ದಿನಾಂಕ:12.09.2016
ರಂದು ನಮ್ಮ ‘ಜೋಳಿಗೆ’ಯನ್ನು
ಜಗದ ಹೆಗಲಿಗೆ ಹಾಕಿದ ಮೇಲೆ ಜಂಗಮನಿಗೇನು ಕೆಲಸ? ಮತ್ತೆ ಜೀವಪೊರೆಯುವ ದಾರಿಯನ್ನು ಅರಸುತ್ತ ಹೊರಡಬೇಕಲ್ಲವೆ? ಈ ತಹತಹಿಕೆ ಸತ್ತರೆ ತಳಕ್ಕೂ ಹೊರೆಯಾಗುತ್ತಾನೆ ಮನುಷ್ಯ. ಹೀಗಾಗಿ ತಡಕಾಡುತ್ತಲೇ ಇರಬೇಕು. ಜೋಳಿಗೆಯ ಜನ್ಮಭೂಮಿ ಚಡಚಣದಿಂದ ನಾನು ಹೊರಟಿದ್ದು ಗೋಕಾಕದೆಡೆಗೆ.
ಗೋಕಾಕಗೆ
ಅಲ್ಲಿಯ ಸಾಹಿತ್ಯ ಹಾಗೂ ಸಾಂಸ್ಕøತಿಕ ಪರಿಸರಕ್ಕೆ ನಾನು ಮತ್ತೆ ಮತ್ತೆ ಮುಖಾಮುಖಿಯಾಗಿದ್ದೇನೆ. ಹಿಂದೊಮ್ಮೆ ರಂಗಭೂಮಿಯನ್ನಾಧರಿಸಿದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅದಕ್ಕೂ ಮೊದಲೊಮ್ಮೆ ವಧು ಅನ್ವೇಷಕನಾಗಿ, ನನ್ನ ಮೊದಲ ಮಗ ಅವನ ತಾಯಿಯ ಹೊಟ್ಟೆಯಲ್ಲಿದ್ದ ಒಂಬತ್ತು ತಿಂಗಳ ಅವಧಿಯಲ್ಲಿ ಮತ್ತೆ ಈಗ 16.09.2016 ರಂದು ಶೂನ್ಯ ಸಂಪಾದನಾ ಮಠದ ‘ಶಿಕ್ಷಣ ಸಿರಿ’ಪ್ರಶಸ್ತಿ
ಪ್ರಧಾನ ಸಮಾರಂಭದ ಉದ್ಘಾಟಕನಾಗಿ ಹೋದದ್ದು ಅಚ್ಚರಿಯೇನಲ್ಲ. ಆದರೆ ಆಲೋಚಿಸಬೇಕಾದ ಸಂಗತಿ.
ಬದುಕೊ,
ಬರಹವೊ, ಪ್ರವಾಸವೊ ಯಾವುದೇ ಆಗಿರಲಿ, ನೂರು ವರ್ಷಗಳ ಮಿತಿಯ ಬಾಳಿನಲ್ಲಿ ತುಳಿದ ದಾರಿಯನ್ನೇ ಮತ್ತೆ ಮತ್ತೆ ತುಳಿಯುವ ಅವಕಾಶ ಆಲೋಚನೆಗೊಂದು ಅಪರೂಪದ ಸಂದರ್ಭ ಮತ್ತೆ ಮತ್ತೆ ಬರುವುದಿಲ್ಲ. ಬಂದಿದೆ ಎನ್ನುವುದಾದರೆ ಅದನ್ನು ಬೆಳಕಿನಂತೆ ಬಾಚಿಕೊಳ್ಳಬೇಕೆನ್ನುವುದು ನನ್ನ ನಂಬಿಕೆ.
ನಯಾಗರವನ್ನು ಹೋಲುವ ಗೋಕಾಕ ಫಾಲ್ಸ್ನ್ನು ಸ್ಮರಿಸಿಕೊಳ್ಳುತ್ತ ಅಲ್ಲಿಗೆ ಹೋಗಿ ಮುಟ್ಟುವುದರಲ್ಲಿ ಮುಸ್ಸಂಜೆ. ಬಳಿಯಲ್ಲಿದ್ದದ್ದು ಕೇವಲ ಒಂದು ಗಂಟೆಯ ಸಮಯ. ವಿಶಾಲವಾಗಿ ಹರಿಯುವ ನದಿ, ಅತ್ಯಂತ ಪುರಾತನವಾದ ಗೋಕಾಕ ಟೆಕ್ಸ್ಟೈಲ್ಸ್, ಅಲ್ಲಿಯ ಹ್ಯಾಂಗಿಂಗ್ ಬ್ರಿಡ್ಜ್ ಶ್ರೀ ಮಹಾಲಿಂಗೇಶ್ವರ ದೇವಾಲಯ ಒಂದು ಕ್ಷಣ ನಮ್ಮ ಮಲೆನಾಡಿನ ಮಹಾ ಅನುಭವ ನೀಡುತ್ತದೆ. ಸ್ವಲ್ಪ ಹಿಂದೆ ಹೋದರೆ ಗೊಡಚಿನ ಮಲಕಿಯ ಮನೋಹರ ದೃಶ್ಯ.
ಅಂದುಕೊಂಡ
ಸಮಯಕ್ಕೆ ವೇದಿಕೆ ಮೇಲಿದ್ದು ಭಾರತದ ಆಚಾರ್ಯ ಪರಂಪರೆ ಈಗ ಅದು ಜಡವಾಗುತ್ತಿರುವ ರೀತಿ, ನಮ್ಮ ಯುವ ಸಮುದಾಯ ಆತ್ಮಾವಲೋಕನವಿಲ್ಲದೆ ಅನುಭವಿಸುತ್ತಿರುವ ಭೀತಿ ಕುರಿತು ಮಾತನಾಡಿದೆ. ಮರೆಯದ ಮಹತ್ವದ ಸಂಜೆ.
ಗೋಕಾಕನಿಂದ
ನನ್ನ ಝನ್ನಲ್ಲಿ ಹೊರಟಾಗ ರಾತ್ರಿ 10 ಗಂಟೆ. ಅಭಿಮಾನಿ ಮಿತ್ರರಿಬ್ಬರು ಕಟ್ಟಿಕೊಟ್ಟ ಎಲೆಯನ್ನು ಮೆಲ್ಲುತ್ತಾ ಬಾಗಲಕೋಟೆಯನ್ನು ತಲುಪಿದಾಗ ಮಧ್ಯರಾತ್ರಿ 2 ಗಂಟೆ.
No comments:
Post a Comment