Total Pageviews

Friday, January 1, 2016

ಶೂನ್ಯಕ್ಕೆ ಶೂನ್ಯ ಪ್ರಶ್ನೆಯಾಗುವುದೇ



ಹೊಸ ವರ್ಷದ ಮೊದಲ ಬರಹ ಬೊದಿಲೇರ್‍ನ ಕುರಿತಾದುದು. ಅವನೆಂದರೆ ನನಗೆ ಇಷ್ಟೆ. ಈತ ಹಣ್ಣು ಹಣ್ಣಾದ ಹೆಣ್ಣಿನಂತೆ ಇಡೀ ಸಾಹಿತ್ಯವನ್ನೆಲ್ಲ ನರಳಿಕೆಗಳಿಂದ ತುಂಬಿ ಬಿಟ್ಟಿದ್ದಾನೆ. ಬದುಕೆಲ್ಲವನ್ನೂ ಬರೀ ಬಯಕೆಯಾಗಿಸಿಕೊಂಡು ಬೇಡುತ್ತಲೇ ಬದುಕ ನೀಗಿದವನು ಬೊದಿಲೇರ್. ಬಹಳ ಬರಿಯದ ಬೊದಿಲೇರ್ ಬರೆದುದಷ್ಟರಲ್ಲೇ ಪ್ರಪಂಚ ಬೆರಗಾಗುವಷ್ಟು ಧ್ವನಿಗಳನ್ನು ಹೊರಡಿಸಿದವನು. ಇವನೊಂದು ರೀತಿ ರಾಗವೊಂದಕ್ಕೆ ಸಾವಿರ ಹಾಡುಗಳ ಸಂಸಾರ ಕಟ್ಟಿದ ಸೂಕ್ಷ್ಮ ಕುಸುರಿಯ ಕಲಾವಿದ.
ಈ ವರ್ಷದ ಮೊದಲ ಅಂಕಣದ ಮೊದಲ ಭಾಗವಿದು.
ಹಳೆಯ ವರ್ಷದ ಹಿತ್ತಲಲ್ಲಿ ಅಥವಾ ಹೊಸ ವರ್ಷದ ಬಾಗಿಲಲ್ಲಿ ಯಾಕೋ ಮತ್ತೆರಿಸಿಕೊಳ್ಳುವ ವಾಂಛೆ ಇರಲಿಲ್ಲ. ಹಿಂದಿನ ದಿನ ನನ್ನೊಂದಿಗೆ ಕೃಷ್ಣನಿದ್ದರೆ ವರ್ಷದ ಮೊದಲ ಮುಖವಾಗಿ ಮಗನಿದ್ದ. ಆದರೆ 2015ರ ಕೊನೆ ಕೊನೆಯ ರಾತ್ರಿಗಳಲ್ಲಿ ನನ್ನೊಂದಿಗಿದ್ದುದು ಲಖನೌದ ಕ್ರಾಂತಿಕಾರಿ ಕವಿ ಮಜಾಜ್‍ನ ಕವಿತೆಗಳು. ಒಂದೆರಡು ನಮೂನೆ ನಿಮಗಾಗಿ –
ಆತ ಹೊಸ ಹಾಡು ಹಾಡೆಂದ
ನಾನು ಎದೆಯ ಮಾಗಿಗೆ ನಡಗುತ್ತಿದ್ದೇನೆ ಬೆಂಕಿ ನೀಡೆಂದೆ
*********
ಗುನುಗುತ್ತ ಗರ್ವದಲಿ ಮೈಮರೆತೆ ನಾನು
ಹೀಗೆ ಆತ್ಮ ವಿಶ್ವಾಸದ ಮಾತೊಂದನ್ನು ಮರೆಯುವುದು ಸರಿಯೇನು?
2015 ನನ್ನ ಪಾಲಿಗೆ ಅನುಪಮವಾಗಿತ್ತು. ಸರ್ವತೋಮುಖ ಬೆಳವಣಿಗೆಗಳಿಗೆ ಪೂರಕವಾಗಿತ್ತು. ಎಷ್ಟೊಂದು ಬೆಳಕಿತ್ತು, ಬೆರಗಿತ್ತು ಮತ್ತು ಭರವಸೆ ಇತ್ತು. ಇದೇ ಭಾಗ್ಯ ಮುಂದೊರೆಯುವುದಾದರೆ ಸಾವನ್ನು ನಾನೆಂದೂ ಪ್ರೀತಿಸಲಾರೆನೇನೊ. ಆದಾಗ್ಯೂ ವರ್ಷವೊಂದು ಉರುಳಿತೆಂದಾಗ ಕನವರಿಸಿದ ನನ್ನ ಮನಸ್ಸಿನ ಮೌನವನ್ನು ಈ ಕವಿತೆಯಲ್ಲಿ ದಾಖಲಿಸಿದ್ದೇನೆ. ಇದು ಕಳೆದ ವರ್ಷದ ಕೊನೆಯ ಕವಿತೆಯೋ, ಹೊಸ ವರ್ಷದ ಮೊದಲ ಕವಿತೆಯೋ ನಿರ್ಧರಿಸಬೇಕಾದವರು ನೀವು -
ವರ್ಷ ಉರುಳಿದ ರೀತಿಗೆ
ನೆನಪಾಗುತ್ತದೆ, ದೊಡ್ಡ ವಡ್ಡಿನ ಹೊಲ
ನಮ್ಮ ಪೂರ್ವಜರ
ಸೌದಿ-ಸತ್ತಿಯ ಗಡ್ಡೆ
ದೊಡ್ಡಪ್ಪನ ಕುಡಿತದ ಅಡ್ಡೆ
ತಾಯಿ ತವರೂರಿನ ಎಲ್ಲಮ್ಮನ
ಗುಡಿಯ ಕಲ್ಲಿನ ಗುಡ್ಡೆ
ಬಿಸಿಲಲ್ಲಿ ಕೂಸಿಗೆ
ರವಿಕೆ ಜೋಳಿಗೆ ಕಟ್ಟಿ
ಕಲ್ಲೊಡೆಯುತ್ತಿದ್ದರೆ ಬಾಗವ್ವ
ತೆವಲು ತೆಪ್ಪಗಿರಿಸಿಕೊಂಡು
ಹೋಗುತ್ತಿದ್ದ ನನ್ನ ಗೆಳೆಯರ ಪಡ್ಡೆ
ಈಗ ಮತ್ತೆ ಅದೇ ಪ್ರಶ್ನೆ
ವರ್ಷ ಉರುಳಿ ಹೋಯಿತೆ?
ಹೊರಳಿ, ಕೆರಳಿ ಹೋಯಿತೆ?
ಅಥವಾ ಅರಳಿ ನಿಂತಿತೆ
ಗತದ ನೆನಪಿನ ಹೂವಾಗಿ?

