Total Pageviews

Wednesday, September 19, 2012

ಚಲಂ: ಇವನೊಂದು ರೀತಿ ಅಜೂಬಾ


ಚಲಂ: ಇವನೊಂದು ರೀತಿ ಅಜೂಬಾ

 

                                                                                                
ಗ ಸಾಹಿತ್ಯಕ್ಕೆ ತನ್ನ ಸಾಂಪ್ರದಾಯಿಕ ನಡಿಗೆಯಲ್ಲಿ ವಿಶ್ವಾಸವಿಲ್ಲ. ನವೋದಯಕ್ಕೆ, ಪ್ರಗತಿಶೀಲ, ನವ್ಯ, ಬಂಡಾಯದಂತಹ ಸಾಹಿತ್ಯಿಕ ಸಂದರ್ಭಗಳಲ್ಲಿಯೂ ಒಂದೊಂದು ನಿರ್ದಿಷ್ಠ ಸಾಹಿತ್ಯ ಪ್ರಕಾರ ಬರಹಗಾರನ ಅಭಿವ್ಯಕ್ತಿಗೆ ಸರ್ವಸಮ್ಮತ ದಾರಿಯಾಗಿ ಬೆಳೆದಿರುವುದನ್ನು ನಾವು ನೋಡುತ್ತೇವೆ. ಈಗ ಹಾಗಲ್ಲ, ಪ್ರಕಾರ ನೆಪ ಮಾತ್ರ. ಇನ್ನೂ ಮುಂದು ಹೋಗಿ ಕೆಲವು ಸೃಜನಶೀಲರಂತೂ ಪ್ರಕಾರದೊಳಗೊಂದು ಪ್ರಕಾರ, ಅನೇಕ ಪ್ರಕಾರಗಳನ್ನು ಸೇರಿಸಿ ಒಂದು ಪ್ರಕಾರದಂತಹ ಪ್ರಯೋಗಶೀಲತೆಗೆ ತೊಡಗಿರುವುದನ್ನು ನಾವು ಗಮನಿಸಿದ್ದೇವೆ. ಎಲ್ಲವೂ ಸಂಕೀರ್ಣ. ಬಾಹ್ಯದ ಈ ಸಂಕೀರ್ಣತೆ ಕೆಲವೊಮ್ಮೆ ನಮ್ಮ ಆಂತರಿಕ ತೊಳಲಾಟದ ಪ್ರತಿರೂಪವೇ ಆಗಿರುತ್ತದೆ. ಷೇಕ್ಸ್‌ಪಿಯರ್ ಇದನ್ನೇ ಕೇಳಲಿಲ್ಲವೇ? “”ಯುದ್ಧ ಒಳಗೆ ನಡೆಯದ ಹೊರತು ಹೊರಗೆ ಘೋಷಣೆಯಾಗುವುದುಂಟೇ?”  ನನ್ನ ಈ ಯಾವ ಮಾತುಗಳು ಹೊಸದೆಂದುಕೊಳ್ಳುವುದಿಲ್ಲ ನಾನು,ಪ್ರಕಾರಗಳ ಪರಿಮಿತಿಗಳನ್ನು ಬಹಳ ಹಿಂದೆಯೇ ಕ್ರಮಿಸಿ ಹೋದವರು ರವೀಂದ್ರನಾಥ  ಠ್ಯಾಗೋರ್. ಆದಾಗ್ಯೂ ಐದಾರು ದಶಕಗಳ ಒಟ್ಟು  ದಾರಿಯಲ್ಲಿ ಕನ್ನಡ ಸಾಹಿತ್ಯ ಒಂದಷ್ಟು ಸಾಂಪ್ರದಾಯಿಕ ದಾರಿಯಲ್ಲಿಯೇ ಸಾಗಿ ಬಂದು ಈಗ ತೀರ ಭಿನ್ನವಾಗುತ್ತಿರುವ ಲಕ್ಷಣಗಳನ್ನು ಸ್ಪಷ್ಟವಾಗಿಸುತ್ತದೆ.

