Total Pageviews

Wednesday, June 25, 2014

ಸಮರಸವೇ ಜೀವನ

ದಿನಾಂಕ 26 ಜೂನ್ ರಂದು ಸಂಯುಕ್ತ ಕರ್ನಾಟಕದಲ್ಲಿ ಸುದ್ದಿಯೊಂದನ್ನು ಓದಿದೆ. ಈ ಕತೆ ಉಜ್ಮಾಶೇಖ್ ಎನ್ನುವ ಮಹಿಳೆಯದ್ದು. ಉದ್ಯೋಗಸ್ಥಳೂ, ಸುಂದರಿಯೂ ಆಗಿರುವ ಇವಳ ವಯಸ್ಸು 24. ಈಕೆಯ ಮದುವೆಯಾಗಿದೆ ಗಂಡ ಸಭ್ಯಸ್ಥ, ಸಮಾಜದ ಪ್ರಜ್ಞೆಯಲ್ಲಿ ಬದುಕುವವ. ಆದರೆ ಹೆಂಡತಿ ಉಜ್ಮಾಶೇಖ್ ಇದಕ್ಕೆ ಸಂಪೂರ್ಣ ತದ್ವಿರುದ್ಧ. ರೂಪದ ಮದದಲ್ಲಿ ಎಂಥ ಸತ್ಯಗಳನ್ನೂ ಸುಟ್ಟು ಹಾಕಬಹುದು, ಸುಳ್ಳುಗಳನ್ನು ಸ್ಥಾಪಿಸಬಹುದು, ಯಾವನೊಂದಿಗೂ, ಎಲ್ಲಿ ಬೇಕಾದಲ್ಲಿಯೂ, ಯಾವಾಗ ಬೇಕಾದರೂ ಹೋಗಬಹುದು ಎನ್ನುವ ಹುಂಬ ಸಾಹಸದ ಹುಚ್ಚು ಹೆಣ್ಣು. 25 ರ ರಾತ್ರಿ ಈಕೆ ನೈಟ್ ಕ್ಲಬ್ಬಿಗೆ ತನ್ನ ಮೂರು ವರ್ಷದ ಮಗುವಿನೊಂದಿಗೆ ಹೋಗುತ್ತಾಳೆ. ಆದರೆ ಕ್ಲಬ್ಬಿನ ದ್ವಾರಪಾಲಕರು ಮಗುವಿನೊಂದಿಗೆ ಆಕೆಗೆ ಕ್ಲಬ್ಬಿನೊಳಗೆ ಹೋಗಲು ಅನುಮತಿಸುವುದಿಲ್ಲ. ಈ ಅಪಮಾನದಿಂದ ಕೆರಳಿದ ಉಜ್ಮಾಶೇಖ್ ಮಗುವನ್ನು ಒಯ್ದು ಕಾರಿನಲ್ಲಿ ಕೂಡಿಹಾಕಿ, ತಾನು ಮಾತ್ರ ಕ್ಲಬ್ಬಿನೊಳಗೆ ಹೋಗಿಯೇ ಬರಬೇಕು ಎನ್ನುವ ಹಠಕ್ಕೆ ಬಿಳುತ್ತಾಳೆ. ಆಕೆ ಕ್ಲಬ್ಬ ಸೇರಿದ ಮರುಕ್ಷಣ ಅಲ್ಲಿಗೆ ಬಂದ ಪೋಲಿಸರು ಕಾರಿನಲ್ಲಿ ಕೂಸು ಅರಚುವುದನ್ನು ಕಂಡು ಈಕೆಗಾಗಿ ಹುಡುಕಾಟ ಪ್ರಾರಂಭವಾಗುತ್ತದೆ. ಕ್ಲಬ್ಬಿನಲ್ಲಿ ಹಲವು ಗಂಡಸರ ಮಧ್ಯ ಅಮಲಿನಲ್ಲಿದ್ದ ಈಕೆಯನ್ನು ಬಂಧಿಸಿ ಸೆರೆಮನೆಗೆ ಅಟ್ಟಲಾಗುತ್ತದೆ.

