Any one can tell the whole truth about himself. But
Vanity, direction of interest and their disappointment with themselves have
prevented them.
ಇದು ಪ್ರಪಂಚದ ಆತ್ಮ ಸದ್ಗತಿಯ ಶೋಧದಲ್ಲಿರುವ ಪ್ರತಿಯೊಬ್ಬ ಸಾಧಕರೂ ನಂಬಿರುವ ಮಾತು. ಈ ಕಾರಣಕ್ಕಾಗಿಯೇ ಆತ್ಮ ಸಾಕ್ಷಾತ್ಕಾರ, ಆತ್ಮೋನ್ನತಿ, ಆತ್ಮೋದ್ಧಾರ, ಆತ್ಮವೃತ್ತಾಂತ ಹಾಗೂ ಆತ್ಮ ಕಥೆಯಂಥ ಪದ-ಪುಂಜಗಳ ಹಾಗೂ ಪ್ರಯೋಗಗಳ ಪ್ರಯತ್ನ ನಡೆಯಿತು.
ಸತ್ಯ ಸರಳವಾಗಿದೆ, ಆ ಕಾರಣಕ್ಕಾಗಿಯೇ ಅದರ ಅನುಸರಣೆ ಕ್ಲಿಷ್ಟಕರವಾಗಿದೆ. ಸುಳ್ಳಿಗಿರುವ ಸಾಧ್ಯತೆಗಳು ಸತ್ಯಕ್ಕಿಲ್ಲ, ಆದರೆ ಸತ್ಯದಲ್ಲಿ ಸಿಗುವ ಸಮಾಧಾನ, ಸಂಭ್ರಮ ಮತ್ತು ಸ್ಥಿತಪ್ರಜ್ಞಾ ಸಂತೃಪ್ತಿ ಸುಳ್ಳಿನಲ್ಲಿ ಎಂದೂ ಸಾಧ್ಯವಿಲ್ಲ. ಸಾಹಿತಿ, ಸಹೃದಯಿ ಹಿರಿಯರಾದ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿಯವರ ಆತ್ಮಕಥೆಯ ಉತ್ತರಾರ್ಧ ‘ಗಿರಿಜವ್ವನ ಮಗ’ ಲೋಕಾರ್ಪಣೆಗೊಂಡು ನನ್ನ ಈ ಮೇಲಿನ ಆಲೋಚನೆಗಳಿಗೆ ಕಾರಣವಾಯಿತು.
ದೆಹಲಿಯಿಂದ ಮರಳುತ್ತಲೇ ನಾನು ಸಮರ್ಥವಾಗಿ ನಿಭಾಯಿಸಬೇಕಾಗಿದ್ದ ಮಹತ್ವದ ಸಮಾರಂಭ ಇದು. ಗದಗಿ ತೋಂಟದ ಮಠದ, ಎಂ.ಎಂ. ಕಲಬುರ್ಗಿ ಸಂಶೋಧನಾ ಕೇಂದ್ರದಿಂದ ಪ್ರಕಟಗೊಂಡ 238 ಪುಟಗಳ, 8 ಅಧ್ಯಾಯಗಳ ಈ ಆತ್ಮಕಥೆ ಒಂದರ್ಥದಲ್ಲಿ ಯಾದವಾಡ, ಮನ್ಸೂರು, ಮನಗುಂಡಿ ಹಾಗೂ ಧಾರವಾಡ ನಗರಗಳ ಆತ್ಮವೃತ್ತಾಂತವೇ ಸರಿ. ವ್ಯಕ್ತಿ ಸಮಷ್ಠಿಯಾಗುವುದು, ಸಮಷ್ಠಿ ವ್ಯಕ್ತಿಯಲ್ಲಿ ಅವಿತುಕೊಳ್ಳುವುದೆಂದರೆ ಇದೇ ಆಗಿರಬಹುದು.
