Total Pageviews

Wednesday, July 1, 2015

ಉರಿದು ಹೋಯಿತು ಉಲ್ಕೆ



ಹರಿ ಇಲ್ಲದ ಈ ಅಂಬುಧಿಯೊಳಗೆ
ಹಳೆ ಕೋಪ ತಾಪಗಳ
ಕಡೆಯುವ ಕಡಗೋಲು ಇಲ್ಲದೆ
ನೀರ ನಭದ ಮೇಲೆ
ಮಳೆಯ ಚಪ್ಪರ ಹಾಕಿ
ತಣ್ಣಗಾಗಿಸಲೆತ್ನಿಸಿದರೂ
ತಿಳಿಹೇಳಿ ಮನ್ನಿಸಿದರೂ
ಮತ್ತೇ ಉರಿಯುತ್ತದೆ ಒಡಲು
ಜಗದೊಳಗೆ ಇದ ತಣ್ಣಗಾಗಿಸಲು
ಎಲ್ಲಿಯಾದರೂ ಇರಬಹುದೆ ಕಡಲು?
      ಇದು ಪ್ರಶ್ನೆ ಇಂದಿನದಲ್ಲ. ಕಳೆದ ಒಂದು ವರ್ಷದ್ದು, ಮೌನವಾಗಿದ್ದಷ್ಟೂ ಮಾತನಾಡುವ ಮನಸು. ಅದು ಬುದ್ಧನಿಗೆ ಸಿದ್ಧವಾಗಲಾರದೇ? ದೊಡ್ಡ ಪ್ರಶ್ನೆ ಕಳೆದ ಒಂದು ವರ್ಷದಿಂದ. ಸಿದ್ಧವಾಗುತ್ತಲೇ ಇರುವ ಮನಸ್ಸಿಗೆ ಯಾವುದೋ ಒಂದು ಪರಿಹಾರದ ದಾರಿ ಬೇಕಿತ್ತು. ಅದನ್ನು ಹುಡುಕುತ್ತಲೇ, ಹುಡುಕುತ್ತಲೇ ಹುಡುಕುತ್ತಲೇ ಇದ್ದೆ. ಹಳೆಯ ಹಾಡನ್ನು ಹಾಡಲೇಬಾರದೆನ್ನುವ ಇದೇ ಕಾರಣಕ್ಕಿರಬಹುದು, ನನ್ನ ಹಿಂದಿನ ವಾರದ ಬ್ಲಾಗ್‍ನ್ನು ನಾ ಪ್ರಕಟಿಸಲಿಲ್ಲ.
ನನಗೆ ಕೆಲವು ಹೊಸ ನಿರೀಕ್ಷೆ ಮತ್ತು ಭರವಸೆಗಳು. ಅವೆಲ್ಲಾ ಈಡೇರಿ ಮತ್ತೆ ಧನ್ಯತೆಯ ಭಾವದೊಂದಿಗೆ ಬೇಲೂರಿಗೆ ಹೋಗಿ ಚೆನ್ನಕೇಶವನಿಗೆ ಥ್ಯಾಂಕ್ಸ್ ಹೇಳಿ ಬರಬೇಕೆನ್ನುವ ನನ್ನ ಧಾವಂತದಲ್ಲಿಯೇ ಎಷ್ಟೊಂದು ಪ್ರೀತಿಯ ಕಾಲ್ಬಳ್ಳಿಗಳು! ನಮ್ಮ ಶಬ್ಧಗಳ ಮೂಲಕ ಹಣತೆ ಹಚ್ಚಿಕೊಳ್ಳುವ ನಮ್ಮ ಬರಹವೆಂಬ ಬಳ್ಳಿಗೆ ಎಂಥಾ ಅದ್ಭುತ ಹೂ ಹಣ್ಣುಗಳು! ಈಗ ನಾನು ಸಂಭ್ರಮದಿಂದಿದ್ದೇನೆ. ಅವರು ಸಮಾಧಾನದಿಂದಿದ್ದಾರೆ.
