Total Pageviews

Wednesday, January 11, 2017

ಮೃತ್ಯು ಇಷ್ಟೊಂದು ನಿರ್ಲಜ್ಯವಾಗಬಾರದಿತ್ತು...

R S Biradar


ಒಂದು ಸಾವು
ಮತ್ತೊಂದಕ್ಕೆ ಜೀವ
ಕೇಂದ್ರ ಒಂದೇ
ಚಕ್ರದ ಉರುಳು ಬೇರೆ ಬೇರೆ
                                                       -ಬೇಲೂರು ರಘುನಂದನ

ನನ್ನ ಪ್ರವಾಸವೇ ಪೂರ್ವ ನಿರ್ಧಾರಿತವಲ್ಲ. ಹಳೇ ಬೇರು-ಹೊಸ ಚಿಗುರು ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಬೆಂಗಳೂರೆಂಬ ಬೆಂಕಿ ಗೂಡಿಗೆ ಸೇರಿದ ಮೇಲೆ ಛಳಿಗೆ ಮೈ ಕಾಯಿಸಿಕೊಳ್ಳುತ್ತ ಉರುಳಿದ, ಉರುಳುತ್ತಿದ್ದ ವರ್ಷದ ಲೆಕ್ಕವಿಡುತ್ತ, ತೋಳುಗಳ ಮೇಲೆ ನನ್ನ ಕೂಸು ಕಂದಮ್ಮಗಳಿಂದ ಸದಾ ಸಂಪದ್ಭರಿತವಾದ ಸಂಸಾರ ಮಲಗಿಸಿಕೊಂಡು, ಸಮಾಧಿಗಳೊಂದಿಗಿನ ನನ್ನ ಸಂಬಂಧ ಚಿಂತಿಸುತ್ತ ಸುಮ್ಮನಿರುವಾಗ ನೆಲದಾಳದ ನಿಕ್ಷೇಪವೊಂದು ನನ್ನನ್ನು ಮತ್ತೆ ಸಮುದ್ರಮುಖಿಯಾಗಿಸಿತು.
R S B Wade
 ಅದು 27/12/2016. ನನ್ನ ಶಿಷ್ಯ ಗಣೇಶ ಯಾಜಿ ತನ್ನ ಬಹುವರ್ಷಗಳ ಪಿ.ಎಚ್.ಡಿ ಮಹಾಪ್ರಬಂಧವಾದ ಗಿರೀಶ್ಕಾರ್ನಾಡ್ಸ್ ಪ್ಲೇಜ್- ರೀ ರೀಡಿಂಗ್ಸಂಪೂರ್ಣಗೊಳಿಸಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ದಿನ. ನಾನು ಗಣೇಶರ ಗೈಡು. ನಮ್ಮ ಸಂಶೋಧನಾ ಪಯಣ ಕಳೆದ ನಾಲ್ಕು ವರ್ಷಗಳದ್ದು. ಒಟ್ಟಾರೆ ಮುಗಿಯಿತಲ್ಲ ಎಂಬ ನೆಮ್ಮದಿಯ ಉಸಿರು ಹಾಕಿ ವರ್ಷದ ಕೊನೆಗೊಂದು