Total Pageviews

Tuesday, August 26, 2014

ರಾಜಭವನದಿಂದ ‘ಬನವಾಸಿ’ಯವರೆಗೆ. . . . .


        ಅದೊಂದು ಅಪರೂಪದ ದಿನ. ಯಾವ ಪುಣ್ಯಾತ್ಮರ ಹರಕೆ ಮತ್ತು ಆಶೀರ್ವಾದದ ಫಲದಿಂದ ಅದು ನನ್ನದಾಗಿತ್ತೊ, ಅಗಸ್ಟ 18 ರ ಮುಂಜಾನೆ ಮಹತ್ವದ ಅವಧಿಯನ್ನು ರಾಜಭವನದ ಆತಿಥ್ಯ ಸ್ವೀಕರಿಸುವುದರೊಂದಿಗೆ ಕಳೆಯುವ ಅವಕಾಶ ದೊರೆತಿತ್ತು. ಈ ಸಂತೋಷ ನನಗೆ ದಕ್ಕಿದ್ದು ನನ್ನ ವೃತ್ತಿ, ಜಾತಿ ಅಥವಾ ಇನ್ನಾವುದೇ ಕಾರಣಕ್ಕಾಗಿಯೂ ಅಲ್ಲ. ಬದಲಾಗಿ ಬರೀ ಓರ್ವ ಲೇಖಕನಾಗಿರುವುದಕ್ಕಾಗಿ. ಓರ್ವ ಬರಹಗಾರನಾಗಿ, ಅಂಕಣಕಾರನಾಗಿ ಕಳೆದ ಎರಡೂವರೆ ದಶಕಗಳಿಂದ ನಾನು ಕ್ರಮಿಸಿದ ದಾರಿಗೆ ಸಾಧನೆಗೆ ಇಂದು ದಕ್ಕಿದ ಗೌರವ ಎಂದುಕೊಂಡಿದ್ದೇನೆ. ಅನೇಕ ನನ್ನ ಓದುಗರಲ್ಲಿ ರಾಜಭವನದ ಹಿರಿಯರೂ, ಗೌವರ್ನರ್ ಅವರ ಆಪ್ತ ಸಲಹೆಗಾರರೂ ಆದ ಶ್ರೀ ವಿಜಯಕುಮಾರ್ ತೋರುಗಲ್ಲ ಅತ್ಯಂತ ಮಹತ್ವದವರು. 

   18 ರ ಮುಂಜಾವು ನನ್ನ ಬರಮಾಡಿಕೊಂಡ ರಾಜಭವನದ ಪೋಲಿಸ್ ಪರಿಚಾರಕರು ಹಾಗೂ ಮಾಧ್ಯಮ ಬಳಗ ತೋರಿಸಿದ ಪ್ರೀತಿ ಅನುಪಮವಾದುದು.
     ಈ ಅಪೂರ್ವ ಘಳಿಗೆಯಲ್ಲಿ ನನ್ನೊಂದಿಗೆ ಬರಲು ಯಾರೂ ಖಾಲಿಯಿಲ್ಲ. ಖಾಲಿ ಇದ್ದವರು ಬರುವಷ್ಟು ಹತ್ತಿರವಿಲ್ಲ. ತಂದೆ-ತಾಯಿ-ಬಳಗ ದೂರದ ಊರುಗಳಲ್ಲಿ, ಹೆಂಡತಿ ಮಾನವ ಹಕ್ಕುಗಳ ಆಯೋಗದ ವೃತ್ತಿಯ ಆರಂಭಿಕ ದಿನಗಳಲ್ಲಿ, ಮಕ್ಕಳು ಪಾಠ-ಪ್ರವಚನಗಳಲ್ಲಿ, ಹೀಗಾಗಿ ಜೊತೆಯಾದವರು ಪ್ರೊ. ಜಯಣ್ಣಗೌಡ, ಬಿಟ್ಟುಬಂದ ನನ್ನ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ. ಸಂಭ್ರಮದ ಮನುಷ್ಯ. ರಾಜಭವನದ ಆ ಕ್ಷಣಗಳನ್ನು ನನಗಿಂತಲೂ ಅದ್ಭುತವಾಗಿ ಅನುಭವಿಸಿದವನು ಆತನೆ. ಬದುಕಿನ ನನ್ನ 43ನೇ ವಯಸ್ಸಿನಲ್ಲಿ ಲೇಖಕನಾಗಿ ನಾನು ಆನಂದಿಸಿದ ಈ ಗೌರವಕ್ಕೆ ಗೆಳೆಯನೊಬ್ಬ ಸಾಕ್ಷಿಯಾಗುತ್ತಿರುವುದು ಒಂದು ಮಹತ್ವದ ಬೆಳವಣಿಗೆಯೆಂದೇ ನಾನು ಪರಿಗಣಿಸಿದ್ದೇನೆ. 
     ನನ್ನ ಬಹಳಷ್ಟು ಮೊಕದ್ದಮೆಗಳು ದೇವರ ನ್ಯಾಯಾಲಯದಲ್ಲಿ ತುಂಬಾ ವಿಳಂಬವಾಗಿ ಇತ್ಯರ್ಥಗೊಂಡಿವೆ. ಆದರೆ ಆತನ ಪುಣ್ಯ ದೃಷ್ಠಿಯಿಂದ ಧಿಕ್ಕರಿಸಲ್ಪಟ್ಟಿಲ್ಲ.
        ಬೆಳಗಿನಂತೆಯೇ ಮುಸ್ಸಂಜೆ. ಈ ದಿನದ ಸಂಜೆ ರಾಜರಾಜೇಶ್ವರಿ ನಗರದ “ಬನವಾಸಿ” ಡಾ.ಸಿದ್ಧಲಿಂಯ್ಯನವರ ಮನೆ ಹಾಗೂ “ದಿ ಕ್ಲಬ್”ನಲ್ಲಿ. 