               ಕಾಲದ ಈ ಸಂಕೀರ್ಣತೆಯ ಹೊಕ್ಕಳಲ್ಲಿ ಹುಟ್ಟಿದ ನನ್ನ ಸಮಕಾಲೀನ ಅನೇಕ ಗೆಳೆಯ-ಗೆಳತಿಯರಿದ್ದಾರೆ. ಇವರೆಲ್ಲ ಹಿಂದಣ ಅನಂತದ ಪರಿಕಲ್ಪನೆಯೊಂದಿಗೆ ವರ್ತಮಾನದ ವೈಚಿತ್ರ್ಯಕ್ಕೆ ಮನಸೋತವರು ಮತ್ತು ಮುಖಾಮುಖಿಯಾದವರು. ಬೇಕೆಂದರೆ ಒಂದಿಷ್ಟು ಹೆಸರುಗಳನ್ನು ಸೂಚಿಸಬಹುದು. ವೀಣಾ ಬನ್ನಂಜೆ, ರವಿ ಬೆಳಗೆರೆ,ಜೋಗಿ, ಜ.ನಾ.ತೇಜಶ್ರೀ, ರಾಜೇಶ್ವರಿ ಎನ್, ಚಲಂ ಮತ್ತೆ ಹತ್ತಾರು. ಇವರು ಯಾವ ಪ್ರಕಾರದಲ್ಲಿ ಬರೆಯುತ್ತಾರೆ? ಏನನ್ನು ಬರೆಯುತ್ತಾರೆ? ಎನ್ನುವುದಕ್ಕಿಂತ ಮನಸೋಲುವಂತೆ ಬರೆಯುತ್ತಾರೆ ಎನ್ನುವುದು ಮುಖ್ಯ. ಬರಹಕ್ಕಾಗಿ ಬರೆಯುತ್ತಾರೆ ಎನ್ನವುದು ಇನ್ನೂ ಮುಖ್ಯ. ಮತ್ತೂ ವಿಶೇಷ ಎನಾದರೂ ಇದೆಯಾ? ಎಂದು ಕೇಳಿದರೆ ಸ್ವಾನುಭವ ಮತ್ತು ಸಮಕಾಲೀನ ಸಂದರ್ಭಗಳಿಂದ ಆರೊಗ್ಯಕರ ಅಂತರದಲ್ಲಿ ನಿಂತು ಬರೆಯುತ್ತಾರೆ ಎನ್ನುವುದು ಅತ್ಯಂತ ಮುಖ್ಯವಾದ ವಿಚಾರ. ನಿಮ್ಮ ಸಾಹಿತ್ಯಿಕ ಮಾನದಂಡಗಳು, ವಿಮರ್ಶೆ, ಪ್ರಚಾರ ಮತ್ತು ಪ್ರಶಸ್ತಿಗಳು ಇಂತಹ ಕೆಲವು ಲೇಖಕರನ್ನು ಭಾದಿಸುವುದಿಲ್ಲ.ಭಾದಿಸಬಾರದು ಎಂದೇ ನನ್ನ ಆಶಯ. ಈ ಗುಂಪಿನಲ್ಲಿ ಈಗ ನಾನು ಮಾತನಾಡಲು ಕುಳಿತಿರುವುದು ಈ ಚಲಂ ಎಂಬ ‘ಚಂಚಲ‘ನ ಕುರಿತು.
                    ಇವನೊಂದು ರೀತಿ ಅಜೂಬಾ. ಹಾಸನದ ಯಾವುದೋ ಸಭೆ, ರಸ್ತೆ, ಬಸ್ಟ್ಯಾಂಡು, ಮುಂಗಟ್ಟಿನ ಮುಂದೆ ಧುತ್ತನೆ ಭೇಟ್ಟಿಯಾಗಿ ತಟ್ಟನೆ ಮರೆಯಾಗುತ್ತಾನೆ. ಸದಾ ಸಮಯದ ಕೊರತೆಯಿಂದ ಕಕ್ಕಾಬಿಕ್ಕಿಯಾದ ಹುಡುಗ. ಹಾಗಂತ ಈತ ನಮ್ಮ ರಂ.ಶ್ರೀ.ಮುಗಳಿಯಂತೆ ಅಥವಾ ಎಮ್.ಕೆ.ನಾಯಕರಂತೆ ಎಲ್ಲವನ್ನೂ ಅವಧಿಗೆ ನಿಗದಿತಗೊಳಿಸಿದವನು ಎಂದುಕೊಳ್ಳಬೇಡಿ. ಮಹಾ ಸೋಂಬೇರಿ. ಮತ್ತೇ ಕೆಲವೊಮ್ಮೆ ಭೂಮಿ-ಆಕಾಶವನ್ನು ಒಂದು ಮಾಡಿ ಹಾರಾಡಿ ಬಿಡುವ ಕನಸು. ಇವನ ತಲೆ ಎನ್ನುವುದು ಮೂಡುಬಿದಿರೆಯ ಗಿರಿಗಿಟ್ಲೆಯ ಪಾತ್ರೆಯಂತೆ. ಒಟ್ಟಾರೆ ಅದರೊಳಗೆ ಏನೇನೋ ಹಾಕಿ ತಿರುವಿ ಕೈಗೊಂದು ಪೊಟ್ಟಣ ಕೊಟ್ಟುಬಿಡುತ್ತಾನೆ.   ತಿಂದವರಿಗೆ ಪ್ರಾಣಾಪಾಯವೇನೂ ಇಲ್ಲ. ಯಾಕೆಂದರೆ ಈತ ಒಂದು ರೀತಿಯ ವಿಚಿತ್ರ ಭರವಸೆ, ನಂಬಿಕೆ ಮತ್ತು ಹೊಸತನ. ಈತನನ್ನು ಕಂಡಾಗಲೆಲ್ಲಾ ನನ್ನನ್ನು ಕಾಡಿದ ಪ್ರಶ್ನೆ ,ನನಗೆ ಮುಪ್ಪಾಯಿತೇ? ಯಾವ ಕ್ಷಣದಲ್ಲಿಯೂ ಯಾವ ವೃತ್ತಿ/ವ್ಯಕ್ತಿ/ವಿಚಾರ ಮತ್ತು ಸ್ಥಳಗಳನ್ನು ಧಿಕ್ಕರಿಸಿ ಓಡಿಹೋಗಿ ಏನನ್ನೂ ಮಾಡಬಲ್ಲೆ ಎನ್ನುವ ಛಲದ ಮಾತನಾಡುವ ಈ ಚಲಂ, ನನಗೆ ಈ ಕಾರಣಕ್ಕಾಗಿಯೇ ಕಾಡುತ್ತಾನೆ.
