Total Pageviews

Saturday, September 29, 2012

ಗಾಂಧಿವಾದವನ್ನಲ್ಲ, ಗಾಂಧಿಯನ್ನು ಓದಿ..


Dr.R G Mathapati's (RAGAM)"Gandhi:Antima Dinagalu

On the occasion of 
Gandhi Smaraka nidhi Awrad for the my "Gandhi-Anthima ksanagalu" for 2012-13. 



    ದು ಕಥೆಯಲ್ಲ. ಗಾಂಧಿಯ ಸತ್ಯವನ್ನು ಗುರಿಯಾಗಿಸಿಕೊಂಡು, ನಿಮ್ಮ ರೋಚಕತೆಯನ್ನು ಕೆದಕಲು ಹೊಸ ಸಾಲುಗಳಲ್ಲ ಇವು. ಇದೊಂದು ನಿತಾಂತ ಓದು. ೧೯೯೬ ರಲ್ಲಿ ನಾನು ಸಂಶೋಧನಾ ವಿಧ್ಯಾರ್ಥಿಯಾಗಿ ಭಾರತದ ಹೆಸರಾಂತ ಸಾಹಿತಿ, ಚಿತ್ರ ನಿರ್ದೇಶಕ ಖ್ವಾಜಾ ಅಹಮ್ಮದ್ ಅಬ್ಬಾಸರ ಸಾಹಿತ್ಯವನ್ನು ಓದಿಗಾಗಿ ಎತ್ತಿಕೊಂಡಂದಿನಿಂದ ಗಾಂಧಿ ಕುರಿತಾದ ಓದು ನನಗೆ ಅನಿವಾವಾಯಿತು. ಕಾರಣವಿಷ್ಟೇ, ದೇಶದ ಸ್ವತಂತ್ರದ ಆಚೆ ಈಚೆ ಇದ್ದ  ಒಟ್ಟು ಭಾರತೀಯ ಆಂಗ್ಲ ಸಾಹಿತ್ಯದ, ಸಾಹಿತಿಗಳ ಆಶಯಗಳು, ಬರಹದ ಉದ್ದೇಶಗಳು ರೂಪುಗೊಂಡಿದ್ದೇ ಈ ಗಾಂಧಿ ಯುಗದಲ್ಲಿ. ಆತನ  ಪ್ರಭಾವವಿಲ್ಲದ ಯಾವುದೇ ಬರಹಗಾರನನ್ನು, ಕೃತಿಯನ್ನು ಆ ಸಂದರ್ಭದಲ್ಲಿ ನಾವು ನೋಡುವುದೇ ಕಷ್ಟ. ಸೃಜನಶೀಲವಾಗಿ ಬದುಕಿದ್ದ ಗಾಂಧಿ, ಸೃಜನಶೀಲ ಸಾಹಿತ್ಯವನ್ನೇನೂ ಬರೆಯಲಿಲ್ಲ. ಆದರೆ ಆ ಕಾಲದ ಇಡೀ ಸೃಜನಶೀಲ ಸಾಹಿತ್ಯವನ್ನೆಲ್ಲಾ ಆತ ವ್ಯಾಪಿಸಿ ಬಿಟ್ಟ. ಹಾಗೆಯೇ ಕೆ ಎ ಅಬ್ಬಾಸರನ್ನು.
ಸಂಸಾರದೊಳಗೊಂದು ಸನ್ಯಾಸ, ಸನ್ಯಾಸಿಯಾಗಿ ರಾಷ್ಟ್ರ ರಾಜಕಾರಣದ ಒಂದು ಅಮಿತ ಸಂಸಾರ, ಇವುಗಳನ್ನು ನಿಭಾಯಿಸಲು ಪ್ರಾರ್ಥನೆ, ಯೋಗ, ಯಾತ್ರೆ, ಇವನದೆಲ್ಲವೂ ಸದ್ದಿಲ್ಲದ ದಾರಿ, ಸಾವಿಲ್ಲದ ಯೋಜನೆ, ಯೋಚನೆ. ಈತ ಸರಳ ಮನಸ್ಸಿನ ಸಾಮಾನ್ಯರಿಗೆ ಸುಲಿದ ಬಾಳೆ ಹಣ್ಣಿನಷ್ಟೇ ಸರಳ, ಕೂದಲು ಸೀಳುವವರಿಗೆ ಇವನೊಂದು ಕಗ್ಗ. ಒಂದು ಹಂತಕ್ಕೆ ನನಗನ್ನಿಸಿದೆ, ಮನಸ್ಸು ಮಾಗದವನಿಗೆ ಒಗ್ಗುವ ಮಾತಲ್ಲ ಗಾಂಧಿ. ಹ್ಞಾಂ, ಅಂದಹಾಗೆ ಗಾಂಧಿ ಮಾತೂ ಅಲ್ಲ ಬಿಡಿ. ಪ್ರಪಂಚದಲ್ಲಿ ಯಾವುದೇ ರೆಫರೆನ್ಸ್‌ಗಳನ್ನಿಟ್ಟುಕೊಳ್ಳದೇ  ಓದಬಹುದಾದ ಒಬ್ಬ ಸರಳ ಮನುಷ್ಯ ಗಾಂಧಿ. ಗಾಂಧಿ ವಾದವನ್ನೊದುವವರಿಗೆ ಗಾಂಧಿ ಅರ್ಥವಾಗುವುದಿಲ್ಲ.
