Total Pageviews

Friday, March 16, 2018

ಮೆರವಣಿಗೆ



ನನ್ನೂರಿನಲ್ಲಿ  ‘ನಾಹೊರಗೆ ಬಂದರೆ
ನೆರಳಿಡುವ ನೂರಾರು ಮರ
ಜೀವಧಾರೆಯಾಗಿಸುವ ನಾಲ್ಕಾರು ತೊರೆ
ಸೊಕ್ಕಡಗಿಸುವ ಎತ್ತರದ ಬೆಟ್ಟ
ಮಧು-ಮುದವಿಡುವ ಚಿಟ್ಟೆ
ಮುಗುಳ್ನಗುತ್ತ ಹುಟ್ಟಿ
ನಸುನಗುತ ನುಸುಳುವ
ಸೂರ್ಯನ ಸೊಗಸಿನ ಕ್ಷಣ
ರಾತ್ರಿಗುಡಿಗೆ ಸಾವಿರ ಸಾಲು ನಕ್ಷತ್ರಗಳ ಹಣತೆ
ಮಿಡುಕಾಡುವ ಮಿಡತೆ, ಜೀಗುಡುವ ಜೀರುಂಡೆ
ನನ್ನೂರೆಂದರೆ  ನಾಇಲ್ಲದ
ನಮ್ಮವರ ಹೆಜ್ಜೆಗುರುತು

ಇಲ್ಲಿ,
ನಗರಗಳಲ್ಲಿ ಹಾಗಲ್ಲ
ಹಗಲಿಗೆ ಭಿಕಾರಿಗಳ ಹೆಗಲು
ಬೆಳಗಿಗೆ ಕಾರ್ಬನ್ನಿನ ಧೂಪಾರತಿ
ನಡು ಮಧ್ಯಾನದಲ್ಲಿ ನಡುಗಿ
ರಾತ್ರಿ ಮಕಾಡೆ ಮಲಗುವ ರತಿ
ಲಾಡ್ಜುಗಳಲ್ಲೆ ಲಾಡಿ ಬಿಚ್ಚುತ್ತಾಳೆ ಸಖಿ
ಕ್ಯಾಂಟಿನ್ ಕಸ ಕತ್ತರಿಸುತ್ತ ಅಲೆಯುತ್ತಿರುತ್ತಾನೆ ಪತಿ

ಕಂಪ್ಯೂಟರ್, ಮೊಬೈಲ್ ಮಕ್ಕಳ ಮಹಾ ಭಾರತ
ಪ್ಲಾಸ್ಟಿಕ್ ಕಲ್ಪವೃಕ್ಷ, ಮಾಲ್ ಮಾನಿನಿಯರಿಗೆ
ಉಣಿಸುತ್ತವೆ ಮೊಲೆ
ಕೃತಘ್ನ ಮನಸ್ಸು ಕಾಂಕ್ರಿಟ್ ಮನೆಗಳಲ್ಲಿ
ಒದ್ದಾಡುತ್ತದೆ ಸಿಗಲಾದರೆ ತೊಲೆ
ಬಿಡಿಗಾಸು ಇಲ್ಲದೆ
ಹಾರಿಸುತ್ತಿರುತ್ತದೆ ರೇಸ್ ಕೋರ್ಸಿನಲ್ಲಿ ಕಲ್ಪನೆಯ ಬಲೆ
ನಗರವೆಂದರೆ ನಾನೆ
ನಗರದೆಲ್ಲೆಲ್ಲೂ ನಾನೆ
ನೋಡಿದಲ್ಲೆಲ್ಲ ನನ್ನದೇ ಹೆಣದ ಮೆರವಣಿಗೆ
ಇದೇನೂ ಅಲ್ಲ, ಆತ್ಮ ಸತ್ತವರ ಉರುವಣಿಗೆ
ದೇಶ ಸಾಯುತ್ತದೆ ಧರ್ಮ ಜಿಜ್ಞಾಸೆಯಲ್ಲಿ
ವೇಷ ಸಾಯುತ್ತದೆ ಕರ್ಮ ಕ್ರಾಂತಿಯಲ್ಲಿ
ನಾವು ನಗರಗಳಲ್ಲಿ ಉಸುರುತ್ತೇವೆ ಬಸರುತ್ತೇವೆ
ನಮ್ಮದಲ್ಲದ ಜೀವನ ಮರ್ಮದಲ್ಲಿ

ಸರ್ವರಿಗೂ ಸಮೃದ್ಧಿಯ, ಹಸಿರಿನ ಹಬ್ಬ ಯುಗಾದಿಯ ಶುಭಾಷಯಗಳು

No comments:

Post a Comment