Total Pageviews

Wednesday, January 13, 2016

ದೇವರಿಗೆ ವಿಶೇಷಣವಿಲ್ಲ



ಬಹಳ ಬರೆದವನಲ್ಲ ಬಿಲ್ಲಿ ಕಾಲಿನ್ಸ್. ದೊಡ್ಡ ಕವಿಯಂತು ಅಲ್ಲವೇ ಅಲ್ಲ. ಆದರೆ ಕವಿತೆಯೊಂದನ್ನು ಹೇಗೆ ಓದಬೇಕು? ಹೀಗೆ ಓದುವದರಿಂದ ಸಿಗುವ ಸುಖವೇನು? ಎನ್ನುವುದನ್ನು ತನ್ನ ಕವಿತೆಯೊಂದರಲ್ಲಿಯೇ ಬಹಳ ಸುಂದರವಾಗಿ ಕಟ್ಟಿಕೊಟ್ಟಿದ್ದಾನೆ.
I ask them to take a poem
and hold it up to the light
like a color slide
or press any year against its hive
I say drop a mouse into a poem
and watch him probe his way out
or walk inside the poems room
and feel the walls for a light switch
ನನ್ನಂತೆಯೇ ಆಲೋಚಿಸುವ, ಮಾತನಾಡುವ ಮನಸ್ಸೊಂದು ಸಿಕ್ಕಾಗ ಅದು ನಮಗೆ ಹತ್ತಿರವಾಗಿಬಿಡುತ್ತದೆ. ಆಶ್ಚರ್ಯವೆಂದರೆ ಸಂಪೂರ್ಣ ನಮ್ಮ ವಿರುದ್ಧವಾಗಿ ತಾತ್ವಿಕ ನೆಲೆಯಲ್ಲಿ ಗಟ್ಟಿಯಾದ ಪಾತ್ರ ಸಿಕ್ಕಾಗಲೂ ಅದು ನಮ್ಮ ಗೌರವಕ್ಕೆ ಪಾತ್ರವಾಗುತ್ತದೆ. ನನಗೆ ಹೀಗೆಯೇ ದಕ್ಕಿದವನು ಈ ಬಿಲ್ಲಿ ಕಾಲಿನ್ಸ್. ಈ ಮಾಗಿಯ ಚಳಿಯಲ್ಲಿ ಕವಿತೆ ಕುರಿತಾದ ಅವನ ಮಾತು ಮುದ ನೀಡುತ್ತಿವೆ.
ಅಂದಹಾಗೆ, ಬೆಂಗಳೂರಿನಲ್ಲೀಗ ವಿಪರೀತ ಚಳಿ. ಒಂದು ಕ್ಷಣ ನಮ್ಮ ಬೇಲೂರು-ಸಕಲೇಶಪುರಗಳ ಚಳಿಯನ್ನೂ ಮೀರಿಸುತ್ತದೆ ಎನ್ನಿಸುತ್ತದೆ. ಈ ಚಳಿ ನನಗೆ ಇಷ್ಟವೆ. ಹಾಗೆ ನೋಡಿದರೆ ಈ ಚಳಿ, ಚಳಿ ಮುದಗೊಳಿಸುವ ಶೆರೆ, ಸ್ನೇಹ, ಸಾಹಿತ್ಯ, ಸಂಗೀತ ಮತ್ತು ಮೌನಗಳು ನನಗೆಂದೂ ಭಾರವಾಗಿಲ್ಲ. ವರ್ಷವೆಲ್ಲವೂ ಚಳಿಗಾಲವೇ ಆಗಿದ್ದರೆ ಎಂಥ ಚಂದ ಅಂದುಕೊಳ್ಳುವುದರಲ್ಲಿ ಬಾಲ್ಯದಲ್ಲಿ ಓದಿದ ‘ಅಣು ಚಳಿಗಾಲ ಅಡಗಲು ಸ್ಥಳವೆಲ್ಲಿ?’ ಎನ್ನುವ ವೈಜ್ಞಾನಿಕ ಲೇಖನ ನೆನಪಾಗುತ್ತದೆ. ನಾಗೇಶ ಹೆಗಡೆ ಬರೆದ ಈ ಲೇಖನ ಓದುವಾಗ ಒಂದು ಕ್ಷಣ ನನ್ನೂರು ಚಡಚಣ ಮೃತ್ಯು ತೆಕ್ಕೆಗೆ ಬಿದ್ದು ನಾನೊಬ್ಬನೆ ಜೀವಂತವಾಗಿದ್ದು ಬೆಂಕಿ ಪೊಟ್ಟಣಕ್ಕೆ ತಡಕಾಡಿದ ಕನಸು ಬಿದ್ದಿತ್ತು.
ಮಲೆನಾಡ ಚಳಿಗೆ ಮೂರು ದಿನ ಮೈಯೊಡ್ಡಿ ಬೆಂಗಳೂರಿಗೆ ಬಂದರೆ ಈ ಚಳಿಯಲ್ಲಿ ಗಾಳಿಯೂ ಸೇರಿಕೊಂಡು, ತಂಪಾಗಿ ನನ್ನೆದೆಯ ಗೂಡನ್ನು ನಡುಗಿಸಿ ಬಿಟ್ಟಿದೆ. ಗೂಡಿನಲ್ಲಿದ್ದ ಕವಿತೆ, ಕನಸು ಮತ್ತು ಮಾತು ಎಲ್ಲ ನಿಬ್ಬಾಗಿವೆ. ಕಳೆದ ನಾಲ್ಕು ದಿನಗಳಿಂದ ಮಾತಾಡಲಾಗದಷ್ಟು ಖೆಮ್ಮು. ವರ್ಷಕ್ಕೊಮ್ಮೆ ಭಕ್ತನಂತೆ ನನ್ನ ದೇಹವೆಂಬ ದೇಗುಲಕ್ಕೆ ಬಂದು ಹೋಗುವ ಈ ಖೆಮ್ಮಿಗೆ ನಾನು ವಾರೊಪ್ಪತ್ತು ಇರಿಸಿಕೊಂಡು, ಬೆಚ್ಚಗಿನದೆಲ್ಲವನ್ನು ತಿನಿಸಿ, ಕುಡಿಸಿ ಕಳುಹಿಸುತ್ತೇನೆ. ಇದು ಕಳೆದ ಅರ್ಧ ದಶಕದ ನಂಟು. ಬಿಟ್ಟೀನೆಂದರು ಬಿಡದ ಮಾಯೆ. ಈ ಮಾಯೆಯ ಕರೆದುಕೊಂಡೇ ಬೆಂಗಳೂರಿನ ಬೀದಿ ಬೀದಿಗಳಲ್ಲಿ ತರಾವರಿಯ ರಂಗೋಲಿಯಾಗಿ ಹರಡಿದ ಸಂಕ್ರಾಂತಿಯ ಸಂಭ್ರಮವನ್ನು ಕಣ್ತುಂಬಿಸಿಕೊಳ್ಳುತ್ತಿದ್ದೇನೆ. 
 ಕಳೆದ ಮೂರು ದಿನಗಳಿಂದ ಕೈಯಲ್ಲಿ ‘ದೇಹವೆಂಬ ದೇವವೀಣೆ’ ಪುಸ್ತಕವಿದೆ. ಡಾ. ವಸಂತ ಕುಲಕರ್ಣಿಯವರ ಈ ಸರಳ ಪುಸ್ತಕ ನನ್ನ ಸಮಸ್ಯೆಗೆ ಪರಿಹಾರ ಸೂಚಿಸಿತೆ? ಎಂದು ಕಣ್ಣಾಡಿಸುತ್ತಿದ್ದೇನೆ. ಟೇಬಲ್ ಮೇಲೆ ಶಿರಸಿಯ ತಾರಾ ಹೆಗಡೆಯವರ ‘ಚೆಲ್ಲಿದ ಹೂಗಳು’ ಕಾವ್ಯಸಂಕಲನ ಮುನ್ನುಡಿಗಾಗಿ ಕಾಯುತ್ತಿದೆ. ಮೂರನೆಯ ಮಗುವಿಗಾಗಿ ಮಡದಿ ತವರಿಗೆ ಹೋಗಿದ್ದಾರೆ. ಮನೆಯ ಹಿಂಬದಿಯಲ್ಲಿ ತಿಂಗಳುಗಳ ಹಿಂದೆ ಹುಟ್ಟಿದ ಕೂಸು ಹಾಡುತ್ತದೆ, ಕಾಡುತ್ತದೆ, ಕಾಲದ ಅನಂತ ಲೋಕದಲ್ಲಿ ಕೃಷ್ಣನಂತೆ ಕರೆದುಕೊಂಡು ಹೋಗುತ್ತದೆ. ಇತ್ತೀಚಿಗಂತು ನಸುಕಿನ ನನ್ನ ನಿದ್ರೆಗೆ ಅದರ ಜೋಗುಳವಿರಲೇಬೇಕು.
ಹೀಗೆ ಬದುಕು ಜೀವವಾಗಿ ಜನಿಸಿ ಜೋಗುಳ ಹಾಡಿದರೆ, ಮತ್ತೊಂದೆಡೆ ಮೃತ್ಯು ನಿತ್ಯ ಅಟ್ಟಹಾಸ ಮಾಡಿ ನೆಮ್ಮದಿಯ ರಂಗೋಲಿಯ ಅಂದಗೆಡಿಸುತ್ತದೆ. ಧಾರವಾಡದ ಡಿ.