                    ಯಾರು ಏನಾದರೂ ಹೇಳಿಕೊಳ್ಳಲಿ, ವಿಕ್ಷಿಪ್ತತೆಯ ಬೇರುಗಳನ್ನು ಕಳೆದುಕೊಂಡ ಬರಹಗಾರ ತನ್ನ ಬರಹದಲ್ಲಿ ಬೆಂಕಿಯ ಹೂಗಳನ್ನು ಅರಳಿಸುವುದಿಲ್ಲ. ಇಂತಹ ಹೂಗಳಿಲ್ಲದ ಬರಹ ಬರಹವೇನೋ ಸತ್ಯ, ಆದರೆ ಬದುಕಿಗೆ ಅದರ ಕೊಡುಗೆ ಮಾತ್ರ ಶೂನ್ಯ. ತುಂಬಿ ಹರಿಯುವ ಹೊಳೆಯಲ್ಲಿ ಬಿದ್ದ ಹೆಣಗಳಂತೆ ಬರುವ ಲೇಖಕ ಮತ್ತು ಪುಸ್ತಕಗಳಿಗೇನೂ ಇಂದು ಕೊರತೆಯಿಲ್ಲ. ಆದರೆ ಈ ವಿಕ್ಷಿಪ್ತತೆಯನ್ನು ಅನವರತವೂ ಕಾಯ್ದುಕೊಂಡು ಹೊಸದಕ್ಕಾಗಿ ತಹತಹಿಸುತ್ತಿರುವ ಲೇಖಕರ ಕೊರv  ಖಂಡಿತವಾಗಿಯೂ ಇದೆ. ‘ಜನತಾ ಮಾಧ್ಯಮ‘ದಂತಹ ಸಣ್ಣ ಪತ್ರಿಕೆಯಲ್ಲಿ ಒಂದು ಓದಿನ ಮನೆಯನ್ನು ಕಟ್ಟಿಕೊಂಡು ಮಾತನಾಡುವ ಚಲಂ ಇತ್ತೀಚಿಗೆ ನನ್ನ ಸ್ನೇಹದ ತೆಕ್ಕೆಗೆ ಬಂದ ಒಬ್ಬ ವಿಕ್ಷಿಪ್ತ. ಅವನಿಗೆ ಸಮಾಧಾನವಿಲ್ಲ.  ಹುಡುಕಾಟದ ಭಯಾನಕ ಹಸಿವು. ತೇಜಸ್ವಿಯೊಬ್ಬರೇ  ಈತನನ್ನು ಸಮಾಧಾನವಾಗಿಸುವಲ್ಲಿ ಯಶಸ್ವಿಯಾದವರು. ಸಧ್ಯ ನನ್ನ ಬರಹವನ್ನು ಮೋಹಿಸುತ್ತಿರುವುದಂತೂ ಸತ್ಯ. ಆದರೆ ನಂಬಿರಲಿಕ್ಕಿಲ್ಲ ಎನ್ನುವ ಗುಮಾನಿ ನನಗೂ ಇದೆ. ಈ ಗುಮಾನಿ ಜೀವಂತವಾಗಿರುವವರೆಗೆ ನಾವು ಒಬ್ಬರಿನ್ನೊಬ್ಬರಿಗೆ ಜೇಡದಂತೆ ಬಲೆ ನೇಯ್ದುಕೊಳ್ಳುವುದಿಲ್ಲ.
