜನ್ಮ ಪಡೆಯಬೇಕಿದೆ. ಯಾವ ತಾಯಿಯ ಸಂಕಲ್ಪವೊ ಇಂದು ನಾನಿಲ್ಲಿದ್ದೇನೆ. ಎಲ್ಲರ ಪರಿಚಯ. ಬಿಸಿಬಿಸಿ ಚಹಾ. ಲೊಕೇಶನ್ ಆಬ್ಜರ್ವೇಶನ್, ಇಷ್ಟರಲ್ಲಿ ಮುಖ್ಯಮಂತ್ರಿ ಚಂದ್ರು ಬಂದರು. ನಾನಿಬ್ಬರೂ ನಟಿಸಬೇಕಾದುದು ಚಂದ್ರು ಅವರೊಂದಿಗೆ. ಎಲ್ಲರೂ ಸೇರಿ ಹರಟೆ ಹೊಡೆಯುತ್ತ ತಿಂಡಿ ಮುಗಿಸಿಯಾಯಿತು. ಮುಂದಿನದು ಮೇಕಪ್ ಪರ್ವ.
ನನ್ನ ತಾಯಿ ನನ್ನನ್ನು ಎಷ್ಟು ಚಂದ ಹೆತ್ತಿದ್ದಾರೆನ್ನುವುದು ಗೊತ್ತಾದುದು ಮೇಕಪ್ ಮ್ಯಾನ್ ಬ್ರಶ್ ಆಡಿಸುವಾಗಲೆ. ನೆಟ್ಟಗಿನ ಮೂಗು, ನೇರದೃಷ್ಠಿ, ವಿಶಾಲ ಹಣೆ, ಆಕಾಶಗಲ ಎದೆ, ಎಂದೂ ಸೋಲದ ಕಣ್ಣುಗಳು, ಎಲ್ಲ ಮಾತಾಡುವ ಅಂಗೈಗಳು. ಆತ್ ಹೇಳಿದ, ‘ಸುಮ್ಮನೆ ಬ್ರಶ್ ಮಾಡಿದ್ದೇನೆ ಸರ್. ಸ್ವೆಟಿಂಗ್ ಆದರೂ ಪರವಾಗಿಲ್ಲ, ಮೇಕಪ್ ಬಾಯ್ ವಿಲ್ ಟೇಕ್ ಕೇರ್ ಆಫ್ ಈಟ್ಶಿವಂಗೆ ಮೊದಲೆ ತಿಳಿಸಿದ್ದೆ. ಮೇ 22 ರವರೆಗೂ ನಾನು ಮಾತಾಡುವಂತಿಲ್ಲ. ಗಂಟಲು ಹದಗೆಟ್ಟಿದೆ. ಇಂಥ ಧ್ವನಿಯನ್ನು ನಾನು ಕೊಡಲಾರೆ. ಏನಿದ್ದರೂ ಅಪೀಯರನ್ಸ್ ಮಾತ್ರ. ಸರಿ ಮಧ್ಯಾಹ್ನ ನಾಲ್ಕರವರೆಗೂ ಶೂಟಿಂಗ್ ಸಂತೆ.
ಎಲ್ಲರೂ ಸೇರಿ ಊಟಕ್ಕೆ ಕುಳಿತಾಗ ಮುಖ್ಯಮಂತ್ರಿ ಚಂದ್ರು ಒಂದು ತಿಂಗಳು ಅವರ ನಾಟಕ ಮುಖ್ಯಮಂತ್ರಿ ಅಮೇರಿಕಾಯೆಲ್ಲಾ ಸುತ್ತಾಡುವ ಕುರಿತು ಹೇಳಿದರೆ, ನಿರ್ಮಾಕಪ ಹಿಮಾಯತ್ಖಾನ್ ತನ್ನ ಮೂಲದ ಕುರಿತು ಹೇಳುತ್ತಿದ್ದ. ಹಿಮಾಯತ್ಗೆ ಕನ್ನಡ ಬರುವುದಿಲ್ಲ ಆತ ದೆಹಲಿಗ. ಐಸ್ಪೈಸ್ರಾಯ್' ಹಾಗೂ ಇತರ ಚಿತ್ರಗಳಲ್ಲಿ ಹಿಂದಿಯಲ್ಲಿ ಕೆಲಸ ಮಾಡಿದವ. ಇದುವರೆಗೂ ಕನ್ನಡದಲ್ಲಿ ನಾಲ್ಕು ಸಿನಿಮಾ. ‘ಅಚ್ಚು-ಮೆಚ್ಚುಈತನದೇ ಸಿನಿಮಾ. ಈತನ ಮೂಲ ಪಾಕಿಸ್ಥಾನ. ಅಲ್ಲೊಂದು ಡಾಕ್ಯೂಮೆಂಟ್ರಿ ಮಾಡಿದ ಕೊನೆಯ ಭಾರತೀಯ. ಒಳ್ಳೆಯ ಮನುಷ್ಯ. ನನ್ನ ಓದು, ಬರಹ ಕೇಳಿ ಬೆಚ್ಚಿ ಬಿದ್ದ. ಮತ್ತೆ ಮತ್ತೆ ಪ್ರೀತಿಯಿಂದ ತಬ್ಬಿಕೊಂಡ.