ಸಮುದ್ರ ದರ್ಶನ ಮುಗಿದೇಬಿಡಲಿ ಎಂದು ಅವರೊಂದಿಗೆ ಅರಬ್ಬಿ ಸಮುದ್ರದ ಆಯಕಟ್ಟೀನ ಊರಾದ ಭಟ್ಕಳಕ್ಕೆ ಬಂದೆ. ನನ್ನ ವೃತ್ತಿ ಭೂಮಿ ಭಟ್ಕಳ ಒಂದು ಕಾಲದ ಜೈನಮುನಿಗಳ ಮಹಾ ತಪಸ್ಸಿನ ನೆಲ. ನನ್ನ ವೃತ್ತಿ ಭೂಮಿ ಹಾಗೂ ನನ್ನ ಪಾಲಿಗೆ ಯಾವಾಗಲೂ ಅತ್ಯಂತ ಶ್ರೀಮಂತ ತಾಯಿಯಾಗಿ ದಕ್ಕಿದೆ. ಬಾರಿಯೂ ಅಷ್ಟೇ, ಯಾವುದೋ ದೊಡ್ಡ ಸಂಕಟದಲ್ಲಿದ್ದ ಗೆಳತಿಯೊಬ್ಬಳಿಗೆ ಸಹಕರಿಸಲೆಂದು ಭರವಸೆಗಳೊಂದಿಗೆ ಇಲ್ಲಿಗೆ ಬಂದ ನನ್ನನ್ನು ಮನಸಾರೆ ಹರಸಿ, ಕಳೆದುಕೊಂಡ ಗೆಳೆಯರನ್ನು, ಶಿಷ್ಯಂದಿರನ್ನು ಮುಖಾಮುಖಿಯಾಗಿಸಿ, ಮುರ್ಡೇಶ್ವರ, ಶಿರಾಲಿ, ಇಡಗುಂಜಿ, ರಾಮಚಂದ್ರಪುರಗಳ ದೈವಸನ್ನಿಧಿಗೊಯ್ದು ಸಂಭ್ರಮಿಸಿ ಇನ್ನೇನು ನನ್ನನ್ನು ಊರಿಗೆ ಕಳುಹಿಸಬೇಕು, ಅಷ್ಟರಲ್ಲಿ ಒಕ್ಕರಿಸಿತು ದುರ್ವಿಧಿ.
R S B Samadhi
ರಾಮಚಂದ್ರಪುರದ ನಟ ಅನಂತನಾಗ ಅವರ ಮನೆಅನುಭೂತಿ ಪೋಟೊಗಳನ್ನು ಕ್ಲಿಕ್ಕಿಸಿಕೊಂಡು ಸಕಲೇಶಪುರವೆಂಬ ನನ್ನ ಸಕಲ ಐಶ್ವರ್ಯಗಳ ಪುರವನ್ನು ಕಳೆದುಕೊಳ್ಳಲು ಕಾರಣವಾದವರೆನ್ನೆಲ್ಲಾ ಶಪಿಸುತ್ತ, ಗಣೇಶ ಯಾಜಿಯ ಮನೆಯ ಪ್ರಾಂಗಣದ ಖುರ್ಚಿಯ ಮೇಲೆ ಕುಳಿತಲ್ಲೇ ನಿದ್ರೆಗೊರಗಿದ್ದರೆ ಒಂದು ಪೋನ್, ಎತ್ತಿಕೊಂಡೆ, ಆಘಾತಕಾರಿ ಸುದ್ದಿ, ನನ್ನ ಪಿತೃ ಸ್ವರೂಪಿಗಳೂ, ವಿದ್ಯಾಗುರುಗಳು, ಸಂಸ್ಕೃತಿಯ ದೀಕ್ಷಾ ನಾಯಕರೂ ಆದ ಪ್ರೊ. ಆರ್.ಎಸ್ ಬಿರಾದಾರ್ ಬುಧವಾರ 28/12/2016 ಮುಂಜಾನೆಯ 9 ಗಂಟೆಗೆ ನಿಧನರಾದ ಸುದ್ದಿ.
