ಡಬ್ಲ್ಯೂ.ಎಸ್.ಲ್ಯಾಂಡರ್ ಇಂಗ್ಲೀಷನ
ಅಪರೂಪದ ಕವಿ. ಕಾವ್ಯದಲ್ಲಿ ಕಾಲುದಾರಿಯನ್ನು ಅರಸುವವರಿಗೆ ಆತ ಸಿಗಬಹುದು. ನಾಲ್ಕೇ ನಾಲ್ಕು ಸಾಲುಗಳ
ಒಂದು ಕವಿತೆಯನ್ನು ಆತ ಬರೆದಿದ್ದಾನೆ. ಅದರ ಕೊನೆಯ ಎರಡು ಸಾಲುಗಳು –
“I warmed both bands before the fire of life
It sinks and I am ready to depart”
ಇವು ನನಗೆ ಅತ್ಯಂತ ಪ್ರೀತಿಯ ಸಾಲುಗಳು. ಕಾರಣವಿಷ್ಟೆ, ವಿದಾಯದ ಅಂಚಿನಲ್ಲಿರುವ
ಪ್ರೀತಿ, ಬದುಕು ಅಥವಾ ಉಸಿರು ಯಾವುದೂ ಆಗಬಹುದು, ಅದೆಲ್ಲವೂ ಒಂದು ಕ್ಷಣ ಬೆಚ್ಚನೆಯ ಹೊದಿಕೆಗಳ ಹೊದ್ದು
ಜೀವನದ ಕಿಚ್ಚಿಗೆ ಕೈಒಡ್ಡಿ, ವಿದಾಯದ ಸಂಭ್ರಮಾಚರಣೆಯಲ್ಲಿರುವಂತೆ ಕಾಣಿಸುತ್ತವೆ.
ಇಂಥದೇ ಒಂದು ಸಂದರ್ಭ ಜೂನ್ 8, ನನ್ನ ಪೂಜ್ಯ ತಂದೆ 74ಕ್ಕೆ, ಜೂನ್ 18 ನನ್ನ ಗುರು
ಬಂಧು ಚಂಪಾ 75ಕ್ಕೆ, ಪಾದಾರ್ಪಣೆ ಮಾಡುವ ಸಂದರ್ಭ. ಈ ಓಟದ ಬದುಕಿನಲ್ಲಿ ಒಂದಷ್ಟು ಸಮಯಾವಕಾಶ ಮಾಡಿಕೊಂಡು
ಕುಟುಂಬ ಸಮೇತನಾಗಿ ಧಾರವಾಡದ ನಮ್ಮ ಮನೆ ‘ಮಲ್ಲಿಗೆ’ಯಲ್ಲಿ ಟಿಕಾಣಿ ಹೂಡಿದೆ. ದಿನಕ್ಕೆ ಮೂರು ಹೊತ್ತು
ಲಿಂಗಪೂಜೆ, ತಮ್ಮನ ವ್ಯಾಪಾರದಲ್ಲಿ ಒಂದಿಷ್ಟು ಆಸಕ್ತಿ, ಉಳಿದಂತೆ ಮೊಮ್ಮಗಳು ‘ತರಂಗಿಣಿ’ಯೊಂದಿಗೆ
ಅರ್ಥವಿಲ್ಲದ, ಸ್ವಾರ್ಥವಿಲ್ಲದ ಸುಮ್ಮ-ಸಮ್ಮಾನದ ಮಾತುಗಳು. ಇದು ಅವರ ದಿನಚರಿ. ಈ ದಿನಚರಿಯಲ್ಲಿಯೇ
ನನಗೆ ಅರ್ಥವಾಗುತ್ತಾನೆ ಕವಿ ಲ್ಯಾಂಡರ್ ಹಾಗೂ ಅವನ ಕವಿತೆ.