‘ಬೈದವರೆನ್ನ ಬಂಧುಗಳೆಂಬೆ, ಬಡಿದವರೆನ್ನ ಒಡಹುಟ್ಟಿದವರೆಂಬೆ’ ಎನ್ನುವ ಸೂತ್ರವನ್ನೆ ಉಸಿರಾಗಿಸಿಕೊಂಡು ಬದುಕು ನೀಡಿದುದೆಲ್ಲವನ್ನು ನಿರ್ಭಾವುಕವಾಗಿ ಒಡಲೊಳಗಿರಿಸಿಕೊಂಡು ನಡೆದ ಅವರ ಈ ಆತ್ಮಕಥೆಯನ್ನು ಓದುವಾಗ ನನಗೆ ಸಾಮರ್ ಸೆಟ್ನ ಈ ಸಾಲುಗಳು ನೆನಪಾಗುತ್ತಿದ್ದವು - I am not gravely shocked at the sins of others
unless they personally affected me and even when they do I have learnt at last
generally to excuse them. It is meet not to expect too much of others. You
should be grateful when they treat you well, but unperturbed when they treat
you ill. For every one of is made pretty much what he is by the bent of his
desires and the need of his soul.
ಬದುಕೆಂದರೇನು? ಅಂದರೇನು? ಅಂದುಕೊಳ್ಳುವುದರಲ್ಲಿಯೇ ಬತ್ತಿಬಿಡುತ್ತದೆ ಬದುಕಿನ ಹಳ್ಳ. ಆದರೆ ಸತ್ತು ಬಿಡುವುದಿಲ್ಲ. One does not die immediately one has made one’s will. ಅನ್ಯವಾಗಿ-ಭಿನ್ನವಾಗಿ ರೂಪಾಂತರಗೊಂಡು ಕಾಡುತ್ತಲೇ ಇರುತ್ತದೆ. ನೆನಪುಗಳ ಶರಶೆಯ್ಯ ಮೇಲೆ ಮಲಗಿರುವ ನಾವೆಲ್ಲ ಈ ಅರ್ಥದಲ್ಲಿ ಭೀಷ್ಮಾಚಾರ್ಯರೆ. ಅಂತೆಯೇ ಹೇಳುತ್ತಾರೆ - A great part of our lives is occupied in reverie and
the more imaginative eye are, the more varied and vivid this will be. How many
of us could face having our reveries automatically registered and set before
us? We should be overcome with shame. We should cry that we could not really be
as mean, as wicked as pretty, as
selfish, as obscene, as snobbish, as vain, as sentimental as that. But reveries
as important as cautions.
ಕನ್ನಡದಲ್ಲಿ ನಾನು ಅತಿ ಹಚ್ಚು ಓದಿದ ಲೇಖಕರ ಪಟ್ಟಿಯಲ್ಲಿ ಬರುತ್ತಾರೆ ಸಿದ್ದಲಿಂಗ ಪಟ್ಟಣಶೆಟ್ಟಿ. ಅವರ ‘ಮೀರಾ ವಾಣಿ’, ‘ಆಶಾಡದ ದಿನಗಳು’, ‘ನೀನಾ’ ಕಾವ್ಯಸಕಲನ ಹಾಗೂ ‘ಸ್ಥಿತಪ್ರಜ್ಞಾ ದರ್ಶನ’ ನನ್ನ ಅತ್ಯಂತ ಪ್ರೀತಿಯ ಓದುಗಳು. ಮಹಾ ಪದಮೋಹಿ ಪ್ರೊ. ಪಟ್ಟಣಶೆಟ್ಟಿ. ಅವರ ನಾಯಿ ಬೆಳ್ಳಿಯಪ್ಪ, ಮಗ ಸಮುದ್ರ ಹಾಗೂ ಮಗಳು ಹೂ ನನ್ನ ಮನೋಲೋಕದ ಮಹತ್ವದ ಪಾತ್ರಗಳೆ. ಪದಗಳ ಪವಾಡ ಗೊತ್ತಿರುವ ನಮ್ಮ ಮಧ್ಯದ ಅಪರೂಪದ ಲೇಖಕ ಅವರು. ಅವರಿಗೆ ಗೊತ್ತು Words have weight sound and appearance. It is only
by considering these that you can write sentence that is good to look at and
good to listen to.
