“ಸಾಕಷ್ಟು ಸಾರಿ ಬಂದಿದ್ದೇನೆ. ಬೆಂಗಳೂರಿನ
ನಮ್ಮ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾದ ಶ್ರೀ ದೇಗೌಡ ಅವರೊಬ್ಬರೇ ಸಾಕು, ಕಾರ್ಯಕ್ರಮ ಸಾಂಗವಾಗಲಿ”
ಎಂದು ತಿಳಿಸಿದ ಮೇಲೂ, ‘ಇಲ್ಲ, ನೀವು ಬರಲೇಬೇಕು. ನ್ಯಾಕ್ ಪ್ರಕ್ರಿಯೆ ಒಳಪಡುತ್ತಿರುವ ಕಾಲೇಜು, ಮೇಲಾಗಿ
ನಿಮ್ಮ ಸಾಹಿತ್ಯ, ಅಂಕಣ ಬರಹಗಳ ದೊಡ್ಡ ಅಭಿಮಾನಿ ಬಳಗ ಇಲ್ಲದೆ. ನೀವು ಎಷ್ಟು ಬಂದರೂ ಕಡಿಮೆಯೆ” ಎಂದು
ಆ ಕಡೆಯಿಂದ ಒತ್ತಡ ಬಂದಾಗ ‘ಒಲ್ಲೆ’ ಎನ್ನುವುದು ದುರಹಂಕಾರವಾದೀತು ಎಂದು ನನ್ನವಳೊಂದಿಗೆ ಎಸ್.ಆರ್.ಎಸ್
ಹತ್ತೇ ಬಿಟ್ಟೆ. ಜಡಿಮಳೆ, ಗುಡುಗು-ಗಾಳಿಗಳ ಮಧ್ಯ, ಬಸ್ಸೆಂಬ ತೊಟ್ಟಿಲಲ್ಲಿ ನೆಮ್ಮದಿಯ ನಿದ್ರೆ ಕಳೆದು,
ಮರುದಿನ ಕಣ್ಣಗಲಿಸಿದರೆ, ಕಂಡಕಂಡಲ್ಲಿ ಕಬ್ಬು, ಆಲೆಮನೆಯ ಕೆನೆಹಾಲಿನ ವಾಸನೆ ಮತ್ತೆ ಕೃಷ್ಣೆಯ ಕರೆ.
ಜಮಖಂಡಿಯ ಬಸ್ಟಾಂಡಿಗೆ ಬಂದು ನಿಂತಿದ್ದ ಬಳಗ, ಈ ಸಾರಿ ನಮ್ಮ ವಾಸ್ತವ್ಯಕ್ಕೆ ಆಯ್ಕೆ
ಮಾಡಿಟ್ಟ ಸ್ಥಳ ನನ್ನನ್ನು ನೆನಪುಗಳ ಮಹಾ ಮೋಹಕ್ಕೆ ಸಿಲುಕಿಸಿ ಬಿಟ್ಟಿತು. ಸುಮಾರು 150 ವರ್ಷಗಳ ಹಿಂದೆ
ಬೆಟ್ಟದ ಏರಿನಲ್ಲಿ ಇರುವ ಈ ಕಟ್ಟಡದ ಹೆಸರು ‘ರಮಾದೇವಿ ನಿವಾಸ’. ರಾಜಾ ಪಟವರ್ಧನರ ಕಾಲಕ್ಕೆ ನಿರ್ಮಾಣಗೊಂಡ
ಇದು ಬ್ರಿಟಿಷರ ಎಲ್ಲ ವಿಲಾಸ, ವೈಭೋಗಗಳ ಅನುಕೂಲತೆಗಳನ್ನು ಹೊಂದಿದೆ. ಅಲ್ಲಿಯ ಸಭಾಭವನ, ಬೆಡ್‍ರೂಮ್
ಅವುಗಳಿಗೆ ಅಳವಡಿಸಲಾದ ಝಾಮರ್‍ಗಳು, ಅಲ್ಲಲ್ಲಿ ಪುಷ್ಕರಣಿಗಳು ನನ್ನನ್ನು ಮೂಕವಿಸ್ಮಿತನನ್ನಾಗಿಸಿದವು.