        ಕೊಡಗಿನಲ್ಲಿ ಗಾರೆ ಕೆಲಸ ಮಾಡುವ ಒಬ್ಬ ವ್ಯಕ್ತಿ, ನನ್ನ ಸಂಯುಕ್ತ ಕರ್ನಾಟಕದ ಅಂಕಣ “ಕಾವ್ಯಕ್ಕೆ ಉರುಳು”ವಿನ ದೊಡ್ಡ ಅಭಿಮಾನಿ. ಅವನ ಬದುಕನ್ನೇ ಬದಲಾಯಿಸಿದ ನನ್ನ ಒಂದು ಅಂಕಣ “ಮಾಂಟೋ ಮುಸ್ಸಂಜೆ ಮತ್ತು ಮದಿರೆ”.
ಈ ಲೇಖನ ಓದುವುದಕ್ಕೂ ಪೂರ್ವ ಈ ನನ್ನ ಗೆಳೆಯ ಕುಡಿತಕ್ಕೆ ಬಲಿಯಾಗಿ, ಅಕ್ಕ-ಅಣ್ಣಂದಿರಿಂದ ದೂರಾಗಿ, ತಾಯಿ-ಹೆಂಡತಿಯ ಮೂದಲಿಕೆಗೆ ಮುದುಡಿ ಒಂಟಿಯಾಗಿದ್ದರಂತೆ. ಆದರೆ ಈ ಎಲ್ಲ ಸಂದರ್ಭದಲ್ಲಿಯೂ ಓದನ್ನು ಬಿಟ್ಟಿರದ ಈ ನನ್ನ ಗೆಳೆಯನಿಗೆ ಅದೇ ಬೆಳಕಿನ ಹಾದಿಯಾಯಿತು. ಒಂದು, ಒಂದೇ ಒಂದು ಲೇಖನ ಹಿಂದಣ ಹಂಗು ಹರಿಸಿ, ಹೊಸ ಬಾಳಿಗೆ ಕಾರಣವಾಯಿತು. ಅಂದಹಾಗೆ, ಇವರ ಹೆಸರು ಸ್ವಾಮಿ. ರವಿವಾರದ ಸಂಯುಕ್ತ ಕರ್ನಾಟಕ ಇವರ ಸಂಜೀವಿನಿ. ಸಕಾಲಕ್ಕೆ ಕೆಲವೊಮ್ಮೆ ಸಿಗದೇ ಇದ್ದಾಗ ಯಾರೋ ಓದಿದ 5 ರೂಪಾಯಿಯ ಪತ್ರಿಕೆಯನ್ನು 10 ರೂ ಕೊಟ್ಟು ಓದಿದ ಉದಾಹರಣೆಗಳೂ ಇವೆ. ಈ ಅವರ ಹುಚ್ಚು ಪ್ರೀತಿ, ನಿವ್ರ್ಯಾಜ್ಯ ಹಂಬಲ ಅವರನ್ನು ಇತ್ತೀಚೆಗೆ ನನ್ನೆಡೆಗೆ ಕರೆತಂದಿತ್ತು.