ಮೂರು ವರ್ಷಗಳ ಹಿಂದೆ ನನ್ನ ‘ಪ್ರೀತಿ ನಲವತ್ತು ರೀತಿ’ ಕೃತಿ ಲೋಕಾರ್ಪಣೆಗೊಳಿಸುತ್ತ, ನನ್ನ ಬರಹವನ್ನು ಕುರಿತು ಪ್ರೊ. ಬರಗೂರು ಕೆಲವು ಮಾತುಗಳನ್ನಾಡಿದ್ದರು – ‘ಕೆಲವು ಲೇಖಕರು ಓದಿಸಿಕೊಳ್ಳುವುದಿಲ್ಲ, ಮತ್ತೆ ಕೆಲವರು ಓದಿಸಿಕೊಂಡು ಒಳಗೆ ಬಿಟ್ಟುಕೊಳ್ಳುವುದಿಲ್ಲ, ಒಳಗೊಯ್ದು ಒಂದು ವಿಶಾಲ-ವಿಚಾರ-ಬಾವಲೋಕದ ವಿಹಾರ ಮಾಡಿಸುವುದಿಲ್ಲ. ಇನ್ನು ಕೆಲವರು ಮಾಡಿಸಿಯೂ ಒಂದು ತಾತ್ವಿಕ ಪ್ರಶ್ನೆ ಹುಟ್ಟಿಸುವುದಿಲ್ಲ. ಪ್ರಶ್ನೆ ಹುಟ್ಟಿಸಿದವರು ಕೆಲವೊಮ್ಮೆ ಹೈರಾಣಾಗಿಸಿ ದಡಕ್ಕೆ ತಂದು ಬಿಡುವುದಿಲ್ಲ. ಹೀಗಾಗಿ ಅಂದೊದು ಅರ್ಥಪೂರ್ಣ ಓದಲ್ಲ.’ ಈ ಮಾತುಗಳನ್ನು ಇಲ್ಲಿ ನೇರವಾಗಿ ಅನ್ವಯಿಸಿ ಕವಿ, ಪ್ರೊ. ಸಿದ್ದಲಿಂಗ ಪಟ್ಟಣಶೆಟ್ಟಿ ಈ ಮಿತಿಗಳನ್ನು ಕ್ರಮಿಸಿದ ಓರ್ವ ಸಮರ್ಥ ಬರಹಗಾರ. ಅದಕ್ಕೆ ಮತ್ತೊಂದು ಸಾಕ್ಷಿ ಈ ‘ಗಿರಿಜವ್ವನ ಮಗ’.
ಏನೆಲ್ಲವೂ ಇದೆ ಈ ಕೃತಿಯಲ್ಲಿ, ಮರೆಯಲಾಗದ ಪುಟಗಳಲ್ಲಿ – ಯಾದವಾಡ ವಿರುಪಾಕ್ಷಜ್ಜನ ಕಾಠೇವಾಡಿ ಕುದುರೆ, ಕೂಲಿ ಹಾಯ್ದು ಕಾಲು ಕೊಯ್ದಾಗ ಕಾಯ್ದ ಗುರುಸಿದ್ದ ಮಾವ, ಸಾವುಕಾರ ಸಂಗಪ್ಪನ ಕೊಲೆಯಿಂದ ಮಾನ ಕಳೆದುಕೊಂಡ ಯಾದವಾಡವೆಂಬ ತಾಯಿ, ಗಲಗಿನ ದೌತಿ ನೀಡಿ ಅಕ್ಷರ ದಾಸೋಹ ನೀಡಿದ ಬಸಪ್ಪ ಕಾಕಾ, ಸತ್ಯವಾನ ಸಾವಿತ್ರಿ ಸಣ್ಣಾಟದಲ್ಲಿ ಕ್ವಾಣದ ಮೇಲೆ ವೇದಿಕೆಗೆ ಬಂದ ಬಸಯ್ಯ, ಸೀರೆ ಹುಡುಕಿದ ಸಣ್ಣ, ದೊಡ್ಡ ಮತ್ತು ನಡುಕಿನ ಮಾವಂದಿರು, ಯಾದವಾಡದಲ್ಲಿ ಬೆಳವಡಿ ಮಲ್ಲಮ್ಮ ಮತ್ತು ಶಿವಾಜಿಗೆ ಸಂಬಂಧಿಸಿದ ಒಂದು ಶಿಲಾ ಲೇಖ, ಅವ್ವನ ಗೆಳತಿ ಓಮವ್ವನ ಕಥೆ, ದನಗಳ ಮಾರಾಟದ ಗಣಿಸಾಬಾ ಮತ್ತು ಮನ್ಸೂರಿನ ಮಲ್ಲೇಶಪ್ಪ ಊರ್ಫ ಮಲ್ಲಿಕಾರ್ಜುನ ಮನ್ಸೂರ ಹೀಗೆ ಹಲವಾರು ಪಾತ್ರಗಳು ಘಟನೆಗಳು. ಇಲ್ಲಿ ಸಿದ್ದಲಿಂಗ ಪಟ್ಟಣಶೆಟ್ಟಿ ನೆಪ ಮಾತ್ರ.