    ಅವರೀಗ ಅಜ್ಜ. ಮೊಮ್ಮಗಳು ಹುಟ್ಟಿ ಕೇವಲ 20 ದಿನ. ನನ್ನ ಗಾಂಧಿ, ಓಶೋ, ಕಾವ್ಯಕ್ಕೆ ಉರುಳುವಿನ  ನಿರಂತರ ಓದುರು, ಮಾರ್ಗದರ್ಶಿಗಳೂ ಕೂಡ. ಸುಮಾರು 10 ಸಾವಿರ ಪುಸ್ತಕಗಳ ಅದ್ಭುತ ಗ್ರಂಥಾಲಯ, ಮನೆ ತುಂಬ ಹೆಜ್ಜೆ ಹೆಜ್ಜೆಗೂ ಮುಗುಳ್ನಗುವ ಬುದ್ಧ, ನಿರಾಡಂಭರ ಕೌಟುಂಬಿಕ ಸಂಬಂಧಗಳ ಮಧ್ಯ ಬದುಕುವ ಸಿದ್ಧಲಿಂಗಯ್ಯನವರು, ಆನಂತರ ನಮ್ಮನ್ನು ಕರೆದುಕೊಂಡು ಹೋದುದು ‘ದಿ ಕ್ಲಬ್’ನ ರಮಣೀಯ ಸಂಜೆಗೆ. ಶ್ರೀರಾಂಪುರದ ಸ್ಮಶಾನದಲ್ಲಿ ಸಮಾಧಿಗಳ ಮೇಲೆ ಕುಳಿತು ಕನಸು ಕಾಣುತ್ತ ಬೆಳೆದ ಸಿದ್ಧಲಿಂಗಯ್ಯಾ ಸಾಗಿಬಂದ ದಾರಿಯನ್ನೊಮ್ಮೆ ಅನಾವರಣಗೊಳಿಸುತ್ತ ಹೋದರೆ ಒಂದು ಕ್ಷಣ ಭಯಾನಕ ಅನುಭವ. ಅದು ಹೇಳಿ ಮುಗಿಸುವುದೂ ಅಲ್ಲ, ಕೇಳಿ ಕುಳಿತುಕೊಳ್ಳುವುದೂ ಅಲ್ಲ.

      ಪ್ರೀತಿಗೆ ಉಪಸ್ಥಿತಿ ಒಂದೇ ಆಧಾರ.








