Total Pageviews

Thursday, August 27, 2015

ಅವಳು ಗುಪ್ತಗಾಮಿನಿ



 ಬೆಂಗಳೂರಿನಲ್ಲಿ ಅಂದು ಮಳೆಯಿತ್ತು. ನಾನು ನಿವೇದಿತಾಳೊಂದಿಗೆ ಸಂಕ್ರಮಣದ ಸಂಜೆಗೆ ಸಾಕ್ಷಿಯಾಗಲೇಬೇಕಿತ್ತು. ಈಗ ಚಂಪಾ ಅವರಿಗೆ ಎಪ್ಪತ್ತೈದು. ಅದಷ್ಟೇ ನಿಮಿತ್ಯವಲ್ಲದಿದ್ದರೂ ಕೂಡ ಅದೂ ಒಂದು ನಿಮಿತ್ಯವೆ. ಹೀಗಾಗಿ ಗೆಳೆಯ ಶ್ರೀ ನೇ.ಭ.ರಾಮಲಿಂಗಶೆಟ್ಟಿ ಕನ್ನಡ ಸಾಹಿತ್ಯ ಪರಿಷನ್ಮಂದಿರದ ಪಂಪ ಸಭಾಂಗಣದಲ್ಲಿ ಚಂಪಾರೊಂದಿಗೊಂದು ಸಂವಾದ ಕಾರ್ಯಕ್ರಮವೇರ್ಪಡಿಸಿ ಬಿ.ಟಿ ಲಲಿತಾ ನಾಯಕ, ಕಾ.ವೆಂ.ಶ್ರೀನಿವಾಸಮೂರ್ತಿ, ರವೀಂದ್ರ ರಶ್ಮಿ, ಪಿ.ಪಿ.ನಾರಾಯಣ, ಕೆ.ರಾಜಕುಮಾರ್, ಮನು ಬಳಿಗಾರ, ಪಾನ್ಯ ನಟರಾಜ್ ಹಾಗೂ ನನ್ನನ್ನು ಸಂವಾದಿಗಳನ್ನಾಗಿ ಸ್ವಾಗತಿಸಿದ ಏಳೂವರೆ ದಶಕಗಳ ಅವರ ಹೋರಾಟದ ಬಾಳಿನ ಕೆಲವು ಪುಟಗಳನ್ನು ನಾವೆಲ್ಲ ಮೆಲುಕು ಹಾಕುವಂತೆ ಮಾಡಿದ್ದರು. ಮಾತು ಸಾಕು ಸಾಕು ಸಾಕೆನ್ನುತ್ತಲೇ ಸಂವಾದಿಯಾದವನು ನಾನು.
ಬೇಡವೆನ್ನುತ್ತಲೇ ಬೆಂಗಳೂರಿಗೆ ಬರುವುದು, ಬಿಡಬೇಕೆನ್ನುತ್ತಲೇ ಬೀರು ಬಾಟಲ್‍ಗಳನ್ನು ಸಾಲುಸಾಲಾಗಿ ನಿಲ್ಲಿಸುವುದು, ಸುಮ್ಮನಿರಬೇಕೆನ್ನುತ್ತಲೇ ಸವಿಗನಸಿಗೆ ಸಂಗೀತ ಸಂಯೋಜಿಸುವುದು, ಸೋಲುವುದು, ಸವೆಯುವುದು, ಸತ್ತೆ, ಅಯ್ಯೋ ಸತ್ತೇ ಬಿಟ್ಟೆ ಬಿಟ್ಟುಬಿಡು ನನ್ನ ಎಂದು ಎಲ್ಲಿಂದಲೋ ಕೊಸರಿಕೊಂಡು ಓಡಿ ಬಂದು ಸತಿ ನೀಡಿದ ಸಮಾಧಾನದ ಮೊಸರಿನಲ್ಲಿ ಕಲ್ಲು ಹುಡುಕುವುದು, ಬೆಳಗಾಗುತ್ತಲೇ ಮತ್ತೆ ಹೊಸ ಸತ್ಯಕ್ಕೆ ಸಂವಾದಿಯಾಗುವುದು ಇದು, ಇದು, ಇದೇ ನನ್ನ ನಿತ್ಯ ಕತೆಯಾಯಿತೆ? ಎಂದೆಲ್ಲ ಯೋಚಿಸುತ್ತಲೇ ನಾನು ಸಂವಾದ ಸಮಾರಂಭದಲ್ಲಿ ಎಲ್ಲವನ್ನೂ ಗಮನಿಸುತ್ತಿದ್ದೆ. ಮನದ ಮೂಲೆಯಲ್ಲಿ ನನ್ನಂತೆಯೇ ಕಸಿವಿಸಿಗೊಂಡು ಸಂಕಟಪಟ್ಟು ಹಾಡಿದ ಗಾಲಿಬ್‍ನ ಮದಿರಾ ಪಾತ್ರೆಯಿಂದ ತೊಟ್ಟಿಕ್ಕುತ್ತಿದ್ದವು ಈ ಸಾಲುಗಳು –

O foolish heart, what has befallen you?
