Total Pageviews

Wednesday, October 5, 2016

ಹೆಣ್ಣು ನಾನು ಭೂಮಿ ತೂಕದವಳು




ಕಳೆದ ಅರ್ಧ ಶತಮಾನದಿಂದ ಅಲ್ಲಮನಂತೆ ಕಾಡಿದ ಒಂದು ಪಾತ್ರ ಕನ್ನಡ ಸಾಹಿತ್ಯದಲ್ಲಿ ಮತ್ತೊಂದಿರಲಿಕ್ಕಿಲ್ಲವೇನೋ. ಆಲೋಚನೆ, ತರ್ಕ ಮತ್ತು ಅರ್ಥದ ಪರಿಧಿಯಿಂದ ಅದೆಷ್ಟೋ ಮೇಲಿರುವ ಅಲ್ಲಮ ಎನ್ನುವ ಮನಸ್ಸು ಕನ್ನಡ ಕಾವ್ಯದ ಕುದಿಗೆ ಒಳಗಾಗಿರುವುದು ಅಚ್ಚರಿ ಎನಿಸಿಲ್ಲ, ಆದರೆ ಅದ್ಭುತವೆನ್ನದೇ ಇರಲಾಗುವುದಿಲ್ಲ. ಈತ ಕಾವ್ಯಕ್ಕೆ ದಕ್ಕುತ್ತಿರುವುದೇ ನನಗೆ, ನಿಮಗೆ ಮತ್ತು ಕವಯತ್ರಿ ಕಸ್ತೂರಿ ಬಾಯರಿಯಂಥವರಿಗೆ ಸಂಭ್ರಮದ ಸಂಗತಿ. ಅರ್ಥ ಹುಡುಕುತ್ತ ಅಪರೂಪದ ದಾರಿ ತುಳಿದುಪದವನರ್ಪಿಸಬಹುದಲ್ಲದೆ ಪದಾರ್ಥವನರ್ಪಿಸಲಾಗದುಎಂದು ಸ್ಪಷ್ಟವಾಗಿ ಹೇಳಿದವನನ್ನು ಮತ್ತೆ ಪದ, ಪದಾರ್ಥ ಮತ್ತು ಅರ್ಥಗಳ ಮೂಲಕವೇ ಕಟ್ಟಿಕೊಳ್ಳಬೇಕಾದುದು ಬದುಕಿಗೆ ದಕ್ಕಿದ ಪರಿಕರಗಳ ಮಿತಿಯಾಗಿರಬಹುದೇ?
 ಕಸ್ತೂರಿ ಬಾಯರಿಯವರ ಕಾವ್ಯಸಂಕಲನಅಲ್ಲಮನೆಡೆಗೆನನ್ನ ಇತ್ತೀಚಿನ ಸೊಗಸಾದ ಓದು. ಅವರ ಅಲ್ಲಮ ನನಗೆ ತೀರಾ ಹತ್ತಿರದವನಾಗಲು, ನನ್ನವನೇ ಆಗಲು, ಬಾಲ್ಯದ ಒಂದು ಕಾರಣವಿದೆ. ಈತ ನಡೆದಾಡಿದ, ತನ್ನ ವಚನಗಳಲ್ಲಿ ಕನವರಿಸಿದ, ‘ಶ್ರೀಪರ್ವತ ಅಥವಾ ಶ್ರೀಶೈಲವು ಅನೇಕ ಬಗೆಯ ಸಾಧನೆಗಳಿಗೆ, ಅನೇಕ ಧರ್ಮಸಾಧಕರಿಗೆ, ಪ್ರಮುಖ ಕೇಂದ್ರವಾಗಿ ಪ್ರಸಿದ್ಧಿ ಪಡೆದಿದೆ. ಅಲ್ಲಮಪ್ರಭು, ಗೋರಕ್ಷನಾಥರು ಪರಸ್ಪರ ಭೆಟ್ಟಿಯಾದುದು