        ಈ ದೇಶದ ಶಾಲೆಗಳಿಗೆ ಹೆಣ್ಣು ಮಕ್ಕಳು ಬಂದಾಗ, ಮಧ್ಯರಾತ್ರಿ ಹೆಣ್ಣುಮಗಳು ನಿರ್ಭಯವಾಗಿ ಓಡಾಡಿದಾಗ ಭಾರತಕ್ಕೆ ಸ್ವಾತಂತ್ರ್ಯ ಬಂತು ಎಂದುಕೊಳ್ಳುತ್ತೇನೆ, ಎಂದವರು ಅಂಬೇಡ್ಕರ್ ಮತ್ತು ಗಾಂಧಿ. ಆದರೆ ಈ ಎರಡೂ ಚಿಂತಕರ ಆಲೋಚನೆಯ ಕಾಳಜಿ ಮಾತ್ರ ಮಹಿಳೆಯ ಉದ್ಧಾರ. ಆದರೆ ಒಂದು ವಿಚಾರಕ್ಕೆ, ಕನಿಷ್ಟ ತನ್ನ ಸ್ವಯಂ ಆಂಗಿಕ ಮಿತಿಗಳಿಗೂ ಬದ್ಧಳಾಗದ ಯಾವ ಹೆಣ್ಣನ್ನೂ, ಯಾವ ಕ್ರಾಂತಿ ಪುರುಷರೂ ಉದ್ಧರಿಸಲು ಸಾಧ್ಯವಿಲ್ಲ. ಸಂಸ್ಕತಿಯ ತೊಟ್ಟಿಲಾದ ಮಹಿಳೆ, ಸಂಸಾರದ ಗುಟ್ಟು ಅಥವಾ ರಟ್ಟು. ಎರಡಕ್ಕೂ ಹೊಣೆಗಾರಳಾಗಿದ್ದಾಳೆ. ದಾಂಪತ್ಯ ಅವಳ ಕೈಯಲ್ಲಿರುವ ಹಾಲಿನ ಬಟ್ಟಲು. ಅದನ್ನು ಹುಳಿಯಾಗಿಸುವ ಅಥವಾ ಬದುಕಾಗಿಸುವ ಸಾಧ್ಯತೆ ಅವಳ ವಿವೇಚನೆಯನ್ನು ಆಧರಿಸಿದೆ. ಆದರೆ ಉಜ್ಮಾಶೇಖ್‍ಳ ಉದಾಹರಣೆಗೆ ಸಂಪೂರ್ಣ ತದ್ವಿರುದ್ಧವಾದ ಆದರ್ಶ ಒಂದು ದಿನಾಂಕ 25 ರಂದು ಬೇಲೂರಿನ ವೇಲಾಪುರಿ ಸಾಹಿತ್ಯ ವೇದಿಕೆ ನಮ್ಮ ಮುಂದಿರಿಸಿದೆ.
ವೇದಿಕೆಯು ತನ್ನ 21 ನೆ ಮನೆ ಮನೆ ಸಾಹಿತ್ಯಗೋಷ್ಠಿಯನ್ನು, ವಿಶ್ವ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿತ್ತು. ಈ ಸಂದರ್ಭದ ಆದರ್ಶಗಳು ಪ್ರೊ.ಜಯಣ್ಣಗೌಡ ಹಾಗೂ ಶ್ರೀಮತಿ ಶೋಭಾ. ಸರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ, ಎನ್ನುವ ಹಾಗೆ ಇವರಿಬ್ಬರೂ ಪೂರೈಸಿದ 25 ವರ್ಷದ ದಾಂಪತ್ಯವನ್ನು ವಿಶ್ವ ಶಾಲಾ ಕಾಲೇಜು ಸಿಬ್ಬಂದಿಗಳು ಆಚರಿಸಿದರು. 25 ವರ್ಷಗಳ ಹಿಂದೆ ಜಯಣ್ಣಗೌಡರ ಮನೆಗೆ ಕಾಲಿಟ್ಟು ದೀಪ ಹಚ್ಚಿ, ಸಂಸಾರ ಬೆಳಗಿದ ಶ್ರೀಮತಿ ಶೋಭಾ ಈ ದಿನವೂ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎದೆಯೊಳಗೆ ಅಪಾರವಾದ ಪ್ರೀತಿ ಇಟ್ಟುಕೊಂಡೂ, ಸಾಮಾಜಿಕ ತುಡಿತ, ಶೈಕ್ಷಣಿಕ ಪ್ರೇಮ ಹಾಗೂ ಶಿಸ್ತುಗಳಿಗಾಗಿ ಎಂಥ ಹೋರಾಟಕ್ಕೂ ಸಿದ್ಧನಾಗುವ ಸಿಪಾಯಿಯಂಥ ಗೆಳೆಯ ಜಯಣ್ಣ, ಶೋಭಾ ಅವರಿಗೆ ಅಷ್ಟೆ ಅನುರೂಪದ ಮನುಷ್ಯ. ಸದಾ ಕಾಲು ಕೆದರಿ ಜಗಳಕ್ಕೆ ನಿಂತವನಂತೆ ಬಾಹ್ಯದಲ್ಲಿ ಕಾಣುವ ಜಯಣ್ಣ, ಮಹಾ ಹೆಂಗರಳಿನ ಮನುಷ್ಯ ಅವನ ಜಗಳವೂ ಒಂದು ರೀತಿಯ ಪ್ರೀತಿಯೇ. ನನ್ನ ದೃಷ್ಠಿಯಲ್ಲಿ ಇವನ ಜಗಳವನ್ನು ಅರ್ಥೈಸಿಕೊಳ್ಳದವರು ಇವನ ಪ್ರೀತಿಯನ್ನೂ ದಕ್ಕಿಸಿಕೊಳ್ಳಲಾಗುವುದಿಲ್ಲ.  
   
