Total Pageviews

Wednesday, February 20, 2013

ಗಾಂಧಿ ಸಂಚಾರ: ಮೂರಕ್ಕೆ ನೂರರ ಸಂಭ್ರಮ !


ಗಾಂಧಿ ಸಂಚಾರ: ಮೂರಕ್ಕೆ ನೂರರ ಸಂಭ್ರಮ !

     ನಮ್ಮ ಗಾಂಧಿ(Gandhi) ಹೊರಟದ್ದು ಪೋರಬಂದರಿ(Porabandar)ನಿಂದಲ್ಲ, ಕರ್ನಾಟಕ(Karnataka)ದ ಸವದತ್ತಿ(Savadatti)ಯಿಂದ ಹೊರಟು ಈಗ ಬೆಂಗಳೂರಿ(Bangalore)ನೆಡೆಗೆ ಮುಖ ಮಾಡಿದ್ದಾನೆ. ನಾನೀಗ ಹೇಳುತ್ತಿರುವುದು ‘ಗಾಂಧಿ:ಅಂತಿಮ ದಿನಗಳು’ ರಂಗ ತಂಡದ ಸಂಚಾರದ ಕಥೆಯನ್ನ. ‘ಗಾಂಧಿ:ಅಂತಿಮ ದಿನಗಳು’ ಬರೆಯುವ ಮೂಲಕ ನಾನು ಕಿಡಿ ಹೊತ್ತಿಸಿದೆ. ಕಣ್ವ(Kanva) ಪ್ರಕಾಶನದ ಗೆಳೆಯ ಗಿರಿರಾಜು ಅದನ್ನು ಬೆಳಕಾಗಿಸಿದರು, ಆ ಬೆಳಕನ್ನು ರಂಗಕ್ಕಳವಡಿಸಿದವರು ರಂಗ ನಿರ್ದೇಶಕ ಗೆಳೆಯ ಮಲ್ಲಿಕಾರ್ಜುನ ಮಠದ. ಈ ಮಧ್ಯದಲ್ಲಿ ನಮ್ಮ ತಂಡದ ನಾಯಕ ಝಕೀರ ಹಾಗೂ ಮೂಲ ಕೃತಿಯನ್ನು ನಾಟಕ ರೂಪಾಂತರಗೊಳಿಸಿದ ಬಾಬಾಸಾಹೇಬ(Babasaheb) ಕಾಂಬ್ಳೆ ಇವರುಗಳನ್ನು ನಾನು ಸ್ಮರಿಸದೇ ಇರಲಿಕ್ಕಾಗುವುದಿಲ್ಲ. ಅಂತೆಯೇ ಎಲ್ಲ 26 ಜನ ಕಲಾವಿದರುಗಳನ್ನು. 

        ಸವದತ್ತಿಯ ‘ಪರಸಗಡ ನಾಟಕೋತ್ಸವ’ ದಿನದಿಂದ ತನ್ನ ಅಂತಿಮ ದಿನಗಳ ಯಾತನೆಯ ಕಥೆಯನ್ನು ಹೇಳುತ್ತ ತನ್ನ ಸಂಚಾರ ಪ್ರಾರಂಭಿಸಿದ ನಮ್ಮ ಗಾಂಧಿ. ಈ ಗಾಂಧಿಯನ್ನು, ಆತನ ತಲ್ಲಣಗಳನ್ನು ಅನಾವರಣಗೊಳಿಸಲು ನಿರ್ದೇಶಕ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಕನಿಷ್ಟ ಒಂದೂವರೆ ಲಕ್ಷ ರೂಪಾಯಿ ಹಣವನ್ನು ಸುರಿದು ನಾಲ್ಕಾರು ತಿಂಗಳು ಹಗಲು-ರಾತ್ರಿ ಹೆಣಗಾಡಿದ ರೀತಿಯನ್ನ ಪದಗಳಲ್ಲಿ ವಿವರಿಸಲಾಗದು. ನಾಲ್ಕು ಜನಗಳ ಸಂಸಾರ ನಿಭಾಯಿಸುವುದಕ್ಕೂ, 26 ಜನ ಕಲಾವಿದರ ಬವಣೆ ಭಾವನೆಗಳನ್ನು ಅರಿತುಕೊಂಡು ಒಂದು ನಾಟಕವನ್ನು ನಿರ್ದೇಶಿಸುವದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಈ ಕಾರಣಕ್ಕಾಗಿ ನೀವು ನಿರ್ದೇಶಕ ಗೆಳೆಯ ಮಠದರನ್ನು ಅಭಿನಂದಿಸಲೇಬೇಕಾಗುತ್ತದೆ.

       ಸವದತ್ತಿಯ ‘ರಂಗ ಆರಾಧನಾ’ ತಂಡ ಅನೇಕ ವೈಶಿಷ್ಟ್ಯತೆಗಳ ಒಂದು ಸಮರ್ಥ ಸಂಘಟನೆ. ನಾಟಕ ಬರೀ ಅವರ ಹವ್ಯಾಸವಲ್ಲ, ಶ್ರದ್ಧೆಯೂ ಕೂಡ. ಈ ತಂಡದಲ್ಲಿ ಅರವತ್ತರ ಹಿರಿಯರಿಂದ ಹಿಡಿದು ಹದಿನಾಲ್ಕರ ಎಳೆಯರವರೆಗೂ ರಂಗಾಸಕ್ತ ಗೆಳೆಯರಿದ್ದಾರೆ. ಕೆಲವರು ಹೃದಯ ಚಿಕಿತ್ಸೆ ಮಾಡಿಸಿಕೊಂಡವರಾದರೆ ಮತ್ತೆ ಕೆಲವರು ಮಂಡೆ ನೋವಿನಿಂದ ಗೋಳುಹೊಯ್ದುಕೊಳ್ಳುವವರೂ ಇದ್ದಾರೆ. ಆದರೆ ಗಮನಿಸಬೇಕಾದುದು ರಂಗದ ಬೆಳಕು ಹರಿದ ತಕ್ಷಣ ಅವರಲ್ಲಿ ಉಂಟಾಗುವ ಆ ವಿದ್ಯುತ್ ಸಂಚಾರ, ಆ ಮೂಲಕವೇ ಗೆಲುವು ಕಂಡದ್ದು ನಮ್ಮ ಗಾಂಧಿ ಸಂಚಾರ.