Friday, August 15, 2014

ಮೂರು ಮಾತು, ಒಂದೇ ಮೌನ

ನಿನ್ನಾಜ್ಞೆ –
ಬದುಕಿದವಳ ಪತಿಯಾಗಿಯೂ ‘ವಿಧುರ’ನಂತಿರಬೇಕು,
ಹೋರಾಟದ ಬದುಕನ್ನು ‘ಸುಖದ ಸಂತೆ’ ಎಂದು ಮರೆತುಬಿಡಬೇಕು,
ಮೈ-ಮುಖ ಕಳೆದುಕೊಂಡು ‘ಆಲೋಚನೆ’ಯಾಗಿರಬೇಕು.
ಗೋ ನನ್ನ ಭರವಸೆ –
ನಾನು ಮೌನವಾಗಿರುತ್ತೇನೆ ಮತ್ತು ನಿನ್ನಾಜ್ಞೆ ಪಾಲಿಸುತ್ತೇನೆ
ಹೆಪ್ಪುಗಟ್ಟಿದ ಹಿಮವೆಲ್ಲ ಕರಗಿ ದ್ವೇಷ ನಾಮಾವಶೇಷವಾಗುವವರೆಗೆ
ಜಗದ ಬಾಗಿಲುಗಳು ತೆರೆದು ಬೆಳಕೇ ಬದುಕಾಗುವವರೆಗೆ
ತಪ್ಪಿ, ಮಿಂಡರ ಮೈಯಲ್ಲಿ ಮುಳುಗಿದ ಹೆಂಗಸರು ಮಹಿಳೆಯರಾಗುವವರೆಗೆ
ನಾನು ಸಾಯತ್ತೇನೆ, ಬಾ ನನ್ನ ಮೈ ಮುರಿ, ಮತ್ತೆ ಮಾತನಾಡೆನ್ನುವವರೆಗು
ನಿನ್ನ ಬೊಗಸೆ ತುಂಬಿದ ಕಣ್ಣೀರ ಹನಿಗಳು
ಮಿನುಗುವ ಚುಕ್ಕೆಗಳಾಗಿ ನನ್ನ ನಗೆಸುವವರೆಗು
ಗೂಡು ಬಿಟ್ಟೋದ ಹಕ್ಕಿ ತನ್ನ ಮನೆ-ಮರಿಗಳ ನೆನೆದು
ಮತ್ತೆ ಮರಳುವವರೆಗು
ನಾನು ನಿಶ್ಯಬ್ಧನಾಗಿರುತ್ತೇನೆ, ಶಬ್ದಗಳಾಚೆಯ ಸತ್ಯವಾಗಿರುತ್ತೇನೆ
ಯಾಕೆಂದರೆ ಗಿಬ್ರಾನ್ ಹೇಳುತ್ತಾನೆ –
ನಿನ್ನನ್ನು ಅಳೆದು ನೋಡುವ, ಸಂಶಯಿಸುವ,

ತೂಕ ಮಾಡುವವರಿಂದ ದೂರವಿರು

Saturday, August 9, 2014

ಹಾಡುತ್ತ ರಂಗೋಲಿ ಹಳ್ಳದಲ್ಲಿ

 ಚಿಂತನೆಗೊಂದು ಚಾವಡಿ ಬೇಕಷ್ಟೆ. ಅದಕ್ಕೆ ಕೆವೊಮ್ಮೆ ಸೇರುವ ಜನ ಸಹಾಯಕ್ಕೆ ಬರುವ ವಿದ್ಯುನ್ಮಾನ ಮತ್ತು ಪ್ರಚಾರಕ್ಕಿಂತಲೂ ಸೇರಿದಷ್ಟೇ ಸಂಬುದ್ದರಿಂದ ಹೊರಬರುವ ಫಲಿತಾಂಶ ಮುಖ್ಯವಾಗುತ್ತದೆ. ಅಂಥ ಅಪರೂಪದ ಸಮಾರಂಭ ಇತ್ತೀಚೆಗೆ ಹಾಸನದಲ್ಲಿ ನಡೆದು ಜಿಲ್ಲೆಯ ಚಿಂತನಶೀಲ ಜನಗಳೊಂದಿಗೆ ಮುಖಾಮುಖಿಯಾಗುವ ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಭಾಗ್ಯವೆಂದುಕೊಂಡಿದ್ದೇನೆ.