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದಯಾನಂದ ವಹಿಸಿಕೊಂಡಿದ್ದರು. ಆರಂಭಿಕವಾಗಿ ಶ್ರೀಮತಿ ಪದ್ಮಶ್ರೀರಾಗಂ ದಂಪತಿಗಳಿಗೆ ಶುಭಕೋರುತ್ತ, ಹೆಣ್ಣಿಗೆ ಸಹನೆ ಮುಖ್ಯ, ಸಹನೆ ಇದ್ದಲ್ಲಿ ಸುಂದರ, ಸುಧೀರ್ಘ ದಾಂಪತ್ಯ ಜೀವನ ಸಾಧ್ಯ. ದಾಂಪತ್ಯ ಜೀವನದಲ್ಲಿ ಜಗಳ, ಕೋಪ-ತಾಪ ಇದೆಲ್ಲದರೊಂದಿಗೆ ಪ್ರೀತಿ ಇರಬೇಕು ಎಂದು ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದ್ದು, ಬೇಲೂರಿನ ಸಾಮಾನ್ಯ ಶಾಲೆಗಳಲ್ಲಿಯೇ ಕಲಿತು, ಇಂದು ಐ.ಎ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶ್ರೀ ಹರ್ಷಾ ಹಾಗೂ ಅನೇಕ ಸಾಧಕರಿಗೆ ವೇಲಾಪುರಿ ಸಾಹಿತ್ಯ ವೇದಿಕೆಯವತಿಯಿಂದ ಸನ್ಮಾನಿಸಲಾಯಿತು. ವೈ.ಡಿ.ಡಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಜು, ಬೇಲೂರು ಕೃಷ್ಣಮೂರ್ತಿ, ಮ.ಶಿವಮೂರ್ತಿ, ಪಾಪಣ್ಣ, ಸ.ರಂ.ಈರೇಗೌಡರು, ವಿಶ್ವ ಕಾಲೇಜು ಮತ್ತು ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗ ಉಪಸ್ಥತರಿದ್ದರು. ಪ್ರೊ.ಸಿದ್ದೇಗೌಡರು ಕಾರ್ಯಕ್ರಮ ನಿರೂಪಣೆ ಮಾಡಿದರು.

No comments:

Post a Comment