ನಟಲ್‌ನಿಂದ ನೌಖಾಲಿಯವರೆಗೆ ಸಾಗಿದ ಗಾಂಧಿಯನ್ನೊಬ್ಬ ಮಹಾತ್ಮನನ್ನಾಗಿಯೋ, ರಾಜಕಾರಣಿಯನ್ನಾಗಿಯೋ ಓದಿದ ನಾವು, ಈ ದೇಶದ ಸಾಮಾನ್ಯರು ಅರ್ಥೈಸಿಕೊಂಡ ಗಾಂಧಿಯನ್ನು ಅರಿಯಲಿಲ್ಲವೇನೊ. ಒಂದು ಸಂಗತಿ ಕೇಳಿ- ಅಬ್ಬಾಸರ ಅಜ್ಜಿಯ ಹೆಸರು ಹಕ್ಕೂ, ಬರೀ ಗಾಂಧಿ ಎಂಬ ಪದ ಮಾತ್ರದಿಂದ ಈಕೆ ವೈರಾಗ್ಯ ಮೂರ್ತಿಯಾದವಳು. ತನ್ನ ಅಮೂಲ್ಯ ಆಭರಣಗಳನ್ನೆಲ್ಲಾ ದೇಶೊದ್ಧಾರಕ್ಕಾಗಿ ಈ ಗಾಂಧಿಯ ಜೋಳಿಗೆಗೆ ಸುರಿದು ಚರಕದ ದೀಕ್ಷೆ ಪಡೆದವಳು. ನಡು ಯೌವ್ವನದಲ್ಲಿ ನೂಲುತ್ತಾ ಮೀರಾಳಂತೆ ಗಾಂಧಿ ಫರಿಸಾಎಂದು ಪೂಜಿಸುತ್ತಾ, ಖಾದಿಯ ಖಫನ್‌ದಲ್ಲಿಯೇ ಇಹವನ್ನು ತ್ಯಜಿಸಿದವಳು. ಇದೆಲ್ಲಾ ಓದಿದಾಗ ತಟ್ಟನೆ ನನಗೆ ನೆನಪಾದದ್ದು ಟಾಲ್‌ಸ್ಟಾಯ್‌ನ ಮಾತು-ಶೃದ್ಧೆಯಿಂದಲೇ ಜೀವನ, ಶೃದ್ಧೆಯೇ ಜೀವನ.
ಗಾಂಧಿ ಕುರಿತಾದ ನನ್ನ ಓದಿನ ಮಿತಿಯೊಳಗೇ ಹೇಳಬೇಕೆಂದರೆ ಗಾಂಧಿ ಓದಿದ್ದು ಕಡಿಮೆ. ಆದರೆ ಅರ್ಥೈಸಿಕೊಂಡದ್ದು ಹೆಚ್ಚು. ಮತ್ತೊಂದಷ್ಟು ಓದಿದ್ದರೂ ಅದು ಆತನ ಆಗಾಗಿನ ಅವಶ್ಯಕತೆಗಳ ಹಿನ್ನಲೆಯಲ್ಲಿ. ಹಾಗೇಯೇ ಓದಿದೆಲ್ಲವನನು ಆತ ಹಂಚಿಯೂಬಿಟ್ಟ. ಬರಹದ ವಿಚಾರದಲ್ಲಿಯೂ ಅಷ್ಟೇ, ಕಾಲಾತೀತವಾಗಿ ಹಲವು ತಲೆಮಾರುಗಳಿಂದ ಬರಹದ ಒರೆಗತುತ್ತಾದ ಗಾಂಧಿ ಸಾಹಿತ್ಯ ಬರೆಯಲಿಲ್ಲ. ಆದರೆ ಆತ ಬರೆದಿಲ್ಲವೂ ಶತಮಾನಗಳು ಮೆಲಕು ಹಾಕಬೇಕಾದ ಸಾಹಿತ್ಯವಾಯಿತು. ಬಹುತೇಕ ಗಾಂಧಿಯಷ್ಟು ಕಡಿಮೆ ಓದಿದ ರಾಜಕೀಯ ನೇತಾರು ವಿರಳ. ಹಾಗೆಯೇ ಗಾಂಧಿಯಂಥ ಮನುಷ್ಯನೂ ವಿರಳ.