Do you not know and this sickness has no cure?

I long for her and she is weary of herself
O Lord above, tell me, whst does this mean?

I too possess a tongue like other men
If only you would ask me what I seek!
     ಹೌದು, ಸತ್ಯ. ಅವನಿಗಷ್ಟೆ ಗೊತ್ತು ನನ್ನ ಮತ್ತು ನಿಮ್ಮ ಹುಡುಕಾಟ.
ಚಂಪಾ ಅವರ ಸುತ್ತ ವಾದ, ಸಂವಾದ, ಪ್ರತಿವಾದಗಳೆಲ್ಲ ಗಂಟೆಗಳವರೆಗೆ ನಡೆದು ಕೊನೆಗೊಂದು ಚಂಪಾವಾದ ದಿನಾಂಕ: 11.08.2015 ರ ಸಂಜೆ ರೂಪಗೊಳ್ಳುತ್ತಿತ್ತು. ಗಾಲಿಬ್‍ನ ಕವಿತೆ ಸುತ್ತುಹೊಡೆಯುತ್ತಿದ್ದ ನನ್ನ ಅಲೆಮಾರಿ ಮನಸ್ಸು ಒಂದೆರಡು ಪ್ರಶ್ನೆಗಳಿಗಾಗಿ ತನ್ನ ಸರದಿಗಾಗಿ ಕಾಯುತ್ತಿತ್ತು. ಅವೇನು ಹೊಸ ಪ್ರಶ್ನೆಗಳೆ? ಖಂಡಿತವಾಗಿಯೂ ಅಲ್ಲ. ಹಾಗೆ ನೋಡಿದರೆ ಈ ಪ್ರಪಂಚದಲ್ಲಿ ಹೊಸ ಪ್ರಶ್ನೆಗಳೆಲ್ಲಿವೆ ಹೇಳಿ? ಎಲ್ಲ ಪುನರಾವರ್ತನೆಗಳೆ. ದಾಖಲಾಗುತ್ತಿರುವ ಪುಟಗಳು ಮಾತ್ರ ಹೊಸವು ಅಲ್ಲವೆ?
 ಹೊರಗಡೆ ಮಳೆ ನಿಂತು ಕತ್ತಲಾವರಿಸಿತು, ಒಳಗಡೆ ಮಾತು ತನ್ನ ಅಬ್ಬರದ ಉಬ್ಬರಿನಿಂದ ಇಳಿದು ತಣ್ಣಗಾಯಿತು. ಈಗ ನನ್ನ ಕಾರು ತತ್ತಲಲ್ಲಿ ಕವಿತೆಯ ಕೈ ಹಿಡಿದು ತರಿಕೆರೆಯತ್ತ ಓಡಲಾರಂಭಿಸಿತು. . . . .
 ಈ ಬದುಕು ಚಂಪಾರ ಶಾಲ್ಮಲೆಯಂತೆ. ಅವಳು ಗುಪ್ತಗಾಮಿನಿ, ಜನದನಿ, ಜನ್ಮದನಿಯೂ ಕೂಡಾ.

