Total Pageviews

Thursday, January 19, 2017

ಸಜ್ಜನರಿಗೊಂದು ಶಬ್ದ ಸಾಕ್ಷಿ!!!



ಲೋಕದಂತೆ ಬಂದರೂ ಲೋಕದಂತೆ ಇರಲಾರದವರ, ಲೋಕ ವ್ಯವಹಾರವನ್ನು ಮೀರುವವರ, ಕುರಿತು ಹೇಗೆ ಬರೆದರೂ ಅದೊಂದು ಶಬ್ದ ಸಾಕ್ಷಿ ಎನ್ನಬಹುದಷ್ಟೆ. ಅದೊಂದು ರೀತಿ ವಿಧಿವಶರಾದವರನ್ನು ಮಣ್ಣಲ್ಲಿ ಮಲಗಿಸಿ ಬಂದರೂ ಮಣ್ಣೊಳಗಿನ ಮನುಷ್ಯದೊಂದಿಗೆ ಮರುಕ್ಷಣವೇ ಮುಂದೊರೆಯುವ ಮಾತಿನಂತೆ. ಮಾತಿಗೆ ದೇಹದ ಋಜುವಾತಿರುವುದಿಲ್ಲ ಅಷ್ಟೆ. ಕರ್ಣಗಳ ಅವಶ್ಯಕತೆ ಇಲ್ಲ, ಕಾಲದ ಹಂಗಿಲ್ಲ, ಕೇಡಿನ ಭಯವಿಲ್ಲ. ಅದು ಅಗಲಿದ ಆತ್ಮದೊಂದಿಗಿನ ಅನಂತತೆಯೆಡೆಗಿನ ಪಯಣ. ಪಯಣವನ್ನೊಮ್ಮೆ ಹಿಂದಿರುಗಿ ನೋಡಿದರೆ ಏನೆಲ್ಲಾ ಅಚ್ಚರಿ! ಎಂಥಾ ಅದ್ಭುತಗಳು!! ಆದರಿದು ಶಬ್ದ ಮತ್ತು ಸಂಸಾರದ ತಳುಕಿನಿಂದ ಮುಕ್ತವಾದುದು.
  ಲೋಕದಂತೆ ಬಂದರು ಗಣಪತಿ ಭೀಮಸೇನ ಸಜ್ಜನ್ ಉರ್ಫ್ ಜಿ.ಬಿ ಸಜ್ಜನ್. ಆದರೆ 28/12/2016ರಂದು ಮಾಹಾರಾಷ್ಟ್ರದ ಬಾರಾಮತಿಯ ತಮ್ಮ ಮಗಳ ಮನೆಯಲ್ಲಿ ಲೋಕದಂತೆ ನಿರ್ಗಮಿಸಿಸಲಿಲ್ಲ. ಬರಹದಲ್ಲಿ, ಭಾಷಣದಲ್ಲಿ, ಬದುಕಿನ ನಿತ್ಯ ವ್ಯವಹಾರದಲ್ಲಿ ಮಾರ್ವಾಡಿ ಶೇಡ್ಜಿಯ ಹಾಗೆ ಶಬ್ದಗಳನ್ನು ತೂಗಿ-ತೂಗಿ ಬಳಸುತ್ತಿದ್ದ ಸಜ್ಜನ್ ಅಂದು ನಿಶ್ಯಬ್ದರಾಗಿದ್ದರು. ಕನ್ನಡ, ಇಂಗ್ಲೀಷ್ ಭಾಷೆಗಳಲ್ಲಿ ಇಂತಹ ಶಬ್ದಸಂಸಾರವನ್ನು ಕಟ್ಟಿಕೊಂಡ, ಏಕಕಾಲಕ್ಕೆ ಅವುಗಳನ್ನಿಟ್ಟುಕೊಂಡು ವ್ಯವಹಾರ, ವಿವೇಚನೆ ಮತ್ತು ಕವಿ ಸಮಯವನ್ನು ಬೆಸೆಯುವ ಮತ್ತೊಂದು ಉದಾಹರಣೆ ನನಗೆ ನೆನಪಿಗೆ ಬರುವುದಿಲ್ಲ.
ಸಜ್ಜನರೆಂದರೆ ಶಬ್ದ ಲಜ್ಜೆ. ಅವರ ಅಂಗಡಿಯಲ್ಲಿ ಚಿನ್ನಕ್ಕಿಂತಲೂ ದುಬಾರಿಯಾಗಿದ್ದವು ಶಬ್ದಗಳು. ಅಪರಂಜಿಗಿಂತಲೂ ಅಪರೂಪವಾಗಿದ್ದವು ಅವು ಹೊರಡಿಸುತ್ತಿದ್ದ ಅರ್ಥಗಳು. ಇಂಥ ಸಜ್ಜನ್ 28/12/2016ರಂದು ಶಬ್ದದ ಸೀಮೆಯನ್ನು ಮೀರಿ ಹೋಗಿದ್ದರೇ? ನನಗೆ ಅರ್ಥವಾಗುತ್ತಿಲ್ಲ. ಅರ್ಥದ ನಿರೀಕ್ಷೆಯೇ ಒಂದು ಮಹಾ ಅನರ್ಥ ಎಂದು ನಂಬಿದ ನನ್ನಂಥವನಿಗೆ ಯಾವ ಅರ್ಥಗಳೂ ಸಮಾಧಾನಿಸುವುದಿಲ್ಲ. ಆದರೆ ಶಬ್ದ, ಸಂಸಾರ ಮತ್ತು ಸಾಹಿತ್ಯಗಳೆಂಬ ಸಾಧ್ಯೆತೆಗಳ ಮಿತಿಗಳನ್ನು ಅರಿತ ಮಹಾನುಭಾವ ಮಧುರಚೆನ್ನ ನನ್ನಂಥವನನ್ನು ಸಮಾಧಾನಿಸುವ ಕೆಲವು ಉಪಾಯಗಳನ್ನಿಟ್ಟುಕೊಂಡಿದ್ದಾರೆ. ಹೇಗೆ ಬರೆಯುತ್ತಾನೆ ನೋಡಿ ನಮ್ಮ ಮಧುರಚೆನ್ನ-
ನಿಶ್ಯಬ್ದ ನಿಶ್ಯಬ್ದ ಶಬ್ದದಾಚೆಯ ಶಬ್ದ
ನಿಶ್ಯಬ್ದವೆಂದರೂ ಮೌನವಲ್ಲ
ನಿಸ್ಸೀಮ ನಿಸ್ಸೀಮ ಸೀಮದಲೇ ನಿಸ್ಸೀಮ
ನಿಸ್ಸೀಮವೆಂದರೂ ಶೂನ್ಯವಲ್ಲ