                    ನಾನು ಈತನ ‘ಪುನರಪಿ‘ಯನ್ನು ಓದಿದ್ದೇನೆ.ಇದನ್ನು ಕುರಿತು ಏನು ಹೇಳಬೇಕೆನ್ನುವುದು ಒಂದು ಪ್ರಶ್ನೆಯೇ. ಕಥಾ ಸಂಕಲನ ಎಂದು ಚಲಂ ಹೇಳಿರುವುದರಿಂದ,  ಇಲ್ಲಿಯ ವಿಚಾರಗಳು ಕಥೆಯ ಚೌಕಟ್ಟಿನಲ್ಲಿ ಅನಾವರಣಗೊಂಡಿದ್ದರಿಂದ ಇವು ಕಥೆಗಳು ಎಂದು ಹೇಳಬಹುದು. ಆದರೆ ಗೊತ್ತಿರಲಿ, ಕಥೆಯ ಶಿಸ್ತಿಗೆ ಸಂಪೂರ್ಣವಾಗಿ ಒಳಪಟ್ಟವು ಎಂದು ನಾನು ಒಪ್ಪಿಕೊಳ್ಳುವುದಿಲ್ಲ. ಇಲ್ಲಿಯ ಬಹುತೇಕ ಕಥೆಗಳಲ್ಲಿ ಸುಳಿದು ಹೋಗುವ ಮಹತ್ವದ ಪಾತ್ರಧಾರಿ ಚಲಂನೇ. ಆದರೆ ಲಂಕೇಶರಂತೆ ಕಥೆಯೊಳಗಿನ ಪಾತ್ರಗಳ ಹೆಗಲಿಗೆ ಹೊರೆಯಾದವನಲ್ಲ. ಕಲ್ಪನೆಯ  ಸರಳ ಬೆರಿಕೆಯೊಂದಿಗೆ ವಾಸ್ತವದ ಗಂಭಿರತೆಯನ್ನು ಸ್ಪಷ್ಟಪಡಿಸುವ ಕ್ರಿಯೆ ಈ ಕಥೆಗಳಲ್ಲಿ ನಿರಂತರವಾಗಿ ನಡೆದಿದೆ. ಆಕಾಶಕ್ಕೆ ಏಣಿ ಕಟ್ಟುವ ಬಹುಪಾಲು ಪಾತ್ರಗಳಿಗೆ ವಾಸ್ತವದ ಬಾಲಂಗೋಚಿಯಂತೆ ಜೊತೆಯಾಗಿರುವ ಲೇಖಕ ಯಾವುದನ್ನೂ ಬದುಕಿನ ವ್ಯಾಪ್ತಿ ಪ್ರದೇಶದಿಂದ ಹೊರತಾಗುವುದನ್ನು ತಪ್ಪಿಸುತ್ತಾನೆ. ಈ ಕಾರಣಕ್ಕಾಗಿ ಚಲಂ ಒಬ್ಬ ಕಥೆಗಾರನಾಗಿ ನನಗೆ ಪ್ರೀತಿಯವನಾಗುತ್ತಾನೆ.
                    ಇಡೀ ಸಂಕಲನದಲ್ಲಿ ನನ್ನನ್ನು ವಿಚಿತ್ರವಾಗಿ ಕಾಡಿದ ಕಥೆ ‘ದೇವರ ಹಳ್ಳಿಯ ಸಾವಿನ ನ್ಯಾಯ‘. ಇಂತಹ ಒಂದು ಕಲ್ಪನೆಯೇ ವಿಚಿತ್ರ. ಇದನ್ನು ಚಲಂ ಮಾತ್ರ ಕಲ್ಪಿಸಿಕೊಳ್ಳಲು ಸಾಧ್ಯವಿದೆ. ಕನ್ನಡಕ್ಕೆ ನಲವತ್ಮೂರು ಕೃತಿಗಳನ್ನು  ಬರೆದು ಸುರಿದ ನನ್ನ ಬುದ್ಧಿಗೆ ಇಂತಹ ಒಂದು ಯೋಚನೆಯೇ ಬರಲಿಲ್ಲವಲ್ಲಾ? ಎಂದು ನಾನು ಮತ್ಸರಗೊಂಡಿದ್ದೇನೆ. ಈ ಕಥೆಯನ್ನು ಕುರಿತು ಅಥವಾ ಅದರ ತಂತ್ರ, ವಿಚಾರ, ವಿನ್ಯಾಸ ಹಾಗೂ ವಸ್ತುಗಳನ್ನು ಕುರಿತು ನಾನು ಮಾತನಾಡಿದರೆ ಇದುವರೆಗಿನ ನಮ್ಮ ವಿಮರ್ಶಕ ಪುಂಡರು ಮಾಡಿದ ಬುದ್ಧಿಗೇಡಿತನವನ್ನೇ ನಾನೂ ಪ್ರದರ್ಶಿಸಿದಂತಾದೀತು ಎಂದು ಕೈ ಬಿಟ್ಟಿದ್ದೇನೆ. ಕಥೆಯೋ, ಕವಿತೆಯೋ ಯಾವುದೋ ಒಂದು ಬರಹವೋ ,ಕೂಸಿನಂತೆ  ಬಳಿ ಬಂದಾಗ ಸುಮ್ಮನೆ ಅಪ್ಪಿಕೊಳ್ಳಬೇಕು. ಆ ಅಪ್ಪಿಕೊಳ್ಳುವಿಕೆಯೇ ಅದಕ್ಕೆ ಸಲ್ಲುವ ದೊಡ್ಡ ‘ಅಪ್ರಿಸಿಯೇಶನ್‘. ಅದನ್ನು ಬಿಟ್ಟು ಅದರ ಸಿಂಬಳ ಮೂಗು, ಒದ್ದೆ ಚಡ್ಡಿಯ ಕುರಿತು ವಿಮರ್ಶೆಗಿಳಿಯಬಾರದು. ಹಾಗೊಂದು ವೇಳೆ ನಾವು ಇಳಿಯುವುದಾದರೆ ಹಸೂಗೂಸಿನ ಹಾಲು ವಾಸನೆಯ ಉಸಿರ ಹಿತ  ಕಳೆದುಕೊಂಡ ಪಿಂಡಗಳಾಗುತ್ತೇವೆ.ಚಲಂನ ‘ದೇವರ ಹಳ್ಳಿಯ ಸಾವಿನ ನ್ಯಾಯ‘ ಎಂಥ ಕಥೆ ಅಂತೀರಾ. ‘ಪುನರಪಿ‘ಯನ್ನು ಇಡೀಯಾಗಿ ಓದುತ್ತಿರೋ ಇಲ್ಲವೋ ಈ ಕಥೆಯನ್ನು ಮಾತ್ರ ಬಿಡಬೇಡಿ.
                    ‘ಬೇಗೂರಿನ ಬಾನಗಡಿಗಳು‘ ನಮ್ಮ ಸಮಾಜ ನಿಷ್ಠ ಶ್ರದ್ಧೆಗೆ ಸಿಗುವ ಗೆಲುವನ್ನು ಕುರಿತು ಬರೆದಾದುದು. ನವೋದಯದವರ ಶ್ರದ್ಧೆ , ಪ್ರಗತಿಶೀಲರ ಹೋರಾಟ ಎರಡನ್ನೂ ಸಮೀಕರಿಸಿಕೊಂಡು ಸಮಾಜಮುಖಿಯಾಗಿ ಹರಿಯುವ ಯುವ ಪಡೆಯೊಂದು ಬೇಗೂರಿಗೆ ಬೆಳಕಾಗುವ ಪರಿಯೇ ಈ ಕಥೆಯ ಹರವು. ಅತ್ಯಂತ ಸರಳವಾಗಿ ನಿಮ್ಮನ್ನು ಮುಟ್ಟುತ್ತದೆ. ಆದರೆ ‘ಕಥೆಗಾರನ ಬಲಿ‘ ಕಥೆ ಹಾಗಲ್ಲ. ಈ ಇಡೀ ಕಥೆಯೇ ಒಂದು ಕವಿತೆ. ಕವಿತೆಯನ್ನು ಗೆಲ್ಲಿಸುವುದೇ ಕಥೆಗಾರನ ಗುರಿ. ಹೆಣ್ಣಿನ ವ್ಯಾವಹಾರಿಕತೆಯಿಂದ ಹೊರಗಿಟ್ಟು ಕವಿತೆಯನ್ನು ನೋಡಬೇಕೆನ್ನುವುದು ಆತನ ಹಟ. ಕವಿತೆಯನ್ನು ಹೆಣ್ಣಿಗೆ ಆರೋಪಿಸುವವರ ಸಾಲಿನಲ್ಲಿ ಈತ ಇಲ್ಲ -

“ನನ್ನ ಎದೆಯ ಮೇಲೆ
ನಿನ್ನ ಗೋರಿಯ ಕಟ್ಟಿ
ತಾಜಮಹಲ್ ಎಂದು ಬೀಗುವ
ನಾನು ಜಗತ್ತಿನ ದೊಡ್ಡ ಮೂರ್ಖ”
                     ಎಂದು ಹೇಳುವ ಮೂಲಕ ಕಥೆಗಾರ ಏನನ್ನು ಧಿಕ್ಕರಿಸುತ್ತಿದ್ದಾನೆ ಎಂದು ನಾನು ವಿವರಿಸಬೇಕಿಲ್ಲ. ಈ ಕಥೆಯ ಒಂದೇ ದೃಶ್ಯ- ತಾನು ಭಯಾನಕವಾಗಿ ಪ್ರೀತಿಸುವ ಇಂಚರ ಎನ್ನುವ ಹುಡುಗಿಯನ್ನು ಕುರಿತು ಹುಡುಗ ಕೇಳುತ್ತಾನೆ ‘ನಾನು ಪತ್ರಿಕೆಗಳಲ್ಲಿ ತಣ್ಣನೆಯ ರಕ್ತದ ಹಂತಕರನ್ನು ಕುರಿತು ಓದಿದ್ದೆ. ನಿನ್ನ ಮೈಯಲ್ಲೂ ಆ ರಕ್ತ ಹರಿಯುತ್ತಿದೆಯಾ?‘ ಇದು ಹೆಣ್ಣಿನ ನವಿರತೆಯೊಳಗೆ ಹುದುಗಿಕೊಂಡ ಒಂದು ಮುಖಕ್ಕೆ ಕಥೆಗಾರನ ಅದ್ಭುತ ಕನ್ನಡಿ.
