Total Pageviews

Thursday, January 29, 2015

ಎಲ್ಲೋ ಜೋಗಪ್ಪ ನಿಮ್ಮ ಅರಮನೆ

     ಬೆಂಗಳೂರಿನ ನನ್ನ ಮನೆಯಿಂದ 30 ಕಿಲೋ ಮೀಟರ್‍ಗಳಿಗೂ ಮೀರಿ ಬಂದಾಗ ಆಲೋಚನೆಗಳು ಮಗ್ಗಲು ಹೊರಳಿಸುವ ನೆಲಮಂಗಲ ಸಿಗುತ್ತದೆ. ಅದನ್ನು ನಾನು ಯಾವಾಗಲೂ ‘ನೆಲ ಮುಗಿಲ ಊರು’ ಎಂದೇ ಪರಿಗಣಿಸುವುದು. ಯಾಕೆಂದರೆ ಅಲ್ಲಿಯವರೆಗೂ ಪ್ಲೈಓವರ್‍ದ ಮೇಲೆ ಓಡುವ ನನ್ನ ಕಾರಿಗೆ ಮತ್ತು ಜೀವಕ್ಕೆ ನೆಲ ಎಲ್ಲಿರುತ್ತದೆ ಹೇಳಿ? ಮುಗಿಲೂ ಅಷ್ಟೇ, ಕಾರ್ಬನ್‍ದ ಅನೈತಿಕ ಗರ್ಭತುಂಬಿಸಿಕೊಂಡು ಕೊರಗುವ ಹೆಂಗಸು. ಅವೆರಡೂ ಒಂದಾಗಿ, ನೆಲ ಮುಗಿಲಾಗಿ ಮತ್ತೆ ಮಿಗಿಲಾಗಿ, ಬಯಲಾಗಿ, ಹಬ್ಬಿಕೊಳ್ಳುವುದು ಈ ನೆಲಮಂಗಲದಾಚೆ. 5 ತಿಂಗಳಲ್ಲಿ ಕನಿಷ್ಟ 10 ಬಾರಿ ಮತ್ತೆ ಮತ್ತೆ ಇತ್ತ ಕಾರು ಹತ್ತಿಕೊಂಡು ಬಂದಿದ್ದೇನೆ, ನನ್ನ ಶಾಂತಲೆಯ ನಾಡಿಗೆ ಹಂಬಲಿಸಿ.

    ಎಡೆಯೂರಿನಿಂದ ನೆನಪುಗಳ ಒಗ್ಗರಣೆ ಬಿಚ್ಚಿಕೊಂಡು ಹೆಂಡತಿಯೊಂದಿಗೆ ಹೊರಟರೆ ಊರು ಮಟ್ಟಿದರೂ ಮಾತು ತನ್ನ ಗುರಿ ಮುಟ್ಟುವುದಿಲ್ಲ. ಮಾತು ಹೀಗಿರುವುದೇ ಚಂದ. ಇದರೊಂದಿಗೆ ಈ ಸಾರಿ ಕಾಡಿದ ಇನ್ನೊಂದು ಸಂವೇದನೆ, ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’?. ನಾನು ಬೇಲೂರಿನ ನನ್ನ ಮನೆ ಖಾಲಿ ಮಾಡಲು ಹೊರಟ ಈ ಸಾರಿಯಂತೂ ಅರಮನೆ, ಜೋಗಪ್ಪ, ಜಂಗಮ, ಎಲ್ಲಿ ಎಂಬ ಪದಗಳು ನನ್ನ ತಲೆಯಲ್ಲಿ ಕೈಆಡಿಸುತ್ತಿದ್ದರೆ, ನನ್ನ ಪ್ರೀತಿಯ ಜೋಗವ್ವಳ ಸಾವಿರದ ಕೈ ನೆನಪಾಗಿ ಜೀವ ಮರುಜನ್ಮ ಪಡೆಯುತ್ತಿತ್ತು.

    ಹೌದು. ಸೃಷ್ಟಿಯ ನಿತ್ಯ ಸಾಯುವ ಕೋಟಿ ಕೋಟಿ ಜೀವಗಳಲ್ಲಿ ನಮ್ಮ ಸಾವಿನ ತಂಬೂರಿ ಮೀಟುವ ತಣ್ಣನೆಯ ನೆಲ ಯಾವುದು?. ಮಣ್ಣೊಳಗೆ ಮಣ್ಣಾಗಿ, ಸಣ್ಣಾಗಿ ಗೆದ್ದಲುಗಳಿಗೆ ಭೋಜನವಾಗುವ ನಮ್ಮ ದೇಹದ ಮುಂದಿನ ನೆಲೆ ಯಾವುದು? ನಾವು ಪ್ರೀತಿಸುವ ಈ ಪ್ರಪಂಚದಲ್ಲಿ ಮತ್ತೆ ಹುಟ್ಟುವ, ಮೈಮನಗಳನ್ನು ತಟ್ಟುವ ಪುಣ್ಯದ ಸೆಲೆ ಯಾವುದು? ಮತ್ತೆ ಬಳಿ ಸಾರಿ ಕರೆದು ಉಂಡು-ಉಣ್ಣಿಸಿ, ಸಾಕು ಸಾಕವ್ವ ತಾಯಿ ಎನ್ನುವಂತೆ ಮುತ್ತಿಡುವ ಮೋಹದ ಬಲೆ ಯಾವುದು? ಹೇಳು, ಹೇಳು, ಹೇಳು ಜೋಗಪ್ಪ ಎಲ್ಲಿ ನಿನ್ನ ಅರಮನೆ? ಎಂದು ಕಾಡುವ ಈ ಹಾಡಿನ ಜೋಗವ್ವಳಿಗೆ ನನ್ನ ಉತ್ತರ ‘ಜೋಳಿಗೆ’.
     ಜೋಗವ್ವಳೊಂದಿಗೆ ಒಂದು ಸಣ್ಣ ಜರ್ನಿ. ಮೊನ್ನೆ ಬಿಜಾಪುರಕ್ಕೆ ಹೋದಾಗ ಕಾರ್ಯಕ್ರಮ ಮುಗಿಸಿಕೊಂಡು ಕಾಳಿದಾಸ ಸಂಸ್ಥೆಯಿಂದ ಬಸ್‍ಸ್ಟ್ಯಾಂಡ್‍ಗೆ ಬರುವಾಗ, ಮುಪ್ಪಿನ ಜೋಗುತಿ ಒಬ್ಬಳು ಸಿವಿಲ್ ಆಸ್ಪತ್ರೆಯಿಂದ ನಗರದೆಡೆಗೆ ರಣರಣ ಬಿಸಿಲಿನಲ್ಲಿ ಹೊರಟಿದ್ದಳು. ಮೈ ತುಂಬ ಕವಡೆಗಳ ಆಭರಣ, ಸೊಂಟದಲ್ಲಿ ಯಲ್ಲಮ್ಮನ ಭಂಡಾರದ ಬಟುವಾ, ದೊಡ್ಡ ಕುಂಕುಮ, ಜಿಡ್ಡು ಗಟ್ಟಿದ ಕೂದಲು, ಜೊಲ್ಲು ವಸರುವ ಎಲೆಮೆದ್ದ ಬಾಯಿ, ಏನಿದ್ದಳು ನನ್ನ ತಾಯಿ!!! ಆಹಾ! ಮಾಯಿ, ಮಹಾಮಾಯಿ.
      ಕಾರು ಹತ್ತಿದವಳೇ ನಾನು ಸೂಟಿನವನೋ, ಬೂಟಿನವನೋ ಯಾವುದೂ ಲೆಕ್ಕಿಸದೆ ಒಂದಿಷ್ಟು ಭಂಡಾರ ನನಗೂ ನನ್ನ ಹೆಂಡತಿಯ ಹಣೆಗೂ ಒತ್ತಿದಳು. ಒಂದಿಷ್ಟು ನನ್ನ ಕೋಟಿನ ಮೇಲೆ ಬಿದ್ದು ಕೋಟು ಹೊಲಸಾಯಿತು ಎಂದು ಹೇಗೆ ಹೇಳಲಿ?
ಅದು ಹರಕೆಯ ಕೈ, ಹೀಗಾಗಿ ಹತ್ತು ರೂಪಾಯಿ ಅವಳ ಕೈಗಿಟ್ಟು, ಬಂದೆ ಅವಳು ಹೇಳಿದಲ್ಲಿ ಬಿಟ್ಟು. ಭಾವಶುದ್ಧಿಯ ಕೈಗೆ ಯಾರ ಭಯವೂ ಇರಲಾರದು. ಅಂತೆಯೇ ಅದು ಅಭಯಹಸ್ತ.
    ಜೋಗವ್ವ ಹೋದಳು. ಮತ್ತೆ ಅದೇ ಹಾಡು ಎಲ್ಲಿ, ಎಲ್ಲಿ, ಎಲ್ಲಿ ಜೋಗಪ್ಪ ನಿನ್ನ ಅರಮನೆ. ನಲವತ್ತು ವರ್ಷ, ಹಲವಾರು ರೂಪ ಮತ್ತು ಅರ್ಥಗಳಲ್ಲಿ ನನ್ನನ್ನು ಈ ಪ್ರಶ್ನೆ ಕಾಡಿದೆ. ಇದೇ ತಿಂಗಳ ಇಪ್ಪತ್ತ್ನಾಲ್ಕರ ಸಾಯಂಕಾಲ ಇದನ್ನೇ ಚಿಂತಿಸುತ್ತ ಕಾರಿಳಿದು ಬೇಲೂರಿನ ನನ್ನ ಬಾಡಿಗೆ ಮನೆ ಮುಂದೆ ನಿಂತಾಗಲೂ ಅದೇ ಪ್ರಶ್ನೆ. ಈಗ ಪ್ರಾರಂಭವಾಗಬೇಕು ಇಲ್ಲಿ ಮುರಿದು, ಅಲ್ಲಿ ಕಟ್ಟಿಕೊಳ್ಳುವ ಕೆಲಸ. ನನ್ನ ಎಳೆಯ ಗೆಳೆಯರು ಎತ್ತಿಹಾಕಲು ಬಂದೇ ಬಿಟ್ಟರು. ನನ್ನ ಕಣ್ಣು ಒದ್ದೆಯಾದವು.
      ಒಂದು ಕ್ಷಣ ಮನೆ ಮುರಿಯುವ ಮುನ್ನ, ಎಲ್ಲ ಮರೆಯುವ ಮುನ್ನ ಎಂದು ಓಡಾಡಿ, ಹಳೆಯ ಆ ನೂರು ವರ್ಷಗಳ ಮನೆಯಲ್ಲಿಯ ನನ್ನ ಗ್ರಂಥಾಲಯ, ಬೆಡ್‍ರೂಂ, ಪಡಸಾಲೆ, ಕಿಚನ್‍ಗಳ ಫೋಟೋ ಕ್ಲಿಕ್ಕಿಸುವಾಗ ಎಲ್ಲರೂ ನಗುತ್ತಿದ್ದರು. “ನೆಟ್‍ನಲ್ಲಿ ಬಿಡಬೇಡಿ ಸರ್, ನೀವು ನಿಂತ ಮನೆ ನೋಡಿ ನಕ್ಕಾರು”. ಎಂದು ಎಳೆಯರ ವಾದ. ‘ನಗಲಿ ಬಿಡಿ, ಹೀಗೆ ನಾವೆಲ್ಲ ನಗು ನಗುತಾ ನೂರು ಕಾಲ ಇರಲಿ ಎಂಬುದೇ ತಾನೆ ಒಂದು ಮನೆಯ ಹರಕೆ’. ಮನೆ ಮನೆಯಲ್ಲ ಅದು ತಾಯಿ.
      ಹೀಗೆ ನಗುತ್ತಾ, ನಿರಂತರ ಎರಡು ದಿನ, ಆರು ಜನ ಮನೆ ಖಾಲಿ ಮಾಡುತ್ತಲೇ ಇದ್ದೆವು. ಈ ಸಂದರ್ಭದಲ್ಲಿ ನಾಟಕದ ತನ್ನ ದೃಶ್ಯ ಮುಗಿಸಿ ಬಂದು, ಆಭರಣಗಳನ್ನು ಬಿಚ್ಚಿಡುತ್ತಿದ್ದ ನನ್ನ ದೊಡ್ಡವ್ವನ ನೆನಪಾಯಿತು. ಹೀಗೆ ಬಿಚ್ಚಿಡುವುದು ಎಲ್ಲಿಯವರೆಗೆ? ಮತ್ತೆ ಮುಂದಿನ ದೃಶ್ಯ ಬರುವವರೆಗೆ. ಮನೆ ಎಂಬ ತಾಯಿ ಮತ್ತೆ ಮೈಯೆರಿಸಿಕೊಳ್ಳಬೇಕು, ಮತ್ತೆ ಬರುವವರ, ಇರುವವರ, ಇದ್ದೂ ಹೇಳದೇ ಹೋಗುವವರ. ಅಂತೆಯೇ ಶೇಕ್ಸ್‍ಪಿಯರ್ ಹೇಳಿದ್ದು, ಈ ಬದುಕೇ ಒಂದು ಮಹಾರಂಗಭೂಮಿ.
 
