Total Pageviews

Thursday, September 24, 2015

ಕಣ್ಣೀರಿನ ಮಹಾಕಡಲು



ಬೆಂಗಳೂರಿನ ಹೆಗ್ಗನಹಳ್ಳಿ ಈ ಅಭಿನಂದನಾ ಸಮಾರಂಭ ಒಂದು ತಿಂಗಳು ಮೊದಲೇ ಮುಗಿಯಬೇಕಾದುದು. ಆದರೆ ಬಿ.ಬಿ.ಎಂ.ಪಿ ಎಲೆಕ್ಷನ್ ಕಾರಣ ನಿರಂತರ ಮುಂದೂಡುತ್ತಲೇ ಹೋಯಿತು. ನನಗೆ ಇಡೀ ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆ ‘ಬುದ್ಧ’ ಎಂಬ ಎರಡು ಅಕ್ಷರ. ಸಾಹಿತ್ಯಕ್ಕೆ ನಾನು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ನನಗಿಲ್ಲಿ ‘ಬುದ್ಧ ಶಾಂತಿ ಪ್ರಶಸ್ತಿ’ಯನ್ನು ನೀಡಲಾಗುತ್ತಿತ್ತು. ಇಲ್ಲಿ ಪ್ರಶಸ್ತಿ ಎಂಬ ಪದವನ್ನು ತೆಗೆದುಹಾಕಿಬಿಟ್ಟರೆ ಸಿಗುವುದೇನಿದೆಯೊ(ಬುದ್ಧ) ಅದೆಲ್ಲ ಬೆಳಕೆ.
 ಕಾರ್ಯಕ್ರಮಕ್ಕೆ ಸ್ವಲ್ಪ ಮುಂಚಿತವಾಗಿಯೇ ಹೋದೆ. ಯಾಕೆಂದರೆ ಇದೇ ಸಮಾರಂಭದಲ್ಲಿ ನನ್ನ ‘ಕಾವ್ಯಕ್ಕೆ ಉರುಳು ಭಾಗ-2’ ಬಿಡುಗಡೆಯ ಸಮಾರಂಭವನ್ನೂ ಹಮ್ಮಿಕೊಳ್ಳಲಾಗಿತ್ತು. ನಾನೇ ಬೇಗ ಬಂದೆ ಎಂದುಕೊಳ್ಳುವುದರಲ್ಲಿ ನನಗಿಂತಲೂ ಬೇಗ ಬಂದು ಕುಳಿತಿದ್ದರು ಹಿರಿಯರಾದ ಶ್ರೀ ಚಂದ್ರಕಾಂತ ಬೆಲ್ಲದ ಹಾಗೂ ಶ್ರೀಮತಿ ಲೀಲಾವತಿ ಆರ್ ಪ್ರಸಾದ್. ನಾವೆಲ್ಲ ಲೋಕಾಭಿರಾಮದ ಮಾತುಗಳನ್ನಾಡುತ್ತ ಹೀಗೆ ಕಾಯುತ್ತ ಕೂಡ್ರಲೇಬೇಕಿತ್ತು. ಯಾಕೆಂದರೆ ಬೆಳ್ಳಿರಥವೇರಿ ಬರುತ್ತಿದ್ದ ವಾಟಾಳರ ಜಲೂಸ್ ಇನ್ನೂ ವೇದಿಕೆಗೆ ಬರಬೇಕಿತ್ತು. ಇಪ್ಪತ್ತು ನಿಮಿಷವಷ್ಟೇ ಮೆರವಣಿಗೆ ಮುಗಿಸಿ ವಾಟಾಳ್ ಸ್ಟೇಜ್ ಹತ್ತಿದರು.