 ಅದು ಮಾತು ಹೊರಡದ ಘಳಿಗೆ. ಅಂದು ರಾತ್ರಿ ಒಂಬತ್ತರವರೆಗೂ ನಾನು ಊರಿಂದ ಆಚೆ ಎಲ್ಲಿಯೂ ಕಾಲಿಡದ ಸಂದಿಗ್ಧತೆ. ಹೇಗೋ ಸಂಭಾಳಿಸಿಕೊಂಡು ಕಣ್ಣೀರಾಗಿದ್ದ ತಂದೆಯನ್ನು ಪೋನಿನಲ್ಲಿಯೇ ಸಮಾಧಾನಿಸುತ್ತ, ಸಮಾಧಾನವಿಲ್ಲದ ಕ್ಷಣಗಳನ್ನು ನೂಕುತ್ತಿರಬೇಕಾದರೆ, ಇನ್ನೂ ಮಧ್ಯಾನ್ಹವಾಗಿರಲಿಲ್ಲ. ಸಹೋದರ ಬಸವರಾಜ ಡೋಣುರ ಪೋನಾಯಿಸಿ, “ರಾಜಶೇಖರ, ಪ್ರೊ. ಜಿ.ಬಿ ಸಜ್ಜನ್ ಇಜ್ ನೋ ಮೋರ್. ಬರಲು ಪ್ರಯತ್ನಿಸ್ತಾ ಇದ್ದೀನಿ. ಫ್ಲೈಟ್ ಸಿಗುತ್ತಿಲ್ಲ. ನೀನೇ ಎಲ್ಲದಕ್ಕೂ ಸಾಕ್ಷಿಯಾಗುಎಂದಾಗ ಪ್ರತ್ಯುತ್ತರವಾಗಿ ನಾನೇನು ಹೇಳಲು ಸಾಧ್ಯ?!!
ಈಗ ಅದು ಮೌನವೂ ಮರಗಟ್ಟುವ ಘಳಿಗೆ.
ಮೃತ್ಯು ವರ್ಷಾಂತ್ಯಕ್ಕೆ ಇಷ್ಟೊಂದು ನಿರ್ಲಜ್ಯವಾಗಬಾರದಿತ್ತು, ತಾನು ಸರ್ವತಂತ್ರ ಸ್ವತಂತ್ರ ಎಂಬ ಅಸ್ತ್ರವನ್ನು ಅಮಾಯಕರ ಮೇಲೆ ಒಮ್ಮೆಲೆ ಹೀಗೆ ಬಳಸಬಾರದಿತ್ತು. ಒಮ್ಮೆ ಕೊಂದವನನ್ನು ಮತ್ತೆ ಹೀಗೆ ಕೊಲ್ಲಬಾರದಿತ್ತು.
ಮನದ ಮಂಡಿಗೆಗೆ ಯಾವ ಅಂಗಡಿಯಲ್ಲಿ ಜಾಗವಿದೆ ಹೇಳಿ? ನಾನು ಏನೇನೋ ಅಂದುಕೊಳ್ಳುತ್ತಿದ್ದೆ. ಆದರೆ ಅಡುಗೆ ಮನೆ ಹೊಕ್ಕು ಹಾಲು ಕುಡಿದು ಸಂತೃಪ್ತವಾಗಿದ್ದ ಕಾಲವೆಂಬ ಬೆಕ್ಕಿನ ಕೊರಳಿಗೊಂದು ಗೆಜ್ಜೆ ಕಟ್ಟದೇ ಹೋದೆನಲ್ಲ ಎಂದು ಪರಿತಪಿಸುತ್ತಿದ್ದೆ.
