Total Pageviews

Saturday, June 14, 2014

ಕಣ್ಣು ಕೋರೈಸುವ ಕಂಪ್ಯೂಟರ್ ಕಣ್ಣೀರೊರೆಸುವುದಿಲ್ಲ

ಹಳೆಮನೆ: ಒಂದು ನೆನಪು    
ವರ್ತಮಾನದ ಬಿಕ್ಕಟ್ಟುಗಳು
 ದಿನಾಂಕ: 14/06/2014    ಸ್ಥಳ: ಶ್ರೀರಂಗ ಸಭಾಂಗಣ, ರಂಗಾಯಣ
ಭಾಷೆಯನ್ನು ಕುರಿತು ಮಾತನಾಡುವಾಗಲೆಲ್ಲಾ ಅಲ್ಲಮನ ಒಂದು ಸಾಲನ್ನು ಹಳೆಮನೆ ಪದೇ ಪದೇ ಹೇಳುತ್ತಿದ್ದ ನೆನಪು. 'ಪದವನರ್ಪಿಸಬಹುದಲ್ಲದೆ ಪದಾರ್ಥವನ್ನರ್ಪಿಸಲಾಗದು'. ಈಗ ಈ ಮಾತನ್ನು ಬದಲಿಸಿ ನಾನು ಹೇಳಬೇಕು, `ಪದವನ್ನೂ ಅರ್ಪಿಸಲಾಗದು ಹಳೆಮನೆಯವರೆ.’ ಪದ, ಪದಾರ್ಥಗಳೆಲ್ಲವೂ ಮೌನದೀಚೆಗಿನ ವ್ಯಾವಹಾರಿಕ ತಳಮಳಗಳಷ್ಟೇ. ಅದನ್ನು ಮೀರಿದ ಮೇಲೆ ಮೌನದ್ದೇ ಸಾಮ್ರಾಜ್ಯ.
ಸತ್ತ ವ್ಯಕ್ತಿಯ ಸತ್ಯದ ಮೂಲಗಳನ್ನು ತಡಕಾಡುವುದು ಅಸಾಧ್ಯವೂ ಮತ್ತು ಅಸತ್ಯವೂ ಕೂಡ. ದಿನಾಂಕ 12/06/11ರ ಸಾಯಂಕಾಲದ ಆರು ಗಂಟೆಗೆ ರಂಗಾಯಣದ “ಭೂಮಿಗೀತ”ದಲ್ಲಿ ರಂಗಚಿಂತಕರು, ಮೈಸೂರಿನ ಒಡನಾಡಿಗಳು ಹಮ್ಮಿಕೊಂಡ “ಹಳೆಮನೆಯವರಿಗೆ ಶೃದ್ಧಾಂಜಲಿ” ಕಾರ್ಯಕ್ರಮ ಮುಗಿಸಿಕೊಂಡು ಬಂದು ಕುಳಿತು ಈ ಲೇಖನದ ಮುಕ್ತಾಯದ ಸಾಲುಗಳನ್ನು ಬರೆಯುತ್ತಿದ್ದೇನೆ. ಆ ಕೆಟ್ಟ ಕಾರ್ಯಕ್ರಮದಲ್ಲಿ ‘ಜನ್ನಿ’ಯೊಬ್ಬನವೇ ಮಾತುಗಳು. ಒಂದು ರೀತಿಯಲ್ಲಿ ‘ಜ್ಯೂಲಿಯಸ್ ಸೀಜರ್’ ನಾಟಕದಲ್ಲಿ ಮಾರ್ಕ್ ಎಂಟನಿಯ ಮಾತುಗಳಂತೆ. ಅದೇ ವೇಳೆಗೆ ಸರಿಯಾಗಿ ‘ಪ್ರಜಾವಾಣಿ’ಯ ಸಹೋದರಿ ಸುಶೀಲಾ ಡೋಣೂರ ಒಂದು ಎಸ್. ಎಂ. ಎಸ್ ಕಳುಹಿಸಿದ್ದಾಳೆ. “Being frank is always better than being falsely sweet. Because by being frank in life, we may get a lot of true enemies but surely not untrue friends
 ನಮ್ಮ ಸುತ್ತಲಿನ ಸತ್ಯವನ್ನು ದೂರಿಕರಿಸಿ ದೂರದ ಅವಾಸ್ತವವನ್ನು ನಂಬುವ ವರ್ತಮಾನದ ಯುವ ಜನಾಂಗ, ಕಾರ್ಪೊರೇಟ್ ವಲಯದ ಬಳಸಿ ಬಿಸಾಡುವ ಸಿದ್ಧಾಂತಕ್ಕೆ ಮರುಳಾಗಿದ್ದಾರೆ. ಅವಕಾಶಗಳ ಭ್ರಮೆಯನ್ನು ಹುಟ್ಟಿಸುವ ಈ ಬಿಕ್ಕಟ್ಟು, ಅದೇ ಕಾರ್ಪೊರೇಟ್ ವಲಯದಿಂದ, ಮತ್ತೆ ಅದೇ ಸಿದ್ಧಾಂತದಿಂದ ಮೋಸಕ್ಕೆ ಹೋಗುವ ಸಾಧ್ಯತೆಗಳನ್ನು ಹೆಚ್ಚಿಸುತ್ತಿದೆ. ಓಡಿಹೋಗಲಾಗದ, ನಿಂತು ಬದುಕಲಾಗದ ಆದರೆ ನಿರಂತರ ಹುಚ್ಚು ಹುಡುಕಾಟಕ್ಕೆ ಹಚ್ಚುವ ಈ ಹವ್ಯಾಸ, ಎಲೆಕ್ಟ್ರಾನಿಕ್ ಮಾದ್ಯಮಗಳನ್ನು ನಂಬಿಕೊಂಡಿರುವವರಿಗೆ ಹುಡುಗಾಟವೆನ್ನಿಸಿದೆ. ಕಣ್ಣು ಕೋರೈಸುವ ಟ್ಯಾಬ್, ಮೋಬೈಲ್, ಕಂಪ್ಯೂಟರ್‍ಗಳು ಕಣ್ಣೀರೊರೆಸುವುದಿಲ್ಲ. ಫ್ಯಾಶನ್‍ನನ್ನು ಕುರಿತು ಮಾತಾಡುವ ಈ ಲೋಕ ಪ್ಯಾಶೆನ್ ಕುರಿತು ಮನುಷ್ಯನನ್ನು ಕೇಂದ್ರಿಕರಿಸುವುದಿಲ್ಲ. ಸಹನೆಯಂತೂ ಸತ್ತುಹೋದ ವಿಚಾರ. ಸಾಮಾಜಿಕ ತಾಣಗಳೆಂದು ಗುರುತಿಸಲ್ಪಡುವ ಈ ಅಂತರ್‍ಜಾಲ ತಾಣಗಳು ನಿಜವಾದ ಸಾಮಾಜಿಕತೆಯ ಮನುಷ್ಯ ಸೌಂದರ್ಯವನ್ನು ಕೊಂದು ಇರುವ ಮನೆಯಲ್ಲಿಯೇ ಒಬ್ಬ ಇನ್ನೊಬ್ಬನೊಂದಿಗೆ ಮಾತನಾಡದಂತೆ ಮಾಡಿ ಆತನನ್ನು ಭ್ರಮೆಗಳಿಂದ ತುಂಬುತ್ತದೆ. ನಾವು ಹೇಗೆ ಕಾಣಿಸಿಕೊಳ್ಳಬೇಕು ಎನ್ನುವುದನ್ನು ತಿಳಿಸುವ ಈ ಮಾರ್ಗ ನಾನು ಏನಾಗಬೇಕು ಎನ್ನುವುದಕ್ಕೆ ಕನ್ನಡಿ ಹಿಡಿಯುವುದಿಲ್ಲ. ಎಲೆಕ್ಟ್ರಾನಿಕ್ ಜಗತ್ತು ನಮ್ಮಲ್ಲಿ ಧೈರ್ಯವನ್ನು ಬೆಳೆಸಲಿಲ್ಲ, ಹೇಸಿ ಧೈರ್ಯವನ್ನ, ಭಂಡ ಧೈರ್ಯವನ್ನ ಬೆಳೆಸಿತು. ಆಳ ಅಧ್ಯಯನದ ಅವಶ್ಯಕತೆಯನ್ನು ದೂರಿಕರಿಸಿ ಮುಂಜಾನೆ ಕುಡಿಯುವ ಚಹಾ ಕುರಿತಾದ ತಿಳುವಳಿಕೆಗೂ ತನ್ನನ್ನು ಮೊರೆ ಹೋಗುವಂತೆ ಮಾಡಿತು. ದುಡ್ಡು, ಅವಕಾಶ ಎನ್ನುವ ಪದಗಳ ಬೆನ್ನು ಹತ್ತಿ ಆತ್ಮವನ್ನು ಧಿಕ್ಕರಿಸಿ ಅನ್ಯರ ಭಾವನೆಗಳನ್ನು ಅವಹೇಳಿಸಿ ಓಡಿಹೋಗುವ ನಿರ್ಲಜ್ಜತೆಯನ್ನು ಬೆಳೆಸಿತು. 
ಮುಂದಿನ ಮರೀಚಿಕೆಯನ್ನು ಮೆಚ್ಚಿಕೊಂಡವರು ಹಿಂದಣ ಅನಂತವನ್ನು ಅಸಹ್ಯಗೊಳಿಸುವ ಆತ್ಮ ಭ್ರಷ್ಟತೆಯನ್ನು ಬೆಳೆಸಿತು. ಈ ರೀತಿ ಬುಡವಿಲ್ಲವಾಗಿರುವ ಈ ನನ್ನ ಎಳೆಯ ಜಗತ್ತನ್ನು ನಾನು ವಾಟೆವರ್ ಜನರೇಶನ್ ಎನ್ನುತ್ತೇನೆ, ಎನ್ನುತ್ತಾರೆ ನನ್ನೊಂದಿಗಿದ್ದ ಗೆಳೆಯ ನವೀನ್. ಇದೊಂದು ಶೇಮ್‍ಲೆಸ್ ಸೋಸಾಯಿಟಿ ಎನ್ನುತ್ತಾರೆ ಹಿರಿಯ ಚಿಂತಕಿ ಡಾ.ಇಂದಿರಾ. ಈ ಬಿಕ್ಕಟ್ಟೆ ನಮ್ಮ ಮೂಲ. ಏಕೆಂದರೆ ವರ್ತಮಾನದ ಹೂಗಳನ್ನು ಧಿಕ್ಕರಿಸಿ ಭವಿಷ್ಯದ ಹಣ್ಣುಗಳ ಕನಸು ಕಾಣಲಾಗುವುದಿಲ್ಲ ಹಾಗೆಯೇ ನಮ್ಮ ಮುಂದೆಯೇ ನಾಶವಾಗುವ ಯುವಜನಾಂಗವನ್ನು ನಿರ್ಲಕ್ಷಿಸಿ ಭವಿಷ್ಯದ ಭವ್ಯ ಭಾರತವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ.

No comments:

Post a Comment