  ಬೆಂಗಳೂರಿನ ಮಂಜುನಾಥ ನಗರದ ನನ್ನ ಮನೆಯ ಮುಂದೆ ನೇಣಿಗೆ ಶರಣಾದ 2016 ನವ್ಹೆಂಬರ್ ತಿಂಗಳ ಘಟನೆಯಿಂದ ಪ್ರಾರಂಭವಾದ ಸಾವಿನ ಸರಣಿ 2017 ಜನೇವರಿ 10ರವೆರೆಗೂ ಮುಂದುವರೆದಿದೆ. ಮುಂದಿನ ಕ್ಷಣದಲ್ಲಿ ಇನ್ನ್ಯಾರೋ ಏನೋ ಎನ್ನುವ ಭಯ ಕಾಡುತ್ತಿದೆ ನನಗೆ. ಸರಣಿಯ ಮೂರನೆಯ ಪುಟ ಪ್ರೊ. ಜಿ.ಬಿ ಸಜ್ಜನ್. ಮಧುರಚೆನ್ನರ ಮಾತುಗಳಲ್ಲಿ ಅವರು ನಿಸ್ಸೀಮ ಹಾಗೂ ಶೂನ್ಯವಲ್ಲದ ಸತ್ಯ. ಇಂಥ ಸತ್ಯಕ್ಕೆ ಮತ್ತೆ ಶಬ್ದಗಳೇ ಸಾಕ್ಷಿಯಾಗಬೇಕು. ಹೀಗೊಂದು ಸಾಕ್ಷಿಯಾಗಿದ್ದರೂ ಜಿ.ಬಿ.ಎಸ್. ಇದೇ ಕಾರಣವಿರಬಹುದೇನೋ ಕೆಲ ವರ್ಷಗಳ ಹಿಂದೆ ನಾನು ಬರೆದಿದ್ದೆ-
ಕೆಲವೊಮ್ಮೆ ಹೀಗಾಗುತ್ತದೆ, ಏನೆಲ್ಲವನ್ನು ಕುರಿತು ಬರೆಯುವ, ಚಿಂತಿಸುವ, ಧ್ಯಾನಿಸುವ ನಾವು ಪಕ್ಕದಲ್ಲಿದ್ದವರನ್ನೇ ಮರೆಯುತ್ತೇವೆ. ಮರೆತದ್ದಕ್ಕಾಗಿ ಮತ್ತೆ ಮರೆಯುತ್ತೇವೆ. ಕಾಲ ಯಾರಪ್ಪನ ಮನೆ ಆಸ್ತಿ? ಕ್ರಮಿಸಿಬಿಡುತ್ತದೆ. ನಾವು ಎಚ್ಚರವಾಗುವುದರೊಳಗಾಗಿ ದಾಖಲಿಸಬೇಕಾದ ವಿಚಾರ ವಿರಮಿಸಿಬಿಡುತ್ತದೆ. ಆಗ ನಮ್ಮ ಅಭಿವ್ಯಕ್ತಿಗಳೆಲ್ಲ ಆಷಾಡದ ಗಾಳಿಯಂತಾಗಿ ಬಿಡುತ್ತವೆ. ಆದರೆ ಲೇಖನದ ಮೂಲಕ ನಾನು ಮಾಡಬಹುದಾದ ಒಂದು ತಪ್ಪಿನಿಂದ ಉಳಿದುಕೊಳ್ಳುತ್ತಿದ್ದೇನೆ ಎನ್ನುವುದೇ ಖುಷಿ. ನನ್ನೀ ಬರಹದ ವ್ಯಕ್ತಿ ಇನ್ನೂ ಜೀವನೋತ್ಸಾಹದಿಂದ ಪುಟಿಯುತ್ತಿದ್ದಾರೆ ಎನ್ನುವುದು ಒಂದು extra Bonus.
ಜಿ.ಬಿ.ಸಜ್ಜನ, ಈಗ ಅಪರಿಚಿತ ಹೆಸರಲ್ಲ ಬಿಡಿ. ನಮ್ಮ ಉತ್ತರಕರ್ನಾಟದಲ್ಲಂತೂ ಅವರ ಶಿಷ್ಯಂದಿರಿಲ್ಲದ ಸಂಸ್ಥೆಗಳನ್ನು, ಅವರ ಅನುವಾದಗಳನ್ನು ನೋಡದ ಇಂಗ್ಲೀಷ್ ಉಪನ್ಯಾಸಕರನ್ನು, ಅವರ ಸರಳತೆಯನ್ನು ಗಮನಿಸದ ಮಠಾಧೀಶರನ್ನು, ಸಾರ್ವಜನಿಕ ನಾಯಕರನ್ನು ಕಾಣುವುದೇ ಕಷ್ಟ. ಗುಲ್ಬರ್ಗಾದಿಂದ ಬೆಂಗಳೂರಿನವರೆಗೆ, ತಲೆಮಾರಿನ ಲೇಖಕರಿಂದ ಪ್ರಭುಶಂಕರ, ಸಾ.ಶಿ.. ಮತ್ತು ದೇಜಗೌರವರೆಗೆ, Indian English literature ವರ್ತಮಾನದಿಂದ ಬಲರಾಂ ಗುಪ್ತ, ಎಂ.ಕೆ.ನಾಯಕರ್ರವರೆಗೆ, ನಿಂತುಹೋದ `ಸ್ವಪ್ನಲೋಕದಿಂದ ನಿರಂತರವಾಗಿರುವ ಇಂದಿನ ನಿಯತಕಾಲಿಕಗಳವರೆಗೆ ಸಜ್ಜನರು ಕಟ್ಟಿಕೊಂಡ ಸ್ನೇಹ-ಸಂಘರ್ಷದ ಲೋಕ ದೊಡ್ಡದು. ಎಂಟು ದಶಕಗಳ ದೀರ್ಘ ಬಾಳಿನಲ್ಲಿ ಅವರು ನಿಷ್ಠುರ ಮತ್ತು ನಿಗರ್ವಿ. ಅವರು `ಸಜ್ಜನಕ್ಕೆ ಅನ್ವರ್ಥಕ. ಅವರ ಮಾತು ಕಡಿಮೆ, ಹಾಗೆ ಕನ್ನಡದಲ್ಲಿ ಅವರ ಬರಹವೂ ಕಡಿಮೆ. ಬರೆದ ಚೂರು-ಪಾರು, ಭಾಷೆ ಮತ್ತು ವ್ಯಾಕರಣಕ್ಕೆ ವ್ಯಯವಾಗಿದೆ. ಆದರೆ ಭಾಷಾ ಪ್ರಭುತ್ವ ಮತ್ತು ಪ್ರಬುದ್ಧತೆಗಳು ವಿರಳವಾಗುತ್ತಿರುವ ದಿನಗಳಲ್ಲಿ ಅವರ ಲೇಖನಗಳನ್ನು ಗಮನಿಸಬೇಕಾದುದು ಅವಶ್ಯಕ. ಸಜ್ಜನರೆಂದರೆ ಭಾಷೆ, ಶಿಸ್ತು ಮತ್ತು ಪ್ರಾಮಾಣಿಕತೆ.