       ‘ಗಾಂಧಿ:ಅಂತಿಮ ದಿನಗಳು’ ಮೊದಲ ಪ್ರಯೋಗ ಕಂಡದ್ದು ಸವದತ್ತಿಯ ಐತಿಹಾಸಿಕ ಕೋಟೆಯಲ್ಲಿ. ಅಲ್ಲಿಯ ರಾಜಕಾರಣಿ ಮಿತ್ರರು, ವ್ಯಾಪಾರಿ ಬಂಧುಗಳು, ಹಾಗೂ ರಂಗಾಸಕ್ತರು ಈ ಪ್ರಯೋಗಕ್ಕೆ ಕಾರಣರಾದರು. 2013 ಜನೆವರಿ 4 ರ ಹೊಸ ವರ್ಷದ ಮೊದಲ ವಾರದಲ್ಲಿ ಇಂಥ ಒಂದು ಬೆಳವಣಿಗೆ ಅನೇಕ ಅರ್ಥಗಳಿಗೆ ಕಾರಣವಾಗುವುದಿಲ್ಲವೆ? ಅಂದಿನ ಪ್ರದರ್ಶನಕ್ಕೆ ಕನಿಷ್ಠ 600 ಟಿಕೇಟುಗಳು ಮಾರಾಟವಾಗಿ, ಪ್ರದರ್ಶನದ ಮಧ್ಯ ಆಗಾಗ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತ ಹೊರಟ ನಮ್ಮ ಗಾಂಧಿ ಈಗಲೂ ಅದೇ ಉಮೇದಿನಲ್ಲಿದ್ದಾನೆ. ಇದು ಇಂದಿಗೂ ಗಾಂಧಿ ಎಂಬ ಪದಕ್ಕಿರುವ ಆಕರ್ಷಣೆ.

      ಅಲ್ಲಿಂದ ಹೊರಟ ಗಾಂಧಿ ಬೆಳಗಾವಿ(Belagaum)ಗೆ ಬಂದದ್ದು ಫೆಬ್ರುವರಿ 10 ಕ್ಕೆ. ತನ್ನ ಜೀವಿತಾವಧಿಯಿಂದಲೂ ಗಾಂಧಿ ಹಾಗೂ ಈ ಬೆಳಗಾವಿಗೂ ಒಂದು ವಿಚಿತ್ರ ಸಂಬಂಧ. ಬದುಕಿದಾಗ ಒಮ್ಮೆ ಇಲ್ಲಿಗೆ ಬಂದಿದ್ದ ಗಾಂಧಿ ಇಂದು ಮತ್ತೆ ಸದಾಶಿವ ನಗರದ ಚಂದೋಡಿ(Chandodi) ಲೀಲಾ ರಂಗಮಂದಿರದಲ್ಲಿ ಮಾತಾಡಲು ಮುಂದಾಗಿದ್ದ. ಇಂದಿನ ಪ್ರಯೋಗಕ್ಕೆ ಅರ್ಥಪೂರ್ಣ ಚಾಲನೆಯನ್ನು ಕೊಟ್ಟವರು ಹಿರಿಯ ನಾಟಕಕಾರರುಗಳಾದ ಚಂದ್ರಕಾಂತ ಕುಸನೂರ(Kusanur), ಡಿ.ಎಸ್.ಚೌಗಲೆ(Chaugale) ಹಾಗೂ ಪೂಜ್ಯರಾದ ನಾಗನೂರು ಸಿದ್ಧರಾಮ ಸ್ವಾಮಿ(Siddharam Swami)ಗಳು, ಕಾರಂಜಿ ಮಠದ ಗುರುಸಿದ್ಧ ಸ್ವಾಮಿಗಳು ಮತ್ತು ಉಮಾ ಸಂಗೀತ ಶಾಲೆಯ ಮಂಗಲಾ ಮಠದ ಅವರು. ಇದು ಉಚಿತ ಪ್ರದರ್ಶನ. ಸವದತ್ತಿಯ ರಂಗ ಆರಾಧನಾ ತಂಡದ ಸಿದ್ಧಾಂತಕ್ಕೆ ಸ್ವಲ್ಪ ವಿರುದ್ಧ. ನಾಟಕಗಳು ಉಚಿತ ಪ್ರದರ್ಶನಗಳನ್ನು ಕಂಡರೆ ಅದರ ಅಸ್ಥಿತ್ವಕ್ಕೆ ಧಕ್ಕೆ ಎನ್ನುವುದು ಝಕೀರ ಅವರ ವಾದ.

