Total Pageviews

Friday, September 28, 2012

ಗಣೇಶನ ನೆಪ:ಕಿಟ್ಟು ಮನೆ


ಹಿಂದೊಮ್ಮೊ ಗಾಂಧಿಯ ನೆಪದಲ್ಲಿ ಸೇರಿದ್ದ ನಾವು ಈಗ ಗಣೇಶನ ನೆಪದಲ್ಲಿ ಸೇರೋಣ ಎಂದು ಪ್ರೀತಿಯ ಫರ್ಮಾನ ಹೊರಡಿಸಿದವರು ಗುರುಗಳಾದ ಚಂಪಾ. ಆಜ್ಞೆಯಂತೆ ಕಲಹ ಭಯಂಕರರೆಲ್ಲ ಬೆಂಗಳೂರಿನ ಕಿಟ್ಟು ಮನೆಯಲ್ಲಿ ದಿನಾಂಕ ೧೯/೦೯/೧೨ ರಂದು ಸರಿಯಾಗಿ ಗಣೇಶನನ್ನು ಪ್ರತಿಷ್ಟಾಪಿಸುವ ವೇಳೆಗೆ ಸೇರಿಕೊಂಡೆವು. ಅಂದಹಾಗೆ ಈ ಕಿಟ್ಟು ಮನೆ ಎಂದರೇನು ಮೊದಲು ಹೇಳಿಬಿಡುತ್ತೇನೆ. ನವೋದಯದವರ ಗೆಳೆಯರ ಬಳಗ, ಗೋಕಾಕರ ನವ್ಯದ ಕಮಲಕುಂಜ ಹೀಗೆ ಇನ್ನ್ಯಾವುದೇ ವೇದಿಕೆಗಳಿದ್ದರೆ ಅಂಥವುಗಳ ಪ್ರತಿಬಿಂಬ ಈ ಕಿಟ್ಟು ಮನೆ. ಇದೊಂದು ವೇದಿಕೆ ಪುಸ್ತಕ ಬಿಡುಗಡೆಯಿಂದ ಹಿಡಿದು ಪುಣ್ಯತಿಥಿಯವರೆಗೆ ಏನೆಲ್ಲವನ್ನೂ ಆಚರಿಸಿಕೊಳ್ಳಬಹುದು. ರಾಷ್ಟ್ರ-ರಾಜ್ಯ ರಾಜಕಾರಣ, ಸಾಹಿತ್ಯ, ಸಂಸ್ಕೃತಿದಿಂದ ಹಿಡಿದು ಮ್ಯಾಜಿಸ್ಟಿಕ್‌ನಲ್ಲಿ ಬಂದ ಹೊಸ ಸಿನಿಮಾದವರೆಗೆ ಏನೆಲ್ಲ ಮಾತಾಡಬಹುದು. ಸ್ಮಶಾನವಾಸಿ, ಪ್ರಳಯ ಭಯಂಕರ ಶಿವನಿಂದ ಹಿಡಿದು ಸಾಯಿಬಾಬಾರವರೆಗೆ ಯಾರೆಲ್ಲರನ್ನು ಜಾಲಾಡಬಹುದು. ನಿಯಮ ಒಂದೆ. ವಿಸ್ಕಿಯೋ, ವೈನೋ, ರಮ್ಮೋ ಅವರವರ ಶಕ್ಯತೆ ಮತ್ತು ಯೋಗ್ಯತೆಗನುಸಾರ ಹಿರುತ್ತಲೇ ಇರಬೇಕು. ಕೊನೆಗೆ ಕಿಟ್ಟು ಮನೆಯ ಪ್ರೀತಿಯ ಭೋಜನ ಸವಿಯಬೇಕು.
ಕಿಟ್ಟು ಮನೆ ಎಂದರೆ ಕೃಷ್ಣಮೂರ್ತಿ ರಾವ್ ಅವರ ಮನೆ. ಈ ವಿಶಾಲ ಕರ್ನಾಟಕದ ಹಸುಗೂಸಿನಂಥ ಈ ಮನುಷ್ಯ ಸಂಗೀತ, ಸಾಹಿತ್ಯ ಮತ್ತು ರಾಜಕಾರಣದ ದಿಗ್ಗಜರ ಸಲುಗೆಯನ್ನಿಟ್ಟುಕೊಂಡವರು. ಮೂವತ್ತು-ನಲವತ್ತು ವರ್ಷಗಳವರೆಗೆ ಅರಬ್ ರಾಷ್ಟ್ರಗಳಲ್ಲಿ ಇಂಗ್ಲೀಷ ಕಲಿಸುತ್ತಾ ಕಳೆದು ಹೋದ ಇವರನ್ನು ನಮಗೆ ದೊರಕಿಸಿಕೊಟ್ಟವರು ಚಂಪಾ. ಬೆಂಗಳೂರಿನ ಸಂಜಯ ನಗರದ ಸುರಭಿಯಲ್ಲಿ ವಾಸವಿರುವ ಕೃಷ್ಣಮೂರ್ತಿರಾವ್ ಎಂದಿಗೂ ಒಬ್ಬಂಟಿಗರಲ್ಲ. ಹೆಂಡತಿ ತಿರಿಹೋಗಿ ವರುಷಗಳೇ ಗತಿಸಿವೆ, ಮಕ್ಕಳು ವಿದೇಶಗಳಲ್ಲಿದ್ದಾರೆ, ಆದರೆ ಅವರ ನೆನಪುಗಳೊಂದಿಗೆ ನಮ್ಮನ್ನೆಲ್ಲ ಸೇರಿಸಿಕೊಂಡು ಒಂದು ಅವಿಭಕ್ತ ಸಂಸಾರವನ್ನೇ ಹೂಡಿದ ಈ ಮನೆಯೇ ನಮ್ಮ ‘ಕಿಟ್ಟು ಮನೆ’.