          ಹಾಸನದ ರಂಗೋಲಿ ಹಳ್ಳದಲ್ಲಿಯ ಯೋಗ ಗುರು ಸುರೇಶ ಗುರುಜಿಯವರ ವ್ಯಕ್ತಿತ್ವ ವಿಕಸನ ಕೇಂದ್ರದಲ್ಲಿ, ದಿನಾಂಕ: 02/08/2014 ರಂದು ಕವಿಗೋಷ್ಠಿಯ 209 ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ಇಸ್ಲಾಂ ಮತ್ತು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಸಾಹಿತ್ಯ’ ಕುರಿತು ಮಾತನಾಡುವ ಅವಕಾಶ ನನ್ನದಾಗಿತ್ತು. ದರ್ಶನದ ಹುಡುಕಾಟದಲ್ಲಿ ಒಂದು ಪರ್ಯಾಯ ಫಲಿತಾಂಶವಾಗಿ ಹೊರಹೊಮ್ಮಿದ ಸಾಹಿತ್ಯ, ಇಸ್ಲಾಂನಿಂದ ಎಂತೆಂಥ ಮಹಾನ್ ಚಿಂತಕರನ್ನು ಪರಿಚಯಿಸಿತು ಹಾಗೂ ಭಾರತೀಯ ಹಿಂದೂ ಧರ್ಮದೊಂದಿಗೆ ಮುಖಾಮುಖಿಯಾಗಿಸಿತು ಎನ್ನುವುದು ಚರ್ಚೆಯ ಕೇಂದ್ರ ವಸ್ತುವಾಗಿತ್ತು. ಬ್ರಾಹ್ಮಣ್ಯದ ಆಚಾರ-ವಿಚಾರ ಮತ್ತು ಆಚರಣೆಗಳನ್ನೇ ಹಿಂದೂ ಧರ್ಮ ಎನ್ನುವ ರೀತಿಯಲ್ಲಿ ಪ್ರತಿಪಾದಿಸಿ ಅದನ್ನು ಭಾರತದ ಪ್ರಾತಿನಿಧಿಕ ಧರ್ಮ ಎಂದು ತೋರಿಸಿ ಮಾಡಿರುವ ಅಪಚಾರಗಳೇ ಇಸ್ಲಾಂನೊಳಗೂ ನಡೆದು ಹೋಗಿದೆ. ಇಸ್ಲಾಂನ ಅತ್ಯಂತ ಪ್ರಬುದ್ಧ ಮತ್ತು ವಿಶ್ವಾಸನೀಯ ಸೂಫಿ ತತ್ವ ಚಿಂತನೆಗಳನ್ನು ಬದಿಗಿರಿಸಿ, ಆಚರಣೆಗಳಾಧಾರಿತ ಕಟ್ಟರ್ ಇಸ್ಲಾಂನ್ನು ನಿಜವಾದ ಇಸ್ಲಾಂ ಎಂದು ಅಬ್ಬರಿಸುವುದರ ಮೂಲಕ ಅದನ್ನು ಅಪಮೌಲೀಕರಣಗೊಳಿಸಲಾಗಿದೆ. ಹೀಗಾಗೇ ವಿಶ್ವದ ಶ್ರೇಷ್ಠ ಸಾಹಿತಿಗಳಾದ ನಗಿಬ್ ಮಾಫೋಸ್, ಅಹಮದ್ ಜಾವೇದ್, ಸಂತ ಸರ್ರಮದ್, ಸಲ್ಮಾನ್ ರಶ್ದಿ ಹಾಗೂ ನರ್ಸಿನ್‍ರನ್ನು ಹೇಗೆ ಕಡೆಗಣಿಸಲಾಗಿದೆ ಎನ್ನುವುದನ್ನು ನಾವು ಗಮನಿಸಬಹುದಾಗಿದೆ.
     ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಇಕಬಾಲ್, ಮಾಂಟೋ, ಅಹಮದ್ ಅಲಿ, ಕೆ.ಅಬ್ಬಾಸ್ ಮತ್ತು ಅಲಿ ಸಹೋದರರು ನೀಡಿದ ಕೊಡುಗೆ ಕಡಿಮೆಯೇನಲ್ಲ. ಸಾಹಿತ್ಯವನ್ನು ವ್ಯಕ್ತಿ ಪ್ರಚಾರದ ಮಾಧ್ಯಮವಾಗಿಸಿಕೊಳ್ಳದೇ ಸ್ವಾತಂತ್ರ್ಯ ಪೂರ್ವ, ಸ್ವಾತಂತ್ರ್ಯ ಮತ್ತು ಸ್ವತಂತ್ರೋತ್ತರ ಕಾಲದ ಸಂಕಟಗಳಿಗೆ ಸಾಕ್ಷಿ ಎನಿಸುವಂತೆ ಇವರು ರಚಿಸಿದ ಸಾಹಿತ್ಯ ಭಾರತದಲ್ಲಿ ಮತ್ತೆ ಇನ್ನೆಂದೂ ರಚನೆಯಾಗಲಿಲ್ಲ. 
    ಭಾರತೀಯ ಜನಪರ ರಂಗದ ಸಮಾವೇಶದಂತೆ ನಡೆದ ಇಂದಿನ ಈ ಕಾರ್ಯಕ್ರಮದಲ್ಲಿ ಡಾ.ಕೆ.ಕೆ.ಜಯಚಂದ್ರ ಗುಪ್ತಾ, ಶ್ರೀ ಚಂದ್ರಕಾಂತ ಪೆಡೆಸೂರು, ಕೊಟ್ರೇಶ ಉಪ್ಪಾರ, ಶ್ರೀಮತಿ ಸುಶಿಲಾ ಸೋಮಶೇಖರ, ಎನ್.ಎಲ್ ಚನ್ನೇಗೌಡ, ಶ್ರೀ ವಿಜಯಾ ಹಾಸನ, ಭಾರತಿ ಹಾದಿಗೆ, ನವಾಬ್ ಬೇಲೂರ, ಪವನ ಆಲೂರು, ವಾಸು ಸಮುದ್ರವಳ್ಳಿ, ಗೋರೂರು ಅನಂತರಾಜು, ದ್ಯಾವನೂರು ಮಂಜುನಾಥ, ಚಿನ್ನೆನಹಳ್ಳಿ ಸ್ವಾಮಿ, ಸರೋಜ ಚೂಡಾಮಣಿ, ಲಲಿತಾ ಆರ್, ಶ್ರೀ ಆರ್. ಮಂಜಪ್ಪಗೌಡ ಹಾಗೂ ಇತರು ನನ್ನೊಂದಿಗೆ ಇದ್ದರು ಎನ್ನುವುದು ನನ್ನೆದೆಯ ಧನ್ಯತೆಗೊಂದಿಷ್ಟು ಸೇರ್ಪಡೆ.
 