     ಸರಿಸುಮಾರು ಎರಡು ಟ್ರಕ್‍ಗಳಷ್ಟು ವಸ್ತುಗಳ ಸರಕನ್ನು ಕಟ್ಟಿ ಕಟ್ಟಿ ಇಟ್ಟೆವು. ಆದರೆ ಸಾಯದ, ಸಾಗಿಸಲಾಗದ ಈ ಮನೆಯ ನೆನಪೆಂಬ ಸರಕನ್ನು ಈ ಪದವೆಂಬ ರೈಲು ಹತ್ತಿಸುವುದು ಬಿಟ್ಟು ಇನ್ನಾವುದರಿಂದ ಸಾಗಿಸಲು ಸಾಧ್ಯ? ನನಗೆ ಈ ಮನೆ ಹೊಕ್ಕು ಮೂರು ವರ್ಷ ವಾಸಿಸಿ ಹೊರಬರುವವರೆಗೂ ಒಂದೇ ಸಂಕಲ್ಪ, ಮಣ್ಣಿನಿಂದ ಮರ, ಕಣ್ಣಿನಿಂದ ಕನಸು ಹುಟ್ಟುವಷ್ಟೇ ಸಹಜವಾಗಿ ಈ ಮನೆಯಿಂದ ನನ್ನದೊಂದು ಮನೆ ಎನ್ನುವುದು ಹುಟ್ಟುವವರೆಗೂ ನಾನಿಲ್ಲಿಂದ ಕಾಲು ತೆಗೆಯಬಾರದು. ನಮಗೂ, ನನ್ನ ಮಕ್ಕಳಿಗೂ ನಿತ್ಯ ಸುಪ್ರಭಾತ ಶ್ಲೋಕಗಳ ನಾದ ಕೇಳಿಸಿ, ಪ್ರಸಾದದ ಕೈ ತುತ್ತು ಹಾಕಿ, ವಿಶಾಲ ಅಂಗಳ, ಪಾರಿಜಾತದ ಸುರಿಮಳೆ, ಸೀಬೆಗಳ ಸಿಹಿ ನೀಡಿ, ಆಡಲು ಬಯಲು, ಹಲವು ಹಬ್ಬದ ಮಗಳು ತುಳಸಿ, ಶುದ್ಧವೋ-ಅಶುದ್ಧವೋ ಒಟ್ಟಾರೆ ಭರವಸೆಯ ನೀರು ನೀಡಿ ಸಲುಹಿದ ಈ ಮನೆಯೆಂಬ ಮರಕ್ಕೆ ಕೈ ಮುಗಿಯುವಾಗ, ಕವಿ ಎಂಕ್ಕುಂಡಿಯವರ ಸಾಲು – ‘ಮೈ ತುಂಬ ಹೂ ಬಿಟ್ಟ ಮರವು ಪುಣ್ಯದ ಜೀವ’ ಎನ್ನುವುದು ನೆನಪಾಗುತ್ತಿತ್ತು. ತಿಳಿದದ್ದು ತಿಳಿಯದ್ದು, ಇಲ್ಲಿಯೇ ಗೀಚುತ್ತಾ, ಕುಡಿಯುತ್ತಾ, ಜೋಲಿ ತಪ್ಪಿ ನಡೆಯುತ್ತಾ, ಬಡಿಯುತ್ತಾ, ಮುದ್ದಾಡುತ್ತಾ ಇಲ್ಲಯೇ ಬಾಳು ಕಳೆದಿದೆ. ಈಗ ಜೋಗವ್ವಳ ಪ್ರಶ್ನೆಯಿಂದ ಜೋಗಪ್ಪನಿಗೆ ಮುಕ್ತಿ ಸಿಕ್ಕಿದೆ.
    ಆದರೆ ನನ್ನ ಸಂಸಾರದ ಬೇರು ಹಿಡಿದ ಈ ಬೇಲೂರು ಈಗ ನನ್ನನ್ನು ಬಿಟ್ಟುಕೊಡಲಾರೆ ಎನ್ನಬೇಕೆ? ಮಗ ಬೇಲೂರು ಬಿಟ್ಟು ಬೆಂಗಳೂರಿಗೆ ಬರಲು ಸುತಾರಾಂ ಒಪ್ಪುತ್ತಿಲ್ಲ.
    ಬರಹ ಭವಿಷ್ಯದರ್ಶಿಯಾಗಿರಬೇಕಂತೆ. ಅದೇನು ಕಾಕತಾಳಿಯವೊ ನೋಡಿ ದಿನವೆಲ್ಲ ಸಾವು ಕುರಿತೇ, ಮುಟ್ಟಬೇಕಾದ ಅಂತಿಮ ಮನೆಯ ಕುರಿತೇ ಬರೆಯುತ್ತಿರಬೇಕಾದರೆ ನಾಡಿನ ಹಿರಿಯ ಸಾಹಿತಿ, ನನ್ನ ಒಂದು ಹಂತದ ಸಾಹಿತ್ಯದ ಗುರು-ಬಂಧು ಡಾ. ಎಸ್.ಎಂ ವೃಷಭೇಂದ್ರಸ್ವಾಮಿ ನಿಧನರಾದ ಸುದ್ದಿ ಬಂದಿದೆ. ಅವರು ನನಗೆ ಬರೆದ ಕೊನೆಯ ಪತ್ರ ಅಲ್ಲಿ ಬೇಲೂರಿನ ಕಾಲೇಜಿನಲ್ಲಿ ಬಿದ್ದಿದೆ. ಅವರನ್ನು ಇಡಿಯಾಗಿ ನೆನಪಿಸಿಕೊಂಡಾಗ ನಾಡಿನ ಹಿರಿಯ ಆಡಳಿತ ಅಧಿಕಾರಿ ನವರತ್ನ ರಾಮರಾಯರು ಮುಪ್ಪು ಮುಪ್ಪುರಿಗೊಂಡು ಸಾವಿಗಾಗಿ ಹಂಬಲಿಸುವಾಗ ಬರೆದ ಈ ಪದ್ಯ ನೆನಪಾಗುತ್ತದೆ. ಇದು ನಿಮಗೂ ಇರಲಿ. ಯಾಕೆಂದರೆ ಆ ಮನೆಗೆ ಒಂದು ದಿನ ನಾವು ನಿವೆಲ್ಲರೂ ಹೋಗಬೇಕಿದೆ.  
           
ಬಲುದೂರ ನಡೆದಿಹೆನು; ಬೆಂಡಾಗಿ ಬಳಲಿಹೆನು;
ಹಸಿವು ದಾಹಕು ಕೂಡ ಉಸಿರಿಲ್ಲವೆನಗೆ;
ಕೈ ಕಾಲುಗಳು ಸವೆದು ಕಡ್ಡಿ ಯಾಗುಳಿದಿಹವು;
ತುಸು ಹೊತ್ತು ತಾಳಪ್ಪ, ಬರುವೆ ನನ್ನೊಡೆಯ.

ಮಳೆಯು ಸುರಿಯುತಲಿಹುದು; ಜಗಕೆ ಬೆಳೆ ಬೇಕು;
ಚಳಿಗಾಲಗಳ ತಡೆವ ಶಕ್ತಿ ಎನಗೆಲ್ಲಿ?
ಶಾಲು ಕಂಬಳಿ ಹೊದೆಯಬಲ್ಲರಿಗೆ ಅವನು ಕೊಡು;
ನಿನ್ನಡಿಯ ಭಕ್ತಿಯನೆ ಹೊದಿಸು ನನಗೆ.

ಬಡ ಮುದುಕ ನಾ ನಿನ್ನ ಆಲಯಕೆ ಬರಲಾರೆ;
ಇರುವಲ್ಲೆ ಕರುಣಾಳು ಊಳಿಗವ ಸ್ವೀಕರಿಸು.
ನಿನ್ನ ದೇಗುಲ ಪೂಜೆ ಘೋಷವನು ಕೇಳಿಸೆನಗೆ;

                                      ಎದ್ದು ಒಡನೆಯೆ ಎಲ್ಲ ಚಿಂತೆಯನು ಬುದಿಗಿಟ್ಟು
ಆತ್ಮ ಭಾವದಿ ಬಂದು ಕಾಲ ಪಿಡಿವೆ.




Thursday, January 22, 2015

ಆತುರ ಬದುಕಿನ ಅಂದಗೆಡಿಸುವುದೇ?