ನನಗೂ ಕಿಟ್ಟು ಮನೆಗಂತು ಅವಿನಾಭಾವ ಸಂಬಂಧ. ನನ್ನ ‘ಗಾಂಧಿ ಅಂತಿಮ ದಿನಗಳು’ ಪುಸ್ತಕವನ್ನು ಇಲ್ಲಿಯೆ ಬಿಡುಗಡೆ ಮಾಡಿದ್ದೇವು. ಗೆಳೆಯ ಗಿರಿರಾಜು ಅವರ ಮನೆ ‘ಕಾಲ ಕನಸು’ ಮತ್ತು ಈ ‘ಕಿಟ್ಟು ಮನೆ’ ಗೌಜಗದ ಗೂಡಾದ ಬೆಂಗಳೂರಿನಲ್ಲಿ ನಾನು ಕಂಡುಕೊಂಡ ನೆಮ್ಮದಿಯ ತಾಣಗಳು. ಸಂಗೀತ ಅದರಲ್ಲೂ ಹಿಂದುಸ್ತಾನಿ ಸಂಗೀತ ನನ್ನನ್ನು ಈ ‘ಕಿಟ್ಟು ಮನೆ’ಯೊಂದಿಗೆ ಇನ್ನೂ ಗಾಢವಾಗಿ ಬೆಸೆದು ಬಿಟ್ಟಿದೆ. ಕೃಷ್ಣಮೂರ್ತಿರಾವ್ ಪಂಡಿತ್ ತರಾನಾಥರ ಶಿಷ್ಯರಾದರೆ ನಾನು ಭಿಮಸೇನ ಜೋಶಿ ಮತ್ತು ಮೆಹದಿ ಹಸನರ ಗಾನಗಂಗೆಯಲ್ಲಿ ಮಿಂದೆದ್ದವನು. ಹೀಗಾಗಿ ಈ ಮಿಲನಗಳಿಗೆ ಬಹಳ ಅರ್ಥವಿದೆ ಎಂದುಕೊಂಡಿದ್ದೇನೆ. ಅಂದಹಾಗೆ ಈ ಗಣೇಶ ಚತುರ್ಥಿಯ ಕುರಿತು ನಾನು ನಿಮಗೆ ಹೇಳಬೇಕಿತ್ತು. ಇತ್ತಿಚಿಗಷ್ಟೆ ಕೆನಡಾದಿಂದ ಮರಳಿದ ಕೃಷ್ಣಮೂರ್ತಿರಾವ್ ನಮಗಾಗಿ ಒಂದಿಷ್ಟು ಸ್ಪೆಷಲ್ ಕ್ಯಾಪ್ಸಿಕಾರನ್‌ಗಳನ್ನ ಮತ್ತು ವಿಶೇಷ ಪೇಯಗಳನ್ನ ತಂದಿದ್ದರು. ಕಾಗೆಯಂತೆ ಬಳಗ ಕಟ್ಟಿಕೊಂಡು ಬಾಳುವ ಕೃಷ್ಣಮೂರ್ತಿರಾವ್ ಮತ್ತು ಚಂಪಾ ನಮ್ಮನ್ನೆಲ್ಲ ಸೇರಿಸಿದರು. ನಾನು ದೇವರಾಜ ಅರಸು ಮತ್ತು ಅವರ ಸಮಕಾಲೀನ ಅನೇಕ ಹಿರಿಯ ರಾಜಕಾರಣಿಗಳೊಂದಿಗೆ ಆತ್ಮೀಯ ಸಂಬಂಧವಿರಿಸಿಕೊಂಡ ಮಂಡ್ಯದ ಮಾಹಿಗೌಡ, ಕೆ.ಎಸ್.ಭಗವಾನ್, ನಾಗೇಶ, ಎಲ್.ಹನುಮಂತಯ್ಯ, ಪುಸ್ತಕ ಮನೆ ಹರಿಹರಪ್ರಿಯ ಹಾಗೂ ಕಣ್ವದ ರೂವಾರಿ ಗೆಳೆಯ ಎಮ್.ಆರ್.ಗಿರಿರಾಜು ಈ ಕೂಟದಲ್ಲಿದ್ದು ಆನಂದಿಸಿದ ರೀತಿಯನ್ನು ನೀವು ಗಮನಿಸಬೇಕೆ? ಈ ಚಿತ್ರಗಳನ್ನು ನೋಡಿ.  
  

No comments:

Post a Comment