ಸಿದ್ದಲಿಂಗ ಪಟ್ಟಣಶೆಟ್ಟಿ ಗಾಂಧಿ ಹತ್ಯೆಯ ಹಿನ್ನಲೆಯಲ್ಲಿ ಚಹಾ ಕುಡಿಯುವುದನ್ನೇ ಬಿಟ್ಟ ಪುಸ್ತಕದ ಈ ಪ್ರಸಂಗ ನನ್ನನ್ನು ತುಂಬಾ ಕಾಡಿದೆ. ಇದು ಹತ್ಯೆಯನ್ನು, ಹಿಂಸೆಯನ್ನು ವಿರೋಧಿಸಿದ ಸತ್ಯಾಗ್ರಹದ ಒಂದು ಮಾರ್ಗದಂತೆ ನನಗೆ ಕಂಡಿದೆ. ನಾವು ಆರಾಧಿಸುವ ಯಾವುದೇ ವ್ಯಕ್ತಿಗೆ ಗೌರವ ಕೊಡುವುದೆಂದರೇನು? ಅವರು ನಂಬಿದ ಮೌಲ್ಯಗಳಿಗೆ ಧಕ್ಕೆಯಾದಾಗ ನಾವೂ ನಲುಗುವುದು ಎಂದೇ ಅಲ್ಲವೆ?
ಗದಿಗೆಮ್ಮ ಗದ್ದುಗೆಯಾದ ಪ್ರಸಂಗ ಯಾರೂ ಮರೆಯಲಾಗದ ಕಟುವಾಸ್ತವ. ಕರುಳು ಹಿಂಡುವ ಈ ಸಂದರ್ಭವನ್ನು ಓದಿಯೇ ಅನುಭವಿಸಬೇಕು.
ನಾವ್ಯಾರು ದೂರದವರಲ್ಲ, ಹೊರಗಿನವರಲ್ಲ, ಒಬ್ಬರಿನ್ನೊಬ್ಬರಿಂದ ಸೀಳಿಕೊಂಡವರಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ‘ದೇಶ ವಿಭಜನೆ, ಅಲ್ಲಾ ಭಕ್ಷ ಮತ್ತು ಚೋಂಗ್ಯ’ದ ಘಟನೆ ಇಲ್ಲಿ ಅನಾವರಣಗೊಂಡಿದೆ, ಜಾತಿ ಕದನಗಳಿಂದ ಪ್ರಕ್ಷುಬ್ಧಗೊಂಡ 1947ರ ಸಂದರ್ಭದಲ್ಲಿ ಮುಸ್ಲಿಂ ಕುಟುಂಬ ಒಂದು ಪಟಣಶೆಟ್ಟರ ಊರಿಗೆ ಬಂದು ಮರೆಯಾಗಿ ಹೋಗುವ ಘಟನೆ, ಪ್ರತಿಯೊಂದು ಊರಿನ ಹೊಟ್ಟೆಯಲ್ಲೂ ಘಟಿಸಿರಬಹುದಾದ ತಳಮಳಕ್ಕೆ ಸಾಕ್ಷಿಯಾಗುತ್ತದೆ.