ಇಂಥವುಗಳನ್ನು ನೋಡಿದಾಗಲೆಲ್ಲ ನನ್ನೆದುರು ನಿಲ್ಲುವ ಒಂದೇ ಪ್ರಶ್ನೆ. ಈ ಜೀವನ ಶೃದ್ಧೆ ನಿನಗಿದೆಯೇ?
ಅವರು ಅಳಿದೂ ಈ ಮೂಲಕ ಉಳಿದಿದ್ದಾರೆ, ನೀನು? ನೀನು? ನೀನು?
ಮೌನವಾಗಿ ಮಡದಿಯನ್ನು ಕೂಡ್ರಿಸಿ ಕ್ಯಾಮರಾದೊಳಗೆ ಅವಳ ಕವಿತೆ ಬರೆಯಲಾರಂಭಿಸಿದೆ.
ಅದರ ತುಣುಕುಗಳನ್ನು ನೀವು ನೋಡುತ್ತಿದ್ದೀರಿ. ತಕ್ಷಣ ಗೆಳೆಯನಿಗೆ ಹೇಳಿದೆ, ‘ಕಾರ್ಯಕ್ರಮ ನಿತಾಂತವಾಗಿರಲಿ,
ನಾನು ಎರಡು ದಿನ ಈ ಕಟ್ಟಡ ಬಿಟ್ಟ ಕದಲುವುದಿಲ್ಲ’
ಎಂದು. ಈಗ ಮತ್ತೆ ಮತ್ತೆ ಚಹಾ, ಮುಂಜಾನೆಯ ಸೂರ್ಯನ ಎಳೆಬಿಸಿಲು ನಾನು, ಆಕೆ ಮತ್ತು ಬೆಟ್ಟದ
ಮಗಳಾದ ಈ ಮಹಾನಿವಾಸ ‘ರಮಾದೇವಿ ನಿವಾಸ’.
ಅಲ್ಲಿ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಯಬೇಕಾದ
ಸ್ಥಳದಲ್ಲಿಯೇ ನಾಗರ ಹಾವು. ರಾದ್ಧಾಂತವಾಗಿ, ಹಾವಾಡಿಗ ಬಂದು ಅದರ ಬಂಧನವಾಗಿ ನಾವು ವೇದಿಕೆ ಹತ್ತಬೇಕಾದರೆ
ಮತ್ತೂ ಒಂದು ಗಂಟೆ ತಡವಾಯಿತು. ರಮಾದೇವಿ ನಿವಾಸದಲ್ಲಿ ಕುಳಿತು ನಮ್ಮ ‘ಕಸ್ತೂರಿ ನಿವಾಸ’ದ ಕೆ.ಸಿ.ಎನ್
ಗೌಡರು ಈ ಕಟ್ಟಡ ನೋಡಿದ್ದರೆ ಆ ಚಿತ್ರ ಇನ್ನೂ ಎಷ್ಟು ಅದ್ಭುತವಾಗಿರಬಹುದಿತ್ತೆಂದು ಹೇಳುತ್ತಿದ್ದೆ.
ನನ್ನೊಳಗಿನ ಸರಸ್ವತಿ ಮಾತ್ರದಿಂದ ಸಾಧ್ಯವಾದ ಜೀವನ ಸೊಗಸಿನ ಸುಖವನ್ನು ಹಂಚಿಕೊಳ್ಳುತ್ತಿದ್ದೆ.
ಜಮಖಂಡಿಯ ಮಹಿಳಾ ಕಾಲೇಜಿನ ವಾರ್ಷಿಕ ಸಮಾರಂಭದ ವೇದಿಕೆಗೆ ನಾನು ಸ್ವಲ್ಪ ತಡವಾಗಿಯೇ
ಹೋದೆ. ವೇದಿಕೆಯ ಮೇಲೆ ನಮ್ಮ ಮನೆತನದ ಮಹಾ ಅಭಿಮಾನಿಗಳೂ ಹಾಲಿ ಎಂ.ಎಲ್.ಸಿಗಳೂ ಆದ ಶ್ರೀ ಜಿ.ಎಸ್.ನ್ಯಾಮಗೌಡರು,
ಲೋಕಸಭಾ ಸದಸ್ಯರಾದ ಶ್ರೀ ಸಿದ್ದುನ್ಯಾಮಗೌಡರು, ಅಭಿವೃದ್ಧಿ ಮಂಡಳಿಯ ಯಡಹಳ್ಳಿಯವರು, ‘ಇಂಗಳೆ ಮಾರ್ಗ’ದ
ಗೆಳೆಯ ಘನಶ್ಯಾಮ ಭಾಂಡಗೆಯವರು, ಜೊತೆಗೆ ಗೆಳೆಯ ವಿಠ್ಠಲ ಮತ್ತು ಪ್ರಾಂಶುಪಾಲರು.
