ವರುಷಗಳ ಹಿಂದಿನ ಮಾತು. ಗೆಳತಿಯೊಬ್ಬಳಿಗೆ ಹಿಂದಿ ಚಿತ್ರ ಒಂದರ ಕತೆ ಹೇಳುತ್ತಿದ್ದೆ, ಚಪ್ಪಲಿ ಅಂಗಡಿಯೊಂದರಲ್ಲಿ ಪಕ್ಕದ ತಲೆ ಹಿಡುಕಿಯೊಬ್ಬಳಿಂದ ಇಪ್ಪತ್ತು ರೂಪಾಯಿ ಉದಾರವಾಗಿ ಪಡೆಯುವ ಉಪನ್ಯಾಸಕನ ಹೆಂಡತಿ, ಬರೀ ಹೊಗಳಿಕೆಗಳಿಗೆ ಮರುಳಾಗುತ್ತ ಹಾದಿ ತಪ್ಪಿ ಹಾಸಿಗೆಯಿಂದ ಹಾಸಿಗೆಗೆ ಹರಿಯುತ್ತ ಹದ ತಪ್ಪುತ್ತಾಳೆ. ಬದುಕಿಯೂ ಅಪರಾಧಿ ಪ್ರಜ್ಞೆಯ ಹೆಣವಾಗುತ್ತಾಳೆ. ಹೆಣ್ಣಿಗೆ ಹೊಗಳಿಕೆ, ಸಂಶಯ, ದುಸ್ಸಾಹಸಗಳೆ ವೈರಿಗಳು.
ಇಂಥದೇ ಒಂದು ಘಟನೆಗೆ ನಾನು ಮುಖಾಮುಖಿಯಾದೆ. ಇದು ಕತೆಯಲ್ಲ ನಿತ್ಯ ಉರಿದ ಚಿತೆ.
ರಾತ್ರಿ ಕಡೂರಿಂದ ರೈಲಿಗೆ ಹೊರಟ ನನಗೆ ಯುವಕನೊಬ್ಬ ಸಿಕ್ಕ. ಮಾತಿಗಿಳಿದೆ. ಕತೆ ಅನಾವರಣವಾಯಿತು. ಈತ ಕಳೆದ ಮೂರು ದಿನಗಳಿಂದ ಟ್ರೇನಿನಲ್ಲಿ ಹೇಗೆ ಓಡಾಡುತ್ತಿದ್ದಾನೆಂದು ಕೇಳಿ ಗಾಭರಿಯಾದೆ. ಎರಡು ಖಾಲಿ ಕೊಡ, ಒಂದು ಕೈ ಚೀಲು, ಒಳಗೊಂದು ದೇವರ ಫೋಟೊ, ತಾಯಿಗಾಗಿ ಬಳೆಗಳ ಕಟ್ಟು, ತಂಗಿಗೆ ಚುರುಮುರಿ, ಏನೇನೊ. ಆತನಿಗೆ ಮರಳಿ ಮನೆ ಸೇರುವ ಆಸೆ ಆದರೆ ಅಪ್ಪನೊಂದಿಗೆ ಸುಳ್ಳು ಹೇಳಿದ, ಜಗಳಾಡಿದ, ಓಡಿಬಂದ ಭಯ. ಮನಸ್ಸು ಬಾಗಲು, ಮಾಗಲು ಸಿದ್ಧವಿಲ್ಲ. ಅದುದಿಷ್ಟೇ ಅಪ್ಪನ ಜೇಬಿನಿಂದ ಈತ ಹತ್ತು ರೂಪಾಯಿ ಕದ್ದಿದ್ದಾನೆ. ಹೊರಳಿ ಹೋಗಲು ಮುಖವಿಲ್ಲ, ಓಡಿ ಹೋಗಲು ಮನಸ್ಸಿಲ್ಲ. ರಾತ್ರಿಯೆಲ್ಲ ಬೋಗಿಯಲ್ಲಿದ್ದವರೆಲ್ಲ ಹೇಳಿ ಹೇಳಿ ಸೋತು ಹೋದರು. ಬೆಳಗಿನ ಸಮಯ, ಆಲಮಟ್ಟಿಯಿಂದ ಒಬ್ಬ ಶಾಲಾ ಶಿಕ್ಷಕಿ ಟ್ರೇನು ಹತ್ತಿದರು. ಅವರೂ ಈತನ ಕತೆಗೆ ಕಿವಿಯಾದರು, ತಕ್ಷಣ ಆತನ ಕೆನ್ನೆ ಹಿಡಿದು, ತಲೆ ತೀಡಿ ನನಪ್ಪ, ಹೆತ್ತವರ ಜೀವಾ ಉರಸಬ್ಯಾಡ ನಿಮ್ಮಪ್ಪಗ ಹತ್ತು ರೂಪಾಯಿ ನಾ ಕೊಡ್ತೀನಿ. ಬಸ್ ಚಾರ್ಜ್ ಕೊಡ್ತೀನಿ ಮನೆಗೆ ಹೋಗು ಇಲ್ಲಾ ಅಂದ್ರ ಪೋಲಿಸರಿಗೆ ಕೊಡ್ತೀನಿ ಎಂದು ಗದರಿಸಿದರಷ್ಟೆ, ಯುವಕ ಕಣ್ಣೀರಾಗಿ ಇಳಿದುಕೊಂಡ. ನಾನು ಆ ತಾಯಿಯ ಕೈ ಹಿಡಿದು ಆತ್ಮಸ್ಥೈರ್ಯ ಪಡೆದುಕೊಂಡೆ.