ಕಾಲೇಜಿನ ಭಾಷೆಯಲ್ಲಿ ಪ್ರೊ. ಆರ್. ಎಸ್. ಬಿರಾದಾರ್, ಅಪ್ಪನ ಗೆಳೆತನದಲ್ಲಿ ರಾಮಗೊಂಡಪ್ಪ, ಚಂಪಾರ ಉಲ್ಲೇಖದಲ್ಲಿ ಪುರಾತನ ಶಿಷ್ಯ, ನಮ್ಮ ಕಕ್ಕುಲಾತಿಯಲ್ಲಿ ಬಾಬಾ, ನನ್ನ ಹಿಂದಿನವರಿಗೆ ಸರ್- ಹೀಗೆ ಏನೆಲ್ಲ ಆಗಿದ್ದ ಪ್ರೊ. ಆರ್. ಎಸ್. ಬಿ 76 ಅಂಚಿನ ಒರ್ವ ಪ್ರೀತಿಯ ಮನುಷ್ಯ. ಅಪ್ಪನೊಂದಿಗೆ ಬಿ. ದಿನಗಳಲ್ಲಿ ಬಿಜಾಪೂರದ ವಿಜಯ ಕಾಲೇಜಿನಲ್ಲಿ ಗೆಳೆಯರಾದ ಇವರು ಒಬ್ಬರಿಗೊಬ್ಬರು ಜೀವ-ಜೀವನದ ನಂಟಾದರು. ಅದೇ ಬಿಜಾಪೂರ, ಧಾರವಾಡಗಳಲ್ಲಿ ಪ್ರೊ. ಜಿ.ಬಿ ಸಜ್ಜನ ಹಾಗೂ ಪ್ರೊ. ಸಿ.ಆರ್.ವಾಯ್ ಶಿಷ್ಯರಾದರು. ಮುಂದೆ ಇಬ್ಬರೂ ಚಡಚಣದ ಸಂಗಮೇಶ್ವರ ಸಂಸ್ಥೆಯಲ್ಲಿ ಉಪನ್ಯಾಸಕ ಹುದ್ದೆಗೆ ಸೇರಿ ವೃತ್ತಿ ಬಾಂಧವರಾದರು. ಇಲ್ಲಿಯೂ ಇಬ್ಬರು ಮತ್ತೆ ಪ್ರೊ. ಜಿ.ಬಿ ಸಜ್ಜನರ ಪ್ರೀತಿಯ ಕಣ್ಣುಗಳಾದರು.
 ನನ್ನ ತಂದೆ ಪ್ರೇಮಚಂದ, ನಿರಾಲಾರ ಕೈ ಹಿಡಿದು, ಹಿಡಿಸಿ ನನಗೆ ದೇಶ ಸುತ್ತಿಸಿದ. ಬಾಬಾ ನನಗೆ ಶೇಕ್ಸಪೀಯರ್, ಮಿಲ್ಟನ್, ಕೀಟ್ಸ್ ಹಾಗೂ ಮುಲ್ಕರಾಜ್ ಆನಂದರನ್ನು ತೋರಿಸುತ್ತ ನಭೋನ್ಮಯನನ್ನಾಗಿಸಿದರು. ಗರಡಿಮನೆ, ಹಳ್ಳ, ಹೊಲಗಳ ಗಾಳಿಗೆ ನೂಕಿ ನನ್ನ ತಂದೆ ಮೈ ಹುರಿಗೊಳಿಸಿದರೆ, ತಲತ್, ನೂರ್ ಜಹಾನ್, ರೇಷ್ಮಾ, ರಫಿ, ಮುಖೇಶ್ ಹಾಗೂ ಮನ್ನಾಡೆಗಳ ಕೇಳಿಸಿ ಬಾಬಾ ನನ್ನ ಎದ್ದೆ ಒದ್ದೆ ಮಾಡಿದರು. ಪೈಲ್ವಾನನಾದ ಅಪ್ಪ ಸದಾ ಗೆಲ್ಲುವ ಭಾಷೆ ಕಲಿಸಿದರೆ ಬಾಬಾ ನನಗೆ ಸೋಲಿನ, ಸಮರ್ಪಣೆಯ ಸುಖ ಉಣ್ಣಿಸಿದರು. ಯಾವಾಗಲೂ ತೊಡೆ ತಟ್ಟುವ ಜಟ್ಟಿಯ ಹಂಬಲದ ಅಪ್ಪನಿಗೆ ನಾನು ಜೇಷ್ಠ ಪುತ್ರ ಹುಟ್ಟಿದರೆ, ಹೆಣ್ಣು-ಹೆಣ್ಣಾದ ಬಾಬಾಗೆ ಮೊದಲಿಗಳಾಗಿ ಮಗಳೇ ಹುಟ್ಟಿದಳು.