ನಾನು ಹೋದ ದಿನ ಸುಮ್ಮನೆ ಅವರ ಪ್ರೀತಿಯ ವಸ್ತುಗಳಲ್ಲಿ ಕೈಯಾಡಿಸುತ್ತಿದ್ದೆ. ಏನೆಲ್ಲ
ಸಿಕ್ಕವು. ಎಲ್ಲಕ್ಕೂ ಮಿಗಿಲಾಗಿ ಕೆಲವು ಕವಿತೆ ಸಿಕ್ಕವು. 20ಕ್ಕೆ ಮನುಷ್ಯ ಕವಿಯಾಗುವುದು ಗೊತ್ತು,
ಆದರೆ 70ಕ್ಕೂ ಕವಿಯಾಗುವುದು!!! ಕಾವ್ಯ ಉಳಿಯುವುದು! ಉಳಿದುದನ್ನು ಉಣಿಸುವುದು! ಇದು ಹೃದಯ ಸೌಂದರ್ಯವಿರುವವರಿಗೆ
ಮಾತ್ರ ಸಾಧ್ಯವಾಗುವ ಕೆಲಸ. ಈ ಸೌಂದರ್ಯ, ಶಿಸ್ತು, ಸಹೃದಯತೆ ನನ್ನ ತಂದೆಗೆ ಇದೆ ಎನ್ನುವುದೇ ನನಗಿರುವ
ಸಾತ್ವಿಕ ಸೊಕ್ಕು.
ಇಂದು ಏನಾದರೂ ಒಂದಿಷ್ಟು ಕಠೋರತೆ, ಬದ್ಧತೆ
ಮತ್ತು ಬರಹ ನನ್ನಲ್ಲಿ ಉಳಿದಿದ್ದರೆ ಅದರ ಒಟ್ಟು ಶ್ರೇಯಸ್ಸು ಈ ನನ್ನ ತಂದೆಗೇ ಸಲ್ಲಬೇಕು. ಇವರ ಕುರಿತು
ಬರೆದಿದ್ದೇನೆ. ಇನ್ನೂ ಬರೆಯಬೇಕಾದುದೂ ಇದೆ. ಈಗ ಒಂದೇ ಮಾತು ನನ್ನ ಪಾಲಿಗೆ ಇವರು ಒಂದು ಸಮಗ್ರ ಸಮುದ್ರದಂತೆ, ‘Every existence would exist
in him’.
75ರ ಚಂಪಾ ಅವರ ಅಪ್ರಕಟಿತ ಕಾವ್ಯಸಂಕಲನ ‘ಒಂದು ಎಲೆ’ ನನ್ನ ತಲೆಯಲ್ಲಿದೆ. 75ರ
ಗುರುಗಳಾದ ಡಾ. ಆರ್.ಕೆ.ಕುಲಕರ್ಣಿಯವರ ‘ಕಾಲ ಮಿಮಾಂಸೆ’ ಹಾಗೂ ಕೆಲವು ಕವಿತೆಗಳ ಕರುಡು ನನ್ನ ಟೇಬಲ್
ಮೇಲಿವೆ. ನನ್ನ ತಂದೆಯ ಕವಿತೆಗಳು ಕಬರ್ಡಿನಲ್ಲಿ ಕಣ್ಣು ಮಿಟುಕಿಸುತ್ತಿವೆ ಎನ್ನುವುದು ಬರೀ ನನ್ನ
ಸಂಭ್ರಮವಾಗಬೇಕಿಲ್ಲ, ಇದು ನಿಮ್ಮದು ಅಥವಾ ನಮ್ಮೆಲ್ಲರದೂ ಆಗಬೇಕಾದದ್ದು. ಯಾಕೆಂದರೆ ಎಲ್ಲ ಅಳಿದಾಗಲೂ
ಉಳಿಯುವುದು ಕಾವ್ಯ.
ಕವಿತೆ ಕಾಗದವಲ್ಲ, ಅದು ಉಸಿರು, ನಮ್ಮ
ಕಣ್ಣು-ಕಲ್ಪನೆಗಳ ಹಸಿರು.
ಕವಿತೆಯನ್ನು ಹೆರುವ-ಹಾಡುವ ತಂದೆ-ಗುರು ಸಿಗುತ್ತಾರೆ. ಅವರ ಅವಸಾನದ ನಂತರ ಆ ಕಾವ್ಯವನ್ನು
ಮುಂದೊರೆಸುವ, ಹಂಚಿಕೊಳ್ಳುವ ಶಿಷ್ಯ-ಮಕ್ಕಳು ಸಿಗುತ್ತಾರೆ ಎನ್ನುವುದು ಎಲ್ಲ ಕಾಲಕ್ಕೂ ಸಾಧ್ಯವಾಗಿಲ್ಲ.
