Total Pageviews

Monday, June 23, 2014

ಶಿರಸಿ ಎಂದರೆ ಸಾಯದ ನೆನಪು

ಗೋಜಲು ಗೋಜಲಾಗಿಹ
ಜೀವನದ ದಾರದುಂಡೆಯ
ಬಿಡಿಸುತಿರೆ, ಗಡಸು ಗಡಸಾಗುತಿಹುದು
ಎಳೆ ಎಳೆಯ ಹೆಕ್ಕಿ
ಎಳೆಯುತಿರೆ ಸುಕ್ಕು
ಎಳೆ ಕೊನೆಯ ಸಿಕ್ಕದೇ
ಸುಕ್ಕು ಸುಕ್ಕಾಗುತಿದೆ
                                      ಮನಸು ಕಕ್ಕಾಬಿಕ್ಕಿಯಾಗಿದೆ      ('ಒಡಂಬಡಿಕೆ', ಡಾ.ಪವಾರ)
        2002 ರಲ್ಲಿ ಭಟ್ಕಳ ಗುರು ಸುಧೀಂದ್ರ ಕಾಲೇಜಿನಲ್ಲಿ, ಒಂದು ವರ್ಷದ ಮಟ್ಟಿಗೆ ಉಪನ್ಯಾಸಕನಾಗಿದ್ದೆ. ಅದೇಕೊ ವ್ಯಾವಹಾರಸ್ಥ, ವ್ಯಾಕರಣಬದ್ಧ ಆ ಜನಗಳಿಗೂ, ಅಲ್ಲಿಯ ಮೈ ನವಿರೇಳಿಸುವ ನಿಸರ್ಗ ಸೌಂದರ್ಯಕ್ಕೂ, ಬೆವರಿಳಿಸುವ ಊರಿನಲ್ಲಿ ಬಿಸಿ ಬಿಸಿಯಾದ ನನ್ನ ಆಲೋಚನಾ ಕ್ರಮಕ್ಕೂ ಹೊಂದಾಣಿಕೆಯಾಗದೆ ಕವಳಾ ಹಾಕುವ ಸುಖಕ್ಕಾಗಿ, ಕಾಲೇಜು ಬಿಟ್ಟೇನು ಕವಳ(ಅವಳ?) ಬಿಡಲಾಗದು ಎಂದು ರಾಜಿನಾಮೆ ಬಿಸಾಕಿ, ಹೊರಟು ಬಂದದ್ದಾಯಿತು. ಆದರೆ ಅವುಗಳ ನೆನಪಿನಲ್ಲಿಯೇ ಅದೆಷ್ಟೋ  ಕಾಲ ನೂಕಿದ್ದಾಯಿತು.

        ಈ ಭಾಗ ಎಂದರೆ ಶುರುವಾಗುತ್ತದೆ ನನ್ನ ಕತೆ ಉಜಿರೆ, ಗುರುವಾಯುವಿನಕೆರೆ, ಮುಡಬಿದ್ರೆ, ಕುಂದಾಪುರ, ಭಟ್ಕಳ, ಸಿದ್ದಾಪುರ ಮತ್ತು ಶಿರಸಿ. ಹಳೆಯ ಮುಸ್ಲಿಂ ಗೆಳತಿಯೊಬ್ಬಳು ಭಟ್ಕಳದಿಂದ ಬಂದು ಶಿರಸಿಯಲ್ಲಿ ಸಂಸಾರ ಹೂಡಿದಳು, ಎಳೆಯ ಗೆಳತಿಯೊಬ್ಬಳು ನರಗುಂದದಿಂದ ಬಂದು ಮುಡಬಿದ್ರೆಯಲ್ಲಿ ಬದುಕು ತೆಯ್ದಳು, ಶಿಷ್ಯನೊಬ್ಬ ಸಿದ್ದಾಪುರದಲ್ಲಿ ಸಂಸಾರದ ಮಠ ಕಟ್ಟಿಕೊಂಡ, ಪ್ರೀತಿಯ ಗೆಳೆಯನೊಬ್ಬ ಭಟ್ಕಳದಲ್ಲಿ ಮಡದಿಯೊಂದಿಗೆ ಸಂಸ್ಥೆಯೊಂದಕ್ಕೆ ಬದುಕನ್ನೇ ಸಮರ್ಪಿಸಿಕೊಂಡ. ಈಗೊಬ್ಬ ಇದ್ದಾನೆ ಅಲೆಮಾರಿಯಂತೆ, ಈ ಮಧ್ಯ ಸಾವಿನೊಂದಿಗೆ ಸೆಣಸಾಡುತ್ತ ನಾನು ಮತ್ತೆ ಮತ್ತೆ ಮುಡಬಿದ್ರೆಗೆ ಬಂದದ್ದೇ ಒಂದು ಕಂತೆ.