 
ಇದು ವಾಟಾಳ್‍ರೊಂದಿಗಿನ ಮೊದಲ ರೋಮಾನ್ಸ್. ನನ್ನ ಪುಸ್ತಕ ‘ಕಾವ್ಯಕ್ಕೆ ಉರುಳು’ ಅವರ ಮನಸ್ಸನ್ನು ಆವರಿಸಿಕೊಂಡಿತ್ತು. ಬೆಂಗಳೂರು ಪ್ರೆಸ್ ಕ್ಲಬ್‍ನಂಥಲ್ಲಿ ಬಿಡುಗಡೆ ಮಾಡಬೇಕಾದ ಕೃತಿಯನ್ನು ಸಂತೆಯಲ್ಲಿ ಬಿಡುಗಡೆಗೊಳಿಸುತ್ತಿದ್ದಾರಲ್ಲ ಎಂಬ ಬೇಸರ ಅವರಲ್ಲಿತ್ತು. ಕೊನೆಗೂ ವಾಟಾಳ್ ಈ ಇಂಬ್ಯಾಲನ್ಸ್‍ನ್ನು ತಮ್ಮ ಭಾಷಣದಲ್ಲಿ ಕೃತಿಯ ಕುರಿತು ವಿಸ್ತ್ರತವಾಗಿ ಮಾತನಾಡುವುದರ ಮೂಲಕ ಸರಿಪಡಿಸಿಯೇ ಬಿಟ್ಟರು.
     ಅಂದಿನ ಅವರ ಭಾಷಣದ ಸಾರಲೇಖ, ಇಲ್ಲಿ ನಿಮ್ಮೊಂದಿಗೆ –
“ರಾಗಂ ಅವರ ‘ಕಾವ್ಯಕ್ಕೆ ಉರುಳು’ ಕೇವಲ ಒಂದು ಪ್ರದೇಶದ, ಜನಾಂಗದ, ನಿರ್ದಿಷ್ಟ ಕಾಲಘಟ್ಟದ ಪುಸ್ತಕವಲ್ಲ. ಇದು ಪ್ರಪಂಚದ ಪುಸ್ತಕ. ಐಷಾರಾಮಿ ಸೌಕರ್ಯಗಳೊಂದಿಗೆ ಸುಖದ ಜಗತ್ತಿನಲ್ಲಿರುವವರ ಮಧ್ಯದಲ್ಲಿಯೇ ಒಂದು ಸಿದ್ಧಾಂತಕ್ಕಾಗಿ ನೆತ್ತರು ತೆತ್ತವರ ಕತೆ. ಪುಸ್ತಕ ಓದುತ್ತಿದ್ದರೆ ಇತಿಹಾಸದ ಕಟು ಸತ್ಯಗಳು ನಮ್ಮ ನರನಾಡಿಯೊಳಗಿನ ರಕ್ತ ಹೆಪ್ಪುಗಟ್ಟಿಸುತ್ತದೆ. ಇನ್ನೊಂದೆಡೆ ನಾವು ಎಂಥ ಪ್ರಪಂಚದಲ್ಲಿ ಬದುಕುತ್ತಿದ್ದೇವೆ ಎಂದು ಭಯಭೀತರಾಗುವಂತೆ ಮಾಡುತ್ತದೆ. 
 ತಮ್ಮ ಕೊರಳುಗಳನ್ನು ಉರುಳಿಗೆ ಒಡ್ಡಿ ಹೋರಾಡಿದ ಇವರ ಸಂದೇಶಗಳು ನಿಜಕ್ಕೂ ನಮ್ಮನ್ನು ಮನುಷ್ಯರನ್ನಾಗಿಸಿವೆಯೇ? ನಾವು ಎಲ್ಲಿದ್ದೇವೆ ಹಾಗೂ ಎಲ್ಲಿಗೆ ಹೊರಟಿದ್ದೇವೆ? ಎನ್ನುವ ಪ್ರಶ್ನೆಗಳು ಪುಸ್ತಕ ಓದುವಾಗ ಪದೇ ಪದೇ ಎದುರಾಗುತ್ತದೆ. ಒಂದು ಸುಂದರ, ಸಮಾಜಪರ ಪುಸ್ತಕ ಓದುವಾಗ ನಮಗೆ ಶ್ರೀಮಂತಿಕೆ ಏಕೆ ಬೇಕು? ರೀಯಲ್ ಎಸ್ಟೇಟ್ ವೃತ್ತಿ ಏಕೆ ಬೇಕು? ಬರಹಗಾರರೂ ಜಾತಿವಾದಿಗಳಾಗಿ ಆತ್ಮವಿಮರ್ಶೆಯೇ ಸತ್ತು ಹೋದ ಈ ಘಳಿಗೆಯಲ್ಲಿ ನಾವಿನ್ನೂ ನಿರ್ವೀರ್ಯರಾಗಿ ಏಕೆ ಬದುಕಬೇಕು? ಎಂಬ ಪ್ರಶ್ನೆಗಳನ್ನು ‘ಕಾವ್ಯಕ್ಕೆ ಉರುಳು’ ನಮ್ಮಲ್ಲಿ ಹುಟ್ಟು ಹಾಕುತ್ತದೆ.