                    ‘ಉದ್ದನೆಯ ಜಡೆಯ ಹುಡುಗಿ‘ ಮತ್ತು ‘ಶಾರದಾನ್ವೇಷಣೆ‘  ತುಂಬಾ  ಶಿಥಿಲ  ರಚನೆಯೊಳಗೆ ಒಡಮೂಡಿದ್ದರೂ ಕಥೆಯೊಂದು ಮುಕ್ತಾಯದಲ್ಲಿ ಬಿಚ್ಚಿಡಬೇಕಾದ ಅಚ್ಚರಿಗೇನೂ ಕೊರತೆಯಿಲ್ಲ. ಲೇಖಕ ಹರಳುಗಟ್ಟದ ವಿಚಾರವಸ್ತುಗಳ ಸುತ್ತ ಸ್ವಲ್ಪ ಹೆಚ್ಚು ಸುತ್ತಾಡಿದ್ದೇ ಈ ಶಿಥಿಲತೆಗೆ ಕಾರಣ. ಕಥೆಯ ಸೂಕ್ಷ್ಮತೆಯೇ ಇದು. ಉದ್ದೇಶವಿಲ್ಲದ ಕಾಡುಹರಟೆಗೆ ಅಲ್ಲಿ ಅವಕಾಶವಿರುವುದಿಲ್ಲ.
‘ಉದ್ದನೆಯ ಜಡೆಯ ಹುಡುಗಿ‘ ಕೊನೆಯಲ್ಲಿ ಬರುವ ‘ ಉದ್ದನೆಯ ಗ್ಲಾಸಿನಲ್ಲಿ ಬಿಯರ್ ಉಕ್ಕುತ್ತಿತ್ತು‘ ಎನ್ನುವ ವಾಕ್ಯವೇ ಇಡೀ ಕಥಾನಕದ ಉದ್ದೇಶ. ಇದಕ್ಕೆ ಆರು ಪುಟಗಳ ವ್ಯಾಪ್ತಿ ಬೇಕಿರಲಿಲ್ಲ. ಪದ ಕಡಿಮೆಯಾದಷ್ಟು ಕಥೆಯ ಮೆರುಗೇ ಬೇರೆ.  ‘ಶಾರದಾನ್ವೇಷಣೆ‘ ಯೂ ಅಷ್ಟೇ. ಈ ಕಥೆಯ ಕೊನೆಯಲ್ಲೊಂದು ಅಚ್ಚರಿಯಿದೆ. ಕಥಾನಾಯಕ ಅಕ್ಷಯನಿಗೆ ತನ್ನ ತಮ್ಮ ಅರುಣನೇ ತಾನು ಹುಡುಕುತ್ತಿರುವ ಹುಡುಗಿಯನ್ನು ಒಡಿಸಿಕೊಂಡು ಹೋದ ವಿಚಾರ ಗೊತ್ತಿಲ್ಲ. ಇದೊಂದು ವಿಷಾದ, ಈ ವಿಷಾದಕ್ಕೆ ಏಳು ಪುಟಗಳ ವಸ್ತು-ವಿಚಾರಗಳ ವಿವರಣೆ ಭಾರವಾಗಿದೆ. ವಿಷಾದದ ಈ ಘಟ್ಟ ಮುಟ್ಟುವುದರೊಳಗಾಗಿ ಕಥೆಗಾರನಿಗೆ ತನ್ನ ದಾರಿಯ ಸ್ಪಷ್ಟ ಹೊಳಹು ಸಿಗಬೇಕಾಗಿತ್ತು, ಅದೂ ಆತನಿಗೆ ದಕ್ಕದೆ ಹೋಗಿದೆ. ಒಂದಷ್ಟು ವಿವರಣೆಗಳನ್ನು ಕತ್ತರಿಸಿದರೆ ಇವೆರಡು ಗಮನಾರ್ಹ ಶಿಲ್ಪಗಳಾಗಬಹುದಾಗಿತ್ತು.