ಗಾಂಧಿ ನಮಗೆ ಏನು ಹೇಳುತ್ತಾನೆ? ಎಂಬ ಒಂದು ಸಣ್ಣ ಕುತೂಹಲ ನನ್ನನ್ನು ಹದಿನಾಲ್ಕು ವರುಷ ಆತನ ಬೆನ್ನು ಬೀಳುವಂತೆ ಮಾಡಿತು. ಇದೊಂದು ರೀತಿ ಗಾಂಧಿಯೊಂದಿಗಿನ ನನ್ನ ವನವಾಸ ಅಥವಾ ಗಾಂಧಿವಾಸ. ಅಂತಿಮವಾಗಿ ತಿಳಿದಿದ್ದಿಷ್ಟೇ, ಜನಮುಖಿಯಾಗಬೇಕಾದ ಬಾಳಿಗೆ ಪಾಂಡಿತ್ಯದ ಅವಶ್ಯಕತೆಯಿಲ್ಲ. ಮನುಷ್ಯನ ಕ್ರಿಯಾ ಸರಳತೆ ಮಾತನಾಡಿದಷ್ಟು ಸ್ಪುಟವಾಗಿ ಪಾಂಡಿತ್ಯ ಮಾತನಾಡುವುದಿಲ್ಲ. ಸಂತಸದ ಸಂಗತಿಯೇ ಇದು. ಈ ಗಾಂಧಿ ಪಂಡಿತನಾಗಿರಲಿಲ್ಲ, ಹಟಮಾರಿ ಮನುಷ್ಯನಾಗಿದ್ದ. ಕಸ ಗುಡಿಸುತ್ತಾ, ಜಗಳಾಡುತ್ತಾ, ಉಪವಾಸ ಬೀಳುತ್ತಾ ಆತ ತನ್ನೊಳಗಿನದನ್ನು ಸ್ವಚ್ಛಗೊಳಿಸಿಕೊಳ್ಳಲು ಪ್ರಯತ್ನಿಸಿದಷ್ಟೂ ಹೊರಗಣವರಿಗೆ ಮಹಾತ್ಮನಾದ. ಸೃಷ್ಠಿಯ ವೈಚಿತ್ರವೇ ಇದಲ್ಲವೇ? ಮರದ ಬೇರು ನೆಲದೊಳಗಿಳಿದಷ್ಟೂ ಅದರ ಹೊರಗಣ ಸೊಬಗು ಹೆಚ್ಚಾಗುತ್ತದೆ. ಹೆಮ್ಮರದ ಬೇರುಗಳಂತೆ ಇಳಿದ ಈ ಗಾಂಧಿ ಪ್ರಪಂಚದ ಸಂವೇದನೆಗಳೊಂದಿಗೆ.
ಗಾಂಧಿ ಕುರಿತಾದ ನನ್ನ ಓದನ್ನು ಅವನ ಬದುಕಿನ ಓಂದು ಘಟ್ಟಕ್ಕೆ ಸೀಮಿತಗೊಳಿಸಿಕೊಂಡಿರುವುದರಿಂದ ಈ ಕೃತಿಗೆ ಗಾಂಧಿ: ಅಂತಿಮ ಕ್ಷಣಗಳುಎಂದು ಕರೆದಿದ್ದೇನೆ. ಈ ದೇಶದ ರಾಜಕೀಯ ಪರ್ವ, ಗಾಂಧಿಯ ಬದುಕಿನ ಪರ್ವವಾಗಿರುವುದು ಒಂದು ಆಕಸ್ಮಿಕ ಮತ್ತು ಆಶ್ಚರ್ಯಕರ ಬೆಳವಣಿಗೆ. ಗಾಂಧಿ ಕೊಲೆಗೆ ಕೆಲವೇ ಅವಧಿ ಮುನ್ನ ರಾಜಕೀಯವಾಗಿ ಸ್ವತಂತ್ರವಾಗುವ ಈ ದೇಶ ಗಾಂಧಿಯ ಕೊಲೆಯೊಂದಿಗೆ ಇನೊಂದು ರೀತಿಯ ಪರಾಧಿನತೆಗೆ ಒಳಗಾಗುತ್ತದೆ. ಸರಿ, ಇದೆಲ್ಲವೂ ಸಾಕಷ್ಟು ಚರ್ಚಿಸಿಯಾಗಿದೆ. ನಿಮ್ಮೊಂದಿಗೆ ಹಂಚಿಕೊಳ್ಳಬೆಕಾದುದಿಷ್ಟೇ, ಬಾಳಿನ ಮುಸ್ಸಂಜೆಯಲ್ಲಿ,ಮಾಗಿದ ಮನಸ್ಸೊಂದು ಕ್ರಿಯಾಶೀಲವಾಗಿದ್ದ ರೀತಿಯನ್ನು ತಿಳಿಯುದಷ್ಟೇ ನನ್ನ ಬರಹದ ಕುತೂಹಲ ಮತ್ತು ಗುರಿ. ಈ ಕುತೂಹಲದ ಮೊದಲ ಭಾಗ ಈಗ ನಿಮ್ಮ ಕೈಯಲ್ಲಿದೆ.

                                                              ರಾಗಂ

No comments:

Post a Comment