Sunday, August 3, 2014

ಅನುಭಗಳ ನದಿಯಾಗು, ಅನುಭಾವದ ಕಡಲಾಗು.


“ಅಮ್ಮ ಹೇಳುತ್ತಿದ್ದಳು,
ಹರಿಯುವ ನದಿಯಾಗು ಮಗಳೇ
ಹಾಕಿದ ಪಾತ್ರೆಯ ಅಳತೆಯಾಗು, ಮತ್ತೆ
ಚೆಲ್ಲಿದರೆ ಸೋರಿ ಆವಿಯಾಗು
ಮೋಡ ತೇಲಿ ಭೋರೆಂದು ಸುರಿದು
ಹಗುರಾದ ನದಿಯಾಗು. . . .
                     ನೆಚ್ಚಿದ ನಲ್ಲನ ಎದೆಯ ಮಲ್ಲಿಗೆಯಾಗು” (ನದಿಯಾದವಳು)


ಬಾಯರಿಯವರ ಕಾವ್ಯಕ್ಕೆ ಹೋಗುವ ಮೊದಲು ಒಂದು ಮಾತು, ಒಂದು ಕ್ಷಣದ ಧನ್ಯತೆಯ ಭಾವ ಸಲ್ಲಬೇಕಾದುದು ಈ ಮಹಾ ಸಂಗಮಕ್ಕೆ ಕಾರಣರಾದ ವಿಶ್ವ ಚೇತನದ ಇಷ್ಟಲಿಂಗಪ್ಪನವರಿಗೆ, ಗುರುಗಳಾದ ಡಾ.ಶೀಲಾಕಾಂತರವರಿಗೆ, ಬಾಯರಿಯ ಸಹೋದರಿ ರೋಹಿಣಿಯವರಿಗೆ, ಡಾ. ವಿಜಯಕುಮಾರ ಅವರಿಗೆ ಹಾಗೂ ನನ್ನ ಮಾತುಗಳ ಮೂಲಕ ನಿರಂತರವಾಗಿ ಕಾವ್ಯ ಸುಧೆಯನ್ನು ಹೀರಿಯೂ ಮತ್ತೆ ಹಸಿವೆಯಿಂದ ನನ್ನನ್ನು ಕಾಡುವ ಬಾದಾಮಿಯ ಬಂಧುಗಳಿಗೆ.