ಇಡೀ ಸೃಜನಶೀಲ ಲೋಕವನ್ನು ಗಮನಿಸಿಕೊಂಡು ಮೇಲಿನ ಸಾಲುಗಳನ್ನು ಬರೆದನಷ್ಟೆ. ವ್ಯಕ್ತಿಗತ ಸಂಬಂಧಗಳ ನೆಲೆಗೆ ಬಂದಾಗ ಸಜ್ಜನರೆಂದರೆ ನನ್ನ ಬಾಲ್ಯ, ನನ್ನ ಓದು, ಯೌವ್ವನದ ಭಂಡತನ, ಸಂಶೋಧನೆ, ಹುಚ್ಚು ಹವ್ಯಾಸ, ಅಲೆಮಾರಿತನ ಹೀಗೆ ಏನೆಲ್ಲ. ನನ್ನ ಬದುಕಿನಲ್ಲಿ ಅವರೊಂದಿಗೆ ಹಂಚಿಕೊಳ್ಳದೇ ಇರುವುದು ಏನಿದೆ ಎಂದು ಪ್ರಶ್ನಿಸಿಕೊಂಡರೆ ಉತ್ತರವೇ ನಿರುತ್ತರ. ಸಜ್ಜನರು ಒಂದು ಕಂಬ. ನಾನು ಹಾಗೂ ನನ್ನಂಥ ಅನೇಕ ಬರಹಗಾರರು ಅವರನ್ನೇ ಸುತ್ತುವ ಅವರದೇ ಬಿಂಬ.
ಖಂಡಿತವಾಗಿಯೂ ಬರಹ ಅವರ ಕೃತಿಯ ಮುನ್ನುಡಿ ಅಲ್ಲ. ದೀರ್ಘ ಜೀವನದಲ್ಲಿ ರಸವೇ ಜನನ, ವಿರಸವೇ ಮರಣ, ಮರಣವೇ ಮಹಾನವಮಿ ಎನ್ನುವ ಎಚ್ಚರಿಕೆಯಿಂದ ನಡೆದುಬಂದ ಸಜ್ಜನರ ವ್ಯಕ್ತಿತ್ವದ ಮೇಲೆ ಒಂದಿಷ್ಟು ಬೆಳಕು ಚೆಲ್ಲಿದರೆ ಅದು ಇದರ ಸಾರ್ಥಕತೆ. ಅಂದ ಹಾಗೆ ಕೃತಿಕಾರನನ್ನು ಅರಿಯದ, ಕೃತಿ ಕುರಿತಾದ ಮಾತುಗಳು ಶುಷ್ಕವಾಗಿರುತ್ತವೆ. ಕೃತಿಕಾರನ ಮೂಲಕ ಕೃತಿಯ ಹೊಸ್ತಿಲಿಗೆ ಹೋಗಿ ನಿಂತರೂ ಸಾಕು, ಪಯಣವೇ ಅದೆಷ್ಟೋ ಅರ್ಥಪೂರ್ಣವಾಗಿರುತ್ತದೆ. ಅದು ಬರಹದ ಉದ್ದೇಶ.
 ನಮ್ಮೂರೆಂಬ ಊರು ಚಡಚಣದಲ್ಲಿ ಪೇರಿಸಿಟ್ಟ, ಅಡಕಲಿನಲ್ಲಿ ಮರೆತ ಚಿನ್ನದ ತುಣುಕಿನಂತಿದ್ದರು ಜಿ.ಬಿ.ಸಜ್ಜನ. `ಅವರಿದ್ದರುಎನ್ನುವುದಕ್ಕಾಗಿ ಬರಡಿನಲ್ಲಿ ಒಂದಿಷ್ಟು ಹಸಿರು ಹುಟ್ಟಿಕೊಂಡಿತು. ಕಸ-ಕಳೆ ದೂರವಾಗಿ ಹೊಸಬೆಳಕು ಬಂತು. `ಅವರಿದ್ದರುಎನ್ನುವುದಕ್ಕಾಗಿ ಸಾಹಿತಿಗಳು, ಕಲಾವಿದರು, ಶಿಕ್ಷಣ ತಜ್ಞರ ಆಗಮನವಾಗಿ ಜಡವಾಗಿದ್ದ ಪರಿಸರ ಜೀವಕಳೆ ತುಂಬಿಕೊಂಡಿತು, ಮಾತಾಯಿತು. ಹಿರಿಯ ಜೀವವೊಂದು ಇದ್ದ ಮುರುಕಲು ಮನೆಯನ್ನೇ ಸ್ವಚ್ಛಗೊಳಿಸಿ ಬರುವವರಿಗಾಗಿ ಕತ್ತಲೆಯಲ್ಲಿ ಹಣತೆ ಹಚ್ಚಿಟ್ಟಂತಾಯಿತು. ಸಜ್ಜನರೆಂದರೆ ಇಷ್ಟೆ. - ಸಾಕು ಸಾಕೆನ್ನುವಷ್ಟು ಪುಸ್ತಕಗಳು, ಎಲ್ಲ ಕಾಲಕ್ಕೂ ಸಲ್ಲುವ ಪತ್ರಗಳು, ನೀವು ಮೈಯೆಲ್ಲಾ ಎಚ್ಚರವಾಗಿ ಬರೆದರೂ ಭಾಷಿಕ ತಪ್ಪುಗಳನ್ನು ಕಂಡುಹಿಡಿಯುವ ಕಣ್ಣುಗಳು, ನನ್ನಂಥವನಿಗೆ ಅವರೊಂದಿಗಿನ ಒಡನಾಟ ಬಹಳ ಸರಳ. ಕಾರಣ ಇಷ್ಟೆ, ಸಜ್ಜನರು ಬಹಳ ಸರಳ ಎಂದು ಅನ್ಯರಿಗೆ ಗೊತ್ತಿಲ್ಲದೇ ಇರುವುದು. ಸಾಮಾನ್ಯವಾಗಿ ಗುಲ್ಬರ್ಗಾದಿಂದ ಧಾರವಾಡ ವಿವಿಗಳವರೆಗೂ ಆಡಳಿತ ವಿಚಾರಗಳಿಗೆ ಸಂಬಂಧಿಸಿದಂತೆ ಸದಾ ಜಗಳಕಾಯುತ್ತಲೇ ಬಂದ ಸಜ್ಜನರ ಇನ್ನೊಂದು ಮುಖ ನಮ್ಮ ಜನರಿಗೆ ಗೊತ್ತಾಗದೇ ಹೋಯಿತು. ಛೇ! ಅವರೆಂದರೆ ನಿಯಮ, ಜಿಪುಣತನ, ಕೆಲಸ ಎಂದು ತಲೆ ಜಾಡಿಸಿದ ಜನಗಳಿಗೆ, ಶಿಕ್ಷಕ ಬಂಧುಗಳಿಗೆ ಸಜ್ಜನರೆಂದರೆ ಏನು ಎಂದು ತಿಳಿಸಬೇಕಾದರೆ ಇಂದು ಆಲದ ಮರದಂತೆ ಬೆಳೆದು ನಿಂತ ಬಿ.ಎಲ್.ಡಿಯ ಕ್ಯಾಂಪಸ್ಸಿನೆಡೆಗೆ ಕೈ ಮಾಡಬೇಕಾಗುತ್ತದೆ. ಅದು ಅವರ ಮನೆತನದ ಔದಾರ್ಯಕ್ಕೆ ಸಾಕ್ಷಿ. ಸಂಸ್ಥೆಗೆ ಉದಾರ ದೇಣಿಗೆ ನೀಡಿದ ಬಂಗಾರೆವ್ವ ಸಜ್ಜನ ಇವರ ಅಜ್ಜಿ ಎನ್ನುವುದು ಅದೆಷ್ಟು ಜನರಿಗೆ ಗೊತ್ತಿದೆ?