       ಬೆಂಗಳೂರಿನ ಟ್ರಿನಿಟೀ ಆಸ್ಪತ್ರೆಯಲ್ಲಿ ಕೆಲಸಮಾಡುವ, ವಯಸ್ಸಿಗೆ ಬಂದ ಅಕ್ಕಳ ಮದುವೆಯ ಲಗ್ನಪತ್ರದ ಮೊದಲ ಪ್ರತಿ ತೆಗೆದುಕೊಂಡು ಅವರು ನನ್ನ ಕಚೇರಿಗೆ ಬಂದಿದ್ದರು. ವರ್ಷಗಳ ತಮ್ಮ ಕುಡಿತದಿಂದ ಹೊರಬಂದು, ಅವರು ಮಾಡಿದ ಮೊದಲ ಶುಭಕಾರ್ಯ. ಹೀಗಾಗಿ ಸ್ವಾಮಿಯವರ ತಾಯಿ ಮೊದಲ ಪತ್ರಿಕೆಯನ್ನು ನನಗೇ ಕೊಡಲು ಹೇಳಿ ಬೆಂಗಳೂರಿಗೆ ಕಳುಹಿಸಿದ್ದರು. ಎಲ್ಲೆಲ್ಲೋ ಹುಡುಕಾಡಿ ಬಂದಿದ್ದ ಅವರನ್ನು ನೋಡಿ ಮಾತು ಮೌನವಾಯಿತು. ತಕ್ಷಣ ಅವರನ್ನು ನಮ್ಮ ಎಂ.ಎಸ್ ಬಿಲ್ಡಿಂಗ್ ಆವರಣದಲ್ಲಿರುವ ದೇವಾಲಯಕ್ಕೆ ಕರೆದೊಯ್ದು, ದೈವಸಾಕ್ಷಿಯಾಗಿ ಲಗ್ನಪತ್ರಿಕೆ ಸ್ವೀಕರಿಸಿ, ಹರಸಿ ಅವರನ್ನು ಕಳುಹಿಸುವಾಗ ನನ್ನ ಶಬ್ಧಗಳ ಬಗೆಗೆ ನನಗೆ ಅಭಿಮಾನ. ಒಳಗೊಳಗೇ ನನ್ನ ಕುರಿತು ನನಗೇ ಒಂದಿಷ್ಟು ಬೇಸರವೂ ಕೂಡಾ. 
        ಅಂಥದೇ ಮತ್ತೊಂದು ಬೆಳವಣಿಗೆ ವಾಸುದೇವ ನಾಡಿಗರದ್ದು. ನನಗಿಂತಲೂ ಒಂದುವರ್ಷ ಹಿರಿಯರು. ನನ್ನ ಕಾಣಲು, ಕೂಡಿ ಗಂಟೆಗಟ್ಟಲೇ ಮಾತಾಡಲು, ನನ್ನ ಪ್ರತೀ ಅಂಕಣಕ್ಕೆ ಪ್ರತಿಕ್ರಿಯಿಸಲು ಮುಂಚೂಣಿಯಲ್ಲಿರುವವರು. ಸ್ವತಕ್ಕೆ ಅದ್ಬುತ ಕವಿ. ಅವರ “ವಿರಕ್ತರ ಬಟ್ಟೆಗಳು” ಹಾಗೂ “ನಿನ್ನ ಧ್ಯಾನದ ಹಣತೆ” ನನ್ನ ಪ್ರೀತಿಯ ಸಂಕಲನಗಳು. ಅವರ ಕಾವ್ಯ ಪ್ರತಿಭೆಗೊಂದು ಸಾಕ್ಷಿ ಈ ಪದ್ಯ_
ಸಖಿ
ನೀನು ಹೊರಟ ಆ ದಿನ ಬೆಳಗಾಗಲೇ ಇಲ್ಲ
ಇಡಿ ಇರುಳಿಡೀ ಅತ್ತ ಸೂರ್ಯನ
ಕಂಬನಿ ಮಂಜಾಗಿತ್ತು
ಎಷ್ಟು ದೀರ್ಘ ಆ ಇರುಳು?
ನೆನಪಿನ ಇಬ್ಬಾಯ ಕತ್ತಿ ಕರುಳ ತುಂಬಾ
ಹರಿದಾಡುತಿತ್ತು