Sunday, August 23, 2015

ಸಾಲು, ಸಾಲುಗಾರ ಮತ್ತು ಸಾವು



ಸಕ್ಕರಿ ಮಹಾವಿದ್ಯಾಲಯದಲ್ಲಿಯ 2015ನೇ ಸಾಲಿನ ಸಾಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಮುಗಿಸಿಕೊಂಡು, ಮಧ್ಯಾಹ್ನ ಎರಡು ಗಂಟೆಗೆ ಬಾಗಲಕೋಟೆಯ ಹೊಟೇಲ್ ಅನುಗ್ರಹ ರೂಂ.ನಂ16 ರಲ್ಲಿ ನನ್ನ ಸಾಹಿತ್ಯಾಭಿಮಾನಿಗಳೊಂದಿಗೆ ಚರ್ಚೆಗಿಳಿದ ನಾನು, ಮಾತಿನಿಂದ ಹೊರಬಂದಾಗ ರಾತ್ರಿ 9.00 ಗಂಟೆ. ಪತ್ರಕರ್ತ ಗೆಳೆಯ ಕಿರಣ ಬಾಳುಗೋಳ ಗದ್ದನಕೇರಿ ಕ್ರಾಸಿನಲ್ಲಿ ನನಗೆ ಬಸ್ಸು ಹತ್ತಿಸಿ, ತಲೆಯಲ್ಲಿ ಪ್ರೀತಿಯ ಕವಿ ಶಂಕರ ಕಟಗಿಯ ಜಂಬು ನೇರಳಿಯ ಹುಳು ಹೊಗಿಸಿ ಹೊರಟು ಹೋದ.
 ನನ್ನ ಬಸ್ಸು ಈಗ ದಾವಣಗೆರೆ ಎಡೆಗೆ. ಹರಪನಹಳ್ಳಿ, ಹರಿಹರ, ಹೊನ್ನಾಳಿ, ಜಗಳೂರು, ಚನ್ನಗಿರಿ, ದೊಡ್ಡಬಾಲೆ, ಬಾನುವಳಿ, ತೆಲಿಗಿ ಹಾಗೂ ದಾವಣಗೆರೆ ಸೇರಿದಂತೆ ಹಲವು ಪ್ರದೇಶಗಳಿಂದ ಸುಮಾರು 135 ಜನ ಕವಿಗಳು ದಿನಾಂಕ:09.08.2015 ರಂದು ದಾವಣಗೆರೆಯ ರೋಟರಿ ಬಾಲಭವನದಲ್ಲಿ ಸೇರುವವರಿದ್ದರು. ಅಲ್ಲಿ ಎರಡು ಕೃತಿಗಳ ಬಿಡುಗಡೆ ಮಾಡಿ ಮಾತಾಡಬೇಕಾದವನು ನಾನು.
 ನಸುಕಿನ ಐದು ಗಂಟೆಗೆ ನಾನು ದಾವಣಗೆರೆ ಬಸ್ಟ್ಯಾಂಡಿನಲ್ಲಿ. ಸ್ಪೂರ್ತಿ ಪ್ರಕಾಶನದ ಅಧ್ಯಕ್ಷರಾದ ಎಂ.ಬಸವರಾಜ್ ನನಗಾಗಿ ಕಾಯುತ್ತಿದ್ದರು. ನನ್ನ ಎರಡು ಯಶಸ್ವಿ ಕೃತಿಗಳಾದ ‘ಗಾಂಧಿ ಅಂತಿಮ ದಿನಗಳು’ ಮತ್ತು ‘ಗಾಂಧಿ ಮುಗಿಯದ ಅಧ್ಯಾಯ’ಗಳನ್ನು ಬಿಡುಗಡೆಗೊಳಿಸಿ ಸಂಭ್ರಮಿಸಿದ ಅಭಿಮಾನದ ಊರು ದಾವಣಗೆರೆ. ಈ ಊರಿನಲ್ಲಿಯೇ ನನ್ನ ತಂಗಿಯ ಮದುವೆಯ ಮಾತುಗಳಾದವು. ಆರಂಭದ ಅವರ ಸಾಂಸಾರಿಕ ದಿನಗಳುರುಳಿದವು. ತಂದೆಗೆ ನನ್ನ ಅಭಿಮಾನಿಗಳಿಂದ ಮೊದಲ ಸನ್ಮಾನವಾಯಿತು. ಈಗ ದಾವಣಗೆರೆ ನನ್ನ ನೆನಪುಗಳ ಭಾಗವಾಯಿತು. ಹೌದಲ್ಲವೆ? ನೆನಪಿಲ್ಲದ ಯಾವುದೂ ನಮ್ಮದಾಗಿ ಉಳಿಯುವುದಿಲ್ಲ.