ಈ ನಾಡು ನಿಜಕ್ಕೂ ಅದ್ಭುತ. ಇದು ಏನೆಲ್ಲ ಕೊಟ್ಟಿದೆ ನಮಗೆ. ನಾವೆಲ್ಲ ಈ ಕೃತಿಯಲ್ಲಿ ಬರುವ ಸಾಲು ಸಾಲು ಸಾಧಕರಷ್ಟು ದೊಡ್ಡ ವ್ಯಕ್ತಿಗಳಾಗದಿದ್ದರೂ ಚಿಂತೆಯಿಲ್ಲ, ಸ್ವಾಭಿಮಾನಿಗಳಾದರೂ ಆಗಿ ಬದುಕಬಾರದೆ? ಮಠಪತಿಯವರ ಈ ಪುಸ್ತಕ ಇಡಿಯಾಗಿ ನನಗೆ ನನ್ನ ಹೋರಾಟದ ದಿನಗಳನ್ನು ಮೆಲುಕು ಹಾಕುವಂತೆ ಮಾಡಿದೆ. ನನ್ನ ಐವತ್ತು ವರ್ಷಗಳ ಹೋರಾಟ, ಸೆರೆವಾಸ, ಚಳುವಳಿಗಳು ಅರ್ಥಪೂರ್ಣವಾಗಿದೆ. ನನ್ನ ದಾರಿ ಸರಿಯಾಗಿದೆ ಎಂಬ ಭರವಸೆ ಮೂಡಿಸಿದೆ. ಮಠಪತಿ ಕನ್ನಡದ ಅತ್ಯಂತ ಸಮರ್ಥ ಮತ್ತು ಶಕ್ತಿಶಾಲಿ ಲೇಖಕ. ಅವರ ‘ಕಾವ್ಯಕ್ಕೆ ಉರುಳು’ ಪ್ರಪಂಚದಲ್ಲೆಡೆಯಲ್ಲ ನಡೆದ ಹೋರಾಟಗಾರರ ಕಣ್ಣೀರಿನ ಮಹಾಕಡಲು.”

Thursday, September 17, 2015

ಸಂತ್ಯವಂತರ ಸಂಘವಿರಲು. . . . .

ಸಮಯ ಸಿಕ್ಕಾಗಲೆಲ್ಲ ನನ್ನೆ ನಾನು ಕೇಳುಕೊಳ್ಳುವ ಪ್ರಶ್ನೆ ಹಲವು ಮುಖಿಯಾದ ಗಾಂಧಿಯನ್ನು ಗ್ರಹಿಸುವುದು ಹೇಗೆ? ಈ ಬಾರಿಯ ನನ್ನ ಸಮಾಧಾನ ಆತನ ಅಲೆಮಾರಿತನ, ನಿತ್ಯ ಸಂಚಾರ ಮತ್ತು ಪ್ರವಾಸ. ಗಾಂಧಿಯ ಬದುಕಿನಲ್ಲಿ ಇವುಗಳಿಗಿದ್ದ ಆದ್ಯತೆ ಭಾಷಣಕ್ಕಿರಲಿಲ್ಲ. ಈ ನನ್ನ ಅಲೆಮಾರಿ ಗಾಂಧಿ ಸುಳಿಗಾಳಿಯಂತೆ ಸಾವಿನ ನಂತರವೂ ಸಂಚರಿಸುತ್ತ ಜಂಗಮನಾಗಿ ಜೀವ ಬೆಸೆಯುತ್ತಾನೆ ಎನ್ನುವುದಕ್ಕೆ ಸಾಕ್ಷಿ ನನ್ನ ಮತ್ತು ಬೆಂಗಳೂರಿನ ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧಾನ ಕೇಂದ್ರದ ಸಮನ್ವಯಾಧಿಕಾರಿಗಳಾದ ಶ್ರೀ ಕಾ.ತ. ಚಿಕ್ಕಣ್ಣರನ್ನು ಬೆಸೆದ ಪರಿ.