   ಈತನಿಗೆ ಅನಾಥರ ಕುರಿತು ಕಾಳಜಿ. ಮಳೆ, ಮರ, ಸೊಂಟದಿಂದ ಹೊರಬಂದು ಸಿನಿಮಾ ಮಾಡುವ ಬಯಕೆ.
ಒಟ್ಟು ಬೆಳವಣಿಗೆಗೆ ಕಾರಣ ಶಿವಂ. ಕನ್ನಡದ ಹುಡುಗ. ನನ್ನನ್ನು, ನನ್ನ ಬ್ಲಾಗ್ ಮೂಲಕ ಅಳೆದವ. ಬೆಂಗಳೂರಿಗೆ ಬಂದ ಮೊದಲದಲ್ಲಿ ಮನೆಗೆ ಬಂದು ಗಂಟೆಗಳವರೆಗೆ ಕುಳಿತು ಫೋಟೋ ನೋಡಿ ಸುಮ್ಮನೆ ಎದ್ದು ಹೋದಾತ. ಆನಂತರ ಎಷ್ಟೊಂದು ಪ್ರೀತಿಯವನಾದನೆಂದರೆ. ಆತನ ಸಿನಿಮಾ ಸಿಂಚಿನ ಆಳಗಲ ನನಗೇ ತಿಳಿಸಿರಲೇ ಇಲ್ಲ.
ಹೇಳಿಕೊಳ್ಳಲು ಬಹಳ ಇದೆ. ಸಮಯವಿಲ್ಲ. ಮೈತುಂಬ ಕೆಲಸ. ಬಣ್ಣದ ದಿನದ ಮೊದನ ಸಂಭಾವನೆಗೆ ಸಹಿ ಹಾಕಿ ಕಾರು ಹತ್ತಿ ಹೊರಟಾಗ ಏನೆಲ್ಲ ನೆನಪುಗಳು. ನನ್ನ ತಂದೆ-ತಾಯಿಗೆ ಫೋನಾಯಿಸಿ ಹೇಳಿದೆ ಇಲ್ಲಿ ನಡೆಯುತ್ತಿರುವುದೆಲ್ಲ ನಿಮ್ಮ ಸಂಕಲ್ಪದ ಫಲ. ನಾನು ನೆಪ ಮಾತ್ರ. ಈಗ ಸಾಯಂಕಾಲ. ಡಬ್ಬದಂಗಡಿ ಮುಂದಿನ ಕಲ್ಲಿನ ಮೇಲೆ ಕುಳಿತು ಮತ್ತೆ ಅದೇ ಚಹಾ.
ದೇವರಿಗೆ ಮತ್ತೆ ಮತ್ತೆ ಹೇಳಿದೆ ಜೀವನದಲ್ಲಿ ಅದೇನು ಸಾಧಿಸುತ್ತೇನೊ ಗೊತ್ತಿಲ್ಲ, ಆದರೆ ಸಂಗಾತಿಗಳನ್ನು ಸೇರಿಸಿಕೊಂಡು ಹೀಗೆ ಮತ್ತೆ ಮತ್ತೆ ಚಹಾ ಹೀರುವ ಸಂಭ್ರಮ ತಪ್ಪಬಾರದಲ್ಲ ಭಗವಂತನೆ, ಇಷ್ಟು ಕರುಣಾಳು ಆದರೆ ಸಾಕು ನೀ ನನ್ನ ಪಾಲಿಗೆ. ನಾನು ಸದಾ ನಿನ್ನ ಕಾಲಿಗೆ.

No comments:

Post a Comment