 ಈಗ ಕಾವ್ಯಕ್ಕೆ ಬರೋಣ,
ಮತ್ತೆ ಮತ್ತೆ ನಾನು ಚಿಂತಿಸಿದ, ಇಷ್ಟಪಟ್ಟ ಕಸ್ತೂರಿ ಬಾಯರಿ ಅವರ ಅಪರೂಪದ ಸಾಲುಗಳಿವು. ‘ಸಂತೆ ಮನೆಯಾಗಬೇಕು, ಒಮ್ಮೊಮ್ಮೆ ಮನೆ ಸಂತೆಯಾಗಬೇಕು’ ಎನ್ನುವ ಬಾಯರಿಯವರ ಈ ಮೇಲಿನ ಸಾಲುಗಳು ಯಾವುದೇ ಪ್ರಜ್ಞಾವಂತ ಹೆಣ್ಣು ಮಗಳ ಸುಂದರ ಜೀವನಕ್ಕೆ ಸಾಕು ಎನಿಸುತ್ತವೆ. ಬಂಡೆಗಳ, ಹೆಬ್ಬಂಡೆಗಳ ಊರಿನಲ್ಲಿ ಅತ್ಯಂತ ಸಂವೇದನಾಶೀಲ ಮನಸ್ಸಿಟ್ಟುಕೊಂಡು ‘ಕಲ್ಲಾದಳು ಅಹಲ್ಯೆ’ ಎಂದು ಸಾರುತ್ತಲೇ, ಪ್ರೀತಗಾಗಿ ಹಪಹಪಿಸಿದ ಹಾಗೂ ಆ ಪ್ರೀತಿಯನ್ನು ತನ್ನ ಕವಿತೆ, ಕಥೆ, ಭಾಷಾಂತರ ಮತ್ತು ಪ್ರಭಂದಗಳ ಮೂಲಕ ಕಟ್ಟಿಕೊಟ್ಟ ಬಾಯರಿ ನಮ್ಮೊಂದಿಗಿದ್ದೂ ನಮ್ಮ ತೆರನಲ್ಲದವರು. ವರ್ತಮಾನದ ಒಳ ಸುಳಿಗಳಿಂದಲೇ ಬಿಡಿಸಿಕೊಳ್ಳಲಾಗದೆ ಒದ್ದಾಡುತ್ತಿರುವ ನಮ್ಮಗಳ ಎದುರೇ ಇತಿಹಾಸದ ಪುಟವಾಗುವ ಪುಣ್ಯ ಪಡೆದ ಲೇಖಕಿ ಈ ಬಾಯರಿ. ಅವರ ಒಂದು ಕವಿತೆ ‘ಪಥಿಕ’ ನಾನು ಇಲ್ಲಿ ಮುರಿದು ಕಟ್ಟಿದ್ದೇನೆ-

“ಹರಿಯುವ ತೋಡಿಯಲಿ
ಕಾಗದದ ದೋಣಿ ತೇಲಿಬಿಟ್ಟಾಗ
ಕಪ್ಪೆ ಗೂಡು ಹೊಳೆ ದಂಡೆಯಲಿ ಕಟ್ಟಿದಾಗ
ಬಣ್ಣ ಎಳೆ ಕೈ ಮದರಂಗಿ ಗೆರೆ ಎಳೆದಾಗ
ಪ್ರೀತಿಗೆ ಹಂಬಲಿಸಿ ಏಕಾಂತದ ದಾರಿಯಲ್ಲಿದ್ದಾಗ
ಗೆಳೆಯ ನಿನೇಕೆ ಬೇಟ್ಟಿಯಾಗಲಿಲ್ಲ?”