ಒಂದು ಮುಂಜಾವು, ಆಚೆಯಿಂದ ಫೋನಿನಲ್ಲಿ, “ನಾನು ಕಾ.ತ. ಚಿಕ್ಕಣ್ಣ ಡೆಂಗ್ಯೂಯಿಂದಾಗಿ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾಗ, ರಾಗಂ ನಿಮ್ ‘ಗಾಂಧಿ ಅಂತಿಮ ದಿನಗಳು’ ಓದಿದೆ. ಎಷ್ಟೊಂದು ಸೊಗಸಾದ ಬರಹ. ನಿಮಗೆ ಅಭಿನಂದನೆಗಳು. ಈಗ ನೀವು ನಮ್ಮೊಂದಿಗಿರಬೇಕೆನ್ನುವ ಸ್ವಾರ್ಥ ಹುಟ್ಟಿಕೊಂಡಿದೆ ನಮಗೆ. ಅಂದಹಾಗೆ, ಶಿವಮೊಗ್ಗೆಯಲ್ಲಿ ಅಗಸ್ಟ 13 ಮತ್ತು 14 ರಂದು ಕನಕದಾಸರನ್ನು ಕುರಿತು ‘ಬಯಲು ಆಲಯದೊಳಗೊ’ ಎಂಬ ಎರಡು ದಿನಗಳ ಸಂವಾದ ಸಂಕೀರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮಕ್ಕೆ ವಿಶೇಷ ವೀಕ್ಷಕರಾಗಿ ನೀವು ನಮ್ಮೊಂದಿಗಿರಬೇಕು ಸಾಧ್ಯವೆ? ಎಂದು ಕೇಳಿದಾಗ ಇಲ್ಲ ಎನ್ನಲಾಗಲಿಲ್ಲ, ಯಾಕೆಂದರೆ ಅದು ಗಾಂಧಿಗೆ ಒಗ್ಗದ ಭಾಷೆ. 
ಹಿಂದಿನ ದಿನದ ತರಿಕೇರೆಯ ಕಾರ್ಯಕ್ರಮ ಮುಗಿಸಿಕೊಂಡು ಎರಡು ದಿನಗಳ ಕಾಲ ಶಿವಮೊಗ್ಗೆಯ ಸಹ್ಯಾದ್ರಿ ಕಲಾ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಸಾಹಿತ್ಯ ಮಿತ್ರರಾದ ಡಾ. ರಂಗನಾಥ, ಗೀತಾ, ಕುಂಶಿ, ರಾಮಲಿಂಗಪ್ಪ ಬೇಗೂರು, ಎನ್.ಆರ್. ಲಲಿತಾಂಬಾ, ಚಂದ್ರಶೇಖರ ತಾಳ್ಯ, ಕೆ.ಶರೀಫ್, ಮೇಟಿ ಹಾಗೂ ಪ್ರೊ. ಘಂಟಿಯವರುಗಳೊಂದಿಗೆ ಸಮಯ ಕಳೆಯುವ ಅವಕಾಶ.
ಸಂವಾದ ಸಂಕೀರಣವನ್ನು ಶ್ರೀ ಕಾ.ತ ಚಿಕ್ಕಣ್ಣನವರು ನನ್ನ ‘ಗಾಂಧಿ ಮುಗಿಯದ ಅಧ್ಯಾಯ’ ಕೃತಿಯೊಳಗಿನ ಸಂತ ಶಾಮಲ ಭಟ್ಟರ ಭಜನೆಯಾದ –
ತೊಟ್ಟು ನೀರು ಕೇಳಿದವನಿಗೆ ಹೊಟ್ಟೆ ತುಂಬ ಊಟ ಕೊಡು
ಒಂದು ದುಡ್ಡು ಕೊಟ್ಟವಗೆ ಬಂಗಾರವೇ ಇಟ್ಟುಬಿಡು
ಮುಖ ಸಿಂಡರಿಸಿದ ಮುರ್ಖನಿಗೆ ಮುಗುಳ್ನಗೆಯ ಒಲವ ಕೊಡು
ನಿನ್ನ ಬಳಿ ಕೊಡಲೇನೂ ಇಲ್ಲದಿದ್ದರೆ ನಿನ್ನೇ ಕೊಟ್ಟುಬಿಡು
ಈ ಪದ್ಯದಿಂದ ಪ್ರಾರಭಿಸಿದರು. ಇದು ಗಾಂಧಿಯನ್ನು ರೂಪಿಸಿದ ಪದ್ಯ. ಅವರು ಕನಕನ ವೇದಿಕೆಯ ಮೇಲೆ ನಿಂತು ಗಾಂಧಿಯೊಂದಿಗಿದ್ದರೆ, ನಾನು ಗಾಂಧಿಯಿಂದ ಹೊರಬಂದು ಕನಕನೆಡೆಗೆ ಹೊರಟಿದ್ದೆ. ಎರಡು ಮಹಾನ್ ಚೇತನಗಳ ಕಾಲ ಮತ್ತು ಸಂದರ್ಭಗಳು ಭಿನ್ನ. ಆದರೆ ಗುರಿ ಮಾತ್ರ ಆತ್ಮಶೋಧ. 