ನನ್ನ ಎಳೆಯ ಗೆಳತಿಯರಿಗೆ ಆದರ್ಶವಾಗಬಲ್ಲ ಭಾಷಣದ ವಸ್ತು ನನ್ನೊಂದಿಗೆ ವೇದಿಕೆಯ
ಮೇಲೆಯೇ ಉಪಸ್ಥಿತವಿರುವಾಗ ನಾನು ಬೇರೆ ಇನ್ನ್ಯಾವ ವಿಷಯಕ್ಕೂ ತಡಕಾಡಲಿಲ್ಲ. ನನ್ನ ಭಾಷಣದ ಅಂದಿನ ವಸ್ತು
ಶ್ರೀ ಘನಶ್ಯಾಮ ಭಾಂಡಗೆ. ನನ್ನವರು, ನಮ್ಮ ಬಾಗಲಕೋಟೆಯವರು. ಅವರಿಗೆ ಎರಡೂ ಕಾಲುಗಳಿಲ್ಲ. ತಲೆಯಲ್ಲಿ
ಕೂದಲೂ ಕಡಿಮೆ, ಕೈಗಳೂರದೆ ನಡೆಯಲಾಗುವುದಿಲ್ಲ. ಆದರೆ ಇಂದು ಅವರು ನಮ್ಮೊಂದಿಗೆ ವೇದಿಕೆಯ ಮೇಲೆ, ಕಾಲೇಜಿನ
ಸಾವಿದರಾ ಐದುನೂರು ಸುಂದರಿಯರು, ಶಾರೀರಿಕ ಮತ್ತು ಶೈಕ್ಷಣಿಕ ಸಮರ್ಥರು ವೇದಿಕೆಯ ಕೆಳಗೆ, ಕೇವಲ ಕೇಳುಗರಾಗಿ.
ಕಾಲಿಲ್ಲದ ಘನಶ್ಯಾಮ ಕ್ರೀಡಾಪಟುವಾಗುತ್ತಾರೆ,
ತನ್ನ ಚಕ್ರದ ವಾಹನ ಬಳಸಿ ಬಾಗಲಕೋಟೆಯಿಂದ ಬೆಂಗಳೂರಿಗೆ 650 ಕಿ.ಮೀ ಬಂದು 10,000 ರೂಗಳ ಮೊತ್ತದ ಬರಪರಿಹಾರ
ನಿಧಿಯನ್ನು ಮುಖ್ಯಮಂತ್ರಿಗೆ ನೀಡುತ್ತಾರೆ. ರಾಜ್ಯದ ಆರು ಜನ ಮುಖ್ಯಮಂತ್ರಿಗಳಿಂದ ತಮ್ಮ ಸಾಧನೆಗಾಗಿ
ಅಭಿನಂದಿಸಲ್ಪಡುತ್ತಾರೆ. ಚಿತ್ರರಂಗದ ಅತ್ಯುತ್ತಮ ಕಲಾವಿದರನ್ನು ಬಳಸಿಕೊಂಡು ‘ಇಂಗಳೆ ಮಾರ್ಗ’ದಂಥ
ದಲಿತಪರ ಚಿಂತನೆಯ ಸದಭಿರುಚಿಯ ಸಿನಿಮಾ ಮಾಡಿ, ಮತ್ತೆ ನಮಗೊಬ್ಬ ಆಧುನಿಕ ಅಂಬೇಡ್ಕರ್‍ರನ್ನು ಕಟ್ಟಿಕೊಡುತ್ತಾರೆ.
ಆದರೆ ಕಾಲಿದ್ದೂ ನಾವೇಕೆ ಕನಲಿದ್ದೇವೆ? ದೊಡ್ಡ ಪ್ರಶ್ನೆ. ಈ ಕ್ಷಣ ನನಗನ್ನಿಸಿದ್ದು ಈ ಘನಶ್ಯಾಮರ
ತಾಯಿಯನ್ನು ನೋಡಬೇಕು. ನಮ್ಮ ಘನಶ್ಯಾಂರ ಮುಂದೆ ನಾವೆಷ್ಟು ಸಣ್ಣವರು ಅಲ್ಲವೆ?