   ನಮ್ಮ ಗಾಂಧಿ ಹಾಸನ(Hassan)ದ ಪ್ರತಿಷ್ಟಿತ ಹಾಸನಾಂಬ ಕಲಾಭವನಕ್ಕೆ ಬಂದದ್ದು ಫೆಬ್ರುವರಿ 18 ಕ್ಕೆ. ದ್ವಾರಕ್ಕೆ ತಳಿರು ತೋರಣ ಕಟ್ಟಿ ನೂರರ ಸಂಭ್ರಮ ಕಂಡಂತೆ ಈ ಗಾಂಧಿಯನ್ನು ಇಲ್ಲಿ ಸ್ವಾಗತಿಸಿದವರು ಹಾಸನದ ಸಾಂಸ್ಕೃತಿಕ ವೇದಿಕೆಯ ಹಿರಿಯ ಬಳಗ. 12 ವರ್ಷಗಳ ಹಿಂದೆ ಲಂಕೇಶ(Lankesh)ರ ‘ಗುಣಮುಖ’(Gunamukha) ನಾಟಕದಿಂದ ತನ್ನ ರಂಗಾಸಕ್ತಿಯನ್ನು ಪ್ರದರ್ಶಿಸುತ್ತ ಬಂದ ಈ ಬಳಗ ಈ ವರ್ಷದ ಆರಂಭಕ್ಕೆ ನಮ್ಮ ಗಾಂಧಿಯನ್ನು ಬೆಳಕಿಗೆ ತಂದರು. ರಾಜ್ಯ ರಾಜಕಾರಣದ ದಿಕ್ಕುಗಳನ್ನು ನಿರ್ಧರಿಸುವ ನಗರವೊಂದರಲ್ಲಿ ಅಧಿಕಾರದ ಯಾವ ಸ್ಥಾನವನ್ನೂ ಅಲಂಕರಿಸದೆ ರಾಷ್ಟ್ರ ರಾಜಕಾರಣ ಮಾಡಿದ ಗಾಂಧಿ ಇಲ್ಲಿ ಪ್ರದರ್ಶನ ಕಂಡದ್ದು ನನಗಂತೂ ಬಹಳ ಅರ್ಥಪೂರ್ಣವೆನಿಸಿದೆ. ಕ್ರಿಯಾಶೀಲ, ಸುಸಂಸ್ಕೃತ ಮನಸ್ಸುಗಳಾದ ಶ್ರೀ ಆರ್.ಪಿ.ವೆಂಕಟೇಶಮೂರ್ತಿ(Venkatesha murthy), ಡಾ.ಐ.ಎಂ.ಮೋಹನ, ಪ್ರೊ.ಹಂಪನಹಳ್ಳಿ ತಿಮ್ಮೇಗೌಡ, ಶ್ರೀ ಬಿ.ಎಸ್.ದೇಸಾಯಿ(B.S.Desai), ಶ್ರೀ ತಿರುಪತಿಹಳ್ಳಿ ಶಿವಶಂಕರಪ್ಪ, ಶ್ರೀ ಮಹೇಶ ಗುರು, ಪ್ರೊ.ನಾರಾಯಣ ಪ್ರಸಾದ(Narayan Prasad), ಕವಿ ಅಪ್ಪಾಜಿಗೌಡ, ಹಿರಿಯ ನಾಟಕಕಾರ ಬೇಲೂರು ಕೃಷ್ಣಮೂರ್ತಿ, ಪತ್ರಿಕಾ ಬಳಗ, ಸಾಹಿತ್ಯ ಮತ್ತು ರಂಗಾಸಕ್ತ ಬಳಗ – ಒಟ್ಟಾರೆ ಗಾಂಧಿಯೆಂಬ ಗಾಂಧಿಯ ಕಾರಣಕ್ಕೆ ಸೇರಿದ ಆ ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ನೋಡುವುದೇ ಒಂದು ಖುಷಿ. ನಿರಂತರ ಎರಡು ಗಂಟೆ ಗಂಭೀರವಾಗಿ ಕುಳಿತುಕೊಂಡು ಗಾಂಧಿಯ ಮೂಲಕ ಈ ದೇಶದ ಇತಿಹಾಸಕ್ಕೆ ಮುಖಾ-ಮುಖಿಯಾಗಲು ಬಹಳಷ್ಟು ಸಹನೆ ಬೇಕು. ಅಂದು ಸೇರಿದವರೆಲ್ಲರೂ ಈ ಸಹನೆಯ ಜನಗಳೆ. ಅಸಹನೆ, ದ್ವೇಷ, ಅಹಂಕಾರದ ಕಾರಣ ರಾಷ್ಟ್ರಗಳೇ ನಶಿಸಿ ಹೋಗುವಾಗ ಯಕಃಶ್ಚಿತ ವ್ಯಕ್ತಿಯ ಗತಿಯೇನು? ಸ್ಥಿತಿಯೇನು? ಎಂದು ಗಾಂಧಿ ಅವಲತ್ತುಕೊಳ್ಳುವಾಗ ಪ್ರೇಕ್ಷಕರ ಕಣ್ಣು ವದ್ದೆಯಾಗುವುದನ್ನು ಗಮನಿಸಿದಾಗ ನನಗನಿಸಿದ್ದು ಗಾಂಧಿ ಪ್ರಪಂಚದಲ್ಲಿ ಯಾವಾಗಲೂ ಮುಗಿಯದ ಅಧ್ಯಾಯವೆ. ಈ ಸಹನಾ ಮೂರ್ತಿ ಮುಗಿದು ಹೋದರೆ ಈ ಮನುಷ್ಯ ಪ್ರಪಂಚಕ್ಕೆ ದೊಡ್ಡ ಮಿತಿಯೇ ಬಿದ್ದಂತೆ. 

          ಅಂದಹಾಗೆ ಗಾಂಧಿ ದೊಡ್ಡ ವ್ಯಾಪಾರಿಯಲ್ಲವೆ? ವ್ಯಾಪಾರಕ್ಕೂ, ರಾಜಕಾರಣಕ್ಕೂ ಮತ್ತು ಆಧ್ಯಾತ್ಮಕ್ಕೂ ಆತ ಒಂದು ವಿಚಿತ್ರ ಬೆಸುಗೆ. ಹಾಸನದ ಪ್ರದರ್ಶನ ಉಚಿತವಾಗಿರಲಿಲ್ಲ. ಟಿಕೇಟಿನ ಬೆಲೆ 50 ರೂಪಾಯಿ. ಒಟ್ಟು ಪ್ರದರ್ಶನದ ವೆಚ್ಚ 30 ಸಾವಿರ ರೂಪಾಯಿ. ಇಷ್ಟಾಗಿಯೂ ಸಾಂಸ್ಕೃತಿಕ ವೇದಿಕೆಗೆ ಒಂದಿಷ್ಟು ಬಂಡವಾಳ ಉಳಿಸಿ ಹೋಗಿದ್ದಾನೆ ನಮ್ಮ ಗಾಂಧಿ. ಇದು ಆರೋಗ್ಯಕರ ಬೆಳವಣಿಗೆಯಲ್ಲವೆ?