    ನಾನು ಕನಕನನ್ನು ಗ್ರಹಿಸುವುದು ಧ್ಯಾನ, ಭರವಸೆ ಮತ್ತು ಪ್ರತಿರೋಧ ಹಾಗೂ ಒಳದಂಗೆಯ ಸಂಕೇತವಾಗಿ. ಈತನ ಮೊದಲ ಗುರಿ ಸ್ವಶೋಧವೆ ವಿನಃ ಬೌದ್ಧಿಕ ಸರ್ಕಸ್ ಅಲ್ಲ. ಪ್ರತಿಯೊಬ್ಬ ಲೇಕಕನಿಗೂ ಒಂದು ಕೇಂದ್ರವಿರುತ್ತದೆ ಎನ್ನುವುದಾದರೆ ಕನಕನನ್ನು ಕಟ್ಟಿಕೊಡುವ ಆ ಕೇಂದ್ರ ಭಕ್ತಿ ಮತ್ತು ಬೈರಾಗದ್ದು. ಇವುಗಳ ತೂರ್ಯವನ್ನು ಅನುಭವಿಸಲು ಹೃದಯ ಹದ ಮಾಡಿಕೊಳ್ಳಲು ಹೊರಡುವ ಕನಕನ ಅನ್ವೇಷಣೆಯ ದಾರಿಯಲ್ಲಿ ಸಾಮಾಜಿಕ, ಧಾರ್ಮಿಕ, ರಾಜಕೀಯ ವಿಶ್ಲೇಷಣೆ ಆಕಸ್ಮಿಕ ಹಾಗೂ ಅನಿವಾರ್ಯದ್ದು. ಹೀಗಾಗಿಯೇ ಆತನ ಪದ್ಯ –
ಸತ್ಯವಂತರ ಸಂಘವಿರಲು ತೀರ್ಥವೇತಕೆ
ನಿತ್ಯಜ್ಞಾನಿಯಾದ ಮೇಲೆ ಚಿಂತೆಯೇತಕೆ
ನನಗೆ ಆತನ ಇನ್ನುಳಿದ ಎಲ್ಲ ಪದ್ಯಗಳಿಗಿಂತಲೂ ಮುಖ್ಯವಾಗುತ್ತದೆ. 
 ಗಾಂಧಿಯಿಂದ ಖಾಲಿಯಾಗಿದ್ದ ಹೆಗಲಗಳ ಮೇಲೆ ಹಿರಿಯರಾದ ಚಿಕ್ಕಣ್ಣನವರು ಕನಕದಾಸರನ್ನು ಹೊರೆಸಿದ್ದಾರೆ. ಆತನನ್ನು ಆತ್ಮೀಯವಾಗಿ, ಅರ್ಥಪೂರ್ಣವಾಗಿ ಸಂಪಾದಿಸಿಕೊಡುವ ಜವಾಬ್ದಾರಿ ಈಗ ನನ್ನದಾಗಿದೆ. ಅದಕ್ಕೆ ಯಶಸ್ಸು ಸಿಗಲಿ ಎಂದು ಹರಸುವ ಪ್ರಾರ್ಥನೆಯ ಹೊಣೆಗಾರಿಕೆ ನಿಮ್ಮ ಮೇಲಿದೆ.