ಇದೇ ಪರ್ವತದ ಮೇಲಿನ ಕದಳಿವನದಲ್ಲಿಯೇ. ಗೋರಕ್ಷನಾಥನ ನೆಲೆಯಿದ್ದುದೂ ಇಲ್ಲಿಯೆ ಎಂಬುದು ವೀರಶೈವ ಆಕರಗಳಿಂದ ತಿಳಿದುಬರುತ್ತದೆ. ನಾಥ ಸಂಪ್ರದಾಯ ಮತ್ತು ಕದಳಿವನದ ಸಂಬಂಧ ಗಾಢವಾದುದು. ವೀರಶೈವರಿಗೆ ಶ್ರೀಶೈಲ ಕೈಲಾಸಕ್ಕಿಂತಲೂ ಮಿಗಿಲಾದುದು. ಅಕ್ಕಮಹಾದೇವಿ ಮತ್ತು ಅಲ್ಲಮಪ್ರಭುಗಳಂಥ ಮಹಾತ್ಮರು ಇದೇ ಪರ್ವತದ ಕದಳಿವನದಲ್ಲಿಯೇ ಬಂದು ಲಿಂಗೈಕ್ಯರಾದರು. ಇಂಥ ನೆಲ ನನ್ನ ತಾಯಿಯ ತವರಿಗೊಂದು ಪರ್ಯಾಯ ತವರಾಗಿತ್ತು. ಅಲ್ಲಮನ ಶ್ರೀಶೈಲದಲ್ಲಿ ನನ್ನ ತಮ್ಮ ಹುಟ್ಟಿದಾಗ ವರುಷಗಳವರೆಗಿನ ನನ್ನ ಬಾಲ್ಯವನ್ನು ನಾನು ಇಲ್ಲಿಯೇ ಕಳೆಯಬೇಕಾಯಿತು. ಈಗ ಕಸ್ತೂರಿಯವರ ಅಲ್ಲಮನೆಡೆಗಿನ ನಡುಗೆಯಲ್ಲಿ ನಾನು ಒಬ್ಬನಾದಾಗ, ಬರಹದಲ್ಲ್ಲಿದ್ದಾಗ, ನಾನು ಮತ್ತೆ ಮತ್ತೆ ಕೇಳಿಕೊಳ್ಳುತ್ತೇನೆ ಅಲ್ಲಮ ನನ್ನ ಬಾಲ್ಯದ ಮೂಲಕವೂ ಹಾಯ್ದು ಹೋಗಿರಲಿಕ್ಕಿಲ್ಲವೇ? ಎಲ್ಲೋ ದೂರದ ದಿಕ್ಕಾಗಿ ದಾರಿ ತೋರಿಸಿರಲಿಕ್ಕಿಲ್ಲವೇ? ಒಂದು ಮುಗುಳ್ನಗೆಯೊಂದಿಗೆ ಗಕ್ಕನೆ ನಿಲ್ಲಿಸಿ ಕಸ್ತೂರಿಯವರ ಸಾಲುಗಳು ಸಮಾಧಾನಿಸುತ್ತವೆ-
ನಿನ್ನ ಅರಸಿ ಎಲ್ಲೆಲ್ಲೋ ತಿರುಗಾಡಿದೆ
ನೀ ಮಾತ್ರ ನನ್ನ ಅಂಗಳದ ರಂಗೋಲಿಯಲಿ ಅರಳಿದೆ
ಚುಕ್ಕಿ ಚಂದ್ರಮ ಬೆಳಕು ಆಕಾಶದಲಿ ಅರಸಿದೆ
ನೀ ಮನೆಯ ಮುಂದಿನ ಇಬ್ಬನಿಯಲಿ ಪ್ರತಿಬಿಂಬಿಸಿದೆ