       ಇಂಥ ಯುಗದಲ್ಲಿ ನಾನು ಹೀಗೆ ಇದ್ದೀನಲ್ಲ!! ಎಂದು ಕೆಲವೊಮ್ಮೆ ಬೇಸರವಾಗುತ್ತದೆ. ಕಳೆದ ಮೂರು ವರ್ಷಗಳಿಂದ ಟಿ.ವಿ ಮೋಹವಿಲ್ಲ, ಕಂಪ್ಯೂಟರ್, ಟ್ಯಾಬ್, ಮೋಬೈಲ್‍ಗಳ ಮಹಾಸಂತೆಯಾದ ಬೆಂಗಳೂರಿನಲ್ಲಿದ್ದೂ ಒಂದು ಕ್ಷಣವೂ ಅವು ನನ್ನನ್ನು ಆಳಲಿಲ್ಲ. Apps ಗಳು ಮಾಡುತ್ತಿರುವ ಭಾವನಾತ್ಮಕ Laps ಗಳ ಕುರಿತು Information and Intelligence ವಿಭಾಗದ ಗೆಳೆಯ ಶ್ರೀನಿವಾಸ ಕೊಡುವ ಮಾಹಿತಿಗಳನ್ನು ನೋಡಿದಾಗಲಂತೂ ಛಳಿಗಾಲದಲ್ಲೂ ಬೆವರಿಳಿಯುತ್ತದೆ.
      ತಿಳಿಯುವ, ತಿಳಿಯಬೇಕಾದ ಸುದ್ದಿ ತಿಳಿದೇ ತಿಳಿಯುತ್ತದೆ. ಸ್ವಲ್ಪ ತಡವಷ್ಟೆ. ಅರ್ಥಹೀನ ಆತುರ ಬದುಕಿನ ಅಂದಗೆಡಿಸುವುದಿಲ್ಲವಲ್ಲ ಅಷ್ಟು ಸಾಕು.
   ಈ ಪೀಠಿಕೆಯ ಉದ್ದೇಶ ಬೆಳಗಾವಿಯ ಹಿರಿಯ ಸಾಹಿತಿ-ಮಿತ್ರ ಶ್ರೀ ರವಿ ಉಪಾಧ್ಯಾ ತೀರಿ ಹೋದ ಸುದ್ದಿ ಸ್ವಲ್ಪ ತಡವಾಗಿ ತಿಳಿಯಿತಲ್ಲ ಎನ್ನುವುದು. ಹೀಗಾಗಿ ನನ್ನ ಬಗ್ಗೆ ನನಗೆ ಅಸಡ್ಡೆ. ನನ್ನ ಆರಂಭದ ಬರಹದ ಆ ದಿನಗಳು, ಉಗ್ರ ಭಾಷಣಗಳು, ಸಭಾ ಮಧ್ಯದಿಂದ ಎಲ್ಲ ಚಪ್ಪಾಳೆಗಳು ನಿಂತರೂ ನಿಲ್ಲದ ಒಂದು ಚಪ್ಪಾಳೆ. ಮಧ್ಯ ಮಧ್ಯ ಆ ವ್ಯಕ್ತಿ ಏಳುವುದು, ಪ್ರೋತ್ಸಾಹಪೂರಿತ ಒಂದು ಅಭಿಪ್ರಾಯದಿಂದ ನನ್ನ ವಾದಗಳಿಗೆ ಬೆಂಬಲ, ನನ್ನ ಬಗೆಗೆ ಸದಾ ಹಂಬಲ, ನಾನು ಈ ಹಿರಿಯರ ಪಾಲಿನ ಮಹಾನ್ ಲೇಖಕ. ಹೀಗೆ ನನ್ನ ಸಾತ್ವಿಕ ಸೊಕ್ಕನ್ನು ಪೋಷಿಸಿ ಬೆಳೆಸಿದವರು ರವಿ ಉಪಾಧ್ಯಾ. ಅಂದಹಾಗೆ, ಅವರ ಚಪ್ಪಾಳೆ ಯಾಕೆ ನಿಲ್ಲುತ್ತಿರಲಿಲ್ಲ ಎಂದು ನಾ ನಿಮಗೆ ಹೇಳಲೇಬೇಕಲ್ಲವೆ? ಪಾಶ್ರ್ವವಾಯು ಪೀಡಿತರಾಗಿದ್ದ ರವಿ ಉಪಾಧ್ಯಾ ಅವರ ಒಂದು ಕೈ ಅವರ ಸ್ವಾಧಿನದಲ್ಲಿರಲಿಲ್ಲ. ಅದೇ ಕೈಯನ್ನು ಹಿಡಿದು ತಿಂಗಳುಗಳ ಹಿಂದೆ ಕುಲುಕಿಸಿದ ನೆನಪು. ಆದರೆ ಅದು ಈಗ ಮಣ್ಣಿಗೊ, ಬೆಂಕಿಗೊ. ಒಟ್ಟಾರೆ ಮತ್ತೆ ಸ್ಪರ್ಶವಂತೂ ಸಾಧ್ಯವಿಲ್ಲ.
        ಸಾವನ್ನು ಭಯಂಕರವಾಗಿ ನಾನು ಶಪಿಸುವುದು ಈ ಕಾರಣಕ್ಕಾಗಿ. ಅದು ಎಲ್ಲವನ್ನೂ ಅಳುಕಿಸಿ ಹಾಕುವುದಕ್ಕೆ ಸದಾ ಹವಣಿಸುತ್ತದೆ. 
     ಬೆಂಗಳೂರಿಗೆ ಬಂದು ಇಂದಿಗೆ ಸರಿಯಾಗಿ ಐದು ತಿಂಗಳು (21.08.2014). ನನ್ನ ರಾಜಾಜಿನಗರವನ್ನು ಬಿಟ್ಟು ಜಯನಗರದ ಕಡೆಗೆ ಹೋಗಲು ಬಯಸಿರಲಿಲ್ಲ. ಅದಕ್ಕೊಂದು ವೈಯಕ್ತಿಕ ಕಾರಣ, ಆದರೆ ಈ ಬಾರಿ ನುಣುಚಿಕೊಳ್ಳುವಂತಿರಲಿಲ್ಲ. ಅಲ್ಲಿಯದೇ ಒಂದು ಸ್ಟಾರ್ ಹೋಟೆಲಿನಲ್ಲಿ ನಾನು ಎರಡು ರಾತ್ರಿ ಉಳಿದುಕೊಳ್ಳಬೇಕಿತ್ತು, ಮತ್ತೆರೆಡು ದಿನಗಳು, ಅದೇ ಜಯನಗರದಲ್ಲಿ, ಸ್ವಲ್ಪ ಹಿಂದೆ ಗಾಂಧಿನಗರದ ಹೋಟೆಲ್ ಒಂದರಲ್ಲಿ ಸಮಾರಂಭಕ್ಕೆ ಹಾಜರಾಗಬೇಕಾಯಿತು.
      ನನ್ನೊಂದಿಗೆ ಚಿತ್ರನಟ ಸೋಮಶೇಖರ್ ರಾವ್, ಹಿರಿಯ ಸಾಹಿತಿ ಹರಿಹರಪ್ರಿಯ, ಝಾನ್ಸಿಯ ಗೆಳೆಯ ವಾಸುದೇವ ನಾಡಿಗ, ಕಾದಂಬರಿಕಾರ ರಮೇಶಬಾಬು, ಮೆಲ್ಬೊರ್ನಿನ್ ಕನ್ನಡ ಸಂಘದ ಸೆಕ್ರೆಟರಿ ಗಿರಿರಾಜ, ರಿಗ್ರೇಟ್ ಅಯ್ಯರ್ ಹೀಗೆ ಎಲ್ಲರೂ ಸೇರಿದ ಕಾರಣ ಹಿರಿಯ ಸಾಹಿತಿ “ಆಗುಂಬೆ ನಟರಾಜ್”. 
      ಇವರು ಪ್ರವಾಸ ಕಥನಗಳ ಮಹಾಪರ್ವತ. ಇವರಷ್ಟು ದೇಶ ಸುತ್ತಿದವರು, ಸ್ಥಳ ಪುರಾಣ, ಐತಿಹ್ಯ, ಇತಿಹಾಸಗಳ ಕುರಿತು ತಲೆಕೆಡಿಸಿಕೊಂಡವರು ಕನ್ನಡದಲ್ಲಿ ಮತ್ತೊಬ್ಬರಿಲ್ಲ. ಇದಕ್ಕಾಗಿಯೂ ಇವರು ನನ್ನನ್ನು ಕಾಡಿದವರಲ್ಲ. ಬದಲಾಗಿ ನನ್ನ ತಲೆಕೆಡಿಸಿದ್ದು ಅವರ ಸರಳತೆ.
ಕಳೆದ ಅನೇಕ ವರ್ಷಗಳಿಂದ ಇವರು ನನಗೆ ಪುಸ್ತಕಗಳನ್ನು ಕಳುಹಿಸುತ್ತಲೇ ಇದ್ದರು. ಇಂದಿನ ಈ ಕಾರ್ಯಕ್ರಮದವರೆಗೆ ಇವರು ಯಾರು? ಎಂಥವರು? ಹೇಗಿರಬಹುದು? ಒಂದೂ ತಿಳಿಯದು ನನಗೆ. ಅವರೇ ಫೋನಾಯಿಸಿ ತಾವು ಕಳುಹಿಸಿದ ತಮ್ಮ ಪುಸ್ತಕ ಕುರಿತು ನನ್ನ ಅಭಿಪ್ರಾಯ ಕೇಳುತ್ತಿದ್ದರು. ಅವರು ಹಾಗೆ ಫೋನ್ ಮಾಡಿದಾಗಲೆಲ್ಲ ನನಗೆ ನಾಚಿಕೆಯಾಗಿ, ನನ್ನನ್ನು ನಾನೇ ಕ್ಷಮಿಸಿಕೊಳ್ಳದವನಾಗುತ್ತಿದ್ದೆ. ಈ ಮಧ್ಯದ ಒಂದು ಪ್ರಸಂಗ. ಬೆಂಗಳೂರಿನ ಆರಂಭಿಕ ದಿನಗಳು. ನಮ್ಮ ಕಾಲೇಜಿನ ವಾರ್ಷಿಕೋತ್ಸವಕ್ಕೆ ಒಪ್ಪಿಕೊಂಡಿದ್ದ ಸಿದ್ದಲಿಂಗಯ್ಯನವರು, ಕೊನೆಯ ಕ್ಷಣ ಹಾರ್ಟ್ ತೊಂದರೆಯಿಂದ ಕಾರ್ಯಕ್ರಮಕ್ಕೆ ಬರದಂತಾಯಿತು.