ದೇವರ ನಿಂಬರಗಿಯ ಧೂಳು-ಧೂಳಿನ ದಾರಿಯಲ್ಲಿ ಮಗಳ ಸಂಭ್ರಮಿಸುತ್ತ ಧಾಮಸ್ ಹಾರ್ಡಿಯ ವೆಸೆಕ್ಸ್ನ್ನು ಕಲ್ಪಿಸಿಕೊಂಡರು. ಊರ ಬಲಭೀಮನ ದೇಗುಲದ ಗಂಟಾನಾದದಲ್ಲಿ ಟೆನ್ನಿಸನ್ರಿಂಗ್ ಔಟ್ ದಿ ಬೆಲ್ಅರ್ಥೈಸಿಕೊಂಡರು. ನಿಂಬರಗಿಯಿಂದ ಚಡಚಣದವರೆಗಿನ ಎಂಟು ಕಿಲೋಮೀಟರುಗಳ ಹೊಲಗದ್ದೆಗಳ ಎದೆಯಲ್ಲಿ ಮುಲ್ಕರಾಜ ಆನಂದರಡ್ರಾಟ್ ಭಿಕರತೆಗೆ ಬೆಚ್ಚಿದರು. ‘ಹೊಕ್ಕಳದ ಹೂವಾದ .ಕೆ.ರಾಮಾನುಜನ್ರನ್ನು ಕಲಿಸುತ್ತಲೇ ಜಾರ್ಜ್ ಏಲಿಯಟ್ ಮಿಲ್ ಆನ್ ದಿ ಫ್ಲಾಸ್ಪ್ರೇಮತಂತುಗಳಿಗೆ ವೀಣೆಯಾದರು. ಅವರೆಂದೂ ಗಣಿಯನಾದವಲ್ಲ. ವೀಣೆ, ಶುದ್ಧ ವೀಣೆಯ ಶೃತಿ
Mulkraj Anand
 ಬಟ್ಟಲು ಕಂಗಳ ಮಧುಬಾಲಾ, ನೂತನ್, ಮೀನಾಕುಮರಿ ಹಾಗೂ ಸಾಧನಾರ ಕೆನ್ನೆಗಳ ಮೇಲೆ ನನಗೆ ಬಾಬಾ ಸಿಗುತ್ತಾರೆ. ರಾಜಕಪೂರ, ಗುರುದತ್ತ ಹಾಗೂ ಬಲರಾಜ ಸಹಾನಿಯ ತೊಟ್ಟಿಕ್ಕದ ಕಣ್ಣೀರಿನಲ್ಲಿ ನನಗೆ ಇವರ ಜೀವನ ಪ್ರೀತಿ ದಕ್ಕುತ್ತದೆ. ಬಾಬಾ ಎಂದರೆ ನನಗೆ ಗಜಲ್, ಅಭಂಗ, ಪಾರಿಜಾತ ಮತ್ತು ಹಳೆಯ-ಹಳೆಯದಾದ ಯಾವುದು, ಗುಲಾಂ ಅಲಿ ಅಥವಾ ಮೆಹದಿ ಹಸನ್ ಯಾವುದಾದರೂ ಹಾಡೇನಾದರೂ ತಪ್ಪಿ ಕಿವಿಗೆ ಬಿದ್ದರೆ ಇವರ ಹೆಜ್ಜೆ ತಪ್ಪುತ್ತಿತ್ತು. ಊರ ದಾರಿ ಮರೆಯುತ್ತಿತ್ತು. ಶುದ್ಧ ಹೆಣ್ಣಾಗಿ-ಹಣ್ಣಾಗಿ ತಲೆದೂಗುತ್ತಿತ್ತು ಜೀವ. ಅಂದಹಾಗೆ, ಅವರು ನನ್ನನ್ನು ಎಂದೂ ಗಂಡಾಗಿ ಸಂಭೋಧಿಸಿದ ನೆನಪಿಲ್ಲ ನನಗೆ. ನಾನೆಂದರೆ ಅವರಿಗೆ ಸದಾ ರಾಜಿಯಗುವರಾಜಿ’(ರಾಜಶೇಖರ)