ಎಂ ಹಿರೇಮಠರ ಕುಟುಂಬದಲ್ಲಿ ಇತ್ತೀಚೆಗೆ ನಡೆದ ಮೃತ್ಯು ನರ್ತನ ನನ್ನ ನೆಮ್ಮದಿಯನ್ನು ಕೆಡಿಸಿದೆ. ನುಗ್ಗೀಕೆರೆ ಕ್ರಾಸಿನಲ್ಲಿ ನಿಂತ ಕಾರಿಗೆ ಬಂದಪ್ಪಳಿಸಿದ ಮತ್ತೊಂದು ವಾಹನ ಇದರಲ್ಲಿ ಬಾಳಿ ಬದುಕಬೇಕಾದ ಹಿರೇಮಠರ ಮಗ ಮತ್ತು ಸೊಸೆಯ ಸಾವು ಯಾರ ಕುಟುಂಬದಲ್ಲಿ ಯಾವ ಕ್ಷಣದಲ್ಲೂ ನಡೆಯಬಹುದಾದುದೆ. ನಾಲ್ಕು ದಿನದ ಹಿಂದೆ ಕಾರು ಹತ್ತಿ ಮಂಗಳೂರಿಗೆ ಹೋಗಿ ಬಂದ ನನ್ನೊಂದಿಗೂ ಇದು ನಡೆಯಬಾರದು ಎಂದು ಏನಾದರು ಶಾಸನವಿದೆಯೆ? 2015ರಲ್ಲಿ ಅಪಘಾತದ ರುಚಿ ಕಂಡ ಜೀವ ನಮ್ಮದು.
ಅಪಘಾತಗಳು ಜರಗುತ್ತಲೇ ಇರುತ್ತವೆ. ದಾರಿಯಲ್ಲಿ, ಆಲೋಚನೆಯಲ್ಲಿ, ನಂಬಿಕೆಯಲ್ಲಿ ಮತ್ತು ಭಾವನೆಗಳಲ್ಲಿ. ಆದರೆ ಈ ಅಪಘಾತಗಳೊಂದಿಗೆ ಬದುಕಬೇಕಾದುದು, ಬಂದ ಬದುಕನ್ನು ಬಾಚಿ ತಬ್ಬಿಕೊಳ್ಳಬೇಕಾದುದು ಬಹಳ ಹಿತವೆನಿಸಿದೆ ನನಗೆ. ಇಲ್ಲಿ ನನಗೆ ನನ್ನ ಪ್ರೀತಿಯ ಮುದುಕ ನೆನಪಾಗುತ್ತಾನೆ. ಬಹಳ ಸುಂದರ ಮನಸ್ಸು ಆತನದು. ಆತನಿಗೆ ಗಾಂಧಿ ಎಂಬ ಹೆಸರಿನ ಬಿಲ್ಲೆ ಇದೆ. ಒಂದೆಡೆ ಹೇಳುತ್ತಾನೆ – “ನಾನು ಜನರನ್ನು ನಂಬುತ್ತೇನೆ. ನಂಬಿಕೆಯಿಂದ ಯಾವುದೆ ಭಯಂಕರ ಹಾನಿಯಾಗುತ್ತದೆ ಎಂದು ನಾನು ತಿಳಿದುಕೊಂಡಿಲ್ಲ. ನನ್ನನ್ನು ಜನರು ನಂಬಬೇಕು ಎಂದು ನಾನು ಹೇಗೆ ಆಶಿಸುತ್ತೇನೆಯೋ ಹಾಗೆಯೇ ಜನರನ್ನೂ ನಂಬುತ್ತೇನೆ. ನಂಬಿಕೆಯೇ ಜನರನ್ನು ಪ್ರೀತಿಸುವ ಸರಿಯಾದ ಪಥ ಎಂದು ನನ್ನ ತಿಳುವಳಿಕೆಯಾಗಿದೆ. ಯಾರು ಯಾರನ್ನೂ ನಂಬಿ ಮೋಸ ಹೋಗಲು ಸಾಧ್ಯವಿಲ್ಲ. ನಮ್ಮ ನಂಬಿಕೆ ಪ್ರಾಮಾಣಿಕವಾಗಿದ್ದರೆ ಮೋಸಗಾರರೇ ಮೋಸಗೊಳ್ಳುತ್ತಾರೆ. ಗೊತ್ತಿರಲಿ, ಯಾರನ್ನು ನಂಬಿ ನಾನು ಯೋಜನೆಗಳನ್ನು ಪ್ರಾರಂಭಿಸಿದೆನೋ ಹಾಗೆಯೇ ನನ್ನನ್ನೂ ನಂಬಿ ನಾನು ಅಡಿ ಇಟ್ಟಿದ್ದೇನೆ. 
 ಒಳ್ಳೆಯತನವೆ ದೇವರು, ದೇವರೇ ಜೀವ, ಜೀವವೇ ದೇವರು. ಒಳಿತು ಎನ್ನುವುದು ದೇವರಿಗೆ ವಿಶೇಷಣವಲ್ಲ. ಒಳಿತನ್ನು ಹೊರತುಪಡಿಸಿದ ದೇವರು, ಬದುಕು ಮೃತ್ಯುವಿನ ಆವ್ಹಾನವಷ್ಟೆ. ಇಂಥ ದೇವರುಗಳು ಮತ್ತು ಬದುಕುಗಳು ಹುಚ್ಚು ಕಲ್ಪನೆಯಲ್ಲಿ ಸೃಷ್ಠಿಯಾಗುತ್ತವೆ.”
ಎಷ್ಟೊಂದು ಬೆಚ್ಚಗಿದೆಯಲ್ಲ ಈ ಮಾತು.