ನನ್ನ ಕೊಳಲಿಗೆ ಅಂಟಿಕೊಂಡಿದ್ದ
ನಿನ್ನ ಹೆರಳ ಎಳೆಯೊಂದು
ಬರುವ ನಾದದೊಳಗೆ ಕಂಪಿಸಿ
ಹೊರಟ ಗೀತೆಯ ತುಂಬ ಇರದ ಭಾವ
ಸಂಜೆ ಧೂಳಿನ ತುಂಬ ತೇವ
ಗೋವುಗಳ ಕಣ್ಣಿಂದ ತೊಟ್ಟಿಕ್ಕಿದ ನೀರು

ಗೊತ್ತಿಲ್ಲ ಸಖಿ
ಬೆಣ್ಣೆಯ ನಡುವೆಯೂ ಮುಳ್ಳೆ?
 ಉತ್ತರ ಭಾರತದ ಝಾನ್ಸಿಯಿಂದ ಬಂದು, ಇದುವರೆಗಿನ ನನ್ನ ಎಲ್ಲಾ ಪುಸ್ತಕಗಳನ್ನು “ಸಪ್ನ”ದಿಂದ ಕೊಂಡೊಯ್ದು, ಈಗ ಅವರು ಪ್ರತಿಕ್ಷಣ ಪ್ರತಿಕ್ರಿಯಿಸುತ್ತಿರುವ ರೀತಿಗೆ ನಾನು ನನ್ನನ್ನೆ ಮತ್ತೆ ಮತ್ತೆ ಚಿವುಟಿ ನೋಡಿಕೊಳ್ಳುತ್ತಿದ್ದೇನೆ. ನನ್ನೊಳಗಿನ ಶಬ್ಧ ಸರಸ್ವತಿಯ ಘನಗಂಭೀರ ಮೌನಕ್ಕೆ ಸಮರ್ಪಿಸಿಕೊಂಡಿದ್ದೇನೆ.
       ಇದೇ ಮಾದರಿಯ ಮತ್ತೆರಡು ಉದಾಹರಣೆಗಳು. ಒಂದು ಬೀದರ ಜಿಲ್ಲೆಯ ಅವರಾದಿ ತಾಲೂಕಿನ ಭಾನುದಾಸ ಅವರದು. ಮತ್ತೊಂದು ಆರ್.ಸಿ.ಎಂ ಮಾರ್ಕೆಟ್‍ನ ಉದಯ ಅವರದು. ಮನೆಗೆ ಕಿರಾಣಿ ಅಂಗಡಿಯಿಂದ ಬೆಲ್ಲ ತಂದ ಭಾನುದಾಸರಿಗೆ ನನ್ನ ಅಂಕಣ ಶಾಮ್-ಎ-ತಬ್ರೀಜಿಯ “ಪ್ರೀತಿ ನಲತ್ತು ರೀತಿ” ಓದಲು ಸಿಕ್ಕಿ, ನನ್ನೊಂದಿಗಿನ ಸಂಬಂಧಕ್ಕೆ ಕಾರಣವಾದರೆ, ಉದಯರಿಗೆ ಮಾಕ್ರ್ಸ ಕುರಿತಾದ ನನ್ನ ಬರಹ “ಮನುಷ್ಯ ಗುಲಾಮನಾಗಿದ್ದಾನೆ” ಎಂಬ ಲೇಖನ ಕಾರಣವಾಗಿದೆ. ಒಟ್ಟಾರೆ ಒಂದು ವರ್ಷದ ನನ್ನ “ಕಾವ್ಯಕ್ಕೆ ಉರುಳು” 63ನೇ ಕಂತು ತಲುಪಿ, ನಿಮ್ಮ ಓದಿನ ಅವಿಭಾಜ್ಯ ಅಂಗವಾಗಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ. ಹೀಗೆ ಬರೆಯಿಸಿದ ನಿಮಗೇ ಅದರ ಶ್ರೇಯ ಸಲ್ಲಬೇಕಲ್ಲವೇ?
     ನಾನು ಕ್ರಮಿಸಿದ ದಾರಿಗೆ ವಿಶ್ವ ಚೇತನ ಬುದ್ಧ ಎಜುಕೇಷನಲ್ ಟ್ರಸ್ಟ್‍ನವರು “ಬುದ್ಧ ಶಾಂತಿ ಪ್ರಶಸ್ತಿ”ಯನ್ನು ನೀಡಿ ಗೌರವಿಸುತ್ತಿದ್ದಾರೆ. ಮತ್ತೊಂದೆಡೆ ಪ್ರೀತಿಯ ಗೆಳೆಯರು ಕರೆದು ಗತಿಸಿ ಹೋದ ಕವಿಯೊಬ್ಬನ ಕುರಿತು ಮಾತನಾಡಲು ಹೇಳಿದ್ದಾರೆ. ಎದೆಯಲ್ಲಿ ‘He sold himself a handful of coins’ಎನ್ನುವ ಆಂಗ್ಲ ಕವಿಯೊಬ್ಬ ತನ್ನ ಸಮಕಾಲೀನ ಕವಿಯನ್ನು ಕುರಿತು ಆಡಿದ ಎಚ್ಚರಿಕೆಯ ಮಾತು ಸದಾ ಕಾಡುತ್ತಿರುತ್ತದೆ. ಅಂತೆಯೇ ಈ ಜಾತ್ರೆಯಿಂದ ಜಾರಿಕೊಂಡು ನಾನೀಗ ಮತ್ತೆ ಕವಿತೆಯಾಗಲು ಹೊರಟಿದ್ದೇನೆ. ಮತ್ತೆ ಆ ನಿತಾಂತತೆ ಲಭಿಸಿದೆ ನನಗೆ. ಬರುವ ವಾರ ಅಪರೂಪದ ಕವಿಯೊಬ್ಬನ ಸ್ಮರಣೆಗೆ ನನ್ನದೇ ಮಾತಿನ ತೋರಣ. ಮುಂದಿನ ವಾರ ಅವನ ಕಥೆ ಹೇಳುತ್ತೇನೆ. ಈ ವಾರ ಮಾತ್ರ ಅವನ ಕವಿತೆಯ ಒಂದು ನಮೂನೆ ನಿಮ್ಮ ಮುಂದಿಡುತ್ತೇನೆ.    
ತೆರೆದಿದೆ
ಎತ್ತಲೋ ಶೂನ್ಯದೃಷ್ಟಿ
ಯಾರಿವಳು? ಅವಳು ಹೆಣ್ಣು!
ಹೆಣ್ಣಿನ ವಿಕೃತ ರೂಪ!!