ಉಪಕಾರ ಮತ್ತು ಉಪಕೃತಿಯ ಬಹಳ ದೊಡ್ಡ ಸಂಸ್ಕøತಿಯಿಂದ ಬಂದವರು ಸಜ್ಜನ. ಅವರ ಸ್ನೇಹ ಮಾತ್ರದಿಂದಲೇ ಅನೇಕರಿಗೆ ಅನೇಕ ರೀತಿಯ ಲಾಭಗಳಾಗಿವೆ. ಸ್ವಂತಕ್ಕೆ ಅವರು ವಿಶ್ವವಿದ್ಯಾಲಯಗಳ ವ್ಯವಸ್ಥೆಗೊಳಪಡಲಿಲ್ಲ. ಆದರೆ ನಾಡಿನ ಅನೇಕರ ನಿಟ್ಟಿನ ಅಸ್ತಿತ್ವಕ್ಕೆ ಅವರು ಕಾರಣರಾದರು ಮತು ಬೆನ್ನೆಲುಬಾಗಿ ನಿಂತರು. ರಾಜ್ಯದಲ್ಲಿ ಇಂಗ್ಲೀಷ್ ಪಿಹೆಚ್.ಡಿಗಳ ಒಂದು ಸಣ್ಣ ಸರ್ವೆಯನ್ನೇನಾದರೂ ಮಾಡಿದರೆ ಬಹಳಷ್ಟು ದೊಡ್ಡ ಶಿಷ್ಯ ಬಳಗ ಅವರಿಗೆ ಉಪಕೃತರಾಗಿರುವುದನ್ನು ನಾವು ಕಾಣಬಹುದು. ವಿಶ್ವವಿದ್ಯಾಲಯಗಳ ಪಠ್ಯಪುಸ್ತಕ ರಚನಾ ಸಮಿತಿ, ನಿಘಂಟು ರಚನಾ ಸಮಿತಿ, ಅನುವಾದ ಅಕಾಡೆಮಿ, ಬೆಂಗಳೂರಿನ ಬಸವ ಸಮಿತಿ, ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಪ್ರಕಾಶನ ಸಂಸ್ಥೆಗಳು, ಬಿಜಾಪುರದ ಮಹಿಳಾ ವಿಶ್ವವಿದ್ಯಾಲಯ ಸಜ್ಜನರನ್ನು, ಅವರ ಪಾಂಡಿತ್ಯವನ್ನು ಗುರುತಿಸಿ ಅನೇಕ ಸಾರ್ಥಕ ಚಟುವಟಿಕೆಗಳಲ್ಲಿ ಅವರನ್ನು ಬಳಸಿಕೊಂಡಿವೆ. ಏಳು ದಶಕಗಳ ನಿರಂತರ ಹೋರಾಟದ ನಂತರ ಒಂದಷ್ಟು ಪ್ರಶಸ್ತಿ, ಪುರಸ್ಕಾರಗಳು ಸಜ್ಜನರಿಗೆ ಲಭಿಸಿವೆ. ಇದರಲ್ಲಿ ಪ್ರಮುಖವಾಗಿ ಅನುವಾದ ಅಕಾಡೆಮಿಯು ಮಾಡಿದ ಪುರಸ್ಕಾರವನ್ನು ಸ್ಮರಿಸಿಕೊಳ್ಳಬಹುದು. ಹಾಗೆ ಇತ್ತೀಚೆಗೆ ಗುಲ್ಬರ್ಗಾ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟನ್ನು ನೀಡಿ ಗೌರವಿಸಿದೆ. ಒಂದಂತೂ ಸತ್ಯ, ಕನ್ನಡ, ಇಂಗ್ಲೀಷ್, ಹಿಂದಿ ಮತ್ತು ಮರಾಠಿಗಳ ಮೇಲೆ ಅವರು ಹೊಂದಿರುವ ಪ್ರಭುತ್ವ, ಬೆಳೆಸಿಕೊಂಡು ಬಂದ ಸೂಕ್ಷ್ಮತೆಗಳು, ಮಾಡಿದ ಕೆಲಸ, ಗಮನಿಸಿದರೆ ಅವರಿಗಿನ್ನೂ ಸಲ್ಲಬೇಕಾದುದು ಬಹಳ ಇತ್ತೇನೋ. ಆದರೆ ಸಜ್ಜನರು ಅಬ್ಬರಿಸಲಿಲ್ಲ, ಮನವಿಗಳನ್ನು ಹಾಕಿಕೊಂಡು ಮನ್ನಣೆ, ಪುರಸ್ಕಾರಗಳಿಗೆ ರಾಜಕೀಯ ಮಾಡಲಿಲ್ಲ. ಗೊತ್ತಿರುವುದರ ಕುರಿತು ವಾದಿಸಿ, ಗೊತ್ತಿರದೆ ಇರುವಲ್ಲಿ ಮೌನವಹಿಸಿ ನಿರಾಳರಾಗಿ ಉಳಿದರು. ನಾನು, ಅವರು ಅನೇಕ ಬಾರಿ ಖೇದಪಟ್ಟಿದ್ದನ್ನು ನೋಡಿದ್ದೇನೆ, ಆದರೆ ಖೇದಕ್ಕೆ ಕಾರಣಗಳನ್ನು ಗಮನಿಸಬೇಕು. ಆಡಳಿತಗಾರರಾಗಿದ್ದರಿಂದ ಓದಿನ ಆಳ ಸಾಧ್ಯವಾಗಲಿಲ್ಲ ಎನ್ನುವುದು, ವಿಶ್ವವಿದ್ಯಾಲಯಗಳ ಮಟ್ಟಕ್ಕೆ ಬಾರದೆ ಇರುವುದರಿಂದ ಸಾಹಿತ್ಯದ ತೌಲನಾತ್ಮಕ ಓದು ಸಾಧ್ಯವಾಗಲಿಲ್ಲ ಎನ್ನುವುದು, ಭಾಷಾ ಸೂಕ್ಷ್ಮತೆಗಳನ್ನೇ ಸವಾಲುಗಳನ್ನಾಗಿ ಸ್ವೀಕರಿಸಿದ್ದರಿಂದ ಓದಿನ ಸುಖವನ್ನು ಅನುಭವಿಸಲು ಸಾಧ್ಯವಾಗಲಿಲ್ಲ ಎನ್ನುವುದು ಅವರಿಗಿರುವ ಖೇದ. ಇದು ಈಗಲೂ ಸಜ್ಜನರಲ್ಲಿರುವ ಓದಿನ ಹಸಿವಿನ ಒಬ್ಬ ಜಿಜ್ಞಾಸುವನ್ನು ಪರಿಚಯಿಸುತ್ತದೆ. ಸಂಬಳದ ಲೆಕ್ಕಾಚಾರಗಳಲ್ಲಿ ಸತ್ತು ಹೋದ, ಎಷ್ಟೋ ವರುಷಗಳ ಹಿಂದೆಯೇ ಓದು ಮತ್ತು ಆಲೋಚನೆಗಳಿಗೆ ದಾರಿದ್ರ್ಯ ತಂದುಕೊಂಡ ನಮ್ಮ ಅಧ್ಯಾಪಕ ಬಂಧುಗಳಿಗೆ ಇದು ಆದರ್ಶವಾಗಬೇಕಿದೆ.