Thursday, January 7, 2016

ಈಗ ದ್ವಾಪರ ಯುಗ



1
ಹುಟ್ಟು ಹಬ್ಬದ ಹಿಂದಿನ ರಾತ್ರಿ
ಆಕಾಶದ ಗುಡುಗಿನ ಪರಿಗೆ
ಅರಿವಾಗಿತ್ತು ಜಾಜಿಗೆ ಜೋಗಿ ಬರುತ್ತಾನೆ
ಜಂಗಮಯ್ಯ ಬರುತ್ತಾನೆ ಬಿಕ್ಷೆಗೆ
ಭವ ಭವಗಳ ಭಾವದ ಧೂಳು ಬರಿಗಾಲಲ್ಲಿ
ಬರುತ್ತಾನೆ ಬೈರಾಗಿ ಎಂದು

2
ಬಾಯ್ತೆರೆದರೆ ಶಾಪ, ಕಣ್ತುಂಬ ಕೋಪ
ಆತನ ನಿಲುವೋ ಬರೀ ವಿಕೋಪ
ಬೂದಿ ಮೆತ್ತಿದ ಬತ್ತಲೆ ಮಗ
ನೆತ್ತಿಯಲ್ಲೆ ಹೊಡೆಯುತ್ತಾನೆ ಗತ ಗತಗಳ
ಚಿತ್ತ ತೊಯ್ಯುವ ಹಾಗೆ
ಈತನ ಉಸಿರುಸಿರಿಗೂ
ಸ್ಮಶಾನದ ರುದ್ರನರ್ತನ
ಇಂಥವನ ಬೊಗಸೆ-ಬಾಯಿಗೊಂದಿಷ್ಟು
ಅನ್ನ ಹಾಕುತ್ತೇನಲ್ಲ ಧನ್ಯವಾಯಿತು ಬದುಕು
ಹುಟ್ಟುಹಬ್ಬದ ಈ ದಿನವೂ ಪಾವನ
ಎಂದು ಹೂವಾಗುತ್ತಾಳೆ ಜಾಜಿ
3
ಮುಂಗೋಳಿ ಇನ್ನೂ ಮಲಗಿತ್ತು
ಜಾಜಿಯ ಎದೆಯಲ್ಲಿ ಬೆಳಕಾಗಿತ್ತು
ಮಂಗಳದ ಗಾನ ಎಲ್ಲೋ ದೂರದಿಂದ
ಸಿಡಿಲು ಸನ್ಯಾಸಿಯ ನೆನಪಾಗಿ
ಸಟ್ಟನೆದ್ದು ಹಿತ್ತಲೊಲೆಗೆ ಬೆಂಕಿ ಹಾಕಿ
ಪಾಪದ ಕನಸುಗಳ, ಮೈ-ಮುಖಗಳ ಆಚೆ ನೂಕಿ
ಅಂಗದ ರಂದ್ರ ರಂದ್ರಕ್ಕೂ ಎಣ್ಣೆ ಹಾಕಿ
ಮೆದುವಾಗಿ ರೋಮ ರೋಮವೂ ಸೋಕಿ
ಮೈ ತೊಳೆದುಕೊಳ್ಳುತ್ತಾಳೆ ಜಾಜಿ
ಹೂ ಕಿಳುತ್ತಾ ಪುಣ್ಯದ ಲೆಕ್ಕ ಹಾಕುತ್ತಾಳೆ
ಆತನ ಅಂಗಾಲದ ಗೆರೆ ಗೆರೆಗೂ
ಮಕರಂದದ ಮದರಂಗಿ ತೀಡುತ್ತೇನೆಂದುಕೊಳ್ಳುತ್ತಾಳೆ
ರಂಗೋಲಿಯ ರಂಗನೆರೆದು ರಾಧೆಯಾಗುತ್ತಾಳೆ
ಕೃಷ್ಣನಲ್ಲದ ಕಡು ಕೋಪಿಗೆ