ಈಟ್, ಡ್ರಿಂಕ್, ಬಿ ಮೆರ್ರಿ
ಇದು ಅವಳ ಜೀವನದ ಪರಮ ಗುರಿ
ಕೈ ಹಿಡಿದವನನ್ನು ದೂರ ಸರಿಸಿ
ನಾಯಿ ಪ್ರೇಮದ ಪರಿಪಾಠವಾಯಿತು
ಕ್ರಯತೆತ್ತ ಕೊರಮರೆಲ್ಲ ಮೈ ಏರಿ
ತೃಪ್ತಿಯಿಂದ ತೇಗಿದರು

ಈಗ-
ಉಂಡು ಬೀಸಾಕಿದ ಎಂಜಲೆಲೆ ಇದು
ರುಚಿಯಾದ ತೆಂಗಿನಲಿ ಉಳಿದುದು ಬರೀ ಪರಟೆ
ನೀಲವೇಣಿ ಬಳ್ಳುಳ್ಳಿ ತರುಬಾಗಿ
ಪೆರ್ಮೊಲೆ
ಪಪ್ಪಯಿಯಂತೆ ಇಳಿಬಿದ್ದು
ಸಿಂಹಕಟಿಯೂ ಇಲ್ಲ ಎಲ್ಲ ಕರಟು
ಬಿದ್ದ ಪುಷ್ಪಕ್ಕೆ ಯಾವ ದುಂಬಿಯೂ ಇಲ್ಲ.

ಉರಿದು ಹೋಯಿತು ಉಲ್ಕೆ
ಭೂಮಿಯ ಮೇಲೆಲ್ಲ ಚಲ್ಲವರೆದಿದೆ ಬೂದಿ
ಬೂದಿಯ ಪುಣ್ಯಕ್ಕೆ ಭಗೀರತನಿಲ್ಲ

ಓ ಹೆಣ್ಣೆ:
ದೇವನ ಸುಂದರ ಸೃಷ್ಟಿ ನೀನು
ರೋದಿಸಿದವು ನಿನ್ನ ನೋಡಿ ಬುವಿ ಭಾನು






No comments:

Post a Comment