       ಇದು ಇಕ್ಕಟ್ಟಿನ ಸಂದರ್ಭ. ಸಾಹಿತಿಗಳ ಈಗೋ ಹಾಗೂ ಪ್ರತಿಷ್ಠೆಯ ಪ್ರಶ್ನೆಯೂ ಕೂಡಾ. ಯಾರದೋ ಹೆಸರಿನಲ್ಲಿ ಆಮಂತ್ರಣ ಪತ್ರಿಕೆ ಪ್ರಕಟವಾಗಿ ಸಿದ್ದಗೊಂಡ ಕಾರ್ಯಕ್ರಮಕ್ಕೆ, ಇನ್ಯಾರೋ ಸರಳವಾಗಿ ಒಪ್ಪಲಾರರು. ಅತ್ತ ನನಗೆ ನಮ್ಮ ಸಾಂಸ್ಕøತಿಕ ಕಾರ್ಯದರ್ಶಿ ಹಾಗೂ ಪ್ರಾಂಶುಪಾಲರ ಒತ್ತಡ. ಒಂದು ಕ್ಷಣ ಆಗುಂಬೆ ನಟರಾಜರಿಗೆ ಫೋನಾಯಿಸಿದೆ. ಎಂಥ ಸರಳಜೀವಿ ಅಂತೀರಾ? ಒಂದಿಷ್ಟೂ ಬೇಸರಿಸಿಕೊಳ್ಳದೆ 75ರ ಈ  ಜೀವ, ಜಯನಗರದ ತಮ್ಮ ಮನೆಯಿಂದ ಬಿ.ಎಂ.ಟಿ.ಸಿ ಬಸ್ಸು ಹತ್ತಿಕೊಂಡು ನಮ್ಮ ಕಾರಿರುವಲ್ಲಿ ಬಂದೇ ಬಿಡಬೇಕೆ!
     ಇಲ್ಲಿಂದ ನನ್ನ ಸಾಂಗತ್ಯವನ್ನೂ ಬಯಸದೆ ಬೇಲೂರಿಗೆ ಹೋಗಿ ನಮ್ಮ ಬಳಗವನ್ನೆಲ್ಲ ರಂಜಿಸಿ, ತಮ್ಮ ಇಡೀ ಸಾಹಿತ್ಯದ ಒಂದು ಕಟ್ಟನ್ನು ನಮ್ಮ ಗ್ರಂಥಾಲಯಕ್ಕೆ ನೀಡಿ ಬಂದರು. ಆಗ ನನಗೆ ಗೊತ್ತಾದುದು ಮನುಷ್ಯ ಹೇಗೆ ದೊಡ್ಡವನಾಗುತ್ತಾನೆ ಎಂದು. ಈ ಹಿರಿಯ ಜೀವದ ಒಂದು ಸರಳ ಪರಿಚಯ ನಿಮಗಾಗಿ, ನಿಮ್ಮ ಕಾಡುವ ಪಾಠವಾಗಿ -
      “ಆಗುಂಬೆ ನಟರಾಜ್ (ಜನನ 1939) ಹಿರಿಯರು, ಆಗುಂಬೆಯವರು, ಬೆಂಗಳೂರಿನಲ್ಲಿ ಬಾಲ್ಯ, ವಿದ್ಯಾಭ್ಯಾಸ. ಕೆನರಾ ಬ್ಯಾಂಕಿನಲ್ಲಿ ಉದ್ಯೋಗ. ಐತಿಹಾಸಿಕ ಸ್ಥಳಗಳ ಅನ್ವೇಷಣೆ ಆಗುಂಬೆ ನಟರಾಜರ ಹವ್ಯಾಸ. ದೆಹಲಿಯ ಬಲ್ಲೀಮರಾನ್‍ನಲ್ಲಿರುವ ಮಿರ್ಜಾ ಗಾಲಿಬ್‍ನ ಮನೆ, ‘ದರ್ಬಾರಿ ಕಾನಡ’,  ‘ಮಿಯಾ ಸಾರಂಗ್’ನಂಥ ಅಪೂರ್ವ ರಾಗಗಳ ಸಂಯೋಜಕ ತಾನ್‍ಸೇನರ ಹುಟ್ಟೂರು ಗ್ವಾಲಿಯರ್ ಸಮೀಪದ ಬೇಹಾಟ್, ಕಲ್ಕತ್ತಾದಲ್ಲಿರುವ ಟಿಪ್ಪುಸುಲ್ತಾನರ ವಂಶದವರ ಮನೆ, ದೆಹಲಿಯ ಬಜಾರ್‍ಸೀತಾರಾಮ್‍ನಲ್ಲಿ ಅನಾದರಕ್ಕೀಡಾಗಿರುವ ಕಮಲಾ ನೆಹರೂ ಅವರ ಮನೆ, ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ ಮುಂಬಯಿಯ ಮೊದಲ ಸ್ವಾತಂತ್ರ್ಯ ಸೇನಾನಿ ರಾಮ ಕಾಮತಿಯ ಮನೆ - ಇಲ್ಲಿಗೆಲ್ಲ ನಮ್ಮ ಆಗುಂಬೆ ನಟರಾಜ ಭೇಟಿ ನೀಡಿದ್ದಾರೆ. ಇವರ ಮಹತ್ವದ ಕೃತಿಗಳು ‘ಇದು ಸ್ಪೈನ್! ಇದು ಇಸ್ಪಾನಾ!’, ‘ಇದು ಬರ್ಲಿನ್! ಇದು ಜರ್ಮೇನಿಯಾ!’, ‘ಅಮ್‍ಸ್ಟರ್‍ಡ್ಯಾಮ್‍ನಿಂದ ಅವಿಗ್ನಾನ್‍ಕ್ಕೆ’, ‘ಅಥೆನ್ಸ್‍ನಿಂದ ಇಸ್ತಾನ್‍ಬುಲ್‍ಗೆ’ ಮತ್ತು ‘ಹೊರನಾಡಿನ ಮೂರು ಕರ್ನಾಟಕ ರಾಜ್ಯಗಳು’.”
      ಈ ಸಮಾರಂಭದ ದಿನ ಆಗುಂಬೆ ನಟರಾಜ್‍ರ ದಾಂಪತ್ಯಕ್ಕೆ 45 ವರ್ಷದ ಪ್ರಾಯ. ಇಂದು ಅವರ ಮೂರು ಕೃತಿಗಳ ಲೋಕಾರ್ಪಣೆ. ಇದರಲ್ಲಿ ಅತ್ಯಂತ ಮುಖ್ಯವಾಗಿ ಅವರ “ಸಾಹಿತ್ಯ ಮತ್ತು ಪ್ರಜ್ಞೆ” ನೀವು ಓದಲೇಬೇಕು.
      ಇಲ್ಲಿಂದ ನೇರವಾಗಿ “ರವಿ ಬೆಳಗೆರೆ ಕಾಫಿ & ಬುಕ್” ಶಾಪ್‍ಗೆ. ನನ್ನ “ಫಕೀರ” ಮಾರಾಟಗೊಂಡ ಅಂಗಡಿ ಅದು. ಅಲ್ಲಿಂದ “ಅಂಕಿತ ಬುಕ್ ಸ್ಟಾಲ್”ಗೆ. ಬರಹಗಾರನಾದುದಕ್ಕೆ ಅಭಿಮಾನಪಟ್ಟುಕೊಳ್ಳುವಷ್ಟು ನನ್ನ ಸಾಹಿತ್ಯವನ್ನು, “ಅಂಕಿತ”ದ ಒಡೆಯರಾದ ಪ್ರಕಾಶ ಕಂಬತ್ತಳ್ಳಿ ಹಾಗೂ ಶ್ರೀಮತಿ ಕಂಬತ್ತಳ್ಳಿಯವರು ಹೇಳಿ ಹೇಳಿ ಮಾರಾಟಮಾಡಿದ್ದಾರೆ. ಅದರಲ್ಲೂ ಶ್ರೀಮತಿ ಕಂಬತ್ತಳ್ಳಿ ಅವರ ತೂಕ ಇನ್ನೂ ಜಾಸ್ತಿ. ಅವರ ಈ ಸಾಹಿತ್ಯಿಕ ತಾಯ್ತನಕ್ಕೆ ಒಂದು ಥ್ಯಾಂಕ್ಸ್ ಹೇಳಲು ನಾವು ಹೋದರೆ, ನಮ್ಮಿಬ್ಬರನ್ನು ಕೂಡ್ರಿಸಿ, ಕಾಫಿ ಕುಡಿಸಿ, ಬಂದವರಿಗೆಲ್ಲ ಪರಿಚಯಿಸಿ, ಒಂದಷ್ಟು ಹೊಸ ವರ್ಷದ ಕ್ಯಾಲೆಂಡರ್ ಹಾಗೂ ಇತರ ಉಡುಗೊರೆ ಅವರಿಂದ. ಇದು ಪುಸ್ತಕ ಓದಿದ ಹೃದಯಕ್ಕಿರಬೇಕಾದ ಸಂಸ್ಕಾರ. ಈಗ ನನ್ನ “ಅರ್ಧ ಸತ್ಯದ ಹೆಣ್ಣು” ಅವರ ಮನೆಮಗಳು.
     ಹೊರಗಡೆ ಬಂದು ನೋಡುತ್ತ ಕುಳಿತರೆ “ಮನಸ್ಸು ಗಾಂಧಿ ಬಝಾರ” ಎಷ್ಟೆಲ್ಲ ನೆನಪುಗಳು. ನಮ್ಮ ಕಣ್ವದ ಹುಡುಗ ಈರಣ್ಣ ಇಲ್ಲಿಯ ಕೆಲವು ನೆನಪುಗಳು ಹೇಳಿದ್ದ. ನಾನು ಮುಗುಳ್ನಕ್ಕು ಸುಮ್ಮನಾಗಿದ್ದೆ. ಆ ದಿನ ಆತ ಹೇಳುವಾಗಲೂ ಮತ್ತು ಈಗಲೂ ನನ್ನನ್ನು ಕಾಡಿದ್ದು ಮುಖ್ಯವಾಗಿ ಒಂದು ಪತ್ರಿಕೆ. ಇಲ್ಲಿಂದ ಅಲ್ಲಿಗೆ, ನನ್ನೂರಿಗೆ, ಒಂದು ಚಿಕ್ಕ, ಸಾಹಿತ್ಯದಿಂದ ಶ್ರೀಮಂತವಾದ ಪತ್ರಿಕೆ ಬರುತ್ತಿತ್ತು. ಅದರ ಹೆಸರೇ “ಗಾಂಧಿ ಬಝಾರ”, ನನ್ನ ಸಂವೇದನೆಗಳ ಸಾಕಿ-ಸಲುಹಿದ ಸರಳ ಪತ್ರಿಕೆ.
       ಈಗ ಆ ಪತ್ರಿಕೆ ಇಲ್ಲ ಆದರೆ, ಗಾಂಧಿ ಬಾಝಾರಿನ ತುಂಬ ಹೂವಿನಂಗಡಿಗಳಿವೆ. ಈ ಹೂಗಳು ಕಾಡಿದರೆ ಮತ್ತೊಂದು ಗಾಂಧಿ ಬಝಾರ ಇನ್ನೊಂದು ದಿನ ಹುಟ್ಟಿಯೇ ಹುಟ್ಟುತ್ತದೆ.