 “ನಮ್ಮಂತೆ ನಾವು ಬದುಕುವುದಿಲ್ಲ” ಇದು ನಾನು ಬಿಡುಗಡೆಗೊಳಿಸಿದ ಕಾವ್ಯ ಸಂಕಲನ. ‘ನೇಣು ಗಂಬ’ದ ಕೆಳಗೂ ಕಾವ್ಯ ಹುಟ್ಟುತ್ತದೆ ಎನ್ನವುದಕ್ಕೆ ಸಾಕ್ಷಿಯಾದ ಕೃತಿ. ಈ ಕಾರ್ಯಕ್ರಮವನ್ನು ಆಯೋಜಿಸಲು ನಿರಂತರ ಹೆಣಗಿದವರು ಗೆಳೆಯ ವೀರಭದ್ರಪ್ಪ. ಆದರೆ ದುರಂತವೆಂದರೆ ಅವರ ರೈತ ಸಹೋದರನೊಬ್ಬ ಸಾಲದ ಬಾಧೆ ತಾಳದೆ ಆತ್ಮಹತ್ಯೆಗೆ ಮೊರೆಹೋದ. ‘ಕಾವ್ಯಕ್ಕೆ ಉರುಳು’ ಅಂಕಣಕ್ಕಾಗಿ ಎಲ್ಲೆಲ್ಲೋ ಹುಡುಕುತ್ತಿದ್ದ ನನಗೆ ಈಗ ಸಾವು ಎದುರೇ ನಿಂತಿತ್ತು. ಇವರೊಂದಿಗೆ ವಿಷ ಸೇವಿಸಿದ ಅಣ್ಣನ ಮಗನೂ ಅಸುನೀಗಿದ. ಈ ಹಿನ್ನೆಲೆಯಲ್ಲಿ ಜುಲೈ 26 ರಂದು ನಡೆಯಬೇಕಾದ ಕವಿಗೋಷ್ಠಿ ಹಾಗೂ ಕಾವ್ಯ ಸಂಕಲನಗಳ ಬಿಡುಗಡೆಯ ಸಮಾರಂಭ ಅಗಷ್ಟ್ 9ಕ್ಕೆ ಮುಂದೂಡುಲಾಗಿತ್ತು.
 “ಬದುಕಿ ನೋಟದಲ್ಲಿ ಹೃದಯದ ಹಂಬಲವಿಲ್ಲ
ಗಾಣದೆತ್ತಿನ ಪಯಣ, ಬೆತ್ತಲೆಯಾದ ಭಾವ”
 ಇವು ‘ನಮ್ಮಂತೆ ನಾವು ಬದುಕುವುದಿಲ್ಲ’ ಕಾವ್ಯ ಸಂಕಲನದ ಸಾಲುಗಳು. ಕನ್ನಡ ಸಾಹಿತ್ಯ ಪರಿಷತ್‍ಗೆ ನೂರು ತುಂಬಿದ ಸಂಭ್ರಮದಲ್ಲಿ ಹತ್ತಾರು ವೇದಿಕೆ, ನೂರಾರು ಕವಿಗಳ ಉಪಸ್ಥಿತಿಯಲ್ಲಿ ಬಿಡುಗಡೆಯಾಗುತ್ತಿದ್ದ ಈ ಕಾರ್ಯಕ್ರಮವನ್ನು ನಾನು ಹರಿವಂಶರಾಯ್ ಬಚ್ಚನ್‍ರ “ನಿಶಾ ನಿಮಂತ್ರಣ” ಕಾವ್ಯ ಸಂಕಲನದ ಕೆಲವು ಸಾಲುಗಳಿಂದ ಪ್ರಾರಂಭಿಸಿದೆ. ಅದು ಮಾತು. ಹರಿಯುವ ನೀರು, ಹೊರಡುವ ವಾಗ್ಝರಿಗೆ ಎಲ್ಲಿಯಾದರೂ ಒಂದು ದಡ ಇದ್ದೇ ಇರುತ್ತದಲ್ಲ? ಹಾಗೆ ನಾನೊಂದು ದಡಕ್ಕೆ ಬಂದು ನಿಂತಾಗ ನನ್ನ ಎದುರಿಗೆ ಓರ್ವ ನನ್ನ ತಾಯಿಯ ವಯಸ್ಸಿನ ಮಹಿಳೆ ಇದ್ದರು. ವೇದಿಕೆಯಿಂದ ಕೆಳಗಿಳಿದು ಬಂದ ನನ್ನ ಕೈಗೆ ಅವರ ಕೈ ನೀಡಿ ಹೇಳಿದರು, “ಇದು ಅಲಹಾಬಾದ್‍ನಲ್ಲಿ ಹರಿವಂಶರಾಯನ್ನು ಮುಟ್ಟಿದ ಕೈ. ನಿನ್ನ ಭಾಷಣದಲ್ಲಿ ಹರಿವಂಶರಾಯ್ ಬಗೆಗೆ ನೀನು ಹೇಳಿದ್ದನು ಕೇಳುತ್ತಲೇ ನಿನ್ನಲ್ಲಿರುವ ಹಸಿವನ್ನು ನೋಡಿದೆ. ಅವರ ಮುಟ್ಟಿದ ಈ ಕೈ ನಿನ್ನನ್ನೀಗ ಸಮಾಧಾನಿಸಬಹುದಲ್ಲವೆ?”