     ಸಂಕಲನದ ಅರವತ್ತೆಂಟು ಕವಿತೆಗಳಲ್ಲಿರುವವರೆಲ್ಲರೂ ನಡೆದದ್ದು ಅಲ್ಲಮನೆಡೆಗೆ. ಇಲ್ಲಿ ಬೆಳಕಿದೆ-ಕತ್ತಲೆಯಿದೆ, ಚೈತ್ರವಿದೆ-ಚಿತ್ತಾರವಿದೆ, ಸಾಲು ಸಾಲಾಗಿ ಬೆಳ್ಳಕ್ಕಿಗಳಿವೆ, ಗುಪ್ಪೆ ಗುಪ್ಪಾದ ಇರುವೆಗಳೊಂದಿಗೆ ಚುಕ್ಕಿ-ಚಂದ್ರಮರಿದ್ದಾರೆ, ಮೋಡ-ಮಳೆಯೂ ಇದೆ, ತೆರೆದ ಆಕಾಶವಿದೆ, ಕತ್ತಲೆಯಿದೆ, ಹಳಬರಿದ್ದಾರೆ, ಹೊಸಬರಿದ್ದಾರೆ, ಅವನಿದ್ದಾನೆ ಅವಳೊಂದಿಗೆ, ಮೌನವಿದೆ ಮಾತಿನ ಮಹಾಜಾತ್ರೆ ಇದೆ. ಮಕ್ಕಳಿದ್ದಾರೆ, ಹೊಕ್ಕಳಲ್ಲಿ ಹೂವರಳಿಸಿಕೊಂಡ ಹೆಂಗಸರಿದ್ದಾರೆ, ಬುದ್ಧನಿದ್ದಾನೆ, ನಿಶೆಯ ನಿದ್ದೆ ಅಮರಿಸಿಕೊಂಡ ದೇಶ-ಕಾಲಗಳಿವೆ, ಎಲ್ಲವೂ ಅಲ್ಲಮನೆಡೆಗೆ. ಎಲ್ಲಿಯೂ ಇಲ್ಲವೆನ್ನುತ್ತಾ, ಅಲ್ಲಲ್ಲಿ ನಿಲ್ಲುತ್ತಾ, ಜೀವಯಾನ ಮುಗಿಸುತ್ತ, ಅನುಭವದ ಗಟ್ಟಿಗಳ ಮೇಲೆ ಕಾಲೂರಿ ಶೂನ್ಯದೆಡೆಗೆ ನಡೆದ ಅಲ್ಲಮನಿದ್ದಾನೆ. ಅವನಲ್ಲಿಯೂ ಪ್ರಪಂಚವನ್ನು ಬಾಯರಿ ಹೇಳುವಂತೆ, ಒಂದು ಭರವಸೆಯ ಎಳೆಯಲ್ಲಿ ಪೋಣಿಸುವ ಹೆಣಗಾಟದ ಹುಚ್ಚಿದೆ. ಒಳ ಹೊರಗಿನ ಆಳ ನಿರಾಳಕ್ಕೆ ಸಂಭ್ರಮಿಸಿ, ತಾನು ಸಾಕ್ಷಿಯಾಗುವ ಬಗೆಯನ್ನು ಬಯಲ ಬೆರಗಿನಲ್ಲಿ ಬರೆದಿಡುವ ತವಕವಿದೆ. ಹೀಗೆ ಬೆರಗ ಬಚ್ಚಿಟ್ಟುಕೊಂಡ ಬೀಜಗಳು ನೂರಾರು. ದೇಶ, ಕಾಲಗಳ ಹಂಗು ಹರಿದು ಹೋಗುವ ಸತ್ಯಕ್ಕೆ ಅವನಿನ್ನೂ ಸಾಕ್ಷಿಯಾಗಬೇಕಿದೆ. ಹೀಗೆ ಸಂಕಟದಲ್ಲಿ ಕುಳಿತವನ-
ಮನಸಿನಲಿ ಮಹಾಲಿಂಗದ ಬೆಳಕು
ಅರಳಿತು ಆಳಕ್ಕಿದರ ಕ್ಯಾದಿಗೆಯ ಘಮ
ಸೊಂಪನ್ನು ಕಂಡವರಿಲ್ಲ ಅನುಭವಿಸಿದವರ
ಜಿಹ್ವೆಯಲಿ, ನೇತ್ರದಲಿ, ಸರ್ವಾಂಗದಲಿ ಪ್ರಭುಲಿಂಗ
ಲೀಲೆ.
ಜಗದ ತುಂಬೆಲ್ಲಾ ಬೀಜಕಣಗಳು ಲಿಂಗಗಳು
ಪಾರಮಾರ್ಥದ ಪರೀಕ್ಷೆಯಲಿ ಅಂಗಾಂಗಗಳ ಸೆಡವು
ಮುಂದಿನ ಪ್ರಳಯದಲಿ ಲೋಕ ಲೋಕವಾಗಿ
ಜಗದಂತೆ ಲಿಂಗ, ಲಿಂಗದಂತೆ ಮನ ಒಳ
ಹೊರಗೂ ಒಂದಾದ ಗುಹೇಶ್ವರ.
 ಬಾಯರಿಯವರ ಅಲ್ಲಮನೆಡೆಗಿನ ಪ್ರವಾಸ ಬಹಳ ಹಿಂದಿನಿಂದಲೇ ಪ್ರಾರಂಭವಾಗಿದೆ. ಹಾಗೆ ನೋಡಿದರೆ ಅವರ ಹಿಂದಿನ ಸಂಕಲನಇನ್ಕ್ರೆಡಿಬಲ್ ವಾಯ್ಸಸ್ಕೂಡ ಇಂಥದೇ ಒಂದು ಪ್ರಯೋಗ. ಇದು ಮೈ-ಹಾಡಿದ ಸಂಕಲನವಲ್ಲ, ಮೇಲೊಂದು ಪಿಸುಗುಡುವ ಚರ್ಮವಿದೆ ಅಷ್ಟೆ. ಆದರೆ ದಾರಿ ಸಾಗಿರುವುದು ಒಳಗೆ, ಒಳಗೆ, ಅಂತರಂಗವೆಂಬ ಆಲಯದೊಳಗೆ. ಇದು ಬಾಗಿಲಿಲ್ಲದ ಕದಳಿ, ಬಾಗಿ ಹೋದವರಿಗಷ್ಟೇ ದಕ್ಕುವ ಬೆಳಕು. ಇಲ್ಲಿ ಯಶಸ್ಸು ಅಪಯಶಸ್ಸುಗಳ, ಅರ್ಥ ಮತ್ತು ಅಪಾರ್ಥಗಳ ಪ್ರಮೇಯವೇ ಇಲ್ಲ. ಬಾಯರಿಯ ಮಾತಿನಲ್ಲೆ ಹೇಳಬೇಕೆಂದರೆ
 ಏರುವುದು ಇಳಿಯುವುದು ಎಲ್ಲ ಗೊಂದಲದಾಟ,
ಎಲ್ಲ ಸಂತೆ ಜಾತ್ರೆಯ ಗದ್ದಲಗಳು, ತರಂಗಗಳು
ಆತ್ಮ ನಿವೇದನೆಯ ಏಕಾಂತದಲಿ, ಆಲಾಪಗಳಾಗಿ
ಅವನ ಬಿಟ್ಟು ಇವನ್ಯಾರು ಎನ್ನುವ ಭ್ರಮೆಯಲಿ
ತೇಲುವ ಮೋಡಗಳು, ಕಂಪನಗಳು ಅಂಚಿನಲಿ
ಇಂದ್ರೀಯ ಸುಖದ ತರ್ಕವಿಲ್ಲದ ದೃಷ್ಠಿಗಳ ಸಂಪುಟಗಳು
ಕಳೆದ ಮೂರು ದಶಕಗಳಿಂದ ನಾನು ಕಾವ್ಯವನ್ನು ಕುಡಿಯುತ್ತಿದ್ದೇನೆ. ಕುಡಿಸಿದ ಕೈಗಳು ಲೆಕ್ಕಕ್ಕೆ ದಕ್ಕುವುದಿಲ್ಲ. ಹಾಗಂತ ಕುಡಿದದ್ದೆಲ್ಲವೂ ಅಪರೂಪದ ಕಾವ್ಯಗಳೇ ಆಗಿರಲಿಲ್ಲ. ಆದರೆ ಬಾಯರಿಯವರ ಕಾವ್ಯ ಮಾತ್ರ ಹೀಗೆ ಕಾವ್ಯಕ್ಕಾಗಿ ಹಸಿದವರಿಗೆ ತೃಷೆ ಹಿಂಗಿಸಿದ ನೀರಾಗಿದೆ, ಬಿಸಿಲ ಬೇಗೆ ನೀಗಿಸಿದ ಕೊಳವಾಗಿದೆ, ಬರದ ನೆಲಕ್ಕೆ ಭರವಸೆಯ ಮಳೆಯಾಗಿದೆ, ಇದೆಲ್ಲವೂ ಅಪರೂಪದ್ದು. ಮಾಗಿಯ ಚಳಿಗೆ ಮೈಕೋರೈಸಿದ ರೀತಿಯನ್ನು ಹೇಳುವ ಅವರ ಕಾವ್ಯ ನಾದ ಬಿಂದುವಿನಲ್ಲಿ ಮಳೆ ಸುರಿಸಿ ಮಾಗುವ ಪರಿಯನ್ನು ಹೇಳುವ ರೀತಿಯೇ ಅವರನ್ನೊಬ್ಬ ಅಪರೂಪದ ಕವಯತ್ರಿಯನ್ನಾಗಿಸುತ್ತದೆ. ಕಾವ್ಯಸಿಂಚನಕ್ಕೂ ಮುನ್ನ ಕಲ್ಲಾಗಿದ್ದ ಅಹಲ್ಯೆ ಮುರಳಿ ನಾದಕ್ಕೆ ಮಾಗಿದ, ಮುಪ್ಪಿಗೆ ಹೊರಳುವ, ಕಥೆ ಹೇಳುವ ಅವಳ ಕವಿತೆಮೋಹನ ಮುರುಳಿನೀವು ಓದಲೇಬೇಕು. ಸಾಧ್ಯವಾಗದಿದ್ದರೆ ಕನಿಷ್ಟ ಸಾಲುಗಳನ್ನಾದರೂ ಸಂಭ್ರಮಿಸಿ -
ನವಿರಾದ ಪ್ರೀತಿ ಅರಳಿದ ಸಮಯ
ಕವಿತೆಯ ಕೂದಲುಗಳು ಉದ್ದ ಜಡೆ ಹೆಣೆದು
ಕ್ಯಾದಿಗೆ ಮುಡಿದು, ಚಿಟ್ಟೆಗಳ ಅರಳಿಸಿ ಜೋತಾಡಿದಾಗ
ನೀನು ಬಂದು ನನ್ನ ಮನೆಯ ಬಾಗಿಲು ತಟ್ಟಿದೆ.
ಕೊನರಿದ ಕೊರಡು ಬಿದುರುನಿಂದ ಹೊರಟ
ನಿನ್ನ ನಿನಾದ ರಾತ್ರಿಯ ಬೆಳದಿಂಗಳಲಿ
ಪಸರಿಸಿ ಸವಿ ಸಮ್ಮಿಲನದ ಸುಖದಲಿ
ಮನೆ, ಗಂಡ, ಮಗು ಎಲ್ಲರೂ ದೂರ ಉಳಿದ ಇರುಳು
ಬುದ್ಧನ ಬೆನ್ನಟ್ಟಿದ ಅವರಸಾಕ್ಷಿ, ಅವ್ವನ ಕುರಿತಭಹುಷ್ಯ, ಮಳೆ ಕುರಿತರುಜುಋತು, ಚಳಿಯ ಹಾಡಾದಅಮಲು, ಅಲ್ಲಮ, ಗಾಂಧಿ, ನನ್ನ ನಲ್ಲ, ಸಂಜೆ, ಮಕ್ಕಳನ್ನು ಸಂಭ್ರಮಿಸುವಮಳೆ ನಕ್ಷತ್ರಹೀಗೆ ಸಾಲು ಸಾಲಾಗಿ ಕಾಡುವ ಬಾಯರಿಯವರ ಕಾವ್ಯದಲ್ಲಿ ಬಯಲು ಸೀಮೆಯ ಸರಳತೆ, ಕರಾವಳಿಯ ಗಾಂಭೀರ್ಯ ಮತ್ತು