ಸುಂದರ ಸುಳ್ಳು,
ಇದೂ ಸುಳ್ಳು, ಸುಂದರ ನಂಬಿಗೆ!
ಒಸರಿದ ಒಡ್ಡು ಬಗಸೆ ಹಳ್ಳಾಗಿದೆ
ಹೊಳೆಗೆ ಒಡ್ಡೋಲಗವಾದ ಗಡ್ಡೆ
ಪಾಠವಾಗಿದೆ ನನಗೆ
ಕುಡಿತದ ಅಡ್ಡೆ, ಕಲ್ಲಿನ ಗುಡ್ಡೆ
ಮನುಷ್ಯ ಮೊತ್ತವಾಗುವ ತತ್ವ ಹೇಳಿದೆ
ತಾಯಿ ಬಾಗವ್ವನ ರವಿಕೆ
ಬಾಳಿನ ತೊಟ್ಟಿಲಾಗಿದೆ ವರ್ಷದಂತೆ

ಎಲ್ಲ ಇದೆ ಅಲ್ಲಿ, ಬರುವುದು
ಬಸಿಯುವುದು ಹಸಿರಾಗುವುದು
ಅನಂತದ ಬೆರಳಿಗೆ ಎದೆಯೊಡ್ಡಿ
ಕಣ್ಣ ಕುಸುರಿಗೆ ಕವಿತೆಯಾಗುವುದು

ಈಗ ಪ್ರಶ್ನೆಗಳಿಲ್ಲ
ಶೂನ್ಯಕ್ಕೆ ಶೂನ್ಯ ಪ್ರಶ್ನೆಯಾಗುವುದೇ ಇಲ್ಲ

ಹೊಸ ವರ್ಷ ಸರ್ವರಿಗೂ ಸಮೃದ್ಧಿಯ ಬಾಳನ್ನು ನೀಡಲಿ.

No comments:

Post a Comment