. ಈ ಕಾಳಜಿಗೆ ಕಾವ್ಯದ ಕಣ್ಣುಗಳು ಬೇಕಷ್ಟೆ.
 ಮತ್ತೊಂದು ಅನುಭವ ಇದೇ ವೇದಿಕೆಯಲ್ಲಿ. ಬಹುತೇಕ ಬಹಳ ಚನ್ನಾಗಿಯೇ ಮಾತನಾಡಿದ್ದ ನನ್ನನ್ನು ಮುಪ್ಪಿನ ಜೀವವೊಂದು ಹರಸಲು ಕಾಯುತ್ತಿತ್ತು. ಅವರೇ ಕೈಯಿಂದ ಸಿದ್ಧಪಡಿಸಿದ ಶುದ್ಧ ಖಾದಿ ಬಟ್ಟೆಯಲ್ಲಿ ತಯ್ಯಾರಿಸಿದ ಶಾಲ್ ಹಿಡಿದು, ಅವರು ಕಾಯುತ್ತಿದ್ದರೆ ನನಗೆ ಓಶೋ ಹೇಳುವ ಜೀಸಸ್‍ನ ಮಾತು ನೆನಪಾಗುತ್ತಿತ್ತು. ಜೀಸಸ್ ಹೇಳುತ್ತಾನೆ, “ಕಟ್ಟಕಡೆಯಲ್ಲಿ ನಿಂತವರೇ ಅನುಗ್ರಹಕ್ಕೆ ಪಾತ್ರರಾಗುವವರು”. ಎಷ್ಟೊಂದು ಅದ್ಭುತ ಸಾಲಲ್ಲವೆ? ಮನುಷ್ಯ ಸಾಯುತ್ತಾನೆ ಆದರೆ ಕೆಲವರ ಕೆಲವು ಸಾಲುಗಳು ಸಾಲ ನೀಡಿದ ಸಾಲಗಾರರಂತೆ ಸದಾ ನಮ್ಮನ್ನು ಕಾಡುತ್ತಲೇ ಇರುತ್ತವೆ, ಅಲ್ಲವೆ?

Tuesday, August 18, 2015

ಉರಿಯ ಮುಂದೆ ದೀಪದ ಪ್ರಶ್ನೆ



       ಕಳೆದ ಒಂದು ವರ್ಷದಿಂದ ನಾನು ಮತ್ತೆ ಮತ್ತೆ ಸಂದರ್ಶಿಸಿದ ಜಿಲ್ಲೆ ಬಾಗಲಕೋಟೆ. ಪುಸ್ತಕ ಬಿಡುಗಡೆ, ಉಪನ್ಯಾಸ, ಸಮ್ಮೇಳನ, ಗೋಷ್ಠಿ ಹೀಗೆ ಏನೇನೊ ಅಂದುಕೊಂಡು ಇಲ್ಲಿ ಸುತ್ತುತ್ತಲೇ ಇದ್ದೇನೆ. ಸಂಸ್ಕøತಿಯಿಂದ ಸಮೃದ್ಧವಾದ ಈ ನೆಲದಲ್ಲಿ ಈ ಪ್ರವಾಸ ಅರ್ಥಹೀನ ಎನ್ನಿಸಿಲ್ಲ ನನಗೆ. ಈಗ ಮತ್ತೊಮ್ಮೆ ಬಂದಿದ್ದೇನೆ, ತಂದು ನಿಲ್ಲಿಸಿದವರು ಕವಿ ಗೆಳೆಯ ಉಮೇಶ ತಿಮ್ಮಾಪುರ. ಸ್ಥಳ: ಸಕ್ರೀ ಕಾಲೇಜು, ಉದ್ದೇಶ: ವಾರ್ಷಿಕ ಕ್ರಿಡಾ ಸಾಂಸ್ಕøತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ.