      ಇನ್ನು ಕೆಲವು ದಿನಗಳಷ್ಟೆ, ರಾಜಘಾಟದಿಂದ ಎದ್ದಿರುವ ನಮ್ಮ ಗಾಂಧಿ ಇಷ್ಟರಲ್ಲಿ ರಾಜಧಾನಿಯನ್ನು ತಲಪುತ್ತಾನೆ. ಮನುಷ್ಯರಾದವರ ಮನ ಕಲಕುತ್ತಾನೆ.

Tuesday, February 12, 2013

ಚಂಪಾ - ಕೋಚೆ ಮತ್ತು ಸಾವಿತ್ರಿ




 ಚಂಪಾ - ಕೋಚೆ ಮತ್ತು ಸಾವಿತ್ರಿ


    ಸಮ್ಮೇಳನಗಳಿಂದ ನಾನು ಸಾಧ್ಯವಾದಷ್ಟು ದೂರ. ಹಾಗಂತ ಅವುಗಳ ಕುರಿತ ಉಪೇಕ್ಷವಲ್ಲ, ಬದಲಾಗಿ ಕ್ರಮಿಸಬೇಕಾದ ದಾರಿ ಇನ್ನೂ ದೀರ್ಘವಾಗಿರುವುದರಿಂದ ಸಮಯವಿಲ್ಲ, ಜೊತೆಗೆ ಶಾರೀರಿಕವಾಗಿ ಇವುಗಳಲ್ಲಿ ನೇರವಾಗಿ ಪಾಲ್ಗೊಳ್ಳದೇ ಇದ್ದರೂ ಪುಸ್ತಕ, ಗೆಳೆಯರ ಚರ್ಚೆ, ಮಾತು ಏನೆಲ್ಲ ಆಗಿ ಇದ್ದೇ ಇರುತ್ತೇವಲ್ಲ? ಎಂಬ ಸಾಂತ್ವನ.

    ಆದರೆ ಈ ಸಾರಿಯ ಬಿಜಾಪುರ(Bijapur)ದ 79 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಪ್ಪಿಸಿಕೊಳ್ಳುವ ಹಾಗಿರಲಿಲ್ಲ. ಕಾರಣ ಗುರುಗಳಾದ ಚಂಪಾ(Champa) ಅವರ ಫರ್ಮಾನ್. ಈ ಹಿಂದೆಯೂ ಒಮ್ಮೆ ಬೀದರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಇದೇ ಚಂಪಾಜ್ಞೆ ಕಾರಣವಾಗಿತ್ತು. ಈ ಆಜ್ಞೆ ಅಧಿಕಾರಯುತವಾಗಿರುತ್ತದೆ ಸತ್ಯ, ಆದರೆ ಪ್ರೀತಿಯೊಂದಿಗೆ ಅದು ಎರಕ ಹೊಯ್ದುಕೊಂಡಿರುತ್ತದೆ. ಹಠ ಮತ್ತು ದುರಹಂಕಾರದಿಂದಲ್ಲ ಬದಲಾಗಿ, ಪ್ರೀತಿಯಿಂದ ಏನೆಲ್ಲವನ್ನೂ ಸಾಧಿಸಲು ಸಾಧ್ಯ ಎನ್ನುವುದಕ್ಕೆ ಸಾಕ್ಷಿಯಾಗಿ ಈ ಚಂಪಾ ನನ್ನನ್ನು ಕಾಡುತ್ತಾರೆ. ನಾವೆಲ್ಲ ಗೆಳೆಯರು - ಶ್ರೀ ಎಮ್.ಆರ್.ಗಿರಿರಾಜ, ರವಿಕುಮಾರ ದಿನಾಂಕ 08/02/2013 ನಸುಕಿನ 5 ಗಂಟೆಗೆ ನಮ್ಮ ಪ್ರವಾಸವನ್ನು ಹೊಸದುರ್ಗ, ಹೊಸಪೇಟೆ ಮಾರ್ಗವಾಗಿ ಪ್ರಾರಂಭಿಸಿ, ಸಾಯಂಕಾಲ 4 ಗಂಟೆಗೆ ಬಿಜಾಪುರ ಜಿಲ್ಲಾ ಸಾಹಿತ್ಯ ಪರಿಷತ್ ಕಾರ್ಯಾಲಯವನ್ನು ಸೇರಿಕೊಂಡೆವು. ಮುಂದಿನ ಕಾರ್ಯಕ್ರಮ ಚಂಪಾ ಸಂಪಾದನೆಯ ಶ್ರೀ ಕೊ.ಚನ್ನಬಸಪ್ಪನವರ ಕುರಿತ 305 ಪುಟಗಳ, ಕಣ್ವ ಪ್ರಕಾಶನ ಪ್ರಕಟಿಸಿದ ಕೃತಿ ಬಿಡುಗಡೆ ಸಮಾರಂಭ. ಬಿಡುಗಡೆಗೊಳಿಸಿದವರು ಶ್ರೀ ಮದನಭಾವಿ, ಅಧ್ಯಕ್ಷತೆ ಶ್ರೀ ಪುಂಡಲೀಕ ಹಾಲಂಬಿ, ನನ್ನದು ಪ್ರಾಸ್ತಾವಿಕ, ಚಂಪಾ ಸಂಪಾದಕರ ನುಡಿ, ಗಿರಿರಾಜು ವಂದನಾರ್ಪಣೆ. ಕಾರ್ಯಕ್ರಮವನ್ನು ನಡೆಯಿಸಿಕೊಂಡು ಹೋದವರು ಬಾಗಲಕೋಟೆಯ ಗೆಳೆಯ ಡಾ.ಪ್ರಕಾಶ ಖಾಡೆ. ಒಂದು ಗಂಟೆಯ ಸರಳ ಸಮಾರಂಭ.
  
