Total Pageviews

Sunday, September 30, 2012

ಗಾಂಧಿ : ಜೀವ ಯಾವಾಗಲೂ ಜಂಗಮ


                                               
ದಾವಣಗೆರೆಯ ಸಮಸ್ತ ಸಾಹಿತ್ಯ ಆಸಕ್ತರೆ, ವೇದಿಕೆಯ ಮೇಲಿರುವ ಹಿರಿಯರೆ, ಅಕ್ಟೋಬರ್ ೦೨ ರ ಈ ಕಾರ್ಯಕ್ರಮಕ್ಕೆ ನನ್ನನ್ನು ತಮ್ಮ ಮುಂದೆ ತಂದು ನಿಲ್ಲಿಸಲು ಪ್ರಯತ್ನಿಸಿದ ಅರುಣ್‌ಕುಮಾರ್ ರವರೆ, ಸನ್ಮಾನ್ಯ ಶ್ರೀ ಎಸ್.ಎಸ್.ಪಟೇಲ ರವರೆ, ನ್ಯಾಯಾಧೀಶರುಗಳೆ, ವಕೀಲ ಬಂಧುಗಳೆ, ಪ್ರಥಮಥಃ ಕಾರ್ಯಕ್ರಮದಲ್ಲಿ ಉಪಸ್ಥಿತನಿಲ್ಲದಿರುವುದಕ್ಕೆ ತಮ್ಮೆಲ್ಲರ ಕ್ಷಮೆ ಕೇಳುತ್ತೇನೆ. ಇದೇ ದಿನ,  ಇದೇ ಸಮಯದಲ್ಲಿ ಬೆಂಗಳೂರಿನ ಗಾಂಧಿ ಭವನದಲ್ಲಿ, ಈ ಕ್ಷಣದಲ್ಲಿ ನೀವೆಲ್ಲರು ಓದುತ್ತಿರುವ “ಗಾಂಧಿ ಅಂತಿಮ ದಿನಗಳು” ಕೃತಿಗಾಗಿ, ‘ಗಾಂಧಿ ಸ್ಮಾರಕ ನಿಧಿ ಪ್ರತಿಷ್ಠಾನದಿಂದ’ ಮಾನ್ಯ ಮುಖ್ಯಮಂತ್ರಿಗಳಿಂದ ನಾನು ಪ್ರಶಸ್ತಿಯನ್ನು ಸ್ವಿಕರಿಸಬೇಕು ಎನ್ನುವ ಆದೇಶ ನನಗೆ ಬಂದಿರುವುದರಿಂದ, ಹಿರಿಯರಾದ ಪಾಟೀಲ ಪುಟ್ಟಪ್ಪ, ಶ್ರೀ ಹೊ.ಶ್ರೀನಿವಾಸಯ್ಯ ಹಾಗೂ ಇತರ ಗಣ್ಯರು ಇಳಿವಯಸ್ಸು ಸಹಜವಾದ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಳ್ಳದೆ ಇಲ್ಲಿ ಬರುತ್ತಿರುವುದರಿಂದ ನಿಮ್ಮೆಲ್ಲರ ಅನುಮತಿಯೊಂದಿಗೆ ನಾನು ಬೆಂಗಳೂರಿನ ಕಾರ್ಯಕ್ರಮದಲ್ಲಿದ್ದೇನೆ.