4
ಮಾಡಿಟ್ಟ ಅಡಿಗೆಯ ಮೇಲೆ ಕೆನೆ ಬರುತ್ತದೆ
ಹಂಗಿಗೆ ಹಸಿದವರೆಲ್ಲ ಉಂಡು ಹೋಗುತ್ತಾರೆ
ಸಂಗಾತಿಗಳೆಲ್ಲ ಸೇರಿ ಹುಟ್ಟಿನ ಹಾಡು ಹಾಡಿ
ಸಾವಿನ ಚುಕ್ಕೆ ಇಟ್ಟು ಹೋಗುತ್ತಾರೆ ಕಾಣಿಕೆ ಕೊಟ್ಟು
ಜಾಜಿಗೂ ಕ್ಷಣದ ಸಂಭ್ರಮ
ಎಂಥ ಮರೆವಾಗಿತ್ತು ಆಕೆಗೆ
ಎಲ್ಲ ತೊಟ್ಟು ತಣಿಯಲೆತ್ನಿಸುತ್ತಾಳೆ ಜಾಜಿ
ತನುವಿನೊಳಗಿನ ಬೆಂಕಿ ನಂದುವುದಿಲ್ಲ
ಸಾಲು ಸಾಲು ಬಟ್ಟೆಗಳಲ್ಲಿ ಬತ್ತಲೆ ಬತ್ತಿ ಹೋಗುವುದಿಲ್ಲ
ಹರಕೆಯ ಯಾವ ಕೈಯೂ ತಣ್ಣಗಾಗಿಸುವುದಿಲ್ಲ ನೆತ್ತಿಯ
ಹಸಿಯಾದ ಎದೆಗೆ ನೀರಾಡುವ ನಾಲಿಗೆಗೆ
ಹೋಗಿದ್ದಾರೆ ಎಲ್ಲರೂ ಸಿಹಿಯ ಮೆತ್ತಿ ಮೆತ್ತಿ

5
ಹೊತ್ತು ಜಾರಿ ಸೂರ್ಯ ನೆತ್ತಿಗೆ ಬಂದ
ಸುಳ್ಳಾಗಿತ್ತೆ ನಿನ್ನೆ ಕಂಡ ಜೋಗಿಯ ಕನಸು?
ಆತ ಈಗ ಬರೀ ಕನಸ ಕಂದೀಲೆ?
ಮತ್ತೆ ಹುಳು ಹತ್ತಿ ಜಾಜಿಯ ಚಿತ್ತ ಕೆಟ್ಟಿತು
ನಿದ್ರೆ ಹುಟ್ಟಿತು ಕಾಯ್ದ ಜೀವ ಸೋತು ಸುಣ್ಣಾಗಿ
ಕಣ್ಣೀರಾಯಿತು ಹೆಣ್ಣು ಎದೆಯೂ ಹಣ್ಣಾಗಿ
ಆಸೆ ತಣ್ಣಗಾಯಿತು ಮಣ್ಣು ಮಣ್ಣಾಗಿ ನಿದ್ರೆಗೊರಗಿ

6
ಹರೆಹೊತ್ತಿನ ಮಂಪರು
ಈಗ ಕುಳಿತ ನೆಲವೇ ನಡುಗಿದ ಭಾವ ಭಯ
ಗುಡುಗು ಗರ್ಜನೆ ತಣ್ಣನೆಯ ನೆಲವೂ
ನಡುಗುವ ನಡ

7
ನಿದ್ರೆ ಹೊದ್ದ ಕಣ್ಣು ಅರಳಿದರೆ
ಮಹಾ ಮಾಯಾವಿ
ಎದುರು ನಿಂತಿದ್ದಾನೆ ಮುಳ್ಳಾವಿಗೆಯ ಮೇಲೆ
ಸಾಷ್ಟಾಂಗವೆರಗುತ್ತಾಳೆ ಜಾಜಿ ಅವಳೀಗ ಮುತ್ತುಗದ ಮಾಲೆ
ಬೆಂಕಿಗೂ-ಹೂವಿಗೂ ಬಾಗು-ಬೆಸುಗೆಯ ಭಾಷೆ!
ಇದೆಂಥ ಲೀಲೆ?
ಮಣ್ಣು ಮಣ್ಣಾದವನ ಹೀಗೆ ತುಂಬಿಕೊಳ್ಳುವುದು
ಜಾಜಿಯ ಸೋಲೆ?
ಸುಮ್ಮನಿದ್ದ ಹೊರಗೆ ಸನ್ಯಾಸಿ, ಬೆಂಕಿಯಾಗಿದ್ದ ಒಳಗೆ ಹಸಿವೆಗೆ ದೈನೇಸಿ
ಹುಟ್ಟು ಸಾರ್ಥಕವೆನಿಸಿ ಬಳಕಿಸುತ್ತ ಸೊಂಟ
ಭಿಕ್ಷೆ ತರಲು ಒಳಹೋದಳು ನಗುತ್ತ ತುಂಟ