Meenakumari
 ದೇವರ ನಿಂಬರಗಿ ನನ್ನ ಬಾಬಾನ ವಾಡೆ ಎಂಡರೆ ಹಾಳು ಬಾವಿ, ಖಾಲಿಯಾಗದ ಹಗೆಗಳು, ಅವಸಾನದಂಚಿನ ಮನೆಗಳು, ಆದರೆ ಕಾಡು ಹರಟೆಯ ಮಹಾ ಕೈಲಾಸ ಅದು. ವಾಡೆಯಲ್ಲಿ ಊರೆಲ್ಲ ಬಂದು ಮಲಗಬಹುದಿತ್ತು. ಅದೇನೋ ವಾಡೆಯ ಹಾಳು ಗೋಡೆಗಳಲ್ಲಿ ಜೀವನದ ಹಸಿಯಿತ್ತು. ತಪ್ಪಿ ಬಿದ್ದ ತಿಪ್ಪರೆ, ಪಡವಲು, ಹೀರೆಕಾಯಿಯ ಬೀಜಗಳು ಮೊಳಕೆ-ಬಳ್ಳಿಯಾಗಿ ನಮ್ಮ ಬಾಬಾನ ಮನೆಯ ಬಾಗಿಲ ಮುಂದೆ ಹರಡಿಕೊಂಡು ಕಾಯಿ ಬಿಡುವ ಪರಿಗೆ ಹೆರಿಗೆಯಾಗದ ಹೆಂಗಸರೆಲ್ಲ ಉರಿ ಹೆಚ್ಚಿಸಿಕೊಳ್ಳಬೇಕಾಗುತ್ತಿತ್ತು. ಅಷ್ಟೊಂದು ಹೂ-ಹಣ್ಣು-ಮಕ್ಕಳ ದೊಡ್ಡ ಜೀವ ಅವರದು.
Madhubala
 ನನ್ನ ಎರಡು ವರ್ಷಗಳ ಪಿ.ಯು.ಸಿಯ ಇಂಗ್ಲೀಷ್ ಗುರುಗಳಾದ ಪ್ರೊ. ಆರ್. ಎಸ್. ಬಿರಾದಾರ ಉರ್ಫ್ ಬಾಬಾ ಒಮ್ಮೆಯೂ ನಿಗದಿತ ಸಮಯಕ್ಕೆ ಲೆಕ್ಚರ್ ಹಾಲಿಗೆ ಬರಲಿಲ್ಲ. ಅವರ ಕ್ಲಾಸು ಅವರಂತೆ. ಇಲ್ಲಾ ನಮ್ಮ ಕಾಲೇಜಿನ ಮುಂದೆಯೇ ಹರಿಯುತ್ತಿದ್ದ ನಮ್ಮೂರ ಹಳ್ಳದಂತೆ. ಮೈದುಂಬಿ ಬಂದರೆ ಕೆಲವೊಮ್ಮೆ ನಾಶವಾಗುತ್ತಿತ್ತು ಊರು. ಹೀಗೆಯೆ ಮೈ ಮರೆತು ಪಾಠ ಮಾಡುತ್ತಿದ್ದರೆ ವಿಧ್ಯಾರ್ಥಿ ಕೆಲವರಿಗೆ ಬೋರು. ಮುಂದಿನ ಕ್ಲಾಸಿನ ಶಿಕ್ಷಕ ಬಂದು ಕೂಗಿ ಹೇಳಬೇಕಾಗುತ್ತಿತ್ತು, “ನಿಲ್ಲಿಸಿ ದೇವರು”. ಆದರೆ ನನಗೆ ಗೊತ್ತಿತ್ತು ಜೀವವೇ ನನ್ನ ಸಾಹಿತ್ಯ ವಿಸ್ತಾರದ ತಾಯಿಬೇರು ಎಂದು.