ನನ್ನ ಕತೆಯೂ ಹಾಗೆಯೇ ಇತ್ತು ಮೇ 12 ರಿಂದ. ಆನಂತರ ತೊರೆದ ಮನೆಯ ಕಿಡಕಿಯ ಪರೆದೆಗಳು ಸರಿದಾಡಿ, ದೀಪ ಬೆಳಗಿ, ದೇಹ ಹರಿದಾಡುವುದನ್ನು ಕಂಡ ಮೇಲೆ ನಾನು ಅಲ್ಲಿಂದ ತಣ್ಣಗೆ ದೂರ ಸರಿದೆ.
ಎಲ್ಲ ಕಾಯುವಿಕೆ, ಕೂಡಿಸುವಿಕೆ, ಮತ್ತೆ ಮತ್ತೆ ಕ್ಷಮಿಸುವಿಕೆಗಳ ಹಿಂದೆ ಬರೀ ಕಾಸಿನ, ಕಾಮದ, ಲಾಭದ ಲೆಕ್ಕಾಚಾರಗಳೇ ಇರುವುದಿಲ್ಲ. ಪ್ರಪಂಚದಲ್ಲಿ ವಿನಾ ಕಾರಣ ಪ್ರೀತಿಸುವವರಿದ್ದಾರೆ. ಅವರೆಲ್ಲ ಬರೀ ಗಂಡಸರಲ್ಲ. ಅವರೊಳಗಿನ ತಾಯಿ ಅವರ ದೌರ್ಬಲ್ಯವಲ್ಲ. ಇಂಥ ಪ್ರೀತಿಯನ್ನು ಉಡಾಫೆ ಎಂದುಕೊಳ್ಳುವುದು ಉಡಿಯಲ್ಲಿ ಪಾಪ ಕಟ್ಟಿಕೊಳ್ಳುವುದು ಎರಡೂ ಒಂದೇ. ಇದು ಇನ್ನಾವುದೋ ಜನ್ಮಕ್ಕೆ ಕೈ ಕಳೆದುಕೊಳ್ಳುವ ಸುಳಿವು.
ಯುವಕ ಈಗ ಮನೆ ಸೇರಿರಬಹುದು. ಈಗ ಆ ಮನೆಯಲ್ಲೇನು ನಡೆಯುತ್ತಿದೆ? ಅದು ನನ್ನ
ಕುತೂಹಲವಾಗಬಾರದು, ವ್ಯಸನವಾಗಬಾರದು, ಈಗ ಅಲ್ಲಿ ಕೈ ಕೈ ಕೂಡಿರಬಹುದು, ಅಪ್ಪಿ
ಕಣ್ಣೀರಾಗಿರಬಹುದು, ತಪ್ಪಿ ಕುದಿಯುತ್ತಿರಬಹುದು ಅದು ನಮ್ಮ “ಬುದ್ಧಿಯಾಚೆಗಿನ ಮಾತು.
ಪ್ರೀತಿಯಂಥ ವಸ್ತು ಜಗದಲ್ಲಿ ಕಾಣೆ, ಮನಗಂಡ ಮಾತು”
No comments:
Post a Comment