ಒಗ್ಗದ ನೆಲವನ್ನು ಹದಗೊಳಿಸಿ, ಮರ ನೆಟ್ಟು, ಖುಷಿ ಪಟ್ಟ ಸಜ್ಜನ, ಸಿಕ್ಕ ಸಣ್ಣ ಊರನ್ನು ಕಾಯಕದ ಮೂಲಕ ವಿಸ್ತರಿಸಿಕೊಂಡ ಸಜ್ಜನ, ಬಡ ಮಕ್ಕಳ ಆರ್ಥಿಕ ಸಮಸ್ಯೆಗಳನ್ನು ಅರಿತುಕೊಂಡು ವಿಶ್ವವಿದ್ಯಾಲಯಗಳ ಕೊರಳಿಗೆ ಗಂಟೆ ಕಟ್ಟುವ ಸಾಹಸ ಮಾಡಿದ ಸಜ್ಜನ, ಸಾಮಾನ್ಯನ ಹೋರಾಟದಲ್ಲಿ ನೈತಿಕ ಬೆಂಬಲವಾಗಿ ನಿಂತು ಅಸಾಮಾನ್ಯರಾಗುವ ಸಜ್ಜನ, ಸಿಕ್ಕದ್ದು ಭಾಗ್ಯ, ಸಿಗದಿರುವುದು ಸೌಭಾಗ್ಯ ಎಂದು ಸಂತೃಪ್ತರಾದ ಸಜ್ಜನ, ನಾವು ಕಾಣದೆ ಇರುವ ಇದೇ ವ್ಯಕ್ತಿಯ ಒಳಪದರುಗಳು. ಮನುಷ್ಯ ಈರುಳ್ಳಿಯಂತೆ, ಬಿಚ್ಚಿದಷ್ಟೂ ಸಾರ್ಥಕ ಪದರುಗಳೇ.
 ಆರಾಧಿಸಿದವರು ಸಜ್ಜನರನ್ನು ನೋಡಲೇ ಇಲ್ಲ. ಸೀಸದ ಕಡ್ಡಿಯನ್ನು ಸರಿಪಡಿಸಿಕೊಳ್ಳುವುದು, ಲಕೋಟೆಯನ್ನು ಹರಿಯುವುದು, ಬರೆದ ಪುಟದ ಬೆನ್ನು ಪುಟವನ್ನು ಬಳಸುವುದು, ಋತುಮಾನಕ್ಕೆ ತಕ್ಕಂತೆ ಸಿಗುವ ಹಣ್ಣು-ಹಂಪಲನ್ನೇ ಯಥೇಚ್ಛ ಆಹಾರವಾಗಿಸಿಕೊಳ್ಳುವುದು, ಎಂತಹ ಮಾರಣಾಂತಿಕ ಘಳಿಗೆಯಲ್ಲಿಯೂ ಹಿಡಿದ ವಿಚಾರವನ್ನು ಕೊನೆಹಾಯಿಸುವುದು, ಭಾಷಾ ವಿಚಾರದಲ್ಲಿ ಸಣ್ಣ-ಪುಟ್ಟ ಸಂಶಯಗಳನ್ನು ನಿವಾರಿಸಿಕೊಂಡೇ ಮುಂದುವರೆಯುವುದು, ಕವರ್ ಹಾಕಿಯೇ ಪುಸ್ತಕಗಳನ್ನು ಬಳಸುವುದು, ಹೆಂಡತಿಯನ್ನೂ ಅತ್ಯಂತ ಗೌರವದಿಂದ ಸಂಬೋಧಿಸುವುದು, ಲೆಕ್ಕ ಪತ್ರದ ವಿಷಯದಲ್ಲಿ ವ್ಯವಸ್ಥಿತವಾಗಿ ತಿಳಿದು ತಿಳಿದೂ ಮೋಸಕ್ಕೊಳಗಾಗುವುದು, ಬರೆದ ಸಣ್ಣವರನ್ನೂ ಲಕ್ಷಿಸಿ ಪ್ರತಿಯಾಗಿ ಒಂದು ಪತ್ರ ಹಾಕುವುದು, ಇವು ನಾನು ಸಜ್ಜನರಿಂದ ಕಲಿತ `ಮಹಾನ್ವಿಚಾರಗಳು. ನಾನು ಖಂಡಿತವಾಗಿಯೂ ಅವರಿಂದ ಇಂಗ್ಲೀಷನ್ನು ಕಲಿಯಬಾರದೆಂದೇ ಅವರೊಂದಿಗಿದ್ದುಕೊಂಡವನು. ನನ್ನ ಉಡಾಫೆಯ ಕ್ಷಣಗಳನ್ನು ನೆನೆದರೆ ಈಗಲೂ ಕಣ್ಣು ಒದ್ದೆಯಾಗುತ್ತವೆ.
ಎಷ್ಟೆಲ್ಲಾ ಬಸ್ಸಿನ ಅನಾನುಕೂಲತೆಯ ದಿನಗಳು. ಅವು ನನ್ನ ಸಂಶೋಧನೆಯ ದಿನಗಳು, ದೂರದ ಧಾರವಾಡಕ್ಕೆ ಸಜ್ಜನ ನನಗಾಗಿಯೇ ಬಂದು, ಎಪ್ಪತ್ತರ ಇಳಿವಯಸ್ಸಿನಲ್ಲಿ ನನ್ನೊಂದಿಗಿದ್ದು, ಜರ್ಮನಿಯಿಂದ ಅವರ ತಮ್ಮ ಅವರಿಗಾಗಿಯೇ ಕೊಡುಗೆಯಾಗಿ ನೀಡಿದ್ದ ಟೈಪ್ರೈಟರನ್ನು ನನ್ನೊಂದಿಗೆ ಗುದ್ದಾಡಲು ಬಿಟ್ಟು, (ನೆನಪಿಡಬೇಕು, ಒಂದು ಕಾಲಕ್ಕೆ ಅವರ ಸೈಕಲನ್ನು ಮುಟ್ಟುವುದೆಂದರೆ ಬೆಂಕಿಯೊಂದಿಗಿನ ಸಹವಾಸ ಎಂದು ನನ್ನೂರಿನಲ್ಲಿ ಪ್ರತೀತಿ ಇದ್ದ ದಿನಗಳು) ನನ್ನ ಹಾಸಿಗೆಯೊಳಗೂ ಕೈಯಾಡಿಸಿ ಗಂಟು ಗಂಟಾಗಿದ್ದ ಗಾದೆಯನ್ನು ಸರಿಪಡಿಸಿ, ನಾನು ಹೋಟೆಲಿನಿಂದ ತಂದು ನೀಡಿದ ಅನ್ನವನ್ನೇ ಮೃಷ್ಟಾನ್ನವೆಂದು ಪರಿಗಣಿಸಿ ಬದುಕಿದ ನಿವ್ರ್ಯಾಜ್ಯ ದಿನಗಳನ್ನು ನೆನೆದರೆ ನೆನಪಾಗುವುದು ಬದುಕಿದ್ದರೆ ನನ್ನಜ್ಜಿಯೂ ಹೀಗೆಯೇ ಇರಬಹುದಿತ್ತೇನೋ ಎನ್ನುವ ಭಾವನೆ.
ಅವರು ನನ್ನೊಂದಿಗೆ ನನ್ನ ತಂದೆಯೂ ಬಾರದಷ್ಟು ದೂರ ಬಂದಿದ್ದಾರೆ. ನನ್ನ ಪತ್ರಗಳನ್ನು ನೋಡಿ ಕುಣಿದಾಡಿದ್ದಾರೆ, ಪ್ರೀತಿಗೆ ಬೆಂಗಾವಲಾಗಿ ನಿಂತು ರಕ್ಷಿಸಿದ್ದಾರೆ, ಮನೆಯ ಹರಿವಾಣದಲ್ಲಿ ಹಾಕಿದ ಸಸಿಗಳಂತೆ ನನ್ನ ಸಂವೇದನೆಗಳನ್ನು, ಸಂಬಂಧಗಳನ್ನು, ಹುಚ್ಚಾಟಗಳನ್ನು ಕಾಪಿಟ್ಟಿದ್ದಾರೆ. ಸಜ್ಜನರು ನನಗೆ ಇಂಗ್ಲೀಷನ್ನು ಕಲಿಸಲಾರರು, ನಾನು ಕಲಿಯಲಾರೆ ಎನ್ನುವುದೇ ನಮ್ಮ ಸಂಬಂಧಗಳ ಚೆಲುವು. ಅವರು ಎಚ್ಚರಿಸಿದಷ್ಟೂ ನಾನು ನಿದ್ರಾಪರವಶ. ಅವರು ಹಂಬಲಿಸಿದಷ್ಟೂ ನನ್ನದು ಶಾಬ್ದಿಕ ಮೌನ. ಇದೊಂದು ರೀತಿಯ `ಎತ್ತಣ ಮಾಮರ, ಎತ್ತಣ ಕೋಗಿಲೆಆದರೂ ಲೆಕ್ಕಾಚಾರದಲ್ಲಿ ಕೋಗಿಲೆ ಇದೆ, ಮಾಮರವಿದೆ.
ನ್ನಡದಲ್ಲಿ ಸಜ್ಜನರು ಪತ್ರಗಳನ್ನು ಬರೆದಷ್ಟೇ ಲೇಖನಗಳನ್ನು ಬರೆದಿದ್ದರಾಗುತಿತ್ತೇನೋ? ತಪ್ಪಾಯಿತು, ಹಾಗಲ್ಲ ಬಿಡಿ, ಸಜ್ಜನರು ಪತ್ರಗಳನ್ನೇ ಬರೆಯಬೇಕಿತ್ತು. ಈಗ ಅವರ ಪತ್ರಗಳಿಂದಾಗಿಯೇ ಅವರು ಉಳಿಯಬೇಕಿದೆ. ಅದು ನನ್ನೊಂದಿಗೆ ನಿಮ್ಮ ಜವಾಬ್ದಾರಿಯೂ ಕೂಡ. ಗೋಕಾಕರ ಇಂಗ್ಲೀಷ್ ಬರಹಗಳನ್ನು ಕುರಿತು, ಶಾಂತಿನಾಥ ದೇಸಾಯಿಯರ `ಮುಕ್ತಿಕಾದಂಬರಿ ಕುರಿತು, ಮೆಟಾಫಿಜಿಕಲ್ ಕಾವ್ಯವನ್ನು ಕುರಿತು, ಕಾರ್ನಾಡರ ಯಯಾತಿಯನ್ನು ಕುರಿತು, ಸಿದ್ದೇಶ್ವರ ಸ್ವಾಮೀಜಿ, ಧುತ್ತರಗಿ, ಜಿ.ಟಿ.ನಾರಾಯಣ, ಗೆಳೆಯ ಡೋಣುರ ಹಾಗೂ ನನ್ನನ್ನು ಕುರಿತು, ಬಿ..ಸನದಿ, .ಗಿ.ಯಲ್ಲಟ್ಟಿ ಹಾಗೂ ಅನೇಕ ಎಳೆಯರನ್ನು ಕುರಿತು ಸಜ್ಜನರು ಕನ್ನಡದಲ್ಲಿ ಬರೆದಿದ್ದಾರೆ. ಇವು ವಿಮರ್ಶೆಗಳೋ, ಪ್ರತಿಕ್ರಿಯೆಗಳೋ, ಚರ್ಚೆಗಳೋ, ಏನೋ ಒಂದಾಗಿವೆ. ಖಂಡಿತವಾಗಿಯೂ ಬರಹಗಳು ಅವರನ್ನು ಕನ್ನಡದ ಮಹಾನ್ ವಿಮರ್ಶಕರ ಪರಂಪರೆಗೇನೂ ಸೇರಿಸುವುದಿಲ್ಲ. ಕನ್ನಡದಲ್ಲಿ ಸಾಹಿತ್ಯ ವಿಮರ್ಶೆ ಎಂದರೆ ಅದರ ಬೆನ್ನು ಏರಿ ಸಮಕಾಲೀನ ಗೆಳೆಯರ ಬೆನ್ನುಗಳಿಂದ ಜಾರುವುದೇ ಎಂದರ್ಥ. ಅಂದಹಾಗೆ ನಮ್ಮ ಬೆನ್ನುಡಿಗಳೂ ಈಗ ವಿಮರ್ಶೆಯ ಬಹಳ ದೊಡ್ಡ ಆಲೋಚನೆಗಳು ಬಿಡಿ. ಕ್ಷಮಿಸಬೇಕು, ಸಜ್ಜನರಿಗೆ ಬೆನ್ನು ಹತ್ತಿ ಬೆನ್ನು ಇಳಿಯುವ ಲೆಕ್ಕಾಚಾರವೇ ಗೊತ್ತಾಗಲಿಲ್ಲ. ಅದಕ್ಕಾಗಿಯೇ ಅವರು ಸಜ್ಜನರು, ಉಳಿದವರು......?