                    ನನ್ನನ್ನು ಆವರಿಕೊಂಡ ಕಥೆಗಳಲ್ಲಿ ಚಲಂ ಅವರ ‘ಬಿಳಿ ಎಕ್ಕದ ಗಿಡದ ಮದುವೆ‘ ಮಹತ್ವದ್ದು. ಮದುವೆ, ಅದಕ್ಕೊಂದು ಮಹೂರ್ತ, ಮನುಷ್ಯನ ವಯೋಸಹಜವಾದ ಈ ಆಸೆಗಳೊಂದಿಗೆ ಬ್ರೋಕರ್‌ಗಳು ನಡೆಸುವ ವ್ಯವಹಾರ. ನಿರಂತರ ಇದ್ದು ಮನುಷ್ಯನ ಯಾವ ನಿಲುವಿಗೂ ನೆಲೆಯಾಗದ ದೇವರು, ಕೈಗೆಟುಕದೆಯೂ ಸಂಸಾರದ ಕೈ ಸುಡುವ ನಕ್ಷತ್ರಗಳು, ಇವುಗಳ ಕುರಿತ ಕಥೆಗಾರನ ಹತಾಶತೆ, ವ್ಯಂಗ್ಯ, ವೈಚಾರಿಕತೆ, ಎಲ್ಲವೂಗಳು ಎಷ್ಟೊಂದು ಅದ್ಭುತವಾಗಿ ಈ ಕಥೆಯಲ್ಲಿ ಮೈ ಹಾಸಿವೆ. ಇದರ ವ್ಯಾಪ್ತಿಯೇ ಅಷ್ಟು ದೊಡ್ಡದು. ಚಲಂ ಇಲ್ಲಿ ಇನ್ನೊಂದಿಷ್ಟು ಲಂಬಿಸಿದ್ದರೂ ಹಾನಿ ಇರಲಿಲ್ಲ . ಇಲ್ಲಿ ಒಂದು ಪ್ರಶ್ನೆ- ದೇವರೇ ಪ್ರಸಾದ ಕೊಡುವುದಾದರೆ ಜೋತಿಷಿ ಯಾಕೆ ಬೇಕು?  ಈ ಪ್ರಶ್ನೆಯೇ ಇಡೀ ಕಥೆಯ ಹುಡುಕಾಟ. ಜೋತಿಷಿಯ ಭವಿಷ್ಯ - ಹುಡುಗಿ ಹೋಗುವಲ್ಲಿ ಅತ್ತೆ ಇರಬಾರದು. ಇದು ಸಾಧ್ಯವೇ? ಇದನ್ನು ಸಾಧ್ಯವಾಗಿಸುವುದೇ ಜೋತಿಷ್ಯದ ಅಸ್ತಿತ್ವ. ರಾಜಕಾರಣ ಮತ್ತು ಜೋತಿಷ್ಯ ಮನುಷ್ಯರ ಆಶೆಗಳನ್ನೇ ಕುಡಿದು ಉನ್ಮಾದ ಅನುಭವಿಸುವ ಸಿದ್ಧಾಂತಗಳು. ಇಲ್ಲಿ ಮಲೆನಾಡಿಗರ ಬದುಕಿನ ಭಾಗವೇ ಆಗಿರುವ  ಶಿಕಾರಿಯ ಕುರಿತು  ಚಲಂ ಎಷ್ಟೊಂದು ಸೊಗಸಾಗಿ ಬರೆದಿದ್ದಾರೆ. ಇದು ನಾವು ಮರೆಯಲಾಗದ ಕಥೆ.