8
ಬಂಗಾರ ಬಾಂಡ ಬೆಳ್ಳಿ ಚಮಚೆ
ಮೈ-ಮೃಷ್ಠಾನ್ನ ಮುಂದೆ ಮಾಡಿದಳು
ಹಿಮಗಿರಿಯ ಒಡಲಿಂದ ಸಿಡಿದ ಕಿಡಿಯೇ
ಬೆಳಕಾಗಲಿ ಬಾಳು ಎಂದು ಹರಸೋ
ಬೇಡಿಕೊಂಡಳು ಜಾಜಿ
ನಿರ್ಭಾವುಕ ಬಿಕನಾಸಿ ಜೋಗಿ
ಬೆಂಕಿಯಾಗಿಯೇ ಇದ್ದ, ಈಗ ಭುಗಿಲೆದ್ದ
 
9
ಜಡೆ ಬಿಚ್ಚಿ ಕಿಡಿಯಾದ
ಶತಮಾನ ಕಾಯ್ದಿತ್ತು ತಾಯೆ ನನ್ನೊಡಲು
ನಿನ್ನ ಬೊಗಸೆ ಭಿಕ್ಷೆಯೇ ನನ್ನ ಇಡೀ ಬದುಕ ಬಯಕೆ ನೀಗಿಸುವ ಕಡಲು
ಅನ್ನ ಕೊಡು ತಾಯಿ, ಎಚ್ಚರವಿರಲಿ
ತುತ್ತು ಅನ್ನಕ್ಕೆ ತೊತ್ತಿನ ಮೊತ್ತವಿರಬಾರದು
ಹುಟ್ಟ ಬಟ್ಟೆಯಲಿ ಹಿಟ್ಟು ಅಟ್ಟು ನೀಡುವ ಹಠವಿಲ್ಲದವಳು
ನಮ್ಮಥವರಿಗೆ ಭಿಕ್ಷೆ ನೀಡುವ ಕನಸು ಕಾಣಬಾರದು
ತುತ್ತಿಗಾಗಿ ತೊಟ್ಟು ಮೆಚ್ಚುವವರಲ್ಲ ನಾವು
ಕೆಟ್ಟದಿಲ್ಲವೋ ಜಗದೊಳಗೆ ಮಗನೆ
ಮೈ ಮಥಿಸ ಬಾ, ಮದಿಸ ಬಾ
ಎಂದ ತಾಯಿಗಳ ಗರಡಿಯಲಿ
ಗರ್ವದ ಗಾಳಿಯಿಂದಲೇ ಬೆಳೆದ ಪವನ ಪುತ್ರರು ನಾವು
ಊಟ ನೀಡವ್ವ ತಾಯಿ ತಾಟಿಲ್ಲದೆ
ಬೆಂಕಿ, ಬಾಂಡ, ಬೀಜಗಳ ತನುವಿಲ್ಲದೆ
ನೆನಪುಗಳ ನಂಜು, ಪಶ್ಚಾತಾಪದ ಕಣ್ಣೀರ ಮಂಜುಗಳ ಹಂಗಿಲ್ಲದೆ
ಮೃಷ್ಠಾನ್ನ ಬೇಡ
ಮುಷ್ಠಿ ಅನ್ನಕ್ಕೆ ಮೃತ್ಯು ಲೇಪನ ಬೇಡ
ಕೈಯೊಡ್ಡಿದ್ದೇನೆ ಕರುಣಿಸವ್ವ

10
ಹಿರಿ ಆಸೆಗಳ ಕಿರಿ ಜೀವ ಜಾಜಿ
ಹಂಚಿಕೊಂಡವಳು ಜಗದ ಸಂತೆಯಲಿ
ಆಸೆಗಳ ಇಂಚು ಇಂಚಾಗಿ
ಒಗಟು ಒಗಟಾದವನ ಒಡಲ ತಳಮಳ
ಅರ್ಥವಾಯಿತೋ? ಎಲ್ಲ ನಿರರ್ಥಕವಾಯಿತೊ?
ಹುಟ್ಟುಹಬ್ಬದ ಹುಟ್ಟಡಗಿಸಿತೊ?
11
ಕಣ್ಣೀರಾದ ಜಾಜಿ
ರೆಪ್ಪೆಯಗಲಿಸಿ ನೋಡುವುದರೊಳಗೆ ಜೋಗಿ ಇಲ್ಲ!
ಆತ ನಿಂತ ನೆಲದಲ್ಲಿ ಮೂಡಿದ ಪಾದಗಳೇ ಈಗ ಎಲ್ಲ