 ನನ್ನ ಮಾತುಗಳಿಂದ, `ಕಣ್ವಕಟ್ಟಿಕೊಡುವ ಸಣ್ಣ ಹೊತ್ತಿಗೆಯಿಂದ ಸಜ್ಜನರು ದೇವರಾಗುವುದಿಲ್ಲ. ದೇವರಾದವರು, ದೇವರಾಗುವವರು ಚರ್ಚೆಗಳಿಂದ ಅತೀತ. ಸತ್ತವರ ಲೋಕಕ್ಕೆ ತೀರ ಸಮೀಪ. ಅವರಿಗೆ ಎರಡೇ ಕೈಗಳಿರುವುದಿಲ್ಲ, ಒಂದೇ ಆತ್ಮ, ಒಂದೇ ನಾಲಿಗೆಯೂ ಇರುವುದಿಲ್ಲ. ಸಜ್ಜನರು ಒಂದೇ ನಾಲಿಗೆಯ, ಒಂದೇ ಮನಸ್ಸಿನ ಒಂದು ಜೀವ. ಈಗ ಇವರ ಬಿಂಬ ಹಲವಾಗಿವೆ, ಗೆಲುವಾಗಿವೆ. ಇದು ಮನುಷ್ಯ ಲೋಕದ ಸೌಂದರ್ಯ. ಸಜ್ಜನರಿಗೆ ಗೌರವ ಡಾಕ್ಟರೇಟ್ ಬಂತು. ಆದರೆ ಒಂದು ಸಣ್ಣ ಸುದ್ದಿಯೂ ಆಗಲಿಲ್ಲ. ಚಿದಾನಂದಮೂರ್ತಿಯವರಿಗೆ ಗೌರವ ಡಾಕ್ಟರೇಟ್ ಬರಲು ರಾಜಕಾರಣ ಅಡ್ಡಿಯಾಯಿತು. ರಾಜ್ಯಾದ್ಯಂತ ಸುದ್ದಿಯಾಗಿ ಕಡೆಗೆ ಡಾಕ್ಟರೇಟ್ ದೊರೆಯಿತು. ಸಜ್ಜನರು ಪ್ರಶಸ್ತಿ ಪಡೆದೂ, ಪಡೆಯದವನಂತೆ ನಿರ್ಮೋಹಿಯಾಗಿದ್ದಾರೆ. ಚಿ.ಮೂ ಪ್ರಶಸ್ತಿ ಪಡೆದೂ ಗಲಿಬಿಲಿಗೆ ಆತಂಕಕ್ಕೊಳಗಾಗಿದ್ದಾರೆ. ಚಿಮೂ ಪಕ್ಕದಲ್ಲಿಯೇ ಸಿ.ಎಮ್ ಇದ್ದಾರೆ, ಸಜ್ಜನರ ಪಕ್ಕದಲ್ಲಿ ನಾವಿದ್ದೇವೆ, ನೀವಿದ್ದೀರಿ, ಎಲ್ಲೋ ಸಾಯಬೇಕಾಗಿದ್ದ ಆದರೂ ಕೊನೆಯ ಕ್ಷಣದಲ್ಲಿಯೇ ಸಿಡಿದೆದ್ದ ಅಣ್ಣ ಹಜಾರೇ (ತತ್ವವಾಗಿ) ಇದ್ದಾರೆ, ಅಷ್ಟೆ.”
ಕೆಲವೇ ವರ್ಷಗಳ ಹಿಂದೆ ಬರೆದ ನನ್ನ ಸಾಲುಗಳು ಈಗಲೂ ವರ್ತಮಾನವೆ. ಮೌಲ್ಯ ಯಾವಾಗಲೂ ವರ್ತಮಾನವೆ. ಹೀಗಾಗಿ ಸಜ್ಜನರು ತಮ್ಮ ಹೆಸರಿಗೆ ಅನ್ವರ್ಥಕವಾಗಿ ಒಂದು ಮೌಲ್ಯವಾಗಿಯೇ ಬದುಕಿದ್ದರಿಂದ ಅವರೆಂದೂ ಭೂತವಾಗಲಾರರು
 ಅವರೊಂದು ಸಮಾಧಾನದ ನದಿ. ನಮ್ಮ ಕೃಷ್ಣೆಯಂತೆ. ನನ್ನ ನಂತರದಲ್ಲಿ ಸಹೋದರ ಬಸವರಾಜ ಡೋಣೂರ, ಪರ್ವತಯ್ಯ ಹೀರೆಮಠ, ತೊಡ್ಕರ್, ಸನ್ಮಿತ್ರ ಮಲ್ಲಿಕಾರ್ಜುನ ಮೇತ್ರಿ, ಮುಕುಂದ ಲಮಾಣಿ ಹೀಗೆ ಅನೇಕರು ಅವರಿಗಾಗಿ ಹಂಬಲಿಸಿ ತೊರೆಗಳಂತೆ ಬಂದು ಅವರ ಎದೆಯ ದಡ ಸೇರಿದರು. ಬಹುತೇಕ ಇವರೇಲ್ಲ ಸಜ್ಜನರಿಂದ ನಾನು ಕಲಿಯಲಾರದ್ದನೆಲ್ಲ ಅತ್ಯಂತ ಶ್ರದ್ಧೆಯಿಂದ ಕಲಿತರು. ಹೀಗಾಗಿ ಸಜ್ಜನರ ಅಭಿಮಾನಕ್ಕೆ ಭಾಜನರಾದರು. ನನ್ನ ಕಥೆ ಹಾಗಲ್ಲ. ಜಗಮೊಂಡ ಮನಸ್ಸು, ಹಳವಂಡಗಳ ಎದೆ, ಒಂದು ರೀತಿ ಹದವಲ್ಲದ ಒರಟು ಭೂಮಿ. ಅದೇಕೊ ಗೊತ್ತಿಲ್ಲ. ಭೂಮಿಯ ಬಗ್ಗೆ ವಿಚಿತ್ರ ಒಲವು ಹಾಗೂ ವಿಶೇಷ ಕಾಳಜಿ ಇತ್ತು ಸಜ್ಜನರಲ್ಲಿ. ಕೆಲವು ಬಾರಿ ಸಹೋದರ ಬಸವರಾಜ ಡೋಣೂರರಂತೂ ವಿಚಿತ್ರ ಮೋಹಕ್ಕೆ ನಿಸ್ಸಹಾಯಕ ಸಾಕ್ಷಿಯಾದವರು. ಆದರೆ ಒಂದತೂ ಸತ್ಯ ಮುಪ್ಪಿನ ತಾಯಿಯನ್ನು ಕಾಯುವಂತೆ ದೇವರು ತನಗೆ ನೀಡಿದ ಆರ್ಥಿಕ ಸಮೃದ್ಧಿಯನ್ನು ಸಜ್ಜನರೆಡೆಗೂ ಹರಿಸಿ ಅವರನ್ನು ವಾಸ್ತವ ಪ್ರಪಂಚದಲ್ಲಿ ಸಾವಿನ ಕೊನೆಯ ದಿನದವರೆಗೂ ಸಮರ್ಥರಾಗಿಸಿದವರು ಸಹೋದರ ಡೋಣೂರ.