        ರಾಜ್ಯದ ಎರಡು ಮಹತ್ವದ ನಗರಗಳಲ್ಲಿ(ಬೆಂಗಳೂರು, ದಾವಣಗೆರೆ) ಒಂದು ಕಡೆ ಎಸ್.ಎಸ್.ಪಟೇಲ್ ಅವರಂಥಾ ಹಿರಿಯ ಚಿಂತಕರು, ಮತ್ತೊಂದೆಡೆ ಪಾಟೀಲ ಪುಟ್ಟಪ್ಪನವರಂಥ ಹಿರಿಯ ಹೋರಾಟಗಾರರು. ಒಂದೆಡೆ ನನ್ನ “ಗಾಂಧಿ ಅಂತಿಮ ದಿನಗಳು” ಕುರಿತು ಚರ್ಚೆ, ಇನ್ನೊಂದೆಡೆ ಅದೇ ಕೃತಿಗೆ ಪ್ರಶಸ್ತಿ, ಇಂಥ ಒಂದು ಸಂದರ್ಭ ಏಕಕಾಲಕ್ಕೆ ಒಬ್ಬ ಲೇಖಕ, ಒಂದು ಕೃತಿ ಕುರಿತು ಹಿಂದೆಂದು ಘಟಿಸಿರಲಿಕ್ಕಿಲ್ಲ. ಒಬ್ಬ ಲೇಖಕ ಮತ್ತು ಆತನ ಕೃತಿಗೆ ಇದಕ್ಕಿಂತ ಮಿಗಿಲಾದ ಮರ್ಯಾದೆ ಇಲ್ಲ. ಇದು ಜನರ ಕಾರಣ, ಗಾಂಧಿ ಕಾರಣ, ನೆಮ್ಮೆಲ್ಲರ ಕಾರಣದಿಂದಾಗಿಯೆ ಸಾಧ್ಯವಾಗಿದೆ ಎಂದು ಪ್ರಾಂಜಲವಾಗಿ ಒಪ್ಪಿಕೊಳ್ಳುತ್ತೇನೆ. ನನ್ನ ಮೇಲಿನ ಈ ಪ್ರೀತಿ ಮತ್ತು ಅಭಿಮಾನಕ್ಕೆ ತಮಗೆ ಋಣಿಯಾಗಿದ್ದೇನೆ. ಮತ್ತು ಈ ಕ್ಷಣದಲ್ಲಿ ವೇದಿಕೆಯ ಮೇಲೆ, ಸಭಾಂಗಣದ ಹೊರಗೆ ಚರ್ಚೆಯಲ್ಲಿರುವ, ಇಂದು ವಿಶೇಷವಾಗಿ ಮಾರಾಟಕ್ಕಿರುವ ನನ್ನ “ಗಾಂಧಿ ಅಂತಿಮ ದಿನಗಳು”ನ್ನು ಕೊಂಡುಕೊಂಡು ಓದಿ, ಸೃಜನಶೀಲತೆಯನ್ನು ಪ್ರೋತ್ಸಾಹಿಸಿ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
        ಎಲ್ಲ ವಾದಗಳು ವ್ಯಕ್ತಿಯನ್ನು ಶಕ್ತಿಯನ್ನಾಗಿಯೋ, ದೇವರನ್ನಾಗಿಯೋ ಅಥವಾ ಅಸಾಮಾನ್ಯನನ್ನಾಗಿಯೋ ಆರಾಧಿಸಲು ಹವಣಿಸುತ್ತವೆ. ಜೀವ ಯಾವಾಗಲೂ ಜಂಗಮ. ಅದು ವಾದವಾದಾಗ  ಸ್ಥಾವರದ ವಿಲಕ್ಷಣತೆಯನ್ನು ಪಡೆದುಕೊಳ್ಳುತ್ತದೆ. ವಾದ, ಬುದ್ಧಿಯ ಪಾರಮ್ಯತೆಯನ್ನು ತೋರಿಸುತ್ತವೆ. ವ್ಯಕ್ತಿಯನ್ನು ಮನುಷ್ಯರ ಲೋಕದಿಂದ ಅತೀತವಾದ ನೋಡುವ ವಾದ, ಜೀವದ ತಳಮಳ ಮತ್ತು ತಲ್ಲಣಗಳನ್ನು ಕುರಿತು ಮಾತನಾಡುವುದಿಲ್ಲ. ಅಂತೆಯೇ ನನ್ನ ಗಾಂಧಿ: ಅಂತಿಮ ದಿನಗಳು ಕೃತಿಯುದ್ದಕ್ಕೂ ಗಾಂಧಿ, ಮಹಾತ್ಮನಲ್ಲದ, ಸಂತನಲ್ಲದ, ರಾಜಕಾರಣಿ, ಯುಗಪ್ರವರ್ತಕ- ಹೀಗೆ ನೀವು ಹೇಳುವ ಯಾವುದನ್ನು ಆಗಲು ಒಲ್ಲದ ಗಾಂಧಿ ಎನ್ನುವ ಜೀವ ಹೇಗೆ ಮಿಡುಕಾಡಿದೆ ಎನ್ನುವುದನ್ನು ಹೇಳಲು ಯತ್ನಿಸಿದ್ದೇನೆ. ಮೂವತ್ನಾಲ್ಕು ಕೋಟಿ ಹಿಂದೂಗಳು, ನಾಲ್ಕು ಕೋಟಿ ಮುಸ್ಲಿಂರು ಪರಸ್ಪರ ಕಿತ್ತಾಡುವಾಗ ಕತ್ತಲಲ್ಲಿ ಕಳೆದುಕೊಂಡ ಕೂಸಿನಂತೆ ಕೊಸರಾಡಿದ ಗಾಂಧಿಯನ್ನು ನಿಮ್ಮ ಮುಂದೆ ನಿಲ್ಲಿಸಿದ್ದೇನೆ. ತನ್ನ ಅಂತ್ಯಕ್ಕೂ ಮುಂಚೆ ಅನೇಕ ಬಾರಿ ಆಕ್ರಮಣಕ್ಕೊಳಗಾಗಿ ನಾನು ಯಾತಕ್ಕಾಗಿ ಬದುಕಿದ್ದೇನೆ? ಎಂದು ಪ್ರಶ್ನಿಸಿಕೊಂಡ, ನೂರಾ ಇಪ್ಪತ್ತೈದು ವರ್ಷ ನಾನು ಯಾವ ಪುರುಷಾರ್ಥಕ್ಕಾಗಿ ಬದುಕಬೇಕು? ಅಥವಾ ಈ ಕ್ಷಣದಲ್ಲಿ ಸಾಯಬೇಕು ಎನ್ನುವುದಾದರೆ ನಾನು ಬದುಕಿನಿಂದ ಪಲಾಯನಗೈಯ್ಯುತ್ತಿರುವೇನೆ? ಎಂದು ಪ್ರಶ್ನಿಸಿಕೊಳ್ಳುವ ಗಾಂಧಿ ನಿಮ್ಮ ಮುಂದೆ ನಿಂತಿದ್ದಾನೆ.
        ಈತ, ಈತನ ಪ್ರಶ್ನೆಗಳು ,ಕಾಳಜಿ-ಭಯಗಳು ನಮ್ಮವಾಗದ ಹೊರತು ಈ ದೇಶದ ಭವಿಷ್ಯ ಏನಾಗಬಹುದು? ಎನ್ನುವ ಪ್ರಶ್ನೆಯನ್ನು ನಾನು ಕೇಳಿಕೊಂಡಿದ್ದೇನೆ. ತನ್ನ ಪ್ರೀತಿಯ ಬಾ ತೀರಿದಾಗ, ಆತನಮಾನಸ ಪುತ್ರನೇ ಆದ ಮಹಾದೇವ ದೇಸಾಯಿ ತೀರಿದಾಗ, ದೇಶದ ವಿಭಜನೆಯ ಹೆಸರಿನಲ್ಲಿ ಹಿಂದೂ-ಮುಸ್ಲಿಂರು ಕಾದಾಡಿದಾಗ ಗಾಂಧಿ ನಲುಗಿದ ರೀತಿ ಇದೆಯಲ್ಲಾ, ಅದು ಆತನಿಗೇ ಗೊತ್ತು.