   ಪ್ರೀತಿಯ ವಿಷಯ, ಚಂಪಾ ನಮ್ಮನ್ನು ಬಿಜಾಪುರಕ್ಕೆ ಕರೆದದ್ದು. ನನಗೂ ಬಿಜಾಪುರಕ್ಕೂ ಎಷ್ಟೆಲ್ಲ ನೆನಪಿನ ನಂಟು, ಬಿಜಾಪುರ ಎಂದರೆ ಗೋಲಗುಮ್ಮಟ, ವಚನ ಕಮ್ಮಟ, ಬಸವಣ್ಣ(Basavanna), ಸೂಫಿ(Sufi), ಸಿದ್ಧೇಶ್ವರ ಸ್ವಾಮೀಜಿ(Siddheswara Swamiji), ಸಿಂಪಿ ಲಿಂಗಣ್ಣ ಮತ್ತು 79 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಶ್ರೀ ಕೊ.ಚನ್ನಬಸಪ್ಪ(Koche). ವಿಚಿತ್ರ ನೋಡಿ, ಬಿಜಾಪುರದ ಶ್ರೀ ಫ.ಗು.ಹಳಕಟ್ಟಿಯವರು ಬಳ್ಳಾರಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರೆ, ಇಂದು ಬಿಜಾಪುರದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಬಳ್ಳಾರಿಯ ಶ್ರೀ ಕೊ.ಚನ್ನಬಸಪ್ಪನವರು ಅಧ್ಯಕ್ಷರಾಗಿರುವುದು. ತೊಂಬತ್ತು ವರ್ಷಗಳ ನಂತರ, ತೊಂಬತ್ತರ ಹಿರಿಯರನ್ನು ಗೌರವಿಸುವ ಅವಕಾಶ ಬಿಜಾಪುರಕ್ಕೆ. ನಲವತ್ತೈದು ಕೃತಿಗಳನ್ನು ಬರೆದ ಕೋಚೆ 1974-75 ರಲ್ಲಿ ಇದೇ ಬಿಜಾಪುರದಲ್ಲಿ ಜಿಲ್ಲಾ ಸಶನ್ಸ್ ನ್ಯಾಯಾಧೀಶರಾಗಿದ್ದರು. ಪಾಟೀಲ ಪುಟ್ಟಪ್ಪ(Patil Puttappa) ಕೇಳುತ್ತಾರೆ, “ಕವಿ, ಕತೆಗಾರ, ಕಾದಂಬರಿಕಾರ, ವಾಗ್ಮಿ, ವಿಮರ್ಶಕ, ಪ್ರಬಂಧಕಾರ, ಮಾನವತಾವಾದಿ, ದೇಶ ಭಕ್ತ, ಸ್ವಾತಂತ್ರ್ಯ ಸೇನಾನಿ, ಕರ್ನಾಟಕ ವತ್ಸಲ, ಏಕೀಕರಣವಾದಿ, ಗಡಿ ಹೋರಾಟಗಾರ, ಕನ್ನಡದ ಕಟ್ಟಾಳು, ಸಾರ್ವಜನಿಕ ಸಮಸ್ಯೆಗಳ ವಕೀಲ, ನ್ಯಾಯವಾದಿ, ನ್ಯಾಯಾಧೀಶ, ತತ್ತ್ವ ಜಿಜ್ಞಾಸು, ಪತ್ರಿಕೋದ್ಯಮಿ, ಪತ್ರಿಕೆಯ ಅಂಕಣಕಾರ, ಬಡವರ ಬಂಧು-ಕೋ.ಚನ್ನಬಸಪ್ಪನವರನ್ನು ಏನೆಂದು ವರ್ಣಿಸಬೇಕು? ಅವರ ಬಗೆಗೆ ಯಾವ ವಿಶೇಷಣ ಹಚ್ಚಿ ಹೇಳಿದರೂ ವರ್ಣನೆ ಅಪೂರ್ಣವೆನಿಸುತ್ತದೆ.”

     ಇಂಥ ಕೋಚೆ ನನ್ನ ‘ಗಾಂಧಿ:ಅಂತಿಮ ದಿನಗಳ’ ಮುಂದುವರೆದ ಭಾಗವಾದ ‘ಗಾಂಧಿ:ಮುಗಿಯದ ಅಧ್ಯಾಯ’ ಕೃತಿಯ ಮುನ್ನುಡಿಯನ್ನು ಬರೆಯಬೇಕಿತ್ತು. ಆದರೆ, ಅಷ್ಟರಲ್ಲಿ ಅವರು ಸಮ್ಮೇಳನಾಧ್ಯಾಕ್ಷರಾಗಿ ಆಯ್ಕೆಯಾಗಿ ಬಿಡುವಿಲ್ಲದಂತಾದಾಗ ಗಾಂಧಿ ನಿಧನದ ಹುತಾತ್ಮರ ದಿನದಂದೇ ಈ ಕೃತಿಯನ್ನು ಲೋಕಾರ್ಪಣೆ ಮಾಡಬೇಕೆಂದಿದ್ದ ನಾನು ಆ ವಿಚಾರವನ್ನ ಕೈ ಬಿಟ್ಟೆ. ನೆಮ್ಮದಿ ಇದೆ, ಎಂಥ ಆಘಾತಗಳ ಮಧ್ಯೆಯೂ ಗಾಂಧಿ ಬಂದೇ ಬಿಟ್ಟ. ಅದು ಗಾಂಧಿ ಎಂಬ ಚೇತನಕ್ಕಿರುವ ಶಕ್ತಿ ಎಂದುಕೊಂಡಿದ್ದೇನೆ. ಬರಹ ಬರಬೇಕಾದುದೇ ಹಾಗೆ. ಈ ಹಿಂದಿನ ಸಮ್ಮೇಳನಾಧ್ಯಕ್ಷರಾದ ಸಿ.ಪಿ.ಕೆ ನನ್ನ ಪ್ರೀತಿಯ ಬರಹಗಾರರಲ್ಲಿ ಒಬ್ಬರು. ಎಲ್ಲೋ ಒಂದು ಮಹತ್ವದ ಬರಹ ಅವರ ಕುರಿತು ನಾನು ಮಾಡಲೇ ಇಲ್ಲ ಎಂದುಕೊಳ್ಳುತ್ತಿರುವಾಗಲೇ ಗೆಳೆಯ ಮಾನಸ ಸಂಪಾದಿಸಿದ ‘ಸಿ.ಪಿ.ಕೆ ಬಾಳ ದೀಪಿಕೆ’ ಕೃತಿಗೆ ‘ನಮ್ಮ ಸಿ.ಪಿ.ಕೆಗೊಂದು ಸ್ವಾರಿ ಹೇಳಬೇಕು’ ಎನ್ನುವ ನನ್ನ ಲೇಖನದ ಮೂಲಕ ಅವರ ಪುಸ್ತಕ ಅಚ್ಚಾಯಿತು. ಈ ಸಾರಿಯೂ ಅಷ್ಟೆ ‘ಬೇಡಿ ಕಳಚಿತು ದೇಶ ಒಡೆಯಿತು’ದಂಥ ದೊಡ್ಡ ಕಾದಂಬರಿ ಬರೆದ ಕೋಚ ಕುರಿತು ನನಗೇನೂ ಮಾಡಲಾಗಲಿಲ್ಲವಲ್ಲ ಎಂದುಕೊಂಡಾಗ ಗುರುಗಳಾದ ಚಂಪಾ ಕಾರಣಕ್ಕಾಗಿ ಬಿಜಾಪುರದ ಈ ಪುಸ್ತಕ ಬಿಡುಗಡೆಯ ಪ್ರಾಸ್ತಾವಿಕ, ಕೋಚಯ ಸಾಮಿಪ್ಯ ಸಾಧ್ಯವಾಯಿತು.
 