12
ಹತ್ತಿರ ಹೋಗಿ, ಹಿಡಿ ಮಣ್ಣ ಎತ್ತಿದರೆ
ಉಸಿರೇ ಮಲಗಿಸಿದ್ದ ಮಗ
ಈಗವಳ ಕಿಬ್ಬೊಟ್ಟೆಯಲಿ ದ್ವಾರಕೆಯ ಕೊಡ ಉರುಳಿದ ಅನುಭವ
ಕೃಷ್ಣ ಕೊಳಲನ್ನಿಟ್ಟಿದ್ದ ಮಣ್ಣಲ್ಲಿಗ ದ್ವಾಪರ ಯುಗ








Friday, January 1, 2016

ಶೂನ್ಯಕ್ಕೆ ಶೂನ್ಯ ಪ್ರಶ್ನೆಯಾಗುವುದೇ



ಹೊಸ ವರ್ಷದ ಮೊದಲ ಬರಹ ಬೊದಿಲೇರ್‍ನ ಕುರಿತಾದುದು. ಅವನೆಂದರೆ ನನಗೆ ಇಷ್ಟೆ. ಈತ ಹಣ್ಣು ಹಣ್ಣಾದ ಹೆಣ್ಣಿನಂತೆ ಇಡೀ ಸಾಹಿತ್ಯವನ್ನೆಲ್ಲ ನರಳಿಕೆಗಳಿಂದ ತುಂಬಿ ಬಿಟ್ಟಿದ್ದಾನೆ. ಬದುಕೆಲ್ಲವನ್ನೂ ಬರೀ ಬಯಕೆಯಾಗಿಸಿಕೊಂಡು ಬೇಡುತ್ತಲೇ ಬದುಕ ನೀಗಿದವನು ಬೊದಿಲೇರ್. ಬಹಳ ಬರಿಯದ ಬೊದಿಲೇರ್ ಬರೆದುದಷ್ಟರಲ್ಲೇ ಪ್ರಪಂಚ ಬೆರಗಾಗುವಷ್ಟು ಧ್ವನಿಗಳನ್ನು ಹೊರಡಿಸಿದವನು. ಇವನೊಂದು ರೀತಿ ರಾಗವೊಂದಕ್ಕೆ ಸಾವಿರ ಹಾಡುಗಳ ಸಂಸಾರ ಕಟ್ಟಿದ ಸೂಕ್ಷ್ಮ ಕುಸುರಿಯ ಕಲಾವಿದ.
ಈ ವರ್ಷದ ಮೊದಲ ಅಂಕಣದ ಮೊದಲ ಭಾಗವಿದು.
ಹಳೆಯ ವರ್ಷದ ಹಿತ್ತಲಲ್ಲಿ ಅಥವಾ ಹೊಸ ವರ್ಷದ ಬಾಗಿಲಲ್ಲಿ ಯಾಕೋ ಮತ್ತೆರಿಸಿಕೊಳ್ಳುವ ವಾಂಛೆ ಇರಲಿಲ್ಲ. ಹಿಂದಿನ ದಿನ ನನ್ನೊಂದಿಗೆ ಕೃಷ್ಣನಿದ್ದರೆ ವರ್ಷದ ಮೊದಲ ಮುಖವಾಗಿ ಮಗನಿದ್ದ. ಆದರೆ 2015ರ ಕೊನೆ ಕೊನೆಯ ರಾತ್ರಿಗಳಲ್ಲಿ ನನ್ನೊಂದಿಗಿದ್ದುದು ಲಖನೌದ ಕ್ರಾಂತಿಕಾರಿ ಕವಿ ಮಜಾಜ್‍ನ ಕವಿತೆಗಳು. ಒಂದೆರಡು ನಮೂನೆ ನಿಮಗಾಗಿ –
ಆತ ಹೊಸ ಹಾಡು ಹಾಡೆಂದ
ನಾನು ಎದೆಯ ಮಾಗಿಗೆ ನಡಗುತ್ತಿದ್ದೇನೆ ಬೆಂಕಿ ನೀಡೆಂದೆ
*********
ಗುನುಗುತ್ತ ಗರ್ವದಲಿ ಮೈಮರೆತೆ ನಾನು
ಹೀಗೆ ಆತ್ಮ ವಿಶ್ವಾಸದ ಮಾತೊಂದನ್ನು ಮರೆಯುವುದು ಸರಿಯೇನು?
2015 ನನ್ನ ಪಾಲಿಗೆ ಅನುಪಮವಾಗಿತ್ತು. ಸರ್ವತೋಮುಖ ಬೆಳವಣಿಗೆಗಳಿಗೆ ಪೂರಕವಾಗಿತ್ತು. ಎಷ್ಟೊಂದು ಬೆಳಕಿತ್ತು, ಬೆರಗಿತ್ತು ಮತ್ತು ಭರವಸೆ ಇತ್ತು. ಇದೇ ಭಾಗ್ಯ ಮುಂದೊರೆಯುವುದಾದರೆ ಸಾವನ್ನು ನಾನೆಂದೂ ಪ್ರೀತಿಸಲಾರೆನೇನೊ. ಆದಾಗ್ಯೂ ವರ್ಷವೊಂದು ಉರುಳಿತೆಂದಾಗ ಕನವರಿಸಿದ ನನ್ನ ಮನಸ್ಸಿನ ಮೌನವನ್ನು ಈ ಕವಿತೆಯಲ್ಲಿ ದಾಖಲಿಸಿದ್ದೇನೆ. ಇದು ಕಳೆದ ವರ್ಷದ ಕೊನೆಯ ಕವಿತೆಯೋ, ಹೊಸ ವರ್ಷದ ಮೊದಲ ಕವಿತೆಯೋ ನಿರ್ಧರಿಸಬೇಕಾದವರು ನೀವು -
ವರ್ಷ ಉರುಳಿದ ರೀತಿಗೆ
ನೆನಪಾಗುತ್ತದೆ, ದೊಡ್ಡ ವಡ್ಡಿನ ಹೊಲ
ನಮ್ಮ ಪೂರ್ವಜರ
ಸೌದಿ-ಸತ್ತಿಯ ಗಡ್ಡೆ
ದೊಡ್ಡಪ್ಪನ ಕುಡಿತದ ಅಡ್ಡೆ
ತಾಯಿ ತವರೂರಿನ ಎಲ್ಲಮ್ಮನ
ಗುಡಿಯ ಕಲ್ಲಿನ ಗುಡ್ಡೆ
ಬಿಸಿಲಲ್ಲಿ ಕೂಸಿಗೆ
ರವಿಕೆ ಜೋಳಿಗೆ ಕಟ್ಟಿ
ಕಲ್ಲೊಡೆಯುತ್ತಿದ್ದರೆ ಬಾಗವ್ವ
ತೆವಲು ತೆಪ್ಪಗಿರಿಸಿಕೊಂಡು
ಹೋಗುತ್ತಿದ್ದ ನನ್ನ ಗೆಳೆಯರ ಪಡ್ಡೆ
ಈಗ ಮತ್ತೆ ಅದೇ ಪ್ರಶ್ನೆ
ವರ್ಷ ಉರುಳಿ ಹೋಯಿತೆ?
ಹೊರಳಿ, ಕೆರಳಿ ಹೋಯಿತೆ?
ಅಥವಾ ಅರಳಿ ನಿಂತಿತೆ
ಗತದ ನೆನಪಿನ ಹೂವಾಗಿ?