Thursday, September 10, 2015

ಸಾಲು ಮರದಮ್ಮನ ಸಾಯದ ನೆನಪು



ದಿನಾಂಕ:11.08.2015 ರ ಬೆಂಗಳೂರಿನ ಚಂಪಾ ಸಂವಾದ ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿ ತರಿಕೇರಿಗೆ ಹೋಗುತ್ತಿದ್ದರೆ ಸಮಯ ರಾತ್ರಿ 9.30. ಅವು ಭೀಮನ ಅಮವಾಸ್ಯೆಯ ಸಮೀಪದ ದಿನಗಳಾದುದರಿಂದ ಕತ್ತಲೆಗೆ ಕೊರತೆ ಏನೂ ಇರಲಿಲ್ಲ. ಆದರೆ ನನ್ನ ಕಾರಿನ ಬೆಳಕಿಗೆ ಅದನ್ನು ಸೀಳಿಕೊಂಡು ಹೋಗುವಷ್ಟು ಪ್ರಖರ ಶಕ್ತಿ ಇಲ್ಲದೇ ಇದ್ದುದರಿಂದ 60ರ ವೇಗದ ಮಿತಿಯೊಳಗೆ ಮೆಹಂದಿ ಹಸನ್‍ನ ಹಾಡು, ನಿಶೆಗೆ ಹಿತವೆನ್ನಿಸುವಷ್ಟೇ ಪ್ರಮಾಣದಲ್ಲಿ ನಶೆಯ ಜೀಕುತ್ತ ತರಿಕೇರೆಗೆ ಬಂದಾಗ ನಸುಕಿನ ನಾಲ್ಕುವರೆ. ಕೆಲವು ವರ್ಷಗಳ ಹಿಂದಿನ ಇದೇ ಭೀಮನ ಅಮವಾಸ್ಯೆಯ ಸುತ್ತಲಿನ ಡಾ.ರಾಜ್ ಅಪಹರಣದ ಪ್ರಕರಣ ಸ್ಮøತಿಪಟಲದಲ್ಲೆಲ್ಲೊ ಸುತ್ತುತ್ತಿತ್ತು.
ಮರುದಿನ ಸರಿಯಾಗಿ ಹತ್ತು ಗಂಟೆಗೆ ತರಿಕೇರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಭವನದಲ್ಲಿ ನಾನು “ಆ ಪೂರ್ವ ಈ ಪಶ್ಚಿಮ: ಒಂದು ಅನುಸಂಧಾನ” ಕುರಿತು ಮಾತನಾಡಲು ನಿಂತುಕೊಳ್ಳಬೇಕಾದುದರಿಂದ ಸಿಕ್ಕ ಮೂರೇ ಮೂರು ಗಂಟೆಯ ನಿದ್ರೆಯಲ್ಲಯೇ ದಣಿವಾರಿಸಕೊಂಡು ಸಭೆಗೆ ಹೋದೆ. 
 ಈ ಕಾಲೇಜೆಂದರೆ ಒಂದು ಹಳೆಯ ಸರ್ಕಾರಿ ಕಟ್ಟಡ ಅಷ್ಟೆ. ನನ್ನ ಹಿಂದಿನ ಆಯುಕ್ತರಾದ ಶ್ರೀ ಬಿ.ಜಿ. ನಂದಕುಮಾರರವರು ಇಲ್ಲಿಯೇ ಅವರ ಬದುಕಿನ ಮೊದಲ ದಿನಗಳನ್ನು ಕಳೆದಿದ್ದು. ಅವರ ಆಡಳಿತಾನುಭವದ ಕೃತಿ “ನಂದಾವಲೋಕನ” ಓದುತ್ತಿದ್ದರೆ ಸಾಲು ಸಾಲು ನೆನಪುಗಳು ಇಲ್ಲಿಂದಲೇ ಪ್ರಾರಂಭವಾಗುತ್ತವೆ. ಆ ಓದಿನ ಹಿನ್ನೆಲೆಯಲ್ಲಿ ಇಡೀ ಕಟ್ಟಡವನ್ನೊಮ್ಮೆ ಸುತ್ತಿ ಬಂದೆ. ಅಧ್ಯಾಪಕ ವೃಂದದ, ಪ್ರಾಂಶುಪಾಲರ, ಕಛೇರಿ ವರ್ಗದ ಪರಿಚಯವಾಯಿತು, ಹೊರಗಡೆ ನನ್ನೊಂದಿಗೇ ಬಂದಿದ್ದ ಮಳೆ ಎಲ್ಲವನ್ನೂ ತಪ್ತವಾಗಿಸುತ್ತಿತ್ತು.