2003 ರಿಂದ 2013 ವರೆಗಿನ ಈ ಒಂದು ದಶಕದ ಬೀಸಿನಲ್ಲಿ ಬಹಳವಾಗಿ ಕಾಡಿದ ಆತ್ಮೀಯ ಪಾತ್ರಗಳಲ್ಲಿ ಬಾಯರಿ ಒಬ್ಬರು. ನನ್ನ ‘ಚಲುವ’ ಎನ್ನುವ(ಪ್ರನಾಳ ಶಿಶು) ಪತ್ರಿಕೆಯೊಂದು ಬೆಂಗಳೂರಿನಿಂದ ಪ್ರಾರಂಭವಾದಾಗ ‘ಕಮಲಮ್ಮ ಮತ್ತು ರಾಜಕುಮಾರ’ ಎಂಬ ಕಥೆಯನ್ನು ಕೊಟ್ಟು ನನ್ನ ಸಾಹಿತ್ಯ ಕೃಷಿಯಲ್ಲಿ ಜೊತೆಯಾದ ಬಾಯರಿಯ ಬದುಕು ನಿರಂತರ ಅನಾರೋಗ್ಯ, ನರಳಿಕೆ, ಒಂಟಿತನ, ಅಪಮಾನ ಹಾಗೂ ಸಾವುಗಳ ದೊಡ್ಡ ಸರಮಾಲೆ. ಇಂಥದರ ಮಧ್ಯ ಅವರಿಗೆ ಜೀವ ಸಿಂಚನ ಮತ್ತು ಸಂಚಾರ ಈ ಸಾಹಿತ್ಯ ಕೃಷಿಯಿಂದ. ಅವರೇ ಬರೆಯುತ್ತಾರೆ “ಒಂದು ಹೊಸ ಹೊಳಹು, ಒಂದು ಹೊಸ ಪ್ರೀತಿ, ಒಂದು ಹೊಸ ಹುಟ್ಟು, ಒಂದು ಬೆಳಕಿನ ಕಿರಣ ಎಲ್ಲವೂ ನನಗೆ ಕವಿತೆಯ ಒಡಲಲ್ಲಿ ದೊರಕಿದೆ. ಬದುಕಿನ ಎಲ್ಲ ಕಳಕಳಿ, ಖುಷಿ, ತಲ್ಲಣ, ಕಂಪನ ಎಲ್ಲವೂ ಕವಿತೆಯ ಕನ್ನಡಿಯಲ್ಲಿ ಪ್ರತಿಬಿಂಬಿಸಿವೆ. ಅದಕ್ಕಾಗಿ ನಾನು ಈ ಜಗತ್ತಿನ ಎಲ್ಲಾ ಕವಿಗಳನ್ನು, ಕವಿತೆಗಳನ್ನು ತುಂಬ ಪ್ರೀತಿಸುತ್ತೇನೆ. ಮತ್ತೆ ಖಷಿಯಿಂಬ ಬಾಳುತ್ತೇನೆ.” ಬಾಯರಿ ಅನುಭವಗಳ ನದಿಯಾಗಿ ಹರಿದು ಅನುಭಾವದ ಕಡಲ ಸೇರುವ, ಮಮತೆಯ ಒಡಲುಳ್ಳ ಮಹಾ ಮಹಿಳೆ, ಮಾತೃಶ್ರೋತ.
 ಸಮುದ್ರ ಗೀತೆಯ ಗತಿಯನ್ನು ಗಮನಿಸುತ್ತ ಬಾಯರಿ ಬರೆಯುತ್ತಾರೆ-

ಈ ಬದುಕು ಒಂದು ಮೆರವಣಿಗೆ
ಹೆಜ್ಜೆ ಹಾಕಲಾಗದವರು
ಮೆಲ್ಲಕೆ, ಕಳ್ಳ ಹೆಜ್ಜೆಗಳಿರಿಸಿ ಹಿಂದೆ ಸರಿವರು
ಪಕ್ಷಕ್ಕೆ ಚಲಿಸುವ ಸೂರ್ಯಕಾಂತಿಯ ಹಾಗೆ.

ಹೀಗೆ ಸರಿದವರನ್ನೂ ಶಪಿಸದೆ, ಬಳಿಕರೆದು ‘ಉಡಿಯ ತುಂಬ ಉಡುತಡಿಯ ಬಾಳೆ ಹಾಕಿ ಬಿಂಬವಿಲ್ಲದ ಅಡಿಕೆ ಉಡಿಗೆ ಹಾಕಿ’ ಬಳಗ ಕಟ್ಟಿಕೊಂಡ ಬಾಯರಿ ಸುಟ್ಟ ಬೆಂಕಿಯನ್ನೂ ನಿಂದಿಸಿದವಳಲ್ಲ. ಸ್ತ್ರೀ ಸಂವೇದನೆಗಳ ಸಶಕ್ತ ಬರಹಗಾರ್ತಿಯಾಗಿಯೂ ಅದನ್ನೆಂದೂ ಹಣೆಪಟ್ಟಿಯಾಗಿಸಿಕೊಂಡು ಅವಕಾಶಗಳಿಗಾಗಿ ಆಕ್ರೋಶದ ತಮ್ಮಟೆ ಬಾರಿಸಲೇ ಇಲ್ಲ. ನವೋದಯ, ನವ್ಯ, ಬಂಡಾಯಗಳ ಎಳೆಎಳೆಗಳನ್ನೂ ತೆಗೆದುಕೊಂಡು ಕಾವ್ಯದ ಸೊಗಸಾದ ಹೊಸ ಕಸೂತಿ ಹೆಣೆದ ಬಾಯರಿ ಈ ಮಿಶ್ರಣದಿಂದಾಗಿಯೇ ಭಿನ್ನವಾಗುತ್ತಾರೆ. ಒಂದು ಅವರ ನವಿರಾದ ಕುಸುರಿಯನ್ನು ನೋಡಿ-

