Total Pageviews

Friday, June 5, 2015

ಬೆಂಕಿಯಾಗಬಹುದಾದರೂ ನಂದದ ದೀಪವಾಗುವುದೇ ಬದುಕು

ಸಾಮ್ರಾಟ ಅಶೋಕ ಕಳಿಂಗದ ಮೇಲೇರಿ ಹೋಗಿ ಅನೇಕರ ಹತ್ಯೆ ಮಾಡಿದ. ಓರಿಸ್ಸಾದ ದಯಾನದಿಯ ದಂಡೆಯ ಮೇಲೆ ಇವನ ವಿರುದ್ಧ ಹೋರಾಡುತ್ತಿದ್ದ ಸೈನಿಕರು ಸಾವನಪ್ಪಲು ಸಿದ್ಧವಿದ್ದರೇ ವಿನಃ ಸಾಮ್ರಾಟ ಅಶೋಕನ ಪಾರಮ್ಯಕ್ಕೆ ತಲೆಬಾಗಲು ಸಿದ್ಧರಿರಲಿಲ್ಲ. ಹೆಣಗಳ ರಾಶಿ ಬಿತ್ತು. ರಕ್ತಿದಿಂದ ಇಡೀ ನದಿಯ ನೀರು ಕೆಂಪಾಯಿತು, ಎದುರಾಳಿ ಸೈನ್ಯ ಸೋತಿತು, ಆದರೆ ಅಶೋಕನಿಗೆ ಗೆಲವು ಸಿಗಲಿಲ್ಲ. ಈಗ ಕಾಡಿದ್ದು ಬುದ್ಧನ ಮುಗುಳ್ನಗೆ ಮತ್ತು ಒಂದು ಮಾತು, “ಸೋಲಲಾರದವರನ್ನು ಸೋಲಿಸಲಾಗದು.” ಎಂಥ ಮಾತಲ್ಲವೆ? ಬೇಕಿದ್ದರೆ ನೀವು ಅವರನ್ನು ಸಾಯಿಸಬಹುದು ಆದರೆ ಸೋಲಿಸಲಾಗದು. ಮನುಷ್ಯ ಸಂಬಂಧಗಳ ಕನಿಷ್ಠ ಆಧ್ರ್ರತೆ ಉಳಿದಿದ್ದರೆ ಮಾತ್ರ ಸೋಲು-ಗೆಲವು ಎಂಬ ಪದಗಳಿಗೆ ಅರ್ಥವಿರುತ್ತದೆ. ಬುದ್ಧ ಹೇಳಿದ್ದು ಸತ್ಯವಾಗಿತ್ತು, ಅಶೋಕನ ಹೋರಾಟ ವ್ಯರ್ಥವಾಗಿತ್ತು. ಆದರೆ ಹೀಗೆ ಕಾಡಿದ ಬುದ್ಧ ಗತಿಸಿಯೂ ಆಗಲೆ 200 ವರ್ಷಗಳಾಗಿತ್ತು. 
 ಆದರೂ ಬುದ್ಧನ ತಣ್ಣನೆಯ ಒಂದು ಮಾತು ಅಶೋಕನ ಒಟ್ಟು ಹೋರಾಟವನ್ನೇ ನಿರರ್ಥಕವೆಂದು ಸಾಬೀತುಗೊಳಿಸಿತ್ತು. ಈಗ ಅಶೋಕನಲ್ಲಿ ಬುದ್ಧನ ಈ ಮಾತಿನಿಂದಾಗಿ ವಿವೇಕದ ಬೆಳಕಿನ ಕಿರಣದ ಪಯಣ ಆರಂಭವಾಗಿತ್ತು. ಈ ಕಿರಣ ಹಿಂದೆ ಕಿರೀಟ-ರಥ-ಚಾಮರಗಳಿಲ್ಲ. ಸೈನ್ಯ-ಸೇನಾಧಿಪತಿ-ಫರಾಕುಗಳಿಲ್ಲ. ಬರೀ ಒಂದು ಕಿರಣ, ಅರಿವಿನ ಕಿರಣ. ಹೀಗೆ ಕನ್ನಡಿಗರನ್ನು ಕಾಡಿದವರು ರಾಜಕುಮಾರ. ಸರಳತೆಯ, ನಿರಹಂಕಾರದ ಒಂದು ಕಿರಣವಾಗಿ.