       ಬಹಳ ಹೇಳುವುದರಲ್ಲಿ ಅರ್ಥವಿಲ್ಲ. ಈ ಕೋಚ ಶ್ರೀ ಅರವಿಂದರ(Shri Aurobindo) ‘ಸಾವಿತ್ರಿ’(Savitri)ಯನ್ನು ಕನ್ನಡದಲ್ಲಿ ಸಾಧ್ಯವಾಗಿಸಿದ ಭೀಮ ಸಾಹಸಿ, ಅವಳನ್ನು ಕೊನೆಗೂ ಕನ್ನಡಕ್ಕೆ ತಂದ ಭಗೀರಥ. ಈಗ ಅವರ ಈ ಅನುವಾದ ನನಗೆ ಎಷ್ಟೆಲ್ಲ ಕಾಡಿದೆ. ನನ್ನ ‘ಸಾಕಿ’ಯ ಸುಖವಾಗಿದೆ. ಓದಿ, ಈ ಸಾಲುಗಳಲ್ಲಿರುವ ಆ ಅವಳನ್ನು ನೀವು ನೋಡಬೇಕಿದೆ.

ಅವಳೇ ಸುವರ್ಣ ಸೇತುವೆ, ಅದ್ಭುತ ಅಗ್ನಿ,
ಆಜ್ಞೇಯ ದುಜ್ವಲ ಹೃದಯ ಅವಳೆಯೆ,
                                                                  ಭಗವಂತನ ಗಂಭೀರ ಗರ್ಭದ
                                                                  ನಿಃಶ್ಯಬ್ಧದೊಂದು ಶಕ್ತಿ ಅವಳೆ
                                                                     ಅವಳೆ ‘ಪರಾಶಕ್ತ’, ಅನಿವಾರ್ಯ ‘ಗೀರ್ವಾಣ’