Wednesday, January 14, 2015

ಜಾಢಮಾಲಿಯ ಜೀವ ಕೇಳುವುದಿಲ್ಲ!!



ಸಂಕ್ರಮಣದ ಶುಭಾಷಯಗಳು

     ಒಂದು ವರ್ಷವಷ್ಟೇ, ಮರಗಳಲ್ಲೀಗ ಎಷ್ಟೊಂದು ಹೂಗಳು!!! ಇತ್ತೀಚಿನ ಪಯಣದಲ್ಲಿ ನನ್ನ ತಂದೆ ಹಂಚಿಕೊಂಡ ದೋಹೆಯ ಎರಡು ಸಾಲುಗಳು ನೆನಪಾದವು-
“ಮಾಲಿ ಆವತ ದೇಖಕರ ಕಲಿಯಾ ಕರೀ ಪುಕಾರ
ಫೂಲೇಂ ಫೂಲೇಂ ಚುನಲಿಯೆ ಕಾಲಿ ಹಮಾರಿ ಬಾರ”
ಯಾರವೋ, ಈ ಸಾಲುಗಳು, ಸೊಗಸು ನಮ್ಮದಾಗಿದೆಯೆಲ್ಲ ಅಷ್ಟು ಸಂತಸ ಸಾಕು. ಪದ್ಯ ಹೇಳುತ್ತಿದೆ-
“ಮಾಲೆಗಾರ ಬರುವುದ ಕಂಡು ಕರೆಯುತ್ತವೆ ಹೂಗಳು
ಹೂಗಳಾಯ್ದ ಹೊರಟ ಮೇಲೆ ನಾಳೆ ನಮ್ಮ ಪಾಳಿಯೆಂದು ಮಲಗುತ್ತವೆ ಜೀವಗಳು”
ಛೀ! ನನಗೇನು ಈ ಭಾಷಾಂತರ ಇಷ್ಟವಾಗಲಿಲ್ಲ. ಹಿಂದಿ, ಉರ್ದುವನ್ನು ಕನ್ನಡಕ್ಕೆ ಭಾಷಾಂತರಿಸುವುದೂ ಅಷ್ಟೇ, ಹಿಜಿಡಾ ಒಬ್ಬನನ್ನು ಶುದ್ಧ ಗಂಡೋ-ಹೆಣ್ಣೋ ಮಾಡಲು ಹೋಗುವುದೂ ಅಷ್ಟೇ.
    ಹಿಂದಿಯಲ್ಲಿ ಉದ್ಯಾನವನ್ನು ನೋಡಿಕೊಳ್ಳುವವನನ್ನು ಜಾಡಮಾಲಿಯೆಂದು ಕರೆಯುತ್ತಾರೆ. ಎಷ್ಟೊಂದು ಹೆಣ್ಣು-ಹೆಣ್ಣಾಗಿದೆ ಈ ಪದ. ಆದರೆ ಅದರೊಳಗಿನ ಜೀವ ಹೆಣ್ಣು ಆಗಿರಬಹುದು ಅಥವಾ ಗಂಡು ಆಗಬಹುದು. ಲಿಂಗದ ಹಂಗು ಹರಿದುಕೊಂಡ ಈ ಪದದಲ್ಲಿ ನೀವು ಯಾರನ್ನೂ ಹುದುಗಿಸಿಡಬಹುದು.
      ಅಂದಹಾಗೆ, ಈ ಪದವನ್ನು ನಾನು ಪಿಯುಸಿಯಲ್ಲಿದ್ದಾಗ ಕೇಳಿದ್ದೆ. ಕೆಲವು ಅಯೋಗ್ಯ ಗೆಳೆಯರೊಂದಿಗೆ ಸೇರಿಕೊಂಡು ಬಾಲಕ ಲಾಲ್‍ಬಹದ್ದೂರ್ ಶಾಸ್ತ್ರೀ ಹೂ ಕದಿಯಲು ಹೋಗುತ್ತಾನೆ. ತಕ್ಷಣ ಜಾಢಮಾಲಿ’ಬರುತ್ತಿರುವುದನ್ನು ಕಂಡು ಗೆಳೆಯರೆಲ್ಲ ಓಡಿ ಹೋಗುತ್ತಾರೆ. ಬಾಲಕ ಶಾಸ್ತ್ರೀ ಆತನ ಕೈಗೆ ಸಿಕ್ಕಿ ಬೀಳುತ್ತಾನೆ. ಬಾಲಕನ ಕೆನೆಗೆ ಎರಡು ಬಾರಿಸಿ ಜಾಢಮಾಲಿ ಹೂ ಕಸಿದುಕೊಳ್ಳುತ್ತಾನೆ. ಅಳುತ್ತಾ ಬಾಲಕ ಕೇಳುತ್ತಾನೆ, ನನ್ನ ಹೆತ್ತವರು ಸತ್ತು ಹೋಗಿದ್ದಾರೆ ಎಂದು ತಾನೇ ನೀನು ಹೊಡಿಯುವುದು?” ಹೀಗೆಂದ ಬಾಲಕನ ಕೆನೆಗೆ ಜಾಢಮಾಲಿ ಮತ್ತೆರಡು ಬಿಗಿಯುತ್ತಾನೆ, ಮತ್ತೆ ಹೇಳುತ್ತಾನೆ, “ಹೆತ್ತವರು ಸತ್ತು ಹೋಗಿದ್ದರೆ, ಹೇಳುವವರಿಲ್ಲ, ಕೇಳುವವರಿಲ್ಲ ಎಂದು ಹದ್ದು ಮೀರಬಾರದು. ನಿಮ್ಮಂತವರು ಉಳಿದವರಿಗೂ ಮಾದರಿಯಾಗಿ ಬದುಕಬೇಕು, ಸದ ಎಚ್ಚರದಿಂದಿರಬೇಕು.”
     ಒಂದೇ ಘಟನೆ, ಒಂದೇ ಹೊಡೆತ ಶಾಸ್ತ್ರೀಯ ಬದುಕನ್ನೇ ಬದಲಿಸಿತು. ಆತನನ್ನು ಇತಿಹಾಸ ಪುರುಷನನ್ನಾಗಿಸಿತು.
     ಈಗ ನನ್ನ ಪ್ರಶ್ನೆ, ನಿತ್ಯ ಅತ್ಯಂತ ಕೋಮುಲವಾದ ಹೂಗಳನ್ನೆತುವ ಜಾಢಮಾಲಿ ಅಷ್ಟೇ ಮೃದು ಮತ್ತು ಕೋಮುಲವಾದ ಬಾಲಕನ ಕೆನ್ನೆಗೆ ಬಾರಿಸಬೇಕಾದರೆ ಅವನಲ್ಲಿ ಅದೆಂಥ ಜೀವನ ಕಾಳಜಿ ಇರಬಹುದು! ಸಸಿ ಸಾಕುವ ಹಸನಾದ ಕೈಗಳವು. ಅಂತೆಯೆ ನಿಮಗೊಂದು ಕೋರಿಕೆ. ಎದೆಯಲ್ಲ ನಂದನವನವಾಗಿಸಿಕೊಂಡು, ಅಪರೂಪದ ಹೂ-ಹಣ್ಣು-ಗಿಡ ನೆಟ್ಟ ನೀವು ಅಷ್ಟೇ ಪ್ರೀತಿಯ ಜಾಢಮಾಲಿಯನ್ನು ಕಳೆದುಕೊಳ್ಳಬೇಡಿ. ಕಳೆದುಕೊಂಡರೆ ವನ ಒಣಗಿ, ನೆಲ ಪರದೆಸಿಯಾಗುತ್ತದೆ.
      ಅಂದಹಾಗೆ, ನಾನು ನನ್ನ ಜೋಳಿಗೆಯ ಸುತ್ತ 25 ಗಿಡ ನೆಟ್ಟು ಇಂದಿಗೆ ಒಂದು ವರ್ಷ. ಗೆಳೆಯೊಬ್ಬನ ಬಿರುಮಾತಿಗೆ ಮುನಿಸಿಕೊಂಡು ನಮ್ಮ ಜಾಢಮಾಲಿ ಶರಣಪ್ಪ ಜೋಳಿಗೆ ಬಿಟ್ಟು ಹೋದ. ಅಪರೂಪದ ಮನುಷ್ಯ ಆತ. ಆತನ ತಾಯಿಯ ಕಾಲದಿಂದಲೂ ನನ್ನ ಮನೆತನಕ್ಕೆ ಅವರ ಕೈ ಆಸರೆ ಇದೆ. ತುಂಬಾ ಸೌಮ್ಯ, ಆದರೆ ಸಿಡಿದರೆ ಮರಳಿ ಬಾರದ ಕಿಡಿ. ಸಿಟ್ಟಿನಲ್ಲಿ ಹೊರಟುಹೋದ ಜಾಢಮಾಲಿ ಸಾಯಂಕಾಲ ಶೆರೆ ಕುಡಿದು ನನಗೂ, ನನ್ನ ಹೆಂಡತಿಗೂ ಗಿಡಗಳಿಗಾಗಿ, ಅವುಗಳ ರಕ್ಷಣೆಗಾಗಿ ಅವಲತ್ತುಕೊಳ್ಳುತ್ತಿದ್ದ. ಸ್ವಲ್ಪ ಹೆಚ್ಚಾದರೆ ನಶೆ ಅಳುತ್ತಿದ್ದ. ಯಾಕೆಂದರೆ, ಆತನದು ಜಾಢಮಾಲಿಯ ಜೀವ. ಸಸಿಯಾಗಿದ್ದವುಗಳನ್ನು, ಈಗ ಮರವಾಗಿ ನಿಲ್ಲಿಸಿದ್ದಾನೆ. ನಿತ್ಯ ನಲವತ್ತು ಕೊಡ ನೀರು ಎತ್ತಿ ಹಾಕಿದ್ದಾನೆ. ಇರುವೆ-ಕುರಿ-ದನಗಳ ಬಾಯಿಯಿಂದ ಅವುಗಳನ್ನು ರಕ್ಷಿಸಿ ತಾಯಿಯಾಗಿದ್ದಾನೆ, ‘ಜೋಳಿಗೆಗೆ ನೆರಳು ಹಾಸಿದ್ದಾನೆ.
      ಅದೇನು ಮೈ-ಮರೆವೊ, ಕಾರ್ಯದ ಒತ್ತಡದಲ್ಲಿ ನಾನು ಆತನ ಅಳಲನ್ನು ಕೇಳಿಸಕೊಳ್ಳಲಿಲ್ಲ. ಜಾಢಮಾಲಿ ನನಗಾಗಿ ಕಾಯಲಿಲ್ಲ. ಆದರೆ ದಿನ ನಸುಕಿನಲ್ಲಿ ಎದ್ದು, ನಾಲ್ಕು ಕಿ.ಮೀಗಳ ದಾರಿ ಕ್ರಮಿಸಿ ಹೋಗಿ, ನಲವತ್ತು ಕೊಡ ನೀರು ಹಾಕಿ ತಣ್ಣಗೆ ಕುಳಿತು, ಹೂ ಹರಿದು ಹೊಸ್ತಲಿಗೆ ಇಟ್ಟು ಬರಲಾರಂಭಿಸಿದ. ಯಾಕೆಂದರೆ ಆತ ಬೆಳೆಸಿದ್ದು 25 ಮರಗಳನಲ್ಲ, ಮಕ್ಕಳನ್ನು. ನೂರಾರು ವರ್ಷ ಯಾರದೇ ಕುಲ-ಧರ್ಮ-ದೇಶ ಕೇಳದೇ ನೆಮ್ಮದಿ ನೆರಳು ನೀಡುವ ಮರವೆಂಬ ಮಕ್ಕಳನ್ನು, ಇಂಥ ಜೀವಗಳನ್ನು ತನ್ನ ಸ್ವಪ್ರತಿಷ್ಠೆಗಾಗಿ ಬಲಿ ಕೊಡುವಷ್ಟು ಭೀಷಣವಲ್ಲ ಜಾಢಮಾಲಿಯ ಜೀವ.
     ಇಂಥವವನ್ನು ಕಳೆದುಕೊಳ್ಳಲಾದೀತೆ? ಆತನ ಮನೆಯವರಿಗೂ ಹೋಗಿ, ಗೆಳೆಯನ ಪರವಾಗಿ ನಾನೇ ಕ್ಷಮೆಯನ್ನು ಕೇಳಿ, ರಮಿಸಿ ಜೋಳಿಗೆಯಂಗಳಕೆ ಬಿಟ್ಟು ಬಂದೆ.

       ದಿನಾಂಕ 11 ಜೀವವೊಂದರ ಹುಟ್ಟು ಹಬ್ಬ. ಬಿಜಾಪುರದಲ್ಲಿದ್ದ ನಾವು ಬಸ್ ಸ್ಟ್ಯಾಂಡ್ ಹಿಂದೆಯೇ ಇರುವ ಸೂಫಿಯೊಬ್ಬನ ಸಮಾಧಿಗೆ ಸಂದರ್ಶಿಸಿ, ಪ್ರಾರ್ಥಿಸಿ, 12 ನೇ ತಾರೀಖಿನ ಸ್ವಾಮಿ ವಿವೇಕಾನಂದರ 152 ನೇ ಹುಟ್ಟು ಹಬ್ಬಕ್ಕೆ ಸಿದ್ಧ. 2015 ರ ಮೊದಲ ಅರ್ಥಪೂರ್ಣ ಕಾರ್ಯಕ್ರಮ, ಬಿಜಾಪುರದ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ.
      ನನ್ನೊಂದಿಗೆ ವೇದಿಕೆಯ ಮೇಲೆ ಮಾಜಿ ವಿಧಾನ ಪರಿಷತ್ತ್ ಸದಸ್ಯರು ಮತ್ತು ಕಾಂಗ್ರೇಸ್‍ನ ಹಿರಿಯ ಮುಖಂಡರು ಆದ ಶ್ರೀಮಾನ್ ಜಿದ್ದಿಯವರು. 72 ವರ್ಷದ, ಕಾಳಿ ಆರಾಧನೆಯ ಹಿರಿಯರು ಮತ್ತು ನನ್ನ ತಂದೆಯ ಸ್ನೇಹಿತರು, ವಿ.ಎಸ್. ಆಚಾರ್ಯ, ಎನ್.ಆರ್.ತಂಗಾ ರಂಥ ಸಭ್ಯ ರಾಜಕಾರಣಿಗಳ ಒಡನಾಡಿಗಳಾದ ಜಿದ್ದಿ ಅವರದು ಆರ್ಕಷಕ ವ್ಯಕ್ತಿತ್ವ. ಇನ್ನೊಬ್ಬ ಸ್ನೇಹಿತ ಬಿಜೆಪಿಯ ಮಾಜಿ ಹುರಿಯಾಳು ಶ್ರೀಯುತ ಕವಟಗಿ. ಸ್ಥಳೀಯ ಎನ್.ಜಿ.ಓ ಮುಖ್ಯಸ್ಥ, ಪ್ರೊ.ಸತ್ಯಪ್ಪ ಹಡಪದ, ಪ್ರಾಂಶುಪಾಲರಾದ ಜಾಧವ ಹಾಗೂ ಮತ್ತಿತ್ತರು. 
      ನನಗಿಂತಲೂ ಮುಂಚೆ ಹತ್ತು ನಿಮಿಷಗಳ ಕಾಲ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಪಾಲನೆ ಕುರಿತಾಗಿ ಪದ್ದಿಯ ಭಾಷಣ. ಆನಂತರದಲ್ಲಿ 50 ನಿಮಿಷ ಸುದೀರ್ಘ ನನ್ನ ಮಾತಿನ ಸುರಿಮಳೆ. ತಲೆಯ ತುಂಬಾ ನಾನು ಕಳೆದುಕೊಂಡ, ನನ್ನ ಗುರು ಎಂ.ಆರ್.ಜಿ ಯವರ ಕೊನೆಯ ಕೊಡುಗೆ 'ಶ್ರೀ ರಾಮಕೃಷ್ಣ ವಚನ ವೇದ ಭಾಗ-1' ಹಳೆಯ ಪುಸ್ತಕ ಸುತ್ತುತ್ತಿತ್ತು. ಎಷ್ಟೊಂದು ನೋವಿತ್ತು ಎದೆಯಲ್ಲಿ, ಅದೆಷ್ಟೋ ವರ್ಷ ಕಾಯ್ದಿಟ್ಟುಕೊಂಡ ಆ ಪುಸ್ತಕದೊಂದಿಗೆ ನನ್ನ ಆತ್ಮಸಂವಾದವಿತ್ತು. 
       ವಿವೇಕಾನಂದರದು ಅಲ್ಪಾವಧಿಯ ಜೀವನ, ಆದರೆ ದೀರ್ಘಾವಧಿಯ ಬಾಳು. ಇಂಥ ಬಾಳು ಎಲ್ಲರದೂ ಆಗಬೇಕೆಂದು ಹಂಬಲಿಸಿದ ಅವರು ಅರಿವನ್ನೇ ಅಡವಿಟ್ಟು, ಬದುಕಿನಲ್ಲಿ ದಿಕ್ಕೆಟ್ಟು ಹೊಸ ಬದುಕಿಗಾಗಿ ಏನು ಮಾಡಬೇಕು? ಎಂದು ಪ್ರಶ್ನಿಸುವವರಿಗೆ ಒಂದು ಸುಂದರ ಕಥೆ ಹೇಳಿದ್ದಾರೆ. ಆ ಕಥೆ ಹೀಗಿದೆ -–
     "ಅಪರಾಧಿಯೊಬ್ಬ ಒಂದು ರಾತ್ರಿ ಬಂದು ಜೀಸಸ್‍ರನ್ನು ಭೇಟಿಯಾದ. ಹೊಸ ಬದುಕು ಪಡೆಯಬೇಕಾದರೆ ಏನು ಮಾಡಬೇಕು? ಎಂಬುದು ಆತನ ಪ್ರಶ್ನೆಯಾಗಿತ್ತು. ಆದರೆ ಜೀಸಸ್‍ರಿಗೆ ಏನು ಮಾಡಬಾರದು ಎನ್ನುವುದರತ್ತ ಗಮನವಿತ್ತಲ್ಲ, ಹೀಗಾಗಿ ಅವರು "ನಿಕೋಡಾಮಸ್, ನೀನು ಸುಳ್ಳು ಹೇಳಬಾರದು, ನಿಕೋಡಾಮಸ್ ನೀನು ಮೋಸ ಮಾಡಬಾರದು, ನಿಕೋಡಾಮಸ್ ನೀನು ವ್ಯಭಿಚಾರ ಮಾಡಬಾರದು, ನಿಕೋಡಾಮಸ್ ನೀನು ಸೆರೆ ಕುಡಿಯಬಾರದು" ಎಂದೆಲ್ಲ ಹೇಳಲಿಲ್ಲ. ಇವೆಲ್ಲವುಗಳ ಬದಲಾಗಿ ತೀರ ಭಿನ್ನವಾದ ಒಂದು ವಿಚಾರವನ್ನು ಜೀಸಸ್ ಹೇಳಿದರು "ನಿಕೋಡಾಮಸ್ Be born again" ಅಂದರೆ "ನೀವು ಪುನರ್ ಜನಿಸಬೇಕು" ಎಂದರ್ಥ.”