       ಇಡೀ ಉತ್ತರ ಕರ್ನಾಟಕದ ಶೈಕ್ಷಣಿಕತೊಟ್ಟಿಲು ಅಲ್ಲಿಯ ಖಾಸಗಿ ಶಿಕ್ಷಣ ಸಂಸ್ಥೆಗಳು, ನೂರಾರು ವರ್ಷಗಳ ಇತಿಹಾಸವಿರುವ ಈ ಸಂಸ್ಥೆಗಳು ಬಹುಪಾಲು ಮಠಗಳಿಂದ ಪೋಷಿತ, ಶಿಕ್ಷಣವನ್ನೂ ದಾಸೋಹದ, ದಾನದ ನೆಲೆಯಲಲಿ ನೋಡಿ ಮನುಷ್ಯನ ನೆತ್ತಿಗೊಂದು ಬುತ್ತಿ ಕಟ್ಟಿಕೊಟ್ಟರು, ಅಂತಹ ಸಂಸ್ಥೆಗಳಲ್ಲಿ ಒಂದು ಸಕ್ರಿ ಶಿಕ್ಷಣ ಸಂಸ್ಥೆ ಬಾಗಲಕೋಟೆ. ಸುಮಾರು ಎಂಬತ್ತು ವರ್ಷಗಳಷ್ಟು ಹಳೆಯದಾದ ಈ ಸಂಸ್ಥೆಯಲ್ಲಿ, ಸಾವಿರದ ಸಂಖ್ಯೆಯಲ್ಲಿ ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳೂ ಇದ್ದಾರೆ.
     ಗೆಳೆಯ ಉಮೇಶ ತಿಮ್ಮಾಪುರರ “ನೀನೆಂದರೆ” ಕಾವ್ಯದಿಂದಲೇ ಭಾಷಣವನ್ನು ಪ್ರಾರಂಭಿಸಿಕೊಂಡ ನನಗೆ ಮುಖ್ಯವಾಗಿ ಹೇಲಬೇಕಾದ ಬಂಜೆತನ ಕುರಿತು, ಬರಿದಾಗುತ್ತಿರುವ ಕುರಿತು, ಈ ವರ್ಷ ಮಳೆ ಹಿಂದೆಂದಿಗಿಂತಲೂ ಕಡಿಮೆಯಾಗಿದೆ. ಬರವಿಟ್ಟಿದೆ ಭೂಮಿ. ಹಳ್ಳ-ಕೊಳ್ಳ ಕೆರೆ-ಕಟ್ಟೆಗಳೆಲ್ಲ ಬರಿದಾಗಿವೆ. ಅಂತರ್ಜಲ ಬತ್ತು ಭೂಮಿಯ ಒಡಲೂ ಬರಿದೋ ಬರಿದು. ಸಿಕ್ಕಸಿಕ್ಕಲ್ಲಿ ಕೊಳವೆ ಕೊರೆದು ಕೊರೆದು  ಭೂಮಿ ಎನ್ನುವುದು ಇಂಜಕ್ಷನ್‍ನಿಂದ ಬಳಲಿದ ಬಾಣಂತಿಯಂತಾಗಿದ್ದಾಳೆ.