Gulam Ali
ಥರಥರದ ಸಾಬೂನು ಹಚ್ಚಿಕೊಂಡು, ಮೈಯೆಲ್ಲ ಪೌಡರ್ ಪೂಸಿಕೊಂಡು, ಕೂದಲಿಲ್ಲದ ತಲೆಯನ್ನು ಅಷ್ಟೊಂದು ಬಾಚಿದ, ಸಾಲದಕ್ಕೆ ಬಾಚಣಿಕೆಯನ್ನು ಸದಾ ಜೇಬಿನಲ್ಲಿಟ್ಟುಕೊಂಡು ತಿರುಗಾಡಿದ ನಮ್ಮ ಬಾಬಾನಂಥ ಒಂದು ಜೀವ ನಿಮಗೆ ಸಿಗಲು ಸಾಧ್ಯವೇ ಇಲ್ಲ. ನೆತ್ತರಿನಲ್ಲಿ ಹುಟ್ಟಿದ ಮಾತ್ರಕ್ಕೆ ಎಲ್ಲರೂ ನುಡಿಗಳಾಗುವುದಿಲ್ಲ. ಆದರೆ ಒಂದೊಂದು ನುಡಿಗಾಗಿ ಕಂಗಾಲಾಗುತ್ತಿದ್ದ ನಮ್ಮ ಬಾಬಾ ಒಂದಿಷ್ಟು ಕುಡಿದರೂ ಸಾಕು ಮಹಾ ಮೌನಿಯಾಗಿಬಿಡುತ್ತಿದ್ದರು. ನೀವು ಮತ್ತೆ ಅವರನ್ನು ನುಡಿಸಬೇಕೆಂದರೆ ಅವರುಡಿಗೆ ಒಂದು ಮಗು ತಂದಿಡಬೇಕು. ಆಗ ಅವರು ಜೆ.ಎಮ್.ಸಿಂಜ್ ರೈಡರ್ಸ್ ಟು ಸೀಬರಹದ ಯುದ್ಧದಲ್ಲಿ ಮಕ್ಕಳ ಕಳೆದುಕೊಂಡ ತಾಯಿಯಂತೆ ಕಣ್ಣೀರಾಗಿಬಿಡುತ್ತಿದ್ದರು
Nutan
 ಹಾಂ, ಮಕ್ಕಳೆಂದಾಗ ನೆನಪಾಯಿತು, ಬೇಸಿಗೆಯ ರಜೆಯಲ್ಲಿ ನಾವೆಲ್ಲ ಸೇರಿದರೆ ಅವರೂ ನಮ್ಮೊಂದಿಗೆ ಬಾರಿಕಾಯಿಯ ಮರ ಹತ್ತುತ್ತಿದ್ದರು. ನಮ್ಮನ್ನೆಲ್ಲ ರಾಜಿ, ಮಲ್ಲಿ. ಶೈಲಿ ಎಂದೇ ಕರೆಯುತ್ತ ನಮ್ಮ ಮುಷ್ಟಿಯೊಳಗಿನ ಬಳೆಚೂರುಗಳ ಬಣ್ಣವಾಗುತ್ತಿದ್ದರು. ಒಂದೊಮ್ಮೆ ನಾವೆಲ್ಲ ಮಕ್ಕಳು ಸೇರಿ ದೊಡ್ಡ ಮನೆ ಕಟ್ಟಿದ್ದೆವು. ನಮ್ಮ ಬಾಬಾ ನಮ್ಮ ಮನೆಯನ್ನು ಹಾಳಾಗದಂತೆ ಎಷ್ಟೋ ಕಾಲ ಕಾಪಾಡಿದ್ದರು. ಮಕ್ಕಳು ಮುಟ್ಟುವುದೆಲ್ಲವನ್ನು ಕಾಪಿಡುವ ತಾಯ್ತನ ಅವರಲ್ಲಿದ್ದುದರಿಂದಲೇ ಅವರಿಗಾಗಿ ನಮ್ಮ ಜೀವ ಹಂಬಲಿಸುತ್ತಿತ್ತು. ಅವರು ಕಲಿಸುತ್ತಿದ್ದ ಟ್ಯಾಗೋರರ ಪ್ಲೇಧಿಂಗ್, ಕಾಬೂಲಿವಾಲಾ ಹಾಗೂ ಅರ್ಮ್ಯಾಂಡೊ ಮೆನಿಜಿಸ್ ಚೇರ್ಸ್ ಹೃದಯವೇದ್ಯವಾಗುತ್ತಿತ್ತು.