Thursday, January 8, 2015

ಗಾರುಡಿಗರಿಲ್ಲದ ಗಾಂಧೀನಗರ



ಪರಿಮಳದ ಬೆನ್ನು ಬೀಳಬೇಡಾ
ಲೋಕ ನಿನ್ನ ಕಾಯುತ್ತಿದೆ ಬೆವರ ಕಟ್ಟಿಕೊಂಡು
-      ಅಲ್ಲಾಗಿರಿರಾಜ
 
 ಬಹಳ ಹಿಂದಿನ ಮಾತು, ಬೆಂಗಳೂರಿನ ಗಾಂಧಿ ನಗರಕ್ಕೆ ಒಂಟಿಯಾಗಿ ಬೆರಗುಗಣ್ಣಿನಿಂದ ಎಲ್ಲವನ್ನೂ ನೋಡುತ್ತ ತಿರುಗಾಡಿದ ನೆನಪು. ಮೋಸದ ಗೆಳೆಯನೊಬ್ಬ ಪೋಸ್ಟರ್‍ಗಳನ್ನೇ ತೋರಿಸಿ ಪರಮಾತ್ಮನನ್ನೇ ಕೊಟ್ಟಿದ್ದೇನೆನ್ನುವ ಭ್ರಮೆ ಹುಟ್ಟಿಸಿ ಮರೆಯಾಗಿಬಿಡುತ್ತಿದ್ದ. ಈಗಲೂ ಹೀಗೆ ಮರೆಯಾಗಿದ್ದಾನೆ ತಲೆಮರೆಸಿಕೊಂಡು. ಮೃಷ್ಠಾನ್ನವೇ ಇರಲಿ ಅದು ಮೋಸದ ನೆರಳಿನಿಂದ ಮುಕ್ತವಾಗಿದ್ದರೆ ಮಾತ್ರ ತೊಟ್ಟು ರಕ್ತವಾಗುತ್ತದೆ.
ಈ ಗಾಂಧಿ ನಗರ ಆಗ ಗಂಧರ್ವ ಲೋಕ. ಹೋಟೆಲ್ ‘ಕನಿಷ್ಕ’ ಎಂದರೆ ಅದ್ಯಾವುದೋ ರಾಮಾಯಣ ಕಾಲದ ಕಿಷ್ಕಿಂದೆ ನೋಡಿದ ಸಂಭ್ರಮ. ಹೆಜ್ಜೆ-ಹೆಜ್ಜೆಗೂ ಡಿಸ್ಟ್ರಿಬ್ಯುಟರ್ಸ್, ಕಂಬೈನ್ಸ್, ಎಂಟರ್‍ಪ್ರೈಸಸ್ ಏನೆಲ್ಲ. ಅಬ್ಬಾ! ಲೋಕವೆ. ಈಗ ಮಧ್ಯಾಹ್ನ ಬೇಸರವಾದಾಗಲೆಲ್ಲ ಅತ್ತಲಿಂದ ಕಲಾವಿದ ಗೆಳೆಯ ಸುಭಾಷ, ಇತ್ತ ಮಹಾರಾಣಿ ಕಾಲೇಜಿನಿಂದ ಒಂದಿಷ್ಟು ವೃತ್ತಿ ಬಾಂಧವರು ವಾರದಲ್ಲಿ ಕನಿಷ್ಠ ಮೂರು ಬಾರಿಯಾದರೂ ಈ ಕನಿಷ್ಕದಲ್ಲಿ ಕುಳಿತು ಹುಳಿತೇಗು ಬರುವಷ್ಟು ಕಾಫಿ ಖಾಲಿ ಮಾಡುತ್ತೇವೆ. ಆದರೆ ಕನಿಷ್ಕ ಕಾಡುವುದೇ ಇಲ್ಲ. ಚಿತ್ರದುರ್ಗದ ಪರಮಾಪ್ತ ಗೆಳೆಯ ಜಿ.ಎನ್. ಮಲ್ಲಿಕಾರ್ಜುನ ಯಾವುದೇ ಸಂದರ್ಭದಲ್ಲಿ ಬಳಸಿಕೊಳ್ಳಲು ಕೋಣೆಯೊಂದನ್ನು ಈ ಕನಿಷ್ಕದಲ್ಲಿ ಕಾಯ್ದಿರಿಸಿದ್ದಾರೆ. ಆದರೆ ಕಾಲಿಡುವಷ್ಟೂ ವೇಳೆ ಇಲ್ಲ. 
ಕಾರಣವಿಷ್ಟೆ ಈ ಗಾಂಧಿ ನಗರ ಅಂದಿನ ನನ್ನ ಲೋಕವಲ್ಲ. ಗಾಂಧಿ ನಗರಕ್ಕೀಗ ಒಬ್ಬ ನಾಯಕನಿಲ್ಲ. ಇಡೀ ಚಿತ್ರರಂಗ ಚಾಡಿಕೋರರ ಚಾವಡಿಯಾಗಿ, ಜಾತಿ ಮತ್ತು ತೋಳ್ಬಲದ ಮೇಲೆ ಮೂರು ಗುಂಪಾಗಿ ಒಡೆದು ಮೂಲೆಗುಂಪಾಗುತ್ತಿದೆ. ಮನುಷ್ಯನಾಗಿರುವ ಒಬ್ಬ ಸಾಂಸ್ಕøತಿಕ ನಾಯಕನಿಲ್ಲ. ಹಿರಿಯರೆಲ್ಲ ನಾಚಿ ಹಿಂದೆ ಸರಿದಿದ್ದಾರೆ. ನಾಯಕಿಯರೆಲ್ಲ ರಾಜಕಾರಣಿಗಳ, ಎಸ್ಟೆಟ್ ನಾಯಕರ ಹಿತ್ತಲ ಮನೆ ಹೊಕ್ಕು ಸದ್ದಿಲ್ಲದಂತಾಗಿದ್ದಾರೆ. ಬಿಕೋ ಎನ್ನುವ ಇಂಥ ಗಾಂಧಿ ನಗರದ ‘ತನುಚಿತ್ರ’ ಆಫೀಸಿಗೆ ಹೋಗಬೇಕಾದ ಸಂದರ್ಭ. ಅಂದೇ ಡಾ|| ರಾಜಕುಮಾರ ಪ್ರಶಸ್ತಿಗೆ ಭಾಜನರಾದ ನಟ ಶ್ರೀನಾಥರ ಭೇಟ್ಟಿಯೂ ಕೂಡಾ.
ನಾನು, ನನ್ನ ಹೆಂಡತಿ, ಸಾ.ರಾ. ಗೋವಿಂದ ಅವರ ಮಗ ಅನೂಪನ ಹೊಸ ಚಿತ್ರ ‘ಡವ್’ದ ಟ್ರೇಲರ್ ನೋಡಬೇಕೆಂದು ಅವರ ಬಯಕೆ. ಆದರೆ ನನ್ನ ಮನೆ ಮತ್ತು ಮಡದಿ ಇಲ್ಲದೆ ನನಗ್ಯಾವ ಸಂಭ್ರಮಗಳೂ ಅಸಾಧ್ಯ ಎಂದು ನಮ್ರವಾಗಿ ತಿಳಿಸಿದಾಗ ಸಾ.ರಾ. ಗೋವಿಂದ ಇದುವರೆಗೆ ಯಾರಿಗೂ ತೋರಿಸದ ‘ಡವ್’ ಚಿತ್ರದ ಟ್ರೇಲರ್ ಮತ್ತು ಚಿತ್ರ ಗೀತೆಗಳ ಒಂದು ಸೆಟ್ ಸಿ.ಡಿಯನ್ನು ಮನೆಗೆ ಕಳುಹಿಸುವ ಸೌಜನ್ಯ ತೋರಿಸಿದರು. ಇನ್ನೂ ಬಿಡುಗಡೆಯಾಗದ ‘ಡವ್’ದ ಟ್ರೇಲರ್‍ನ್ನು ನಾನು ನೋಡಿ ಮರುದಿನ ಅವರ ವಿಶ್ವಾಸ ಮೂಲದ ‘ಸಂತೋಷ’ ಹೋಟೆಲ್‍ದ ಮಾಲೀಕರಿಗೆ ತಲುಪಿಸಿದೆ. 
   ಖುಷಿಯಾಗುತ್ತದೆ ಕೆಲವೊಮ್ಮೆ, ಈ ಗೋವಿಂದರಿಗೆ ಸಾಹಿತ್ಯ, ಶರಣ ಸಂಸ್ಕøತಿ ಮತ್ತು ವಿನಯವಂತರ ಬಗ್ಗೆ ದೊಡ್ಡ ಪ್ರೀತಿ ಇದೆ. ಈಗ ಅವರು ನನ್ನ ಗಾಂಧಿ ಮತ್ತು ಸಾಕಿಯರ ಅಭಿಮಾನಿ. ನಾನು ಅಕ್ಕ ಮಹಾದೇವಿಯ ಬಗ್ಗೆ ಮಾತನಾಡುತ್ತಿದ್ದರೆ. ಅವರ ಕಣ್ಣ ತುಂಬ ಕದಳಿಯ ಮಹಾ ಬೆರಗು.
ಹೊಸ ವರ್ಷದ ಬಾಗಿಲಲ್ಲಿಯೇ ಹಿರಿಯ ನಟ ರಾಜೇಶ ತಮಿಳಿನ ಚಿತ್ರ ಸಾಹಿತಿ ಕನ್‍ದಾಸನ್ ಕುರಿತು ಏನೆಲ್ಲ ಕಳುಹಿಸಿದ್ದಾರೆ. ಗೆಳೆಯ ಧರ್ಮದಾಸ್ ಹೈದ್ರಾಬಾದಿನಿಂದ ತನ್ನ ಅತ್ತೆ ಗಂಗೂಬಾಯಿ ಹಾನಗಲ್‍ರ ಸಂಗ್ರಹದಿಂದ ಎತ್ತಿ ಕುಮಾರ್ ಗಂಧರ್ವರು ಬಾಲಕರಾಗಿದ್ದಾಗ ಹಾಡಿದ್ದರ ವಿಡಿಯೋ ಕ್ಲಿಪಿಂಗ್ ಕಳುಹಿಸಿದ್ದಾರೆ. ಕಾಂತಾವರದ ‘ಅಲ್ಲಮಪ್ರಭು ಪೀಠ’ದ ಹಿರಿಯರಾದ ನಾ.ಮೊಗಸಾಲೆ ಓಶೋನನ್ನು ಹಂಚಿಕೊಳ್ಳಲು ಕರೆಯುತ್ತಿದ್ದಾರೆ.
ಹೊಸ ವರ್ಷದ ಹೆಬ್ಬಾಗಿಲಲ್ಲೇ ಮಾರ್ಚ ತಿಂಗಳವರೆಗಿನ ಜೋಳಿಗೆಯನ್ನು ತುಂಬಿಸಿಟ್ಟ ಗುರುರಾಯ ಈ ಜಂಗಮನ ಹಂಗು ಹರಿದುಕೊಂಡಿದ್ದಾನೆ. “ಅಗರ್ ಭಗವಾನ್ ದೇತಾ ಹೈ ತೊ ಛಪ್ಪರ್ ಫಾಡಕೆ ದೇತಾ ಹೈ” ಎಂಬ ಆತನ ಹೊಗಳಿಕೆಗೆ ಆತ ಪಾತ್ರನಾಗಿದ್ದಾನೆ. ಆದರೆ “Nothing will work unless you do” ಎಂಬ ವಿನಯದಲ್ಲಿ ಬಾಳಿ ನಾನು ಗುರಿಮುಟ್ಟಬೇಕಿದೆ.
 ಅಂದಹಾಗೆ, ಪ್ರೇಮಿಗಳ ದಿನ ಬಂತಲ್ಲ? ಪ್ರೀತಿಸಿ ಮದುವೆಯಾದ ನಾವು ಏನಾದರೂ ಜವಾಬ್ದಾರಿಯನ್ನು ನಿಭಾಯಿಸಬೇಡವೆ? ಕಾಯುತ್ತಿರಿ, ನಮ್ಮ ಏಳ್ಗೆಗಾಗಿ ನಿಮ್ಮ ದೇವರಲ್ಲಿ ನಮಗಾಗಿ ಒಂದು ಪ್ರಾರ್ಥನೆ ಸಲ್ಲಿಸುತ್ತಿರಿ.