ಸುಂದರ ಸುಳ್ಳು,
ಇದೂ ಸುಳ್ಳು, ಸುಂದರ ನಂಬಿಗೆ!
ಒಸರಿದ ಒಡ್ಡು ಬಗಸೆ ಹಳ್ಳಾಗಿದೆ
ಹೊಳೆಗೆ ಒಡ್ಡೋಲಗವಾದ ಗಡ್ಡೆ
ಪಾಠವಾಗಿದೆ ನನಗೆ
ಕುಡಿತದ ಅಡ್ಡೆ, ಕಲ್ಲಿನ ಗುಡ್ಡೆ
ಮನುಷ್ಯ ಮೊತ್ತವಾಗುವ ತತ್ವ ಹೇಳಿದೆ
ತಾಯಿ ಬಾಗವ್ವನ ರವಿಕೆ
ಬಾಳಿನ ತೊಟ್ಟಿಲಾಗಿದೆ ವರ್ಷದಂತೆ

ಎಲ್ಲ ಇದೆ ಅಲ್ಲಿ, ಬರುವುದು
ಬಸಿಯುವುದು ಹಸಿರಾಗುವುದು
ಅನಂತದ ಬೆರಳಿಗೆ ಎದೆಯೊಡ್ಡಿ
ಕಣ್ಣ ಕುಸುರಿಗೆ ಕವಿತೆಯಾಗುವುದು

ಈಗ ಪ್ರಶ್ನೆಗಳಿಲ್ಲ
ಶೂನ್ಯಕ್ಕೆ ಶೂನ್ಯ ಪ್ರಶ್ನೆಯಾಗುವುದೇ ಇಲ್ಲ

ಹೊಸ ವರ್ಷ ಸರ್ವರಿಗೂ ಸಮೃದ್ಧಿಯ ಬಾಳನ್ನು ನೀಡಲಿ.