ಅದಕ್ಕೂ ಪುಣ್ಯ ಬೇಕು. ಯಾಕೆಂದರೆ ಯಾರೊಂದಿಗೆ ಏನನ್ನು ಹಂಚಿಕೊಳ್ಳಬೇಕು? ಎನ್ನುವ ಪ್ರಶ್ನೆಯಲ್ಲಿಯೇ
ಜನಾಂಗಗಳು ನಶಿಸಿ ಹೋಗಿವೆ. ಭೌತಿಕ ಆಸ್ತಿ ವಿಲೇವಾರಿಯಲ್ಲಿಯೇ ನಮ್ಮನ್ನು ಸೃಷ್ಠಿಸಿದ ಅಸ್ತಿಗಳ ಅರಿಯದೇ
ಹೋಗಿದ್ದೇವೆ. ಸಾವಿನ ಮನೆಯಲ್ಲಿ ವಸ್ತುಗಳು ಸೇರಿಸಿ ಮಡಿಕೆ-ಕುಡಿಕೆಗಳ ಬಟವಾರಿ ಮಾಡುತ್ತಿರುತ್ತಾರೆ.
ಎಂಥ ಹೇಸಿಗೆಯಲ್ಲವೆ? ಆದರೆ ಇದರಿಂದ ಹೊರತಾಗಿ ಆಲೋಚಿಸಿದವರೂ ಇದ್ದಾರೆ. ಇಲ್ಲೊಂದು ಉದಾಹರಣೆ ನೋಡಿ.
ನಮ್ಮ ಕನ್ನಡ ಚಲನಚಿತ್ರರಂಗದಲ್ಲಿ ಆರ್ಟ್ ಡೈರೆಕ್ಟರ್ ಎಂದೇ ಖ್ಯಾತರಾದ ನಮ್ಮ ಜಿ.ಕೃಷ್ಣಮೂರ್ತಿ
ಯಾರಿಗೆ ಗೊತ್ತಿಲ್ಲ? ಅವರು ಕನ್ನಡ, ತಮಿಳು, ತೆಲಗು, ಮಲೆಯಾಳಿ ಹೀಗೆ ದಕ್ಷಿಣ ಭಾಷೆಗಳಲ್ಲಿ ಒಟ್ಟು
90 ಚಿತ್ರಗಳನ್ನು ಮಾಡಿದವರು. ಜಿ.ವಿ. ಅಯ್ಯರ ಅವರ ಅಳಿಯ. ಬೆಂಗಳೂರಿನ ನನ್ನ ಅತ್ಯಂತ ಅಪರೂಪದ ಪ್ರೀತಿಯ
ಗೆಳೆಯ. ಅವರ ಶ್ರೀಮತಿಯವರೂ ಅಷ್ಟೆ. ಮತಿವಂತೆ. ಇಬ್ಬರೂ ನನ್ನ ಭಾಷಣಗಳ ಅಭಿಮಾನಿಗಳು. ಸಭೆಗಳಲ್ಲಿ
ಸಿಕ್ಕಾಗಲೆಲ್ಲ ತಮ್ಮ ಮನೆಗೆ ಬರಲು ನಮಗೆ ಹೇಳುತ್ತಿದ್ದರು, ನಾನು ‘ಹೂಂ’ ಎಂದು ಜಾರಿಕೊಳ್ಳುತ್ತಿದ್ದೆ.
ಈ ಬಾರಿ ಹಾಗಾಗಲಿಲ್ಲ. ಒಂದಿಷ್ಟು ನಮ್ಮ ಕಛೇರಿಗೆ ಮೋಸಮಾಡಿ ನಾನು, ಪದ್ದು ಮೂರ್ತಿಯವರ
ಮನೆಗೆ ಹೋದೆವು. ಬೆಂಗಳೂರಿನಲ್ಲಿಯೂ ಇಂಥ ಸಂಭ್ರಮದ ಜನರಿರುತ್ತಾರೆಯೆ? ಎನ್ನುವಂಥ ಆತಿಥ್ಯ ಅವರದು.