        ಗಾಂಧಿ: ಅಂತಿಮ ದಿನಗಳುಇದು ನನ್ನ ಮತ್ತು ಗಾಂಧಿ ಧ್ಯದ ವಿಕಿರಣ ಕಾಲದ ಹಂಗು ಹರಿದು ಸ್ಥಾಪನೆಯಾದ ಕರುಳ ಸಂವಾದ. ಈಗಷ್ಟೇ ಮೊದಲ ಭಾಗ ಬಂದಿದೆ. ಇದೇ ದಿನದಿಂದ ಕೃತಿಯ ಎರಡನೆಯ ಭಾಗವಾದಗಾಂಧಿ: ಅಂತಿಮ ಕ್ಷಣಗಳುಗೆ ನಾನು ಸಿದ್ಧನಾಗುತ್ತಿದ್ದೇನೆ. ಒಂದು ಪುಸ್ತಕದ ಗೆಲುವು, ಒಂದು ವಿಚಾರದ ಗೆಲುವೇ. ದೇಶದ ಜೀವಭಾವದಂತೆ ಸಂಚರಿಸುವ ಗಾಂಧಿಯಂತೂ ಇಲ್ಲಿ ಎಲ್ಲ ಕಾಲಕ್ಕೂ ಪ್ರಸ್ತುತ. ಆತ ಹೇಗೆ ಪ್ರಸ್ತುತ ಎನ್ನುವುದನ್ನು ಪುಸ್ತಕ ವ್ಯಾಪಿಸಿಕೊಂಡಿರುವ ರೀತಿಯ ಮೇಲೆಯೇ ನಾವು ಗ್ರಹಿಸಬಹುದು. ಗೆಲುವು ಗಾಂಧಿಯದು ಮತ್ತು ನಿಮ್ಮೆಲ್ಲರದ್ದು.
ಗಾಂಧಿಯದು ಒಂದೇ ವಾದ. “If India fails, Asia dies. Let India remain, and be the hope of all the exploited of the earth, in Asia, in Africa and any other part of the World.” ಯಾವ ಮಾತುಗಳನ್ನು ಗಾಂಧಿ ದೇಶವನ್ನು ಕುರಿತು ಆಡಿದನೋ ಅವೇ ಮಾತುಗಳನ್ನು ನಾವಿಂದು ಗಾಂಧಿಗೂ ಅನ್ವಯಿಸಬೇಕಿದೆ. ಸಹನೆಯ ದೊಡ್ಡ ಸಂಸ್ಕೃತಿಗೆ ಹೇಡಿತನದ ಹೊಲಸು ಸೋಕದಂತೆ ಅದನ್ನು ಸಂಸ್ಕೃತಿಯನ್ನಾಗಿ ಬಿಂಬಿಸಿದ ಗಾಂಧಿ ಇಲ್ಲಿ ಸೋತರೆ ಅಂದೇ ಭಾರತಕ್ಕೆ ದುರಂತದ ದಿನ. ನಾವು ಸ್ವಾತಂತ್ರ್ಯಕ್ಕೆ ಅರ್ಹರಲ್ಲ ಎಂದು ಯಾವ ಕಾಲಕ್ಕೂ ಜನ ಆಡಿಕೊಳ್ಲುವಂತಾಗಬಾರದು ಎನ್ನುವುದೇ ಗಾಂಧಿಯ ಹೋರಾಟದ ಗುರಿಯಾಗಿತ್ತು. ಇಷ್ಟು ತಿಳಿದುಕೊಂಡರೆ ಸಾಕು, ಅದು ಗಾಂಧಿಗೆ, ದೇಶಕ್ಕೆ, ನಮಗೆ ನಾವೇ ಸಲ್ಲಿಸಿಕೊಳ್ಳುವ ದೊಡ್ಡ ಗೌರವ. ತಮಗೆಲ್ಲ ಮತ್ತೊಮ್ಮೆ ಗಾಂಧಿ ಜಯಂತಿಯ ಶುಭಾಷಯಗಳು. ತಮ್ಮ ಅಭಿಮಾನಕ್ಕೆ ಮತ್ತೊಮ್ಮೆ ನಿಮಗೆಲ್ಲ ಧನ್ಯವಾದಗಳು.


                   (ದಾವಣಗೆರೆ ಸಮಾರಂಭಕ್ಕೆ ಅಕ್ಟೋಬರ ೨ಕ್ಕಾಗಿ ಕಳುಹಿಸಿಕೊಟ್ಟ ಭಾಷಣ)










No comments:

Post a Comment