    ಮೀನು ತಿನ್ನಲು ಬಾರದ ದಿನಗಳಲ್ಲಿ ಮತ್ಸ್ಯ ಸಾಗರದಲ್ಲಿದ್ದೆ. ಇಲ್ಲಿ ಬಂದಾಗಲೆಲ್ಲ ನನ್ನನ್ನು ಕಾಡುವುದು ಸ್ವಚ್ಚ, ಶಾಂತ, ಖಾಲಿ ಖಾಲಿ ರಸ್ತೆಗಳು, ಮೀನಿನ ಬಾಝಾರುಗಳು, ತೈಲಗಳು, ಕಶಾಯಗಳು, ನನ್ನ ಪ್ರೇಯಸಿಗೆಂದೇ ಒಯ್ಯುತ್ತಿದ್ದ ದಂಡೆ ದಂಡೆ ಹೂಗಳು, ಈ ಹೂವಿಗೆ ನನ್ನ ಪಾಲಿನ ಕೊನೆಯ ಹುಡುಕಾಟದ ಸ್ಥಳ ಈ ಶಿರಸಿ. ಶಿರಸಿ ಎಂದರೆ ಈಗಲೂ ಸಾಕಿಯರ ಸಾಗರವೆ. ಇಂಥ ಶಿರಸಿಗೆ ಅತಿಥಿಯಾಗಿ ಬರುವ ಆಸೆ ಇತ್ತು, ಆದರೆ ಅದಕ್ಕಾಗಿ ಒಂದು ಅವಕಾಶ ಬೇಕಿತ್ತು. ಅದು ಶಿರಸಿಯ ಲಯನ್ಸ್ ಕ್ಲಬ್, ಲಯನೆಸ್ ಎಜುಕೇಶನ್ ಸೊಸೈಟಿ ಹಾಗೂ ಸನ್ಮತಿ ಸಾಹಿತ್ಯ ಪೀಠಗಳ ಸಂಯುಕ್ತ ಆಶ್ರಯದಲ್ಲಿದಿನಾಂಕ 22/06/2014 ರಂದು,
ನಾಡಿನ ಹೆಸರಾಂತ ವೈದ್ಯರಲ್ಲಿ ಒಬ್ಬರಾದ ಡಾ.ಕೆ.ವಿ.ಪವಾರ ಅವರ 'ಹುಡುಕಾಟ' ಕೃತಿ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳವುದರ ಮೂಲಕ ಸಿಕ್ಕಿತು. ಡಾ.ಎ.ಎಸ್.ಪಟವರ್ಧನ ಸಭಾ ಭವನ, ಶಿರಸಿಯಲ್ಲಿ ನಡೆದ ಈ ಸಮಾರಂಭದ ಅಧ್ಯಕ್ಷತೆಯನ್ನು ಸಾಹಿತ್ಯಕ್ಕಾಗಿ ರಾಷ್ಟ್ರಪತಿಗಳಿಂದ ಪುರಸ್ಕತರಾದ ಡಾ. ಧರಣೇಂದ್ರ ಕುರುಕುರೆ ವಹಿಸಿದ್ದರು. ನಾನು ಪವಾರ ಅವರು ಕಾವ್ಯ ಕ್ರಮಿಸಿದ ರೀತಿಯನ್ನು ಕುರಿತು ಮಾತನಾಡಿದೆ. 'ಗೀತಾಂಜಲಿ', 'ಒಡಂಬಡಿಕೆ' ಹಾಗೂ 'ಹುಡುಕಾಟ' ಕೃತಿಗಳಲ್ಲಿ ಪವಾರ ಕವಿಯಾಗಿ ಬೆಳೆಯುತ್ತಿರುವ ರೀತಿ ವಿವರಿಸಿದೆ. ಕಾರ್ಯಕ್ರಮದಲ್ಲಿ ಪ್ರಭಾಕರ ಹೆಗಡೆ, ತ್ರಿವಿಕ್ರಮ ಪಟವರ್ಧನ, ಗಂಗಾ ಹೆಗಡೆ, ಮಾಧವಿ ಭಂಡಾರಿ, ಕೆರೆಮನೆ ಹೆಗಡೆ, ತಾರಾ ಹೆಗಡೆ, ಶ್ಯಾಮಸುಂದರ ಭಟ್, ಡಿ.ಎಸ್.ನಾಯಕ ಹಾಗೂ ಸ್ಥಳೀಯ ಗಾಯಕರು ಭಾಹವಹಿಸಿದ್ದರು.


No comments:

Post a Comment