Monday, February 4, 2013

ಹದಾ ಇಲ್ದ ಪದಾ ಇಲ್ಲ


ಹದಾ ಇಲ್ದ ಪದಾ ಇಲ್ಲ

ಎರೆಯುವೆನು ಬಾ ನಿನ್ನ, ನಮ್ಮ ಪಟ್ಟದ ಮರಿಯೆ
ಸಕಲ ತೀರ್ಥದ ಕ್ಷೀರ ನೀರ ತಂದು


ಇವು ಕವಿ ಬೇಂದ್ರೆ ಮಧುರಚನ್ನ(Madhurachanna)ರನ್ನು ಹರಸಿ ಹಾಡಿದ ಸಾಲುಗಳು. ಹಾಗೆ ಬೇಂದ್ರೆ ಅನ್ಯರನ್ನು ಕುರಿತು ಬರೆದದ್ದು ಬಹಳ ಕಡಿಮೆ. ಈ ಬರೆಯುವ, ಬರೆಯಿಸಿಕೊಳ್ಳುವ ಜೀವಗಳಿಗೆ ಬರೀ ಮೈ ಒಂದಿದ್ದರಾಗದು, ಮನಸ್ಸು ಬೇಕು, ತಪಸ್ಸು ಬೇಕು ಎಲ್ಲಕ್ಕೂ ಮಿಗಿಲಾಗಿ ತಾಯ್ತನ ಬೇಕು. ಬದುಕೆಂದರೆ ಬರೀ ಶಬ್ದಗಳ ಜಾತ್ರೆ ಮತ್ತು ಮೈಯ ಮೆರವಣಿಗೆ ಎಂದುಕೊಂಡವರಿಗೆ ಈ ಸಾಲುಗಳ ಸುಖ ಗೊತ್ತಾಗುವುದಿಲ್ಲ. ಈ ಮೇಲಿನಂತೆ ಹಾಡುವ ಬೇಂದ್ರೆ(Bendre) ಈಗ ಗಂಡಲ್ಲ. ತಾಯಿ. ಕೂಸನ್ನು ಎದೆಗೇರಿಸಿಕೊಂಡು ಎರೆಯುವ ತಾಯಿ. ಮಧುರಚನ್ನರಲ್ಲೂ ಆ ಒಂದು ಮುಗ್ಧತೆಯ ಸೆಳಕು ಇರುವುದರಿಂದ ಅವರಿಗೆ ಬೇಂದ್ರೆಯನ್ನು ಸಂಪೂರ್ಣವಾಗಿ ಸಾಧ್ಯವಾಯಿತು. ಲೋಕ ವ್ಯವಹಾರವನ್ನೆ, ಉಸುರಿ ಉರಿಯುವ ಒಂದು ಪಾತ್ರವಾಗಿದ್ದರೆ ಇವರಿಬ್ಬರ ಮಧ್ಯ ಇಂಥ ಕಾವ್ಯಾನುಸಂಧಾನ ಸಾಧ್ಯವಿರಲಿಲ್ಲ.
ದಿನಾಂಕ 30 ರಂದು ದಾವಣಗೆರೆಯಲ್ಲಿ ಹುತಾತ್ಮರ ದಿನವನ್ನು ಆಚರಿಸಿ ಬಂದ ಮರುದಿನವೇ ದಿನಾಂಕ 31 ರಂದು ನಾನು(Dr.R.G.Mathapati) ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತ ಇಲಾಖೆ ಹಾಗೂ ಬೆಳ್ಳಿಮಂಡಲಗಳ ಸಹಯೋಗದಲ್ಲಿ ಬೇಂದ್ರೆ ಕಾವ್ಯ ಗಾಯನ ಹಾಗೂ ಜನ್ಮ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಹಾಸನದ ಕಾರ್ಯಕ್ರಮದಲ್ಲಿ ‘ಬೇಂದ್ರೆ ನಾನು ಕಂಡಂತೆ’ ಎಂಬುದನ್ನು ಕುರಿತು ಮಾತನಾಡಿದೆ. ಅಂದು ನನ್ನೊಂದಿಗಿದ್ದವರು ಹೆಸರಾಂತ ಕವಿ ಶ್ರೀ ಬಿ.ಆರ್.ಲಕ್ಷ್ಮಣರಾವ್(B.R.LaxmanaRao), ಡಾ.ಜನಾರ್ಧನ, ಜಾವಗಲ್ ಪ್ರಸನ್ನ, ಶ್ರೀಮತಿ ಸುರೇಖಾ ಹೆಗಡೆ, ಟಿ.ವಿನೋದಚಂದ್ರ ಹಾಗೂ ಶ್ರೀ ರವಿ ನಾಕಲಗೂಡು.
ಮಾತುಗಾರ ಬೇಂದ್ರೆಗೆ ಮಾತು ವ್ಯಸನವಾಗಿರಲಿಲ್ಲ. ಮಾತು ಮಾತು ಮಥಿಸಿ ಕೆಲವೊಮ್ಮೆ ಅವರ ಜೀವನದಲ್ಲಿ ಮುಜುಗರದ ಸಂಧರ್ಬಗಳು ಉಂಟಾದದ್ದು ಯಾರಿಗೂ ಗೊತ್ತಿರದ ವಿಚಾರಗಳೇನಲ್ಲ. ಧಾರವಾಡದ ರೇಲ್ವೆ ಕ್ರಾಸಿಂಗ್ ಬಳಿ ಚಂಪಾ (Champa) ಮತ್ತು ಬೇಂದ್ರೆಯ ಮಧ್ಯ ನಡೆದ ಜಗಳ ಇಡೀ ನಾಡೇ ಸಾಯಂಕಾಲದ ಅವಲಕ್ಕಿ ತಿಂದಂತೆ ಚರ್ಚಿಸಿಯಾಗಿದೆ. ಕಾವ್ಯವನ್ನೂ ಇದು ಮಂತ್ರ, ಅರ್ಥ ಕೆಡಿಸಂದತೆ ಶಬ್ದಗಳ ಪೋಣಿಸುವ ತಂತ್ರ ಎಂದು ಸಾರಿದ ಬೇಂದ್ರೆಯವರ ಜಗಳದ ಅನೇಕ ಉದಾಹರಣೆಗಳನ್ನು ಅವರ ಸನ್ಮಿತ್ರರೂ, ನನ್ನ ಕಾವ್ಯ ದೀಕ್ಷಾ ಗುರುಗಳೂ ಆದ ಸಿಂಪಿ ಲಿಂಗಣ್ಣ(Simpi Linganna)ನವರು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ನಮ್ಮೂರಾದ ಚಡಚಣಕ್ಕೆ ಲಿಂಗಣ್ಣನವರನ್ನು ಹುಡಿಕಿಕೊಂಡು ಬೇಂದ್ರೆ ಬರುತ್ತಿದ್ದರು, ಬಂದಾಗ ನಮ್ಮೂರ ಸೇಡ್ಜಿಯ ಮನೆಯಲ್ಲಿ ಕುಳಿತು ಸಾಹಿತ್ಯವನ್ನು ಗಂಭೀರವಾಗಿ ಚರ್ಚಿಸುತ್ತಿದ್ದರು. 