 ಎರಡು ದಿನಗಳ ಕೇಂದ್ರಿಯ ವಿಶ್ವವಿದ್ಯಾಲಯ ಗುಲಬರ್ಗಾ ಹಮ್ಮಿಕೊಂಡ ರಾಜಕುಮಾರ ಕುರಿತಾದ ವಿಚಾರ ಸಂಕಿರಣದಲ್ಲಿ ‘ವಿಶ್ವವಿದ್ಯಾಲಯಗಳ ಪಂಡಿತರು’ ಗಮನಿಸಿದಂತೆ ಗೋಕಾಕ್ ಚಳುವಳಿಯನ್ನು ಹೊರತುಪಡಿಸಿ, ದಲಿತ, ಕಾರ್ಮಿಕ, ಸಾಮಾಜಿಕ, ಸ್ವಯಂ ತನ್ನ ಜನಾಂಗವೇ ಆದ ಈಡಿಗ ಚಳುವಳಿಗೆ ಪೂರಕವಾದ ಜನಾಂದೋಲನವನ್ನು ರಾಜಕುಮಾರರಿಗೆ ರೂಪಿಸಲಾಗಲಿಲ್ಲ. ಬುದ್ಧಿಜೀವಿಗಳು ಹೋಗಿ ಕರೆಯದೇ ಇದ್ದರೆ ಗೋಕಾಕ್ ಚಳುವಳಿಯಲ್ಲೂ ಭಾಗವಹಿಸುತ್ತಿರಲಿಲ್ಲ ರಾಜಕುಮಾರ್ ಎಂಬ ವಾದ ನಡೆದಿತ್ತು.
 ಗೊತ್ತಿರಲಿ, ಇಷ್ಟು ತಿಳುವಳಿಕೆ ಇದ್ದ ವ್ಯಕ್ತಿ ರಾಜಕುಮಾರ್ ಆಗಿದ್ದರೆ ರಾಜಕಾರಣದಿಂದ ದೂರವಾಗುತ್ತಿರಲಿಲ್ಲ. ಆದರೆ ಇಂಥ ಅವಕಾಶವಾದವನ್ನು ಬಳಸಿಕೊಂಡ ಆ ವ್ಯಕ್ತಿ ಇಂದು ಕನ್ನಡಿಗರು ಆರಾಧಿಸುವ ರಾಜಕುಮಾರ್‍ರಾಗಿ ತಲೆಮಾರಿನಿಂದ ತಲೆಮಾರಿಗೆ ನಿರಂತರವಾಗುತ್ತಿರಲಿಲ್ಲ. ಕರ್ನಾಟಕದ ಯಾವುದೇ ಚಳುವಳಿಗಳಲ್ಲೂ ನೇರವಾಗಿ ಧುಮುಕದೆಯೂ ಅನೇಕ ಚಳುವಳಿಕಾರರನ್ನು ರೂಪಿಸಿದ ಶ್ರೇಯಸ್ಸು ಕುವೆಂಪು ಅವರಿಗೆ ಸಲ್ಲುವುದಾದರೆ ಅಂಥದೇ ಸಾಂಸ್ಕøತಿಕ ಸ್ಥಾನ ರಾಜಕುಮಾರರಿಗೂ ಸಿಗಬೇಕು. ಯಾಕೆಂದರೆ ಅವರ ಚಿತ್ರಗಳನ್ನು ನೋಡಿ ಜನಸಾಮಾನ್ಯರು ಬದುಕು ರೂಪಿಸಿಕೊಂಡಿದ್ದಾರೆ, ಪ್ರಬುದ್ಧರು ಸಾಮಾಜಿಕ ಜವಾಬ್ದಾರಿಗಳನ್ನು ಹೊತ್ತಿದ್ದಾರೆ. ದಾರಿ ಕ್ರಮಿಸಲು ಮೊದಲ ಹೆಜ್ಜೆ ಮುಖ್ಯವಾಗಿರುವಂತೆ, ಕಟ್ಟಡ ಹತ್ತಲು ಮೊದಲ ಪಾವಟಿಗೆ ಪ್ರಮುಖವಾಗುವಂತೆ ರಾಜಕುಮಾರ ಚಿತ್ರಗಳು ಸಾಮಾಜಿಕ ಪರಿವರ್ತನೆಗಾಗಿ ಜನಾಂದೋಲನವನ್ನು ರೂಪಿಸದಿದ್ದರೂ, ಜನರೊಳಗೆ ಒಂದು ಅರಿವಿನ ದೀಪ ಹಚ್ಚಿಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿವೆ.