ನಾವು ಎದೆಯುಬ್ಬಿಸಿ, ತಲೆಎತ್ತಿ ನಿಂತಾಗ,
ನಮ್ಮನ್ನು ನೋಡುವವರಿಗೆ ನಮ್ಮ ಹೆತ್ತೊಡಲುಗಳ ನೋಡಬೇಕೆನ್ನುವಷ್ಟು ಹಂಬಲ ಹುಟ್ಟಿಸಿದರೆ ಸಾಕು, ನನ್ನ
ಜನ್ಮ ಸಾರ್ಥಕವೆ. ಆದರೆ ಇಂದು ಈ ಒಡಲುಗಳೇ ಬರೀ ಕಾಂಡೋಮ್‍ಗಳ ಕಡಲುಗಳಾಗುತ್ತಿವೆ. ಇದನ್ನು ತಪ್ಪಿಸಲು
ಹಿಂದೊಮ್ಮೆ ಮದರ್ ಥೇರೆಸಾ ದೊಡ್ಡ ಅಭಿಯಾನವನ್ನೇ ಮಾಡಿದ್ದರು. ಮದರ್ ಮರೆಯಾದರು, ಮಾಡಲ್‍ಗಳು ಮಾರುಕಟ್ಟೆಗಳ
ಮದರ್‍ಗಳಾದರು.
ಬದುಕಿನಲ್ಲಿ ಹಂಗಿಲ್ಲದ ಹಾದಿಗಳನ್ನು ಹಲವಾರು ದಾರಿ ತುಳಿಯುತ್ತಲೇ ಇರುತ್ತೇವೆ.
‘ನಿತ್ಯ ಸುತ್ತುವ ಹಾದಿ ತಾನೇ?’ ಎಂಬ ಉಡಾಫೆ ಮನಸ್ಸಿನ ಪ್ರಶ್ನೆ ಕೆಲವೊಮ್ಮೆ ಈ ಪ್ರೀತಿಯ ಹಾದಿಯನ್ನು
ತುಚ್ಚ ಭಾವದಿಂದ ನೋಡುವಂತೆ ಮಾಡುತ್ತದೆ. ಸಂಬಂಧಗಳ ಸಮಾಧಿ ಮಾಡುತ್ತದೆ. ಅಂತೆಯೆ ನನ್ನ ಮಕ್ಕಳಿಗೆ
ನಾನು ಸದಾ ಹೇಳುವುದು, ‘ಹಿಡಿದ ಹಾದಿಯನ್ನು ಎಂದೂ, ಎಂದೂ ಹೀಗಳಿಯಬೇಡ. ಗೌರವಿಸು, ಗೌರವಿಸು ಜೀವನವ.’
ಜಮಖಂಡಿಯ ಈ ರನ್ನನ ಹಾದಿಯನ್ನು ನಾನು ಮತ್ತೆ ಮತ್ತೆ ತುಳಿದ್ದಿದ್ದೇನೆ. ತುಳಿದಷ್ಟೂ ಬೆಳೆದಿದ್ದೇನೆ.
ಹೀಗೆ ಈ ಹಾದಿ ಹರಸುತ್ತಿರಲಿ, ನನ್ನ ಸಂತಾನಗಳಿಗೆ ಪುಣ್ಯದ ದಾರಿಯಾಗಿರಲಿ ಎಂದು ಪ್ರಾರ್ಥಿಸುತ್ತೇನೆ.
ಅಂದಹಾಗೆ, ಈ ಎರಡು ದಿನಗಳ ವಾಸ್ತವ್ಯದ
ಪ್ರೀತಿಯ ಗೆಳೆಯರಾದ ವಿಠ್ಠಲ ದಳವಾಯಿ ಪ್ರೊ. ಹಾದಿಮನಿ, ಪ್ರೊ. ಗೊಳಸಂಗಿ, ಕಾಲೇಜಿನ ಪ್ರಾಂಶುಪಾಲರು
ಮತ್ತೆಲ್ಲ ಬಳಗಕ್ಕೆ ತಲೆಬಾಗಿದ್ದೇನೆ.
No comments:
Post a Comment