Tennis
 ಕಳೆದ ಒಂದು ದಶಕದಿಂದ ನನ್ನ ಸಾಹಿತ್ಯದ ಚಟುವಳಿಕೆಗಳ ಕುರಿತು ತುಂಬಾ ಆಸಕ್ತರಾಗಿದ್ದ ಪ್ರೊ. ಆರ್.ಎಸ್.ಬಿ ನಿರಂತರ ನಾಡು ಸುತ್ತುವ ನನ್ನಲ್ಲಿಯೇ ತಮ್ಮ ಪ್ರಿಯ ಲೇಖಕರುಗಳಾದ ಅನಂತಮೂರ್ತಿ, ಲಂಕೇಶ, ಚಂಪಾ, ಪುಣೇಕರ್- ಹೀಗೆ ಯಾರೆಲ್ಲರನ್ನು ಕಲ್ಪಿಸಿಕೊಂಡರು. ಗೆಳೆಯ ಬಸೀರ್ ಮುಲ್ಲಾರಡಿ.ಎಮ್.ಎಂಪಾಯರ್ಉದ್ಘಾಟನಾ ಸಮಾರಂಭಕ್ಕೆ ಬಂದು ಹರಸಿ ನಮ್ಮ ಗುರುವಂದನೆ ಸ್ವೀಕರಿಸಿದರು. ತಾನು ಬರೆದ ಪುಸ್ತಕವನ್ನೇ ಮತ್ತೆ ಮತ್ತೆ ಓದಿ ಸಂಭ್ರಮಿಸುವ ಲೇಖಕನಂತೆ ತಾವೇ ರೂಪಿಸಿದ ನನ್ನ ಸುತ್ತ ಸುತ್ತಿದ ಜೀವದ ಅಂಗಾಲಿಗೆ ಹೇಸಿಗೆ ಇರಲಿಲ್ಲ, ಕರುಳಿಗೆ ನಾಚಿಕೆ ಇರಲಿಲ್ಲ. ನನ್ನ ಮೂರನೇ ಮಗ ಕಬೀರನನ್ನು ನೋಡಲು ಮನೆಗೆ ಬಂದವರು ಒಳಗೆ ಬರಲಿಲ್ಲ.
Mehandi Hassan
 ಆನುವಂಶಿಕವಾಗಿ ಬಂದ ಅಸ್ತಮಾ ರೋಗ ಪ್ರತಿವರ್ಷ ಛಳಿಗಾಲದಲ್ಲಿ ಬಳಸಿ ಬರುತ್ತಿತ್ತು. ಆದಾಗ್ಯೂ ಫಿನಿಕ್ಸಿನಂತೆ ಎದ್ದು ಬರುತ್ತಿದ್ದರು ಬಾಬಾ. ಆದರೆ ಬಾರಿ ಹಾಗಾಗಲಿಲ್ಲ. ನುಡಿಗೆ ಮೈಮರೆತು ನಿಲ್ಲುತ್ತಿದ್ದ ಅವರನ್ನು ಸಾವಿನೆಡೆಗೆ, ಸಾವಿನಡಿಗೆ ಕರೆದೊಯ್ಯಿತು. ಅವರ ಪ್ರೀತಿಯ ಧುನ್-

ಜ್ಯೋತ್ ಸೇ ಜ್ಯೋತ್ ಜಗಾತೆ ಚಲೋ   ಪ್ರೇಮ್ ಕಿ ಗಂಗಾ ಬಹಾತೆ ಚಲೋ...........
ಈಗ ನನ್ನೊಳಗಿಳಿಯಿತು, ನನ್ನ ಎದೆಯ ಹಾಡಾಯಿತು.



No comments:

Post a Comment