 ಕಳೆದ ಎರಡು ದಿನಗಳ ವಿಚಾರ ಸಂಕಿರಣದಲ್ಲಿ ರಾಜ್ ಚಿತ್ರಗಳಲ್ಲಿಯ ನೂರಾರು ನ್ಯೂನ್ಯತೆಗಳ ಕುರಿತು ಚರ್ಚಿಸಲಾಗಿದೆ. ‘ಚಲಿಸುವ ಮೋಡಗಳು’ ಚಿತ್ರದಲ್ಲಿ ಹಿಂದಿ ಮಾತನಾಡುವ ನಾಯಕಿಗೆ ಸ್ಲೇಟ್ ಮೇಲೆ ಬರಹ ಕಲಿಸುವ ಮೂಲಕ ಕನ್ನಡ ಕಲಿಸುವ ಪ್ರಯತ್ನ ಹಾಸ್ಯಾಸ್ಪದವಾಗಿದೆ, ಕಲಿಕೆಯಲ್ಲಿ ಯಾವಾಗಲೂ ಮೌಖಿಕತೆ ಮುಖ್ಯ ಎಂದು ಪಂಡಿರೊಬ್ಬರ ವಾದ. ಮುಂದುವರೆದು ಅವರು ಹೇಳುತ್ತಾರೆ, “ರಾಜಕುಮಾರ್‍ರಿಗೆ ರಾಜಕಪೂರಂತೆ ಸಿನಿಮಾ ದುಡಿಸಿಕೊಳ್ಳಲಾಗಲಿಲ್ಲ”, “ಈ ವಿಚಾರ ಸಂಕಿರಣ ರಾಜ್ ಭಜನೆ”, ಪೌರೋಹಿತ್ಯದ ಹಿಡಿತದಲ್ಲಿದ್ದ ಕನ್ನಡ ಚಲನಚಿತ್ರರಂಗದಲ್ಲಿ ರಾಜಕುಮಾರರಿಗೆ ಕೊನೆಗೂ ಅದರಿಂದ ಮುಕ್ತವಾಗಿ ಚಿತ್ರಗಳನ್ನು ನೀಡುವುದಾಗಲಿಲ್ಲ. ಹಾಗೆ-ಹೀಗೆ.
 ದಯವಿಟ್ಟು ಪಂಡಿತರು ನನ್ನನ್ನು ಕ್ಷಮಿಸಬೇಕು. ಸಿನಿಮಾ ಒಂದು ಸಾಂಘಿಕ ಮತ್ತು ಸಾಂದರ್ಭಿಕ ಕಲಾಕೃತಿ. ಇಲ್ಲಿ ರಾಜಕುಮಾರ್ ಒಬ್ಬ ನಟ ಮಾತ್ರ. ಪಾತ್ರ ಪೋಷಣೆ, ಭಾಷೆ, ಅಭಿನಯಗಳ ಕುರಿತಾದ ಪ್ರಶ್ನೆಗಳಿಗೆ ನಾವು ರಾಜಕುಮಾರ್ ಎಂಬ ನಟನನ್ನು ಹೊಣೆಗಾರನಾಗಿಸಬಹುದೇ ವಿನಃ ತಂತ್ರಜ್ಞಾನ, ನಿರ್ದೇಶನ, ಸಂಗೀತರಚನೆ ಕುರಿತಾದ ಪ್ರಶ್ನೆಗಳಿಗಲ್ಲ. ಇದು ನಮ್ಮ ಬೌದ್ಧಿಕತೆಯೊಳಗಿನ ವಿಕೃತಿಯನ್ನು ತೋರಿಸುತ್ತದೆಯೇ ವಿನಃ ಸಿನಿಮಾ ನೋಡಲು ಇರಬೇಕಾದ ಸಾಮಾನ್ಯ ಸಂಸ್ಕತಿಯನ್ನು, ಸಹೃದಯತೆಯನ್ನು ಅಲ್ಲ. ಹದ್ದು ಮೀರಿದಾಗ ಬುದ್ಧಿ ಶಾಪವಾಗುತ್ತದೆ ಅಲ್ಲವೆ?