ವ್ಯಾಪಾರಿಯಾಗಿದ್ದ ಸೇಡ್ಜಿಗೆ ಸಾಹಿತ್ಯದ ಗಂಧ, ಗಾಳಿ ಗೊತ್ತಿರದಿದ್ದರೂ ತಾನು ಎಲ್ಲದರಲ್ಲೂ ಆಸಕ್ತನಾಗಿದ್ದೇನೆ ಎನ್ನುವುದನ್ನು ತೋರಿಸಿಕೊಳ್ಳಲು ಬೇಂದ್ರೆ ಬಂದಾಗ ಅವರ ಮುಂದೆ ತಲೆಯಾಡಿಸುತ್ತಾ ಕುಳಿತುಕೊಳ್ಳುತ್ತಿದ್ದ. ತಕ್ಕ ಚಹಾ, ತಿಂಡಿಗಳ ವ್ಯವಸ್ಥೆಯನ್ನು ಮಾಡುತ್ತಿದ್ದ. ಆಗ ಬೇಂದ್ರೆ ‘ಮಂದಿ ಮದುವಿ’ ಎನ್ನುವ ನಾಟಕ ಬರೆಯುತ್ತಿದ್ದರು. ಅದರ ಓದನ್ನು ಚಡಚಣದ ಈ ಸೇಡ್ಜಿಯ ಮನೆಯಲ್ಲಿ ಇಟ್ಟುಕೊಂಡಿದ್ದರು. ಅತ್ತ ಸೇಡ್ಜಿಗೆ ಯಾವುದೋ ಊರಿಗೆ ಸಂತೆಗೆ ಹೋಗಬೇಕಾಗಿತ್ತು, ಇಲ್ಲಿ ನೋಡಿದರೆ ಬೇಂದ್ರೆ ನಾಟಕವನ್ನು ಗಂಭೀರವಾಗಿ ಚರ್ಚಿಸುತ್ತಿದ್ದಾರೆ. ಆತ ಎದ್ದು ಹೋಗುವ ಹಾಗೂ ಇಲ್ಲ, ಸಂತೆಯ ಸಮಯವಾದಿದ್ದರಿಂದ ನೆಮ್ಮದಿಯಿಂದ ಕೂಡ್ರುವ ಹಾಗೂ ಇಲ್ಲ. ಈತನ ಈ ದ್ವಂದ್ವ ಗಮನಿಸಿದ ಬೇಂದ್ರೆ ಸಿಟ್ಟಿನಿಂದ, ‘ ಏ  ಸೇಡ್ಜಿ ಎದ್ದು ಹೋಗುದಿದ್ರ ಮುಂದುಕ್ಕ ಹೋಗಿಬಿಡು. ಯಾಕ ಇಲ್ಲದ ನಾಟ್ಕಾ ಮಾಡ್ತಾ ನಾ ನಾಟಕೋದುದನ್ನ ಕೇಳಾಕ ಕುಂತೀದಿ. ನಿನ್ನ ಮನೀ ನಾಷ್ಟಾಕಾಗಿ ನಿನ್ನ ಇಲ್ಲದ ನಾಟಕ ನನಗ ಸಹಿಸಿಕೊಳ್ಳಕಾಗುದಿಲ್ಲ.’ ಎಂದ ಬೇಂದ್ರೆ ಬರಹವನ್ನು ತೆಗೆದುಕೊಂಡು ಹೊರಟೇ ಬಿಟ್ಟರು.
ಈ ಜಗಳದಲ್ಲಿ ಏನೆಲ್ಲಾ ಇದೆ. ನಮ್ಮ ಹಣ, ಅಧಿಕಾರ, ರೂಪ, ನಾವು ಕೊಡುವ ಒಂದಿಷ್ಟು ಸಮಾಧಾನಕ್ಕಾಗಿ ಜನ ನಮ್ಮ ಕಾಲು ನೆಕ್ಕಿಕೊಂಡು ಬಿದ್ದಿರುತ್ತಾರೆ, ನಾವು ಹೇಗೆ ನಡೆದರೂ ಒಪ್ಪಿಕೊಳ್ಳುತ್ತಾರೆ ಎನ್ನುವ ಉಡಾಫೆಯ ಮನೋಸ್ಥಿತಿಯವರಿಗೆ ಇಲ್ಲಿ ಕಲಿಯಲು ಸಾಕಷ್ಟಿದೆ. ವ್ಯಕ್ತಿಗೆ ಕೊಡುವ ತಿಳಿ ಮಜ್ಜಿಗೆಯೂ ಅಮೃತವಾಗಲು ಸಾಧ್ಯ, ಅಷ್ಟಕ್ಕಾಗಿಯೇ ಆತ ಸುಧಾಮನಂತೆ ನಿಮ್ಮ ಸೇವಕನಾಗಿರಲು ಸಾಧ್ಯ. ಆದರೆ ಅದು ಪ್ರಾಂಜಲವಾಗಿ ಬಂದುದಾಗಿರಬೇಕು. ಬೇಂದ್ರೆಗೆ ಬಡತನವಿತ್ತು, ಬಿಕಾರಿತನವಿರಲಿಲ್ಲ.
ತಿನ್ನುವ ಅನ್ನದಲ್ಲೂ ಮಲ್ಲಿಗೆಯ ಪರಿಮಳ ಮತ್ತು ಅರಳುವಿಕೆಯನ್ನು, ಮನೆಯ ನಾಯಿಯಲ್ಲೂ ಮಾತೃತ್ವದ ಮಹಾ ದರ್ಶನವನ್ನು ಮಾಡಿಕೊಳ್ಳುವ ಸಂಸ್ಕೃತಿ ಹೊಂದಿದ್ದ ಬೇಂದ್ರೆ ಕನ್ನಡ ನಾಡಿನ ವರ ಕವಿಯೇ ಹೌದು. ಕಾವ್ಯವನ್ನು ಬೇಂದ್ರೆ ಬರೆಯಲಿಲ್ಲ ಬದುಕಿದರು, ಅದರ ಹದಕ್ಕಾಗಿ ಏನೆಲ್ಲ ಕೆದಕಿದರು. ಹೀಗಾಗಿಯೇ ಬೇಂದ್ರೆ ಮಾತ್ರ ಪದ್ಯವನ್ನ ಕುರಿತು ಹೀಗೆ ಬರೆಯಲು ಸಾಧ್ಯವಾಯಿತು
ಹದಾ ಒಳಗ ಇಲ್ದ ತಮ್ಮಾ
ಪದಾ ಹೊರಗ ಬರೂದಿಲ್ಲಾ
ಕದಾ ತೆರ್ಯೂದಿಲ್ಲಾ ಅಂತಃಕರಣಾ

ವಾಸನಾಧಾಂಗ ಆವರಣಾ
ಕೊಂಡಾಂಗ ಆವ ಆಭರಣಾ

ಬೆಳಕಿನ್ಯಾಗ ಬಣ್ಣದಾ ಬೆಳಿ
ತನ್ನತನದಾಗ ನಿನ್ನ ಕಳಿ
ಉಳಿವಿಲಿಂಗದಾಗ ಉಳಿ