“ಅವನು ಅವಳ ಖಾಲಿ ಸಂಜೆ ನೆರಳುಗಳಲ್ಲಿದ್ದ
ಮುಂಜಾವಿನ ಹೊಳಲುಗಳಲ್ಲಿರಲಿಲ್ಲ
ಅಮವಾಸ್ಯೆ ರಾತ್ರಿಗಳ ನಕ್ಷತ್ರಗಳಲ್ಲಿದ್ದ
ಹುಣ್ಣಿಮೆಯ ಬೆಳದಿಂಗಳಲ್ಲಿರಲಿಲ್ಲ
ಅವನು ಮನದ ಪುಟ್ಟ ಝರಿಯಲ್ಲಿದ್ದ
ಅವಳೆದೆಯ ನದಿಯಲ್ಲಿರಲ್ಲಿಲ್ಲ
ಮನೆಯ ಮಲ್ಲಿಗೆಯ ಬಳ್ಳಿಯ ಚಿಗುರುಗಳಲ್ಲಿದ್ದ
ಮಾಲೆಯಾಗಿ ಮುಡಿಯೇರಲಿಲ್ಲ.”

ನಮ್ಮೊಳಗೆ ಹುಟ್ಟುವ ಕೋಟಿ ಕೋಟಿ ಭಾವಗಳಲ್ಲಿ ಯಾವುದು ಕವಿತೆಯಾಗುವ ಶಕ್ತಿ ಹೊಂದಿರುತ್ತದೆ ಎನ್ನುವುದನ್ನೂ ಆಲೋಚಿಸಿ ಬಾಯರಿ ಹೇಳುತ್ತಾರೆ-

ತುಂಬ ದೂರದಿಂದ ಭಾವಗಳು
ಯಾರ ಕೈ ಹಿಡಿದು ನಡೆಸುವುದಿಲ್ಲ
ಪೋರನ ಆಟವಾಡುವ ಗಾಲಿಯಂತೆ
ಉರುಳಬೇಕು ನುಣುಪಾದ ರಸ್ತೆಯಲಿ
ಮನಸ್ಸಿನಲ್ಲಿ ಹೊಸ ತಿರುವುಗಳ ರಿಂಗಣಗಳು.

ನದಿಯಾದವಳು, ಗಂಧವತಿ, ನೀನು ತೆರೆದ ಆಕಾಶ, ನೀಲಿ ಆಕಾಶಕ್ಕೆ ರೆಕ್ಕೆಗಳ ಬಿಚ್ಚಿ, ಕಾತ್ಯಾಯನಿ, ಇನ್‍ಕ್ರೆಡಿಬಲ್ ವೈಸಸ್ ಹೀಗೆ ಒಟ್ಟಾರೆ ಏಳು ಕಾವ್ಯ ಸಂಕಲನಗಳನ್ನು ಕನ್ನಡದ ಕಾವ್ಯಾಸಕ್ತರಿಗೆ ನೀಡಿರುವ ಕಸ್ತೂರಿ ಇನ್ನೂ ಅಪಾರ ಕನಸುಗಳನ್ನಿಟ್ಟುಕೊಂಡಿರುವ ದಣಿವರಿಯದ ಜೀವ.


ಕವಿಯೊಬ್ಬ ಮಹಾ ಕವಿಯನ್ನು ಕುರಿತು ಬರೆದಾಗ ಆ ಬರಹದ ಸೌಂದರ್ಯವೇ ಭಿನ್ನವಾಗಿರುತ್ತದೆ. ಇತ್ತೀಚೆಗೆ ಕಸ್ತೂರಿ ಬಾಯರಿ ಖಲೀಲ್ ಗಿಬ್ರಾನನ ಪ್ರೇಮ ಪತ್ರಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಅದು ನಮ್ಮ ಹೆಮ್ಮೆಯಾಗಬೇಕಾದ ವಿಚಾರ, ಬಾಯರಿ ಕನ್ನಡಿಗರ ಅಭಿಮಾನವಾಗಬೇಕಾದ ಜೀವ.