 ಸ್ವಯಂ ಪಂಡಿತರಾಗಿರಲಿಲ್ಲ ರಾಜಕುಮಾರ್. ಬದುಕಿನೊಂದಿಗೆ ಸಖ್ಯಸಾಧಿಸುವ ಸಾಧನಗಳಾದ ಆಧ್ಯಾತ್ಮ ಮತ್ತು ಯೋಗಕ್ಕೆ ಪಾಂಡಿತ್ಯ ಅಡ್ಡಿ. ಅದು ಅಂತಹ ಮಾರ್ಗ ಎಂದು ತಿಳಿದದ್ದರಿಂದ ಪಾಂಡಿತ್ಯ ಮತ್ತು ವ್ಯವಹಾರವನ್ನು ಅವರು ಬೇಕೆಂದೇ ತಮ್ಮ ಬದುಕಿನಿಂದ ದೂರವಿರಿಸಿದ್ದರು. ರಾಜಕಪೂರ್, ಬಲರಾಜ್ ಸಹಾನಿ, ಉತ್ಪಲದತ್ ಇವರೆಲ್ಲ ಸ್ವಯಂ ಮೇಧಾವಿಗಳು, ದೇಶ-ವಿದೇಶ ಸುತ್ತಿದವರು, ವ್ಯವಹಾರ ಬಲ್ಲವರು ಇವರ ಈ ಯಾವ ತಯ್ಯಾರಿಗಳೂ ರಾಜಕುಮಾರ್ ಎಂಬ ಸರಳ ಜೀವಿಯ ಹಿಂದೆ ಇರಲಿಲ್ಲ. ಅವರು ಜನಸಾಮಾನ್ಯರ ಆಶೀರ್ವಾದವನ್ನು ನಂಬಿ, ಅವರನ್ನು ತಮ್ಮ ದೇವರಾಗಿಸಿಕೊಂಡು, ತಮ್ಮನ್ನು ಸಾಧ್ಯವಾದಷ್ಟು ದೇವರ ಪಾತ್ರಗಳಲ್ಲಿ ತೊಡಗಿಸಿಕೊಂಡು, ತುತ್ತಿನ ಚೀಲ ತುಂಬಿಸಿಕೊಂಡ ಸಾಮಾನ್ಯ ಮನುಷ್ಯ. ಬೆವರಿನ ಸಂಸ್ಕತಿಯ ಸಾಂಸ್ಕತಿಕ ನಾಯಕ.
 ಖಂಡಿತವಾಗಿಯೂ ರಾಜ್ ಚಿತ್ರಗಳಿಂದ ಸಾಮಾಜಿಕ ಕ್ರಾಂತಿ, ಚಳುವಳಿಗಳಾಗಲಿಲ್ಲ. ಆದರೆ ಸಾಮಾನ್ಯ ಬದುಕುಗಳಲ್ಲಿ ಪರಿವರ್ತನೆಗಳಾಗಿವೆ. ಒಂದು ದೀಪದಂತೆ ಉರಿದ ರಾಜಕುಮಾರ್ ಒಂದಿಷ್ಟು ಆಯತಪ್ಪಿ ಉರುಳಿದ್ದರೆ ಉರಿ ಹಚ್ಚಬಹುದಿತ್ತು. ಆದರೆ “ನಾನೂ ಬೆಂಕಿ ಹಚ್ಚಬಲ್ಲೆ” ಎಂಬ ಎಲ್ಲ ಎದೆಗಾರಿಕೆ ಇದ್ದೂ ಅವರು ನೆಮ್ಮದಿಯಿಂದ ಬೆಳಗಿದ ‘ನಂದಾದೀಪ’ವಾದರು.
         ಊಟ ಮಾಡಿ ಸಾಬೂನಿನಿಂದ ಕೈ ತೊಳೆದರೆ ಅನ್ನದಾತನ ನೆನಪು ಮಾಸೀತು, ಹೆಚ್ಚು ಮಾತಾಡಿದರೆ ನಿರ್ದೇಶಕರ ಮನ ನೊಂದೀತು, ಟ್ಯಾಕ್ಸ್ ಕಟ್ಟದಿದ್ದರೆ ಸಾಮಾಜಿಕ ಹಾನಿಯಾದೀತು, ಕೆಟ್ಟ ಪಾತ್ರಗಳಲ್ಲಿ ಅಭಿನಯಿಸಿದರೆ ಸಮಾಜಕ್ಕೆ ತಪ್ಪು ಸಂದೇಶ ಹೋದೀತು ಎಂಬ ಸಣ್ಣಸಣ್ಣ ತಿಳಿವಳಿಕೆಗಳೊಂದಿಗೆ ಸದಾ ಅರಿವಿನ ಬಾಳನ್ನು ಬಾಳಿದ ರಾಜ್ ಚಿತ್ರಗಳಿಂದ ಯಾವ ಸಾಮಾಜಿಕ ಲಾಭಗಳೂ ಆಗಲಿಲ್ಲ ಎನ್ನುವ ಚರ್ಚೆಗಳು ನಮ್ಮ ಬುದ್ಧಿ ಮತ್ತು ಭಾವದಾರಿದ್ರ್ಯಕ್ಕೆ ಹಿಡಿದ ಕನ್ನಡಿ.


No comments:

Post a Comment