ಕರ್ನಾಟಕ ಸಾಹಿತ್ಯ ಅಕ್ಯಾಡೆಮಿಯು ಬಿಜಾಪುರದ .ಗು ಹಳಕಟ್ಟಿ ಟ್ರಸ್ಟ್ನೊಂದಿಗಿನ ನನ್ನ ಕುರಿತಾದ ವಿಚಾರ ಸಂಕಿರಣದಲ್ಲಿ ಹಾಜರಿರಬೇಕಾದವರು ಪ್ರೊ. ಸಜ್ಜನ. ಹಾಗಂತ ಹೇಳಿದ್ದರೂ ಕೂಡ. ಒಂದಿಷ್ಟು ಬಸವ ಸಮಿತಿ ಮತ್ತಷ್ಟು ಸುತ್ತೂರು ಮಠ ಹೀಗೆ ತುಂಡು ತುಂಡಾಗಿ ಪ್ರಕಟವಾಗಿದ್ದ ಸಜ್ಜನರಿಂದ ಭಾಷಾಂತರಗೊಂಡ ಇಂಗ್ಲಿಷ್ ವಚನಗಳನ್ನೆಲ್ಲ ಒಂದೆಡೆ ಸಂಗ್ರಹಿಸಿ ಮುದ್ರಿಸುವ ತವಕ ನನ್ನದು. ಹೀಗಾಗಿ ಎಲ್ಲೆಲ್ಲೊ ಬಿದ್ದ ತುಂಡುಗಳನ್ನೆಲ್ಲ ಒಂದೆಡೆ ಸಂಗ್ರಹಿಸಿಡಿ ಎಂದು ಕೇಳಿಕೊಂಡಿದ್ದೆ. ಮತ್ತೆ ಕೆಲವು ಬಿಡಿ ಲೇಖನಗಳು ಎಲ್ಲೆಲ್ಲೋ ಹರಿದು ಹಂಚಿ ಹೋಗಿವೆ ಎನ್ನುವುದನ್ನು ತಿಳಿದುಕೊಂಡಿದ್ದ ನಾನು, ಅವುಗಳನ್ನೂ ಒಂದೆಡೆ ಸೇರಿಸುವ ಕುರಿತು ಅವರೊಂದಿಗೆ ಮಾತನಾಡಿದ್ದೆ. ನನ್ನ ಎರಡೂ ಯೋಜನೆಗಳನ್ನು ಮನಸಾರೆ ಒಪ್ಪಿಕೊಂಡಿದ್ದ ಸಜ್ಜನರು ಕುರಿತು ನನ್ನ ವಿದ್ಯಾಗುರುಗಳೂ ಸಜ್ಜನರ ಶಿಷ್ಯರೂ ಆದ ಪ್ರೊ. ಆರ್.ಕೆ. ಕುಲಕರ್ಣಿಯವರನ್ನು ಕರೆಯಿಸಿ ನಾಲ್ಕು ಗಂಟೆಗಳ ಕಾಲ ಸವಿಸ್ತಾರವಾಗಿ ಮಾತನಾಡಿದ್ದರು. ಆದರೆ ಅದು ಬದುಕಿನ ಕೊನೆಯ ವಿಸ್ತø ಸಂದರ್ಶನವೆಂದು ಪ್ರೊ. ಆರ್.ಕೆ. ಅವರಿಗೂ ಗೊತ್ತಾಗಲಿಲ್ಲ. ಎಲ್ಲರಿಗೂ ಆದ್ಯರಾದ ಪ್ರೊ. ಎಂ.ಆರ್.ಜಿ ಅವರ ಕುರಿತ ಲೇಖನವನ್ನು ಕೊಡುವುದರಲ್ಲಿಯೂ ಪ್ರೊ. ಜಿ.ಬಿ.ಎಸ್ ತಡಮಾಡಲಿಲ್ಲ. ಅವರ ಲೆಕ್ಕವೆಲ್ಲವು ಚೊಕ್ಕ
 ಅಂತಿಮವಾಗಿ ಮಗಳನ್ನು ಮೊಮ್ಮಗನನ್ನು ಕಾಣಲು ಹೋದ ಜಿ.ಬಿ. ಸಜ್ಜನ ಹೀಗೆ ನಿಶ್ಯಬ್ಧರಾಗಿ, ನಿಶ್ಚಲರಾಗಿ, ನಿಸ್ಸಿಮರಾಗಿ ಮರಳುತ್ತಾರೆಂದು ಬಹುತೇಕ ಯಾರಿಗೂ ಗೊತ್ತಾಗಲೇ ಇಲ್ಲ.
ಸಜ್ಜನರ ವಿಚಾರದಲ್ಲಿ ಸತ್ಯವನ್ನೇ ಹೇಳಬೇಕು. ಅವರ ಅಂತ್ಯ ಸಂಸ್ಕಾರದ ಎಲ್ಲ ಘಟ್ಟದಲ್ಲೂ ಅವರೊಂದಿಗಿದ್ದೂ ನನಗಿನ್ನೂ ಅವರ ಸಾವು ಮನವರಿಕೆಯಾಗಿಲ್ಲ. ಈಗಲೂ ಮರಣಿಸಿಲ್ಲ ಅವರು. ನಿತ್ಯದ ನನ್ನ ನೂರು ಕನಸುಗಳಲ್ಲಿ ಅನುರಣಿಸುತ್ತಿದ್ದಾರೆ. ಹೀಗಾಗಿ ನನ್ನೂರ ಹಾದಿಯ ಮೈಲುಗಲ್ಲಾಗಿ ನನ್ನೊಂದಿಗೆ, ನನ್ನ ಮಡದಿ ಮಕ್ಕಳು ಸಾಧನೆಗಳೊಂದಿಗೆ ಮಾತನಾಡುವ ಪ್ರೀತಿಯ ಮನುಷ್ಯರಾಗಿದ್ದಾರೆ. ನಾನು ಇಂಥ ಮನುಷ್ಯನ ಪುಣ್ಯ ಚರಣಗಳ ದರ್ಶಿಯಾಗಿದ್ದೇನೆ.

No comments:

Post a Comment