     ಗೊಬ್ಬರ, ಕೀಟನಾಶಕಗಳ ಬಳಸಿ ಬಳಸಿ ನೆಲದಾಯಿಯ ನೆಚ್ಚಿಗೆಯನ್ನೆಲ್ಲ ಆಚೆ ಹಿರಿದೊಗೆದಿದ್ದೇವೆ. ಈಗ ಕುಡಿಯಲು ನೀರಿಲ್ಲ. ಮೂವತ್ತು ರೂಪಾಯಿ ನೀಡಿದರೂ ದನಗಳಿಗೆ ತಿನ್ನಲು ಹಿಡಿ ಮೇವು ಸಿಗುವುದಿಲ್ಲ. ಫ್ಯಾಕ್ಟರಿಗಳ ಕಾಸಿನ ಕಾರ್ಬನ್ನಿನಲ್ಲಿ ಉಸಿರುಗಟ್ಟಿಸಿಕೊಂಡ ರೈತ, ದುಂದಿನ ಬೆಳೆ ಬೆಳೆದು, ಮಾರುಕಟ್ಟೆ ನೆಲಕಚ್ಚಿದಾಗ ನೆಮ್ಮದಿಯಿಂದ ನೇಣು ಹಾಕಿಕೊಳ್ಳಲು ಕೂಡ ಆತನ ಹೊಲದಲ್ಲಿ ಒಂದು ಮರವಿಲ್ಲ. 
       ಹೀಗಾಗಿ ಮತ್ತೆ ಸಾಲ, ಸಾಲದಲ್ಲಿಯೇ ಕುಡಿತ, ಆನಂತರ ಕೊನೆಯುಸಿರು. ಉರಿ ಉರಿಯುವ ಊರುಗಳಲ್ಲಿ ಬದುಕಿನ ದೀಪ ಹಚ್ಚಿಕೊಳ್ಳುವುದು ಕಷ್ಟವೆನ್ನಿಸುತ್ತಿದೆ. ಇದೊಂದು ಸಂದಿಗ್ಧ.
      ಈ ಸಂದಿಗ್ಧ ನಮ್ಮ ಶಿಕ್ಷಣದ ಸಮಸ್ಯೆಯೂ ಕೂಡ. ತಾಂತ್ರಿಕವಾಗಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ ಮಾರುಕಟ್ಟೆಯಾಧಾರಿತ ಶಿಕ್ಷಣ, ನಮ್ಮ ಸಂಸ್ಕøತಿಯಲ್ಲಿಯ ನಮ್ಮ ಬೇರುಗಳನ್ನೇ ಸಡಿಲುಗೊಳಿಸಿತು. ಯುವಕರಿಗೆ ಎಲ್ಲವೂ ವಿರೋಧಾಭಾಸ. ಮೊಬೈಲ್ ತೋರಿಸುವ ಲೋಕಕ್ಕೂ, ಮನೆ ಹೇಳುವ ಪಾಠಕ್ಕೂ ಹೊಂದಾಣಿಕೆಯಾಗುತ್ತಿಲ್ಲ. ಮುಂದೆ ಹೋದಷ್ಟೂ ಹಿಂದಿನ ಅನಂತ ಕಾಡುತ್ತದೆ. ಹಿಂದೆ ನೋಡಿದಷ್ಟೂ ಮುಂದಿನ ಪ್ರಪಂಚಕ್ಕೆ ನಾವು ಹೊಂದಾಣಿಕೆಯಾಗುವುದು ಹೇಗೆ? ಎನ್ನುವ ಪ್ರಶ್ನೆ ಕಾಡುತ್ತದೆ. ಉತ್ತರ ಸಿಗುತ್ತಿಲ್ಲ. ಯಾಕೆಂದರೆ ಪ್ರಶ್ನೆಯೇ ಇನ್ನೂ ತಾರಕವನ್ನು ಮುಟ್ಟಿಲ್ಲ. ಇದು ನನ್ನ ಅಭಿಪ್ರಾಯ. ನಿಮ್ಮದು ಭಿನ್ನವಾಗಿದ್ದರೆ ಪ್ರಜಾಪ್ರಭುತ್ವ ಬದುಕಿದೆ ಎನ್ನುತ್ತೇನೆ. ನೀವೂ ನನ್ನೊಂದಿಗಿದ್ದರೆ ಸಮತಾವಾದವನ್ನು ಒಪ್ಪಿಕೊಂಡಿದ್ದೇವೆ ಎಂದುಕೊಳ್ಳೋಣ ಅಲ್ಲವೆ?