Thursday, January 1, 2015

‘ಅವಳು’, ಬದುಕು-ಬಂಧ, ಅಂದ-ಚಂದ



   ಈ ಹೊಸ ವರ್ಷ ಗುರುವಾರ(ವೈಕುಂಠ ಏಕಾದಶಿ)ದಂದು ಪ್ರಾರಂಭವಾಗುತ್ತಿರುವುದು ನನಗೆ ಏನೆಲ್ಲ ಯೋಚನೆಗೆ ಹಚ್ಚಿದೆ. ಪ್ರಾರಂಭ ಎಂಬ ಶಬ್ಧದ ನೆರಳಿನಲ್ಲಿಯೇ ಮುಕ್ತಾಯ ಎಂಬ ಪದವೂ ಇಣುಕು ಹಾಕುತ್ತಿರುತ್ತದೆ. ಹೀಗಾಗಿಯೇ 2015 ರ ಈ ಗುರುವಾರ ನನಗೆ ಖಾಸಗಿಯಾಗಿ ತುಂಬಾ ಔಚಿತ್ಯಪೂರ್ಣ. ಸಾಮಾನ್ಯವಾಗಿ ಗುರುವಾರವೆನ್ನುವುದೇ ನಾನು ಅತ್ಯಂತ ಅಂತರ್‍ಮುಖಿಯಾಗುವ, ನನ್ನ ದೈವದ ಆರಾಧನೆಗೆ ತೊಡಗುವ, ನಿರ್ಧಾರಗಳನ್ನು ಗಟ್ಟಿಗೊಳಿಸಿಕೊಳ್ಳುವ ಒಂದು ಮಹತ್ವದ ದಿನ.
  ಹಾಗಾದರೆ ವಾರದ ಎಲ್ಲಾ ದಿನಗಳಿಗಿಂತ ಭಿನ್ನವಾದುದೇನಾದರೂ ಈ ದಿನದೊಂದಿಗೆ ಇದೆಯೇ? ಎನ್ನುವ ಬುದ್ಧಿಯಾಧಾರಿತ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ. ಆದರೆ ಈ ಬದುಕು ಎನ್ನುವುದು ಮತ್ತೇನೂ ಅಲ್ಲ, ಹಲವು ಅಚಲ ನಂಬಿಕೆಗಳ ಮಹಾ ಸಂಗಮ ಎನ್ನುವುದಾದರೆ, ಅಂತಹ ಹಲವು ನಂಬಿಕೆಗಳಲ್ಲಿ ಒಂದು ಈ ನನ್ನ ಗುರುವಾರ. 
 