ಇಡೀ ಪುಸ್ತಕದ ಶಕ್ತಿ ಅಡಗಿರುವುದೇ ಗುರು ಪರಮಪರೆಯ ಸ್ಮರಣೆಯಲ್ಲಿ. ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ನೂರಾರು ಪುಟಗಳಲ್ಲಿ ಗಿರಿಜವ್ವನ ಮಗನಾಗಿದ್ದ ತಮ್ಮನ್ನು ನಾಡು-ನುಡಿಯಾಗಿಸಿದ ಗುರುಗಳನ್ನು ಸ್ಮರಿಸುವುದರಲ್ಲಿ, ಅವರ ಅನನ್ಯ ವ್ಯಕ್ತಿತ್ವಗಳನ್ನು ಅನಾವರಣಗೊಳಿಸುವುದರಲ್ಲಿ ವ್ಯಯಿಸಿದ್ದಾರೆ. ಟ್ರೇನಿಂಗ ಕಾಲೇಜ ಸೇರಿಸಿದ ಸಂಗಪ್ಪ ಮಾಸ್ತರು, ರಾಯರ ಅಂಗಡಿ, ಬಾಸೆಲ್ ಮಶಿನ್ ಸ್ಕೂಲ್, ಮುಳುಗುಂದ ಮಠದ ಗುರುಗಳು, ಬಂಗಾರಿ ಗುರುಗಳು, ಕೆ.ಎಸ್. ಪಾಟೀಲ್, ಬ.ಪ. ನವಲಗುಂದ ಹುದ್ದಾರ, ಅರಳಗುಪ್ಪಿ ಸರ್, ದಾತಾರ ಸರ್, ಸಾರಂಗ ಮಠ ಸರ್ ಹಾಗೂ ಹಲವರು.
ಪ್ರೀತಿಯ ದಾಳಿಗೊಳಗಾದವರು ಕವಿ ಪಟ್ಟಣಶೆಟ್ಟಿ. ಈ ಪುಸ್ತಕದ ಪುಟ ಪುಟವೂ ಗೆಳೆಯರು – ಮಲ್ಲಪ್ಪ ಬಂಗಾಲಿ, ಮೌಲಾನಾ, ಶಂಕರ ಬಂಗಾರಿ ಮಾಲತಿ ಕೋಟೂರ, ಶ್ರೀಪಾದ ಅಣವೇಕರ ಕೊಟಬಾಗಿ ಬಸೂ, ತೇಗೂರು ಮೂಗಪ್ಪ, ವಡ್ಡರ ಚಂದ್ರಶೇಖರ, ಸುನಗದ ಮೌಲಾ, ಮೋತಿಲಾಲ ಹಲವಾಯಿ, ಹನುಮಂತ ಚೌಧರಿ ಹಾಗೂ ಶಿವಶಂಕರ ಹಿರೇಮಠ.
‘ಗಿರಿಜವ್ವನ ಮಗ’ ಮರೆತು ಬಿಡಬಹುದಾದ ಪುಸ್ತಕವಲ್ಲ. ಉತ್ತರಾರ್ಧದ ನಿರೀಕ್ಷೆಯಲ್ಲಿ ನಮ್ಮನ್ನಿಡುತ್ತಲೇ ಮೊದಲ ಭಾಗದಲ್ಲಿ ಈಗಷ್ಟೆ ಜೀವನದ ಮೊದಲ ಪುಟ ವಿಸ್ತಾರಗೊಂಡಿದೆ. ಇಲ್ಲಿಯ ಅನುಭವೆಂಬ ಬೃಂಗದ ಬೆನ್ನೇರಿ ನಮ್ಮ ಆತ್ಮಗಳು ವಿಕಾಸಗೊಳ್ಳಬೇಕಿವೆ.