 ಆ ಪೂರ್ವ ಈ ಪಶ್ಚಿಮಗಳ ಸಾಹಿತ್ತಿಕ ಅನುಸಂಧಾನ ಕುರಿತು ಅಂದು ನಾನು ಮಾತನಾಡಿದ್ದು ಸರಿಯಾಗಿ ಒಂದೂವರೆ ಗಂಟೆ. ನನ್ನೊಂದಿಗೆ ವೇದಿಕೆಯ ಮೇಲಿದ್ದವರು ಪ್ರಾಂಶುಪಾಲರಾದ ಶಾಂತಮೂರ್ತಿ, ನಿವೃತ್ತ ಪ್ರಾಂಶುಪಾಲ ಕೆ.ಸಿ.ಕೆಂಚಪ್ಪ, ಗೆಳೆಯ ಹರೀಶ್, ಪತ್ರಕರ್ತ ಅನಂತ ನಾಡಿಗ, ವಿಜಯಕುಮಾರ್, ಪ್ರಾಧ್ಯಾಪಕ ವೃಂದ, ಕಛೇರಿ ಸಿಬ್ಬಂದಿ ಹಾಗೂ ಕನ್ನಡ/ಇಂಗ್ಲೀಷ್ ಐಚ್ಚಿಕ ವಿಭಾಗದ ವಿದ್ಯಾರ್ಥಿಗಳು. 
ಸುಮಾರು ಒಂದು ಗಂಟೆ ಇಪ್ಪತ್ತು ನಿಮಿಷಗಳ ಪೂರ್ವ-ಪಶ್ಚಿಮ ಸಾಹಿತ್ಯ, ಸಂಸ್ಕತಿಗಳೊಂದಿಗೆ  ಮುಖಾಮುಖಿಯಾಗುತ್ತ, ವಿದ್ಯಾರ್ಥಿ-ವಿದ್ಯಾರ್ಥಿನಿಯರ ಕುತೂಹಲದ ಪ್ರಶ್ನೆಗಳಿಗೆ ಪ್ರಪಂಚ ಕೆದಕುತ್ತ ಕಾಲ ಕಳೆದಾಗ ಮಧ್ಯಾಹ್ನ ಮೂರಾಯಿತೇನೊ. ಗೆಳೆಯ ಪ್ರೊ. ಹರೀಶ ಅವರ ಮನೆಯ ಆತಿಥ್ಯ ಸ್ವೀಕರಿಸಿ ಸಾಯಂಕಾಲ ದರ್ಶನ-ಸಂದರ್ಶನ ಅಮೃತೇಶ್ವರ ದೇವಾಲಯಕ್ಕೆ.
 ತಡವಾಗಿತ್ತು. ಅಮೃತೇಶ್ವರ ದೇವಾಲಯ ಮುಚ್ಚಿಕೊಂಡು ಪ್ರಾಂಗಣದ ಸರಸ್ವತಿ ದೇವಾಲಯ ಮಾತ್ರ ನಮಗಾಗಿ ತೆರೆದುಕೊಂಡಿತ್ತು, ಸಿಕ್ಕಷ್ಟೇ ಸರಸ್ವತಿ. ಗದಗನಲ್ಲಿಯ ಸರಸ್ವತಿ ದೇವಾಲಯವನ್ನು ಒಂದುಕ್ಷಣ ಸ್ಮರಣೆಗೆ ತಂದ ಈ ದೇವಾಲಯ ಅಷ್ಟೇ ಪ್ರಖರ ಶಾರದೆಯ ಮೂರ್ತಿಯನ್ನು ಹೊಂದಿದೆ. ಹೊಯ್ಸಳರ ಕಾಲದ ಈ ದೇವಾಲಯವನ್ನು ಎರಡನೇ ವೀರಬಲ್ಲಾಳ ನಿರ್ಮಿಸಿದನೆಂಬ ನಂಬಿಕೆಯಿದೆ.

 ಮರುಮುಂಜಾನೆ ಗೆಳೆಯ ಹಾಗೂ ವಿದ್ಯಾರ್ಥಿಗಳ ಒತ್ತಾಸೆಯ ಮೇರೆಗೆ ಐಚ್ಚಿಕ ಇಂಗ್ಲೀಷ ವಿದ್ಯಾರ್ಥಿಗಳಿಗಾಗಿ ಒಂದು ಪಾಠ ಮುಗಿಸಿ ಹೊರಟದ್ದು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನೆಡೆಗೆ .
 ಬಯಲು ಸೀಮೆಯ ಬಿರುಬಿಸಿಲಿನ ಬಾರ್ಡರ್ ಹಳ್ಳಿಯಾದ ಚಡಚಣದಲ್ಲಿ ಇಡೀ ನನ್ನ ಬಾಲ್ಯ ಕಟ್ಟಿಕೊಂಡ ನಾನು ಚಿಕ್ಕವನಿದ್ದಾಗ ಎಸ್.ಪಿ.ಬಾಲ್ಯಸುಬ್ರಮಣ್ಯಂ ಹಾಡಿದ “ತರೀಕೆರೆ ಕೆರೆ ಮೇಲೆ ಮೂರು ಕರಿ ಕುರಿಮರಿ ಮೇಯುತ್ತಿತ್ತು” ಕೇಳುತ್ತ, ಆ ಮೂಲಕವೇ ಈ ಊರನ್ನು ಕಲ್ಪಿಸಿಕೊಳ್ಳುತ್ತಿದ್ದ ನಾನು ಮುಂದೊಂದು ದಿನ ಇಲ್ಲಿ ನಿಂತು ಭಾಷಣ ಮಾಡುತ್ತೇನೆಂದುಕೊಂಡಿರಲಿಲ್ಲ. ಹಾಗಂತ ನಾನೆನು ಚಂದ್ರನ ಮೇಲೆ ಮೊದಲ ಪಾದಾರ್ಪಣೆ ನೀಲ್ ಆರ್ಮಸ್ಟ್ರಾಂಗ್‍ನೂ ಅಲ್ಲ. ಒಂದು ಕ್ಷಣ ನಾ ಕುಳಿತ ಸ್ಥಳದ ಹಿಂದೆ ಹೊರಳಿ ನೋಡಿದರೆ ‘ಈ ಸಭಾಂಗಣದ ಉದ್ಘಾಟನೆ ಶ್ರೀ ಎಸ್.ಆರ್.ಕಂಠಿಯವರಿಂದ’ ಎಂಬ ಫಲಕ ನನ್ನನ್ನೇ ಮೂದಲಿಸುವಂತಿತ್ತು. 
 ಮುಗಿಸುವ ಮುನ್ನ ಇಲ್ಲಿಯ ಸಾಲು ಮರದ ಅಮ್ಮನನ್ನು ಕುರಿತು ಮಾತನಾಡದೇ ಹೋದರೆ ನನ್ನವ್ವನನ್ನು ಮರೆತಷ್ಟೇ ನೋವಾಗುತ್ತದೆ. ಅದೆಷ್ಟು ಸಾಲುಮರಗಳ ಅಮ್ಮಳಾಗಿ ಈಕೆ ಇಲ್ಲಿ ಒಂದು ಕಾಲಕ್ಕೆ ಪ್ರತಿಷ್ಠಾಪಿಸಳಾಗಿದ್ದಳೋ ಅದು ಇತಿಹಾಸವೇ ಹೇಳಬೇಕು. ಈಗಂತೂ ಅವಳು ಸಾಲು ಮಳಿಗೆಗಳ ಮಧ್ಯ ಮಹಾತಾಯಿಯಾಗಿದ್ದಾಳೆ. ತಾಯಿ ಎಲ್ಲಿದ್ದರೂ ತಾಯಿಯೆ. ಈಗಲೂ ಅವಳು ಬರಿದಾಗಿ ಬಂದವಳ ಉಡಿ ತುಂಬುತ್ತಾಳೆ. ಎಚ್ಚರಾಗಿರುವ ಹೆಣ್ಣಿನ ಹಣೆಗೆ ಕುಂಕುಮವಿಟ್ಟು ಒಡಲಿಗೆ ಹೆಮ್ಮರದ ಬೀಜ ಬಿತ್ತುತ್ತಾಳೆ. ಆದರೆ ಬಾಗುವವಳು, ಬರುವವಳು ಹೆಣ್ಣಾಗಿದ್ದರೆ ಮಾತ್ರ.
ನಾನು ಅವಳ ಬಳಿ ಮತ್ತೆ ಹೋಗುತ್ತಿದ್ದೇನೆ ನನ್ನ ಹೆಂಡತಿಯೊಂದಿಗೆ.