     ಹೆಣ್ಣ ಹೆಳಲಂತೆ, ತಲೆಯ ಮೇಲಿನ ಸಿಂಬೆಯಂತೆ, ಹಗ್ಗದಂತೆ, ಬದುಕನ್ನೂ ಆಗಾಗ ವಾರದಲ್ಲೊಮ್ಮೆಯಾದರೂ ಹುರಿಗೊಳಿಸಿಕೊಳ್ಳತ್ತಲೇ ಇರಬೇಕಾಗುತ್ತದೆ. ಇಲ್ಲದೇ ಹೋದರೆ ಅದರ ಬಂಧ ಸಡಿಲುಗೊಳ್ಳುತ್ತದೆ, ಅಂದ ಹಾಳಾಗುತ್ತದೆ. ಬದುಕಿನ ಇಂಥ ಬಂಧ ಮತ್ತು ಅಂದಗೊಳಿಸಿಕೊಳ್ಳುವ ಕಾರ್ಯಕ್ಕಾಗಿ ನಾನು ಕಾಯ್ದಿರಿಸಿಕೊಂಡ ದಿನವೇ ಗುರುವಾರ. ಆಗ ಬೇಡಿಕೊಳ್ಳುವುದಿಷ್ಟೆ-“ಗುರುವೇ, ಹಸಿವೆಯಿಂದ ಹುಲ್ಲು ಮೇಯಲು ಹೋದ ಹಸು-ಹಕ್ಕಿ-ದನಗಳೆಲ್ಲ ಗೂಡು ಸೇರಲಿ, ಅಂಬಿಗನ ಕೈ ಜಾರಿ ದಿಕ್ಕು ತಪ್ಪಿದ ದೋಣಿಗಳೆಲ್ಲ ನೆಮ್ಮದಿಯ ದಡ ಸೇರಲಿ, ಹಸುಳೆ-ಹೆಣ್ಣು-ಮುಪ್ಪಿನ ಮನಸುಗಳೆಲ್ಲ ಸುರಕ್ಷಿತ ಮರ್ಯಾದೆಯ ಮನೆ ಸೇರಲಿ, ಬಾಗಿ ಬದುಕುವ ಯುಕ್ತಿ ಇರಲಿ, ಹಿಡಿದ ಕೈ ಕೊನೆ ಹಾಯಿಸುವ ಶಕ್ತಿ ಬರಲಿ, ಈ ದೇಶದ ಸಂಸ್ಕøತಿಯ ಬಗೆಗೆ ಭಕ್ತಿ ಇರಲಿ”.
    ನನ್ನ ಪಾಲಿಗೆ ಈ ಪಾರ್ಥನೆಯೊಂದಿಗೆ, ಗುರುವಾರದಂದು 2015 ರ ವರ್ಷ ಪ್ರಾರಂಭವಾಗಿದೆ. ಈ ವರ್ಷ ಗುರುವಾರದಂದು ಪ್ರಾರಂಭವಾಗಿದೆ ಎನ್ನುವುದೇ ನನ್ನ ಇಡೀ ಕುಟುಂಬದ ಚೈತನ್ಯವನ್ನು ನೂರ್ಮಡಿಗೊಳಿಸಿದೆ. ಬಹಳಷ್ಟು ಉತ್ತಮ ಬೆಳವಣಿಗೆಗಳ ನಿರೀಕ್ಷೆಯಿದೆ. ಈ ಭಾಗ್ಯ ನಿಮ್ಮದೂ ಆಗಲಿ ಎನ್ನುವುದೇ ಭಗವಂತನಲ್ಲಿ ನನ್ನ ಕಳಕಳಿಯ ಪ್ರಾರ್ಥನೆ. 
     ಪಥಭ್ರಷ್ಟವಾಗಬಾರದು ಬದುಕು, ಅದರ ಪ್ರತಿ ಹೆಜ್ಜೆಯೂ ಬದುಕಿನ ಪ್ರತಿಕ್ಷಣವನ್ನು ಪೂಜ್ಯನೀಯಗೊಳಿಸಬೇಕು ಎಂಬ ಎಚ್ಚರಿಕೆಯನ್ನು ಹೇರಿಕೊಳ್ಳುವಗೊಸುಗ ಪ್ರತಿವರ್ಷದ ಕೊನೆಗೆ ಹೆತ್ತವರೊಂದಿಗೆ ಒಂದಿಷ್ಟು ಸುತ್ತಾಡುವುದು ನನ್ನ ವಾಡಿಕೆ. ಸಾಧ್ಯವಾದಷ್ಟು ಮೌನ, ತಪ್ಪು-ಒಪ್ಪುಗಳ ಮೆಲುಕು, ಎಲ್ಲ ಮನಸ್ಸಿನೊಳಗೆ ನಡೆಯುತ್ತಲೇ ಇರುತ್ತದೆ. ಈ ಬಾರಿಯ ನನ್ನ ಆಯ್ಕೆ ನನ್ನ ತಾಯಿಯ ತವರು. 
         ಅವಳು ನನ್ನ ಹೆರಿಗೆಗೂ ಮುಂಚೆ ಹರಕೆ ಹೊತ್ತ ಎಲ್ಲ ದೇವರು-ದೈವಗಳನ್ನು ಸಂದರ್ಶಿಸಿ ತಲೆಬಾಗಿಸಿ ಬಂದೆ. ಅದರೊಳಗೊಂದು ಅಪರೂಪದ ದೇವತೆ “ಚಂದ್ರವ್ವ ತಾಯಿ”. ದೂರದ ನಮ್ಮ ಅಜ್ಜಿಯೇ ಈ ದೇವಾಲಯದ ಪೂಜಾ-ಕೈಂಕರ್ಯಗಳನ್ನೆಲ್ಲ ಹಲವು ವರ್ಷಗಳಿಂದ ನಡೆಯಿಸಿಕೊಂಡು ಬಂದಿದ್ದು ಅವಳು ಮುಪ್ಪಿನಿಂದ ಜರ್ಜರಿತಳಾದ ದಿನಗಳಿಂದ ಈ ದೇವಾಲಯ ಹೆಚ್ಚ-ಕಡಿಮೆ ಮುಚ್ಚಿಯೇ ಹೋಗಿತ್ತು. ದೇವತೆ ಅನಾಥೆಯಾಗಿದ್ದಳು. ಖುಷಿಯಾಯಿತು, ಈಗ ಮತ್ತೆ “ಚಂದ್ರವ್ವ ತಾಯಿ”ಯ ಗುಡಿಯ ಬಾಗಿಲು ತೆರೆದು, ದೀಪ ಉರಿದು ಅವಳ ಚಿತ್ಕಳೆ ಹರಕೆಯ ತಾಯಂದಿರಿಗೆ ಲಭ್ಯವಾಗುತ್ತಿದೆ.
     ಇಲ್ಲಿಂದ ನೇರ ತೆಲಸಂಗ ಬಂಗಲೆಗೆ. ಅದೆಂದರೆ ನನಗೆ ಕೇದಿಗೆ, ಹಳೆಯ ಬ್ರಿಟಿಷ್ ಕಾಲದ ಬಂಗ್ಲೊ, ಮಲ್ಲಯ್ಯನ ಬನ ಹಾಗೂ ಆ ಆಲೆಮನೆ. ನಾನು ಚಿಕ್ಕವನಿದ್ದಾಗ ವರ್ಷದುದ್ದಕ್ಕೂ ಪುಕ್, ಪುಕ್, ಪುಕ್ ಎಂದು ಲಾಲಿಹಾಡುವ ಒಂದು ಆಲೆಮನೆ ಇಲ್ಲಿರುತ್ತಿತ್ತು. ಅದರ ಸದ್ದು ಸರ ರಾತ್ರಿವರೆಗೂ ಕೇಳುತ್ತ ನಮ್ಮನ್ನು ನೆಮ್ಮದಿಯ ನಿದ್ರೆಗೆ ಜಾರಿಸುತ್ತಿತ್ತು. ಅದು ಈಗ ಬಿದ್ದು ಹೋಗಿರಬಹುದು ಎಂಬ ಭಯದಲ್ಲಿದ್ದ ನನಗೆ, ಒಂದು ಕ್ಷಣ ಕಾರು ನಿಲ್ಲಿಸಿ ಯಾಕೆ ತಪಾಸಣೆ ಮಾಡಬಾರದು? ಎಂದು ಕುತೂಹಲ ಕೆರಳಿ ಹುಡುಕಿದರೆ, ಮುಳ್ಳು ಕಂಟಿಗಳ ಮಧ್ಯ ಕಳೆದುಹೋದ ಆಲೆಮನೆ ಸಿಕ್ಕೇ ಬಿಟ್ಟಿತು. ನನ್ನ ಬಾಲ್ಯ ಸಲುಹಿದ, ಲಾಲಿ ಹಾಡಿದ, ಹಾಲು-ಬೆಲ್ಲ ತಿನ್ನಿಸಿದ ತಾಯಿಯದು. ಎಂಥ ಖುಷಿ ಅಂತೀರಾ. 
       ಅಂದಹಾಗೆ, ತೆಲಸಂಗದ ನನ್ನ ಅಜ್ಜಿಯ ಮನೆಗೆ ದೊಡ್ಡಮನೆ ಎಂದೇ ಕರೆದು ವಾಡಿಕೆ. ಮಾತಿಗೆ ತಪ್ಪದ ಮನುಷ್ಯರೆಲ್ಲರೂ ಬಾಳಿ ಬದುಕಿದ ಮನೆ. ಈಗ ಆ ದೊಡ್ಡ ಮನೆಯ ಮುಂದೆ ನನ್ನ ಪುಟ್ಟ ಮಗಳ ಗೆಜ್ಜೆ ಸದ್ದಿನ ಕೆಲವು ಗಂಟೆ.
     ಕಳೆದುಹೋದ 2014 ರ ಡಿಸೆಂಬರ್ ತಿಂಗಳ 24 ರಿಂದ 31 ರ ವರೆಗೂ ನಿರಂತರ ಚಟುವಟಿಕೆಗಳು. ಜಮಖಂಡಿಯ ಜನಪದ ಕಲಾ ಮಹೋತ್ಸವ ಮಗಿಸಿಕೊಂಡು ನಾನು ಹೋದದ್ದು ‘ಗಡಿನಾಡ ಕಹಳೆ’ ಪತ್ರಿಕೆಯ ಬಿಡುಗಡೆ ಸಮಾರಂಭದ ಪೂರ್ವಭಾವಿ ಸಭೆಗಾಗಿ. ಈ ಮಾರ್ಗ ಮಧ್ಯದಲ್ಲಿ ಸಿಕ್ಕವರು ಕರ್ನಾಟಕದ ಕೃಷ್ಣಾ ತೀರದ ಅಭಿಜಾತ ಕಲೆಯಾದ “ಪಾರಿಜಾತ”ದ ಅತ್ಯಂತ ಹಿರಿಯ ಮತ್ತು ಕೊನೆಯ ಕೊಂಡಿಯಾದ ಕಲಾವಿದ ಶ್ರೀ ವಿಠಲರಾವ್ ಟಕ್ಕಳಕಿ.
        ನಾಯಿದ ಜನಾಂಗದ 89ರ ವಯಸ್ಸಿನ ಈ ಹಿರಿಯ ಹೋದ ವರ್ಷ ತೀರಿ ಹೋದ ನಮ್ಮ ದೊಡ್ಡಪ್ಪನ ಗುರು, ನಿವ್ರ್ಯಸನಿ. ಪಾರಿಜಾತವನ್ನು ಮೈಕ್ ಇಲ್ಲದೆ, ಲೈಟ್ ಇಲ್ಲದೇ ಇದ್ದ ದಿನಗಳಲ್ಲಿ ಎರಡು ದಿನಗಳವರೆಗೆ ಪ್ರದರ್ಶಿಸಿದ ನಟಶ್ರೇಷ್ಟ. ಇಂದಿಗೂ ಲೀಟರ್‍ಗಳಷ್ಟು ಹಾಲು ಕುಡಿಯಬಲ್ಲರು. ಪುರಸ್ಕಾರ, ಪ್ರಶಸ್ತಿ, ಪದವಿಗಳಿಗೆ ಸೊಪ್ಪು ಹಾಕದೇ ತಮ್ಮ ಸುಂದರ 15 ಎಕರೆಗಳ ತೋಟದಲ್ಲಿ ದೊಡ್ಡ ಕುಟುಂಬದೊಂದಿಗೆ ಬಾಳುತ್ತಿರುವ ಕೃಷ್ಣಸಂಸಾರಿ. ಅವರೊಂದಿಗೆ ನನ್ನ ತಂದೆಯನ್ನು ಸೇರಿಸಿ ಒಂದು ಇಡೀ ಸಂಜೆಯನ್ನು ಸಂಭ್ರಮಿಸಿದೆ.
     ಇಲ್ಲಿಂದ ನೇರ ಖೋಜನವಾಡಿಗೆ. ನಮ್ಮ ಲಕ್ಷ್ಮಣನ ಸಿಂಧೂರಿನಿಂದ ಕೂಗಳತೆಯಲ್ಲಿರುವ ಜತ್ತ ತಾಲೂಕಿನ ಪುಟ್ಟ ಹಳ್ಳಿ. ಸುತ್ತಲೂ ಎಲೆ-ಬಾಳೆ-ದ್ರಾಕ್ಷಿ-ದಾಳಿಂಬೆ ತೋಟಗಳುಳ್ಳ ತಣ್ಣನೆಯ ಊರು. ‘ಖೋಜನವಾಡಿ’ ಹೆಸರೇ ಮೋಜಿನದು. ಒಂದು ಕಾಲಕ್ಕೆ ಅದ್ಯಾವ ಜಗತ್ಪ್ರಸಿದ್ಧ ‘ಖೋಜಾ’ ಇಲ್ಲಿ ವಾಸವಾಗಿದ್ದನೋ, ಇದು ಖೋಜನವಾಡಿಯಾಯಿತು. ಅಲ್ಲಿ ನಮ್ಮ ಮಠಪತಿ ಮನೆತನದ ಅತ್ಯಂತ ಹಿರಿಯ ಜೀವ, ಹಣ್ಣು ಹಾಗಲಕಾಯಿಯಂಥ ಹೆಣ್ಣು. ವಯಸ್ಸು ನೂರು. ಈಗ ಸ್ವಲ್ಪ ಮರುಳು ಮರುಳಾಗಿ ಮಾತಾಡುತ್ತಾಳೆ. ಎಂದೇ ಭೇಟಿಯಾದರೂ ಸಾವಿರ ವರ್ಷ ಇವಳೊಂದಿಗಿದ್ದೆ ಎನ್ನುವ ಭಾವ ತರಿಸುವ ಜೀವ ಅದು. ಇವಳು ಸಿಕ್ಕರೆ ಸಾಕು, ನಾನು ಮಾಡುವ ಒಂದೇ ಕೆಲಸ ಸುಮ್ಮನೆ ಅವಳನ್ನು ಅವಲತ್ತುಕೊಂಡು ಮಲಗಿ ಬಿಡುವುದು. ಅವಳ ಸ್ಪರ್ಶದಿಂದ ಮರುಜನ್ಮ ತಾಳಿದ ಸುಖಪಡುವುದು. 
   ಆನಂತರ ಒಂದು ರಾತ್ರಿ ತಂದೆಯೊಂದಿಗೆ ‘ಜೋಳಿಗೆ’ಯಲ್ಲಿ. ಯಾವ ನೆಲದಲ್ಲಿ ಅವರು ತಮ್ಮ ನಲವತ್ತು ವರ್ಷಗಳ ಸೇವೆಯ ಬದುಕನ್ನು ಕಳೆದೂ ಬೇರುಗಡಿತರಾಗಿದ್ದರೋ, ಅದೇ ನೆಲದಲ್ಲಿ ಈಗ ಅವರಿಗೆ ನೆಮ್ಮದಿಯ ಉಸಿರು. ತಮ್ಮಂತ್ಯಕ್ಕೆ ಇಲ್ಲೊಂದಿಷ್ಟು ನೆಲೆ ಸಿಕ್ಕಿದೆ ಎಂಬ ಭರವಸೆ. ಬಹುತೇಕ ಅವರಿಗೆ ಈ ಕಟ್ಟಡದ ರಚನೆ ಬಹಳವಾಗಿ ಇಷ್ಟವಾಯಿತು. ಆದರೆ ಹಿಡಿದ ದಾರಿಯನ್ನು ಕೊನೆ ಹಾಯಿಸಲು ನನಗೆ ಬಹಳ ಹಿಂಸೆ-ಕಷ್ಟವಾಯಿತು. ಈಗ ನಾನು ನಿರಾಳ, ಉರುಳಿಹೋದ ವರ್ಷದಂತೆ. 
        28 ಡಿಸೆಂಬರ್, ಸವದತ್ತಿಯಲ್ಲಿ ನಾನು ಕೃತಿಯೊಂದನ್ನು (ಹೃದಯ ಕೃಷಿ, ವೈ.ಎಂ.ಯಾಕೊಳ್ಳಿ) ಲೋಕಾರ್ಪಣೆ ಮಾಡಿ, ಮಾತನಾಡಬೇಕಿತ್ತು. ಇದೇ ದಿನ ಬೆಳಗಾವಿಯ ಶ್ರೀ ಬಸವರಾಜ ಜಗಜಿಂಪಿ, ಅವರಿಗೆ ‘ಚೆನ್ನಶ್ರೀ’ ಪ್ರಶಸ್ತಿ ಪ್ರಧಾನ ಸಮಾರಂಭ. ನನ್ನೊಂದಿಗೆ ಅನೇಕ ಹಿರಿಯ ನ್ಯಾಯಾಧೀಶರು, ಧಾರವಾಡದ ಕರ್ನಾಟಕ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶ್ರೀ.ಲಿಂಗರಾಜ ಅಂಗಡಿ, ಶಾಸಕ ಮಾಮನಿ, ಮಠಾಧೀಶರು ಹಾಗೂ ಜನರಿಂದ ಕಿಕ್ಕಿರಿದ ಸಭಾಂಗಣ, ಪ್ರೀತಿಯ ಆರ್ಶೀವಾದ. 
          ಹಗಲು-ರಾತ್ರಿ ಎನ್ನದೆ ಹೀಗೆ ಒಂದು ವಾರ, 2800 ಕಿಲೋಮಿಟರ್‍ಗಳ, ಏಳು ಜಿಲ್ಲೆ ಮತ್ತು ಎರಡು ರಾಜ್ಯಗಳ ಸುತ್ತಲಿನ ನನ್ನ ಡ್ರೈವಿಂಗ್, ದೇಹಕ್ಕೆ ಎಲ್ಲಿಲ್ಲದ ದಣಿವು. ಅಲ್ಲಲ್ಲಿ ಭಾಷಣಗಳು. ಸೋತು ದುರ್ಗದಲ್ಲಿ ಮಲಗಿಬಿಟ್ಟೆ. ಒಂದೇ ತಾಸು, ಆಫೀಸಿನ ಕಾರ್ಯಭಾರ ನೆನಪಾಗಿ ಮತ್ತೆ ಡ್ರೈವಿಂಗ್, ಊಹೂಂ, ಒಪ್ಪಲಿಲ್ಲ ದೇಹ ಮತ್ತೆ ತುಮಕೂರಲ್ಲಿ ಮೂರು ಗಂಟೆ ನಿದ್ರೆ. ಬೆಂಗಳೂರಿಗೆ ಬಂದಾಗ, ಬೆಳಗಿನ 10.30. ಹೆಣಭಾರ ಕೆಲಸ ಬಿದ್ದಿದ್ದರೂ ಆಫೀಸಿಗೆ ಹೋಗಲು ಇಬ್ಬರಿಗೂ ಮನಸ್ಸಿಲ್ಲ, ಭಂಡ ಧೈರ್ಯ, 2014ರ ದೀರ್ಘ ನೆಮ್ಮದಿಯ ನಿದ್ರೆ.
         

          ವರ್ಷ ಹೊಸದೋ! ಗೊತ್ತಿಲ್ಲ ನನಗೆ ನಿಮಗೆ ಶುಭವಾಗಲಿ.