                    ಉಳಿದಂತೆ ‘ಬಿಡುಗಡೆ‘, ‘ಪುನರಪಿ‘ ,‘ಬೇಲಿ‘, ‘ಸರಿಯದ ಪರದೆ‘, ‘ಗುಣಶೇಖರನ ದಂಡಯಾತ್ರೆ‘ ಗಳಲ್ಲಿ  ‘ಪುನರಪಿ‘ ಓದುಗನನ್ನು ತಡೆದು ನಿಲ್ಲಿಸುತ್ತದೆ. ಇದು ಗಾಂಧಿ ವಿಚಾರಧಾರೆಯನ್ನು ಪ್ರತಿಪಾದಿಸುತ್ತಾ ಫ್ರೆಂಚ್‌ನ ಶ್ರೇಷ್ಠ ಕಥೆಗಾರ ಮೊಪಾಸನ ‘ವೈಯಲನ್ಸ್‘ ಕಥೆಯನ್ನು ನೆನಪಿಗೆ ತರುವ ಒಂದು ಸಿದ್ಧಾಂತ ಪ್ರಧಾನ ಕಥಾನಕ. ಕ್ಯಾಂಪಸ್ ರಾಜಕೀಯವೇ ಇದರ ಹರವು ಇದರ ವಿಚಾರಧಾರೆ. ಪತ್ರಿಕೆ ಮತ್ತು ಬಳಗದ ಗೆಲುವೇ ಇಲ್ಲಿಯ ಸಂದೇಶ. ಮನುಷ್ಯನ ಆಂತರಿಕ ಸೌಂದರ್ಯಕ್ಕೆ ಮಾರುಹೋಗುವ ಸೌಮ್ಯತೆ ಚಲಂ ಅವರ ‘ಕಥೆಗಾರನ ಬಲಿ‘ ಕಥೆಯಲ್ಲಿ ಬರುವ  ಇಂಚರಳಿಗೆ ಮುಖಾಮುಖಿಯಾಗಿ ನಿಲ್ಲುವ ಒಂದು ಸಮರ್ಥ ಪಾತ್ರ. ಜೀವನವನ್ನು  ಆಶಾದಾಯಕವಾಗಿ ನೋಡುವ ಅನೇಕ ವಿಚಾರ ಮತ್ತು ವ್ಯಕ್ತಿಗಳ ಒಂದು ದೊಡ್ಡ  ಗ್ಯಾಲರಿಯನ್ನು  ‘ಪುನರಪಿ‘ಯಲ್ಲಿ ಸೃಷ್ಟಿಸಿದ್ದಾರೆ.
                    ಒಟ್ಟು ಸಂಕಲನ ನಮ್ಮ ಸಮಾಜವನ್ನು ಕಟ್ಟಿಕೊಡುವ ಒಂದು ಅದ್ಭುತ ಪ್ರಯತ್ನ. ಕುತೂಹಲದ ಬೆನ್ನು ಹತ್ತಿ  ಓಡುವುದರಕ್ಕಿಂತಲೂ ಯಥಾರ್ತತೆಯ ಅನಾವರಣ ಕಥೆಗಾರನ ಉದ್ದೇಶ. ಕಥೆಗಾರ ಚಲಂನ ಬರಹ ಚಲಂನಂತೆಯೆ. ಕಾಡುಕಾಡಾಗಿ ಹರಿಯುವ ಈತನ ಕುರುಚಲು ಗಡ್ಡದ ಮುಖ ಪದ-ಪದಗಳಲ್ಲಿಯೂ ನಿಮಗೆ ಕಾಣಸಿಗುತ್ತದೆ. ವ್ಯಕ್ತಿಯಲ್ಲಿಯ ಸಮಷ್ಠಿಯ ಅನಾವರಣ. ಇದು ಒಂದು ಇನ್ನೊಂದರಿಂದ ವಿಭಜಿಸಿ ನೋಡಲಾಗದ ಕರ್ಮ. ಆದರೆ ಇದು ಅಥವಾ ಇಂತಹ ಬಾಂಧವ್ಯ ಎರಕ ಹೊಯ್ದುಕೊಂಡವರು  ತೀರ  ಅಪರೂಪ. ಕೆಲವರಿಗೆ ಸಾಹಿತ್ಯ ಬೇರೆ, ಬದುಕು ಬೇರೆ. ಕಲ್ಪನೆಯಲ್ಲಿ ಹುಟ್ಟಿ, ಪುಟಗಳಲ್ಲಿ ಅನಾವರಣಗೊಂಡು ರಂಜಿಸುವ ಬರಹ ಬಾಳುವುದಿಲ್ಲ. ಈ ಚಲಂ ಇಂತಹ ಲೇಖಕರ ಸಾಲಿನಲ್ಲಿ ಇಲ್ಲ ಎನ್ನುವುದೇ ಈ ಗೆಳೆಯನ ಗೆಲುವು. ಈಗಷ್ಟೇ ಕಥೆ ಶುರುವಾಗಿದೆ, ಈತ ಹೇಳಬೇಕಾದುದು  ಇನ್ನೂ ಬಹಳಷ್ಟಿದೆ.





                                                                                         



No comments:

Post a Comment