ಅವರ ಮನೆಯೋ ಒಂದು ಮಿನಿ ಸ್ಟುಡಿಯೋ. ಅದರಲ್ಲಿ ಏನೇನು ಸಂಗ್ರಹಿಸಿದ್ದಾರೆ ಎಂದು ತಿಳಿಸುವುದಕ್ಕಾಗಿಯೇ
ನಾನೊಂದು ಪುಸ್ತಕ ಬರೆಯಬೇಕು. ಹೀಗೆ ನೋಡುತ್ತ, ಮಾತಾಡುತ್ತ ಕುಳಿತ ನಾವು ಉರುಳಿಸಿದ ಅಮಯ ಸಾಯಂಕಾಲ
5 ಗಂಟೆಯಿಂದ ರಾತ್ರಿ 9.30 ಗಂಟೆವರೆಗೆ. ಹೆಚ್ಚು-ಕಡಿಮೆ ಐದು ಗಂಟೆಗಳ ಸಮಯ.
ಈ ಮಧ್ಯ ನನ್ನ ಲಕ್ಷ ಅವರ ತಾಯಿಯ ಭಾವಚಿತ್ರದ
ಕಡೆಗೆ ಹೋಯಿತು. ಗ್ಲಾಸಿನ ಕಟ್ಟು ಹಾಕಿದ ದೊಡ್ಡ ಫೋಟೋ. ಅದರೊಳಗಡೆ ಏನೋ ಬಚ್ಚಿಟ್ಟಂತೆ, ದಿಟ್ಟಿಸಿ
ನೋಡಿದೆ, ಕೂದಲು!!! ಒಂದಿಷ್ಟು ಕೂದಲನ್ನು ಆ ಫೋಟೋದೊಳಗಿಡಲಾಗಿತ್ತು. ‘ಇದೇನು ಮೂರ್ತಿ ಸರ್’. ಎಂದೆ.
ನಗುತ್ತ ಮೂರ್ತಿ ಹೇಳಿದರು, ‘ನಮ್ಮಮ್ಮನಿಗೆ ನಾವು 6 ಮಕ್ಕಳು ಸಾರ್. ಅಮ್ಮ ಸತ್ತರು. ಎಲ್ಲರೂ ಅಮ್ಮನ
ಒಡವೆ, ಸೀರೆ ಎಲ್ಲವನ್ನು ಹಂಚಿಕೊಂಡರು. ಕೊನೆಗೆ ಅಮ್ಮನ ಮೈಮೇಲೆ ಒಂದು ತಾಳಿಸರವಿತ್ತು. ಅದರ ಮೇಲೂ
ಯಾರ್ಯಾರದೋ ಕಣ್ಣಿತ್ತು. ಹೆಣವಾದ ಅವಳ ಮೈಮೇಲಿಂದ ಅದನ್ನು ತೆಗೆಯುವಾಗ ಅಮ್ಮನ ತಲೆಯ ಒಂದಿಷ್ಟು ಕೂದಲು
ತಾಳಿ ಚೈನಿನೊಂದಿಗೆ ಬಂತು.
ಚಿನ್ನದ ಆಸೆ ಪಟ್ಟವರಿಗೆ ಚೈನು ಕೊಟ್ಟೆ,
ನನಗೆ ಬೇಕಾಗಿದ್ದ ನನ್ನಮ್ಮನ ತಲೆಯ ಕೂದಲು ತಂದು ನನ್ನ ಜೇಬೊಳಗಿಟ್ಟುಕೊಂಡೆ. ಕಾಲಾವಕಾಶ ಮಾಡಿಕೊಂಡು
ಅವಳ ಭಾವಚಿತ್ರದೊಂದಿಗೇ ಅವುಗಳನ್ನು ಸೇರಿಸಿ ಫ್ರೇಮ್ ಹಾಕಿಸಿದೆ. ಯಾಕೆಂದರೆ ಈ ಕೂದಲನ್ನೂ ಮಾರಿ ಕೆಲವು
ಬಾರಿ ಅವಳು ನನಗೆ ತಿಂಡಿ ಕೊಡಿಸಿದ ನೆನಪು.’
ಈ ಓದಿನಿಂದ ಈಗ ಕವಿತೆ ಘಟಿಸಿದೆ. ಮಾತು
ಬೇಡ ಅಲ್ವೇ?
No comments:
Post a Comment