ಮಲೆನಾಡಿನ ಗಾಢ ಮೌನಗಳು ಬೆರೆತು, ಕಾವ್ಯಾಸಕ್ತರ ಪಾಲಿಗೊಂದು ಅನುಭವದ ಹೊಸ ಲೋಕವನ್ನು ಸೃಷ್ಠಿಸಿಕೊಡುತ್ತವೆ. ವ್ಯಕ್ತಿಯ ಸುತ್ತಲಿನ ಪರಿಸರ, ಅನುಭವಗಳ ಮೂಲಕ ಕ್ರಮಿಸುವ ರೀತಿ ಕವಿ, ಕಾವ್ಯದ ಆಶಯವನ್ನು ರೂಪಿಸುತ್ತವೆ ಎಂದು ಸಾಹಿತ್ಯ ಚಿಂತಕರ ನಂಬಿಕೆ. ಅದು ಶಬ್ಧಶಃ ಸತ್ಯ ಎನ್ನುವುದಕ್ಕೆ ಬಾಯರಿಯಅಲ್ಲಮನೆಡೆಗೆಒಂದು ಮಹತ್ವದ ಸಾಕ್ಷಿ


ಈಗ ಬಾಯರಿ ಎಂದರೆ ಬಾದಾಮಿ, ಅದರ ಸುತ್ತಲಿನ ಆಲಯಗಳು, ಆಲಯಗಳ ಸುತ್ತುವ ಬಯಲು. ಬಂಡೆ, ಬಯಲು ಮತ್ತು ಆಲಯಗಳ ಮಧ್ಯ ಕಂಪಿಸುತ್ತ, ಪ್ರತಿಧ್ವನಿಸುತ್ತ ನಡೆದ ಕಾವ್ಯಯಾನ ಈಗೊಂದು ಸ್ಥಿತಿ ತಲುಪಿದೆ ಎನ್ನಿಸುತ್ತದೆ. ಸ್ಥಿತಿ ಎನ್ನುವುದು ನಿಶ್ಚಲತೆ ಎಂದುಕೊಳ್ಳುವ ಅವಶ್ಯಕತೆ ಇಲ್ಲ. ಅದು ವಿಕಾಸದ ಹೊಸ ಮಗ್ಗಲೂ ಕೂಡ. ಅನುಭವಗಳು ಮಾಗಿ, ಶಬ್ಧಗಳ ಹಂಗು ಹರಿದು, ಜಂಗಮದ ದಾರಿಯಲ್ಲಿರುವ ಬಾಯರಿ ಈಗ ಜಗದ ಜಲನೆ, ಗಂಧವತಿ. ಅಂದಹಾಗೆ, ಅವರಗಂಧವತಿ ಒಂದು ಪದ್ಯ ನನ್ನನ್ನು ಕಾಡಿದೆ. ಕಾವ್ಯದೊಂದಿಗೆ ಕೈಕೈ ಬೆರೆಸಿ, ಕೊನೆಯುಸಿರಿನವರೆಗೂ ಸಾಗಬೇಕೆನ್ನುವ ನನ್ನಂಥವನಿಗೆ ಅದು ಕಾಡುತ್ತಲೇ ಇರುತ್ತದೆ. ಯಾಕೆಂದರೆ ಇವು ಆತ್ಮಾಭಿಮಾನದ ಸಾಲುಗಳು.
ಹೆಣ್ಣು ನಾನು ಭೂಮಿ ತೂಕದವಳು
ರಿಂಗಣಿಸುತ್ತವೆ ರೋಮ ರೋಮಗಳಲಿ
ನರ್ತನದ ಹೆಜ್ಜೆ-ಗೆಜ್ಜೆ ಸಪ್ಪಳಗಳು ಹಾಗೂ
ತುಡಿತದ ನಿನಾದಗಳು ಅರಳಿ, ಹೂಗಳ
ಘಮ ನನ್ನಲಿ.

No comments:

Post a Comment